ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಕವಲು   :   ಕಾದಂಬರಿ 

ಕವಲು   :   ಕಾದಂಬರಿ 

ಲೇಖಕರು :: ಎಸ್ ಎಲ್  ಭೈರಪ್ಪ 

ಪ್ರಕಾಶಕರು ಸಾಹಿತ್ಯ ಭಂಡಾರ 

ಮೊದಲ ಮುದ್ರಣ: ೨೫.೬.೨೦೧೦ ಮೂವತ್ತೊಂದನೇ ಮುದ್ರಣ :೨೦೨೧

ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಚಿರಪರಿತ ಚ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ನವರದು . ವಿಶಿಷ್ಟ ರೀತಿಯ ಕಥಾವಸ್ತುಗಳು ವಿಭಿನ್ನ ಹಂದರದ ಕಾದಂಬರಿಗಳಿಂದ ಮನೆಮಾತಾಗಿರುವ ಇವರ ಕಾದಂಬರಿಗಳು ಹೆಚ್ಚು ಹೆಚ್ಚು ಮುದ್ರಣಗಳನ್ನು ಕಾಣುತ್ತಿರುವುದು ಜನಪ್ರಿಯತೆಗೆ ಸಾಕ್ಷಿ . ೨೬.೦೭.೧೯೩೧ರಂದು ಜನಿಸಿದ ಭೈರಪ್ಪನವರದು ಕಡುಬಡತನದ ಕುಟುಂಬ.  ಐದನೆಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ನೆಲೆನಿಂತವರು. ಭಿತ್ತಿ ಕಾದಂಬರಿಯು ಇವರ ಆತ್ಮ ಕಥನವೇ ಆಗಿದೆ . ಅವರೇ ಹೇಳಿಕೊಂಡಂತೆ ಗೊರೂರು ರಾಮಸ್ವಾಮಿ ಐಯಂಗಾರ್, ಆದಿಶಂಕರಾಚಾರ್ಯ, ಮಹಾತ್ಮಾಗಾಂಧಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು . ಒಟ್ಟು ಇಪ್ಪತ್ತೈದು ಕಾದಂಬರಿಗಳು ,ಜೀವನ ಚರಿತ್ರೆ ಭಿತ್ತಿ ಮತ್ತು ಇತರೆ 4 ಗ್ರಂಥಗಳನ್ನು ಬರೆದಿರುವ ಇವರ ಹದಿನೈದು ಕಾದಂಬರಿಗಳು ಮತ್ತು 2 ಗ್ರಂಥಗಳು ಇಂಗ್ಲಿಷ್ ಹಾಗೂ ಬೇರೆ ಬೇರೆ ಭಾರತೀಯ ಭಾಷೆಗಳಿಗೆ ತರ್ಜುಮೆ ಹೊಂದಿವೆ . ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿ ನೆರಳು ಮತ್ತು ದಾಟು ಕಾದಂಬರಿಗಳು ಚಲನಚಿತ್ರಗಳಾಗಿವೆ . ಗೃಹಭಂಗ ಮತ್ತು ದಾಟು(ಹಿಂದಿ) ಟಿವಿ ಧಾರಾವಾಹಿಗಳಾಗಿವೆ .ಕನ್ನಡ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡಮಿ, ಪಂಪಪ್ರಶಸ್ತಿ, ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಸರಸ್ವತಿ ಸಮ್ಮಾನ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ವಾಗ್ವಿಲಾಸಿನಿ ಪುರಸ್ಕಾರ್, ಡಾಕ್ಟರ್ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, ಸಾಹಿತ್ಯ ಫೆಲೋ ಅಕಾಡಮಿ ಗೌರವ ಮುಂತಾದವು ಇವರ ಪ್ರತಿಭೆಗೆ ಸಂದ ಗೌರವಗಳಾಗಿವೆ .ಕನ್ನಡ ಸಾಹಿತ್ಯ ಪ್ರೇಮಿಗಳಲ್ಲಿ ಇವರು ಮೂಡಿಸಿರುವ ಛಾಪು ಅವಿಸ್ಮರಣೀಯ. ಇತ್ತೀಚೆಗೆ ಕ್ಲಬ್ ಹೌಸ್ ನಲ್ಲಿ ಇವರೊಡನಿನ ಸಂವಾದ ಅಂದಿನ ಎಲ್ಲಾ ಕ್ಲಬ್ ಹೌಸ್ ಸಂವಾದಗಳಿಗಿಂತ ಹೆಚ್ಚು ಶ್ರೋತೃವರ್ಗ ಹೊಂದಿದ ದಾಖಲೆಯಾಗಿದೆ. 

ಕುಟುಂಬ ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಂಡು ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೇ”  ಎಂದರು ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು . ಹೇಗೋ ಏನೋ ಹೊಂದಿಕೊಂಡು ಎಂಬ ಈ ಮಾತು ಸಾರ್ವಕಾಲಿಕ ಸಲ್ಲುವಂತದ್ದು .ಮತ್ತೊಂದು ಕವಿವಾಣಿ ಹೇಳುತ್ತದೆ “ಎಷ್ಟು ಕಷ್ಟವೋ ಹೊಂದಿಕೆಯೆಂಬುದು ಈ ನಾಲ್ಕು ದಿನದ ಬಾಳಿನಲಿ” ಅಂತ.  ಹಾಗೆ ಮದುವೆ ಎಂಬುದು ಪ್ರೀತಿಗಾಗಿ ಅಲ್ಲದೆ ವ್ಯಾವಹಾರಿಕವಾದಾಗ ಕುಟುಂಬ ದಾರಿಯಲ್ಲಿ ಒಗ್ಗೂಡಿ ನಡೆಯದೆ ಕವಲಾಗುತ್ತದೆ, ಜೀವನ ಸವಾಲಾಗುತ್ತದೆ .ಅದನ್ನೇ ಇಲ್ಲಿ ಕಾದಂಬರಿಗಾರರು ಹೇಳಹೊರಟಿರುವುದು. ಸಂಸಾರ ಒಡೆಯಲು ಕಾರಣಗಳು ಅನೇಕ. ಪುರುಷ ಪ್ರಧಾನ ಸಮಾಜದಲ್ಲಿ ತಪ್ಪು ಯಾರದೇ ಆಗಿದ್ದರೂ ಶಿಕ್ಷೆ ಅನುಭವಿಸುತ್ತಿದ್ದುದು ಹೆಂಗಸರು. ಬದಲಾದ ಸಾಮಾಜಿಕ ಪರಿಸ್ಥಿತಿ ಕಾನೂನಿನ ಬೆಂಬಲಗಳು ಸಮಸ್ಯೆಯನ್ನು ಪರಿಹರಿಸುವ ಬದಲು  ವಿಕೋಪಕ್ಕೆ ತೆಗೆದುಕೊಂಡು ಹೋಗುತ್ತವೆ ಎಂಬ ಅಂಶ ಇಲ್ಲಿ ಪ್ರಧಾನವಾಗಿ ಚರ್ಚಿತವಾಗಿದೆ. ಸಂಘಟನೆಗಳಾಗಲೀ ನ್ಯಾಯಾಲಯಗಳಾಗಲಿ

ವಿಷಯದ ಆಳಕ್ಕೆ ಹೋಗಿ ನೋಡದಿರುವುದು, ಪ್ರತೀ ಬಾರಿಯೂ ಹೆಣ್ಣಿಗೇ ಅನ್ಯಾಯವಾಗುತ್ತಿದೆ ಎಂಬೆಲ್ಲ ಪೂರ್ವಾಗ್ರಹಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ನಿದರ್ಶನವೂ ಹೌದು.

ಹೆಂಡತಿಗೆ ಹೊಡೆದನೆಂಬ ಅಪರಾಧಕ್ಕೆ ಲಾಕಪ್ಪಿಗೆ ಹಾಕಲ್ಪಡುವ ದೃಶ್ಯದಿಂದ ಆರಂಭವಾಗುವ ಕಥೆ. ಉದ್ಯಮಿ ಜಯಕುಮಾರನ ಹೆಂಡತಿ ಮಂಗಳೆ ಹೀಗೆ ಕಂಪ್ಲೇಂಟು ಕೊಟ್ಟಿರುತ್ತಾಳೆ. ಇಲ್ಲಿಂದ ಕೆಲವೊಮ್ಮೆ ಫ್ಲ್ಯಾಶ್ ಬ್ಯಾಕ್ ಹಾಗೂ ವಿವಿಧ ಪಾತ್ರಗಳ ಸ್ವಗತಗಳೊಂದಿಗೆ ಕಥೆ ಮುನ್ನಡೆಯುತ್ತದೆ . ಮೊದಲ ಪತ್ನಿ ಜಯಂತಿಯೊಂದಿಗೆ ಆರಂಭಿಸಿ ದೊಡ್ಡ ಉದ್ಯಮ ವಾಗಿರುವ ಕಂಪನಿ, ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡು, ಹತ್ತು ವರ್ಷದ ಮಗಳ ಮೆದುಳಿಗೆ ಏಟಾಗಿ ಮಾತನಾಡಲಾಗದ ಸ್ವಲ್ಪಮಟ್ಟಿಗೆ ಮತಿಭ್ರಂಶಳಾದ  ಪುಟ್ಟಕ್ಕ ಎಂಬ ಮಗಳು ಜಯಕುಮಾರನಿಗೆ .ಒಮ್ಮೆ ಸೆಕ್ರೆಟರಿ ಮಂಗಳಾಳ ಸಹವಾಸ ಮಾಡಿ ಅದನ್ನು ಮುಂದುವರೆಸಿ ಅವಳು ಅವನ ಮಗುವಿಗೆ ತಾಯಿಯಾಗುತ್ತಿರುವೆ ಎಂದು ಸಂಘಟನೆಗಳ ಮೂಲಕ ಒತ್ತಡ ಹಾಕಿ ಮದುವೆಯಾಗುತ್ತಾಳೆ. ಸ್ತ್ರೀ ಸಮಾನತೆಯಲ್ಲಿ ನಂಬಿಕೆ ಇಟ್ಟವಳು ಬರಿ ಪತಿಯ ಆಸ್ತಿಯ ಮೇಲೆ ಕಣ್ಣಿಡುವವಳು.  ಕಾಲೇಜಿನ ದಿನಗಳಲ್ಲೇ ಪ್ರಭಾಕರನೆಂಬ ಸಹಪಾಠಿಯೊಡನೆ ಸಂಬಂಧ.  ಮತ್ತೂ

ಆ ಸಂಬಂಧ ಮುಂದುವರೆಸುತ್ತಾ ಜಯಕುಮಾರನೊಡನೆ ಸಂಬಂಧ, ಮದುವೆ. ನಂತರ ಮದುವೆಯಾದ ನಂತರವೂ ಈ ಸಂಬಂಧ ಮುಂದುವರೆಯುತ್ತದೆ. ಅಡಕತ್ತರಿಯಲ್ಲಿ ಸಿಕ್ಕ ಹಾಗಾಗಿ ಮದುವೆಯಾದರೂ  ದಾಂಪತ್ಯ ಜೀವನ ನಡೆಸಲಾಗದೆ ಮುಂದೆ ವೇಶ್ಯೆಯ ಸಹವಾಸ ಮಾಡಿ ಪೊಲೀಸ್ ರೈಡ್ ಗೆ ಸಿಕ್ಕು ಜೈಲು ವಾಸ ಅನುಭವಿಸುತ್ತಾನೆ . ಪ್ರತಿಸ್ಪರ್ಧಿಗಳ ಕುತಂತ್ರದಿಂದಾಗಿ ಕಂಪೆನಿಯನ್ನು ಮುಚ್ಚಬೇಕಾಗಿ ಅಪಾರ ಹಣ ಕೊಟ್ಟು ನಂತರ ಮಂಗಳಳಿಂದ ಡೈವೋರ್ಸ್ ಪಡೆಯುತ್ತಾನೆ.  ಇದು ಒಂದು ಕುಟುಂಬದ ಕಥೆ . ಮಂಗಳೆ ಮತ್ತು ಪ್ರಭಾಕರರ ಅಧ್ಯಾಪಕಿ ಇಳಾ ಮತ್ತು ಅವಳ ಗಂಡ ವಿನಯಚಂದ್ರ ಮಗಳು ಸುಜಯ.  ವಿನಯ ಚಂದ್ರನಿಗೆ ದೆಹಲಿಗೆ ವರ್ಗವಾದಾಗ ಗಂಡನೊಂದಿಗೆ ಹೋಗದೆ ಅವನು ಡೈವೋರ್ಸ್ ಕೇಳಿದಾಗ ಪಾಠ ಕಲಿಸಲು ಕೊಡದೆ ಉಳಿದ ಇಳಾ ತಾನೂ ಒಬ್ಬ ಮಂತ್ರಿಯೊಂದಿಗೆ ಸಂಪರ್ಕವಿಟ್ಟುಕೊಂಡಿರುತ್ತಾಳೆ .ಅದನ್ನು ತಿಳಿದ ಮಗಳು  ಸುಜಯಾಳಿಗೆ ಆಘಾತವಾಗುತ್ತದೆ. ಇದರ ನಡುವೆ ವರದಕ್ಷಿಣೆ ಕೇಸಿನಲ್ಲಿ 3 ವರ್ಷ  ಜೈಲು ಅನುಭವಿಸುವ ಜಯಕುಮಾರನ ತಾಯಿ ಬಿಡುಗಡೆಯಾದ ಮೇಲೂ ಮನೆಗೆ ಮರಳಿ ಬಂದಿರುವುದಿಲ್ಲ .  ವಿನಯಚಂದ್ರನ ತಾಯಿ ತಮ್ಮರ ನೆಮ್ಮದಿಯ ಸಂಸಾರದ ಚಿತ್ರಣ, ಮಹಿಳಾ ಲಾಯರುಗಳ ಸ್ವಾರ್ಥ ಹೀಗೆ ಅನೇಕ ಕುಡಿಗಳು ಒಡೆದು ಕವಲಾಗುವ ಕತೆ.ಜಯಕುಮಾರನ ತಾಯಿ ಮತ್ತೆ ಸಿಗುವಳೇ? ತಾಯಿಯನ್ನು ಜೈಲಿಗೆ ಕಳಿಸಿದ ಅವನ ಅಣ್ಣನ ಸಂಸಾರ ಮುಂದೆ ಏನಾಯಿತು? ವಿದೇಶದಲ್ಲಿದ್ದ ಜಯಕುಮಾರನ ಅಣ್ಣನ ಮಗ ನಚಿಕೇತನ ಪಾಡೇನು? ಇಳಾ ಕಡೆಗೂ ವಿನಯ ಚಂದ್ರನಿಗೆ ಡೈವೋರ್ಸ್ ಕೊಡಲು ಸಮ್ಮತಿಸುವಳೇ? ಪಾಪದ ಪುಟ್ಟಕ್ಕನ ಭವಿಷ್ಯವೇನು? ಹೀಗೆ ಈ ಎಲ್ಲ ಕಗ್ಗಂಟುಗಳು ಹೇಗೆ ಬಿಡಿಸಿಕೊಳ್ಳುತ್ತಾ ಮತ್ತೆ ಗೋಜಲಾಗುತ್ತಾ ಹೋಗುತ್ತದೆ ಎನ್ನಲಿಕ್ಕೆ ಕಾದಂಬರಿ ಓದಿ. 

ಕುಟುಂಬದ ತಳಹದಿಯಲ್ಲಿ ಆರಂಭವಾಗುವ ಕಥೆ ಕ್ಯಾಂಪಸ್ ಸ್ನೇಹ, ಮಹಿಳಾ ಸಂಘಟನೆಗಳ ಒಳಮರ್ಮಗಳು, ಕಾನೂನಿನ ಪರಿಧಿ, ಉದ್ಯಮದ ಏರಿಳಿತಗಳು, ಪ್ರತಿಸ್ಪರ್ಧಿಗಳ ಕುತಂತ್ರಗಳು, ಮಾಧ್ಯಮಗಳ ದುರ್ಬಳಕೆ, ವೇಶ್ಯಾವಾಟಿಕೆಯ ಎಳೆಗಳು, ವಿದೇಶದ ವಿವಾಹ ಪದ್ದತಿ ಏನೆಲ್ಲಾ ಕವಲುಗಳಲ್ಲಿ ಸಾಗುತ್ತಾ ಕೊನೆಗೆ ಸಂಸಾರವೆಂಬ ಮೂಲಕ್ಕೇ ಮರಳುತ್ತದೆ. ಜಯಕುಮಾರನ ಅಕ್ಕನ ಮಗ ನಚಿಕೇತ ವಿದೇಶದಲ್ಲಿ 2 ಬಾರಿ ವಿಷಮ ಮದುವೆಗಳ  ಸುಳಿಯಲ್ಲಿ ಸಿಕ್ಕಿ ಆರ್ಥಿಕ ದಿವಾಳಿಯಾಗಿ ಮಾನಸಿಕವಾಗಿ ಕುಗ್ಗುವುದು ಕಥೆಗಾರ ಶಾಂತಾರಾಮ ಸೋಮಯಾಜಿಯವರ ಆತ್ಮಕಥನ “ಮುಳ್ಳು ಬೇಲಿ ದಾಟಿ ಬದುಕಿ ಬಂದೆ” ಕಾದಂಬರಿಯ ಕಥೆಯನ್ನು ನೆನಪಿಸಿತು. ಈಗೀಗ ಈ ದುಷ್ಟ ವಿಷ ಜಾಲ ಭಾರತದಲ್ಲೂ ಹಬ್ಬುತ್ತಿದೆ ಎಂಬುದಕ್ಕೆ ಜಯಕುಮಾರನ ಕತೆ ಸಾಕ್ಷಿಯಾಗುತ್ತದೆ. ಮದುವೆ ಒಂದು ವ್ಯವಹಾರ, ಜೀವನವೇ ಲೆಕ್ಕಾಚಾರವಾಗಿ ಹೋಗಿದೆ .

ಇಲ್ಲಿಯ ಮುಖ್ಯ ಸ್ತ್ರೀ ಪಾತ್ರಧಾರಿಗಳು ಮಂಗಳಾ ಮತ್ತು ಇಳಾ.  ವಿದೇಶಿ ವಿಶ್ವವಿದ್ಯಾನಿಲಯಗಳ ಮುಕ್ತ ಲೈಂಗಿಕತೆಯನ್ನು ಬಾರಿಬಾರಿ ಹೇಳುವ ಒಬ್ಬ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬಿತ್ತಲು ಸಾಧ್ಯವೇ? ತನ್ನ ಮಗಳು ತನ್ನ ನೈತಿಕ ವ್ಯವಹಾರದ ಬಗ್ಗೆ ಮಾತನಾಡಲು ಬಂದಾಗ ನಿನಗೂ ಹದಿನೆಂಟಾಯಿತು ಮುಂದೆ ಸ್ವತಂತ್ರಳು ಅದರೆ ಹುಷಾರಾಗಿರು ಎನ್ನುತ್ತಾಳೆ .ನಿಜಕ್ಕೂ ಒಬ್ಬ ಒಳ್ಳೆಯ ತಾಯಿ ಹೇಳುವ ಮಾತೇ ಇದು? ಮಗಳು ಸುಜಯ ತಂದೆಯ ಪ್ರಭಾವ ದಲ್ಲಿದ್ದುದರಿಂದ ಒಳ್ಳೆಯ ಮಾರ್ಗ ಹಿಡಿಯುತ್ತಾಳೆ.ಅದಕ್ಕೆ ಕತೆಯ ಉಪಸಂಹಾರವಾಗಿ ಅವಳು ಬರೆದ ಪತ್ರ ಸಾಕ್ಷಿ ಹಾಗೂ ಕುಟುಂಬದ  ಪ್ರೀತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ.  ಇನ್ನು ಮಂಗಳ ಓದುವಾಗಲೇ ಪ್ರಭಾಕರನೊಡನೆ ಸಂಬಂಧವಿರಿಸಿಕೊಂಡು ಗರ್ಭಪಾತವಾದಾಗ ಅವನನ್ನೇ ದ್ವೇಷಿಸುವುದು, ಸ್ತ್ರೀಸಂಘಟನೆಯ ಧುರೀಣೆಯೋರ್ವಳು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುವ ರೋಷ ಎಲ್ಲವನ್ನೂ ತೀರಿಸಿಕೊಳ್ಳಲು ಮತ್ತು ತನ್ನ ಬದುಕು ನೇರ್ಪುಗೊಳಿಸಿಕೊಳ್ಳಲು ಜಯಕುಮಾರ ನಂತಹ ಶ್ರೀಮಂತನನ್ನು ಮದುವೆಯಾಗುತ್ತಾಳೆ.  ಸದಾ ಸ್ತ್ರೀ ಸಮಾನತೆ ಹೇಳುವ, ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವ ಈ ಮಹಿಳೆಯರಿಗೆ ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವೇ… ಗಂಡನನ್ನು ಏಕವಚನದಲ್ಲಿ ಕೂಗಿದರೆ, ಲೈಂಗಿಕತೆಯಲ್ಲಿ ಮುಕ್ತವಾಗಿದ್ದರೆ ಅದು ಸ್ತ್ರೀ ಸಮಾನತೆಯೇ.  ಇನ್ನಿ ಪ್ರತಿಯೊಂದಕ್ಕೂ ಸಂಘಟನೆಯ ಕಾನೂನಿನ ಆಶ್ರಯ ತೆಗೆದುಕೊಳ್ಳುವ ಮಂಗಳನಿಗೆ ಪತಿಯ ಸಂಪಾದನೆಯಲ್ಲಿ ಪಾಲು ಕೇಳಲು ಸಮಾನತೆ ಅಡ್ಡಬರುವುದಿಲ್ಲ.  ತಮ್ಮ ಅನೈತಿಕ ಸಂಗಾತಿಗಳಿಗೆ ಅವರ ಹೆಂಡತಿಗೆ ಡೈವೋರ್ಸ್ ಕೊಟ್ಟು ತಮ್ಮನ್ನು ಮದುವೆಯಾಗಿ ಎನ್ನುವಾಗ ಮದುವೆ ಎಂಬ ವ್ಯವಸ್ಥೆಯ ಆಶ್ರಯ ಮಾತ್ರ ತಾನೆ  ಇವರಿಗೆ ಏಕೆ ಬೇಕು? ಮಂಗಳನಿಗೆ ಮೊದಲ ಪತ್ನಿಯ ಮಗು ಕಂಡರೆ ದ್ವೇಷ ಗಂಡನ ಕುಟುಂಬದವರೆಂದರೆ ಇಳಾಗೆ ಆಗದು .ಒಟ್ಟಿನಲ್ಲಿ ದ್ವಿಮುಖ ವ್ಯಕ್ತಿತ್ವದ, ಸ್ಪಷ್ಟ ಅಭಿಪ್ರಾಯಗಳ ತಳಹದಿ ಇರದ ಗೋಸುಂಬೆ ಗುಣಗಳನ್ನು ಅವರಲ್ಲಿ ಚಿತ್ರಿಸಿದ್ದಾರೆ.  ಇಳಾಳ ಗಂಡ ವಿನಯಚಂದ್ರ ಎಷ್ಟೆಲ್ಲ ತಡೆಗಳ ಮಧ್ಯೆ ಅಡ್ಡದಾರಿ ಹಿಡಿಯದೆ ವಿಶಿಷ್ಟನೆನಿಸುತ್ತಾನೆ.  .ಅದಕ್ಕೆ ತಾಯಿಯ ಮಮತೆ ಸಹಾಯಕವಾಯಿತೇ? ಜಯಕುಮಾರ ದುರ್ಬಲತೆ ಮೀರಲಾಗದೆ ಅಧಪತನ ಹೊಂದುತ್ತಾ ಸಾಗುತ್ತಾನೆ . ಒಮ್ಮೆ ಅವನು “ಅಮ್ಮ ನನ್ನೊಡನೆ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲವೇನೋ” ಎನ್ನುವುದು ಮತ್ತೆ ಕುಟುಂಬ ವ್ಯವಸ್ಥೆಯ ಹಿರಿಮೆ ಹಾಗೂ ಮನೆಯಲ್ಲಿ ಹಿರಿಯರು ಇರಬೇಕೆಂಬ ನುಡಿಗೆ ಪೂರಕವೇ ?

ಮನುಷ್ಯನಿಗೆ ಕಾಮಅನ್ನುವುದು ಅಷ್ಟು ಮುಖ್ಯವೇ? ಈ ಮೂಲಭೂತ ಅಂಶ ಕಾಡುತ್ತದೆ. ಅನೈತಿಕ ಸಂಬಂಧಗಳಿಗೆ ದೀರ್ಘಾಯುಸ್ಸಿಲ್ಲ.  ಅಲ್ಲದೆ ಎಲ್ಲಿಂದ ಎಲ್ಲಿಗೆ ಬಂದರೂ ಕೆಟ್ಟಹೆಸರು ಹೆಣ್ಣಿಗೇ.  ತಮ್ಮ ಸಂಸಾರ ಬಲಿಗೊಡಲು ಗಂಡಸರು ಸಿದ್ಧವಿರುವುದಿಲ್ಲ ಎನ್ನುವುದಕ್ಕೆ ಪ್ರಭಾಕರ ಹಾಗೂ ಮಂತ್ರಿ ದೊರೆಸ್ವಾಮಿ ನಿದರ್ಶನವಾಗುತ್ತಾರೆ . Having the cake and eat it too  ಅನ್ನುವುದಕ್ಕೆ ಅನ್ವರ್ಥ.  

ಸಂಕೀರ್ಣ ಮನಸ್ಸುಗಳ ಆಧುನಿಕತೆಯ ಮೋಜಿಗೆ ಬಿದ್ದ ಮನೋಭಾವಗಳ ಪೂರ್ಣ ಚಿತ್ರಣ ಇಲ್ಲಿದೆ. ಇಂತಹ ಛಿದ್ರ ಕುಟುಂಬಗಳ ಮಕ್ಕಳಿಗೆ ಆಗುವ ಮನೋಕ್ಲೇಶ ಆಘಾತಗಳ ವಿವರಣೆಯೂ ಇದೆ.  ತನ್ನದೇ ಎಲ್ಲಾ ನಡೆಯಬೇಕೆನ್ನುವಾಗ ಘಮಂಡಿ ಗಂಡಸರು ಒಮ್ಮೆ ಹೆಣ್ಣನ್ನು ಎದುರುಹಾಕಿಕೊಂಡರೆ ಏನೆಲ್ಲಾ ಆಗುತ್ತದೆ ಅಂತ ಯೋಚಿಸುವಂತೆ ಮಾಡುತ್ತದೆ.  ಕೆಲ ಸ್ನೇಹಿತರಿಗೆ ಈ ಕಾದಂಬರಿ ತಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ ಎಂಬ ಅಭಿಪ್ರಾಯ.  ವಾಸ್ತವದ ಬದುಕು ಪ್ರಸಕ್ತ ವಾತಾವರಣಗಳ ಬಗೆಗಿನ ಮುಖಾಮುಖಿ, ಕಾನೂನುಗಳು ದುರ್ಬಳಕೆಯಾಗುತ್ತಿರುವ ಅಂಶದ ಬಗ್ಗೆಯೂ ಬೆಳಕು ಚೆಲ್ಲುವ ಯೋಚನೆಗೆ ಹಚ್ಚುವಂತಹ ಕಥಾವಸ್ತುವುಳ್ಳ ಕಾದಂಬರಿ . ನನಗಂತೂ ಇಷ್ಟವಾಯಿತು.  ಎಲ್ಲ ಭೈರಪ್ಪನವರ ಕಾದಂಬರಿಗಳಂತೆ  ಓದಿ 1 ವಾರವಾದರೂ ಅದರ ಗುಂಗಿನಿಂದ ಹೊರಬರದಂತೆ, ಅದೇ ವರ್ತುಲದಲ್ಲಿ ಸುತ್ತುತ್ತಿತ್ತು, ಗುಂಗಿಹುಳುವಿನಂತೆ ಕೊರೆಯುತ್ತಿತ್ತು .

ಇನ್ನು ಮುಂದೆಯೂ  ಕಥೆ ಕವಲೊಡೆಯಬಹುದು  ಎನ್ನುವ ಸೂಚನೆಗಳು ಇವೆ . ಹಾಗಾಗಿ ಕವಲು ಶೀರ್ಷಿಕೆ ತುಂಬ ಅರ್ಥಪೂರ್ಣ.  ಕೆಲವು ಉತ್ತರಿಸದ ಪ್ರಶ್ನೆಗಳು, ಮುಗಿಸದೆ ಬಿಟ್ಟ  ಎಳೆಗಳು ಅಂಶಗಳೂ ಇವೆ.  ಓದುಗನ ಕಲ್ಪನೆಯ ಗ್ರಾಸಕ್ಕೆ ಅಂತಲೇ ಬಿಟ್ಟಿದ್ದಾರೇನೋ ………

————————————-

ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

Leave a Reply

Back To Top