ಕಾವ್ಯ ಸಂಗಾತಿ
ನಗರ ನಾಗರೀಕರು
ಅರುಣಾ ರಾವ್

ಏಳು ಗಂಟೆಗೆ ಎದ್ದು
ಬೆಡಲ್ಲೇ ಕಾಫಿ ಕುಡಿದು
ಸ್ವಿಗ್ಗಿ ಜೊಮ್ಯಾಟೋಗಳಲ್ಲಿ
ತಿಂಡಿ ಆರ್ಡರ್ ಮಾಡಿ
ತಂಗಳು ತಿಂಡಿಯನೆ ರುಚಿಯೆಂದು ಭ್ರಮಿಸಿ
ಗರಿಗರಿ ಉಡುಪನು ಧರಿಸಿ
ಮೈ ತುಂಬಾ ಸೆಂಟೊಡೆದು
ತಂಪು ಕನ್ನಡಕದಡಿಯಲ್ಲಿ
ಬಣ್ಣದ ಜಗವ ಕಾಣುವ ಭೂಪರು

ಮೈಲೇಜು ಕಡಿಮೆಯಾದರೇನಂತೆ ಚಿಂತೆ
ಶೋಕಿ ಗಾಡಿ ಕಾರುಗಳಲ್ಲೇ ದರ್ಬಾರು
ಜಾರೆ ಬಂಡಿಯಂತಿರುವ ಬೈಕೇರಿದೊಡನೆ
ವೇಗಕ್ಕೆ ಕಡಿವಾಣವಿಲ್ಲದವರು
ಅಪಘಾತ ಕಂಡರೂ
ನೆರವಾಗದ ಹಗಲುಗುರುಡರು

ಗಣಕ ಯಂತ್ರದಿ ತಲೆ ಹುದುಗಿಸಿಟ್ಟು
ವೀಕೆಂಡಿಗಾಗಿ ಬರಗೆಟ್ಟು ಬಾಯ್ಬಿಟ್ಟು
ಬಂದೊಡನೆ ಬಿಯರ್ ಬಾಟಲಿಯನ್ನೇರಿಸಿ
ಜಗದ ಜಂಜಾಟವನು ಮರೆವ ಮನುಜರು
ಕ್ಲಬ್ಬು ಪಬ್ಬು ಗಳಲ್ಲಿ ಸಂತೋಷದುಡುಕಾಟ
ರಂಗು ರಂಗಿನ ದೀಪಗಳಲ್ಲಿ ಮೆರೆದಾಟ ಕೂಗಾಟ
ಪ್ರೀತಿ ಪ್ರೇಮಕ್ಕೆ ಗೌರವಾದರಗಳಿಗೆ
ಹೊಸ ಭಾಷ್ಯ ಬರೆಯುತಿಹ ನಾಗರೀಕರು
———————————————
ಅರುಣಾ ರಾವ್
Nice Madam,
Very nice
Excellent lines