ಅಂಕಣ ಸಂಗಾತಿ

ಗಜಲ್ ಲೋಕ

ವೀರಣ್ಣ ಮಂಠಾಳಕರ್ ರವರ ಗಜಲ್ ಗಳಲ್ಲಿ

ಸಾಮಾಜಿಕ ಸಂವೇದನೆಯ ಪ್ರತಿಧ್ವನಿ…

ರತ್ನರಾಯಮಲ್ಲ

ಗಜಲ್ ಎನ್ನುವ ಹರ್ಪ್ ಕಿವಿಗೆ ಬೀಳುತ್ತಲೇ ಹೃದಯದಲ್ಲೊಂದು ಯೂನಿಕ್ ಕಂಪನ ಉಂಟಾಗುತ್ತದೆ. ವಾರ, ವಾರ ಒಬ್ಬೊಬ್ಬ ಶಾಯರ್ ಬಗ್ಗೆ ಬರೆಯುತ್ತ ಒಂದು ವರ್ಷ ದಾಟಿರುವೆ, ಆದರೂ ಮನಕ್ಕೆ ದಣಿವಿಲ್ಲ; ಗಜಲ್ ಲೋಕದಲ್ಲಿ ವಿಹರಿಸುವ ಬಯಕೆ ಒಂದಿಷ್ಟು ಕಡಿಮೆಯಾಗಿಲ್ಲ. ಮೊದಲ ವಾರದಂತೆಯೇ ಇಂದೂ ಸಹ ಗಜಲ್ ಲೋಕದ ಚಾಂದ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ಚಂದಮಾಮನನ್ನು ಪ್ರೀತಿಸುವ, ಪೂಜಿಸುವ ಸಹೃದಯಿಗಳ ಮುಂದೆ ಪ್ರಸ್ತುತ ಪಡಿಸಲು..!! 

ಮುಳುಗುವುದೆ ನಮ್ಮ ಹಣೆಬರಹವಾದರೆ ಕೇಳು

ಖಂಡಿತವಾಗಿ ಮುಳುಗುತ್ತೇನೆ ನಾನು ನಾವಿಕನ ಜೊತೆಗೆ”

ಕೈಫಿ ಅಜ್ಮಿ

       ಹಗಲು-ರಾತ್ರಿಗಳನ್ನೂ ಒಂದು ಮಾಡುವ ದೈತ್ಯ ಶಕ್ತಿ ಬರೆವಣಿಗೆಗೆ ಇದೆ. ಬರಹದಲ್ಲಿ ಮುಳುಗಿರುವ ಸಹೃದಯಿಗಳಿಗೆ ನೇಸರನ ಹೊಂಗಿರಣಗಳು, ಶಶಿಯ ಬೆಳದಿಂಗಳು, ಮಳೆರಾಯನ ಆರ್ಭಟ, ಬೆವರು ಹಂಚುವ ಬಿಸಿಲು, ಮುದುಡಿಸುವ ಮಾಗಿಕಾಲ, ಹಸಿವು, ನೋವು-ನಲಿವು.. ಯಾವುದರ ಪರಿವೆಯೂ ಇರುವುದಿಲ್ಲ, ಇರಲೂಬಾರದು. ಈ ಕಾರಣಕ್ಕಾಗಿಯೇ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಓದಲು ಸಾಧ್ಯವಾಗದಷ್ಟು ಬರವಣಿಗೆಯ ಅಕ್ಷಯ ಪಾತ್ರೆಯನ್ನು ಒದಗಿಸಿದ ಅಸಂಖ್ಯಾತ ಸಾಹಿತಿಗಳು ಎಲ್ಲ ಭಾಷೆಗಳಲ್ಲಿಯೂ ಸಿಗುತ್ತಾರೆ. ಮಹಾಕಾವ್ಯಗಳು, ಮಹಾಕಾದಂಬರಿಗಳು ಇವುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತವೆ. ಕಾದಂಬರಿಗಳು ಜೀವನದ ರಂಗಭೂಮಿಯಾದರೆ, ಕಾವ್ಯವು ಭಾವನೆಗಳ ಕಾರವಾನ್ ಆಗಿದೆ. ಈ ಕಾರವಾನ್ ಎಂದರೆ ಎಲ್ಲರಿಗೂ ಒಂದು ರೀತಿಯ ಪುಳಕ. ಈ ಅನುಪಮ ಅನುಭವದ ವಾರಸುದಾರರೆಂದರೆ ಕಾವ್ಯ. ಈ ಕಾವ್ಯ ಎಂಬುದು ಇಂದ್ರಧನುಷ್ ಗಿಂತಲೂ ಕಲರ್ ಫುಲ್. ಇದರಲ್ಲಿ ಹತ್ತು ಹಲವಾರು ಬಣ್ಣಗಳ ಚಿತ್ತಾರವಿದೆ. ಒಂದೊಂದು ಭಾಷೆಯಲ್ಲಿ ಒಂದೊಂದು ಕಾವ್ಯ ಅಲ್ಲಿಯ ರಸಿಕರ ಹೃದಯಬಡಿತ ಆಗಿರುತ್ತದೆ. ಈ ದಿಸೆಯಲ್ಲಿಯೆ ಗಜಲ್ ಎಂಬುದು ಉರ್ದು ಅದಬ್ ನ ಕೋಹಿನೂರ್ ಆಗಿ ಮೆರೆದಿದೆ, ಮೆರೆಯುತ್ತಿದೆ. ಆ ಕೋಹಿನೂರ್ ನ ನೂರ್ ನಿಂದ ಯಾರಾದರೂ ಬಚಾವ್ ಆಗಲು ಸಾಧ್ಯವೇ… ನೋ ಚಾನ್ಸ್; ಸಾಧ್ಯವೇ ಇಲ್ಲ. ಇಂಥದರಲ್ಲಿ ಎಲ್ಲ ಭಾಷೆಯ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಆಲಂಗಿಸುವ ನಮ್ಮ ಕನ್ನಡ ಸಾಹಿತ್ಯ ಇದರಲ್ಲಿ ಹಿಂದುಳಿಯುತ್ತದೆ ಎಂದು ಯೋಚಿಸಲಾದರೂ ಹೇಗೆ ಸಾಧ್ಯ ಹೇಳಿ. ಇಂದು ಕನ್ನಡದಲ್ಲಿಯೂ ನೂರಾರು ಬರಹಗಾರರು ಗಜಲ್ ಚಾಂದನಿಯನ್ನು ಪ್ರೀತಿಸುತಿದ್ದಾರೆ, ಪೂಜಿಸುತಿದ್ದಾರೆ ; ಅವಳ ಹೃದಯವನ್ನು ಗೆದ್ದಿದ್ದಾರೆ. ಅಂತಹ ಹಲವು ಗಜಲ್ ಗೋ ಅವರಲ್ಲಿ ಶ್ರೀ ವೀರಣ್ಣ ಮಂಠಾಳಕರ್ ರವರೂ ಒಬ್ಬರು.

        ಕಳೆದೆರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀ ವೀರಣ್ಣ ಮಂಠಾಳಕರ್ ಇವರು ನಮ್ಮ ನೆರೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಶ್ರೀ

ವೈಜಿನಾಥ ಹಾಗೂ ಶರಣಮ್ಮ ದಂಪತಿಗಳ ಮಗನಾಗಿ ೧೯೭೫ರ ಮೇ ಒಂದರಂದು ಹುಲಸೂರು ತಾಲೂಕಿನ ಕೆಸರ ಜವಳಗಾ ಗ್ರಾಮದಲ್ಲಿ ಜನಿಸಿದ್ದಾರೆ. ಕಡುಬಡತನದಲ್ಲಿ ಬೆಳೆದ ಇವರು ಹಲವು ಎಡರು ತೊಡರುಗಳ ಮಧ್ಯೆ ಬಿ.ಎ ಪದವಿಯನ್ನು ಪೂರೈಸಿ ಉಪಜೀವನಕ್ಕಾಗಿ ಮುಂಬಯಿ, ಬೆಂಗಳೂರಿನ ಕಡೆಯಲೆಲ್ಲ ಅಲೆದಾಡಿದರು. ಆ ಅಲೆದಾಟದ ತೀಕ್ಷ್ಣವೆ ಇವರಿಗೆ ಸಾಹಿತ್ಯ ಲೋಕದ ದೇಹಲಿಜ್ ದಾಟಲು ಪ್ರೇರೇಪಿಸಿದೆ. ಇವರ ಮೊದಲ ಬರಹ ಕತೆಯ ರೂಪದಲ್ಲಿ ೧೯೯೭ರಲ್ಲಿ ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೀವನದ ಹಲವಾರು ಏಳು-ಬೀಳಿನ ನಡುವೆ ಇವರು ಮಂಠಾಳದಲ್ಲಿ ‘ಸಂಕಲ್ಪ’ ಎನ್ನುವ ಸಾಹಿತ್ಯ ಪತ್ರಿಕೆಯನ್ನು ಪ್ರಾರಂಭಿಸಿದರು. ಮುಂದೆ ಬಸವಕಲ್ಯಾಣ ತಾಲೂಕಿನ ಕನ್ನಡ ಪ್ರಭ, ವಿಜಯ ಕರ್ನಾಟಕ… ಮೊದಲಾದ ಪತ್ರಿಕೆಗಳ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಕೆಲಕಾಲ ‘ದಿಕ್ಸೂಚಿ’ ಮಾಸ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಇವರು ಕಂಪ್ಯೂಟರ್ ನ ಅಕ್ಷರ ಜೋಡಣೆಯೊಂದಿಗೆ ತಮ್ಮ ಉಪಜೀವನವನ್ನು ಸಾಗಿಸುತ್ತಾ, ‘ವೀರ ಸಂಕಲ್ಪ ಮೀಡಿಯಾ’ ಎಂಬ ಯ್ಯೂಟೂಬ್ ಚಾನಲ್ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಕಾವ್ಯ, ಚುಟುಕು, ಹನಿಗವನ, ಕಥೆ, ಅಂಕಣ ಬರಹ, ವ್ಯಕ್ತಿ ಪರಿಚಯ, ಸಂಪಾದನೆ, ಗಜಲ್…ದಂತಹ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ‘ಭಾವಾಂತರಂಗ’, ಎಂಬ ಚುಟುಕು ಸಂಕಲನ, ‘ಸುಳಿಗಳು’, ಎಂಬ ಹನಿಗವನ ಸಂಕಲನ, ‘ಹನಿಜೇನು’ ಎಂಬ ಸಂಪಾದಿತ ಪ್ರಾತಿನಿಧಿಕ ರಾಜ್ಯಮಟ್ಟದ ಚುಟುಕು ಸಂಕಲನ, ‘ಗಾಂಧಿ ಆಗ್ಬೇಕಂದುಕೊಂಡಾಗ’, ಎಂಬ ಕವನ ಸಂಕಲನ, ‘ಕಾಯುವ ದೇವರ ವರ’, ಎಂಬ ಕವನ ಸಂಕಲನ, ‘ಬದುಕಿನ ಬೆನ್ನೇರಿ’, ಎಂಬ ಕಥಾ ಸಂಕಲನ, ‘ಮಾಧ್ಯಮದೊಳಗಣ’, ಎಂಬ ಅಂಕಣ ಬರಹಗಳ ಸಂಕಲನ, ‘ಮೌನ ಪ್ರತಿಭೆ’, ಎಂಬ ವ್ಯಕ್ತಿ ಪರಿಚಯ ಹಾಗೂ ‘ಗಜಲ್ ಗೆಜ್ಜೆನಾದ’, ಎಂಬ ಗಜಲ್ ಸಂಕಲನ…ಇತ್ಯಾದಿ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಅನೇಕ ಕತೆ, ಕವನ, ಲೇಖನಗಳು ನಾಡಿನ ಮಯೂರ, ತುಷಾರ, ಕರ್ಮವೀರ, ಸುಧಾ, ತರಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕ, ಹೊಸತು, ಪ್ರೇರಣ, ಸಂಕಲ್ಪ, ವಿಜಯವಾಣಿ, ಸಾಮಾಜಿಕ ಜಾಲತಾಣ ಪತ್ರಿಕೆಗಳು.. ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನರ ಮನಸೂರೆಗೊಂಡಿವೆ. ಇವರ ಇನ್ನೂ ಹಲವು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿರುವುದು ಶ್ರೀಯುತರ ಸಾಹಿತ್ಯ ಅಭಿರುಚಿ, ಅಭಿಮಾನವನ್ನು ಸಾರುತ್ತದೆ.‌

      ಸತತ ಪರಿಶ್ರಮದೊಂದಿಗೆ ಬದ್ಧತೆಯನ್ನು ರೂಢಿಸಿಕೊಂಡಿರುವ ಮಂಠಾಳರು ಹಲವಾರು ತಾಲೂಕು, ಜಿಲ್ಲಾ ಹಾಗೂ ಮೈಸೂರಿನಲ್ಲಿ ಜರುಗಿದ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಕಾವ್ಯ ಕಮ್ಮಟ, ಕಥಾ ಕಮ್ಮಟ, ಬರಹಗಾರರ ಕಮ್ಮಟ, ಪತ್ರಕರ್ತರ ಕಾರ್ಯಾಗಾರ.. ಮುಂತಾದ ಕಡೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನದ ಕ್ಷೀತಿಜವನ್ನು ವಿಸ್ತರಿಸಿಕೊಂಡಿದ್ದಾರೆ. ಮಾರ್ಚ್ ೧೯, ೨೦೧೯ ರಂದು ಜರುಗಿದ ಬಸವಕಲ್ಯಾಣ ೮ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಯ ಗೌರವ, ೨೦೧೯ರ ಮೇ ೦೮ರಂದು ಗಡಿಗೌಡಗಾಂವ ಗ್ರಾಮದಲ್ಲಿ ಜರುಗಿದ ‘ಬಸವಕಲ್ಯಾಣ ತಾಲೂಕಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಲಭಿಸಿದೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಜ್ಯದ ಹಲವಾರು ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಹಾರಕೂಡ ಸುಕ್ಷೇತ್ರದಿಂದ ಶ್ರೀಚೆನ್ನ ರತ್ನ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ‘ಕಾವ್ಯ ಪ್ರಶಸ್ತಿ’, ಎಂ.ಜಿ.ದೇಶಪಾಂಡೆ ಪ್ರತಿಷ್ಠಾನ ಬೀದರ ಇವರಿಂದ ‘ಚುಟುಕು ಶಿಲ್ಪಿ’ ಪ್ರಶಸ್ತಿ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತು ಹುಮನಾಬಾದ ಆಶ್ರಯದಲ್ಲಿ ‘ಕನಕ ಸಿರಿ’ ಪ್ರಶಸ್ತಿ, ಸ್ನೇಹ ಸಂಗಮ ಸಾಹಿತ್ಯ ಬಳಗ ರಾಜ್ಯ ಶಾಖೆ, ತುಮಕೂರು ಇವರು ಏರ್ಪಡಿಸಿದ ಕವಿ ಹೃದಯಗಳ ಸಮ್ಮೇಳನ-೨೦೧೯ ರಲ್ಲಿ ‘ಸಾಹಿತ್ಯ ಲೋಕದ ಸಾಧಕ ರತ್ನ ಪ್ರಶಸ್ತಿ’ ಹಾಗೂ ಗೌರವ ಸನ್ಮಾನ…ಸೇರಿದಂತೆ ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ವೀರಣ್ಣ ಮಂಠಾಳಕರ್ ರವರು ಭಾಜನರಾಗಿದ್ದಾರೆ. 

     ‌‌‌‌‌‌‌’ಆರ್ತನಾದ’ ಎಂಬ ಪದ ಕೇಳುತ್ತಲೆ ಏನೋ ಒಂಥರಾ ಮನಸ್ಸಿಗೆ ಕಸಿವಿಸಿ ಆಗುತ್ತದೆ. ಕರುಣೆಯ ಕಡಲು ಉಕ್ಕುತ್ತದೆ, ಅರಿವಿಲ್ಲದೆ ಕಂಬನಿ ಜಿನುಗುತ್ತದೆ. ಇದರೊಂದಿಗೆ ಹೃದಯಗಳ ಗುಪ್ತಗು ಸೇರಿದರೆ ಸಹೃದಯಿಗಳಿಗೆ ಇನ್ನೇನು ಬೇಕು. ಈ ಅಂಶಗಳನ್ನು ಒಳಗೊಂಡ ಗಜಲ್ ಗಳು ಹೆಚ್ಚಿನ ಜನರೊಂದಿಗೆ ಮಾತಿಗಿಳಿಯುತ್ತವೆ. ಸುಖನವರ್ ಶ್ರೀ ವೀರಣ್ಣ ಮಂಠಾಳಕರ್ ಅವರ ಗಜಲ್ ಗಳಲ್ಲಿ ಇವುಗಳ ಹೆಜ್ಜೆ ಗುರುತುಗಳನ್ನು ಕಾಣಬಹುದು. ವಿಶೇಷವಾಗಿ ಇವರ ಗಜಲ್ ಗಳಲ್ಲಿ ಪ್ರೀತಿಯ ವಿವಿಧ ಮಗ್ಗುಲಗಳೊಂದಿಗೆ ಹುಟ್ಟು, ಸಾವು, ಮಾತು, ಮೌನ, ಮನಸು, ಕನಸು, ಆಸೆ, ವಿನಯ, ತ್ಯಾಗ, ಸಮಾಜ, ರಾಜಕೀಯ…. ಮುಂತಾದ ವಿಷಯಗಳು ಮುಪ್ಪರಿಗೊಂಡಿವೆ. ಪ್ರೀತಿಯ ಇವರ ಗಜಲ್ ಗಳಲ್ಲಿ ‘ಸ್ಥಾಯಿಭಾವ’ ಹಾಗೂ ‘ಸಂಚಾರಿಭಾವ’ವಾಗಿ ಹರಿದಾಡಿದೆ.

ಹರೆಯಕೂ ಮನಸಿಗೂ ಇರುವ ಸಖ್ಯ ಪ್ರೀತಿಯ ಸಾಂಗತ್ಯ ಗಾಢವಾಗಿ ಬೆಳೆಸಿಕೊಳ್ಳಬೇಕು

ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದಿಲ್ಲ, ಶ್ರದ್ಧೆಯಿಲ್ಲದೆ ಕವಿತೆ ಮೂಡುವುದೇ ಇಲ್ಲ ಸಖಿ” 

ಈ ಮೇಲಿನ ಷೇರ್ ಅನುರಾಗದ ಅನುಬಂಧದ ಮೀಮಾಂಸೆಯನ್ನು ಪ್ರತಿಧ್ವನಿಸುತ್ತಿದೆ. ಪ್ರೀತಿಯ ಭಾವ ಮೊಳಕೆಯೊಡೆಯಲು ವಯಸ್ಸಿನ ಎಲ್ಲೆ ಇಲ್ಲ ಎಂಬುದು ಸಾರ್ವತ್ರಿಕವಾದರೂ ‘ಹದಿಹರೆಯದ ವಯಸ್ಸು’ ಎಂಬುದು ಪ್ರೀತಿಯ ಸೇತುವೆ ಎಂಬುದು ನಿರ್ವಿವಾದ. ಪ್ರೀತಿಯ ಸಾಂಗತ್ಯವಿಲ್ಲದೆ ಮನುಷ್ಯನ ಮನಸ್ಸು ಅರಳಲಾರದು. ಈ ಕಾರಣಕ್ಕಾಗಿಯೇ ಒಲವು ಎನ್ನುವುದು ಈ ಜಗದ ಪ್ರಶ್ನಾತೀತ ಪಿಸುಮಾತಾಗಿದೆ. ಹರೆಯದಲ್ಲಿ ಮನಸ್ಸು ಸದಾ ಹಚ್ಚ ಹಸಿರಾಗಿರುತ್ತದೆ. ಪ್ರೀತಿ ಚಿಗುರಲು ಇದೊಂದು ಫಲವತ್ತಾದ ವಯಸ್ಸು ಎಂಬುದನ್ನು ಸುಖನವರ್ ಶ್ರೀ ವೀರಣ್ಣ ಮಂಠಾಳಕರ್ ಅವರು ಸಾರುತ್ತ, ಪ್ರಕೃತಿಯಲ್ಲಿ ಹೂವು ಅರಳಬೇಕಾದರೂ ಕೂಡ ಪ್ರೀತಿಯ ಸಿಂಚನ ಬೇಕು. ಈ ಪ್ರಕೃತಿಯೂ ಸಹ ಪ್ರೀತಿಯ ಆಲಿಂಗನ ಕಟ್ಟಾಗಿ ಹಂಬಲಿಸುತ್ತಿದೆ ಎಂದಿದ್ದಾರೆ. ಇನ್ನೂ ಮುಂದುವರೆದು ಭಾವನೆಗಳ ಅಭಿವ್ಯಕ್ತಿ ಸಾಹಿತ್ಯದ ಕೃಷಿಗೆ ಶ್ರದ್ಧೆ, ಬದ್ಧತೆಯ ಅವಶ್ಯಕತೆ ಇದೆ ಎಂಬುದನ್ನು ಸಹೃದಯ ಓದುಗರ ಮನದ ಕದ ತಟ್ಟುವಂತೆ ಪ್ರಚುರಪಡಿಸಿದ್ದಾರೆ.

      ಹುಟ್ಟು-ಸಾವು ಎನ್ನುವ ಎರಡು ವಿಸ್ಮಯಗಳು ಅನಾದಿ ಕಾಲದಿಂದಲೂ ಮನುಕುಲವನ್ನು, ವಿಜ್ಞಾನವನ್ನೂ ಕಾಡುತ್ತ ಬಂದಿವೆ. ಒಂದು ಹಂತದಲ್ಲಿ ಮನುಷ್ಯ ಜನನದ ನೆಲೆ-ಸೆಲೆಯನ್ನು ಕಂಡುಕೊಳ್ಳಲು ಯಶಸ್ವಿಯಾಗಿದ್ದಾನೆ. ಆದರೆ..ಮರಣ ಮೃದಂಗದ ನಾದವನ್ನು ಕಂಡುಹಿಡಿಯಲು ವಿಫಲವಾಗಿದ್ದಾನೆ. ಇದನ್ನು ಸುಖನವರ್ ಮಂಠಾಳಕರ್ ಅವರು ತಮ್ಮ ಒಂದು ಷೇರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.

ಸತ್ತು ಹೋದ ಶವದ ಮುಂದೆ ಅತ್ತು ಕರೆದರೂ ಬರಲಿಲ್ಲ ಜೀವ ಹಿಂತಿರುಗಿ

ಮತ್ತೆ ಮತ್ತೆ ನೆನಪಿಸಿಕೊಂಡು ಅತ್ತು ಹಗುರಾದರು ಹೊರಳಾಡಿ ಮರುಮರುಗಿ”

ಮನುಷ್ಯನ ಬೂಟಾಟಿಕೆಯನ್ನು ಈ ಷೇರ್ ಗುರುತಿಸುತ್ತ, ನಿಸರ್ಗದ ಮುಂದೆ ಅವನ ಸ್ಥಾನ ಎಂಥದ್ದು ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಕಂಬನಿಯಿಂದ ಮನಸು ಹಗುರವಾಗಬಹುದೆ ಹೊರತು ಮಣ್ಣು ಪಾಲಾದ ಉಸಿರು ಮತ್ತೊಮ್ಮೆ ದೇಹವನ್ನು ಪ್ರವೇಶಿಸಲಾರದು ಎಂಬ ನಗ್ನ ಸತ್ಯ ಇದರಲ್ಲಿದೆ.

     ಹಲವು ಬೇಸಾಯಗಾರರು ಕನ್ನಡ ಮಣ್ಣಿನಲ್ಲಿ ಇಂದು ಗಜಲ್ ಕೃಷಿಯನ್ನು ತುಂಬಾ ಪ್ರೀತಿ, ಕಾಳಜಿಯಿಂದ ಮಾಡುತ್ತಿದ್ದಾರೆ. ಉತ್ತಮೋತ್ತಮ ಫಸಲನ್ನು ತೆಗೆಯುತ್ತಿದ್ದಾರೆ. ಈ ದಿಸೆಯಲ್ಲಿ ಗಜಲ್ ಗೋ ಶ್ರೀ ವೀರಣ್ಣ ಮಂಠಾಳಕರ್ ಅವರು ಗಜಲ್ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿದ್ದುಕೊಂಡು, ಹೆಚ್ಚು ಹೆಚ್ಚು ಮೌಲ್ಯಿಕ ಗಜಲ್ ಗಳನ್ನು ರಚಿಸಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಪ್ರೀತಿಯಿಂದ ಶುಭ ಕೋರುತ್ತೇನೆ.

ನನ್ನ ತಾಯಿ ಇನ್ನೂ ಬದುಕಿದ್ದಾಳೆ ನನಗೆ ಏನೂ ಆಗುವುದಿಲ್ಲ

ಮನೆಯಿಂದ ಹೊರಡುವಾಗ ಆಶೀರ್ವಾದ ಕೂಡ ನನ್ನೊಂದಿಗೆ ಇರುತ್ತದೆ”

ಮನವ್ವರ್ ರಾಣಾ

       ಚಿಂತೆಯ ಜಹನ್ನಮ್ ದಿಂದ ಜನ್ನತ್ ಕಡೆಗೆ ಮನಸು ಹೊರಳಲು ಇರುವ ದಾರಿಯೆಂದರೆ ಗಜಲ್ ದುನಿಯಾದಲ್ಲಿ ಮೈಮರೆಯುವುದು. ಹಾಗಂತ ಹೆಚ್ಚು ಮೈಮರೆಯುವಂತಿಲ್ಲ. ಕಾರಣ, ಸಮಯದ ಬೇಲಿಯನ್ನು ಕಡೆಗಣಿಸುವಂತಿಲ್ಲ. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಬಾಯ್….


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top