ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಜಾನಪದದ ವಿಚಾರಗಳ ಸಂಗಮ ಲೇಖನಗಳ ಸಂಕಲನ 

ಸಂಪಾದಕರು ಡಾ. ರಾಜಶೇಖರ ಜಮದಂಡಿ  ಪ್ರಕಾಶಕರು 

ಬಸವ ಪ್ರಕಾಶನ ಚಾಮರಾಜ ನಗರ 
ಮೊದಲ ಮುದ್ರಣ ೨೦೧೧.

ಜಾನಪದವೆಂದರೆ ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರ . ಮಾನವನು ತಾನು ಮಾಡುತ್ತಿದ್ದ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು .
ಪ್ರತಿಯೊಂದು ಸಮಾಜವೂ ತನ್ನ ಪುರಾತನರ ಸಾರವನ್ನು ಹೀರಿ, ತನ್ನ ಸದ್ಯದ ಬದುಕಿಗೆ ಅರ್ಥವನ್ನು, ಸಮಸ್ಯೆಗಳಿಗೆ ಪರಿಹಾರವನ್ನು ಭಕ್ತಿಗೆ ಒಂದು ರೂಪವನ್ನು  ಕಲೆ ಹಾಗೂ ತಂತ್ರಜ್ಞಾನ ಇವೆಲ್ಲವನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ . ಇದು ಸಾಮೂಹಿಕವಾಗಿ ಮುಂದಿನ ಪೀಳಿಗೆಗೆ ಆಧಾರವಾಗುತ್ತದೆ ಅನುಸರಿಸಬಲ್ಲ ಉದಾಹರಣೆಯಾಗುತ್ತದೆ .

ಡಾ ರಾಜಶೇಖರ ಜಮದಂಡಿಯವರು ಹಿರಿಯ ಕಕಿರಿಯ ಲೇಖಕರುಗಳಿಂದ ಬರೆಸಿ, ತರಿಸಿ ಸಂಗ್ರಹಿಸಿರುವ ಇಪ್ಪತ್ತೆಂಟು ಲೇಖನಗಳ ಸಂಕಲನ ಇದು.ಜಾನಪದ ಸಾಹಿತ್ಯ, ಜಾನಪದ ಕಲೆ, ಕ್ರೀಡೆ, ಜಾನಪದ ಸಂಪ್ರದಾಯಗಳು ಇವೆಲ್ಲವುಗಳ ಪರಿಚಯಾತ್ಮಕ ಲೇಖನಗಳೊಂದಿಗೆ ಜಾನಪದ ಸಂಸ್ಕೃತಿಗೆ ಸಂಬಂಧಿಸಿದ ಗಂಭೀರ ಚಿಂತನೆಗಳ ಲೇಖನಗಳು ಇಲ್ಲಿವೆ. .ಜಾನಪದ ಸಂಸ್ಕೃತಿ ತಿಳಿಯುವ ಅಭಿಲಾಷಿಗಳಿಗೆ ಇಲ್ಲಿ ಭರಪೂರ ರಸದೌತಣ.ಈ ಪುಸ್ತಕವನ್ನು ಜಾನಪದ ವಿಶ್ವವಿದ್ಯಾನಿಲಯದ ರೂವಾರಿಗಳಾಗಿರುವ ಶ್ರೀ ಗೊ ರು ಚನ್ನಬಸಪ್ಪನವರಿಗೆ ಅರ್ಪಿಸಿರುವುದು ತುಂಬಾ ಸೂಕ್ತ ಸಮಂಜಸ 
ನಡೆಯಾಗಿದೆ.

ಖ್ಯಾತ ಜನಪದ ಶಾಸ್ತ್ರಜ್ಞ ಎಡ್ವಿನ್ ಸಿಡ್ನಿ ಹಾರ್ಟಲ್ಯಾಂಡ್ ಅವರು ಹೇಳಿದಂತೆ “ಜಾನಪದ ಎನ್ನುವುದು ಸಂಪ್ರದಾಯದ ಪ್ರಜ್ಞೆ ಅಂದರೆ ಪರಂಪರಾಗತ ಜ್ಞಾನವು ನೆನಪಿನ ರೂಪದಲ್ಲಿ ಕ್ರಿಯಾರೂಪದಲ್ಲಿ ಸಾಗಿಬರುವ ಪ್ರಕ್ರಿಯೆ”.ಇಲ್ಲಿ ಯಾವುದೂ ಲಿಖಿತ ರೂಪದಲ್ಲಿ ಕಂಡುಬರುವುದಿಲ್ಲ . 

ಮೊದಲಿಗೆ ಜಾನಪದ ಸಾಹಿತ್ಯದ ಬಗೆಗಿನ ಲೇಖನಗಳನ್ನು ತೆಗೆದುಕೊಂಡರೆ ಡಾ. ಬಸವರಾಜ ಮಲಶೆಟ್ಟಿಯವರು ಜನಪದ ಸಂಗೀತದ ಉಗಮ ಹಾಗೂ ಅದು ಬೆಳೆದು ಬಂದ ದಾರಿಯ ಸ್ಪಷ್ಟ ಹೆಜ್ಜೆಗಳನ್ನು ಗುರುತಿಸುತ್ತಾರೆ .ಜನಪದ ಸಾಹಿತ್ಯದಲ್ಲಿ ಶಿವ ಜನಪದ ಸಾಹಿತ್ಯದಲ್ಲಿ ಸಂಸಾರ ಚಿತ್ರಣ ಜನಪದ ಗೀತೆಗಳಲ್ಲಿ ದಾಂಪತ್ಯ ಹೆಸರೇ ಹೇಳುವಂತೆ ಈ ಲೇಖನಗಳು ಆಯಾ ವಿಷಯಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುತ್ತವೆ ಉದಾಹರಣೆಗಳನ್ನು ಕೊಡುತ್ತವೆ. ವಿಶಿಷ್ಟ ಜನಪದ ಗಾಯಕಿಯರು ಎಂಬ ಲೇಖನದಲ್ಲಿ ಡಾ ಕೆ ಎಸ್ ರತ್ನಮ್ಮ ಅವರು ಸಿರಿಯಜ್ಜಿ, ದರೋಜಿ ಈರಮ್ಮ, ಸುಕ್ರಿ ಬೊಮ್ಮನಗೌಡ, ಕೌಜಲಗಿ ನಿಂಗಮ್ಮ, ತಂಬೂರಿ ರಾಜಮ್ಮ, ಮರಿಸಿದ್ದಮ್ಮ, ಫಕೀರವ್ವ ಗುಡಿಸಾಗರ  ಮುಂತಾದ ಪ್ರಸಿದ್ಧ ಜಾನಪದ ಗಾಯಕಿಯರ ಪರಿಚಯ ಮಾಡಿಸುತ್ತಾರೆ .ಜಾನಪದ ಸಾಹಿತ್ಯದಲ್ಲಿ ಶರಣರು ಎಂಬ ಲೇಖನದಲ್ಲಿ ಬಸವಣ್ಣನವರ ಬಗೆಗಿನ ಈ ತ್ರಿಪದಿ 

ಕಲ್ಯಾಣ ಪಟ್ಟಣಕ್ಹೋಗಿ ಎಲ್ಲ ದೇವರ ಕಂಡೆ
ಬಲ್ಲಿದನ ಕಂಡೆ ಬಸವಣ್ಣನ ॥ಗುರುವೆ॥ 
ಪಾದಕ ಚೆಲ್ಯಾಡಿ ಬಂದೆ ನನ್ನ ಮನವ 

ಜಾನಪದ ಮಾನಸದಲ್ಲಿ ಬಸವಣ್ಣನವರ ಹಾಗೂ ಇತರ ಶರಣರ ಬಗೆಗಿನ ಭಕ್ತಿ ಗೌರವದ ಭಾವನೆಯ ದ್ಯೋತಕವಿದು .

“ಜಾನಪದ ಒಗಟುಗಳಲ್ಲಿ ಹಾಸ್ಯ” ಎಂಬ ಲೇಖನದಲ್ಲಿ ಜೀವನ ದುಃಖ ಭರಿತವೆಂದು ಪರಿಭಾವಿಸಿಕೊಂಡಾಗಲೂ ಮನುಷ್ಯನು ತನ್ನ ಸುಖಾಪೇಕ್ಷೆಗಾಗಿ ಹಾಸ್ಯ ವಿನೋದ ಮನರಂಜನೆಗಳ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾನೆ .ಇದಕ್ಕೆ ಪೂರಕವಾಗಿ ಒಗಟು ನಿಜಕ್ಕೂ ವಿನೋದ ಹಾಸ್ಯ ಹಾಗೂ ಮನರಂಜನೆಯ ಸಾಧನಗಳಾಗಿ ಅಭಿವ್ಯಕ್ತಗೊಂಡಿರುವುದರಲ್ಲಿ ಆಶ್ಚರ್ಯವಿಲ್ಲ “ಎಂದು ಹಲವಾರು ಹಾಸ್ಯದ ಒಗಟುಗಳ ಉದಾಹರಣೆ ನೀಡಿದ್ದಾರೆ .

ಹಾಗೆಯೇ ಜಾನಪದ ಆಟಗಳ ಬಗ್ಗೆ ವಿವರ ಕೊಡುವ ಲೇಖನವಿದೆ. ಜಾನಪದ ಮತ್ತು ಕೃಷಿಗೆ ಇರುವ ನಂಟನ್ನು ಹೇಳುತ್ತಾರೆ. ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ 
ನವರನ್ನು ಪರಿಚಯಿಸುವ ಲೇಖನ ಸಹ ಇಲ್ಲಿ ಕಾಣಬಹುದು . 

ಜಾನಪದ ವಿಶಿಷ್ಟ ಕಲೆಯಾದ ಹಚ್ಚೆ ಈಗ ಇಂದಿನ ಪೀಳಿಗೆಯವರಲ್ಲೂ ರೂಪಾಂತರಗೊಂಡು ಜನಪ್ರಿಯವಾಗಿರುವುದು ಸರ್ವ ವಿದಿತ.
ಹಚ್ಚೆ ಹಾಕುವ ವಿಧಾನಗಳಿಂದ ಹಿಡಿದು ಅದರ ಸರ್ವ ವಿವರಗಳನ್ನು ಈ ಲೇಖನದಲ್ಲಿ ಡಾ ಎನ್ ಎನ್ ಚಿಕ್ಕಮಾದು ಅವರು ಬಿಚ್ಚಿಟ್ಟಿದ್ದಾರೆ .

ಆಂಧ್ರದ ಕೆಂಗುಂದಿ ಕುಪ್ಪಂ ಬೀದಿನಾಟಕಗಳು, ದಂಡಿನ ಪದ, ಪಾಳ್ಯದ ನರಬಲಿ ಹಬ್ಬ’ ಆಟಿಯ ವಿಧಿನಿಷೇಧಗಳು ಹೀಗೆ ಜಾನಪದ ಸಂಪ್ರದಾಯಗಳ ಬಗೆಗಿನ ಲೇಖನಗಳು ಬೇರೆಯದೇ ಒಂದು ಪ್ರಪಂಚವನ್ನು ಕಣ್ಣ ಮುಂದೆ ತೆರೆದಿಡುತ್ತವೆ .

ಹಾಗೆ ಜಾನಪದ ಕಲೆ ಸಂಸ್ಕೃತಿ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುವ ಅದರ ಅಳಿವು ಉಳಿವುಗಳ ಬಗ್ಗೆ ಗಂಭೀರ ಚರ್ಚೆ ಮಾಡುವ ವಿಚಾರ ಪೂರ್ಣ ಲೇಖನಗಳು ಇಲ್ಲುಂಟು .ಜಾನಪದ ಸಂಶೋಧನಾ ಅಂತರ್ ಶಿಸ್ತು ಲೇಖನದಲ್ಲಿ ಜಾನಪದ ಸಂಶೋಧನೆಗಳಿಗೆ ಬೇಕಾದ ನಿಯಮ ಸಾಧಕ ಬಾಧಕಗಳ ವಿಸ್ತೃತ ಚರ್ಚೆ ಇದೆ . ಚರಿತ್ರೆ ಮತ್ತು ಜಾನಪದದಲ್ಲಿ ಎರಡರ ನಡುವಿನ ಸಂಬಂಧದ ತುಲನಾತ್ಮಕ ವಿಮರ್ಶೆ ಇದೆ . 

ಜಾಗತೀಕರಣದ ಈ ಹುಚ್ಚು ನಾಗಾಲೋಟದಲ್ಲಿ ಜಾನಪದವೇ  ಜಾಗತೀಕರಣಕ್ಕೆ ಸವಾಲಾಗಬೇಕು ಎನ್ನುವ  ಲೇಖಕ ಯುಎನ್ ಸಂಗನಾಳಮಠ ಅವರು ಹೇಳುವ ಈ ಮಾತುಗಳು ತುಂಬಾ ಗಮನಾರ್ಹ .”ಸಮಸ್ತ ವಿದ್ಯೆಗಳಿಗೆ ಕಲೆಗಳಿಗೆ ಹಾಡುಗಳಿಗೆ ಜ್ಞಾನಶಾಖೆಗಳಿಗೆ ಅಧಿಷ್ಠಾನವಾಗಿರುವ ನಾಡಿನ ಬದುಕನ್ನು ರೂಪಿಸುತ್ತಿರುವ ಸಾವಿರಾರು ವರ್ಷಗಳ ಬೌದ್ಧಿಕ ಸಾಂಸ್ಕೃತಿಕ ಪರಂಪರೆಯನ್ನು ತುಂಬಿಕೊಂಡಿರುವ ಜಾನಪದವನ್ನು ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಪ್ರಗತಿಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ “.

ಜಾನಪದ ನಿಂತ ನೀರಲ್ಲ  ಎಂದು ಪ್ರತಿಪಾದಿಸುತ್ತಾ ಜಾನಪದದ ರೂಪಗಳನ್ನು ಪ್ರಸಕ್ತ ವಿದ್ಯಮಾನಗಳಿಗೆ ಹೊಂದಿಸಿಕೊಂಡು ಬೇರೆಬೇರೆ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಈ ಕಾರ್ಯ ಯೋಜನೆ ಜಾನಪದದ ಜೀವಂತಿಕೆಯನ್ನು, ಚಲನಶೀಲತೆಯನ್ನು ಸಾದರಪಡಿಸುವ ಒಂದು ವಿಧಾನವೇ ಆಗಿದೆ ಎನ್ನುತ್ತಾರೆ ಜಾನಪದ ಮತ್ತು ಚಲನಶೀಲತೆ  ಲೇಖನದಲ್ಲಿ ಲೇಖಕರಾದ ಡಾ. ಅಂಬಳಿಕೆ ಹಿರಿಯಣ್ಣ. 

ಜಾನಪದ ಸಾಹಿತ್ಯದ ಸಮಷ್ಟಿ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತಾ”ವ್ಯಕ್ತಿಯ ಪ್ರಜ್ಞೆ ಅಥವಾ ವ್ಯಷ್ಟಿ ಸಮುದಾಯದಲ್ಲಿ ಬೆರೆತುಹೋಗುವ ಕ್ರಿಯೆ ವಿಶಿಷ್ಟವಾದುದಾಗಿದೆ” ಎನ್ನುತ್ತಾರೆ ಲೇಖಕ ಡಾ ಜಿ ವೀರಭದ್ರಗೌಡ .

ಜನಪದ ಜೀವನದ ಅವಿಭಾಜ್ಯ ಅಂಗವಾಗಿರುವ ಮಂತ್ರವಿದ್ಯೆ ದೃಷ್ಟಿ ತೆಗೆಯುವುದು ಉಳುಕು ತೆಗೆಯುವುದು ಈ ವಿಚಾರ ಸಂಪ್ರದಾಯ ಆಚರಣೆಗಳ ಬಗ್ಗೆ ಹೇಳುತ್ತಾರೆ ಡಾ ಎಸ್ ಎಂ ಸಾವಿತ್ರಿ.  

ಸಂಪಾದಕ ಡಾ ರಾಜಶೇಖರ ಜಮದಂಡಿ ಅವರು ಜಾಗತೀಕರಣದ ವೈಪರೀತ್ಯದಿಂದ ಜನಪದರ ಜೀವನ ಇಂದು ನಿಜಕ್ಕೂ ನೆಲಕಚ್ಚಿದೆ ಎಂದು ವಿಷಾದಿಸುತ್ತಾ ಅವಿಭಕ್ತ ಕುಟುಂಬಗಳ ಸಂಸ್ಕೃತಿಯಿಂದ  ಭಿನ್ನವಾಗಿ ಹಿರಿಯರು ಕಿರಿಯರೆಂಬ ಭಾವನೆ ಇಂದಿನ ಮಕ್ಕಳಲ್ಲಿ ಮೂಡಿ ಬರುತ್ತಿಲ್ಲ ಎನ್ನುತ್ತಾರೆ. 
“ಒಟ್ಟಾರೆ ವಿಜ್ಞಾನ ತಂತ್ರಜ್ಞಾನದ ಹಾದಿಯಲ್ಲಿ ಹಾಗೂ ಅಭಿವೃದ್ಧಿ ಎಂಬ ಮಂತ್ರೋಚ್ಚಾರಣೆ ಯಲ್ಲಿಯೂ ನಾವಿಂದು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ”
ಎನ್ನುವ ಲೇಖಕ ಸಂಪಾದಕರ ನುಡಿಗಳು ಇಂದಿನ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ .

ಖ್ಯಾತ ಜಾನಪದ ತಜ್ಞ ಜಿ ಶಂ ಪರಮಶಿವಯ್ಯ ಅವರು ಹೇಳುವಂತೆ “ನಾಗರಿಕತೆಗೂ ಮೂಲವಾದ ಶಿಷ್ಟ ಸಂಸ್ಕೃತಿಯಿಂದ ದೂರವಾದ ಪರಂಪರಾನುಗತವಾದ ಬೆಳವಣಿಗೆಗಳು ಪಡೆದ ಜನ ಸಮುದಾಯದ ವಿಶಿಷ್ಟ ಸಂಸ್ಕೃತಿಯೇ ಜಾನಪದ .”

ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ . ಅತ್ಯಂತ ವೈವಿಧ್ಯಮಯವಾದ ಈ ಕಲೆಗಳು ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿದೆ ಎಂದರೂ ತಪ್ಪಲ್ಲ . ಈಗ ಲಭ್ಯವಿರುವ ತಂತ್ರಜ್ಞಾನದ ಸಹಾಯದಿಂದತ್ತು ಅವೆಲ್ಲವನ್ನು ಅನುಸರಿಸಿ ಪಾಲಿಸುತ್ತಾ  ಕಾಪಿಟ್ಟು ಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ . ಹಿಂದಿನಿಂದ ಬಂದ ನಮ್ಮ ಹಿರಿಯರ ಈ ಉಂಬಳಿ ಮುಂದಿನ ಜನಾಂಗಕ್ಕೂ ಉಳಿಸಬೇಕಿರುವುದು ಬೆಳೆಸಬೇಕಿರುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ . ಈ ಅರಿವಿಗೆ ಕೊಂಚವಾದರೂ ಬೆಳಕು ಚೆಲ್ಲುವ ಲೇಖನಗಳು ಈ ಸಂಕಲನದಲ್ಲಿದೆ . ಜಾನಪದ ಸಂಸ್ಕೃತಿಯ ಒಟ್ಟಾರೆ ಪಕ್ಷಿನೋಟ ಇಲ್ಲಿ ದೊರೆಯುತ್ತವೆ .ಜನಪದದ ಬಗ್ಗೆ ಕಾಳಜಿ ಇರುವ ಪ್ರೀತಿ ಇರುವ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದು . 

ಈ ಲೇಖನ ಸುಮಗಳ ಮಾಲೆಯನ್ನು ನಮಗಾಗಿ ಕೋದು ಕೊಟ್ಟಿರುವ ಸಂಪಾದಕ ಡಾ ರಾಜಶೇಖರ್ ಜಮದಂಡಿ ಅವರಿಗೆ ಅಭಿಮಾನ ಪೂರ್ವಕ ಧನ್ಯವಾದಗಳು . ಈ ರೀತಿಯ ಜನಪರ ಕಾಳಜಿಯ ಜನಪದ ಕಾಳಜಿಯ ಕಾರ್ಯಗಳು ಮತ್ತಷ್ಟು ಮಗದಷ್ಟು ಅವರಿಂದ ಸಾಗಲಿ ಎಂಬ ಹಾರೈಕೆ .


ಸುಜಾತಾ ರವೀಶ್   

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು


3 thoughts on “

  1. ಜಾನಪದ ಬಗ್ಗೆ ಪುಸ್ತಕ ವಿಮರ್ಶೆ ಅದ್ಭುತವಾಗಿದೆ ಮೇಡಂ

Leave a Reply

Back To Top