ಪುಸ್ತಕ ಸಂಗಾತಿ
‘ವಜನು ಕಟ್ಟು’ ಪ್ರಬಂಧಗಳು
ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನವರು. ಅವರು 1969 ರ ಅಗಸ್ಟ್ 9 ರಂದು ಹುಟ್ಟಿದವರು.
ಅವರ ಪ್ರಾಥಮಿಕ, ಪ್ರೌಢಶಿಕ್ಷಣವು ಕ್ಯಾಸನೂರು ಮತ್ತು ಶಕುನವಳ್ಳಿ (ಸೊರಬ)ಯಲ್ಲಿ ಆಯಿತು.
ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್.ಎಲ್.ಬಿ.ಯ ವರೆಗೂ ಧಾರವಾಡದಲ್ಲಿ ಮುಗಿಸಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಕೋರ್ಸ್ ಮುಗಿಸಿ; ಮುಂದೆ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿ, ಹಾಗೂ ಕ್ಯಾಸನೂರಿನಲ್ಲಿ ತಮ್ಮ ಹೊಲಗಳ, ತೋಟಗಾರಿಕಾ ಕೆಲಸಗಳನ್ನು ಮಾಡುತ್ತಿದ್ದಾರೆ ಈಗ..!
ಅವರು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಸದಸ್ಯತ್ವದ ಕಾರ್ಯವನ್ನೂ ಮಾಡಿದರು, ಹಾನಗಲ್ಲಿನ ‘ಕನ್ನಡ ಯುವಜನ ಕ್ರಿಯಾ ಸಮಿತಿ’ಯ ಪ್ರಧಾನ ಸಂಚಾಲಕರಾಗಿಯೂ ಕೆಲಸಗಳನ್ನು ಮಾಡುತ್ತಲೇ ತಮ್ಮ ನಿತ್ಯ ಹೊಲ ಮತ್ತು ಮನೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಕೂಡ ಈಗ..!
ಹೀಗೆಯೇ ಇರುವ ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ, ಅವು ಹೀಗಿವೆ —
ಮಾಸದ ಕಲೆಗಳು (1994), ಸಲಸಲದ ಪಾಡು (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (2005) ಕವನ ಸಂಕಲನ..!
ಪ್ರಬಂಧಗಳು ಹೀಗಿವೆ… ವಜನುಕಟ್ಟು (2005), ಮಕ್ಕಳ ಸಾಹಿತ್ಯವೆಂದರೆ ಅಮ್ಮ ಅಂದ್ರೆ ಅಷ್ಟಿಷ್ಟಲ್ಲ – ಕವಿತೆಗಳು (2014), ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016). ಅವರ ಇತರೆ ಬರಹಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು – 2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು – 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015)..!
ಹೀಗೆಯೇ ಹಲವಾರು ಸಾಹಿತ್ಯಕ ಬರವಣಿಗೆಗೆ ಅವರಿಗೆ ಪ್ರಶಸ್ತಿಗಳು,ಬಹುಮಾನಗಳೂ, ಸಂದಿವೆ..!
ಅವರಿಗೆ ಹೀಗೆಯೇ ಹಲವಾರು ಗೌರವಗಳೂ ಸಿಕ್ಕಿವೆ. ಅವು ಎಂದರೆ ಬೇಂದ್ರೆ – ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ; ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳು. ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ (2011)ಯೂ ಅವರಿಗೆ ದೊರೆತಿದೆ..!
ಹೀಗೆಯೇ ಸಾಹಿತ್ಯ ಮತ್ತು ಕೃಷಿ ಜೊತೆಗೆ ನ್ಯಾಯವಾದಿತ್ವವನ್ನು ಈವರೆಗೂ ಮುಂದುವರೆಸಿರುವ ಗೆಳೆಯರಾದ ವಿಜಯಕಾಂತ ಪಾಟೀಲರು ಇತ್ತೀಚೆಗಷ್ಟೇ ನನಗೆ ಕೇಳಿದೆ ಎಂದು ಅವರ ಎರಡು ಪುಸ್ತಕಗಳೆಂದರೆ ‘ವಜನು ಕಟ್ಟು’ ಹಾಗೂ ‘ಅನಿಸಿದ್ದು ಆಡಿದ್ದು’ ಎಂಬ ಪುಸ್ತಕಗಳನ್ನು ನನಗೆ ಕಳುಹಿಸಿದರು.
ನಾನು ಮೊದಲು ಓದಲು ಕೈಗೆತ್ತಿಕೊಂಡಿದ್ದು, ವಿಜಯಕಾಂತ ಪಾಟೀಲರ ‘ವಜನು ಕಟ್ಟು’ ಎಂಬ ಒಂಬತ್ತು ಪ್ರಬಂಧಗಳಿರುವ ‘ವಜನು ಕಟ್ಟು’ ಪುಸ್ತಕವನ್ನು. ಆ ‘ವಜನು ಕಟ್ಟು’ವಿನ ಹೂರಣವನ್ನು ಓದಗರ ಮುಂದಿಡುತ್ತಿದ್ದೇನೆ..!
ಹೀಗೆಯೇ ಗಿರಡ್ಡಿ ಗೋವಿಂದರಾಜರು, ಈ ವಿಜಯಕಾಂತ ಪಾಟೀಲರು ಕ್ಯಾಸನೂರ ಎಂಬ ಒಂದು ಗ್ರಾಮದಿಂದ ಬಂದು ಧಾರವಾಡ ಎಂಬ ದೊಡ್ಡ ಗ್ರಾಮದಲ್ಲಿ ಓದಿ, ಒಟ್ಟಾರೆ ಸಾಹಿತ್ಯವನ್ನು ಮೈದೆಳೆಸಿಕೊಂಡಿರುವ ಇವರ ಬರವಣಿಗೆ ಸಹಜವಾಗಿಯೇ ಇದೆ. ಹೀಗೆಂದು ಹೇಳುತ್ತಾ ಗಿರಡ್ಡಿ ಗೋವಿಂದರಾಜರು ಹೇಳುತ್ತಾರೆ, ‘ವಜನು ಕಟ್ಟು’ವಿನ ಬಗೆಗೆ ತಮ್ಮ ಬೆನ್ನುಡಿಯಲ್ಲಿ ಬರೆಯುತ್ತಾ ಹೀಗೆ ಹೇಳುತ್ತಾರೆ. ವಿಜಯಕಾಂತ ಪಾಟೀಲರ ಬರವಣಿಗೆಗೆ ಹಳ್ಳಿಯ ಬದುಕೇ ವಸ್ತು ಮತ್ತು ಹಿನ್ನೆಲೆಯಾಗಿರುವುದು ಸಹಜವೇ ಆಗಿದೆ ಎಂದು..!
ಹೀಗೆಲ್ಲಾ ಹೇಳುತ್ತಾ ಈ ವಿಜಯಕಾಂತ ಪಾಟೀಲರ ‘ವಜನು ಕಟ್ಟು’ವಿನ ನಿಜವಾದ ಹೂರಣವನ್ನು ನಾವು ಒಂದಷ್ಟು ವಿಶ್ಲೇಷೋಣ ಈಗ.
# ‘ಅನುಬಂಧ’ದ ಬಂಧನವೂ ಮತ್ತು ಬಿಡುಗಡೆಯೂ..! —
ಈ ‘ವಜನು ಕಟ್ಟು’ ಪ್ರಬಂಧಗಳ ಸರಣಿಯ ಪುಸ್ತಕಕ್ಕೆ ಸಾಹಿತಿ ಜಿ.ಪಿ.ಬಸವರಾಜು ಅವರ ಮುನ್ನುಡಿ ಇದೆ. ಅಲ್ಲದೇ ಗಿರಡ್ಡಿ ಗೋವಿಂದರಾಜರ ಬೆನ್ನುಡಿಯೂ ಇದೆ.
ಕಟ್ಟು ಎನ್ನುವ ಮಾತು ವಿಜಯಕಾಂತ ಪಾಟೀಲರ ಬದುಕಿನ ಒಟ್ಟು ಗ್ರಹಿಕೆಯನ್ನು, ಧೋರಣೆಯನ್ನು ಸೂಚ್ಯವಾಗಿ ಹೇಳುವಂತೆಯೂ ಇದೆ. ಹುಟ್ಟಿದ ಊರನ್ನೇ ತಮ್ಮ ಗಟ್ಟಿ ನೆಲೆಯನ್ನಾಗಿ ಮಾಡಿಕೊಂಡು, ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಜಯಕಾಂತ ಪಾಟೀಲರಿಗೆ ಕಟ್ಟುವುದು ಗೊತ್ತು: ಒಡೆಯವುದು ತಿಳಿಯದಂತೆ ಕಾಣುವುದಿಲ್ಲ. ಈ ವಿಜಯಕಾಂತ ಪಾಟೀಲರ ‘ವಜನು ಕಟ್ಟು’ವಿನ ಒಟ್ಟಾರೆ ಸಾರಂಶವಿರುವುದು ಗೊತ್ತಾಗುತ್ತದೆ..!
ಕವಿಯಾಗಿ ಗುರುತಿಸಿಕೊಂಡಿರುವ ವಿಜಯಕಾಂತ ಪಾಟೀಲರ ಗದ್ಯ ಬರಹಗಳ ಸಂಕಲನ ‘ವಜನು ಕಟ್ಟು’. ಒಂಬತ್ತು ಬರಹಗಳ ಈ ಕೃತಿಯನ್ನು ವಿಜಯಕಾಂತ ಪಾಟೀಲರು ‘ಸವಿಬಂಧಗಳು’ ಎಂದು ಗುರ್ತಿಸಿದ್ದಾರೆ. ಗುಣ – ಲಕ್ಷಣಗಳ ಹಿನ್ನೆಲೆಯಲ್ಲಿ ಈ ಬರಹಗಳನ್ನು ಪ್ರಬಂಧ ಪ್ರಕಾರಕ್ಕೆ ಸೇರಿಸಬಹುದು.
ಪ್ರಬಂಧ ಪ್ರಕಾರದಲ್ಲಿನ ಲೇಖಕರ ಅಭ್ಯಾಸಕ್ಕೆ ಉದಾಹರಣೆಯಾಗಿ ಇಲ್ಲಿನ ಸವಿಬಂಧಗಳನ್ನು ಪರಿಶೀಲಿಸಬಹುದೂ ಕೂಡ..!
ಲೇಖಕರ ಜೀವನದ ಕುರಿತ ವಿವರಗಳನ್ನು ಒಳಗೊಂಡಿರುವುದು ‘ವಜನು ಕಟ್ಟು’ ಸಂಕಲನದ ಎಲ್ಲಾ ಬರಹಗಳ ಸಾಮಾನ್ಯ ಅಂಶವಾಗಿದೆ. ಲೇಖಕರ ವೈಯಕ್ತಿಕ ಬದುಕು ಪ್ರತಿಫಲನಗೊಳ್ಳುವುದು ಲಲಿತ ಪ್ರಬಂಧಗಳಲ್ಲಿ ಸಾಮಾನ್ಯವಾಗಿದೆ. ಇಂಥ ವಿವರಗಳು ಬರಹದ ವಸ್ತುವಿಗೆ ಪೂರಕವಾಗಿ, ಸಾಂದರ್ಭಿಕವಾಗಿ ಮೂಡಿಬರುತ್ತವೆ. ಆದರೆ, ಈ ವಿಜಯಕಾಂತ ಪಾಟೀಲರ ಮುಕ್ಕಾಲು ಬರಹಗಳಲ್ಲಿ ವೈಯಕ್ತಿಕ ಬದುಕಿನ ವಿವರಗಳೇ ಮೇಲುಗೈ ಸಾಧಿಸಿ, ಆ ವಿವರಗಳಿಗೆ ಪೂರಕವಾಗಿ ಬರಹದ ವಸ್ತು ಬಳಕೆ ಆದಂತಿದೆ. ಈ ಕಾರಣದಿಂದಾಗಿ ‘ವಜನ ಕಟ್ಟು’ ಸಂಕಲನದ ಓದು ಪ್ರಬಂಧಗಳ ರುಚಿಗಿಂತಲೂ ಹೆಚ್ಚು ಜೀವನಚಿತ್ರದ ಅನುಭವವನ್ನು ಓದುಗರಲ್ಲಿ ಉಂಟುಮಾಡುತ್ತದೆ..!
ಸಂಕಲನದ ಮೊದಲ ಬರಹವಾದ ‘ಅಜ್ಜಯ್ಯನೆಂಬೋ ವಜನಕಟ್ಟಯ ಮಾಕಾವ್ಯ’ ಎನ್ನುವ ಬರಹವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಲೇಖಕರ ಅಜ್ಜನ ಸಾಹಸಗಳನ್ನು ಬಣ್ಣಿಸುತ್ತಲೇ, ಆ ವ್ಯಕ್ತಿತ್ವ ಲೇಖಕರ ವ್ಯಕ್ತಿತ್ವವನ್ನು ರೂಪಿಸಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿಯೇ- ‘ಅಜ್ಜಿಯ ದನಿ; ಕೋಲುಜೇನಿನ ಹನಿ!’, ಕಾಕಾನನ್ನು ಕುರಿತ ‘ಕವಿಗಾರ ಎಂಬ ಪಟ್ಟವೂ, ಕಾಕಾ ಎಂಬ ದೋಸ್ತಿಯೂ’ ಹಾಗೂ ಲೇಖಕರ ಕುಟುಂಬದ ಶ್ವಾನ ಸಖ್ಯವನ್ನು ವಿವರಿಸುವ ‘ಚುಕ್ಕಿಯ ಬಾಲ ಹಿಡಕೊಂಡು’ ರಚನೆಗಳನ್ನು ಗುರುತಿಸಬಹುದು..!
ಪಾಟೀಲ ಪುಟ್ಟಪ್ಪ ಹಾಗೂ ಚಂದ್ರಶೇಖರ ಪಾಟೀಲರ ಕುರಿತ ಬರಹಗಳು ಕೂಡ ಪರೋಕ್ಷವಾಗಿ ಆ ಹಿರಿಯರು ಲೇಖಕರ ವ್ಯಕ್ತಿತ್ವವನ್ನು ರೂಪಿಸಿದ ವಿವರಗಳೇ ಆಗಿವೆ. ಪಾಪು ಬಗೆಗಿನ ಬರಹದಲ್ಲಿ, ಹಿರಿಯ ಪಾಟೀಲರ ಬಗ್ಗೆ ಕಿರಿಯ ಪಾಟೀಲರ ಕುರಿತ ಭಯ — ಭಕ್ತಿಯ ವಿವರಗಳ ಆರ್ದ್ರ ದನಿಯ ಚಿತ್ರಗಳಿವೆ.
ಇದಕ್ಕೆ ತದ್ವಿರುದ್ಧ ರೀತಿಯಲ್ಲಿರುವ ಚಂಪಾ ಅವರನ್ನು ಕುರಿತ ‘ಎಡವಟ್ಟು ‘ಚಂಪಾ’ರಣ್ಯದೊಳಗೂ ಪ್ರೀತಿ ಕಾರುಣ್ಯದ ತೇರು’ ಬರಹ ತನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಯ ಬಗೆಗಿನ ಟೀಕೆ — ಟಿಪ್ಪಣಿಗಳಂತಿವೆ. ಚಂಪಾ ಅವರ ಶೈಲಿಯ ಅನುಕರಣೆಯ ನೆರಳಿನಲ್ಲೇ ಸಾಗುವ ಈ ರಚನೆ — ಚಂಪಾ ಅವರನ್ನು ವಸುನಿಷ್ಠವಾಗಿ ಕಾಣಿಸಲು ಪ್ರಯತ್ನಿಸಿದೆ. ಈ ಬರಹದ ಓದು- ಲಂಕೇಶ್, ಅನಂತಮೂರ್ತಿ, ಬೇಂದ್ರೆ ಅಂಥವರ ಬಗ್ಗೆ ಚಂಪಾ ಅವರು ಬರೆದ ಬರಹಗಳನ್ನು ನೆನಪಿಸುತ್ತದೆ ಕೂಡ..!
‘ಹನ್ನೊಂದ್ ನಂಬರ್ ಗಾಡಿ!’ ಮತ್ತು ‘ಒಂದೊಮ್ಮೆ ನನ್ನೂರಲ್ಲಿ ಅಳುವೇ ಅಪರೂಪ’ ಸಂಕಲನದ ಗಮನಾರ್ಹ ರಚನೆಗಳು. ನಡಿಗೆ ಅಪರೂಪ ಆಗುತ್ತಿರುವ ದಿನಗಳಲ್ಲಿ, ನಡೆಯುವುದಕ್ಕೆ ಸಂಬಂಧಿಸಿದಂತೆ ಬಾಲ್ಯದ ಸವಿನೆನಪುಗಳನ್ನು ‘ಹನ್ನೊಂದ್ ನಂಬರ್ ಗಾಡಿ!’ ಆಪ್ತಧಾಟಿಯಲ್ಲಿ ಚಿತ್ರಿಸುತ್ತದೆ. ‘ಒಂದೊಮ್ಮೆ ನನ್ನೂರಲ್ಲಿ ಅಳುವೇ ಅಪರೂಪ’ ಎನ್ನುವ ಕಾವ್ಯಾತ್ಮಕ ಶೀರ್ಷಿಕೆಯ ಬರಹ, ಒಂದೂರಿನ ಎರಡು ಕಾಲಘಟ್ಟಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಿದೆ..! ಆದರೆ, ಕಳೆದ ಕಾಲದ ಬಗೆಗಿನ ಆರಾಧನಾ ಮನೋಭಾವದ ಇಂಥ ರಚನೆಗಳು ವರ್ತಮಾನವನ್ನು ಒಂದು ಬಗೆಯ ಪೂರ್ವಗ್ರಹದಲ್ಲೇ ನೋಡುವ ಮಿತಿಯನ್ನೂ ಇಲ್ಲಿ ಹೇಳಬೇಕು. ಮಿತಿಗಳ ನಡುವೆಯೂ ಈ ಎರಡು ಬರಹಗಳು ವಿಜಯಕಾಂತ ಪಾಟೀಲರ ಗದ್ಯ ‘ಹಿಡಿಯಬೇಕಾದ ದಾರಿ’ಯ ಮಾದರಿಗಳೂ ಹೌದು..!
ವಿಜಯಕಾಂತ ಪಾಟೀಲರ ರಚನೆಗಳ ಮತ್ತೊಂದು ವಿಶೇಷ – ಗದ್ಯದ ನಡುನಡುವೆ ಬಳಕೆಯಾಗಿರುವ ಕವಿತೆಗಳು. ಗದ್ಯ ದಣಿದಾಗ ಅಥವಾ ವಾಚ್ಯವಾದಾಗ ಬದಲಾವಣೆ ಅನ್ನುವಂತೆ ಈ ರಚನೆಗಳಿವೆ. ಪ್ರಯೋಗದ ರೂಪದಲ್ಲಿ ಈ ಪ್ರಯತ್ನ ಗಮನಸೆಳೆದರೂ – ಗದ್ಯ ಸಂಕಲನದೊಳಗೆ ಪದ್ಯಗಳೇ ಹೆಚ್ಚು ಗಮನಸೆಳೆಯುವ, ಹಾಗಾದಾಗ ಗದ್ಯದ ಉದ್ದೇಶವೇ ವಿಫಲವಾಗುವ ಸಾಧ್ಯತೆಯೂ ಇಲ್ಲದಿಲ್ಲ..!
ಪ್ರಬಂಧ ಪ್ರಕಾರ ಹೊಸಹುಟ್ಟು ಪಡೆಯಲು ಹವಣಿಸುತ್ತಿರುವ ಸಂದರ್ಭದಲ್ಲಿ ಅನೇಕ ಲೇಖಕರು ಗದ್ಯದಲ್ಲಿ ಹೊಸ ಸಾಧ್ಯತೆಗಳಿಗೆ ತುಡಿಯುತ್ತಿದ್ದಾರೆ. ಆದರೆ, ಇಂಥ ಬಹುತೇಕ ಪ್ರಯತ್ನಗಳು ಲಹರಿಗಳ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದೇ ಹೆಚ್ಚು. ಅನುಭವ, ನುಡಿಗಟ್ಟು ಹಾಗೂ ಜೀವನದೃಷ್ಟಿಗಳು ಸಮಪಾಕದಲ್ಲಿ ಒಟ್ಟಾದಾಗ ಪ್ರಬಂಧಗಳ ಕಟ್ಟಿಗೆ ವಜನು ದೊರೆಯಲು ಸಾಧ್ಯವಾಗುವುದು. ಅದು ಸಾಧ್ಯವಾಗುತ್ತದೆ ಕೂಡ..! ಹೀಗಂತ ಹೇಳಿ ಇಲ್ಲಿಗೆ ಈ ‘ವಜನು ಕಟ್ಟು’ವಿನ ನನ್ನ ಅನಿಸಿಕೆಗಳನ್ನು ಮುಗಿಸುತ್ತೇನೆ..!
ಕೆ.ಶಿವು.ಲಕ್ಕಣ್ಣವರ