ಅತ್ತರಿನ ಭರಣಿ- ಜ್ಯೋತಿ ಬಿ.ದೇವಣಗಾವ

ಪುಸ್ತಕ ಸಂಗಾತಿ

ಜ್ಯೋತಿ ಬಿ.ದೇವಣಗಾವ ಗಜಲ್ ಸಂಕಲನ

ಅತ್ತರಿನ ಭರಣಿ

ಈಸ್ ಅತ್ತರಕೇ ಶೀಷೆಕೋ

ಅಪನೇ ದಿಲ್ ಸೇ ಖೋಲೋ..!

ಇಸ್ಕ್ ಸೇ ಖುಶ್ಬೂ ಲೋ..!

ಮೊಹಬತ್ತ ಸೇ ಮಜಾ ಲೋ..!

ಬಾತ್ ಬನ್ ಜಾಯೇಗಿ

ರಂಗ ಜಮ್ ಜಾಯೇಗಿ..!!

ಸಗರನಾಡಿನಲ್ಲಿ ಈಗ ಸುರಗೃಹದಿಂದಿಳಿದ ಸುಗಂಧದ ಭರಣಿ ಪುಸ್ತಕ ರೂಪದಲ್ಲಿ  ಪ್ರಕಟಗೊಂಡಿದೆ ಸುಮಧುರ ಗಜಲ್ ಗಳಿಂದ ಕೂಡಿದ ಅತ್ತರಿನ ಭರಣಿ ಓದುಗರ ಮುಂದೆ ಉರುಳಿ ಬಿದ್ದು ಹಿಂದೊಮ್ಮೆ ಋಷಿ ಮುನಿಯ ಕಮಂಡಲದಿಂದ ಊರುಳಿ ಬಿದ್ದ ಗಂಗೆ ನದಿಯಾಗಿ ಹರಿದಂತೆ ಸಗರನಾಡಿನಲ್ಲಿ

ಚಿಜ್ಯೋತಿ”ಯೂ ಬೆಳಕಾಗಿ ಇಂದು ಎಲ್ಲರ ಮನದಲ್ಲಿ ಹರಿಯುತ್ತಿದೆ.

ನಮಗೆ ಈ ಪುಸ್ತಕ ಓದುತ್ತಾ ಹೋದಂತೆ ಈ ಪುಸ್ತಕ ನಿಜಕ್ಕೂ ಮಿರ್ಜಾ ಗಾಲೀಬನಿಂದ ಹೆಕ್ಕಿ ತಂದ ಗಂಧದ ಪರಿಮಳವಿದೆ ಅನಿಸುವುದು ಇದರಲ್ಲಿ ಅಮೀರ ಖುಸ್ರೋವಿನ ಸುಶ್ರಾವ್ಯತೆಯಿದೆ,ಖಲೀಲ್ ಗಿಬ್ರಾನ್ ನ ಅನುಭಾವದ ಖರ್ಜೂರದ ಹೂರಣ ತುಂಬಿದ ಹೋಳಿಗೆಯ ಸವಿರುಚಿಯಿದೆ ಹಾಗೆ ಕರುನಾಡಿನ ಅಕ್ಕ ಮಹಾದೇವಿಯಂತೆ ಪ್ರಪಂಚದೊಳಿದ್ದು ಪಾರಮಾರ್ಥ ಗೆದ್ದು ಕದಳಿಯನ್ನು ಸೇರುವ ಕಕ್ಕುಲಾತಿಯಿದೆ.

ಅತ್ತರಿನ ಭರಣಿಯಲ್ಲಿ ಬಂಧಿಯಾಗಿರುವ ಶಬ್ಧಗಳ ಸುಗಂಧವನ್ನು ಮಧುರಾತೀತ ಮಧುರವಾಗಿ ಆಘ್ರಾಣಿಸಿದರೇ ಇದರಲ್ಲಿ ಲೈಲಾಳ ಪ್ರೇಮದ ಕೋಲ್ಮಿಂಚಿದೆ..

ಅದು ನಿಮಗೆ ಕಾಣುವಷ್ಟರಲ್ಲೇ ಮಜ್ನುವಿನ ದುಃಖದ ಆಲಾಪವೂ ಗುಯ್ಯಗುಡುವುದು ಕೂಡಾ ಕೇಳುವದು.. ರೋಮಿಯೋ- ಜೂಲಿಯಟ್ ಕೂಡಿ ಹೂ ಬಿಸಿಲಿನಲ್ಲಿ ಹಾಡಿದ ಗಾನ ಗುಂಜನಗಳ ಮಾಧುರ್ಯವಿದೆ..

ಉರ್ದು ಕವಿಗಳಿಂದ ಕಸಿದುಕೊಂಡ ಕಸ್ತೂರಿ ಮೆಂತೆ ದೇವದಾಸನಿಂದ ಪಡೆದ ಎರವಲು ದಾಲಚಿನ್ನೆ

ಪದ್ಮಾವತಿಯನ್ನು ಪಡೆಯಲು ಹಪಹಪಿಸಿದ ಅಲ್ಲಾವುದ್ದೀನ್ ಖಿಲ್ಜಿಯ ಖಿನ್ನತೆಯಂತಿರವ ಬೆಳ್ಳೂಳ್ಳಿಯ ಘಾಟು ವಾಸನೆ ಮೂಗಿಗೆ ಬಡಿಯುವದು ಹಾಗೆಯೇ

ಖ್ವಾಜ ಬಂದೇನವಾಜರ ದರ್ವಾಜದ ಮುಂದೆ ಫಕೀರನೊಬ್ಬ ದೈವತ್ವವನ್ನು ಹುಡುಕಿದಂತೆ ಆಶೆಯ ಕಣ್ಣುಗಳು ಚಿಜ್ಯೋತಿಯೂ ಬೆಳಕಿನಲ್ಲಿ ಸಾಗುತ್ತಾ ಹೋಗುವವು.

ತತ್ವಜ್ಞಾನಿಗಳು ಮಾನವ ಬದುಕು ಒಂದು ಯಾತನಾದಾಯಕವೆಂದರೇ ಇನ್ನೂ ಕೆಲವರು ಮಾನವ ಬದುಕು ಅತೀ ಸುಂದರವೆಂದರು.

ಇವೆರಡರ ನಡುವೆ ನಮಗೆ ನಿಜವಾಗಲೂ ಅಳೆದು ತೂಗಿ ನೋಡಿದರೇ ನಮಗೆ ನಮ್ಮ ಜೀವನದುದ್ದಕ್ಕೂ ಬರೀ ಸಂಘರ್ಷಗಳೇ ಕಾಣುವವು.ಮಾನವನ ಬದುಕಿನಲ್ಲಿ ಕ್ಷಣ ಭಂಗುರದಿಂದಾಗುವ ಘಟನೆಗಳು ನಮ್ಮ ಇಡೀ ಜೀವನದ ಚಿತ್ರಣಗಳನ್ನು ಬದಲಾವಣೆ ತರುತ್ತವೆ ಎನ್ನುವುದಕ್ಕೆ ಇತಿಹಾಸದಲ್ಲಿ ನಮಗೆ ಅನೇಕ ಉದಾಹರಣೆಗಳೂ ಸಿಗುತ್ತವೆ ಅದರಲ್ಲಿ ಬಾಲಕ ದೃವನಿಂದ ಹಿಡಿದು ಅಕ್ಕ ಮಹಾದೇವಿಯವರೆಗೂ ನಮಗೆ ದಾರಿದೀಪವಾಗಬಲ್ಲ ಅನೇಕ ದೃಷ್ಟಾಂತಗಳು ಉದಾಹರಣೆಗಳಿವೆ….

ಗಜಲ್ ೦೧) ಮೂರನೇ ಮತ್ತು ನಾಲ್ಕನೇ ದ್ವೀಪದಿಯ ಸಾಲಿನಲ್ಲಿ ಅವು ಹೀಗಿವೆ

ಇವನು ಅನುರಾಗದ ಸವಿಫಲ ಉಣಲಿಕ್ಕೆ ದಾರಿ ನೋಡುವನು

ಇವಳೋ ಅನುಭಾವದ ಮೇರುಗಿರಿ ಏರುತಿಹಳು ತಕರಾರಿಲ್ಲದೆ

ಕೊಟ್ಟು ಪಡೆವ ಸುಂದರ ದಾಂಪತ್ಯ ಸವಿ ಬಯಸುವನವನು…

ಅವಳು ಮಾಯ ಮದ್ದಳೆ ಸದ್ದಡಗಿಸಿ ಸಾಗಿಹಳು ಕರಾರಿಲ್ಲದೆ…

ಇಳೆಯ ಆಳರಸ ಮೋಹ ಪಾಶದಲಿ ಸಿಲುಕಿಹನು ಚಿಜ್ಯೋತಿ

ದಿವ್ಯಾಂಬರಧರಿಯೂ ಕದಳಿಯೆಡೆ ಸಾಗಿಹಳು ಆಯಾಸವಿಲ್ಲದೇ

ನಾವು ಪ್ರಾಂಜಲ ಮನಸಿನಿಂದ ನಮ್ಮಲ್ಲಿ ಅರಿವು ಮೂಡಿಸಿಕೊಂಡಾಗ ನಮ್ಮ ಮನಸಿನ ಮಾತುಗಳು ಎಷ್ಟೇ ಗಟ್ಟಿಯಾಗಿ ಮನಸಿನಲ್ಲಿಟ್ಟುಕೊಂಡರು ಸಹ ಅವು ನಾಲಿಗೆ ಮೇಲೆ ಒಮ್ಮಿಲೊಮ್ಮೆ ಬರಲೇಬೇಕು. ಚಿಜ್ಯೋತಿಯಾಗಿ ಬರೆದಿರುವ ಲೇಖಕಿಯರು ಅಕ್ಕನ ಬದುಕಿನ ಕುರಿತು ಚಿತ್ರಣದ ಹಿಂದಿರುವ ತಮ್ಮ ಮನಾದಾಶೆಯ ಇಂಗಿತವನ್ನು ನಿರ್ಭಿಡೆಯಾಗಿ ಯಾರು ಒಪ್ಪಲಿ ಬಿಡಲಿ ಅತ್ತರಿನ ಭರಣಿಯ ಮೂಲಕ ಹೊರ ಸೂಸಿದ್ದಾರೆ.

ನಿರ್ಮೋಹ ವ್ಯಾಮೋಹ ಸಂಘರ್ಷಿಸುತ್ತವೆ ಅರ್ಥವಿಲ್ಲದೆ ಎನ್ನುವ ಮೊದಲ ಸಾಲಿನ ಬರಹ ಓದುವಾಗಲೇ ಗಕ್ಕೆಂದು ಓದುಗರ ಗಮನ ಸೆಳೆಯುತ್ತದೆ.ಮೇಲಿರುವ ಭಗವಂತ ಬಾಳಪಥದಲ್ಲಿ ನಮಗಾಗಿ ಒಂದು ಪಾತ್ರ ಕೊಟ್ಟಿದ್ದಾನೆ ಅದು ಇಷ್ಟವಿದ್ದರೂ ನಟಿಸಬೇಕು ಇಷ್ಟವಿಲ್ಲದಿದ್ದರೂ ನಟಿಸಬೇಕು ಅದು ನಮ್ಮ ಬದುಕಿನ ಅನಿವಾರ್ಯತೆಯೂ ಹೌದು ಆದರೆ ನಮ್ಮ ಬದುಕಿನ ಕುರಿತು ನಮಗೇ ಜಿಜ್ಞಾಸೆ ಇರಬೇಕಲ್ಲವೇ..? ನಾವು ಇಲ್ಲಿ ಏತಕ್ಕಾಗಿ ಬಂದಿದ್ದೇವೆ..? ಇಲ್ಲಿ ನಾವು ಏನ್ನನ್ನು ಪಡೆಯಬೇಕು..!  ಇಲ್ಲಿ ನಾವು ಏನನ್ನು ಬೀಡಬೇಕು..! ನಾವು ಯಾವ ಶಾಶ್ವತೆಯನ್ನು ಪಡೆಯಬೇಕು..! ಎಂಬುವದರ ಜೊತೆಗೆ ತನ್ನ ಅಚಲವಾದ ನಂಬಿಕೆ ಭಗವಂತನಿಗಾಗಿ ಸರ್ವಸ್ವವನ್ನೂ ಅರ್ಪಣೆಯನ್ನು ಮಾಡಿದ ಅಕ್ಕ ಮಹಾದೇವಿಯ ಅನುಭೂತಿ ಪಡೆದು ತಮಗೆ ತಾವು ಅರಿವು ಮೂಡಿಸಿಕೊಳ್ಳುವುದಿದೆಯಲ್ಲ ಅದು ಕಷ್ಟಕರವಾದ ಮಾತು ಲೇಖಕಿಯವರು ತಮ್ಮ ಸುಂದರವಾದ ಪುಸ್ತಕದಲ್ಲಿ ಪ್ರಪಂಚ ಮತ್ತು ಪಾರಮಾರ್ಥದ ಅನುಭಾವವನ್ನು ಅತೀ ಉತ್ಕೃಷ್ಟ ಪದಗಳಲ್ಲಿ ಹದವಾಗಿ ಲಯಬದ್ದತೆಯ ಅನುಸಾರ ಗಜಲ್ ಹಣೆದಿದ್ದಾರೆ ಇದರಲ್ಲಿ ಯಾವ ಸಿಕ್ಕು ಗೊಂದಲಗಳಿಲ್ಲ ಎಲ್ಲವೂ ಮಾಗಿಹೋಗಿ ಬದುಕಿನ ಅನುಭವ ಪಡೆದ ಋಷಿ ಕನ್ಯೆಯೂ ತನ್ನ ನವಿರಾದ ಜಡೆಯ ಮೇಲೆ ಕೈ ಎಳೆದಂತೆ ಪದಗಳನ್ನು ಹಣೆದು ಪದಪುಷ್ಪಗಳನ್ನು ಪದೇ ಪದೇ ಓದುವಂತೆ ಪೋಣಿಸಿದ್ದಾರೆ.ಇಲ್ಲಿಂದಲೇ ಶುರುವಾಗುವುದು ಜಾಸ್ಮಿನ ಮಲ್ಲಿಗೆಯ ಭರಣಿಯ ಸುವಾಸಿತ ಘಮಲು….🌹

ಈ ಜಗತ್ತು ಎಷ್ಟೊಂದು ಅಮಾಯಕರಿಂದ ಕೂಡಿದಿಯೋ ಅಷ್ಟೊಂದು ಖೂಳರಿಂದ ದುರ್ಮಾಗಿಗಳಿಂದ ಕೂಡಾ ತುಂಬಿ ತುಳುಕುತ್ತಿದೆ.ಇಲ್ಲಿ ನಂಬಿಕೆ ಎನ್ನುವ ಜಾಲದಿಂದ ಹಗ್ಗ ಬಿಗಿಯುವರು ಈ ಖೂಳ ದುರ್ಮಾಗಿಗಳು ಸತ್ಯದ ಕತ್ತನ್ನು ಹಿಸಕುತ್ತ ಗರಗಸದಿಂದ ಕೊಯ್ದು ಹಾಕುತ್ತ ನರಕಲೋಕದ ಯಮದೂತರಗಿಂತ ಕಡೆಯಾಗಿ ವರ್ತಿಸುವರು.ಇಲ್ಲಿ ನಿತ್ಯವು ಸತ್ಯದ ಹತ್ಯೆ ಮಾಡುವ ಹಿಂಡು ದೂರ್ತರ ದಂಡನ್ನು ಲೇಖಕಿಯರು ತಮ್ಮ ಬದುಕಿನ ಅನುಭಾವದ ಮೂಷೆಯಲ್ಲಿ  ಗಜಲ್ ೦೬ರಲ್ಲಿ ಹೀಗೆ ದಂಡಿಸುತ್ತ ಬರೆದಿದ್ದಾರೆ.

*ಮಧುಬಟ್ಟಲಿನ ಅಂಚಿಗೂ ವಿಷ ಸವರುವರು…

ಸಂತೈಸುವ ನೆವದಿ ಗೂಡು ಮುರಿಯುವರು…*

ಸುಳ್ಳುಗಳ ರಾಶಿ ಹರವಿ ಸತ್ಯವನ್ನು ಹೆಕ್ಕುವರು….

ಬೀತಿಗೊಳಗಾಗಿಸಿ ಸರಿದಾರಿಯ ಮರೆಸುವರು…

ಅಸಾಯಕತೆ ಪ್ರದರ್ಶಿಬೇಡ ಜಗದ ಎದುರಲಿ

ಹುರಿದು ಮುಕ್ಕುವ ಹುನ್ನಾರ ಸದಾ ನಡೆಸುವರು…

ಹೀಗೆ ತಮ್ಮ ಬರವಣಿಗೆಯ ಕತ್ತಿಯನ್ನು ಝಳಪಿಸುತ್ತ  ಬಂಡ ಲಡಾಯಿ ಮಾಡುವ ಹಂಡ ಜನರ ಕುರಿತು ಖಂಡತುಂಡವಾಗಿ ಮಾತನಾಡಿದ್ದಾರೆ.

ಗಜಲ್ ೦೯ ರಲ್ಲಿ ಬಹಳಷ್ಟು ರಸವತ್ತಾದ ಬರಹವಿದೆ.ಇಲ್ಲಿ ಅಮರ ಪ್ರೇಮಿಯಂತಿರುವ ದೇವದಾಸನೊಬ್ಬನ ಚಿತ್ರಣವನ್ನು ಮನೋಜ್ಞವಾಗಿ ಮೂಡಿಸಿದ್ದಾರೆ.ಈ ಗಜಲ್ ಓದಿದಾಗ ನನ್ನಲ್ಲಿ ದೇವದಾಸ ಚಲನಚಿತ್ರದ ಒಂದು ಪ್ರೇಮದ ಕುರಿತು ಕಳಕಳಿಯಿಂದ ಕೂಡಿದ ತುಂಬಾ ವ್ಯಾಕುಲವಾದ ಹತಾಶೆಯ ಭಾವ ಮೂಡಿಸುವ  ಸಂಭಾಷಣೆ ನೆನಪಿಗೆ ಬಂತು….

* ಬಾಬಾ ನೇ ಕಹಾ ಗಾಂವ್ ಛೋಡ ದೋ

ದುನಿಯಾನೇ ಕಹಾ ಪಾರೂ ಕೋ ಛೋಡದೋ..!

ಪಾರೂನೇ ಕಹಾ ಶರಾಬ ಛೋಡ ದೋ..!!

*ಮೈ ಕಹೂ ಏ ದುನಿಯಾ ಹೀ ಛೂಡದೋ…!!

ಪ್ರೇಮ,ಕಾಮಕ್ಕಾಗಿ ಈ ಜಗತ್ತಿನಲ್ಲಿ ಎಷ್ಟೊಂದು ದುರಂತದ ದುರ್ಘಟನೆಗಳು ಜರುಗಿ ಹೋಗಿವೆ. ಈ ಎಲ್ಲಾ ದುರಂತಗಳನ್ನು ನೋಡಿದಾಗ ನಮಗೆ ಕಂಡು ಬರುವುದೇನೆಂದರೆ ಇಲ್ಲಿ ಪ್ರೇಮದ ಜಯವಾಗಿದೆಯೇ ಹೊರತು ದ್ವೇಷದ ಜಯವಾಗಿಲ್ಲ.

ಈ ಪ್ರೇಮ ಎಂಬ ಯುದ್ಧದಲ್ಲಿ ಯಾವುದೇ ಆಯುಧವಿರುವುದಿಲ್ಲ ಇಲ್ಲಿರುವುದು ಕ್ಷಣ ಕ್ಷಣಕ್ಕೂ ಸಿಟ್ಟು, ಸೆಡವು,ಮೌನದ ಕಾದಾಟಗಳಿರುತ್ತವೆ. ಪ್ರೇಮದ ವಿಷಯದಲ್ಲಿ ಪರಸ್ಪರ ಕಾದಾಟವಿದ್ದಷ್ಟು ಬೇರೆ ಯಾವ ವಿಷಯದಲ್ಲೂ,ಎಲ್ಲೂ ಕಾದಾಟಗಳಿರುವುದಿಲ್ಲ. ಇದಕ್ಕಾಗಿ ಕವಿ ಖಲೀಲ ಗೀಬ್ರಾನ ಒಂದು ಮಾತು ಹೇಳುತ್ತಾನೆ ಪ್ರೇಮವೊಂದು ಹುಟ್ಟಿದೆ ಒದ್ದಾಡಲಿಕ್ಕಾಗಿ ಕಾದಾಟವಿರದ ಪ್ರೇಮ ಅದು ಅಪೂರ್ಣ.ಈ ಪ್ರೇಮದ ಪ್ರಸಂಗದಲ್ಲಿ ತನ್ನೆದೆಗೆ ಹೊಡೆತ ತಿಂದು ಭಗ್ನದಲ್ಲಿ ಮಗ್ನನಾದ ಪ್ರೇಮಿ ನಿಜಕ್ಕೂ ತನ್ನ ಜೀವನದಲ್ಲಿ ಎದ್ದೇಳುವುದು ತುಂಬಾ ಕಷ್ಟ

ಆದರೂ  ಭಗ್ನಗೊಂಡ ಹೃದಯದಿಂದ ಯಾವ ರೀತಿ ಆಲಾಪನೆ ಬರುವದೆಂದರೇ ಎಂಬುವದನ್ನು ಯಾವ ಮುಚ್ಚು ಮರೆಯಿಲ್ಲದ ದಿಟ್ಟತನದಿಂದ ಹಮ್ಮು ಬಿಮ್ಮುಗಳ ಭಯವಿಲ್ಲದೆ ಅದರ ಮುಚ್ಚಳಿಕೆಯನ್ನು ಬಿಚ್ಚಿ ಬರೆಯುವುದಿದೆಯಲ್ಲ ಅದು ಕೆಲವೇ ಕೆಲವು ಗಟ್ಟಿಗಿತ್ತಿ ಲೇಖಕಿಯರಿಗೆ ಮಾತ್ರ ಸಾಧ್ಯ.

ಗಜಲ್ -೦೯ರಲ್ಲಿರುವಂತೆ

ಅಂತಿಮ ಇಚ್ಚೆಯಿದು ನಿನ್ನಯ ಮನೆಯ ಹೊಸಿಲಲಿ ನಿಂತಿರುವೆ

ದೇವಕನ್ನಿಕೆ ನೀನು ಈ ದರವೇಶಿಯನ್ನು ಸ್ವಾಗತಿಸಬಾರದೆ ಸಖಿ..

ಒಂದು ಹಿಡಿ ಪ್ರೇಮಕ್ಕಾಗಿ ಕನವರಿಸಿ ತನ್ನ ಸರ್ವಸ್ವವನ್ನೂ ಕಳೆದುಕೊಂಡ ವ್ಯಕ್ತಿ ಮಾತ್ರ ತನ್ನ ಸಂಕೋಚ ಬಿಗುಮಾನ ಗೌರವ ಬದಿಗೊತ್ತಿ ಈ ತರಹ ಮಾತನಾಡಬಲ್ಲ ಒಬ್ಬ ನಿಜವಾದ ಪ್ರೇಮಿ ತನ್ನ ಅಂತಿಮ ಇಚ್ಚೆಯನ್ನು ಅವಳ ತಲಬಾಗಿಲಿಗೆ ಬಂದು ತಲುಪಿಸಬಲ್ಲ.ತನ್ನನ್ನು ಪ್ರೇಮಿಯಾದವಳು ಬರೀ ಸ್ವಾಗತಿಸಿದರೇ ಸಾಕು..! ನಾನು ನಿರುಮ್ಮಳನಾಗಿ ಪ್ರಾಣ ಬಿಡುವೆ..!ಎನ್ನುವ ಉತ್ಕಟ ಆಕಾಂಕ್ಷೆಯ ಭಾಷೆಯಿದೆಯಲ್ಲ ಇದು ಮನುಷ್ಯನೊಬ್ಬನ ಪ್ರೇಮದ ಪರಾಕಾಷ್ಟೆಯಲ್ಲಿ ತನಗಾಗಿ ಪ್ರೇಮದ ಚರಮ ಗೀತೆ ತಾನಾಗಿಯೇ ಹಾಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳುವ ತವಕದಿಂದ ನುಡಿಯುವ ಅಂತಿಮ ನುಡಿ. ಅನುಭೂತಿ- ಸಮಾನುಭೂತಿ- ಸಹಾನುಭೂತಿ ಬಲ್ಲ ಒಬ್ಬ ಲೇಖಕಿಯಾದ ಚಿಜ್ಯೋತಿ ಎನ್ನುವ ಹೆಣ್ಣು ಮಗಳೊಬ್ಬಳಿಂದ ಇದು ರಚನೆಯಾಗಿರುವ ಅಮೃತವಾಣಿ ಎನ್ನುಬಹುದು.

ಹಿಂದೊಮ್ಮೆ ಸಗರನಾಡಿನಲ್ಲಿ ಮೇಘ ಮಾರುತಗಳ ಘರ್ಷಣೆಯಲ್ಲಿ ಸಿಡಿಲು ಬಡಿದಂತ ಆರ್ಭಟ ರಣಭೂಮಿಯಲ್ಲಿ ತೋಪುಗಳ ಭೀಕರ ಸ್ಪೋಟ ಕಂಡ ಗಟ್ಟಿ ನೆಲ ಸಗರಭೂಮಿ….

ಇಲ್ಲಿ ಶತಮಾನಗಳಾಚೆ ಸಿಂಹಾಸನಕ್ಕಾಗಿ, ಪ್ರತಿಷ್ಠೆಗಾಗಿ ಹಾಗೂ ಬರೀ ಕುತಂತ್ರಗಳಿಂದ  ಅಸೂಯೆಗಳಿಂದ ಮುಗ್ದ ಮಹ್ಮದ ಗವಾನರಂತಹ ಮಂತ್ರಿಗಳ,ರಾಜರ ಕಗ್ಗೊಲೆಯಾಗಿ ಸ್ಮಶಾನ ಭೂಮಿಯಲ್ಲಿ,ಕೋಟೆಯೊಳಗಡೆ, ಅರಮನೆಯ ಛಪ್ಪಡಿಯ ಕೆಳಗೆ ಮುಚ್ಚಿ ಹೂತು ಹಾಕಿ ದಫನ ಮಾಡಲಾಯಿತು.

ಆ ಕಾಲದಲ್ಲಿ ಒಂದಿಷ್ಟು ಒಳ್ಳೆಯ ವ್ಯಕ್ತಿಗಳಿದ್ದರು ಅಂತೇ ಕೆಟ್ಟ ವ್ಯಕ್ತಿಗಳಿದ್ದರು ಇತಿಹಾಸ ಹೇಳುವಂತೆ ಮುಂದುವರೆದಂತೆ ಬಂದೇನವಾಜರಂತ ಸೂಪಿಗಳು ಶರಣಬಸಪ್ಪ ಅಪ್ಪನಂತವರು ಭಾವೈಕತೆಗಾಗಿ ಹಗಲಿರುಳು ತಮ್ಮ ಬದುಕನ್ನು ಸವೆಸಿ ಇಲ್ಲಿ ಬದುಕಿ ಹೋಗಿದ್ದಾರೆ.ಆದರೂ ಶರಣರು ಸೂಫಿಗಳ ನಾಡಿನಲ್ಲಿ ಈಗಲೂ ಮತ ಪಂಥಗಳ ಹೆಸರಿನಲ್ಲಿ ಜಾತಿಗಳ ಹೆಸರಿನಲ್ಲಿ

ಒಂದಿಷ್ಟು ಜೀವಗಳು ದ್ವೇಷ ಅಸೂಯೆಗಳನ್ನು ಹೊಂದಿದ ಪಟಭದ್ರರ ಹಿಡಿತಕ್ಕೆ ಸಿಲುಕಿ ನಲುಗಿ ಹೋಗಿವೆ.ದ್ವೇಷ ಮಾಡುವ ಹೇಸಿ ಮನಸುಗಳಿಗೆ ಗಜಲ್ ೦೭ ರಲ್ಲಿ ಯಾವ ರೀತಿ ಸಕತ್ತಾಗಿರುವ ಉತ್ತರ  ಕೊಟ್ಟಿದ್ದಾರೆ ಓದೋಣ

ದ್ವೇಷದ ಅಗ್ಗಿಷ್ಟಿಕೆಗೆ ಅಸಮಾಧಾನದ ತರಗು ತುಂಬುತ ಹೋಗಬೇಡ

ಕೆಂಡವಾದರೂ ಸರಿ ಇದ್ದಿಲಾದರೂ ಆಗು ಉರಿಯುತ ಹೋಗಬೇಡ…

ಕಾಗೆ ಗೂಬೆಗಳ ಬದುಕಿರುವುದು ಅಪರಾದವಲ್ಲ ನಮ್ಮ ಇರುವಲ್ಲಿ

ಸಹಬಾಳುವೆಯನು ಕಲಿಯಬೇಕು ಜಗವ ಹಳಿಯತ ಹೋಗಬೇಡ..

ಬದುಕನು ಅಂದಗಾಣಿಸಿಕೊಳ್ಳಲು ನಾವು ಅವರಿವರು ಹುಟ್ಟಿರುವೆವು

ಪ್ರೀತಿ ಚಿಜ್ಯೋತಿಯಾಗು ಮತ ಪಂಥಗಳ ಪಸರಿಸುತ ಹೋಗಬೇಡ

ಹಿಂದಿನ ಪುಣ್ಯವಂತ ಜನರಿಂದ ಈ ಲೋಕದ ಜನರಿರುವ ಸ್ಥಳಗಳು ಹರಗೃಹವಾಗಿ, ಸುರಗೃಹದಂತೆ ಮೆರೆದಿದ್ದವು.ಈಗ ಕಲಿಯ ಹೊಡೆತಕ್ಕೆ ಸಿಕ್ಕು ಅಲ್ಲಲ್ಲಿ ಮೋಸ-ವಂಚನೆ ಅತ್ಯಾಚಾರಿಗಳ ರೌದ್ರ ನರ್ತನ ಹಾಗೂ ಇದರಿಂದ ಸಮಾಜದಲ್ಲಿ ದಗಲ್ಬಾಜಿಗಳು ದ್ವಿಗುಣರಾಗಿ ನೊಂದವರ ಪಾಲಿಗೆ ಇಂದು ಈ ಭೂಲೋಕ ಖಂಡಿತವಾಗಿ ಅಸುರಗೃಹವಾಗಿದೆ. ಇವೆಲ್ಲವುಗಳ ಮದ್ಯ ಬದುಕಿನಲ್ಲಿ ಮನುಜ ವಿಧಿಯೆಂಬ ಘಟಸರ್ಪದ ಬಂಧನದಿಂದ ಹಿಂಡಿ ಹಿಪ್ಪಿಯಾಗಿದ್ದಾನೆ.

ಆತನಿಗೆ ಈ  ಬಿಗಿಯಾದ ವಿಷ ವ್ಯೂಹದಲ್ಲಿ ನಿತ್ಯ ಉಸಿರಾಡುವದು ಕಷ್ಟವಾಗಿದೆ.

ಬದುಕು ವಿಧಿಯೂ ಆಟ ಆಡುವ ಆಟವಾಗಿದೆ ಹಣೆ ಬರಹ ಬರೆದ ಬ್ರಹ್ಮ ಈಗ  ನಾಪತ್ತೆಯಾಗಿದ್ದಾನೆ.

ಜಗತ್ತಿನ ಶ್ರೇಷ್ಠ ದಾರ್ಶನಿಕ ಸಾಕ್ರಟಿಸ್ ನಿಗೆ ವಿಷ ಬೆರೆಸಿದ ಬಟ್ಟಲಲ್ಲಿ ಉಣ್ಣಲು ಅನ್ನ ನೀಡುತ್ತಾರೆ ಆತ ಉಣ್ಣುವಾಗ ಹೇಳುತ್ತಾನೆ ಈ ವಿಷದ ಊಟವೂ ನನಗೆ  ನನ್ನ ಜೀವನದಲ್ಲಿ ಒಂದು ಪ್ರಯೋಗವೆನ್ನುತ್ತಾ ವಿಷದ ಕೈ ತುತ್ತು ಸಿಹಿಯಾಗಿಸಿಕೊಂಡು ಸಾಗುತ್ತಾನೆ.

ಗಜಲ್ ೦೨ ರಲ್ಲಿ ಲೇಖಕಿ ಹೀಗೆ ಇಂತಹ ನಿದರ್ಶನವುಳ್ಳ ವಿಷಯವನ್ನು ಹೆಕ್ಕಿ ಬರೆಯುತ್ತಾರೆ..

ಬದುಕೇ ಒಂದಿಷ್ಟು ಸಿಹಿ ವಿಷವಾದರೂ ಕೊಡು.

ವಿಲಪಿಸದೆ ನಗುವಂತ ವರವಾದರು ಕೊಡು…

ಆಳ ನೋಡುವ ಮುನ್ನ ಬದುಕು ಬರಿದಾಯಿತು

ಒಂದೆರಡು ಕಂಬನಿಯ ಹನಿಗಳಾದರು ಕೊಡು…

ವಿಧಿ ಮೊನಚು ಮಾಡಿದ ಅಲಗು ಮೊಂಡಾಯಿತು

ಅವರಾಸೆಯಂತೆ ಅವಸಾನವಾದರು ಕೊಡು..

ಸೂಳುರಿಗೆ ಬಳಲಿ ಹೊಯ್ದಾಡುತ್ತಿದೆಚಿಜ್ಯೋತಿ

ನಾಳೆಗಳಿಗಾಗಿ ಮಿಳ್ಳೆಯಲಿ ತೈಲವಾದರೂ ಕೊಡು…

ಇಷ್ಟೆಲ್ಲಾ ಪ್ರಾರ್ಥನೆಗಳಾದರೂ ಕೂಡಾ ನಾಳೆಗಾಗಿ ಮಿಳ್ಳಿಯಲಿ ತೈಲವಾದರೂ ಕೊಡು ಎನ್ನುವ ಛಲವಂತಿಕೆ ಬೇಡಿಕೆಯ ಬರಹವಿದೆಯಲ್ಲ ಅದು ಬರಹಗಾರ್ತಿಯ ಗಟ್ಟಿತನದ ಛಲವಂತಿಕೆಯ ಗುಣ ಹೌದು ಅನ್ನಬೇಕು ಅದನ್ನು ಮನ ಮೆಚ್ಚಲೇಬೇಕು ಜಗ ಮೆಚ್ಚಲೇಬೇಕು..

 ನಮ್ಮ ಜೀವನದ ಸತ್ಯದ ತಥ್ಯೆಗಳು ನಮ್ಮ ಬದುಕಿನಲ್ಲಿಡಗಿವೆ ಅವು ಎಲ್ಲೋ ದೂರದ ಆಕಾಶದಲ್ಲಿಲ್ಲ ಅಲ್ಲಿ ಹುಡುಕುವ ಜರೂರತ್ತು ಇಲ್ಲ.ಸತ್ಯವನ್ನು ನಾವು ವೇದೋಕ್ತಿಗಳಲ್ಲಿ ಕಾಣುವುದು ಬೇಡ.! ವೇದಾಂತಿಯನ್ನು ಕೇಳುವ ಅವಶ್ಯಕತೆಯಿಲ್ಲ..! ಉಪನಿಷತ್ತುಗಳನ್ನು ಪಠಿಸುವರ ಮುಂದೆ ಹಾಜರಾಗುವುದು ಬೇಡ..!! ಸತ್ಯ ಎನ್ನುವುದು ನಮ್ಮ ಜೀವನದ ಇಡೀ ಬದುಕಿನ ಸುತ್ತವೇ ಅಡಗಿದೆ…!!!  ಹೇಗೆ ಪರಿಮಳದ ಪುಷ್ಪಗಳ ಹಾರ ನೋಡಿದಾಗ ನಮಗೆ ಮೊದಲು  ಕಾಣುವುದು ಬಣ್ಣ ಬಣ್ಣದ ಹೂವುಗಳು ಆದರೆ ಆ ಹಾರದ ಹಿಂದೆ ಹೂವುಗಳ ಹಿಂದೆ  ಅದೃಶ್ಯವಾಗಿ ಅಡಗಿರುವ ದಾರ ನಮಗೆ ಕಾಣುವುದೆ ಇಲ್ಲ ಅದನ್ನು ನೋಡಬೇಕಾದರೆ ನಮಗೆ ನಮ್ಮ ಅಂತರಂಗದ ಒಳಗಣ್ಣು ತೆರೆದು ನೋಡಿದಾಗ ಕಾಣಸಿಗುವದು. ಸತ್ಯ ಕೂಡಾ ಅದೃಶ್ಯವಾಗಿರುವ ದಾರದ ಹಾಗೆ ಅದನ್ನು ನೋಡುವುದು ನಮ್ಮ ಆತ್ಮದ ಜೊತೆ ಒಡಗೂಡಿ ಮನಸಾಕ್ಷಿಯ ಭಾವದಿಂದ ನೋಡಿದಾಗ ಮಾತ್ರ ಸತ್ಯ ನಮ್ಮ ಕೈ ಸೇರುವದು.

ಗಜಲ್ ೨೫ ರಲ್ಲಿ ಸತ್ಯದ ಅನಾವರಣದೊಂದಿಗೆ ಜ್ಯೋತಿಯವರ ಗಜಲ್ ಹೀಗೆ ಘಲ್ ಘಲ್ ಎಂದಿದೆ..

ಸತ್ಯದ ದಾರಿಯಲಿ ನಡೆಯುವಾಗ ಅಳುಕಬೇಕಿಲ್ಲ

ಬೇಗುದಿಯ ವಿಷವನು ಎಲ್ಲೆಂದರಲ್ಲಿ ಉಗಳಬೇಕಿಲ್ಲ

ಅಭಿಪ್ರಾಯ ಬೇಧ ಹುಟ್ಟು ಬೆಳವಣಿಗೆಗಳ ಪ್ರತಿರೂಪ

ವಿರೋಧಿಸಿದ ಮಾತ್ರಕ್ಕೆ ವ್ಯಕ್ತಿತ್ವವನು ತೆಗಳಬೇಕಿಲ್ಲ

ಸಾಧನೆಯ ತುತ್ತೂರಿ ಊದಿಕೊಳ್ಳಬಾರದುಚಿಜ್ಯೋತಿ

ಹೊಗಳಿಕೆಯ ಹೊನ್ನಿನ ಶೂಲಕೇರಿಸುವ ಬಳಗಬೇಕಿಲ್ಲ

ಇಂತಹ ನಿರ್ಭಿಡೆಯ ಮಾತುಗಳನ್ನು ಹೇಳುವುದು ಅದು ಸತ್ಯದ ಪಥದಲ್ಲಿ ಸಾಗುವವರಿಗೆ ಮಾತ್ರ ಸಾಧ್ಯ.

ಕೆಲವು ಪ್ರಚಾರ ಪ್ರೀಯರಿಗೆ ತಮ್ಮನ್ನು ತಾವು ವೈಭವಿಕರಣ ಮಾಡಿಕೊಳ್ಳುತ್ತಾ ಸಭೆ ಸಮಾರಂಭಗಳಲ್ಲಿ ಹೊಗಳು ಭಟರಿಂದ ಬಹು ಪರಾಕ್ ಹೇಳಿಸಿಕೊಳ್ಳುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರಹದ ಮೂಲಕ ಛಡಿ ಏಟು ಮೂಡಿಸಿದ್ದಾರೆ.

ಹಾಗೆ ಸ್ತ್ರೀಯೂ ಪ್ರಕೃತಿ ಸಹಜವಾಗಿ ತಾಳ್ಮೆಯುಳ್ಳವಳು ಅವಳ ತ್ಯಾಗದ ಮುಂದೆ ಇಡೀ ಜಗತ್ತೆ ಒಂದು ಮಹಾ ಶೂನ್ಯ ಆಕೆಯ ಮುಂದೆ ಎಲ್ಲವೂ ನಗಣ್ಯ. ಇದರ ಕುರಿತು

ಗಜಲ್ ೫೫ ರಲ್ಲಿ 

ಸುಖವ ಕೊಡದವಗೆ ಸುಗಂಧ ಲೇಪಿಸುವಳು ನೀನು

ಹೂವು ತರದವನಿಗೆ ಮಕರಂದ ಉಣಿಸುವಳು ನೀನು

ಖಯಾಲಿ ನೀಡಿದ ವೃಣಗಳ ಉರುಪಿನಿಂದ ಬಳಲಿರುವೆ

ಅತ್ತರಿನ ಭರಣಿಯಾಗಿ ಎನಗೆ ದೊರಕಿದವಳು ನೀನು

ಬದುಕು ಬೆಳಗುವ ಚಿಜ್ಯೋತಿ ಎಂದರಿಯದೆ ಅಜ್ಞನಾದೆ

ಅಂತರಾತ್ಮಕ್ಕೆ ಪ್ರೇಮಾಮೃತವನು ಹರಿಸಿದವಳು ನೀನು

ಎಂಬ ಪ್ರೇಮದ ಮಾಯೆಯ ಮಹಿಮೆಯನ್ನು ಬಂಗಾರದ ಪದಗಳಲ್ಲಿ ಜೋಡಿಸಿ ಬರೆದಿರುವ ಪದಗಳನ್ನು ಓದುವುದೇ ಓದುಗರ ಸೌಭಾಗ್ಯ ಎನ್ನಬಹುದು..

ಇಡೀ ಪುಸ್ತಕದಲ್ಲಿ ಸುಮಾರು ಎಂಬತ್ತು ಗಜಲ್ ಗಳಿವೆ ಅಗೆದಷ್ಟು ಮೊಗೆದಷ್ಟು ಅವು ಅನರ್ಘ್ಯ  ಮುತ್ತುರತ್ನಗಳಾಗಿವೆ.

ಒಂದೇ ಒಂದು ಹನಿ ಅತ್ತರಿನ ಸುಗಂಧ ಹನಿ ತಯಾರಿಕೆಗೆ ಹಲವಾರು ಹೂವುಗಳ ಸಾರವನ್ನು ಹಿಂಡಬೇಕಾಗುತ್ತದೆ ಆದರೆ ಇಡೀ ಅತ್ತರಿನ ಭರಣೆಯನ್ನು ತುಂಬಬೇಕಾದರೆ..? ಎಷ್ಟೊಂದು ನಯ ನಾಜೂಕಾಗಿ ಸಾವಿರಾರು ಹೂವುಗಳ ಸಾರ ಹಿಡಿಯಬೇಕಲ್ಲವೆ..? ಇಲ್ಲಿ  ಭಾವನೆಗಳೆಂಬ ಬ್ರಹ್ಮ ಕಮಲ, ಸತ್ಯವೆಂಬ ಸಂಪಿಗೆ, ದುಃಖವೆಂಬ ಕೆಂಡ ಸಂಪಿಗೆ,ಛಲವಂತಿಕೆಯ ಚಂಡು ಹೂವು, ಸಾತ್ವಿಕ ಕೋಪವೆಂಬ ಕೇದಿಗೆ,

ದಯೆಯೆಂಬ ದಾಸವಾಳ, ಮಮತೆಯೆನ್ನುವ ಮಂದಾರ, ಪರಿಪಕ್ವದ ಗುಣ ಹೊಂದಿದ ಪಾರಿಜಾತ, ಸದ್ಗುಣಗಳೆಂಬ ಗುಲಾಬಿ, ಆಧ್ಯಾತ್ಮಿಕ ಮೇರು ಶಿಖರದ ದ್ಯೋತಕವಾದ ಕಮಲವನ್ನು ಹೊತ್ತ ತಂದು ಸತ್ಯದ ಪಾರದರ್ಶಕತೆಯ ಸುವಾಸಿತ ಅತ್ತರಾಗಿಸಿ ಅದನ್ನು ಜತನಾಗಿ- ಜೋಪಾನವಾಗಿ ಶ್ರೀಮತಿ ಜ್ಯೋತಿ ದೇವಣಗಾಂವರವರು ಕಾಲನ ಕೃಪೆಯಲ್ಲಿ ಒದಗಿ ಬಂದ ಗುರುಗಳ ಆಶೀರ್ವಾದ ಬಲದಿಂದ ಎಲ್ಲವನ್ನು ಸಾಧ್ಯವಾಗಿಸಿದ್ದಾರೆ.

ಓದುಗ ದೊರೆಗಳು ಈ ಅತ್ತರಿನ ಭರಣಿಯ ಸುವಾಸಿತವಾದ ಕಂಪನು ತಮ್ಮ ಓದಿನ ಮೂಲಕ ಮೈ ಮನಗಳಿಗೆ ಲೇಪಿಸಿಕೊಂಡ ಬರಹಗಾರ್ತಿಗೆ ಒಂದಿಷ್ಟು ಬಲ ನೀಡಬೇಕು.ಅದು ಬರಲಿರುವ ದಿನಗಳಲ್ಲಿ ಆ ಲೇಖಕಿಯರಿಂದ ಮತ್ತಷ್ಟು ಕೃತಿಗಳ ಪುಷ್ಪಗಳು ರಚನೆಯಾಗುವುದರ ಮೂಲಕ ತಾಯಿ ಭುವನೇಶ್ವರಿಯ ಮುಡಿಗೇರಲಿ ಎಂದು ಆಶಿಸುತ್ತೇನೆ.


ದಶರಥ ಕೋರಿ

Leave a Reply

Back To Top