ರಮೇಶ. ಸಿ.ಬನ್ನಿಕೊಪ್ಪ.ಹಲಗೇರಿ-ಕವಿತೆ-ದಿಲ್ಲಿಯಂಗಳದ ಅಲಾಪ

ಕಾವ್ಯ ಸಂಗಾತಿ

ದಿಲ್ಲಿಯಂಗಳದ ಅಲಾಪ

ರಮೇಶ. ಸಿ.ಬನ್ನಿಕೊಪ್ಪ.ಹಲಗೇರಿ

ಗಲ್ಲ ಜೋತು ಬಿದ್ದು
ಕೆನ್ನೆ ಸುಕ್ಕುಗಟ್ಟಿದ
ಗಡ್ಡದಾರಿಯ
ಜೀವವೊಂದು ತುತ್ತು
ಅನ್ನಕ್ಕಾಗಿ ಹಪಹಪಿಸಿ
ಭಿಕ್ಷೆ ಬೇಡುವಾಗ…

ಬರ್ಚಿಗಳ ಆರ್ಭಟಕ್ಕೆ
ಜೀವಬಿಟ್ಟಿತು..
ಏ ಅಲ್ಲಾ…!!

ತುಂಬು ಗರ್ಭಿಣಿ
ಹಣೆಯ ತುಂಬಾ ಕುಂಕುಮ
ಒಡಲಲ್ಲಿ ಕಂದನ ಕನಸು
ಆಸ್ಪತ್ರೆಯ ಕಡೆಗೆ
ನಿಟ್ಟುಸಿರು ಬಿಡುತ್ತಾ
ಹೆಜ್ಜೆ ಹಾಕುವಾಗ…

ಮಚ್ಚು ಲಾಂಗುಗಳ ಮೇಲಾಟಕ್ಕೆ
ಜೀವಿಗಳೆರಡರ ಮಾರಣಹೋಮ

ಹೇ…. ರಾಮ್…!!

ಅವರ ಮಸಿದಿಗೆ
ಇವರು ಬೆಂಕಿಯಿಟ್ಟರು.
ಇವರ ದೇವಸ್ಥಾನಕ್ಕೆ
ಅವರು ಬಾಂಬಿಟ್ಟರು.

ಜೀವಿಗಳು ಕಣ್ಣಮ್ಮಚ್ಚುವಾಗ…

ಅಲ್ಲಾ ಇಲ್ಲವಾಗಿದ್ದ
ರಾಮ ಮರೆಯಾಗಿದ್ದ

ಕುಣಿಯುತ್ತಿದ್ದವು
ಕಲ್ಲು ಬಾಂಬು ಬೆಂಕಿ ಕೋವಿ
ತಮ್ಮ ದ್ವೇಷದ ನಾಲಿಗೆ ಚಾಚಿ.


Leave a Reply

Back To Top