ಅಂಕಣ ಸಂಗಾತಿ
ನೆನಪಿನದೋಣಿಯಲಿ
ನಾವು ಸಾಕಿದ ಪ್ರಾಣಿ ಮಾತಾಡುವಂತಿದ್ದರೆ
ದೃಶ್ಶ್ಯ-1
ಮೊದಲಿಗೆ ನನ್ನ ತಂಗಿ ವೈಶಾಲಿ ಮನೆಯ ನಾಯಿ ಲಕ್ಕಿ
ನಾನು ತಂಗಿಯ ಮನೆ ಮುಂದೆ ನಿಂತು ಗೇಟಿನ ಚಿಲಕ ಭದ್ರವಾಗಿದೆಯಾ ಖಾತ್ರಿ ಪಡಿಸಿಕೊಂಡು ವೈಶಾಲಿ ವೈಶಾಲಿ ಅಂತ ಕೂಗ್ತೀನಿ. ತೆರೆದ ಬಾಗಿಲಿಂದ ಗೋಲ್ಡನ್ ರಿಟ್ರೈವರ್ ಲಕ್ಕಿ ಓಡಿ ಬರುತ್ತೆ. ಗೇಟಿನ ಮೇಲೆ ಎರಡು ಕಾಲು ಇಟ್ಟುಕೊಂಡು “ಬಾಮ್ಮಾ” ಅನ್ನತ್ತೆ. ಎದ್ನೋ ಬಿದ್ನೋ ಅಂತ ಹಿಂದಕ್ಕೆ ಓಡಿ “ಯಾರಾದ್ರೂ ಕಟ್ಟಿ ಹಾಕ್ತಿರಾ ಲಕ್ಕಿನಾ ಅಥವಾ ವಾಪಸ್ ಹೋಗ್ಲಾ “ಜೋರು ದನಿಯಲ್ಲಿ ನನ್ನ ಧಮ್ಕಿ .ಅಷ್ಟರಲ್ಲಿ ಎದುರುಮನೆ ಅಜ್ಜಿ ಆಚೆ ಬರ್ತಾರೆ .”ಈಗ ಬಂದ್ರಾ ಚೆನ್ನಾಗಿದ್ದೀರಾ ” ಅಂತಾರೆ. ಪಕ್ಕದ ಮನೆ ಕಿಟಕಿಯಿಂದ ಮುಖ ಇಣುಕಿ ಮರೆಯಾಗುತ್ತದೆ .ಅಷ್ಟರಲ್ಲಿ ಬೆಲ್ಟ್ ಬೀಳುತ್ತೆ ಲಕ್ಕಿ ಕತ್ತಿಗೆ. ಈಗ ಲಕ್ಕಿ ಸ್ವಗತ” ಅಲ್ಲ ಮೂರು ವರ್ಷ ಆಯ್ತು . ಇನ್ನುೂ ನನ್ನ ಫ್ರೆಂಡ್ ಮಾಡ್ಕೊಳ್ಳಿಲ್ಲ ಇವಳು . ಇನ್ನು ನನ್ನ ಕತ್ತಿಗೆ ಚೈನು. ರೂಮಿನಲ್ಲಿ ಬಂಧನ. ಸಾಕಪ್ಪಾ !ಎಷ್ಟು ಹೊತ್ತು ಇರ್ತಾಳೋ ಬೇಗ ಹೋದರೆ ಸಾಕು ನಾನು ಫ್ರೀಯಾಗಿ ಓಡಾಡಿಕೊಂಡು ಇರಬಹುದು .ಅವಳ್ಯಾಕೆ ಹೀಗೆ ಆಡ್ತಾಳೆ ಅದ್ಯಾವಾಗ ಬುದ್ಧಿ ಕಲಿತಾಳೋ. ಅಷ್ಟರಲ್ಲಿ ಈ ಕಡೆ ಪಕ್ಕದ ಮನೆ ಪ್ರೇಮಾ “ಸುಜಾತಾನಾ ಲಕ್ಕಿ ಬೊಗಳುತ್ತಿತ್ತಲ್ಲ ಅಂತ ನೋಡಿದೆ ಏನೂ ಅಪರೂಪ” ಲಕ್ಕಿ ಉವಾಚ “ಸದ್ಯ ಇವಳು ಅಪರೂಪಕ್ಕೆ ಬಂದ್ರೇನೇ ಇಷ್ಟು ಕಷ್ಟ ದಿನ ಬಂದ್ರೆ ನನಗೆ ಮತ್ತಷ್ಟು ಕಷ್ಟ ಕೋಣೆ ಬಂಧನ. ಅಮ್ಮ ತಾಯಿ ಅಪರೂಪಕ್ಕೇ ಬಾ ನೀನು. ಬೌಬೌ ಬೌಬೌ.
ರೂಮಿನ ಬಾಗಿಲು ಮುಚ್ಚಿತ್ತು
ತೆರೆ ಬಿದ್ದಿತು.
ದೃಶ್ಯ ೨
ಪಕ್ಕದ ಮನೆ ನಾಯಿ ರಾಮೂ
ಅದಕ್ಕೆ ನನ್ನವರು ದಿನಾ ಎರಡು ತುಂಡು ಬ್ರೆಡ್ ಕೊಡುವ ರೂಢಿ .ಕೈಯಲ್ಲೇ ತಿನ್ನಿಸ್ತಾರೆ . ಅವರು ಊರಲ್ಲಿ ಇಲ್ಲದಿದ್ದರೂ ಈ ರಿವಾಜು ತಪ್ಪಬಾರದು . ಊರಿಗೆ ಹೋದಾಗ ಬೆಳಗ್ಗೆದ್ದು ಫೋನು ಮಾಡಿ “ನೀನು ಕಾಫಿ ಕುಡಿದ್ಯಾ” ಅನ್ನಲ್ಲ “ರಾಮುಗೆ ಬ್ರೆಡ್ ಕೊಟ್ಯಾ” ಅಂತಾರೆ. ಅದಕ್ಕೇ ಅವರು ಕೇಳುವ ಮೊದಲೇ ಹಾಕಿ ಕರ್ತವ್ಯ ಮುಗಿಸ್ತೀನಿ .ಎರಡು ಬ್ರೆಡ್ನ ನಾಲ್ಕು ಚೂರು ಮಾಡಿ ಕಾಂಪೌಂಡ್ ತುದಿಯಲ್ಲಿ ನಿಂತು ಶಾರ್ಟ್ಪುಟ್ ಎಸೀತೀನಿ ನೋಡಿ. ಆಗ ರಾಮು ಉವಾಚ ಗುರ್ ಗುರ್ರಾವ್ ” ಇದೇನಪ್ಪಾ ಒಳ್ಳೆ ನಾಯಿಗೆ ಎಸೆದ ಹಾಗೆ ಎಸೀತಾಳೆ. ಹತ್ತಿರ ಕರೆದು ಮಾತಾಡಿಸಿ ತಿನ್ನಿಸಿದ್ರೆ ಇವಳ ಗಂಟು ಸವಿಯುತ್ತಾ? ಅಹಂಕಾರ! ಇವಳು ಎಸೊ ನಾನು ಆರಿಸಿಕೊಂಉ ತಿನ್ಬೇಕಾ. ಆ ಅಂಕಲ್ಲೇ ಸರಿ ಅದು ಯಾವಾಗ ಬರ್ತಾರೋ ಊರಿಗೆ.” ಅಪರೂಪಕ್ಕೆ ಪಕ್ಕದ ಮನೆ ಗೇಟ್ ತೆಗೆದಾಗ ಗುರುತೇ ಇರದವರ ಹಾಗೆ ಗುರ್ ಅನ್ನೋದು ಪಕ್ಕದ ಮನೆಯಾಕೆ “ಏ ಯಾಕೋ ರಾಮು ಪಕ್ಕದ ಮನೆ ಆಂಟಿ ಅಲ್ವೇನೋ” ಅನ್ನೋದು. ನಾನು ಹೋಗೋದೇ ಹಬ್ಬದಲ್ಲಿ ಅರಿಶಿನ ಕುಂಕುಮಕ್ಕೆ .ಚೆನ್ನಾಗಿ ಡ್ರೆಸ್ ಮಾಡ್ಕೊಂಡ್ ರೇಷ್ಮೆ ಸೀರೆಯಲ್ಲಿ. ದಿನ ಹಳಸಲು ಮುಖ ನೈಟಿ ನೋಡಿ ಅಭ್ಯಾಸ ಅದಕ್ಕೆ ಪಾಪ ಗುರುತೇ ಸಿಕ್ಕಿಲ್ಲ .
ದೃಶ್ಯ ೩;
ಮನೆ ಬಳಿ ಬರುವ ಹಸು
ಒಂದು ಕಂದು ಬಿಳಿಯ ಎತ್ತರದ ಹಸು ಮನೆ ಮುಂದೆ ಬರುತ್ತೆ . ಹಣ್ಣಾದ ಬಾಳೆಹಣ್ಣು ಶುಕ್ರವಾರವಾದರೆ ಅಕ್ಕಿ ಬೆಲ್ಲ ಕೊಟ್ಟು ಕಣ್ಣಿಗೊತ್ತಿ ಕೊಳ್ಳುವ ವಾಡಿಕೆ. ಅಫ್ ಕೋರ್ಸ್ ನಮ್ಮವರು ಜೊತೆಯಲ್ಲೇ ಇರಬೇಕು ಬಾಡಿಗಾರ್ಡ್ ಆಗಿ. ನಸುಕಿನಲ್ಲೇ ಒಂದು ರೌಂಡ್ ಬಂದು ಬೇಲಿಯೊಳಗಿನ ಗಿಡಗಳಿಗೆ ಬಾಯಿ ಹಚ್ಚುತ್ತೆ .ಕೋಲು ಹಿಡಿದು ತೋರಿಸಿ ಬರೀ ಹೆದರಿಸೋದು. ಹೊಡಿಯೋಕೆ ನನಗೆ ಧೈರ್ಯ ಇಲ್ಲ ಅಂತ ಅದಕ್ಕೆ ಗೊತ್ತಿಲ್ಲ. ಪ್ಲೀಸ್ ನೀವು ಹೇಳ್ಬೇಡಿ. ಆವಾಗ ಅದು ಅಂದ್ಕೊಳ್ಳೋದು ಎನ್ ಸ್ವಾರ್ಥಿ ನಪ್ಪ ಇವಳಿಗೆ ಬೇಕಾದಾಗ ಕರೆಯೋದೇನು ಹಣ್ಣು ಅಕ್ಕಿ ಬೆಲ್ಲ ಕೊಡೋದೇನು. ನನಗೆ ಬೇಕಾದಾಗ ಬಂದು ಗಿಡ ತಿಂದ್ರೆ ಕೋಲು ಹಿಡಿದು ಹೆದರಿಸಿಕೊಂಡು ಬರ್ತಾಳಲ್ಲ.
ಮತ್ತೆ “.ಬೆಳಿಗ್ಗೆ ವಾಕಿಂಗ್ ಹೋಗುವಾಗ ಬೀದಿ ಕೊನೆಯಲ್ಲಿ ನಿಂತು ಓರೆಗಣ್ಣಿನಲ್ಲಿ ನೋಡ್ತಾ ಇರುತ್ತೆ . ಆಗ ಅದು ಅಂದ್ಕೊಳ್ಳೋದು “ಹೋಗು ಹೋಗು ನೀನಿದ್ದರೆ ತಾನೇ ಕೋಲು ಹಿಡಿದು ಹೊಡೆಯೋಕೆ ಬರೋದು. ನೀನು ವಾಕಿಂಗ್ ಮುಗಿಸಿ ಬರೋದ್ರಲ್ಲಿ ನಾನು ತಿಂಡಿ ಮುಗಿಸ್ತೀನಿ ಹೊಸ ಚಿಗುರು ಗಿಡಗಳು ತಿಂದು ನಿಧಾನಕ್ಕೆ ಬಾ “ಅಂತ .
ಇವತ್ತಿಗೆ ಇಷ್ಟು ಸಾಕು ಹಲ್ಲಿ ಇರುವೆ ಜಿರಲೆಗಳ ಸಂಭಾಷಣೆ ಮುಂದಿನ ಲೇಖನದಲ್ಲಿ ಮುಂದುವರಿಸೋಣ .ಬರ್ಲಾ ಅಲ್ಲಿ ಗೇಟ್ ಹತ್ರ ಶಬ್ದ. ಹಸು ಬಂದಿರಬೇಕು ಓಡಿಸಕ್ಕೆ ಕೋಲು ಹಿಡಿದು ಹೊರಟೆ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು