ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಾನೆಷ್ಟು ಸುಖಿ

ಜೀವನವಿದು ಸುಖ ದುಃಖಗಳ ಮಿಶ್ರಣ, ನೋವು ನಲಿವು ನೋವುಗಳ ಪರಿಭ್ರಮಣ, ಶೋಕ ಸಂತೋಷಗಳ ರಸಾಯನ.  ಅವರ ಆಯ್ಕೆಗೇ ಬಿಟ್ಟರೆ ಸಂತೋಷವೇ ಬೇಕು ಸರ್ವರಿಗೂ,  ಕೇಳದಿದ್ದರೂ ಸಂಕಟ ಕೊಟ್ಟೇ ಕೊಡುತ್ತಾರೆ ಭಗವಂತ ಹೀಗಾಗಿ.  ಈ ಚಕ್ರದ ಸುತ್ತಾಟದಲ್ಲೇ ಸವೆಸಬೇಕು ಬಾಳು ಆದರೆ ಅದರ ಜೊತೆಗೆ ಸವಿಯನ್ನು ಸವಿಯುವುದೇ  ಜೀವನದ ಅರ್ಥ ಗಮ್ಯ. ಜೀವನದ ಈ ಯಾನದಲ್ಲಿ ಗಮ್ಯ ಮುಖ್ಯವಲ್ಲ ಸಾಗುವ ಹಾದಿ ರೋತಿನೀತಿ ಮುಖ್ಯ . 

ಹಾಗಾದರೆ ಸುಖ ಎಂದರೇನು? ಯಾರೊಬ್ಬರ ಊಹೆಯ ಮಿತಿಯಲ್ಲಿರದ,  ವ್ಯಕ್ತಿಯಿಂದ ವ್ಯಕ್ತಿಗೆ ಅಷ್ಟೇ ಏಕೆ ಒಬ್ಬನೇ ವ್ಯಕ್ತಿಯಲ್ಲೂ ಕಾಲದಿಂದ ಕಾಲಕ್ಕೆ ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಚಂಚಲ ಭಾವವಿದು.  ಜೀವನದಲ್ಲಿ ಕಷ್ಟಗಳೇ ಇರದ  ಪರಿಪೂರ್ಣ ಸುಖಿ ಯಾರೊಬ್ಬರೂ ಇಲ್ಲ. ಕಡಿಮೆ ಕಷ್ಟದವರು ಸುಖಿಗಳು ಎನ್ನಬಹುದು ಬೇಕಾದರೆ. ದೈಹಿಕ ಶ್ರಮವಿಲ್ಲದ ಬದುಕು ಸುಖವೇ ? ಕಠಿಣ  ಶ್ರಮದಿಂದ ಬದುಕು ದೂಡುವವನಿಗೆ ಹಾಗೆನಿಸಬಹುದು, ಶ್ರೀಮಂತ ಸುಖಿಯೆಂದು ಬಡವ ಭಾವಿಸಬಹುದು, ತಮಗೆ ಲಭ್ಯವಿರದ ಇನ್ನೊಂದನ್ನು ಹೊಂದಿರುವವನು ಸುಖಿ ಎಂದು ಅರ್ಥೈಸಬಹುದು.  ಹೀಗಾಗಿ ಸುಖಕ್ಕೆ ಸರಿಯಾದ ಅರ್ಥ ವ್ಯಾಖ್ಯಾನ ಕೊಡಲು ಸಾಧ್ಯವಿಲ್ಲ . ಕಷ್ಟದ ನಂತರ ಬರುವ ಸುಖಕ್ಕೆ ಬೆಲೆ ಹೆಚ್ಚು ಅದನ್ನು ಸಂಸ್ಕೃತ ಸುಭಾಷಿತ ಹೀಗೆ ಹೇಳಿದೆ 

ಯದೇವೋಪನತಃ ದುಃಖಾತ್ ಸುಖಮ್  ತದ್ರಸವತ್ತರಮ್

ನಿರ್ವಾಣಾಯ ತರುಚ್ಛಾಯಾ ತಪ್ತಸ್ಯ ಹಿ  ವಿಶೇಷತಃ

ಕಷ್ಟವನ್ನನುಭವಿಸಿದ ಮೇಲೆ ಬರುವ ಸುಖವು ಬಹಳ ರುಚಿಯಾಗಿರುತ್ತದೆ.  ಬಿಸಿಲಿನಲ್ಲಿ ನಡೆದು ಬಳಲಿದ ದಾರಿಗನಿಗೆ ಮರದ ನೆರಳು ಹೆಚ್ಚು ತಂಪನ್ನು ಕೊಡುತ್ತದೆ. ಮೊದಲಿನಿಂದ ಮರದ ನೆರಳಲ್ಲಿ ಇರುವವನಿಗೆ ಅದರ ಅಗತ್ಯತೆ ಉಪಯುಕ್ತತೆಯ ಅರಿವು ಇರುವುದಿಲ್ಲ. ಬಿಸಿಲಲ್ಲಿ ದೂರದಿಂದ ನಡೆದು ಬಂದವನಿಗೆ ಮರದ ನೆರಳು ಹೆಚ್ಚು ಆಪ್ಯಾಯಮಾನವೆನಿಸುತ್ತದೆ.  ಹೀಗೆ ಇರುವ ಸೌಕರ್ಯಗಳಿಗೆ ಒಗ್ಗಿರುವವರು ಅದು ಸಾಮಾನ್ಯವೆಂದುಕೊಂಡು ನಂತರ ಅದರ ಅನುಪಸ್ಥಿತಿಯಲ್ಲಿ ಅವಶ್ಯಕತೆ ಮನಗಂಡ ಮೇಲೆ ಮತ್ತೆ ಪಡೆದಾಗ ಹೆಚ್ಚು ಸುಖ ಅನುಭವಿಸುವಂತೆ.

ಸುಖಗಳು ಭೌತಿಕ, ಮಾನಸಿಕ, ಆಧ್ಯಾತ್ಮಿಕ ಯಾವ ಬಗೆಯದಾದರೂ ಆಗಬಹುದು.  ಭೌತಿಕ ವಸ್ತುಗಳು ತಂದುಕೊಡುವ ಅನುಕೂಲತೆಗಳು, ಪ್ರೀತಿಪಾತ್ರರಿಂದ ಕುಟುಂಬ ಸ್ನೇಹಿತ ಸಮಾಜದಿಂದ ಸಿಗುವ ಪ್ರೇಮ ಆದರ ಮನ್ನಣೆಗಳು, ತನ್ನೊಳಗೆ  ಆತ್ಮ ಸಂತೋಷ ಪಡುವ ಆಧ್ಯಾತ್ಮಿಕ ಸುಖವಾಗಿರಬಹುದು ಎಲ್ಲವೂ ಸುಖದ ವಿವಿಧ ಮಜಲುಗಳು.  ಎಲ್ಲವೂ ಅನಿವಾರ್ಯವೇ ಆಶಿತವೇ ಅಪೇಕ್ಷಿತವೇ.  ಜೀವನದ ಒಂದೊಂದು ಸಮಯದಲ್ಲಿ ಒಂದೊಂದರ ಅವಶ್ಯಕತೆ ಮನಸ್ಸಿಗೆ ಹೆಚ್ಚು . ಹಾಗೆಂದು ಯಾವುದೋ ಕನಿಷ್ಟವೂ ಅಲ್ಲ ಗರಿಷ್ಠವೂ ಅಲ್ಲ . ಬರೀ ತ್ಯಾಗವೇ ತುಂಬಿರುವ ಬಾಳು ಸಹನೀಯವಲ್ಲ ,ಬರಿ ಭೋಗ ವ್ಯಕ್ತಿಗೆ ಶೋಭೆಯಲ್ಲ.  ತ್ಯಾಗ ಭೋಗಗಳ ಹಿತಮಿತ ಸಂಗಮದ ಸಮನ್ವಯದ ಬದುಕು ವ್ಯಕ್ತಿ ಹಾಗೂ ಸಮಾಜದ ಆರೋಗ್ಯಕರ ಸುಸ್ಥಿತಿಗೆ ಸಹಾಯಕ .ನಮಗೂ ಅಷ್ಟೆ ತಾನೆ ಬಾಲ್ಯದಲ್ಲಿ ಭೌತಿಕ ಸುಖದ ಹಂಬಲ, ಯೌವ್ವನ ನಡುಹರೆಯ ಗಳಲ್ಲಿ ಪ್ರೀತಿವಾತ್ಸಲ್ಯಗಳ ಮೇಲೆ ಅವಲಂಬನೆ, ಬದುಕಿನ ಮುಸ್ಸಂಜೆಯ ದಿನಗಳಲ್ಲಿ ಆಧ್ಯಾತ್ಮಿಕ ಸುಖದ ಹುಡುಕಾಟ . ಇದು ಮಾನವ ಬದುಕಿನ ನೇರ ಸರಳ ಆಯಾಮ ನಿಯಮ. ಕೆಲವೊಮ್ಮೆ ಒಂದೊಂದು ಸಾರಿ ಈ ಸುಖಗಳ ಅನುಕ್ರಮಣಿಕೆ ಹಿಂಚು   ಮುಂಚು ಆಗಬಹುದು. 

ಇನ್ನು ಕವಿ ಕಾವ್ಯದಲ್ಲಿ ಸುಖದ ಪರಿಕಲ್ಪನೆಯ ಬಗ್ಗೆ ಕೊಂಚ ಗಮನ ಹರಿಸೋಣ ಸರ್ವಜ್ಞನ ಮಾತುಗಳಲ್ಲಿ ಹೇಳುವುದಾದರೆ 

ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿವ ಸತಿಯಿರಲು 

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ 

ಮೂಲಭೂತ ಅಶನ ವಸನ ಸಾಂಗತ್ಯಗಳಿದ್ದರೆ ಸ್ವರ್ಗ ಎನ್ನುವುದು ಇಲ್ಲೇ ಕಾಣಬಹುದು ಎನ್ನುತ್ತಾನೆ ಸರ್ವಜ್ಞ .ಇಲ್ಲಿ ಭೌತಿಕ ಹಾಗೂ ಮಾನಸಿಕ ಸುಖಗಳ ಸುಂದರ ವರ್ಣನೆಯನ್ನು ಕಾಣಬಹುದು.  

ಮುಂದೆ ನಮ್ಮ ಜಿ ಪಿ ರಾಜರತ್ನಂ ಅವರು ಹೇಳೋದನ್ನ ಕೇಳೋಣ ಬನ್ನಿ 

ಹೇಳ್ಕೊಳೋಕೊಂದೂರು ತಲೆಮ್ಯಾಗೆ ಒಂದ್ಸೂರು ಮಲಗಾಕೆ ಭೂಮ್ತಾಯಿ ಮಂಚ 

ಕೈಹಿಡಿದೋಳ್  ಪುಟ್ನಂಜಿ ನಗ್ ನಗ್ತಾ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ 

ಸುಖದ ಜೀವನಕ್ಕೆ ತೀರಾ ಬೇಕಾದಷ್ಟು ಇದ್ದರೆ ಸಾಕು.  ತಲೆ ಮೇಲೆ 1 ಸೂರು ಅರಮನೆಯೇ ಬೇಕಿಲ್ಲ, ಗುಡಿಸಲಾದರೂ ನಡೆದೀತು ಮಲಗಲಿಕ್ಕೆ ಹಂಸತೂಲಿಕಾತಲ್ಪ ಬೇಡವೇ ಬೇಡ,ನೆಲದ ಮೇಲೆ ಮಲಗಿದರೆ ಆಯಿತು,ಊಟಕ್ಕೆ ಮೃಷ್ಟಾನ್ನ ಭೋಜನವೇನೂ ಬೇಡ ಉಪ್ಪು ಹಾಕಿದ ಗಂಜಿ ಸಾಕು ಆದರೆ ಅದನ್ನು ಕೊಡುವ ನಂಜಿ ಮಾತ್ರ ನಗುನಗುತ್ತಾ ಕೊಡಬೇಕು ಅಷ್ಟೆ .ಅಲ್ಲಿಗೆ ರತ್ನನ ಪ್ರಪಂಚ ಸುಖಮಯ . ಇಲ್ಲಿ ಭೌತಿಕ ಸುಖಗಳು ಕಡಿಮೆಯಾದರೂ ಚಿಂತೆಯಿಲ್ಲ ಮಾನಸಿಕವಾಗಿ ಶ್ರೀಮಂತರಾಗಿರಬೇಕು ಎಂಬ ಭಾವ ಒಡಮೂಡಿವೆ.  ಸರ್ವಜ್ಞನಾಗಲಿ ರಾಜರತ್ನಂ  ಅವರಾಗಲಿ ದಾಂಪತ್ಯದ ಸಾಮರಸ್ಯ ಭಾವಕ್ಕೆ ಹೆಚ್ಚು ಒತ್ತುಕೊಡುತ್ತಾರೆ.  ಇಂದಿನ ಸಮಾಜ ಭೌತಿಕವಾಗಿ ಹಣಗಳಿಸುವ ಓಟದ ಸ್ಪರ್ಧೆಗೆ ಬಿದ್ದು ಈ ಮೂಲಭೂತ ಅವಶ್ಯಕತೆಯನ್ನೇ ಮರೆಯುತ್ತಿದ್ದಾರೆ ಅಂತ ಸಹಜವಾಗಿಯೇ ಅನ್ನಿಸುತ್ತಿದೆ .

ಇವು ಭಾರತೀಯ ಕನ್ನಡದ ಕವಿ ಅವಲೋಕನವಾದರೆ ಉಮರನ ಒಸಗೆ ಯಲ್ಲಿ ಏನಿದೆ ನೋಡೋಣ. 

ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು 

ರೊಟ್ಟಿಯಲಿನಿಸೊಂದು ಕುಡಿಕೆಯಲಿ ಮಧುವು 

ಮೇಣ್ ಮುಗುದೆ ನೀ ಕುಳಿತು ಪಾಡಲಹ ಕಾಡಾದೊಡೇನದುವೆ ಸಗ್ಗ ಸುಖವೆನಗೆ 

ಇಲ್ಲಿ ಕವಿಗೆ ಮನೆ ಸಹ ಬೇಕಿಲ್ಲ ಮರದ ನೆರಳೇ ಸಾಕು ಹೊಟ್ಟೆಗೆ ರೊಟ್ಟಿ ಭೌತಿಕ ದೇಹ ಸ್ವಲ್ಪ ರಸಿಕತೆಗೆ ಒಂದಷ್ಟು ಮಧು ಸಖಿಯ ಸಂಗೀತ ಇಷ್ಟಿದ್ದರೆ ನಗರ ಜೀವನವೂ ಬೇಡ ಕಾಡೂ ಸ್ವರ್ಗವೆಂದೇ ಅನಿಸುತ್ತಂತೆ.  

ಹೀಗೆ ಸುಖದ ಪರಿಕಲ್ಪನೆಗಳನ್ನು ವೀಕ್ಷಿಸುತ್ತಾ ನಡೆದರೆ “ಸಾಕು ಎಂದರೆ ಶ್ರೀಮಂತ ಬೇಕು ಎನ್ನುವವ ಬಡವ” ಎಂಬ ಮಾತು ನೆನಪಿಗೆ ಬರುತ್ತದೆ.  ಇರುವಷ್ಟಕ್ಕೇ ತೃಪ್ತಿಪಡುವ ಮನೋಭಾವವಿದ್ದು ಅತಿಯಾದ ಬಯಕೆಗಳ ಗುಲಾಮರಾಗದೆ ಹೋದರೆ ಅದುವೇ ಸುಖ.  ಇಷ್ಟು ದೊರಕಿದರೆ ಮತ್ತಷ್ಟರಾಸೆ ಎಂದು ಕಾಮನೆಗಳ ಪಟ್ಟಿ ಬೆಳೆಸುತ್ತಾ ಹೋದರೆ,  ನಿನ್ನೆಯ ಘಟನೆಗಳ ನೆನೆದು ಕೊರಗುತ್ತಾ ಕುಳಿತರೆ, ಮುಂದೆಂದೋ ನಡೆಯುವುದರ ಬಗ್ಗೆ  ಹೆದರಿ ಚಿಂತಿಸಿದರೆ ಸುಖ ಖಂಡಿತಾ ಇರದು.  ಸಾಕು ಎನ್ನುವ ಸಂತೃಪ್ತಿ ಒಂದಿದ್ದರೆ ಅವನೇ ಪರಮಸುಖಿ. ಕಷ್ಟ ನೋವು ಇದ್ದರೇನೇ ಬಾಳಿನಲ್ಲಿ ಮಾಗಲು ಸಾಧ್ಯ ಅನುಭವದಲ್ಲಿ ಹಣ್ಣಾಗಲು ಅದುವೇ ಮಾರ್ಗ. ಅದಕ್ಕೆ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ

ವಹಿಸು ಕೆಲಭಾರಗಳ ಸಹಿಸು ಕೆಲ ನೋವುಗಳ;

ಪ್ರಹರಿಸರಿಗಳನನಿತು   ಯುಕ್ತಗಳನರಿತು 

ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು 

ವಿಹರಿಸಾತ್ಮಾಲಯದಿ __ ಮಂಕುತಿಮ್ಮ  ॥೯೦೪॥

ಹೀಗಾಗಿ ಸುಖವೆಂದರೆ ವಸ್ತುಗಳ ಸಂಗ್ರಹ ಅನುಭವವಲ್ಲ ಮನದ ಪರಿಭಾವ ಅವಸ್ಥೆ ಅನುಭಾವ.  ದೇವರಿಗೆ ನಮಗೆಷ್ಟು ಕೊಡಬೇಕೆಂದು ಗೊತ್ತು,  ಕೊಡುತ್ತಾನೆ ಎಂಬ ಭಾವವಿದ್ದರೆ ಪರಮಸುಖ .ಆಗ ಮಾತ್ಸರ್ಯ ಸಂತಾಪಗಳು ಇರವು .ಕರ್ಮಸಿದ್ಧಾಂತ ಒಂದನ್ನು ನಂಬಿದರೆ ಸಾಕು ಅದೇ ಪರಮೋಚ್ಚ ಸುಖವೀಯುತ್ತದೆ.

ಇದಿಷ್ಟು ಸಾಮಾನ್ಯವಾಗಿ ಸುಖದ ಭಾಷ್ಯಗಳು.  ತೀರಾ ವೈಯಕ್ತಿಕ ನೆಲೆಗೆ ಬಂದರೆ ಇಲ್ಲೂ ಮನೋಧರ್ಮದ ಭೂಮಿಕೆಯೇ ಹೆಚ್ಚು ಮಹತ್ತರ . ಒಳ್ಳೆಯ ತಂದೆ ತಾಯಿ ತಂಗಿಯರು ಸುಂದರ ಬಾಲ್ಯ ಒಳ್ಳೆಯ ಶಿಕ್ಷಣ ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸುಖವೇ ನಂತರ ಮನಮೆಚ್ಚಿದವರೊಡನೆ ಮದುವೆ, ಸುಖವಾಗಿ ಜೀವಿಸಲು ಸಾರ್ಥಕ ಉದ್ಯೋಗ.  ಇಲ್ಲಿ ಮಕ್ಕಳಿಲ್ಲದ ಕೊರತೆ ಎದುರಾ ದರೂ ಅದನ್ನೇ ಬೃಹದಾಗಿಸಿ ಕೊರಗದೆ ಮುನ್ನಡೆದಿದೆ ಜೀವನ.  ಓದಲು ಕಲಿತ ದಿನದಿಂದ ಈ ಕ್ಷಣದವರೆಗೂ ಸಾಂಗತ್ಯ ನೀಡಿವೆ ಪುಸ್ತಕಗಳು.  ಇತ್ತೀಚೆಗೆ ಆರಂಭಿಸಿದ ಬರವಣಿಗೆ ಸಂತಸದ ಸುಖಾನುಭವ ನೀಡಿದೆ ನೀಡುತ್ತಿದೆ . ಸಾಕಿಷ್ಟು ದೇವ ಬೇರೇನನ್ನು ಕೇಳಲಾರೆ.  “ಕೊಡುವುದೆಲ್ಲ ಕೊಡುವನವನು ಇನ್ನೂ ಆಸೆಯೇತಕೆ ಎಂಬ ಸಮರ್ಪಣಾ ಭಾವ ಬೆಳೆಸಿಕೊಂಡಿರುವುದರಿಂದ ದೈವದಲ್ಲಿ ಅಪಾರ ನಂಬಿಕೆ ಇರಿಸಿರುವುದರಿಂದ ನಿಜಕ್ಕೂ ನಾನು ತುಂಬಾ ತುಂಬಾ ಸುಖೀನೇ. ಪ ನನ್ನ ನೆಚ್ಚಿನ ಕಗ್ಗದ ಮತ್ತೊಂದು ಉದಾಹರಣೆಯೊಂದಿಗೆ ಈ ಲೇಖನ ಮುಗಿಸುವೆ 

ಆರಲೆನ್ನಯ ಹೃದಯ ಕರಣಗಳ ಕಾವುಗಳು 

ಸೇರಲೆನ್ನಯ ಜೀವ ವಿಶ್ವಜೀವದಲಿ 

ಧಾರುಣಿಯ ಮಡಿಲೆನ್ನ ಕೊಳಲಿ: ಜಗಮರೆತಿರಲಿ ಹಾರಯಿಸು ನೀನಿಂತು _ ಮಂಕುತಿಮ್ಮ ॥೯೨೦॥


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

Leave a Reply

Back To Top