ಪುಸ್ತಕ

‘ಗಂಗವ್ವ ಗಂಗಾಮಾಯಿ

ಶಂಕರ ಮೊಕಾಶಿ ಪುಣೇಕರ

ಕೆ.ಶಿವು ಲಕ್ಕಣ್ಣವರ

ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..!

ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ…

ಆಯ್ಕೆ, ಆದ್ಯತೆ, ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಂತ ಸ್ತ್ರೀಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಕಲೆಯ ಶಕ್ತಿಯನ್ನೋ, ಹೆಣ್ಣಿನ ವ್ಯಕ್ತಿತ್ವದ ನಿಜ ನೆಲೆಯನ್ನೋ? ಅಪವಾದವೆನ್ನುವಂತೆ, ಅಪರೂಪವೆನ್ನುವಂತೆ, ಮುಖ್ಯವೆನ್ನುವಂತೆ ಕಾಣುವ ಸ್ತ್ರೀ ಪಾತ್ರಗಳಾಚೆಗೆ ಅಜ್ಞಾತವಾಸದಲ್ಲಿರುವ ಪಾತ್ರಗಳೂ ಇವೆಯೆ? ಈ ಸ್ತ್ರೀ ಪಾತ್ರಗಳ ಮೂಲಕ ಭಿನ್ನ ಲೋಕದೃಷ್ಟಿಯೊಂದನ್ನು ಕಟ್ಟಲು ಸಾಧ್ಯವಿದೆಯೆ? ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಈ ಪಾತ್ರಗಳ ಪಾತ್ರವೇನು..? ಇಂಥ ಹಲವು ಪ್ರಶ್ನೆಗಳ ಮುಖಾಮುಖಿಯೇ ಗಂಗವ್ವ ಗಂಗಾಮಾಯಿ…

ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದಾಗಿರುವಂತೆಯೇ ಗಂಗವ್ವ ಕನ್ನಡ ಜಗತ್ತು ಸೃಷ್ಟಿಸಿರುವ ಸಾರ್ವಕಾಲಿಕ ಪಾತ್ರಗಳಲ್ಲೊಂದು. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಲೇ ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ಈ ಕಾದಂಬರಿ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದನ್ನು ಈ ಕಾದಂಬರಿ ಎಷ್ಟು ಶಕ್ತವಾಗಿ ಮಾಡುತ್ತದೆ ಎಂದರೆ, ಹೆಣ್ಣಿನ ಶಕ್ತಿ ವಿಶೇಷಗಳ ಬಗ್ಗೆ ನಮ್ಮಲ್ಲಿ ಭಾವುಕವೂ, ರಮ್ಯವೂ ಆದ ಕೃತಜ್ಞತೆಯ ಭಾವವೊಂದು ಅನಾಯಾಸವಾಗಿ ಮೂಡುವಷ್ಟು..!

ಗಂಡನನ್ನು, ಭಾವನಾತ್ಮಕ ಹಾಗೂ ಆರ್ಥಿಕ ಸುರಕ್ಷತೆಯನ್ನು ಒಟ್ಟಿನಲ್ಲಿ ಎಲ್ಲ ಬಗೆಯ ಆಧಾರಗಳನ್ನು ಕಳೆದುಕೊಂಡು ಮಗನನ್ನು ಬೆಳೆಸುವ, ಅವನಿಗೊಂದು ಬದುಕನ್ನು ಕಟ್ಟಿಕೊಡುವುದೇ ತನ್ನ ಬದುಕಿನ ಏಕೈಕ ಗುರಿಯೆಂದು ತಿಳಿಯುವ, ಮಾತ್ರವಲ್ಲ, ಅದನ್ನು ಅಕ್ಷರಶಃ ಬದುಕಿನ ಪ್ರತಿಘಳಿಗೆಯೂ ಪಾಲಿಸುತ್ತಾಳೆ ಗಂಗವ್ವ…

ಜಗತ್ತಿನಾದ್ಯಂತ ಇಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರಿಗೆಲ್ಲ ತ್ಯಾಗಮಯಿಗಳೆಂಬ, ಬದುಕನ್ನು ಗಂಧದ ಹಾಗೆ ತೇಯುವ ಸಾರ್ಥಕ ಜೀವಿಗಳೆಂಬ ಪ್ರಶಸ್ತಿಯೂ ಯಾವುದೇ ವಶೀಲಿಬಾಜಿಯಿಲ್ಲದೇ ಅಪಾರ ಕೃತಜ್ಞತೆಯಲ್ಲಿ ಸಲ್ಲುತ್ತಾ ಬಂದಿದೆ.
ಈ ದೃಷ್ಟಿಕೋನವು ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಕರಾರಾಗಿಯೂ ಸ್ಥಾಪಿತವಾಗಿಬಿಟ್ಟಿದೆ. ಇದು ಹೆಣ್ಣಿನ ಶಕ್ತಿ ವಿಶೇಷ ಎನ್ನುವುದೇನೋ ಸರಿ, ಆದರೆ ತಾಯ್ತನವೆನ್ನುವುದು ಪ್ರತಿಘಳಿಗೆಯೂ ಅಪೇಕ್ಷಿಸುವ ಮನೋಚೈತನ್ಯವನ್ನು, ಅದನ್ನು ನಿರಂತರವಾಗಿ ಉಳಿಸಿಕೊಳ್ಳಲು ಏನೆಲ್ಲವನ್ನೂ ಹೆಣ್ಣು ಪಣಕ್ಕೆ ಒಡ್ಡಬೇಕಾಗುತ್ತದೆ ಎನ್ನುವುದನ್ನು ಗಂಗವ್ವನ ಪಾತ್ರ ಸಾಕ್ಷಾತ್ಕರಿಸಿ ಕೊಡುತ್ತದೆ. ಆದ್ದರಿಂದಲೇ ಇದು ‘Making of the Mother’ನ ವಾಸ್ತವವಾದಿ ಚಿತ್ರಣದ ಹಾಗೆ ಕಾಣಿಸುತ್ತದೆ…

ಗಂಗವ್ವನ ಪಾತ್ರ ಗಂಗವ್ವನಿಂದ ಗಂಗಾಮಾಯಿಯಾಗುವ ಪ್ರಕ್ರಿಯೆಯ ಸಜೀವ ಚಿತ್ರಣ ಈ ಕಾದಂಬರಿಯಲ್ಲಿದೆ.
ಗಂಗವ್ವನ ಪಾತ್ರದ ಪ್ರವೇಶವೇ ಕೃತಿಕಾರರ ದೃಷ್ಟಿಕೋನದ ಥಾಟನ್ನು ನಾಟಕೀಯವಾಗಿ ಓದುಗರಿಗೆ ಪರಿಚಯಿಸುತ್ತದೆ. ಭಾರತೀಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗಂಗಾಜಲವನ್ನು ತನ್ನ ಮಗನನ್ನು ಪೊರೆಯಬೇಕಾದ ಜವಾಬ್ದಾರಿಯ ಸಲುವಾಗಿ ರೈಲಿನಿಂದ ಹೊರಗೆ ಚೆಲ್ಲುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಈ ಜವಾಬ್ದಾರಿಯ ಅರಿವು ಅವಳಿಗೆ ಆ ಘಳಿಗೆಯಲ್ಲಿ ಆಗುತ್ತದೆ ಎಂದಲ್ಲ. ಆದರೆ ಆ ಜವಾಬ್ದಾರಿ ಎಷ್ಟು ಮುಖ್ಯವಾದುದು ಮತ್ತು ಅನಂತವಾದುದು ಎಂದರೆ ಗಂಗಾಜಲ ತನ್ನ ಮನೆಯಲ್ಲಿ ಕಣ್ಣೆದುರಿಗೆ ಇರುವುದು ಅದಕ್ಕೊಡ್ಡುವ ಸವಾಲಿನ ಹಾಗೆ, ಸಾವಿನ ಅಸ್ತಿತ್ವವನ್ನು, ಆಗಮನದ ಅನಿವಾರ್ಯತೆಯನ್ನು ಆ ಗಂಗಾಜಲ ಪ್ರತಿಕ್ಷಣ ನೆನಪಿಸುವ ಮೂಲಕ ತನಗೆ ಅಡ್ಡಿಯಾಗಬಹುದೆಂದು ಆ ಗಂಗಾಜಲವನ್ನು ಹೊರಗೆ ಚೆಲ್ಲುತ್ತಾಳೆ…

ಇದು ಆ ಗಂಗಾಜಲವನ್ನು ಕುರಿತ ಅವಳ ಅಪನಂಬಿಕೆಯ ಸಂಕೇತವೇನಲ್ಲ, ಸ್ವಭಾವತಃ ದೈವಶ್ರದ್ಧೆಯವಳಾದ ಗಂಗವ್ವನಿಗೆ ಧಾರ್ಮಿಕ ನಂಬಿಕೆಗಿಂತಲೂ ಮಗನನ್ನು ನೆಲೆನಿಲ್ಲಿಸುವುದು ತನ್ನ ಬದುಕಿನ ಪರಮ ಗುರಿ ಎನ್ನುವುದರಲ್ಲಿರುವ ನಂಬಿಕೆ ಮೇಲುಗೈ ಪಡೆಯುತ್ತದೆ ಎನ್ನುವ ಅಂಶ ತಾಯ್ತನದ ಸಹಜ ಗುಣವನ್ನು ಮಾತ್ರವಲ್ಲ; ಅದನ್ನು ಕಾಪಾಡಿಕೊಂಡು ಬರುವುದು ಯಾವ ಹೆಣ್ಣಿಗೂ ಒಂದು ಸವಾಲೂ ಹೌದು, ಅದೊಂದು ಸಾವಯವ ಪ್ರಕ್ರಿಯೆಯೂ ಹೌದು ಎನ್ನುವ ಬಹು ಮುಖ್ಯವಾದ ಅಂಶವನ್ನು ಹೇಳುತ್ತದೆ. ಸಾಮಾನ್ಯವಾಗಿ ಈ ಅಂಶವನ್ನು ಅವಳ ಹುಟ್ಟುಗುಣವೆನ್ನುವಂತೆ ನಿಭಾಯಿಸಲಾಗುತ್ತದೆ. ಆದರೆ ಪುಣೇಕರರ ಈ ಕೃತಿ ಅದೊಂದು ಸಿದ್ಧ ಸ್ಥಿತಿಯಲ್ಲ ಎನ್ನುವುದಕ್ಕೆ ಒತ್ತು ಕೊಡುವುದರ ಮೂಲಕ ಅದೊಂದು ಕಷ್ಟದ ದಾರಿ ಎನ್ನುವುದನ್ನು ಹೇಳುತ್ತದೆ…

ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವುದಾದರೆ, ತಾಯ್ತನವೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವ ಕ್ರಿಯೆಯೂ ಹೌದು ಎನಿಸಿಬಿಡುತ್ತದೆ ಗಂಗವ್ವನನ್ನು ಅರ್ಥಮಾಡಿಕೊಳ್ಳುವಾಗ. ಮಗ–ಸೊಸೆ ತನ್ನನ್ನು ಅನಾದರದಿಂದ ಕಂಡ ಸಂದರ್ಭವೊಂದರಲ್ಲಿ ಊಟವನ್ನೂ ಮಾಡದೆ ಅವಳ ಹಿತಚಿಂತಕರಾದ ದೇಸಾಯರ ಮನೆಗೆ ಗಂಗವ್ವ ಹೋಗುತ್ತಾಳೆ. ಅಸಹನೀಯ ಅವಮಾನವಾಗಿದ್ದಾಗಲೂ ಗಂಗವ್ವ ಮನೆಗೆ ವಾಪಸಾಗುವುದಾಗಿ ಹೇಳುತ್ತಾಳೆ. ತನ್ನ ಅವಮಾನಕ್ಕಿಂತ ಮಗನ ಅಭ್ಯುದಯವೇ ದೊಡ್ಡದಾಗಿ ಅವಳಿಗೆ ಕಾಣಿಸುತ್ತದೆ. ಆದರೆ ಇದಕ್ಕಾಗಿ ಅವಳು ರಾಜಿ ಮಾಡಿಕೊಳ್ಳಬೇಕಾಗುವುದು ತನ್ನ ಆತ್ಮಗೌರವದ ಜೊತೆಗೆ. ಬಹುಕಷ್ಟದ ಈ ಸಂದರ್ಭವನ್ನು ಅವಳು ಹಾಯುವ ಘಳಿಗೆಯ ತಲ್ಲಣಗಳನ್ನು ಪುಣೇಕರರು ಅಬ್ಬರವಿಲ್ಲದ ತೀವ್ರತೆಯಲ್ಲಿ ಹಿಡಿಯುತ್ತಾರೆ. ತಾನು ಎನ್ನುವ ಅಹಂಕಾರವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಅವಳು ಸಾಂಪ್ರದಾಯಿಕ ಹೆಣ್ಣಿನ ಮಾಮೂಲಿ ಧಾಟಿಯಲ್ಲಿಯೇ ನಿಭಾಯಿಸಲು ಯತ್ನಿಸುವ ಹಾಗೆ ಕಾಣಿಸುತ್ತದೆ. ‘ಹೆಂಗಸಿನ ಜನ್ಮ ಇರೋದೇ ಅನುಭೋಗಿಸೋಕೆ… ಅನುಭೋಗಿಸ್ತೀನಿ ಬಿಡು ಗೋಪಣ್ಣಾ…’ ಎನ್ನುತ್ತಾಳೆ…

ಆದರೆ ಇಡೀ ಕಾದಂಬರಿಯ ಭಿತ್ತಿಯಲ್ಲಿ ಅವಳ ಪಾತ್ರದ ಚಲನೆಗಳು ಅಸಹಾಯಕ ಹೆಣ್ಣಿನ ಗೋಳಾಟವಾಗಿ ಕಾಣಿಸುವುದಿಲ್ಲ. ಬದುಕಿನ ಯಾವುದೇ ಸನ್ನಿವೇಶಗಳನ್ನೂ ನಿರ್ಭೀತಿಯಿಂದ, ಕುಂದಿಲ್ಲದ ಆತ್ಮವಿಶ್ವಾಸದಿಂದ ಎದುರಾಗುತ್ತಾಳೆ. ಈ ಸನ್ನಿವೇಶವೂ ಕೂಡ ಅವಳ ಜೀವನದೃಷ್ಟಿಯ ನಿದರ್ಶನವೇ ಆಗಿದೆ. ಮಗನ ಹಾಗೂ ಸೊಸೆಯ ಎದುರಿಗಿನ ಸೋಲಾಗಬಹುದು ಎನ್ನುವುದಕ್ಕಿಂತ, ತನ್ನ ಆತ್ಮಗೌರವಕ್ಕೆ ಭಂಗವಾಗುತ್ತದೆ ಎನ್ನುವ ಸಾಧ್ಯತೆಗಿಂತ, ಮಗನ ಬದುಕು ಹಳಿ ತಪ್ಪಬಾರದು ಎನ್ನುವ ಪ್ರಜ್ಞಾಪೂರ್ವಕವಾದ, ಕಷ್ಟದ ಆಯ್ಕೆ ಇದು. ಆದರೆ ಅದು ಕಾಣಿಸಿಕೊಳ್ಳುವುದು ಮಾತ್ರ ಹೆಣ್ಣಿನ ಜನ್ಮ ಎನ್ನುವ ಸಾಂಪ್ರದಾಯಿಕ ಭಾಷೆಯಲ್ಲಿ. ಆದ್ದರಿಂದಲೇ ಗಂಗವ್ವನ ಪಾತ್ರ ಹೆಣ್ಣಿನ ವ್ಯಕ್ತಿತ್ವದ ಹುಡುಕಾಟ ಮತ್ತು ರಚನೆಯ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ…

ಮುಖ್ಯವಾಗಿ ಹೆಣ್ಣಿನ ಸಾಮಾಜಿಕ, ಕೌಟುಂಬಿಕ ನೆಲೆಗಳಿಗೆ ಕೊಡುವ ಒತ್ತು ಇಲ್ಲೂ ಮುಂದುವರಿದಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಗಂಗವ್ವನ ಪಾತ್ರದ ಶಕ್ತಿ ಮತ್ತು ಅನನ್ಯತೆ ಇರುವುದೇ ಹೆಣ್ಣಿನ ಬದುಕಿನ ಸಾಮಾಜಿಕ, ಕೌಟುಂಬಿಕ ನೆಲೆಗಳನ್ನು ಸ್ಪಷ್ಟ ರಾಜಕೀಯ ಹಾಗೂ ನೈತಿಕ ಪ್ರಜ್ಞೆಯಲ್ಲಿ ಪ್ರತಿಪಾದಿಸುವುದರಲ್ಲಿ. ಗಂಗವ್ವ ಮುನ್ನೆಲೆಗೆ ತರುವ ಈ ಅಂಶಗಳು ಅವಳ ವ್ಯಕ್ತಿತ್ವ ಮತ್ತು ಹೋರಾಟಕ್ಕೆ ಅಪಾರ ಬಲ ಕೊಡುತ್ತವೆ. ಇಡೀ ಲೋಕವನ್ನು ಎದುರು ಹಾಕಿಕೊಳ್ಳಬಲ್ಲ ಛಾತಿಯನ್ನು ಅವಳು ಪಡೆಯುವುದು ಈ ರಾಜಕೀಯ ಪ್ರಜ್ಞೆಯಲ್ಲಿ. ಈ ಕಾರಣಕ್ಕಾಗಿಯೇ ಅವಳಿಗೆ ತನ್ನ ನಡೆಯಲ್ಲಿ ಯಾವ ದ್ವಂದ್ವಗಳೂ ಇಲ್ಲ. ತನ್ನ ಖಾಸಾ ತಮ್ಮ ರಾಘಪ್ಪನ ಮಗಳನ್ನೇ ತನ್ನ ಸೊಸೆಯಾಗಿ ಮಾಡಿಕೊಳ್ಳುವ ಸಂದರ್ಭದಲ್ಲೂ ಒಪ್ಪಂದದಂತೆ ಒಂದು ಸಾವಿರ ರೂಪಾಯಿ ಕೊಡದಿದ್ದರೆ ‘ಅಕ್ಕಿಕಾಳು’ ಇಲ್ಲ ಎಂದು ತುಂಬಿದ ಮದುವೆ ಮನೆಯಲ್ಲಿ ಘಂಟಾಘೋಷವಾಗಿ ಹೇಳಬಲ್ಲಳು. ಇಷ್ಟಾಗಿ ಆ ಹಣ ಯಾಕಾಗಿ? ತಾನು ಉಡುವ ಹರಕು ಸೀರೆಯ ಬದಲು ರೇಷ್ಮೆ ಸೀರೆ ಉಡಲಂತೂ ಅಲ್ಲ. ಮಗನ ಭವಿಷ್ಯದ ಆಪದ್ಧನವಾಗಿ ಅದು ಅವಳಿಗೆ ಬೇಕು…

ಯಾರನ್ನು ಬೇಕಾದರೂ ತನ್ನ ಖೆಡ್ಡಾದಲ್ಲಿ ಬೀಳಿಸಿಕೊಳ್ಳಬಲ್ಲ, ಗೆದ್ದು ಬೀಗಬಲ್ಲ ಪ್ರಚಂಡ ರಾಘಪ್ಪನನ್ನು ಗಂಗವ್ವ ಸೋಲಿಸುವುದು ಇದೇ ಪ್ರಖರ ರಾಜಕೀಯ ಪ್ರಜ್ಞೆಯಲ್ಲಿ. ತಾಯಿಯಾಗಲ್ಲದೆ ತನಗೆ ಇನ್ನೊಂದು ಅಸ್ತಿತ್ವವೇ ಇಲ್ಲವೇನೋ ಎನ್ನುವ ಮಟ್ಟದಲ್ಲಿ ಗಂಗವ್ವ ವ್ಯವಹರಿಸುತ್ತಾಳೆ.
ಕೆಲವು ಸನ್ನಿವೇಶಗಳು ಗಂಗವ್ವನ ವ್ಯಕ್ತಿತ್ವದ ಅಪ್ರತಿಮ ಸಾಕ್ಷಿಗಳಾಗಿವೆ. ಗಂಗವ್ವನ ಗಂಡ ಸ್ವಾಮಿರಾಯನ ಆಸ್ತಿಯೆಲ್ಲ ಹರಾಜಿಗೆ ಬಂದ ಹೊತ್ತಿನಲ್ಲಿ ಇವಳು ಮಗ ಕಿಟ್ಟಿಯ ಕೈಗೆ ಕೆಲವು ಒಡವೆಗಳನ್ನು ಕೊಟ್ಟು ಹಿತ್ತಲಿನಲ್ಲಿ ಒಗೆಸುತ್ತಾಳೆ. ನಂತರ ಅವುಗಳನ್ನು ಮಾರಿ, ಬಂದ ಹಣವನ್ನು– ರಕ್ಷಕ ದೈವದಂತೆ ಅವಳನ್ನು, ಮಗ ಕಿಟ್ಟಿಯನ್ನು ಸದಾ ಪೊರೆದ ದೇಸಾಯರ ಬಳಿ ಇಡುತ್ತಾಳೆ. ಎಂಥ ದುರ್ಭರ ಸನ್ನಿವೇಶದಲ್ಲೂ ಕಂಗೆಡದ ಈ ಗುಣವೊಂದು ಅವಳ ವ್ಯಕ್ತಿತ್ವದ ಅಸಾಧಾರಣ ಲಕ್ಷಣ. ಇದೇ ಹಣದ ಮೇಲೆ ತಮ್ಮ ರಾಘಪ್ಪ ಕಣ್ಣಿಟ್ಟು ಏನೆಲ್ಲಾ ಹುನ್ನಾರಗಳನ್ನು ಮಾಡಿದರೂ ಆ ಹಣ ಅವನ ಕೈಗಾಗಲಿ, ಮಗ ಕಿಟ್ಟಿಯ ದಂದುರಾಳಿತನಕ್ಕಾಗಲಿ ದಕ್ಕದಂತೆ ನೋಡಿಕೊಳ್ಳುತ್ತಾಳೆ…

ನಿದ್ದೆ ಎಚ್ಚರಗಳಲ್ಲಿ ತನ್ನ ಜವಾಬ್ದಾರಿಯನ್ನೇ ಉಸಿರಾಡುವ ಗಂಗವ್ವ ಈ ಕಾರಣಕ್ಕಾಗಿಯೇ ಸದಾ ಚಡಪಡಿಸುತ್ತಿರುತ್ತಾಳೆ. ಆದ್ದರಿಂದಲೇ ಇವಳ ವ್ಯಕ್ತಿತ್ವದಲ್ಲಿ ಪ್ರಸನ್ನತೆ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಸ್ಯವೂ ಇವಳ ಬಳಿ ಸುಳಿಯುವುದಿಲ್ಲ. ಗಂಗವ್ವನ ವ್ಯಕ್ತಿತ್ವದ ಅಪೂರ್ಣತೆ ನಮ್ಮ ಅರಿವಿಗೆ ಬರುವುದು ಇಂಥ ಸಂಗತಿಗಳಿಂದ. ಮಗ ಕಿಟ್ಟಿಯನ್ನು ಕುರಿತ ಗಂಗವ್ವನ ಕಾಳಜಿ, ಸದೋದಿತವಾಗಿ ಅವಳು ನಡೆಸುವ ಪ್ರಯತ್ನಗಳನ್ನು, ಅವಳ ಭಂಗವಿರದ ಏಕೋನಿಷ್ಠೆಯನ್ನು ವೈಭವೀಕರಿಸುವ, ನಾಟಕೀಯಗೊಳಿಸುವ, ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಎಲ್ಲ ಅವಕಾಶಗಳೂ ಈ ಕೃತಿಗಿದ್ದವು. ಆದರೆ ಈ ಕಾದಂಬರಿ ಅದ್ಯಾವುದನ್ನೂ ಮಾಡದೆ ಗಂಗವ್ವನನ್ನು ಅವಳ ನಿಜದಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಅವಳ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲವೆಂದೇ ಅವಳ ಶಕ್ತಿಯೂ ನಮ್ಮ ಅರಿವಿಗೆ ದಕ್ಕುವುದು ಸಾಧ್ಯವಾಗುತ್ತದೆ. ತಮ್ಮ ರಾಘಪ್ಪ ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಮನೆಗೆ ಬಂದಾಗ ಮಗ ಚಹಾ ಮಾಡು ಎಂದರೆ, ‘ರಾಘಪ್ಪ ಚಹಾದ ಮನುಷ್ಯ ಅಲ್ಲೇಳಪ್ಪ’ ಎನ್ನುವ ಕ್ರೌರ್ಯ, ಸಣ್ಣತನ, ದಿಗಿಲು ಹುಟ್ಟಿಸುತ್ತದೆ (ಚಹಾದ ಪುಡಿ ತೀರಿತ್ತು ಎಂದು ನಂತರ ಮಗನಿಗೆ ಅವಳು ಕೊಡುವ ಸಮರ್ಥನೆ ಅವಳ ನಡವಳಿಕೆಯ ಕ್ರೌರ್ಯವನ್ನೇನು ಕಡಿಮೆ ಮಾಡುವುದಿಲ್ಲ)…

ಗಂಗವ್ವನ ಪಾತ್ರದ ಮಹತ್ವ ಇರುವುದು, ಸ್ಥಾಪಿತ ನಿಲುವೊಂದನ್ನು ಅಗೋಚರ ನೆಲೆಯಲ್ಲಿ ಮುರಿಯುವ ಪ್ರಯತ್ನದ ಕಾರಣಕ್ಕಾಗಿ. ಸಾಮಾನ್ಯವಾಗಿ ತಾಯ್ತನವು ಮಕ್ಕಳನ್ನು ತಮ್ಮ ಅಧಿಕಾರ ಮತ್ತು ಪ್ರೀತಿಯ ಅಧೀನತೆಯಲ್ಲಿ ನಿಯಂತ್ರಿಸಲು ಇರುವ ಒಂದು ಆವರಣವಾಗಿ ಬಳಕೆಯಾಗುತ್ತದೆ. ಅಲ್ಲಿ ಅಧಿಕಾರ ಕೇಂದ್ರದ ಪ್ರಶ್ನೆಯೂ ಸಹಜವಾಗಿಯೇ ಇರುತ್ತದೆ. ಎಂದರೆ ತಾಯಿ ಕೇಂದ್ರವಾಗಿ ಮಕ್ಕಳು ಅಧೀನವಾಗುವ ಕ್ರಮ. ಆದರೆ ಗಂಗವ್ವನ ಪಾತ್ರ ಇದಕ್ಕಿಂತ ಭಿನ್ನ. ಅದು ಮಗ ಕೇಂದ್ರ ಎನ್ನುವುದನ್ನು, ತನ್ನ ವೈಯಕ್ತಿಕ ಬದುಕಿನ ಸುಖದುಃಖಗಳು ಎರಡನೆಯವು ಎನ್ನುವುದನ್ನು ಗಂಗವ್ವ ಮತ್ತೆ ಮತ್ತೆ ಸಾಬೀತು ಮಾಡುತ್ತಾ ಹೋಗುತ್ತಾಳೆ…

ಆದ್ದರಿಂದಲೇ ಆರಂಭದಲ್ಲಿ ಇದು ಅಹಂಕಾರವನ್ನು ಕಳೆದುಕೊಳ್ಳುವ ದಾರಿಯಾಗಿ ಕಾಣುತ್ತದೆ ಎಂದಿದ್ದು. ತಮ್ಮ ಈಡೇರದ ಆಸೆಗಳ ಪೂರೈಕೆಯ ವಾಹಕಗಳಾಗಿ ಮಕ್ಕಳನ್ನು ಪರಿಭಾವಿಸುವ ಮಾಮೂಲಿ ದಾರಿಯಲ್ಲ ಇದು. ಅಥವಾ ಮಗ ತನ್ನ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಬೇಕು ಎನ್ನುವ ನಿಲುವಿನಳಾಗಿಯೂ ಗಂಗವ್ವ ಕಾಣಿಸುವುದಿಲ್ಲ. ಜೀವ ಕೊಟ್ಟ ಮಗನಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಮೂಲಧಾತು ಇವಳನ್ನು ಬೇರೆ ಪಾತಳಿಯಲ್ಲಿಡುತ್ತದೆ. ಅಧಿಕಾರ, ವಾತ್ಸಲ್ಯ, ಕಾಳಜಿ ಮತ್ತು ಜವಾಬ್ದಾರಿ– ಇದು ಸಾಮಾನ್ಯವಾಗಿ ತಾಯ್ತನದಲ್ಲಿ ನಾವು ನೋಡುವ ಶ್ರೇಣೀಕೃತ ನೆಲೆಗಳು. ಗಂಗವ್ವನಲ್ಲಿ ಇದು ತಿರುವುಮುರುವಾಗಿದೆ. ಜವಾಬ್ದಾರಿ ಮೊದಲಾಗಿ ಅಧಿಕಾರ ಕೊನೆಯದಾಗಿದೆ. ಗಂಗವ್ವನನ್ನು ಗಂಗಾಮಾಯಿಯಾಗಿಸುವ ಅಂಶ ಇದೇ. ಇದನ್ನೇ ಮುಂದುವರೆಸಿ ಹೇಳುವುದಾದರೆ ತಾಯ್ತನವನ್ನು ಗ್ರಹಿಸಬೇಕಾದ ವಾಸ್ತವ ದೃಷ್ಟಿಕೋನವನ್ನು ಪುಣೇಕರರ ಈ ಕಾದಂಬರಿ ಶಕ್ತವಾಗಿ ಸ್ಥಾಪಿಸುತ್ತದೆ. ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ… ಎನಿಸಿದಾಗಲೂ ಅವಳ ಬಗ್ಗೆ ಪ್ರೀತಿ, ಕೃತಜ್ಞತೆ ಮಾತ್ರವಲ್ಲ ಗೌರವವೂ ಹುಟ್ಟುವುದು ಈ ಕಾರಣಕ್ಕಾಗಿ. ಕನ್ನಡದಲ್ಲಿ ಹಲವು ಅಮರ ತಾಯಂದಿರಿದ್ದಾರೆ. ಅವರಲ್ಲಿ ಗಂಗವ್ವನಿಗೆ ಹತ್ತಿರದ ಸಂಬಂಧಿಗಳೆಂದರೆ, ಲಂಕೇಶರ ‘ಅವ್ವ’ ಮತ್ತು ದೇವನೂರರ ‘ಸಾಕವ್ವ’..!

ಇಂತಹ ಕೃತಿಕಾರರ ಪರಿಚಯ ಹೀಗಿದೆ–

ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು…

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪುಣೇಕರ್ ಅವರು ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಅಪರೂಪದ ಕಾದಂಬರಿಗಳಲ್ಲೊಂದೆಂದು ಗುರುತಿಸಲ್ಪಟ್ಟಿರುವ ಗಂಗವ್ವ ಗಂಗಾಮಾಯಿ(1958), ನ್ಯಾಷನಲ್ ಬುಕ್ ಟ್ರಸ್ಟ್ ಮೂಲಕ ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಚಲನಚಿತ್ರವಾಗಿ ಅತ್ಯುತ್ತಮ ಕತೆ, ನಿರ್ದೇಶಕ, ಉತ್ತಮ ನಟ, ಕಲಾ ನಿರ್ದೇಶಕ ಮತ್ತು ನಿರ್ಮಾಣಕ್ಕಾಗಿ ಪ್ರಶಸ್ತಿಗಳನ್ನು ಗಳಿಸಿದೆ…

ಋಗ್ವೇದದ ಕೆಲವೇ ಮಂತ್ರ ಮತ್ತು ಹರಪ್ಪ ಮೊಹಂಜೋದಾರೋನ ಮುದ್ರಿಕೆಗಳಲ್ಲಿ ದೊರೆಯುವ ಆಧಾರಗಳ ಮೇಲೆ ರಚಿಸಿದ ಅವದೇಶ್ವರಿ ಕಾದಂಬರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಟನಾರಾಯಣಿ(1981) ಸುಧಾ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಅಪರೂಪದ ಕಾದಂಬರಿ. ಡೆರಿಕ್ ಡಿಸೋಜ ಮತ್ತು ಇವರ ಕಥೆಗಳು(1991) ಕಥಾ ಸಂಕಲನ, ಗಾನಕೇಳಿ(ಸಂಯುಕ್ತ ಸಂಕಲನ-1948), ಮಾಯಿಯ ಮೂರು ಮುಖಗಳು ಕವನ ಸಂಕಲನ, ಬೇಂದ್ರೆ ಕಾವ್ಯ ಮೀಮಾಂಸೆ, ಯುರೋಪಿಯನ್ ವಿಮರ್ಶೆಯ ಇತಿಹಾಸ, ಸಾಹಿತ್ಯ ಮತ್ತು ಅಭಿರುಚಿ. ಅಪೂರ್ಣವರ್ತಮಾನಕಾಲ, ನೀರಬೆಳಗು ಮುಖ್ಯ ವಿಮರ್ಶಾ ಸಂಕಲನಗಳು…

ದಿ ಸೈಕಲ್ ಆಫ್ ಸೀಸನ್ಸ್(ಕಾಳಿದಾಸನ ಋತುಸಂಹಾರದ ಅನುವಾದ), ದಿ ಕ್ಯಾಪ್ಟೀವ್, ದಿ ಪ್ರಿಟೆಂಡರ್, ಆನ್ ಅಪಿಸ್ಟಲ್ ಟು ಡೆವಿಡ್ ಮೆಕ್ಲೆಟನ್, ದಿ ಟೆಂಟ್ ಪೋಲ್, ಪ್ಯಾರಾಡೆಮ್ಸ್, ಇಂಗ್ಲಿಷ್ ಕವನ ಸಂಕಲನಗಳು, ದಿ ಲೇಟರ್ ಫೇಸ್ ಇನ್ ದ ಡೆವಲಪ್ ಮೆಂಟ್ ಆಫ್ ದಬ್ಯು.ಬಿ.ಯೇಟ್ಸ್(ಸಂಶೋಧನಾ ಪ್ರಬಂಧ), ದಿ ಇಂಟರ್ ಪ್ರಿಟೇಷನ್ ಆಫ್ ದ ಲೇಟರ್ ಪೊಯಮ್ಸ್ ಆಫ್ ಯೇಟ್ಸ್, ರಾಮಾಯಣದರ್ಶನ-ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದ, ಥಿಯರೆಟಿಕಲ್ ಅಂಡ್ ಪ್ರಾಕ್ಟಿಕಲ್ ಸ್ಟಡೀಸ್ ಇನ್ ಇಂಡೋ – ಇಂಗ್ಲಿಷ್ ಲಿಟರೇಚರ್, ಅವದೂತ ಗೀತಾ(ಸಂಪಾದನೆ), ಮೊಹಂಜೋದಾರೋ ಸೀಲ್ಸ್, ನಾನಾಸ್ ಕನ್ ಫೆಷನ್(ನಟನಾರಾಯಣಿ ಅನುವಾದ), ಹರಿಜನ್ ಕಾಂಟ್ರೂಬೂಷನ್ ಟು ಮೀಡಿವಲ್ ಇಂಡಿಯನ್ ಥಾಟ್ ಮುಖ್ಯ ಇಂಗ್ಲಿಷ್ ಪುಸ್ತಕಗಳು…

ಸಂಗೀತದಲ್ಲಿ ಅಪಾರ ಪರಿಶ್ರಮವಿದ್ದ ಮೊಕಾಶಿಯವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸಂಗೀತ ವಿಮರ್ಶಕರಾಗಿದ್ದರು, ಸ್ವತಃ ಮೂರು ರಾಗಗಳನ್ನು ಸಂಯೋಜಿಸಿದ್ದಾರೆ…

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಗಂಧಕೊರಡು ಇವರರ ಅಭಿನಂದನಾ ಕೃತಿ.
ಇಂತಹ ಶಂಕರ ಮೊಕಾಶಿ ಪುಣೇಕರರು 11-08-2004 ರಲ್ಲಿ ನಿಧನರಾದರು..!
‌‌ ******************

Leave a Reply

Back To Top