ಅರುಣಾ ರಾವ್-ದೀಪಾವಳಿ

ಕಾವ್ಯಸಂಗಾತಿ

ದೀಪಾವಳಿ

ಅರುಣಾ ರಾವ್

ಮನೆ ಮನೆಗಳಲ್ಲೂ ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಸಾಲು ಹಣತೆಗಳು ಜೋರು
ಬೆಳಗಬೇಕೆಂದಿರುವೆ ಮನೆಯಂಗಳದಿ ನಾ
ಈ ದಿನವಾದರೂ ಮನ ತಣಿಯೆ ಹೊಡೆದೋಡಿಸಬೇಕಿದೆ ತಿಮಿರ ಮನದಾಳದಿಂದ

ಲಕ್ಷ್ಮಿ ಬರುವಳಂತೆ ಇಂದು ಎಲ್ಲರ ಮನೆಗೂ
ಎನ್ನ ಗುಡಿಸಲೂ ಅವಳ ಕಣ್ಣಿಗೆ ಬೀಳಬಹುದೇ?
ಗೇಣುದ್ದದ ಹೊಟ್ಟೆಯ ಬಡಬಾನಲ
ತಳಮಳವ ತೊರೆದು ನಳನಳಿಸಬಹುದೇ?

ಗುಡಿಸಲಿನ ಮೋಟು ಗೋಡೆಯ ಮೇಲೆ
ಕಮಟು ಕಟ್ಟಿದ ನಾನು ಕುಳಿತಿರುವೆ ತಣ್ಣಗೆ
ಎಣ್ಣೆ ಬತ್ತಿಗಳಿಲ್ಲ ಕೊನೆಗೆ ಬೆಂಕಿ ಪೊಟ್ಟಣವೂ
ಒಡಲಗ್ನಿ ಸೊಡರ ದೀಪವಾಗುರಿದು
ಐಶ್ವರ್ಯದ ಮಳೆ ಸುರಿಯಬಾರದೆ
ಗುಡಿಸಲು ಭವ್ಯ ಮಹಲಾಗದೆ

ಕಾದಿದ್ದೇನೆ ಕಾತರದಿ ಕತ್ತಲ ಕೂಪದೊಳಗೆ
ದೂರದಲ್ಲೆಲ್ಲೋ ಪಟಾಕಿ ಸದ್ದು
ಮತಾಪಿನ ಚುರುಚುರು ಹೂಕುಂಡದ ಕಿಡಿಗಳು
ಸಾಲು ದೀಪಗಳ ಅಟ್ಟಹಾಸ
ಕನವರಿಸುತ್ತಿರುವೆ ಗುಡಿಸಲೊಳಗಿನ
ತಮಂಧಕೆ ಹೆದರುತಲೇ ಜೀವಿಸಿರುವೆ
ಅದರೊಟ್ಟಿಗೆ ಶತಶತಮಾನದಿಂದೆ


Leave a Reply

Back To Top