ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಒಂದು ಸಂಸ್ಕೃತಿಯನ್ನು ಹೇಗೆ ಅರ್ಥೈಸಿಕೊಳ್ಳಲು ಸಾಧ್ಯ?

ಹುಡುಗಿಯಕಿ ಬಾಳ ಕಲಸಿದ್ರ ವರ ಸಿಗೋದು ಕಷ್ಟ.ಎಷ್ಟ ಕಲತ್ರು ಮುಸರಿ ತಿಕ್ಕೊದು ತಪ್ಪಂಗಿಲ್ಲ,ಕಡಮಿ ಕಲಿಸಿದ್ರು ಅಡ್ಡಿಯಿಲ್ಲ ಆದ್ರ ಮನಿಕೆಲಸ ಮತ್ತ ಅಕಿಗೆ ಹ್ಯಾಂಗ ಇರಬೇಕು ಅನ್ನೊದ ಕಲಿಸಿದ್ರ ಮುಂದ ಅನುಕೂಲ. ಮೈಮ್ಯಾಲೆ ಹಾಕೋ ಬಟ್ಟಿ ಕಡೆ ಲಕ್ಷ್ಯ ಕೊಡು,ಹ್ಯಾಂಗ ಬೇಕೋ ಹಾಂಗ ಅರಬಿ ಹಾಕಿದ್ರ ನೋಡೋ ಕಣ್ಣುಗಳಿಗೆ ಕಣ್ಣಕಟ್ಟಾಕ ಆಗತ್ತೇನು? ಮೈತುಂಬ ಅರಬಿ ಇದ್ದರ ಚೆಂದ ಹೆಣ್ಮಕ್ಕಳಿಗೆ.ಹಣಿಗೆ ಕುಂಕುಮ,ತಲಿಗೆ ಹೂ,ಕಾಲಿಗೆ ಕಾಲುಂಗುರ ಕೊಳ್ಳಾಗ ತಾಳಿ ನಯ ನಾಜೂಕು,ತಗ್ಗಿ ಬಗ್ಗಿ ನಡಿಯೋದನ್ನು ಈಗ ಕಲಿಸಿದ್ರ ಮುಂದ ಹೋದ ಮನಿಗೂ ಕೀರ್ತಿ ಬರತದ.ಇಲ್ಲಂದ್ರ ಮಾನ ಮರ್ಯಾದೆ ಮೂರ ಕಾಸಿಗೆ ಫಿಕ್ಸ…ನಮ್ಮ ಕಾಲದಾಗ ತಲಿಯೆತ್ತಿ ಗಂಡಸರನ ನೋಡೊದು ಅಪರಾಧಾಗಿತ್ತು.ಅಷ್ಟು ಕಟ್ಟುಪಾಡಿನಾಗ ಇಟ್ಟಿದ್ದಕ್ಕ ಜೀವನ ಇಷ್ಟ ಚೆಂದ ಅದ ವಸಿ ಕಾಳಜಿ ವಹಿಸು ಅನ್ನುವ ಅಜ್ಜಿ ಮಾತಿಗೆ ಅವ್ವ ಹುಂ ಅಂತ ತಲಿಯಾಡಿಸುವುದನ್ನು ಕಂಡು ನಾನು ಅವ್ವನ ಗುರಾಯಿಸಿದ್ದೆ.ಈ ಅಜ್ಜಿ ಅವ್ವನ ತಲಿಯಾಕ ತಿಂತಾಳ ಅಂತ ಅನ್ನಿಸಿತ್ತು.
ಕೆಲವೊಂದು ವಿಚಾರ ಹೌದಾದ್ರು,ಕೆಲವೊಂದು ವಿಷಯಕ್ಕ ಸಿಟ್ಟು ಉಕ್ಕಿ ಬರುತ್ತಿತ್ತು.

ಅಲ್ಲ ಕುಂತರು ತಪ್ಪು,ಇಲ್ಲ ಕುಂತರು ತಪ್ಪು, ನಕ್ಕರು,ಅತ್ತರು ಒಟ್ಟಾರೆ ನೀ
ಹುಡುಗಿಯದಿ ಹುಷಾರು ,ಗಂಡಮಗಾ ಹೆಂಗಿದ್ರು ಪರವಾಗಿಲ್ಲ,ಅವ ದುಡದ ಹಾಕಬೇಕು,ಹೆಣ್ಮಕ್ಕಳು ಮನಿಯಾಗ ಇದ್ದುಮಾಡ ಹಾಕಬೇಕು.
ಅಜ್ಜಿ ಹೇಳುವಾಗೆಲ್ಲ ಅದಕ ಇರಬೇಕು ಅಜ್ಜ ಲಗೂ ಟಿಕೇಟ್ ತಗೊಂಡ ಅನ್ನುವಾಗ ಕಣ್ಣಲ್ಲಿ ನೀರು ಕಂಡು ಹೌಹಾರಿದ್ದೆ,ಗಟ್ಟಿಗಿತ್ತಿ ಅಜ್ಜಿ ಅಳೋದಾ? ಆಗಿನ ಕಾಲಘಟ್ಟದಲ್ಲಿ ಹಾಗಿತ್ತು.ಈಗಲೂ ಅದನ್ನು ಮುಮದಿವರೆಸಲು ಸಾಧ್ಯವಾ?

ನಮ್ಮ ಹಿರಿಯರು ಆಗಾಗ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುವಾಗ, ನಾವು ಹಾಳಾಗುತ್ತಿರುವುದೇ ಈ ಸಂಸ್ಕೃತಿ ಪ್ರಭಾವದಿಂದ ಅದರಲ್ಲೂ ನಮ್ಮ ಯುವ ಜನಾಂಗ ದಾರಿತಪ್ಪಲು ಅದೇ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಾಗಾದರೆ ಪಾಶ್ಚಾತ್ಯ ಸಂಸ್ಕೃತಿ ಎಂದರೆ ಕೆಟ್ಟದ್ದೆ? ಪಾಶ್ಚಾತ್ಯರು ಹಾಳಾಗಿದ್ದಾರೆಯೆ?  ಒಂದು ಸಂಸ್ಕೃತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಎಲ್ಲಾ ಸಂಸ್ಕೃತಿಗಳಿಗಿಂತ ನಮ್ಮ ಜೀವನಶೈಲಿಯೇ ಅತ್ಯುತ್ತಮ ಎಂಬುದು ಸರಿಯಾದ ತಿಳಿವಳಿಕೆಯೇ? ಒಂದಷ್ಟು ಈ ಬಗೆಗೆ ಚಿಂತಿಸಬೇಕಿದೆ, ವಿಮರ್ಶೆಗೆ ಒಳಪಡಿಸಬೇಕಿದೆ…

ವಾಸ್ತವವಾಗಿ ಏನಿರಬಹುದು?  ಸಂಸ್ಕೃತಿಯನ್ನು ಅದರ ಆಳದಲ್ಲಿ ಅರಿತು ವಿಶದವಾಗಿ ಚರ್ಚಿಸಲು ದೀರ್ಘ ತಳಮಟ್ಟದ ಅಧ್ಯಯನದ ಅವಶ್ಯಕತೆ ಇದೆ. ಆದರೆ ಸರಳವಾಗಿ ಮೇಲ್ಮಟ್ಟದಲ್ಲಿ ಜನರಲ್ಲಿ ಇರಬಹುದಾದ ಅಭಿಪ್ರಾಯದ ಆಧಾರದ ಮೇಲೆ ಅಲ್ಪಸ್ವಲ್ಪ ತಿಳಿಯುವ ಮನಸ್ಸು ಅಷ್ಟೇ. ಅಮೇರಿಕಾ, ಯುರೋಪ್,ಚೀನಾ ಇತ್ಯಾದಿ ದೇಶಗಳ ಪ್ರಭಾವ,ಊಟ, ಬಟ್ಟೆ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಅವಲೋಕಿಸುವುದಾಗಿದೆ.ನಮ್ಮ ಸಾಂಪ್ರದಾಯಿಕ ಶೈಲಿಯ ಊಟ ಆಯಾ ರಾಜ್ಯಗಳಲ್ಲಿ ಭಿನ್ನವಾದರೂ,ಆಹಾರದ ವಿಷಯಕ್ಕೆ ಬಂದರೆ ಅವರು ನಮಗಿಂತಲೂ ಭಿನ್ನ. ಅವರು ಸಹಜವಾಗಿ ಉಪಯೋಗಿಸುವ ಬಿಯರ್, ವೈನ್, ಓಡ್ಕಾ, ವಿಸ್ಕಿ, ರಮ್ ಮುಂತಾದ ಕುಡಿತದ ಬಗ್ಗೆ ನಮ್ಮ ಸಂಪ್ರದಾಯವಾದಿಗಳಿಗೆ ಬಹಳ ಬೇಸರ. ಮತ್ತೆ ಅವರ ಉಡುಗೆ ತೊಡುಗೆ ಅದರಲ್ಲೂ ಮಹಿಳೆಯರ ತುಂಡುಡುಗೆ ಬಗ್ಗೆ ಅಸಮಾಧಾನ ಇದ್ದಿದ್ದೆ ಇದೆ.

ಪಂಚೆಯೋ, ಜೀನ್ಸೋ, ಸೀರೆಯೋ, ಚಡ್ಡಿಯೋ ಹಾಗೆ ಬ್ರೆಡ್ಡೋ, ಪೀಜಾನೋ, ಮುದ್ದೆಯೋ, ರೊಟ್ಟಿಯೋ, ಮಾಂಸವೋ, ತರಕಾರಿಯೋ ಅವರವರ ಇಷ್ಟ ನಿಜ. ಕುಡಿತ ಆರೋಗ್ಯದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ.ಪಾಶ್ಚಾತ್ಯ ರಲ್ಲಿ ಕುಡಿತಕ್ಕೆ ಕಾರಣ ಅಲ್ಲಿಯ ವಾತಾವರಣ ಇರಬಹುದೇನೋ,ಆದರೆ ನಮ್ಮ ದೇಶದ ಸಂಸ್ಕೃತಿ,ಹವಾಮಾನ,ಜೀವನೋಪಾಯಗಳು ಇದಕ್ಕೆ ಪೂರಕವಾಗಿಲ್ಲ.ನಮಗೆ ಕುಡಿತ ಅನಿವಾರ್ಯವಲ್ಲ.ಅನ್ಯರ ಚಟಗಳು ಪ್ಯಾಶನ್ ಆಗಿ ನಮ್ಮವರ ಜೀವನ ವಿನಾಶದತ್ತ ಸಾಗುತ್ತಿದೆ. ಆದ್ದರಿಂದ ಅದರ ಬಗೆಗೆ ಇರುವ ಆರೋಪ ಅಸಮಾಧಾನ ನಿರಾಧಾರ.ನಾವದನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದೆವೆ ಎಂಬುದು ವಿಪರ್ಯಾಸ.

ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಗಮನಹರಿಸಿದಾಗ,ಮನುಷ್ಯ ಸಮಾಜದ ಅತ್ಯಂತ ಚಿಕ್ಕ ಘಟಕ ಕುಟುಂಬ. ಕೌಟುಂಬಿಕ ವ್ಯವಸ್ಥೆ ಇಲ್ಲದ ಯಾವ ಸಮಾಜವೂ ಈಗ ಅಸ್ತಿತ್ವದಲ್ಲಿ ಇಲ್ಲ. ಪಾಶ್ಚಾತ್ಯರಲ್ಲಿ ಕುಟುಂಬ ವ್ಯವಸ್ಥೆ ಹೆಚ್ಚು ಪ್ರಬುದ್ಧವಾಗಿ, ನಾಗರೀಕವಾಗಿ ಮತ್ತು ವಾಸ್ತವಿಕ ನೆಲೆಯಲ್ಲಿ ಅರ್ಥೈಸಲಾಗಿದೆ ಮತ್ತು ಆಚರಣೆಯಲ್ಲಿದೆ. ಗಂಡು ಹೆಣ್ಣು ನಮ್ಮಂತೆಯೇ ಪ್ರೀತಿಸಿಯೋ, ಪರಿಚಯದ ಮುಖಾಂತರವೋ, ಬ್ರೋಕರ್ ಮೂಲಕವೋ, ಇಂಟರ್ ನೆಟ್ ಸಂಪರ್ಕ ಜಾಲತಾಣಗಳ ಮೂಲಕವೋ ಮದುವೆಯಾಗುವ,ಗಂಡು ಹೆಣ್ಣಿನ ಆಸಕ್ತಿ ಒಪ್ಪಿಗೆ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ.

ಬಹಳಷ್ಟು ಸಂಬಂಧಗಳು ಅದರಂತೆ (ಗಂಡ ಹೆಂಡತಿ)ಜೀವನ ಪರ್ಯಂತ ಜೊತೆಯಾಗಿಯೇ ಇರುತ್ತವೆ. ಒಂದು ವೇಳೆ ಭಿನ್ನಾಭಿಪ್ರಾಯ ಉಂಟಾದರೆ ಸರಳವಾಗಿ ಸಹಜವಾಗಿ ಒಪ್ಪಂದದ ಮೇರೆಗೆ  ಬೇರೆಯಾಗುತ್ತಾರೆ. ಅದು ಅಷ್ಟೇನು ನೋವಿನ ಸಂಕಷ್ಟದ ಕಾಲವಾಗುವುದಿಲ್ಲ. ಏಕೆಂದರೆ ಅವರ ಆರ್ಥಿಕ ಪರಿಸ್ಥಿತಿ ನಮಗಿಂತ ಉತ್ತಮವಾಗಿದೆ ಮತ್ತು ಸಾಮಾಜಿಕ ವ್ಯವಸ್ಥೆ ಇದನ್ನು ಸಹಜವಾಗಿಯೇ ಸ್ವೀಕರಿಸುತ್ತದೆ. ಮಕ್ಕಳೂ ಕೂಡ ಒಂದು ಹಂತಕ್ಕೆ ಇದರಿಂದ ಒತ್ತಡ ಮುಕ್ತರಾಗುತ್ತಾರೆ.ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ವ್ಯವಸ್ಥೆ ಸೃಷ್ಟಿಸಲಾಗಿದೆ. ಮದುವೆ ವಿಷಯದಲ್ಲಿ ಗಂಡು ಹೆಣ್ಣಿಗಿಂತ ಅವರ ಪೋಷಕರು ಮತ್ತು ಸಂಬಂಧಿಗಳು ಹೆಚ್ಚು ಜವಾಬ್ದಾರಿ ಮತ್ತು ಆಸಕ್ತಿ ತೋರಿಸುತ್ತಾರೆ. ಇದೊಂದು ಜನುಮಜನುಮದ ಅನುಬಂಧ ಎಂದು ಒತ್ತಡ ಹೇರುತ್ತಾರೆ. ಗಂಡ ಹೆಂಡತಿ ಎರಡು ದೇಹ ಒಂದೇ ಆತ್ಮ ಎಂದು ನಂಬಿಸಲಾಗುತ್ತದೆ. ಈಗ ಮಾತ್ರ ಹೆಚ್ಚು ಕಡಿಮೆ ಎರಡು ವಿಭಿನ್ನ ಹಿನ್ನೆಲೆಯ ಆಧುನಿಕ ಕಾಲದ ಎರಡು ಜೀವಗಳು ಒಂದೇ ಆಗುವುದು ಕಷ್ಟವಾಗುತ್ತಿದೆ. ಒಂದು ರೀತಿಯ ಆತ್ಮವಂಚಕ ವ್ಯಾಪಾರಿ ಒಪ್ಪಂದಗಳಾಗುತ್ತಿವೆ. ಆರ್ಥಿಕ ಪರಿಸ್ಥಿತಿಯೇ ಮದುವೆ ಒಪ್ಪಂದದ ಮೂಲಾಧಾರವಾಗಿದೆ. ಹೊಂದಾಣಿಕೆ ಅವಶ್ಯ ನಿಜ. ಆದರೂ ಅದೇ ಸಾಧ್ಯವಾಗುತ್ತಿಲ್ಲ.    

            

ಭಿನ್ನಾಭಿಪ್ರಾಯ ಉಂಟಾದಾಗ ಪಾಶ್ಚಾತ್ಯರಂತೆ ಸುಲಭವಾಗಿ ಬೇರೆಯಾಗಲು ಸಾಧ್ಯವಾಗುತ್ತಿಲ್ಲ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಅದು ಅತ್ಯಂತ ಹಿಂಸಾತ್ಮಕವಾಗುತ್ತಿದೆ. ಆರ್ಥಿಕ ಅಭದ್ರತೆ. ಗಂಡ ಬಿಟ್ಟವಳು, ಹೆಂಡತಿ ಸಾಕಲಾರದವನು ಮುಂತಾದ ಅನೇಕ ಉಪಮೇಯ ಯೊಂದಿಗೆ ಅವರ ಯೋಗ್ಯತೆಗೆ ಅನಾವರಣ.ಆಧುನಿಕ ಭಾರತದಲ್ಲಿ ಆರ್ಥಿಕ ಅಭಿವೃದ್ಧಿಯೇ ವೈಯಕ್ತಿಕ ಸಂಬಂಧಗಳ ಕುಸಿತಕ್ಕೆ ಕಾರಣವಾಗುತ್ತಿರುವುದು ದುರಂತ. ಇಲ್ಲಿ ಆದರ್ಶಗಳನ್ನು ಮಾತನಾಡಲಾಗುತ್ತದೆ ಆಚರಣೆಗಳನ್ನು ಸ್ವಾರ್ಥಕ್ಕಾಗಿ ಬಳಸಲಾಗುತ್ತದೆ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಸಾರಾಸಗಟಾಗಿ ತಿರಸ್ಕರಿಸದೆ ಅಲ್ಲಿನ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ನಮ್ಮಲ್ಲಿರುವ ಅಹಂ ಮನೋಭಾವ ಕಡಿಮೆ ಮಾಡಿಕೊಂಡು ಇಲ್ಲಿನ ಅದ್ಭುತ ಚಲನಶೀಲ ಸಂಸ್ಕೃತಿಯನ್ನು ಮತ್ತಷ್ಟು ಉಜ್ವಲಗೊಳಿಸಿ ಸಮಾನತೆ ಸಾಧಿಸಿ ನೆಮ್ಮದಿಯ ಆರಾಮದಾಯಕ  ಬದುಕು ಕಟ್ಟಿ ಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ.ಇಂದಿನ ಮಾಧ್ಯಮಗಳು ಬಿತ್ತರಿಸುವ ಸನ್ನಿವೇಶಗಳು ಸಮ್ಮಿಳಿತ ಮಿಶ್ರಣದಂತೆ.

ಸೃಷ್ಟಿಯ ಎಲ್ಲಾ ನಾಗರಿಕತೆಗಳು ಆಯಾ ಪ್ರದೇಶದ ವೈಶಿಷ್ಟ್ಯ ವೈವಿಧ್ಯತೆ ಹೊಂದಿರುತ್ತದೆ. ಯಾವುದು ಮೇಲಲ್ಲ,ಯಾವುದು ಕೀಳಲ್ಲ. ಉತ್ತಮವಾದದ್ದು ಎಲ್ಲಿಂದ ಬಂದರೂ ನಾವು ಅದನ್ನು ಸ್ವೀಕರಿಸಬೇಕು. ಹೆಣ್ಣು ಗಂಡು ಬೇರೆಯಲ್ಲ ಎರಡು ಮಕ್ಕಳು ಒಂದೇ ಎಂಬುದನ್ನು ಮನಗಾಣಬೇಕು.ಪಾಲಕರು ಶಿಕ್ಷಣದಿಂದ ಒಳಿತನ್ನೆ ಬಯಸಬೇಕು. ಬದುಕ ಕಟ್ಟಬೇಕು. ಉಡುಪು ಸಂಸ್ಕೃತಿಯ ಪ್ರತಿಬಿಂಬ.ಆಚಾರ ವಿಚಾರಗಳು ಭಿನ್ನವಾದರೂ,ಶಿಕ್ಷಣದಿಂದ ವೈಚಾರಿಕ ಮನೋಭಾವದ ಹಣತೆಯನ್ನು ಹಚ್ಚಿದಷ್ಟು‌ ಪಾಶ್ಚಾತ್ಯ ಸಂಸ್ಕೃತಿಯ ಸಕಾರಾತ್ಮಕ ಚಿಂತನೆಗಳು ನಮ್ಮ ಚಿಂತನೆಗೆ ಹೊಂದಾಣಿಕೆಯಾಗಬಹುದು.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

3 thoughts on “

  1. ಆಧುನಿಕ ಸಮಾಜಕ್ಕೆ ಅಗತ್ಯ ಮಾಹಿತಿ ಒದಗಿಸಿದ್ದೀರಿ, ಚಿಂತಿಸಬೇಕಾದ ವಿಷಯ

  2. ಸಂಸ್ಕೃತಿಯ ಕುರಿತಾಗಿ ಮುದ್ದಾದ ಆಕರ್ಷಕ ಚಿತ್ರಗಳನ್ನು ಒಳಗೊಂಡ ಲೇಖನ ಸುಂದರ ಶೈಲಿಯ ಸರಳ ಶಬ್ದಗಳ ಅನಾವರಣ ಗೊಂಡ ಬೋಧಪ್ರದ! ನಮ್ಮ ವೇದಿಕೆಗೆ ದಾಟಿಸಲಾಗಿದೆ

    D’s.Naik sirsi

Leave a Reply

Back To Top