ಕಾವ್ಯ ಸಂಗಾತಿ
ಮಲೆನಾಡು
ಡಾ. ಅರಕಲಗೂಡು ನೀಲಕಂಠ ಮೂರ್ತಿ
ನಿಸರ್ಗ ಕಾರ್ಯಾಗಾರ
ನಿರಂತರ ಛಾಪಿಸುವ
ಅಚ್ಚ ಹಸಿರ ವಿಜ್ರಂಭಣೆ
ಮೋಹಕ ಮಲೆನಾಡು!
ದಟ್ಟ ಕಾಫಿ ಸಸ್ಯ ಸಮೂಹ
ನಡುವೆ ಸರ್ಪ ಹರಿವಿನ
ಕಪ್ಪು ದಾಂಬರು ದಾರಿ
ಸುರುಳಿ ಕರೆ ಕರೆದೋಡಿದೆ
ಸ್ವರ್ಗ ಸೀಮೆಯತ್ತತ್ತ!
ತೆರೆದ ಕಾರು ಕಿಟಕಿ ತೂರಿ
ಮೊಗಿಗಪ್ಪಳಿಸುವ ಸಮೃದ್ಧ
ಹೂ ವಂಶಾವಳಿ ರಾಶಿ ವೈವಿಧ್ಯ
ಅಲೌಕಿಕ ಸಂವೇದನಾ ಸುಗಂಧ!
ಎತ್ತ ತಿರುಗಿದರತ್ತತ್ತ
ಆಗಸದೆತ್ತರಕೇರುತಿರುವ
ನೀಲ ನಭ ರಾಶಿಯತ್ತ
ಹಿಡಿದ ಅಗಾಧ ಕೊಡೆ
ಆಕಾಶ ಚಕ್ರವರ್ತಿ ಕಿರಣಗಳ
ಮಾಯಾವಾಗಿಸಿದ ನಿಲುವಿನ
ನರ್ತನ ಭಂಗಿಗಳಲಿ ಯಥೇಚ್ಛ
ಬೀಸಿ ತೊನೆವ ಹಸಿರ ಬಂಧುಗಳ
ದಟ್ಟ ಕಾನನ ಬೃಹತ್ ಜಾತ್ರೆ
ನಿಸರ್ಗ ಸುಂದರ ದಿನನಿತ್ಯ ಯಾತ್ರೆ!
ಒಮ್ಮೆ ಏರಿಸಿ ದಿಢೀರನಿಳಿಸುವ
ಗುಡ್ಡ ಸೀಮೆ ಸಿರಿ ಸುಂದರ ನಿಸರ್ಗ!
ಗಿಡ ಮರಗಳ ವೈವಿಧ್ಯ ಸುಗ್ಗಿ ಉಗ್ಗುವ
ಥರ ಥರ ಹೇರಳ ಕಂಪು ಸಂಪತ್ತು!
ಮಳೆಗಾಲದಿ ಕಣ್ಣು ಹರಿದಲೆಲ್ಲ
ತದೇಕ ಮೇಲಿಂದಿಳಿವ ನೀರ
ಮೂಟೆ ಇಳಿಸಿದ ಬಿಳಿ ಪರದೆ
ಹುಚ್ಚು ಹೊಳೆಯಾದ ಮಳೆ
ಹಗಲಿರುಳೆನ್ನದೆ ಬೀಡುವಿರದೆ
ಸಂಸಾರ ಸುಖದಲಿ ಒಂದಾದ
ಬಾನು ಭೂಮಿ ಅಮಿತಾನಂದ!
ನಿಜ ನಿಸರ್ಗ ವಿಜ್ರಂಭಣೆ
ಈ ಮೋಹಕ ಮಲೆನಾಡು!
ಮಲೆನಾಡಿನ ಮಡಿಲಲ್ಲಿ ಬೆಳೆದ ನಮಗೆ ಈ ಕವಿತೆ ತುಂಬಾ ಇಷ್ಟ ಆಗುತ್ತೆ
Very good A N Murthy