ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಸಾಮರಸ್ಯವೇ ಬಹುತ್ವ ಭಾರತದ ಹೆಗ್ಗುರುತು..
ಸಾಮರಸ್ಯವೇ ಬಹುತ್ವ ಭಾರತದ ಹೆಗ್ಗುರುತು..
ಮೊನ್ನೆ ಗದಗ ಜಿಲ್ಲೆಯ ಶಿರಹಟ್ಟಿ ಬಳಿ ಇರುವ ಶಿಶುವಿನಹಾಳ ಗ್ರಾಮಕ್ಕೆ ಕುಟುಂಬ ಸಮೇತರಾಗಿ ಸಂತ ಶಿಶುನಾಳ ಶರೀಫರ ಮತ್ತು ಗುರು ಗೋವಿಂದ ಭಟ್ಟರ ಗದ್ದುಗೆಯನ್ನು ದರ್ಶನ ಮಾಡಿಕೊಂಡು ಬಂದೆವು. ಈ ಗದ್ದುಗೆಯ ಬಳಿ ಇಂದಿಗೂ ಹಿಂದೂ ಧರ್ಮದ ಶಾಂತಯ್ಯ ಕಾಯಿ, ಹಣ್ಣು, ಕರ್ಪೂರವನ್ನು ಗದ್ದುಗೆ ಅರ್ಪಿಸಿದರೆ, ಗದ್ದುಗೆಯ ಇನ್ನೊಂದು ಕಡೆ ಇರುವ ಸಂತ ಶಿಶುನಾಳ ಶರೀಫರ ವಂಶಜರಾದ ಬಡೇಸಾಬ್ ಅವರು ಸಕ್ಕರೆ ಲೋಬಾನವನ್ನು, ಕುರಾನ್ ಓದುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ಸಮಯದಲ್ಲಿ ಗದ್ದುಗೆಗೆ ಹಿಂದೂ – ಮುಸ್ಲಿಂ ಎನ್ನದೆ ಎಲ್ಲರೂ ಗದ್ದುಗೆಗೆ ಬಂದು ಪ್ರಾರ್ಥನೆ ಸಲ್ಲಿಸುವುದು ಕಣ್ತುಂಬಾ ನೋಡಿಕೊಂಡೆವು.
ಇಂಥಹ ಭಾತೃತ್ವ ಸಾರುವ ಹಲವಾರು ಸ್ಥಳಗಳನ್ನು ಭಾರತದ ಪ್ರತಿ ಗ್ರಾಮೀಣ, ನಗರ ಪ್ರದೇಶಗಳಲ್ಲಿಯೂ ನಾವು ಕಾಣಲು ಸಿಗುತ್ತವೆ. ಹಿಂದೂಗಳು ದರ್ಗಾಕ್ಕೆ, ಮಸೀದಿಗೆ ನಡೆದುಕೊಳ್ಳುವ ಅನೇಕ ಸಂಗತಿಗಳನ್ನು ನಾವು ಕಾಣುತ್ತೇವೆ.
ಹಾಗೆಯೇ ಮುಸ್ಲಿಂ ಬಂಧುಗಳು ಕೂಡ ಹಲವಾರು ಮಂದಿರಗಳಿಗೆ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿಸುವುದನ್ನು ನಾವು ಕಾಣುತ್ತೇವೆ. ಇದು ಬಹುತ್ವ ಭಾರತದ ಹೆಗ್ಗುರುತು ಎಂದರೆ ತಪ್ಪಾಗಲಾರದು.
ಕೆಲವರು ಸ್ವಾರ್ಥ ರಾಜಕಾರಣದ
ಕಾರಣಕ್ಕೋ ಇಲ್ಲವೇ ಮತಾಂಧ ಕುರುಡು ನಂಬಿಕೆಯ ಕಾರಣಕ್ಕೋ ಧರ್ಮ ಧರ್ಮಗಳಿಗೆ ಜನಸಾಮಾನ್ಯರನ್ನು ಎತ್ತಿ ಕಟ್ಟುವ ಅನೇಕ ದುಷ್ಟ ಪ್ರಸಂಗಗಳನ್ನು ನಾವು ಇಂದು ಕಾಣುವುದು ಖೇದವೆನಿಸುತ್ತದೆ. ಯಾವುದೇ ಜಾತಿ ಧರ್ಮ ಇಲ್ಲದೆ ಸಹೋದರತ್ವದ ತತ್ವದೊಂದಿಗೆ ಬದುಕುವ ಸಂಪ್ರದಾಯ ಮೊದಲಿನಿಂದಲೂ ನಮ್ಮ ಭಾಗದಲ್ಲಿರುವುದು ವಾಸ್ತವಿಕ ಸತ್ಯ.
ಇಂದಿಗೂ ಗ್ರಾಮೀಣ ಭಾರತದಲ್ಲಿ ಧರ್ಮವನ್ನೂ, ಜಾತಿಯನ್ನು ಮೀರಿದ ಬಂಧುತ್ವದ ಅನೇಕ ಪದಗಳ ಪ್ರಯೋಗವನ್ನು ನಾವು ಕಾಣುತ್ತೇವೆ. ಚಿಕ್ಕಪ್ಪ, ದೊಡ್ಡಪ್ಪ, ಮಾಮಾ, ಅತ್ತೆ, ಚಿಕ್ಕಮ್ಮ, ದಾದಾ, ಕಾಕಾ, ಎನ್ನುವ ಔದಾರ್ಯಯುತವಾದ ಬಾಂಧವ್ಯಕ್ಕೆ ಯಾವುದೇ ಅಡ್ಡಗೋಡೆಗಳು ಎದುರಾಗಿಲ್ಲ.
ಆದರೂ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಹಾಲಿನಂತಹ ಸಂಬಂಧಗಳಿಗೆ ಹುಳಿ ಹಿಂಡುವ ಕೆಲಸ ನಡೆಯುತ್ತಲೇ ಇದೆ. ಮಂದಿರದ ಹೆಸರಿನಲ್ಲಿ ಕೆಲವರು. ಮಸೀದಿಯ ಹೆಸರಿನಲ್ಲಿ ಇನ್ನೂ ಕೆಲವರು. ತಮ್ಮ ದುರಾಸೆಯ ಲಾಭಕ್ಕಾಗಿ ಬಳಸಿಕೊಳ್ಳುವುದು ಖಂಡನೀಯವಾಗಿದೆ.
ತನ್ನ ಧರ್ಮವನ್ನು ವಿಸ್ತಾರಗೊಳಿಸುವ ತನ್ನ ಅಜೆಂಡಾವನ್ನು ಬಿತ್ತುವ ಭರದಲ್ಲಿ ಮಾನವ ಸಂಬಂಧಗಳಿಗೆ ಕೊಳ್ಳಿಯಿಟ್ಟು ಕೇಕೆ ಹಾಕಿ ನಗುವ ಅನೇಕ ಕೂಹಕ ಮನಸ್ಸುಗಳನ್ನು ಇಂದು ನಾವು ಕಾಣುತ್ತೇವೆ.
ಮನುಷ್ಯ ಮೂಲತಃ ಮಾನವೀಯ ಅಂತ:ಕರ್ಣದ ಮನಸುಳ್ಳವನು. ಆದರೆ ಧರ್ಮದ ಬೋಧಕರು, ಧರ್ಮ ಪ್ರಸಾರಕರು ಮತಾಂತರದ ಹೆಸರಿನಲ್ಲಿ ತನ್ನ ಧರ್ಮವನ್ನು ವಿಸ್ತಾರಗೊಳಿಸುವ ನೆಪದಲ್ಲಿ ಅನೇಕ ಧರ್ಮ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾರೆ.
ಇಂದು ಮನುಷ್ಯ ಸಂಬಂಧಗಳನ್ನು ಸಂಕುಚಿತಗೊಳಿಸುವ ಕೆಲಸ ನಡೆಯುತ್ತಿರುವುದು ಅಲ್ಲಲ್ಲಿ ನಾವು ಕಾಣುತ್ತೇವೆ. ಮಸೀದಿಗೆ ಬೆಂಕಿ ಹಚ್ಚುವ, ಚರ್ಚಿಗೆ ಕಲ್ಲು ಎಸೆಯುವ, ಮಂದಿರಕ್ಕೆ ಮಸಿ ಬಳಿಯುವ, ಧರ್ಮದ ಬೋಧನೆಗಳು ಯಾವತ್ತೂ ಒಳ್ಳೆಯದಲ್ಲ ಎನ್ನುವ ಎಚ್ಚರ ಎಲ್ಲರೆದೆಯೊಳಗಿರಬೇಕು.
ಧರ್ಮಗಳು ಮನುಷ್ಯ ಮನುಷ್ಯರ ಸಂಬಂಧಗಳನ್ನು ಗಟ್ಟಿಗೊಳಿಸುವಂತೆ ಇರಬೇಕೆ ಹೊರತು ಸಂಬಂಧಗಳನ್ನು ಒಡೆಯುವಂತಿರಬಾರದು. ಎಲ್ಲಾ ಧರ್ಮಗಳಲ್ಲಿಯೂ ಬಡವರು, ಅಸಹಾಯಕರು, ನೊಂದವರು ಇರುತ್ತಾರೆ. ಅವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕೆ ಹೊರತು ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು.
ಧರ್ಮದ ಹೆಸರಿನಲ್ಲಿ ಮತಾಂದ ಕಾನೂನುಗಳನ್ನು ಧರ್ಮದೊಳಗೆ, ಸಮಾಜದೊಳಗೆ ತುರುಕಿ ಮೋಜು ನೋಡುವುದು ಉಚಿತವಲ್ಲ. ಸಮವಸ್ತ್ರ, ನಾಮ, ವಿಭೂತಿ, ಟೊಪ್ಪಿಗೆ, ಬರ್ಚಿ, ತ್ರಿಶೂಲಗಳನ್ನು ಬಳಸಿ ಮಾನವಿಯತೆಯನ್ನು ಕೊಲ್ಲಬಾರದು.
ಜಗತ್ತಿನ ಪ್ರತಿಯೊಂದು ಜೀವಿಯ ಜೀವವನ್ನು ಉಳಿಸುವುದು ಪ್ರತಿಯೊಂದು ಧರ್ಮದ ಕರ್ತವ್ಯ. ಹಾಗಾಗಿ ಬಸವಣ್ಣನವರ, “ದಯವೇ ಧರ್ಮದ ಮೂಲವಯ್ಯ” ಎನ್ನುವ ಮಾತನ್ನು ನಾವು ಮರೆಯಬಾರದು.
ಧರ್ಮದ ಹೆಸರಿನಲ್ಲಿ, ಸಂಸ್ಕೃತಿಯ ಸೋಗಿನಲ್ಲಿ, ಮತಾಂಧ ದ್ವೇಷದ ತತ್ವಗಳನ್ನು ಬಿತ್ತುತ್ತಾ.. ಒಂದು ಧರ್ಮದ ಮೇಲೆ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟಿ ಸಮಾಜದ ಸಾಮರಸ್ಯವನ್ನು, ಭಾತೃತ್ವವನ್ನು ಹೊಡೆಯುವುದು ಒಳ್ಳೆಯದಲ್ಲ.
ಹಿಂದೆ ನಡೆದ ಅನೇಕ ಘಟನೆಗಳು ಇಂದು ಆಪ್ರಸ್ತುತವಾಗುತ್ತವೆ. ಅವುಗಳಿಗೆ ಮಹತ್ವ ಕೊಡುತ್ತಾ ಹೋದರೆ ಇಂದಿನ ಬದುಕಿನ ಸಾಮರಸ್ಯವನ್ನು ಹಾಳು ಮಾಡಿದಂತಾಗುತ್ತದೆ. ಇತಿಹಾಸದಿಂದ ಪಾಠವನ್ನು ಕಲಿಯುತ್ತಲೇ, ಮಾರ್ಗದರ್ಶನವನ್ನು ಪಡೆಯಬೇಕೆ ಹೊರತು ಇತಿಹಾಸವನ್ನು ಪ್ರಸ್ತುತ ಕಾಲಘಟ್ಟದಲ್ಲಿ ತುರುಕಬಾರದು.
ಭಾರತದಂತಹ ದೇಶದಲ್ಲಿ ಹಲವಾರು ಧರ್ಮಗಳು, ಭಾಷೆಗಳು, ವೇಷ – ಭೂಷಣಗಳು, ವೈವಿಧ್ಯಮಯ ಪ್ರದೇಶಗಳು, ನಮ್ಮಲ್ಲಿರುವ ಭಿನ್ನತೆಯನ್ನು ಪ್ರಕಟಪಡಿಸಿದರೂ, ವಿವಿಧತೆಯಲ್ಲಿ ಏಕತೆಯನ್ನು ಮೆರೆಯಬೇಕಾಗಿರುವುದು ಸತ್ಯ.
ನಮ್ಮ ಮುಂದಿನ ಪೀಳಿಗೆಗೆ ಭಾತೃತ್ವದ ಪಾಠವನ್ನು ಹೇಳಿಕೊಟ್ಟು, ಭಾರತವು ಸಾಮರಸ್ಯದ ಹೆಗ್ಗುರುತೆಂದು ತಿಳಿಸಬೇಕಾಗಿದೆ. ನಾವೆಲ್ಲರೂ ಭವ್ಯ ಭಾರತದ ಸಾಮರಸ್ಯವನ್ನು ಎತ್ತಿ ತೋರಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.