ಅಂಕಣ ಸಂಗಾತಿ
ಒಲವ ಧಾರೆ
ಅವ್ವನೆಂದರೇ ಪ್ರೀತಿಯ
ತ್ಯಾಗದ ಒಡಲು…
.
ಪ್ರತಿಯೊಬ್ಬ ಮನುಷ್ಯನು ಹುಟ್ಟುತ್ತಲೇ ‘ಅಮ್ಮ’ ಎಂದು ಕರೆಯುತ್ತಾನೆ. ಸಾಯುವಾಗಲೂ ‘ಅಮ್ಮ’ ಎಂದು ಪ್ರಾಣವನ್ನು ಅರ್ಪಿಸುತ್ತಾನೆ. ಈ ಹುಟ್ಟು ಮತ್ತು ಸಾವಿನ ನಡುವಿನ ಬದುಕು ಎಷ್ಟೊಂದು ವಿಚಿತ್ರವೆಂದರೇ.. ಪ್ರತಿ ಹಂತದಲ್ಲಿಯೂ ನಮ್ಮ ಕಷ್ಟ, ನೋವು, ಸಂಕಟಗಳಿಗೆ ಮಿಡಿಯುವ ಹೃದಯವೆಂದರೆ ಅದು ತಾಯಿ ಹೃದಯ ಮಾತ್ರ..!! ತಾಯಿ ತನ್ನ ಮಗನಿಗಾಗಿ/ ಮಗಳಿಗಾಗಿ ಕುಟುಂಬದ, ಸಲುವಾಗಿ ತನ್ನ ಸಂಕಟವನ್ನು ಮನದೊಳಗೆ ತುಂಬಿಕೊಂಡು ನಗೆಯನ್ನು ಚೆಲ್ಲುತ್ತಾ.. ಎಲ್ಲರನ್ನೂ ಸಲಹುವ ಜೀವವೆಂದರೆ ಅದು ತಾಯಿ..!!
“ತಾಯಿ ಇದ್ದರೆ ಬಾಯಿ” ಎನ್ನುವ ಮಾತೃ ವಾತ್ಸಲ್ಯದ ವಾಕ್ಯದಂತೆ ತಾಯಿ ಇದ್ದರೆ ಮಕ್ಕಳ ಆರೈಕೆ, ಶಿಕ್ಷಣ, ಪೋಷಿಸುವಿಕೆ,ರಕ್ಷಣೆ ಎಲ್ಲದರಲ್ಲಿಯೂ ತಾಯಿಯ ಪಾತ್ರ ಬಹು ದೊಡ್ಡದು..!
ಕೃಷಿಯಾಧಾರಿತ ಕುಟುಂಬದಲ್ಲಿಯಾಗಲಿ ಅಥವಾ ಕೃಷಿಯೇತರ ಕುಟುಂಬದಲ್ಲಿಯಾಗಲಿ ತಾಯಿ ನಸುಕಿನಲ್ಲಿಯೇ ಎದ್ದು ದೈನಂದಿನ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಾಳೆ. ಕಸ ಗೂಡಿಸುವದರಿಂದ ಪ್ರಾರಂಭವಾಗಿ ಅಡುಗೆ, ಮುಸುರೆ, ಮಕ್ಕಳಿಗೆ ಬುತ್ತಿ ಕಟ್ಟುವುದು, ಕೆಲಸಕ್ಕೆ ಹೋಗುವ ಕುಟುಂಬದವರಿಗೆ ಸಹಾಯ ಮಾಡುವುದು ನಂತರ ಅವರು ಉಂಡುಬಿಟ್ಟ ಮುಸರೆಯನ್ನು ತಿಕ್ಕುವುದು. ಒಂದು ವೇಳೆ ಉದ್ಯೋಗಸ್ಥ ಮಹಿಳೆಯಾಗಿದ್ದರಂತೂ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಕಚೇರಿಯ ಅಥವಾ ತಾವು ಮಾಡುವ ಕೆಲಸದ ಜವಾಬ್ದಾರಿಯನ್ನು ಚಾಚು ತಪ್ಪದೇ ನಿಭಾಯಿಸಿಕೊಂಡು ಹೋಗಬೇಕು. ನೌಕರಿಯನ್ನೂ ಅತ್ಯಂತ ನಿಷ್ಠೆಯಿಂದ ಮಾಡುತ್ತಾ, ಕೌಟುಂಬಿಕ ಜವಾಬ್ದಾರಿಯನ್ನು ಅಷ್ಟೇ ನಿಷ್ಠೆಯಿಂದ ನಿಭಾಯಿಸುತ್ತಾ ಎಲ್ಲರನ್ನೂ ನಿಭಾಯಿಸುತ್ತಾಳೆ. ಇಡೀ ಕುಟುಂಬದ ಒಳಿತನ್ನು ಬಯಸುವ ತ್ಯಾಗಜೀವಿ ಆಕೆ. ಕೃಷಿಯಾಧರಿತ ಕುಟುಂಬದ ಮಹಿಳೆಯಾದರೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಮುಂಜಾನೆಯಿಂದಲೇ ಪ್ರಾರಂಭಿಸಿ, ಹೊಲಕ್ಕೆ ಹೋಗುವ, ಎಲ್ಲರಿಗೂ ಬುತ್ತಿಯನ್ನು ಕಟ್ಟಿ, ಅವರ ಜೊತೆಗೆ ತಾನೂ ಹೊಲದ ಕೆಲಸಕ್ಕೆ ಸಿದ್ದಗೊಂಡು ಹೋಗುತ್ತಾಳೆ. ಸುಗ್ಗಿಯ ಕಾಲದಲ್ಲಿ ಅಳುಗಳನ್ನು ಕರೆದುಕೊಂಡು ಅವರೊಡನೆ ಪ್ರೀತಿಯಿಂದ ಮಾತನಾಡುತ್ತಾ, ಗದ್ದೆ ಹೊಲದ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಾಳೆ. ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆಗೆ ಹೋಗುವ ಹೆಣ್ಣುಮಕ್ಕಳು ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ತರುವ ಗುರುತುರವಾದ ಪಾತ್ರ ಅವರದು. ಹಾಗಾಗಿ ನಮ್ಮ ಜಾನಪದ ಹೆಣ್ಣು ಮಕ್ಕಳ ಬದುಕನ್ನು ಬಹಳ ಸೊಗಸಾಗಿ ತಮ್ಮ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ.
ಹೊಸದರಲ್ಲಿ ಬಂದ ಹೆಣ್ಣು ಮಗಳು ಗಂಡನ ಮನೆಯ ಎಲ್ಲಾ ಸದಸ್ಯರ ಮನಸ್ಸನ್ನು ಆರ್ಥೈಸಿಕೊಂಡು, ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು, ಹೊಸ ಪರಿಸರದಲ್ಲಿ ಎಲ್ಲರನ್ನೂ ಒಳಗೊಂಡು, ಎಲ್ಲರ ಪ್ರೀತಿಯನ್ನು ಗಳಿಸುತ್ತಾ, ಅವರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾಳೆ. “ಉತ್ತಮರ ಮಗಳೆಂದು” ತವರು ಮನೆಗೆ ಕೀರ್ತಿ ತರುವ ಕರ್ತವ್ಯವನ್ನು ನಿಭಾಯಿಸುತ್ತಾಳೆ.
ಎರಡು ವರ್ಷ ಇಲ್ಲವೇ ಮೂರು ವರ್ಷವಾದೊಡನೆ ಮಕ್ಕಳು, ಮಕ್ಕಳನ್ನು ಲಾಲಿಸುವ, ಪಾಲಿಸುವ ಹೊಣೆ ಹೊರುತ್ತಾಳೆ. ಇತ್ತ ಗಂಡನ ಮಾತುಗಳಿಗೆ ಕಿವಿಗೊಡುತ್ತಲೇ ಅತ್ತೆ ಮಾವನವರಿಗೂ ಪ್ರೀತಿಯ ಸೊಸೆಯಾಗಿ ಕರ್ತವ್ಯವನ್ನು ಮಾಡುತ್ತಾಳೆ. ಮಕ್ಕಳ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ನಿಭಾಯಿಸುತ್ತಾಳೆ. ತಾಯಿಯಾದವಳು ತಾನು ಉಣ್ಣದಿದ್ದರೂ ಮಕ್ಕಳ ಹೊಟ್ಟೆಯನ್ನು ತುಂಬಿಸುವ ಬಹುದೊಡ್ಡ ತ್ಯಾಗ ಜೀವಿ. ಮಕ್ಕಳು ಶಾಲೆಯಿಂದ ಬಂದೊಡನೆ ಅವರ ಬ್ಯಾಗನ್ನು ತೆಗೆದು ಸ್ವಚ್ಛಗೊಳಿಸುವ, ಅವರಿಗೆ ಚಹಾ ಇಲ್ಲವೇ ಹಾಲನ್ನು ನೀಡುವುದರ ಮೂಲಕ ಮತ್ತು ಅವರನ್ನು ಅಭ್ಯಾಸ ಮಾಡಲು ಅಣಿಗೊಳಿಸುತ್ತಾಳೆ. ಶಾಲೆಯಲ್ಲಿ ಕೊಟ್ಟ ಅಭ್ಯಾಸದ ಚಟುವಟಿಕೆಗಳನ್ನು ಮಾಡಿಸುತ್ತಾ ತನ್ನ ಮನೆಯ ಕೆಲಸವನ್ನೂ ನಿಭಾಯಿಸುತ್ತಾಳೆ ತಾಯಿ.!!
ನೋಡು ನೋಡುತ್ತಲೇ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ..! ಕಾಲೇಜು ಕಟ್ಟಿ ಹತ್ತುತ್ತಾರೆ. ಹತ್ತಾರು ಕನಸುಗಳನ್ನು ಕಟ್ಟಿದ ತಂದೆ ತಾಯಿಗಳ ಆಸೆಯನ್ನು ಈಡೇರಿಸುವ ಭರವಸೆಯ ಮಕ್ಕಳು ಒಂದು ಕಡೆಯಾದರೆ… ತಂದೆ ತಾಯಿಗಳ ಆಸೆಯನ್ನು ಪೂರೈಸದೆ ತಮ್ಮದೇ ಲೋಕದಲ್ಲಿ ಕಳೆದು ಬದುಕನ್ನು ಹಾಳು ಮಾಡಿಕೊಂಡ ಮಕ್ಕಳು ಇನ್ನೊಂದು ಕಡೆ. ಎಂತಹದೆ ಮಕ್ಕಳಿರಲಿ ಅವರನ್ನು ನಿಭಾಯಿಸುವ ಹೊಣೆಗಾರಿಕೆ ತಾಯಿಯದು.ಗಂಡ ಕೊಟ್ಟ ಅಲ್ಪಸ್ವಲ್ಪ ದುಡ್ಡಿನ್ನು ಸಾಸಿವೆ ಡಬ್ಬಿಯಲ್ಲಿಯೋ,ಜಿರಿಗಿ ಡಬ್ಬಿಯಲ್ಲಿಯೋ ಇಟ್ಟು, ಗಂಡನಿಗೆ ಗೊತ್ತಾಗದಂತೆ ಮಗಳ ಇಲ್ಲವೇ ಮಗನ ಖರ್ಚಿಗೋಸ್ಕರ ನೀಡುವ ಧಾರಾಳತನ ತಾಯಿಯದು. ಮಗ ನಾನು ಪ್ರವಾಸಕ್ಕೆ ಹೋಗಬೇಕು ಎಂದಾಗ ಅಪ್ಪ ಜೋರಾಗಿ ಬಾಯಿ ಮಾಡಿ “ಬೇಡ” ಎಂದಾಗ ಅಷ್ಟೇ ಅಕ್ಕರೆಯಿಂದ ತಾಯಿಯು, “ಇಲ್ಲ ರೀ ಮಗ ಬೆಳೆದು ದೊಡ್ಡವನಾಗಿದ್ದಾನೆ. ಅವನಿಗೆ ನೀವು ಏನು ಅನ್ಬೇಡಿ ಅವಾ ಗೆಳೆಯರ ಜೊತೆ ಪ್ರವಾಸಕ್ಕೆ ಹೋಗಿ ಬರಲಿ, ನನ್ನ ಕಡೆ ಒಂದಿಷ್ಟು ದುಡ್ಡಿದೆ” ಎಂದು ಗಂಡನ ಕೈಗೆ ಕೊಡುತ್ತಾ ತಾಯಿ ದೊಡ್ಡತನವನ್ನು ಮೆರೆಯುತ್ತಾಳೆ..!! ಇನ್ನು ಮಗಳು ಕೂಡ ಅಷ್ಟೇ ತಾಯಿಯ ಬಳಿ ಬಂದು, “ಅಮ್ಮ ನನ್ನ ಗೆಳತಿಯರೆಲ್ಲರೂ ಹೊಸ ಬಟ್ಟೆಯನ್ನು ತೆಗೆದುಕೊಳ್ಳುತ್ತಿದ್ದಾರೆ, ನಾನೂ ಬಟ್ಟೆಯನ್ನು ತೆಗೆದುಕೊಳ್ಳಬೇಕು, ನನಗೆ ಅಪ್ಪನಿಂದ ದುಡ್ಡು ಕೊಡಿಸು” ಎನ್ನುವಾಗ ತಾಯಿಯ ಕರುಳು ಮಿಡಿಯದೆ ಇರದು. ತಾಯಿಯ ಗುಣವೇ ಅಂತಹದು. ಅದು ತನ್ನದು ಎನ್ನುವ ಯಾವ ಸ್ವತ್ತನ್ನು ತನ್ನ ಬಳಿ ಇಟ್ಟುಕೊಳ್ಳದೆ, ತನ್ನ ಸ್ವಂತಕ್ಕೆ ಬಳಸಿಕೊಳ್ಳದೆ, ಎಲ್ಲವನ್ನು ಮಕ್ಕಳಿಗಾಗಿ, ಗಂಡನಿಗಾಗಿ ಬಿಟ್ಟು ಕೊಡುವ ದೊಡ್ಡ ಮನದವಳು ತಾಯಿ.
ಒಂದು ವೇಳೆ ಗಂಡ ಕುಡುಕನಾದರೆ ಅವನು ಕೊಡುವ ಎಲ್ಲ ಚಿತ್ರಹಿಂಸೆಯನ್ನು ಸಹಿಸಿಕೊಳ್ಳುತ್ತಾ, ಹಗಲೆಲ್ಲ ದುಡಿಯುತ್ತಾ ಬಂದ ಅಲ್ಪ ಸ್ವಲ್ಪ ಕೂಲಿಯಲ್ಲಿಯೇ ಕುಟುಂಬವನ್ನು ನಿಭಾಯಿಸುತ್ತಾ, ಅದರಲ್ಲಿಯೇ ಗಂಡನ ಕುಡಿತಕ್ಕೂ ದುಡ್ಡು ಕೊಡುವ ತಾಯಂದಿರರಿಗೆ ಈ ಸಮಾಜದಲ್ಲಿ ಕೊರತೆ ಇಲ್ಲ. ಗಂಡ ಕುಡುಕನಾದರೇನು..? ಆತ ಚೆನ್ನಾಗಿರಲಿ, ಆತನ ಆರೋಗ್ಯ ಕೆಡದಿರಲಿ ಎನ್ನುವ ಉದಾತ್ತ ಮನೋಭಾವವಿದ್ದರೂ ಗಂಡನ ಕಿರುಕೊಳಕ್ಕೆ ಅನಿವಾರ್ಯವಾಗಿ ಕುಡಿತಕ್ಕೆ ದುಡ್ಡು ಕೊಡುವ ಪ್ರಸಂಗ ಅವರಿಗೆ ತಪ್ಪಿದ್ದಲ್ಲ. ಎಷ್ಟೋ ಸಲ ಕುಡುಕ ಗಂಡನು ಕೊಡುವ ಹೊಡೆತಗಳಿಗೆ ಮೈಯೆಲ್ಲಾ ಬಾಸುಂಡಿಯಾಗಿ, ಕೈಕಾಲುಗಳು ಊದಿಕೊಂಡಿದ್ದುಂಟು. ಬೇರೆಯವರಿಗೆ ಹೇಳಿದರೆ ಆಡಿಕೊಂಡು ನಕ್ಕು ಬಿಟ್ಟಾರು ಎಂದು ಎಲ್ಲವನ್ನೂ ತಾನೇ ನುಂಗಿಕೊಳ್ಳುವ ಅವಳ ಗುಣ ವರ್ಣನಾತೀತವೇ ಸರಿ. “ಸರೀಕರೆದರು ನಾವು ಹಗುರವಾಗಬಾರದು ಮಕ್ಕಳಾ… ನಾವು ಯಾರಿಗೂ ಕೈಚಾಚಬಾರದು, ಅಲ್ಲದೇ ಹೊರೆಯಾಗಬಾರದು” ಎನ್ನುವ ಆಕೆಯ ಮಾತುಗಳಿಗೆ ನಮ್ಮಿಂದ ಪ್ರೀತಿಯ ಮೌನ ಹಾಗೂ ಸಾಂತ್ವಾನವಷ್ಟೇ ಕೊಡಬಲ್ಲೆವು.
“ಸಮಯ ಹಾಗೂ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ” ಎನ್ನುವ ಮಾತೊಂದಿದೆ. ಕಾಲ ಎಲ್ಲವನ್ನು ಮರೆಸುತ್ತದೆ, ಮೆರಸುತ್ತದೆ, ನೋಯಿಸುತ್ತದೆ, ಸಾಂತ್ವಾನಿಸುತ್ತದೆ, ಮೌನವಾಗಿಸುತ್ತದೆ, ಅನುಭವದ ದೊಡ್ಡ ಮೂಟೆಯನ್ನೇ ಕಟ್ಟಿಕೊಡುತ್ತದೆ. ಮಕ್ಕಳ ಮದುವೆಯಾಯಿತು..! ಸೊಸೆ ಅಥವಾ ಅಳಿಯನ ಆಗಮನ, ಅವರೊಡನೆ ಹೊಂದಾಣಿಕೆಯ ಕೊರತೆಯಿಂದಲೊ ಇಲ್ಲವೇ ಅವರ ತಿರಸ್ಕಾರದಿಂದಲೋ ಬಾಲ್ಯದಿಂದ ಎಲ್ಲವನ್ನೂ ಕೊಡುವ ಕಾಮಧೇನುವಿನಂತಿದ್ದ ತಾಯಿ ಬೇಡವಾಗುತ್ತಲೇ ಮೆಲ್ಲಗೆ ಮಕ್ಕಳಿಗೆ ಬೇಡವಾಗುತ್ತಲೇ ದೂರವಾಗುತ್ತಾಳೆ..!! ಮನೆಯಲ್ಲಿ ಸದಾ ಗಂಡನೊಡನೆ ಜಗಳವಾಡುವ ಸೊಸೆಯು ‘ಅತ್ತೆ’ಯನ್ನು ಮನೆಯಿಂದ ಹೊರ ಹಾಕುವ ಅನೇಕ ಆಲೋಚನೆಗಳು ಕೈಗೂಡದೇ ಹೋದಾಗ ಸೊಸೆಯ ಚಡಪಡಿಕೆ ಹೇಳತೀರದು..!! “ತಾಯಿಯನ್ನು ಜೋಪಾನ ಮಾಡುತ್ತಾ, ಆಕೆಯು ಹತ್ತು ತಿಂಗಳ ಹೊತ್ತು,ಹೆತ್ತು ಜೋಪಾನ ಮಾಡಿದ ಋಣವನ್ನು ನಾನು ತೀರಿಸುತ್ತೇನೆ” ಎನ್ನುವ ಹಂಬಲ ಮಗನಿಗಿದ್ದರೂ.. ಹೆಂಡತಿಯ ಅನಾದರಕ್ಕೆ ತುತ್ತಾದರೂ ಕುಟುಂಬದ ನೆಮ್ಮದಿಯನ್ನು ಕಳೆದುಕೊಳ್ಳುವುದನ್ನು ಮರೆಯುವಂತಿಲ್ಲ. ಇದೆಲ್ಲವನ್ನು ದೂರದಿಂದಲೇ ಗಮನಿಸುತ್ತ ನೋಡಿದ ತಾಯಿ ಯಾರಿಗೂ ಏನೂ ಹೇಳದಂತೆ ತನ್ನ ನೋವನ್ನು ತುಟಿ ಕಚ್ಚಿಕೊಂಡು ಸೀರೆ ಸೆರಗಿನಲ್ಲಿ ಕಣ್ಣೀರು ವರೆಸಿಕೊಳ್ಳುತ್ತಾ ವೃದ್ಯಾಪವನ್ನು ತಳ್ಳುವಾಗ “ಅಯ್ಯೋ ಶಿವನೇ ನನ್ನ ಗಂಡನೆಂಬ ದೇವರು ಹೋದಾಗಲೇ ನನ್ನನ್ನು ಕರೆದುಕೊಳ್ಳಬಾರದಿತ್ತೇ..” ಎಂದು ಕಣ್ಣೀರು ಸುರಿಸುತ್ತಾ ಅಂತಿಮ ದಿನಗಳಿಗಾಗಿ ಕಾತುರದಿಂದ ಕಾಯುವ ಹೆತ್ತ ಕರುಳಿನ ಆಕ್ರಂದನ..!! ಮುಂದೊಂದು ದಿನ ನಾನು ಅತ್ತೆಯಾಗುತ್ತೇನೆ, ವಯಸ್ಸಾಗುತ್ತದೆ, ಎನ್ನುವ ಸೂಕ್ಷ್ಮತೆ ಇಲ್ಲದ ಸೊಸೆಯಂದಿರರನ್ನು ಪ್ರೀತಿಯಿಂದಲೇ ಹಾರೈಸುತ್ತಾಳೆ ಹೆತ್ತ ತಾಯಿ. “ಮಗ ಸೊಸೆ ಚೆನ್ನಾಗಿರಲಿ, ಮೊಮ್ಮಕ್ಕಳು ಸದಾ ನಗುತಿರಲಿ” ಎನ್ನುತ್ತಾ ಸದಾಶಯದೊಂದಿಗೆ ವೃದ್ಯಾಪವನ್ನು ತಳ್ಳುವಾಗ ಆಕೆಯ ಸಂಕಟವನ್ನು, ನೋವನ್ನು ಕೊಡುವುದು ಒಳ್ಳೆಯದಲ್ಲ.
ಬದುಕಿನ ಒಂಟಿತನವನ್ನು ಕಳೆಯಬೇಕಾದುದು ಮಗನ,ಮೊಮ್ಮಕ್ಕಳ, ಸೊಸೆಯಂದಿರರಾ ಆದ್ಯ ಕರ್ತವ್ಯ ಎಂಬುವುದನ್ನು ನಾವು ಯಾವತ್ತೂ ಮರೆಯಬಾರದು. ಕುಟುಂಬವೆಂಬ ಮರದ ಬೇರು ಗಟ್ಟಿಯಾಗಿದ್ದರೆ ಮರ ಹಚ್ಚಹಸುರಿನಿಂದ ನಳನಳಿಸಲು ಸಾಧ್ಯ, ಅದು ಬೆಳವಣಿಗೆ ಕಾಣುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಇಂದಿನ ಬದುಕಿನಲ್ಲಿ ಸಂಬಂಧಗಳು ಯಾಂತ್ರಿಕೃತವಾಗಿರುವುದು ದುರಂತ. ನಾವು ಯಾರ ಋಣವನ್ನಾದರೂ ತೀರಿಸಬಹುದು. ಆದರೆ ತಾಯಿಯ ಋಣ ತೀರಿಸಲಾಗದು ಎಂಬ ಸಣ್ಣ ಪ್ರಜ್ಞೆ ನಮ್ಮೊಳಗಿರಲಿ. ವಾತ್ಸಲ್ಯದ ಒರತೆಯ ತಾಯಿಯ ಒಡಲಿಗೆ ಸಾವಿರದ ಶರಣು ಶರಣಾರ್ಥಿಗಳು.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ತಾಯಿ ದೇವರು ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.. ಆದರೂ ಸ್ಥಳದ ಇತಿಮಿತಿಯಲ್ಲಿ ಬರೆದ ಲೇಖನ ಸೂಪರ್