ಅಂಕಣ ಸಂಗಾತಿ
ಸಿನಿ ಸಂಗಾತಿ
ದಿ ಬೆಲ್ (ಕನ್ನಡ )ಕಿರುಚಿತ್ರ
ಅಸಹಾಯಕತೆಯ ಆರ್ತನಾದ
ದೇಗುಲ ಪ್ರವೇಶಿಸಿ ಗಂಟೆ ಬೆಲ್ ಹೊಡೆದಾಗ ಭಕ್ತಿ ಭಾವನೆ ಉದ್ದೀಪನಗೊಳ್ಳುತ್ತದೆ. ಮನೆಯ ಬಾಗಿಲ ಕರೆಗಂಟೆ ಅತಿಥಿಯ ಆಗಮನವನ್ನು ಸೂಚಿಸುತ್ತದೆ .ಇನ್ನೂ ಕಸದ ಗಾಡಿಗೆ ಬೆಲ್, ತಳ್ಳುವ ಗಾಡಿಗೆ ಬೆಲ್, ಹೀಗೆ ಹಲವು ಕಡೆ ಬೆಲ್ ಹಲವು ರೀತಿಯಲ್ಲಿ ಬಳಸಲ್ಪಡುತ್ತದೆ . ಅದೇ ಈ ಕಿರುಚಿತ್ರ ದಲ್ಲಿ “ಬೆಲ್ “ಬೇರೆ ರೂಪದ್ದು.
ಅನಾರೋಗ್ಯದಿಂದ ಮುದಿ ಜೀವ (ತಾಯಿ )ಹಾಸಿಗೆ ಹಿಡಿದಿದ್ದಾಳೆ .ಎದ್ದು ಓಡಾಡಲಾಗದ ಅಸಹಾಯಕತೆ, ಆಕೆಗೆ ಅನುಕೂಲವಾಗಲು ಬೆಲ್ ಒಂದನ್ನು ಮಂಚಕ್ಕೆ ಕಟ್ಟಿದ್ದಾರೆ. ಮಾತಾಡಲು ಅಶಕ್ತವಾದ ಆಕೆ ಬೆಲ್ ಹೊಡೆಯುವುದರೊಂದಿಗೆ ಮನೆಯವರ ಗಮನವನ್ನುತನ್ನೆಡೆಗೆ ಸೆಳೆಯುತ್ತಾಳೆ ಬೆಲ್ ಹೊಡೆದ ತಕ್ಷಣ ಆಕೆಯ ಮಗ ಓಡಿ ಬಂದು ಆಕೆಯನ್ನು ವಿಚಾರಿಸುತ್ತಾನೆ .ಆಕೆಯ ಬೇಕು ಬೇಡಗಳನ್ನು ತಿಳಿದು ಆರೈಕೆ ಮಾಡುತ್ತಾನೆ . ಇಷ್ಟೇ ಆದರೆ ಈ ಕಥೆಯಲ್ಲಿ ಏನು ವಿಶೇಷ ಇಲ್ಲ ಅಲ್ಲವೇ….
ಚಿತ್ರದ ಆರಂಭ ಹೀಗಲ್ಲ, ಈ ಕಿರು ಚಿತ್ರ ಆರಂಭವಾಗುವುದು ಯುವ ಜೋಡಿ ಒಂದು ತಾವು ಕೊಂಡುಕೊಂಡ ಮನೆಯ ಪ್ರವೇಶ ಮಾಡುವುದರೊಂದಿಗೆ, ಮನೆಯನ್ನು ಸೇರಿಕೊಂಡ ಮೊದಲ ದಿನವೇ ಯುವತಿಗೆ ಭಯಾನಕ ವಿಚಿತ್ರ ಅನುಭವಗಳಾಗುತ್ತವೆ. ಎರಡು ಮೂರು ದಿನಗಳಾಗುವಷ್ಟರಲ್ಲಿ ಭೂತ ಚೇಷ್ಟೆ ಗಳು ಪ್ರಾರಂಭವಾಗುತ್ತದೆ. ಭೂತ ಕತ್ತು ಹಿಸುಕಿ ಸಾಯಿಸಲು ಬರುವಂತಾಗುತ್ತದೆ .ಭೂತ ಚೇಷ್ಟೆಯಿಂದ ಭಯಭೀತಳಾದ ಯುವತಿ ಗಂಡ ಶ್ರೀಗೆ ತನ್ನ ಭಯಾನಕ ಅನುಭವ ತಿಳಿಸುತ್ತಾಳೆ, ಮೊದಲು ಅವಳ ಭಯವನ್ನು ಭ್ರಮೆಯೆಂದು ಅವನು ಸಮಜಾಯಿಸುತ್ತಾನೆ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಅನಿವಾರ್ಯವಾಗಿ ಅವರಿಬ್ಬರು ಮಾಂತ್ರಿಕಳ ಮೊರೆ ಹೋಗುತ್ತಾರೆ.
ಮಾಂತ್ರಿಕಳ ಪ್ರವೇಶದೊಂದಿಗೆ ಕಥೆಯೊಳಗೊಂದು ಕಥೆಯ ದರ್ಶನ . ಮಾಂತ್ರಿಕಳ ಕಣ್ಣಿಗೆ ಕಂಡ ದೃಶ್ಯಾವಳಿಗಳೇ ಬೆಲ್ ಕತೆಯ ತಿರುಳು .ಚಿತ್ರದ ನಿರ್ದೇಶಕರು ಇಲ್ಲಿ ಮತ್ತೊಂದು ಫ್ಲಾಶ್ ಬ್ಯಾಕ್ ಕಥೆಯನ್ನು ತೋರಿಸುತ್ತಾರೆ, ಅದುವೇ ಆಗಲೆ ನಾವು ಹೇಳಿದ ಮುದುಕಿಯ ಕಥೆ.
ಅಸಹಾಯಕ ಅಜ್ಜಿಗೆ ಅತಿ ಕಾಳಜಿ ಮಾಡುವ ಮಗ, ಮಗನ ಹೆಂಡತಿ ಚಾರು ಚಿತ್ರದ ಖಳನಾಯಕಿ, ತನ್ನ ಗಂಡನ ಎದುರು ಅತ್ತೆಯ ಬಗ್ಗೆ ಕಾಳಜಿ ತೋರಿಸುವ ಆಕೆ ಗೋಮುಖ ವ್ಯಾಘ್ರಳು, ತಾವು ಗಂಡ ಹೆಂಡತಿಯ ನಡುವೆ ಈ ವಯೋವೃದ್ದೆ ಅಡ್ಡಿ ಎಂಬುದೇ ಅವಳ ಭಾವನೆ, ಮೇಲೆ ಉಪಚರಿಸುವಂತೆ ಮುಖವಾಡ ಧರಿಸಿ ಒಳಗೆ ಹಿಡಿ ಶಾಪ ಹಾಕುತ್ತಾಳೆ.
ಗಂಡ ಕೆಲಸಕ್ಕೆ ಹೋದ ನಂತರ ಅತ್ತೆಯಿಂದ ಬರುವ ಬೆಲ್ ಕರೆ ಅವಳಿಗೆ ಅಸಹನೆ ಉಂಟು ಮಾಡುತ್ತದೆ, ಬೆಲ್ ಗಂಟೆ ಅವಳಲ್ಲಿ ರೋಷದ ದಾವಾಗ್ನಿಯನ್ನೇ ಹತ್ತಿಸುತ್ತದೆ. ಅತ್ತೆಯನ್ನು ಸಾಯುವಂತೆ ಹೊಡೆದು ಚಿತ್ರ ಹಿಂಸೆ ನೀಡುತ್ತಾಳೆ. ಇದು ಎಡಬಿಡದೆ ನಡೆಯುತ್ತದೆ, ಗಂಡನಿಗೆ ಈ ಘಟನೆಗಳ ಸುಳಿವು ಸಿಗುವುದಿಲ್ಲ.
ಚಿತ್ರದ ನಿರ್ದೇಶಕರು ಈ ಕಥೆಯನ್ನು ಮೊದಲ ಕಥೆಗೆ ಲಿಂಕ್ ಮಾಡುವುದು ಭೂತ ಚೇಷ್ಟೆ ಗಳ ರೂಪದಲ್ಲಿ, ಸೊಸೆಯಿಂದ ಚಿತ್ರ ಹಿಂಸೆಗೆ ಒಳಗಾಗಿ ಸಾವನ್ನಪ್ಪುವ ಅಜ್ಜಿ ಪ್ರೇತಾತ್ಮವಾಗಿ ಆ ಮನೆಯಲ್ಲಿಯೇ ಉಳಿಯುತ್ತಾಳೆ, ತನ್ನ ಮಗನ ಬರುವಿಕೆಗಾಗಿ ಕಾಯುತ್ತಾಳೆ. ತನ್ನ ಸೊಸೆಯ ಮೇಲಿನ ಕೋಪವನ್ನು ಆ ಮನೆಗೆ ವಾಸಕ್ಕೆ ಬರುವ ಹೆಣ್ಣು ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಾಳೆ ಅವರಿಗೆ ಕಾಟ ಕೊಡುತ್ತಾಳೆ.
ಇಲ್ಲಿ ಅತ್ತೆಯನ್ನು ಹಿಂಸಿಸಿದ ಸೊಸೆ ತನ್ನ ಜೀವನದ ಮುಂದಿನ ದಿನಗಳನ್ನು ಹಾಸಿಗೆ ಹಿಡಿದು ತಾನು ಬೆಲ್ ಹೊಡೆಯುತ್ತಾ ಸಹಾಯದ ನಿರೀಕ್ಷೆಯಲ್ಲಿರುವಂತೆ ಚಿತ್ರಿಸುವ ಮೂಲಕ ಪಾಪಕ್ಕೆ ತಕ್ಕ ಶಿಕ್ಷೆ ಎಂಬ ನಿಲುವನ್ನು ನಿರ್ದೇಶಕರು ಅಭಿವ್ಯಕ್ತಿಸಿದ್ದಾರೆ. ಈ ಕಿರುಚಿತ್ರ ನೈಜ ಘಟನೆಗಳನ್ನಾಧರಿಸಿದ್ದು.
ಇಲ್ಲಿ ಬರುವ ಭೂತ ಪ್ರೇತ ಅತೀಂದ್ರಿಯ ಶಕ್ತಿಗಳನ್ನು ಹೊರತುಪಡಿಸಿ ಚಿತ್ರ ನೋಡಿದರೆ ಇದೊಂದು ಮನೆಮನೆಯ ಕಥೆಯಂತೆ ಭಾಸವಾಗುತ್ತದೆ .ಒಟ್ಟು ಕುಟುಂಬಗಳು ಕೊನೆಗೊಂಡು ಸ್ವಾರ್ಥ ತುಂಬಿರುವ ಇಂದಿನ ಸಮಾಜದಲ್ಲಿ ಮನೆಯಲ್ಲಿರುವ ಹಿರಿಯ ಜೀವಗಳನ್ನು ಮಕ್ಕಳು ಅಸಡ್ಡೆ ಮಾಡುವುದು ಸಾಮಾನ್ಯ ಪಿಡುಗಾಗಿದೆ .
ತಮ್ಮ ಮುದಿ ತಂದೆ ತಾಯಿಗಳನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮಗಳಿಗೆ ಮಕ್ಕಳು ಸಾಗು ಹಾಕುತ್ತಿದ್ದಾರೆ .ಹಾಗಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ .ಈ ಅಂಶವನ್ನು ಬಳಸಿಕೊಂಡು ಈ ಕಿರು ಚಿತ್ರವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ .ಅಸಹಾಯಕ ತಾಯಿ ಹಿಂಸೆ ತಡೆಯಲಾರದೆ ಕಣ್ಣೀರಿಡುವ ದೃಶ್ಯಗಳು ಮನಕರಗುವಂತಿವೆ .ಸೊಸೆಯ ಕ್ರೌರ್ಯ ದ ದೃಶ್ಯಗಳು ಬೆಚ್ಚಿ ಬೀಳುವಂತಿವೆ.
ಕೇವಲ ಒಂದು ಮನೆಯಲ್ಲಿ ಕತ್ತಲು ಬೆಳಕಿನ ನಡುವೆ ಕಡಿಮೆ ಪಾತ್ರಗಳಲ್ಲಿ ಕಡಿಮೆ ಖರ್ಚಿನಲ್ಲಿ ಚಿತ್ರವನ್ನು ತೆರೆಗೆ ತಂದಿದ್ದಾರೆ. ಚಿತ್ರಕ್ಕೆ ಸಂಗೀತ ,ಛಾಯಾಗ್ರಹಣ ಪೂರಕವಾಗಿದೆ.
ಭೂತ ಚೇಷ್ಟೆಗಳು, ದೆವ್ವ ಬಿಡಿಸುವುದು ಇವೆಲ್ಲವನ್ನೂ ಪಕ್ಕಕ್ಕಿಟ್ಟು ಮಾನವೀಯ ನೆಲೆಯಲ್ಲಿ ಚಿತ್ರವನ್ನು ಗಮನಿಸುವುದು ಅವಶ್ಯಕವೆನಿಸುತ್ತದೆ . 20 ನಿಮಿಷಗಳ ಕಿರು ಚಿತ್ರ ಮುಗಿದಾಗ ಆಸಹಾಯಕ ಗಂಟೆಯ ಶಬ್ದ ಒಂದು ಕ್ಷಣ ನಮ್ಮನ್ನು ಅಲ್ಲಾಡಿಸುತ್ತದೆ.
ಮನೆಯ ಹಿರಿಯ ಜೀವಗಳನ್ನು ಹೆಚ್ಚು ಕಾಳಜಿಯಿಂದ ತುಸು ಸಹನೆಯಿಂದ, ತುಸು ಪ್ರೀತಿಯಿಂದ ಸಲಹಿದರೆ ಮಾತ್ರ ಅವರ ಕೊನೆಯ ದಿನಗಳು ಸಹನೀಯ ಎಂಬುದು ಚಿತ್ರದ ಸಂದೇಶ. ಕಿರುಚಿತ್ರ ಬೆಲ್ ಯೂಟ್ಯೂಬ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ತಾರಾಗಣ -ಆಶಾ ರಾಣಿ
ಭವಾನಿ ಪ್ರಕಾಶ್
ಅಶ್ವಿನ್ ಹಾಸನ್
ಮನೋಜ್ ಪುತ್ತೂರ್
ರಮ್ಯಕೃಷ್ಣ
ಹೆಚ್ ಎಂ ಟಿ ವಿಜಯ್
ಮುಕ್ತ ಪ
ಪುಷ್ಪದಂತ್
ಜಾಗೃತಿ
ನಿರ್ದೇಶನ- ರಘುಕುಮಾರ್ ಓ .ಆರ್
ನಿರ್ಮಾಪಕರು -ತಿಮ್ಮರಾಜು .ಲಕ್ಷ್ಮಿಕಾಂತ್ ಓ .ಆರ್ ರಘುಕುಮಾರ್ ಓ ಆರ್.
ಛಾಯಾಗ್ರಹಣ -ರಿಷಿಕೇಶ್
ಸಂಭಾಷಣೆ -ಶೈಲೇಶ್ ರಾಜ್
ಶಬ್ದ ವಿನ್ಯಾಸ -ರಾಜನ್
ಯೂಟ್ಯೂಬ್ ನಲ್ಲಿ ಲಭ್ಯ.
ಕುಸುಮ ಮಂಜುನಾಥ್