ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ಹಗೆತನದ ಕರಿಯ ಪರದೆ ಸರಿವುದು ಎಂದೋ
ಒಗೆತನದ ಪ್ರೀತಿ ನಂಟು ಬೆರೆವುದು ಎಂದೋ
ಅನುಮಾನ ರೋಷ ತಿಳಿ ಮರುಳೆ ಒಳಿತಲ್ಲ
ಪಾಷಾಣ ಹೃದಯಗಳು ಗೆಳೆಯ ಕರಗುವುದು ಎಂದೋ
ಮನದಲ್ಲಿಯ ದ್ವೇಷ ಕಿಚ್ಚು ಹಚ್ಚಿವೆ ನೋಡು
ತ್ವೇಷದಬೆಂಕಿಯ ಜ್ವಾಲೆ ಆರುವುದು ಎಂದೋ
ಬಣ್ಣದ ಮಾತುಗಳು ವಿಷವ ಬೆರೆಸಿವೆ ನಗುತ
ಸ್ವಾರ್ಥಿಗಳ ಪಾಶವೀ ದಾಹ ತೀರುವುದು ಎಂದೋ
ಭಯದ ನೆರಳಲಿ ಬದುಕು ನಡುಗಿದೆ ಬೇಗಂ
ಮುಗ್ಧರ ರಕುತದ ಓಕುಳಿ ನಿಲ್ಲುವುದು ಎಂದೋ