ಕಥಾಯಾನ

ರಾಮರಾಯರು

ಜಿ. ಹರೀಶ್ ಬೇದ್ರೆ

 ರಾಮರಾಯರು

ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು.

ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ ಓದು ಆಗಷ್ಟೇ ಮುಗಿದಿದ್ದು, ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಸ್ಥಳೀಯವಾಗಿ ಅಂದುಕೊಂಡ ಒಳ್ಳೆಯ ಕೆಲಸ ಸಿಗದೆ ಬೆಂಗಳೂರಿಗೆ ಹೋದ.  ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ತಿಂಗಳಿಗೊ, ಎರಡು ತಿಂಗಳಿಗೊ ಒಮ್ಮೆ ಬಂದು ಹೋಗುತ್ತಿದ್ದ.

ರಾಮರಾಯರು ಸದಾ ನಾಲ್ಕು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದವರು, ಈಗ ಎಲ್ಲಾ ಬಿಟ್ಟು ಮನೆಯಲ್ಲೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತಿತ್ತು.  ಹೊರಗಡೆ ಹೋದರೂ, ಸುಮ್ಮನೆ ಹರಟೆ ಹೊಡೆದು ಕಾಲ  ಕಳೆಯುವ ಅಭ್ಯಾಸ ಇರದ ಅವರಿಗೆ ಅಲ್ಲಿರಲು ಸಾಧ್ಯವಾಗದೆ ಮನೆಗೆ ಮರಳಿ ಬರುತ್ತಿದ್ದರು.  ಒಂದು ಕಡೆ ಅನಾರೋಗ್ಯ ಜೊತೆಗೆ ಕೆಲಸವಿಲ್ಲದೆ ಹೆಂಡತಿ ಮುಖ ನೋಡಿಕೊಂಡು ಮನೆಯಲ್ಲಿರುವುದು ಅಸಾಧ್ಯವಾಯಿತು. ಇದೇ ಚಿಂತೆಯಲ್ಲಿ ಬಿ.ಪಿ.ಯ ಜೊತೆ ಶುಗರ್ ಸಮಸ್ಯೆಯೂ ಆರಂಭವಾಯಿತು. ಅವರು ಯಾವಾಗ ಯಾವ ವಿಷಯಕ್ಕೆ ಸಿಟ್ಟಾಗುತ್ತಾರೆ, ಯಾವುದಕ್ಕೆ ಸುಮ್ಮನಿರುತ್ತಾರೆ ಎನ್ನುವುದು ಸುಲೋಚನರವರಿಗೆ ತಿಳಿಯದಾಯಿತು.  ಮೊದಲೇ ಮಿತಭಾಷಿಯಾದ ಅವರು ಮತ್ತಷ್ಟು ಮೌನಕ್ಕೆ ಶರಣಾದರು.
ಅದೊಂದು ದಿನ ಸಂಜೆ ಇದ್ದಕ್ಕಿದ್ದಂತೆ ರಾಮರಾಯರು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಸುಲೋಚನಾ ಪಕ್ಕದ ಮನೆಯವರು ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷೆ ಮಾಡಿದ ವೈದ್ಯರು, ಬಿ.ಪಿ. ಹಾಗೂ ಶುಗರ್ ಎರಡೂ ಹೆಚ್ಚಾಗಿದೆ, ಒಂದೆರೆಡು ದಿನ ಇಲ್ಲೇ ಇರಲೆಂದರು.  ವಿಚಾರ ತಿಳಿದ ಮಕ್ಕಳು ತಂದೆಯನ್ನು ನೋಡಲು ಒಂದೇ ಉಸಿರಿಗೆ ಇದ್ದ ಊರುಗಳಿಂದ ಓಡಿ ಬಂದರು. ಇದಾದ ಮೇಲೆ ತಮ್ಮದೇ ಅಸಡ್ಡೆಯಿಂದ ರಾಯರು ವರುಷದಲ್ಲಿ ಹಲವು ಬಾರಿ ಆಸ್ಪತ್ರೆಗೆ ಸೇರಿದರು. ಇದರಿಂದ ಬೇಸತ್ತ ಮಗ, ಹಗಲೆಲ್ಲ ರಜ ಹಾಕಿ ಊರಿಗೆ ಬರಲು ಸಾಧ್ಯವಿಲ್ಲ ಎಂದು ಬಲವಂತವಾಗಿ ತಂದೆ ತಾಯಿ ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ.

ಅವನಿಗೆ ಬರುವ ಸಂಬಳಕ್ಕೆ ತಕ್ಕಂತಹ ಸಣ್ಣ ಮನೆಯೊಂದನ್ನು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ.    ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಮತ್ತೆ ಸೇರುತ್ತಿದ್ದದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇರಬೇಕಿತ್ತು. ಇದು ರಾಮರಾಯರಿಗೆ ಮತ್ತಷ್ಟು ವಿಚಲಿತರಾಗುವಂತೆ ಮಾಡಿತ್ತು. ಊರಲ್ಲಾದರೆ, ಮನೆಯ ಮುಂಬಾಗಿಲಿಗೆ ಬಂದು ನಿಂತರೆ ಸಾಕು, ಹೋಗಿ ಬರುವ ಪರಿಚಿತರು ಮುಗುಳ್ನಕ್ಕು, ಅದು ಇದು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಇಷ್ಟಕ್ಕೆ ಅವರಿಗೆ ಎಷ್ಟೋ ಹಿತವೆನಿಸಿಸುತ್ತಿತ್ತು. ಆದರೆ ಇಲ್ಲಿ ಮನೆಗಳು ನೂರಿದ್ದರೂ ಎಲ್ಲಾ ಅಪರಿಚಿತರು. ಅದೇಷ್ಟೋ ದಿನಗಳ ನಂತರ ಒಂದಿಬ್ಬರು ಪರಸ್ಪರ ಮಾತನಾಡಿಸುವಂತಾಗಿದ್ದರು. ಅದೂ ಹೆಸರಿಗೆ ಮಾತ್ರ ಅನ್ನುವಂತಿತ್ತು. ಹಾಗಾಗಿ ಹೊತ್ತು ಹೋಗದೆ ರಾಮರಾಯರು, ತಾವು ಊರಿಗೆ ಹಿಂದಿರುಗುವುದಾಗಿ ಹೇಳುತ್ತಿದ್ದರು. ಆದರೆ ಅಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಎಲ್ಲಾ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲು ಮನಸ್ಸು ಒಪ್ಪದೆ ಮಗ ಬೇಡ ಅನ್ನುತ್ತಿದ್ದ. ಒಂದು ದಿನ ರಾಯರು ಹಟ ಮಾಡಿದಾಗ ಕಡ್ಡಿ ಮುರಿದಂತೆ ಎಲ್ಲಿಗೂ ಕಳಿಸುವುದಿಲ್ಲ ಎಂದು ಸ್ವಲ್ಪ ಒರಟಾಗಿಯೇ ಹೇಳಿದ.  ಇದು ಮೊದಲೇ ಕುಗ್ಗಿ ಹೋಗಿದ್ದ ರಾಮರಾಯರು ಮತ್ತಷ್ಟು ಕುಗ್ಗುವಂತೆ ಮಾಡಿತು.

ಬರಬರುತ್ತಾ ಅವರ ನಡವಳಿಕೆಯಲ್ಲಿ ಏರುಪೇರಾಗತೊಡಗಿತು. ಒಮ್ಮೊಮ್ಮೆ ಏನಾದರು ಬಡಬಡಿಸಿದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಒಂದೇ ಒಂದು ಪದವನ್ನು ಆಡದೆ ಎಲ್ಲೋ ನೋಡುತ್ತ ಮೈಮರೆತು ಕುಳಿತುಬಿಡುತ್ತಿದ್ದರು. ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ, ಒಂದು ಎರಡು ಇದ್ದ ಜಾಗದಲ್ಲೇ ಆಗಿರುತ್ತಿತ್ತು. ಇದನ್ನು ನೋಡಿ ಮಗ, ಹಲವಾರು ಡಾಕ್ಟರುಗಳಿಗೆ ತೋರಿಸಿದರೂ ಏನೂ ಉಪಯೋಗವಾಗಲಿಲ್ಲ.   ಈ ಪರಿಸ್ಥಿತಿಯಲ್ಲಿ ತಂದೆಯನ್ನು ಅಮ್ಮನೊಂದಿಗೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಕಳೀಸಲೇ ಬೇಕೆಂದರೆ ತಾನೂ ಅವರೊಂದಿಗೆ ಹೋಗಬೇಕು. ಆದರೆ ಕೈಯಲ್ಲಿರುವ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಮಗನೂ ತುಂಬಾ ಒದ್ದಾಡುತ್ತಿದ್ದ.

ಗಂಡ ಹಾಗೂ ಮಗನ ಪರಿಸ್ಥಿತಿ ಅರ್ಥವಾದರೂ ಸುಲೋಚನಾ ಏನೂ ಮಾಡುವಂತಿರಲಿಲ್ಲ.  ಹೊತ್ತು ಹೊತ್ತಿಗೆ ಸರಿಯಾಗಿ ಗಂಡನ ಬೇಕು ಬೇಡಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಆದಷ್ಟು  ಅವರ ಒದ್ದಾಟ ಮಗನಿಗೆ ತಿಳಿಯದಿರಲೆಂದು ಕಷ್ಟ ಪಡುತ್ತಿದ್ದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಮಗನ ಗಮನಕ್ಕೆ ತರುತ್ತಿದ್ದರು. ಮಗನಿಗೆ ಎಲ್ಲವೂ ಅರ್ಥವಾಗುತ್ತಿತ್ತು ಆದರೆ ತನಗೆ ಗೊತ್ತಿದೆ ಎಂದು ತೋರಿಸಿಕೊಂಡರೆ ಅಮ್ಮ ಮತ್ತಷ್ಟು ನೊಂದುಕೊಳ್ಳಬಹುದೆಂದು ತಾನು ಆರಾಮಾವಾಗಿ ಇರುವಂತೆ ನಡೆದು‌ಕೊಳ್ಳುತ್ತಿದ್ದ. ಅಲ್ಲದೆ ಅಪ್ಪನಿಗಾಗಿ ಊರಿಗೆ ಹಿಂದಿರುಗಬೇಕೆಂದು ಅಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ.

ಅದೊಂದು ದಿನ ಮನೆಯ ಎಲ್ಲಾ ಹೆಣ್ಣುಮಕ್ಕಳು ತಮ್ಮ ಗಂಡ, ಮಕ್ಕಳೊಂದಿಗೆ ಅಪ್ಪನನ್ನು ನೋಡಲು ಬೆಂಗಳೂರರಿಗೆ ಬಂದರು. ಅವರು ರಾಮರಾಯರಿಗೆ ಎಷ್ಟೇ ಮಾತನಾಡಿಸಿದರೂ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರನ್ನು ಗುರುತೂ ಹಿಡಿಯಲಿಲ್ಲ. ರಾಮರಾಯರಿಗೆ, ಮಗ ಹಾಗೂ ಹೆಂಡತಿಯ ಹೊರತಾಗಿ ಎಲ್ಲರೂ ನೆನಪು ಅಳಿಸಿಹೋಗಿತ್ತು. ಇದು ಸುಲೋಚನಾ ಮತ್ತು ಮಗನ ಗಮನಕ್ಕೆ ಬಂದೇ ಇರಲಿಲ್ಲ.  ಇದು ತಿಳಿದೊಡನೆ ಕುಸಿಯುವ ಸರದಿ ಮಗನದಾಯಿತು.

ಮನೆಗೆ ಬಂದ ಹೆಣ್ಣುಮಕ್ಕಳು , ಕೆಲಸಕ್ಕೆ ಕಾಯದೆ ತಕ್ಷಣ ಅಪ್ಪನನ್ನು ಅವರ ಆಸೆಯಂತೆ ಊರಿಗೆ ಕರೆದುಕೊಂಡು ಹೋಗು. ನಿನಗೆ ಕೆಲಸ ಸಿಗುವ ವರೆಗೂ ನಾವು ಸಹಾಯ ಮಾಡುತ್ತೇವೆ ಎಂದು ತಮ್ಮನಿಗೆ ಹೇಳಿದರು. ಇದು ಅವನಿಗೂ ಸರಿ ಎನಿಸಿ,  ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಡುಸುವುದಾಗಿ ಹೇಳಿದ.  ಹೇಳಿದಂತೆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ. ಆದರೆ ಅಲ್ಲಿನ ನಿಯಮಗಳ ಪ್ರಕಾರ ಅವನು ಒಂದು ತಿಂಗಳ ನಂತರವಷ್ಟೇ ತನ್ನ ಕೆಲಸದಿಂದ ಬಿಡುಗಡೆ ಹೊಂದಬೇಕಾಗಿತ್ತು.    ಅಷ್ಟರೊಳಗೆ ಊರಲ್ಲಿ ಇರಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಳ್ಳತೊಡಗಿದ.

ಇದ್ದ ಕೆಲಸದಿಂದ ಬಿಡುಗಡೆ ಆಗಲು ಎರಡು ದಿನ ಬಾಕಿ ಇರುವಾಗ ಅದೃಷ್ಟ ಎನ್ನುವಂತೆ ಊರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಕರೆ ಬಂತು. ಇದು ತಾಯಿ ಮಗ ಇಬ್ಬರಿಗೂ ತುಂಬಾ ಸಮಾಧಾನ ತಂದಿತ್ತು. ಕೊನೆಯ ದಿನದ ಕೆಲಸ ಮುಗಿಸಿ ಮಾರನೇ ದಿನವೇ ಊರಿಗೆ  ಹೋಗುವುದೆಂದು ಮನೆಯ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ, ಅದನ್ನು ಸಾಗಿಸಲು ಬೇಕಾದ ಲಾರಿಯನ್ನು ಗೊತ್ತು ಮಾಡಿದ್ದ.  ಹಿಂದಿನ ದಿನ ರಾತ್ರಿ ಪಕ್ಕದ ಮನೆಯವರು ಕೊಟ್ಟಿದ್ದನ್ನೇ ಮೂವರು ಊಟ ಮಾಡಿ, ನಾಳೆಯಿಂದ ಸ್ವಂತ ಊರಲ್ಲಿ ವಾಸವೆಂದು ಸಂತೋಷದಿಂದ ಬಹಳ ಹೊತ್ತು ತಾಯಿ ಮಗ ಮಾತನಾಡುತ್ತಿದ್ದರು. ರಾಮರಾಯರು ಏನೊಂದೂ ಮಾತನಾಡದಿದ್ದರೂ ಅವರ ಮುಖದಲ್ಲಿ ಹಿಂದೆಂದೂ ಕಾಣದ ತೇಜಸ್ಸು ಕಾಣುತ್ತಿತ್ತು.  ತಾಯಿ ಮಗ ಮಾತನಾಡುತ್ತಾ ಯಾವಾಗ ಮಲಗಿದರು ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಯಾರೋ ಜೋರಾಗಿ ಬಾಗಿಲು ಬಡಿದಾಗಲೇ ಅವರಿಗೆ ಎಚ್ಚರವಾಗಿದ್ದು. ಇಬ್ಬರೂ ಲಾರಿಯವನು ಬಂದಿರಬೇಕೆಂದು ದಡಬಡಾಯಿಸಿ ಎದ್ದು  ಬಾಗಿಲು ತೆರೆದರು.  ಅಲ್ಲಿ ಮೇಲಿನ ಮನೆಯವರು ಇವರಿಗೆ ಕುಡಿಯಲು ಕಾಫಿಯನ್ನು ತಂದಿದ್ದರು. ಅವರೊಂದಿಗೆ ನಾಲ್ಕು ಮಾತನಾಡಿ ಒಳಬಂದ ಸುಲೋಚನಾ, ರಾಮರಾಯರು ಕಾಫಿ ಕುಡಿಯಲೆಂದು ಎಬ್ಬಿಸತೊಡಗಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೆದರಿಕೆಯಾಗಿ ಮಗನನ್ನು ಕೂಗಿದಾಗ, ಅವನೂ ಓಡೋಡಿ ಬಂದು ತಂದೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮರಾಯರು ಏಳಲೇ ಇಲ್ಲ. ರಾತ್ರಿ ಅವರ ಮುಖದಲ್ಲಿ ಕಂಡ ತೇಜಸ್ಸು ಈಗಲೂ ಹಾಗೇ  ಇತ್ತು……….

*********

2 thoughts on “ಕಥಾಯಾನ

Leave a Reply

Back To Top