ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಪ್ರತಿ ಮಂಗಳವಾರ ಬರೆಯಲಿದ್ದಾರೆ

 ಕನ್ನಡ ಸರಕಾರಿ ಶಾಲೆಗಳನ್ನು ಏಕೆ ಬಲಪಡಿಸಬೇಕು ?

ಸರಕಾರಿ  ಕನ್ನಡ ಶಾಲೆ ಬಲಪಡಿಸುವುದು ಹೇಗೆ?

ಶಿಕ್ಷಣ ಎಂಬುದು ಅಂಚೆ ಮೂಲಕ ಇಲ್ಲವೇ ಶಿಕ್ಷಕನು ಕಳಿಸಬಹುದಾದ ಒಂದು ಭೌತಿಕ ವಸ್ತುವಿನಿಂದ ಸಾಗಲ್ಲ. ಮಗುವಿನ ಭೌತಿಕ ಮತ್ತು ಸಾಂಸ್ಕೃತಿಕ  ಮಣ್ಣಿನಲ್ಲಿ ಫಲವತ್ತಾದ ಮತ್ತು ದೃಢವಾದ ಶಿಕ್ಷಣದ ಬೀಜವನ್ನು ನೆಟ್ಟು ಪೋಷಕರು, ಶಿಕ್ಷಕರು, ಸಹಪಾಠಿಗಳು ಮತ್ತು ಸಮುದಾಯಗಳಿಂದ ಪೋಷಿಸಿದಾಗಲೇ ಅದು ಬೆಳೆಯುವುದು ಈ ಪ್ರಕ್ರಿಯೆಯಲ್ಲಿ ಶಾಲೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಕೊಠಾರಿ ಆಯೋಗದಲ್ಲಿ ಭಾರತದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯ ವಿಕಸಿತವಾಗುತ್ತಿದೆ ಎಂದಿದ್ದನ್ನು ಸ್ಮರಿಸಬಹುದು.

ಪ್ರಸಿದ್ಧವಾದ ಸಮಾಜ ಸಂಸ್ಥೆಗಳಲ್ಲಿ ಶಾಲೆಯೂ ಒಂದಾಗಿದೆ. ಶಾಲೆಯು ಕುಟುಂಬಕ್ಕೂ ಪ್ರಪಂಚಕ್ಕೂ ಮಧ್ಯವರ್ತಿಯಾದ ಸಾಧನವಾಗಿದೆ. ತಮ್ಮ ಮಕ್ಕಳ ಸಂಪೂರ್ಣ ಶಿಕ್ಷಣವನ್ನು ಕೈಗೊಳ್ಳುವುದು ಕುಟುಂಬಕ್ಕೆ ಅಸಾಧ್ಯವೆಂಬ ದೃಷ್ಟಿಯಿಂದ ತಮ್ಮ ತರುಣ ಪೀಳಿಗೆಯು ಸಂಪೂರ್ಣವಾಗಿ ವಿಕಸಿತವಾದ ದೇಹದಿಂದಲೂ, ಬುದ್ಧಿಶಕ್ತಿಯಿಂದಲೂ ಕೂಡಿ ಸಮಾಜ ಜೀವನದಲ್ಲಿ ಭಾಗಿಯಾಗಬೇಕೆಂಬ ಜನಾಂಗದ ಬಯಕೆಯಿಂದ ಶಾಲೆಗಳು ಹುಟ್ಟಿಕೊಂಡಿತೆನ್ನಬಹುದು. ಶಾಲೆಗಳು ನೇರವೂ ಸರಳವೂ ಉದಾತ್ತವೂ ಆದ ಸನ್ನಿವೇಶಗಳನ್ನು ಒಳಗೊಂಡು ಮಕ್ಕಳ ಪುಟ್ಟ ಸಮಾಜದಂತಿರಬೇಕು.

ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳು ಮಕ್ಕಳ ಭವಿಷ್ಯದ ದೀವಿಗೆಗಳು. ಹಾಗಾದರೆ ಪ್ರಾಥಮಿಕ ಶಾಲೆಗಳು ಯಾವ ಮಾಧ್ಯಮದಲ್ಲಿ ಇರಬೇಕು. ಕನ್ನಡ ಮಾಧ್ಯಮವೋ ಅಥವಾ ಇಂಗ್ಲೀಷ ಮಾಧ್ಯಮವೋ ಎಂಬ ಚರ್ಚೆ ಅನೇಕ ವರ್ಷಗಳಿಂದ ನಡೆದಿರುವುದು ಎಲ್ಲರಿಗೂ ತಿಳಿದ ವಿಷಯ.  ಶಾಲೆಯಲ್ಲಿಯ ಮಾಧ್ಯಮದ ಬಗ್ಗೆ ಅನೇಕ ಆಯೋಗಗಳು ವರದಿಗಳು, ಶಿಕ್ಷಣ ತಜ್ಞರ ಆಶಯಗಳು ಮತ್ತು ಮನೋವಿಜ್ಞಾನಿಗಳ ಅಭಿಪ್ರಾಯಗಳನ್ನು ಮುಖಾಮುಖಿಯಾಗಿಸಿದಾಗ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಆಗ ಮಾತ್ರ ಪರಿಕಲ್ಪನೆಗಳ ಸ್ಪಷ್ಟತೆ ಮಗುವಿನಲ್ಲಿ ಮೂಡುವುದು ಎಂಬ ಅಭಿಪ್ರಾಯ ಹೊಂದಿದ್ದನ್ನು ಕಾಣಬಹುದಾಗಿದೆ.  ಆದ್ದರಿಂದಲೇ ಮಗುವಿನ ಸರ್ವಾಂಗೀಣ ಬೆಳವಣೆಗೆಗಾಗಿ ಹಾಗೂ ಶಿಕ್ಷಣದಿಂದ ವಂಚಿತರಾದ ದಲಿತರು, ಅಲ್ಪಸಂಖ್ಯಾತರು, ಬಡವರು ಹಾಗೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಂತೆ ಸರಕಾರ ಅನೇಕ ಕನ್ನಡ ಪ್ರಾಥಮಿಕ  ಹಾಗೂ ಪ್ರೌಢಶಾಲೆಗಳನ್ನು ತೆರೆದು ಮಕ್ಕಳ ಭವಿಷ್ಯ ರೂಪಿಸುತ್ತಿದೆ.  ಅಲ್ಲದೇ ಸರ್ವಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಹಾಗೂ ಸಮಗ್ರ  ಶಿಕ್ಷಣ ಅಭಿಯಾನದ ಮೂಲಕ ಕನ್ನಡ ಸರಕಾರಿ ಶಾಲೆಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಸಾಕ್ಷರತಾ ದರವನ್ನು ಅಭಿವೃದ್ಧಿಪಡಿಸಿದ್ದನ್ನು ಸಹ ಕಾಣಬಹುದಾಗಿದೆ. ಆದಾಗ್ಯೂ ಜಾಗತೀಕರಣ ಹಾಗೂ ಆಧುನೀಕರಣದ ಹಿನ್ನೆಲೆಯಲ್ಲಿ ಇತರ ಶಾಲೆಗಳೊಂದಿಗೆ ಪೈಪೋಟಿ ನಡೆಸಿ ಸರಕಾರಿ  ಕನ್ನಡ ಶಾಲೆಗಳನ್ನು ಮತ್ತಷ್ಟು  ಬಲಪಡಿಸುವುದು ಅಗತ್ಯವಾಗಿದೆ.

ಹಾಗಾದರೆ ಕನ್ನಡ ಸರಕಾರಿ ಶಾಲೆಗಳನ್ನು ಏಕೆ ಬಲಪಡಿಸಬೇಕು? ಹಾಗೂ ಹೇಗೆ ಬಲಪಡಿಸಬೇಕು ಎಂಬುದನ್ನು ಚರ್ಚಿಸೋಣ

 ಕನ್ನಡ ಸರಕಾರಿ ಶಾಲೆಗಳನ್ನು ಏಕೆ ಬಲಪಡಿಸಬೇಕು ?

          ಕನ್ನಡ ಶಾಲೆಗಳು ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದೆ

          ಅಮರ್ತ್ಯಸೇನ ಅವರು ಹೇಳಿದಂತೆ ಅಂಚಿನಲ್ಲಿರುವ ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೆ.

          ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದೆ.

          ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವದರಿಂದ ರಾಜ್ಯ ಹಾಗೂ ಕೇಂದ್ರ ಜಂಟಿ ಜವಾಬ್ದಾರಿಯಾಗಿದೆ. ಶಾಲೆಗಳ ಬಲಪಡಿಸುವಿಕೆಯ ಮೂಲಕ ಎಲ್ಲರಿಗೂ ಶಿಕ್ಷಣ ಸಾಧಿಸುವ ಗುರಿಗಾಗಿ ಕಾರ್ಯಮಾಡಬೇಕಿದೆ.

          ಕಲ್ಯಾಣ ರಾಜ್ಯ ಸಾಧಿಸುವ ಗುರಿಗಾಗಿ ಸರಕಾರಿ ಶಾಲೆಗಳ ಬಲಪಡಿಸುವಿಕೆ ಅಗತ್ಯವಾಗಿದೆ.

          ಸರಕಾರಿ ಕನ್ನಡ ಶಾಲೆಗಳು ನೆಲ ಜಲ ಸಂಸ್ಕೃತಿಯನ್ನು ಪೋಷಿಸುತ್ತವೆ

          ಮಾತೃಭಾಷೆಯು ಉಸಿರಿನ ಹಾಗೂ ಬದುಕಿನ ಭಾಷೆಯಾಗಿದೆ. ಸರಕಾರಿ ಕನ್ನಡ ಶಾಲೆಗಳು ಅವುಗಳಿಗೆ ಪೂರಕವಾಗಿವೆ

 ಸರಕಾರಿ  ಕನ್ನಡ ಶಾಲೆ ಬಲಪಡಿಸುವುದು ಹೇಗೆ?

          ಸರಕಾರಿ ಶಾಲೆಗಳುಆಕರ್ಷಿತವಾಗಿ ಕಾಣುವಂತೆ ಸುಣ್ಣ ಬಣ್ಣ ಹಚ್ಚಬೇಕು

          ಮಕ್ಕಳ ದೈಹಿಕ ಬೆಳವಣೆಗೆಗೆ ಸಹಾಯವಾಗಲು ಉತ್ತಮ ಮೈದಾನವನ್ನು ಸಜ್ಜುಗೊಳಿಸಬೇಕು

          ಅವಶ್ಯಕವಾದ ಭೌತಿಕ ಸೌಲಭ್ಯಗಳಾದಂತಹ ವಿವಿಧ ಪ್ರಯೋಗಾಲಯದ ಕೊಠಡಿಗಳು, ಶೌಚಾಲಯಗಳು, ಸಭಾಂಗಣ, ಹಾಗೂ  ಅಡುಗೆ ಕೋಣೆಗಳನ್ನು ಅಭಿವೃದ್ಧಿಪಡಿಸಬೇಕು

          ಪರಿಸರ ಪ್ರಜ್ಞೆ, ಕಳಕಳಿಯನ್ನು ಮೂಢಿಸಲು ಶಾಲೆಯಲ್ಲಿ ಹೋತೋಟ, ಔಷಧಿಯ ಗಿಡಗಳ ತೋಟಗಳ ಅಭಿವೃದ್ಧಿಪಡಿಸಬೇಕು

          ಮಕ್ಕಳ ಕಲಿಕೆಗೆ ಅನುಕೂಲವಾಗಲು ಗಣಿತ, ವಿಜ್ಞಾನ, ಸಮಾಜವಿಜ್ಞಾನ ಹಾಗೂ ಭಾಷಾ ಪ್ರಯೋಗಾಲಯಗಳನ್ನು ಅಭಿವೃದ್ಧಿಗೊಳಿಸಬೇಕು.

          ಆಧುನಿಕ ತಂತ್ರಜ್ಞಾನದ ಜ್ಞಾನ ನೀಡಲು ಕಂಪ್ಯೂಟರ್‌ ಲ್ಯಾಬ್‌, ಪ್ರೋಜೆಕ್ಟರ್‌, ಕಂಪ್ಯೂಟರ್‌, ಸೌಂಡ್‌ ಬಾಕ್ಸಗಳು,ಇಂಟರ್ನೆಟ್‌ ಇತ್ಯಾದಿಗಳ ಸೌಲಭ್ಯ ಅಗತ್ಯವಾಗಿ ಅಳವಡಿಸಿಕೊಳ್ಳಲು  ಅವುಗಳ ಪೂರೈಕೆಯಾಗಬೇಕು

          ಮಕ್ಕಳು ಬಾಗವಹಿಸುವದನ್ನು ಪ್ರೇರೆಪಿಸುವ ಸಲುವಾಗಿ ಹೊಸ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು.

          ಕಲಿಕಾ ಪ್ರಕ್ರಿಯೆಯಲ್ಲಿ ಚಾರ್ಟಗಳು, ನಕ್ಷೆಗಳು ಹಾಗೂ ಇತರೆ ಬೋಧನೋಪಕರಣಗಳ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಬೇಕು

          ಗ್ರಂಥಾಲಯದಲ್ಲಿ ಚಿತ್ರಸಹಿತವಾದ ಪುಸ್ತಕಗಳ ಸಂಗ್ರಹ ಇರಬೇಕು. ಹಾಗೂ ಪ್ರತಿ ವರ್ಷ ಹೊಸ ಹೊಸ ಪುಸ್ತಕಗಳ ಸೇರ್ಪಡೆ ಆಗಬೇಕು

          ಸಹ ಪಠ್ಯ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು ಅದಕ್ಕಾಗಿ ಭಾಷಣ, ಪ್ರಬಂಧ, ಆಶುಭಾಷಣ, ರಂಗೋಲಿ, ಚಿತ್ರಕಲೆ ಹಾಗೂ ಆಟೋಟಗಳನ್ನು ಏರ್ಪಡಸಬೇಕು

          ಶಾಲೆಯಲ್ಲಿ ವಿವಿಧ ಸಂಘಗಳಾದ ವಿಜ್ಞಾನ ಸಂಘ, ಸಮಾಜ ವಿಜ್ಞಾನ ಸಂಘ, ಗಣಿತ ಸಂಘ, ಭಾಷಾ ಸಂಘ, ಇಕೋ ಕ್ಲಬ್‌, ಮೀನಾ ಸಂಘ, ರೆಡ್‌ ಕ್ರಾಸ್‌ ಸಂಘ, ಎನ್‌ ಎಸ್‌ ಎಸ್‌, ಇತ್ಯಾದಿಗಳ ಸ್ತಾಪನೆಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಭಿವ್ಯಕ್ತಿ ಅವಕಾಶವನ್ನು ನೀಡಬೇಕು

          ಪ್ರತಿ ಶನಿವಾರ ಸಾಂಸ್ಕೃತಿಕ ಚಟುವಟಿಕೆಗನ್ನು ಏರ್ಪಡಿಸಬೇಕು

          ಪ್ರತಿ ವರ್ಷ ಶಾಲಾ Magzine  ಮೂಲಕ ಶಾಲೆಯ ಎಲ್ಲ ಚಟುವಟಿಕೆಗಳ ಕ್ರೋಢೀಕರಣ ಕಾರ್ಯ ಸಾಗಬೇಕು

          ಬೇರೆ ಬೇರೆ ಸಂಪನ್ಮೂಲ ಶಿಕ್ಷಕರ ಮೂಲಕ ಮಕ್ಕಳ ಕಲಿಕೆಗೆ ಸಹಕಾರಿಯಾಗಬೇಕು

          ಎಲ್ಲ ಶಾಲೆಗಳಲ್ಲಿ ಪ್ರತಿ ವಿಷಯದ ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು

          ಎಲ್ಲ ಕನ್ನಡ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಕ್ರಾಫ್ಟ ಶಿಕ್ಷಕರ ಲಭ್ಯತೆ ಇರಬೇಕು ಆದ್ದರಿಂದಲೇ  ಶಾಲಾ ಸಂಕೀರ್ಣದಲ್ಲಿ ಈ ಎಲ್ಲ ಶಿಕ್ಷಕರ ಬಗ್ಗೆ ಹೊಸ ಶಿಕ್ಷಣದಲ್ಲಿ ಪ್ರಸ್ತಾಪ ಇರುವುದು ಅತ್ಯಂತ ಸಂತಸದ ವಿಷಯ

          ಶಾಲಾ ಸ್ವಚ್ಛತೆಗಾಗಿ ಪ್ರತ್ಯೇಕ ಸಿಬ್ಬಂದಿ ಇದ್ದರೆ ಅತ್ಯುತ್ತಮ

          ಪ್ರತಿ ಶಾಲೆಯಲ್ಲಿ ಕ್ಲಾರ್ಕ ಹಾಗೂ ಸಿಪಾಯಿಗಳು ಕಡ್ಡಾಯವಾಗಿ ಇರಬೇಕು

          ಮುಖ್ಯೋಪಾದ್ಯಾಯರ ಹುದ್ದೆ ಹಾಗೂ ಶಿಕ್ಷಕರ ಹುದ್ದೆ ಖಾಲಿಯಾದಾಗ ಬೇಗನೇ ಭರ್ತಿ ಮಾಡಿ, ಶೈಕ್ಷಣಿಕ ಚಟುವಟಿಕೆಗೆ ವ್ಯತ್ಯಯ ಆಗದಂತೆ ಸದಾ ನಿಗಾವಹಿಸಬೇಕು

ಒಟ್ಟಾರೆ ಈ ಮೇಲಿನ ಎಲ್ಲ ಅಂಶಗಳು ಕನ್ನಡ ಸರಕಾರಿ ಶಾಲೆಗೆ ಕಾಯಕಲ್ಪ ತರಲಿವೆ. ಇದರ ಮೂಲಕ ಸರಕಾರಿ ಶಾಲೆಗಳು ಪುನಃ ಚೈತನ್ಯ ಪಡೆಯಲು ಸಹಕಾರಿ ಆಗುತ್ತವೆ ಎಂಬುವದರಲ್ಲಿ ಸಂಶಯವಿಲ್ಲ


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top