ಅಂಕಣ ಸಂಗಾತಿ

ಗಜಲ್ ಲೋಕ

ಬರಹದ ಅಕ್ಷಯ ಪಾತ್ರೆ

ಸಿದ್ದರಾಮ ಹೊನ್ಕಲ್

ಅದೆನೋ ಕಾತುರ, ತಮ್ಮೊಂದಿಗೆ ಮಾತನಾಡಲು. ಅಂತೆಯೇ ಮೂಡಣದ ನೇಸರನನ್ನು ಓವರ್ ಟೇಕ್ ಮಾಡಿ ಇಂದು ನಮ್ಮ ಭಾಷಾ ವೈಶಿಷ್ಟ್ಯದ ಗಜಲ್ ಗೋ ಒಬ್ಬರೊಂದಿಗೆ ಬಂದಿದ್ದೇನೆ, ತಮ್ಮೊಂದಿಗೆ ಅನುಸಂಧಾನಗೈಯಲು. ….

ನನ್ನ ಎಲ್ಲ ಗಜಲ್ ಪ್ರೇಮಿಗಳಿಗೆ ಗಜಲ್ ಮಧುಶಾಲೆಯ ದ್ವಾರಪಾಲಕನ ಶುಭ ಒಸಗೆ…!!

ಯಾವಾಗ ಮನಸು ಬಿಚ್ಚಿ ಅತ್ತಿದ್ದಾರೆ

ಜನರು ನೆಮ್ಮದಿಯಿಂದ ಮಲಗಿದ್ದಾರೆ”

ಅಹ್ಮದ್ ಫರಾಜ್

       ಉಸಿರಾಡುವ ಪ್ರತಿ ಜೀವಿಯಲ್ಲಿಯೂ ‘ಮನಸ್ಸು’ ಇರುತ್ತದೆ. ಮನಸ್ಸು ಚಿಂತೆ, ಯೋಚನೆ, ಆಲೋಚನೆಗಳ ಒಂದು ಕಂತೆ. ನಮ್ಮ ಮನಸ್ಸಿನಲ್ಲಿ ಒಂದು ಯೋಚನೆ ಉತ್ಪತ್ತಿಯಾದಾಗ ಅದು ಒಂದು ತರಂಗದ ವೇಗದಲ್ಲಿ ಸ್ಪಂದಿಸುತ್ತದೆ. ಹೀಗೆ ಪ್ರತಿಯೊಂದು ಯೋಚನೆಗೂ, ಆಸೆಗೂ, ಭಾವನೆಗೂ ನಿಗದಿತ ತರಂಗದ ವೇಗವಿರುತ್ತದೆ. ಇವೆಲ್ಲಕ್ಕೂ ಒಂದು ಸೂಕ್ತವಾದ ವೇದಿಕೆಯನ್ನು ಒದಗಿಸುವುದೆ ಮನಸ್ಸು. ಈ ಮನಸಿನಲ್ಲಿ ಭಾವನೆಗಳು ಹೆಪ್ಪುಗಟ್ಟಿರುತ್ತವೆ. ಈ ಭಾವನೆ ಎಂಬುದು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ನಮ್ಮ ಭಾವನೆಗಳು ನಮ್ಮ ಆಲೋಚನೆಗಳಿಗೆ ಗುಲಾಮವಾಗಿವೆ. ಆಲೋಚನೆಯ ಸೆಲೆಯಲ್ಲಿ ರೂಪುಗೊಂಡ ಭಾವನೆಗಳ ಗೊಂಚಲು ‘ಸಾಹಿತ್ಯ’ವನ್ನು ಸೃಷ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದ ಮಾನವತಾವಾದಿ ಹೆಲೆನ್ ಆಡಮ್ಸ್ ಕೆಲ್ಲರ್ ಅವರ “The best and most beautiful things in the world cannot be seen or even touched. They must be felt with the heart” ಹೇಳಿಕೆಯು ಯೊಚನೆಗಳಿಗೆ ರೂಪ ಕೊಡುವ ಭಾವನೆಗಳ ತವರೂರು ಹೃದಯದ ಪ್ರಾಮುಖ್ಯತೆ ಹಾಗೂ ಸಾಹಿತ್ಯದ ಮಹತ್ವವನ್ನು ಸಾರುತ್ತದೆ.

ವೈವಿಧ್ಯಮಯ ಆಲೋಚನೆಗಳು ಸಾರಸ್ವತ ಲೋಕದಲ್ಲಿ ಅನೇಕ ಸಾಹಿತ್ಯ ರೂಪಗಳಿಗೆ ಜನ್ಮ ನೀಡಿವೆ. ಜಾಗತಿಕ ಅಕ್ಷರ ಲೋಕದಲ್ಲಿ ಅಸಂಖ್ಯಾತ ಬರಹಗಾರರು ಆಗಿ ಹೋಗಿದ್ದಾರೆ. ಒಬ್ಬೊಬ್ಬರು ಒಂದೊಂದು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವವರ ಮಧ್ಯೆ ಹಲವು ಪ್ರಕಾರಗಳಲ್ಲಿ ಒಬ್ಬ ಬರಹಗಾರ ತಮ್ಮ ಛಾಪನ್ನು ಮೂಡಿಸಿರುವುದು ವಿಶೇಷವಾಗಿ ಕಂಡುಬರುತ್ತದೆ. ಇಂಥಹ ಪ್ರತಿಭೆಗಳ ಕಣಜವನ್ನು ಎಲ್ಲ ಭಾಷೆಯ ಸಾಹಿತ್ಯ ವಲಯದಲ್ಲಿ ಗುರುತಿಸುತ್ತೇವೆ. ಇದಕ್ಕೆ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯು ಹೊರತಾಗಿಲ್ಲ. ಹೊಸಗನ್ನಡದ ನವೋದಯಪೂರ್ವ ಕಾಲಘಟ್ಟದಿಂದಲೂ ಇಂಥಹ ಸವ್ಯಸಾಚಿ ಸಾಹಿತಿಗಳನ್ನು ಕಾಣುತ್ತೇವೆ. ಅಂಥಹ ಬಹುಮುಖ ಪ್ರತಿಭೆಗಳಲ್ಲಿ ಶ್ರೀ ಸಿದ್ಧರಾಮ ಹೊನ್ಕಲ್ ಅವರೂ ಸಹ ಒಬ್ಬರು.

         ಲಲಿತ ಪ್ರಬಂಧಕಾರರಾಗಿ, ಕಥೆಗಾರರಾಗಿ, ಪ್ರವಾಸ ಕಥನಕಾರರಾಗಿ, ಕವಿಗಳಾಗಿ, ಪತ್ರಕರ್ತರಾಗಿ, ಗಜಲ್ ಕಾರರಾಗಿ, ಹೈಕು ಮಾಸ್ಟರ್ ಆಗಿ ಹಾಗೂ ಸೃಜನಶಿಲತೆಯ ಬಹುಮುಖ ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರನಾಡಿನ ಕೇಂದ್ರ ಸ್ಥಳ ಸಗರ ದಲ್ಲಿ ಶ್ರೀ ಶರಣಬಸಪ್ಪ ಹೊನ್ಕಲ್ ಮತ್ತು ಶ್ರೀಮತಿ ಕಾಂತಮ್ಮ ಹೊನ್ಕಲ್ ದಂಪತಿಗಳ ಮಗನಾಗಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಗರದಲ್ಲಿ, ನಂತರ ಸುರಪುರದ ಶ್ರೀಪ್ರಭು ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಎಲ್.ಎಲ್.ಬಿ,ಯನ್ನು ಕಲಬುರ್ಗಿಯಲ್ಲಿ, ಡಿ.ಎನ್.ಹೆಚ್.ಇ, ಆರೋಗ್ಯದ ಬಗೆಗಿನ ಡಿಪ್ಲೋಮಾವನ್ನು ದೆಹಲಿಯಲ್ಲಿ, ಪಿಜಿಡಿಎಂಸಿಜೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾವನ್ನು ಮೈಸೂರಿನಲ್ಲಿ ಓದಿ ಪದವೀಧರರಾಗಿರುವ ಶ್ರೀಯುತರು ಕಥೆ, ಕಾವ್ಯ,ಹನಿಗವನ,ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಜೀವನ ಚರಿತ್ರೆ, ಸಂಪಾದನೆ, ಗಜಲ್, ಹೈಕು, ತಂಕಾ, ಶಾಯರಿ, ವಿಮರ್ಶೆ – ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಮಾಜಶಾಸ್ತ್ರ ಭೋಧಕರಾಗಿ ಕಾರ್ಯನಿರ್ವಹಿಸಿ,ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿಯಾಗಿಯೂ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

       ಶ್ರೀ ಸಿದ್ಧರಾಮ ಹೊನ್ಕಲ್ ಅವರದು ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತ ಹೆಸರು. ಸಾಹಿತ್ಯ ಲೋಕದ ಹತ್ತಾರು ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ! ಇಲ್ಲಿಯವರೆಗೆ ಶ್ರೀಯುತರು ಹತ್ತು ಹಲವಾರು ಮೌಲ್ಯಿಕ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿಧಾನ..ನೆಲದ ನಿಲುವು ಎನ್ನುವ ನಾಲ್ಕು ಕಥಾಸಂಕಲನಗಳು,ಅಕ್ಕನಿಗೊಂದು ಪ್ರಶ್ನೆ, ಅಂತರಂಗದ ಹನಿಗಳು, ಹೊಸ ಹಾಡು…, ಸುಖಿಗೀತ, ನೂರಾರು ಹನಿಗಳು ಹೀಗೆ ಐದು ಕವನ ಸಂಕಲನ, ನುಗ್ಗಿ ಬರುವ ನೆನಪುಗಳು, ಹೃದಯಗೀತ.., ಎಲ್ಲ ಮರೆತಿರುವಾಗ…,ಬಿಸಿಲ ನಾಡಿನ ಬುಗ್ಗೆಗಳು, ಮರೆಯುವ ಮುನ್ನ ಎನ್ನುವ ಐದು ಲಲಿತ ಪ್ರಬಂಧಗಳ ಸಂಕಲನ, ಪಂಚನದಿಗಳ ನಾಡಿನಲ್ಲಿ, ಮೂರು ದೇಶ ನೂರೊಂದು ಅನುಭವ,ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಕಲಬುರ್ಗಿಯಿಂದ ಕಾಠಮಂಡುವಿನವರೆಗೆ, ಗಾಂಧಿಯ ನಾಡಿನಲ್ಲಿ, ಪಂಚವಟಿಯ ನೆಲದಲ್ಲಿ… ಎನ್ನುವ ಆರು ಪ್ರವಾಸ ಕಥನಗಳು, ನಾಡೋಜ ಶ್ರೀ ಶಾಂತರಸ,ಸಕಲೇಶ ಮಾದರಸ, ಕಾಯಕ ಯೋಗಿ ಚರಬಸವ ಶರಣರು,ವಿಮೋಚನಾ ಹೋರಾಟಗಾರ ಶ್ರೀ ಅಚ್ಙಪ್ಪಗೌಡ ಸುಬೇದಾರ, ದಾನ ದೈವಜ್ಞ, ಎನ್ನುವ ಆರು ವ್ಯಕ್ತಿ ಚಿತ್ರಣಗಳು, ಹೊನ್ನಗರಿ ಹೈಕುಗಳು ಎಂಬ ಹೈಕು ಸಂಕಲನ ಹಾಗೂ ಆಕಾಶಕ್ಕೆ ಹಲವು ಬಣ್ಣಗಳು, ಹೊನ್ನಮಹಲ್, ನಿನ್ನ ಪ್ರೇಮವಿಲ್ಲದೆ ಸಾಕಿ, ಆತ್ಮಸಖಿಯ ಧ್ಯಾನದಲಿ.. ಎನ್ನುವ ಗಜಲ್ ಸಂಕಲನಗಳು ಮುಖ್ಯವಾಗಿವೆ.ಇತ್ತೀಚಗೆ ಹೊನ್ಕಲ್ ರ ಶಾಯಿರಿಲೋಕ, ಒಲಿದಂತೆ ಹಾಡಿರುವೆ ೧೦೧ ಲೇಖಕರ ಸಾಹಿತ್ಯ ವಿಮರ್ಶೆ ಕೃತಿ, ಇವುಗಳೊಂದಿಗೆ ಇನ್ನೂ ಹಲವು ಕೃತಿಗಳು ಪ್ರಕಟಣೆಯ ಹಂತದಲ್ಲಿರುವುದು ಶ್ರೀಯುತರ ದೈತ್ಯ ಪ್ರತಿಭೆಯ ದ್ಯೋತಕವಾಗಿದೆ!

        ಶ್ರೀ ಸಿದ್ಧರಾಮ ಹೊನ್ಕಲ್‌ ಅವರ ಹಲವು ಬರಹಗಳು ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಜಿಲ್ಲಾ, ರಾಜ್ಯ ಹಾಗೂ ಅಖಿಲ ಭಾರತ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಇವರು ೧೦ ಸಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ, ದೆಹಲಿ ಹಾಗೂ ಪಂಜಾಬಿನಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ, ಮೈಸೂರ ದಸರಾ ಕವಿಗೋಷ್ಠಿಯಲ್ಲಿ, ರಾಜ್ಯಮಟ್ಟದ ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನವಾಚನ ಮಾಡಿದ್ದಾರೆ. ಇವರ ಒಟ್ಟು ಸಾಹಿತ್ಯದ ಮೇಲೆ ಗುಲ್ಬರ್ಗ ವಿವಿಯಿಂದ ಒಬ್ಬರು ಸಂಶೋಧನಾ ಮಹಾ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.ಇವರ ಸಣ್ಣಕಥೆಗಳ ಮೇಲೆ ಕಿರು ಪ್ರಬಂಧವನ್ನು ಸಲ್ಲಿಸಿ ಎಂ.ಫಿಲ್ ಪದವಿಯನ್ನೂ ಪಡೆದಿದ್ದಾರೆ. ಹೊನ್ಕಲ್ ಅವರ ಹಲವು ಬರಹಗಳು ನಾಡಿನ ಹಲವಾರು ವಿಶ್ವವಿದ್ಯಾಲಯದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಗಳಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

 ಶ್ರೀಯುತರ ಸಾಹಿತ್ಯ, ಸಂಘಟನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವಿಸಿ ಸರ್ಕಾರ ಹಾಗೂ ಸರ್ಕಾರೇತರ ಬಹು ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಸತ್ಕರಿಸಿವೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೂರು ಬಾರಿ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ ಪುರೋಹಿತ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಸತತವಾಗಿ ಆರು ಸಲ ಕಥಾ ಪುರಸ್ಕಾರ,ಒಟ್ಟಾರೆ ಗುಬವಿ ಯಿಂದ ಒಂಬತ್ತು ಸಲ ಪುರಸ್ಕಾರ ಪಡೆದಿದ್ದಾರೆ. ಶ್ರೀವಿಜಯ ಪ್ರಶಸ್ತಿ,ಅತ್ತಿಮಬ್ಬೆ ಪ್ರಶಸ್ತಿ, ಸಂಚಯ ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪುರಸ್ಕಾರ, ಅಕ್ಷರ ಲೋಕದ ನಕ್ಷತ್ರ ಪುರಸ್ಕಾರ, ಅಮ್ಮ ಗೌರವ ಪುರಸ್ಕಾರ,ಸಗರನಾಡಿನ ಸಿರಿ, ಕುಂವಿ ಕಥಾ ಪುರಸ್ಕಾರ, ಸಾಹಿತ್ಯ ಸಾರಥಿ, ರಾಷ್ಟ್ರೀಯ ಬಸವ ಪುರಸ್ಕಾರ,ಗೌಡ ಪುರಸ್ಕಾರ.ಮಹಾತಪಸ್ವಿ ಕುಮಾರಸ್ವಾಮಿಗಳ ಸಾಹಿತ್ಯ ಭೂಷಣ ಪುರಸ್ಕಾರ, ಹಾಸನದಿಂದ ಕಾವ್ಯ ಮಾಣಿಕ್ಯ ಪುರಸ್ಕಾರ ಅವರ ನಿನ್ನ ಪ್ರೇಮವಿಲ್ಲದೆ ಸಾಕಿ ಗಜಲ್ ಕೃತಿಗೆ, ಕನ್ನಡನಾಡು ಲೇಖಕ ಓದುಗರ ಪ್ರಕಾಶನ ಸಂಸ್ಥೆ ಇವರ ಹೊನ್ನಮಹಲ್ ಗಜಲ್ ಕೃತಿಗೆ, ಮಹಾಕವಿ ಕುವೆಂಪು ಅವರ ಅನಿಕೇತನ ಪುರಸ್ಕಾರ ಇವರ ಆತ್ಮಸಖಿಯ ಧ್ಯಾನದಲಿ ಗಜಲ್ ಕೃತಿಗೆ ಹಾಗೂ ಅವ್ವ ಪುರಸ್ಕಾರ ಇವರ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಕೃತಿಗೆ, ಸಗರನಾಡ ಸೌರಭ ಪುರಸ್ಕಾರ ಇವರ ಹೊನ್ನಗರಿಯ ಹೈಕುಗಳು..ಕೃತಿಗೆ ಹೀಗೆ ಇತರ ಕೃತಿಗಳಿಗೆ ಸೇರಿ ಒಟ್ಟು ನಲವತ್ತಕ್ಕೂ ಹೆಚ್ಚು ಗೌರವಯುತ ಪುರಸ್ಕಾರಗಳು ಇವರಿಗೆ ಲಭಿಸಿವೆ.

೨೦೧೩ ರಲ್ಲಿ ಜರುಗಿದ ಯಾದಗಿರಿ ಜಿಲ್ಲಾ ಮಟ್ಟದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,೨೦೧೭ರಲ್ಲಿ ನಡೆದ ಶಹಾಪುರ ತಾಲೂಕ ೨ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೧೮ ರ ೪ನೇ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿರುವ ಇವರು ಒಂದೇ ವರ್ಷದಲ್ಲಿ ನಾಲ್ಕು ಬಹು ಮುಖ್ಯ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಗಜಲ್ ಪರಂಪರೆಗೆ ಅರ್ಪಿಸಿರುವುದು ಹಾಗೂ ಆ ಎಲ್ಲ ಸಂಕಲನಗಳಿಗೆ ಒಂದಿಲ್ಲೊಂದು ಪ್ರಶಸ್ತಿ ಬಂದಿರುವುದು ನಮ್ಮ ಗಜಲ್ ಲೋಕಕ್ಕೆ ಸಂದ ಗೌರವವಾಗಿದೆ ಎಂದರೆ ತಪ್ಪಾಗಲಾರದು!

       ಪ್ರತಿ ಮನುಷ್ಯ ತನ್ನ ಜೀವನದುದ್ದಕ್ಕೂ ನೋವು, ಹತಾಶೆ, ಖಿನ್ನತೆ ಮತ್ತು ದುಃಖವನ್ನು ಬದಿಗೊತ್ತಿ ಸುಖ, ಸಂತೋಷ ಹಾಗೂ ನೆಮ್ಮದಿಯನ್ನು ಹುಡುಕುತ್ತ ; ಅದನ್ನು ಕಂಡುಕೊಳ್ಳಲು ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಿರುತ್ತಾನೆ. ಆದರೆ ಕಣ್ಣೀರಿನ ಈ ಜಗತ್ತು ನಮ್ಮನ್ನು ಬೆಳಗಿಸುತ್ತದೆ ಎಂಬುದನ್ನು ಮರೆತಿರುತ್ತಾನೆ. ಅಂತೆಯೇ ನಮ್ಮ ಬದುಕಿನಲ್ಲಿ ಆನಂದ ಮರೀಚಿಕೆಯಾಗಬಹುದೆ ಹೊರತು ಕಂಬನಿಯಲ್ಲ! ಪ್ರತಿಯೊಂದು ಕಣ್ಣಿಗೂ ಅದರಲ್ಲಿ ಮುಳುಗಲು ಸಾಗರದಷ್ಟು ಆಳವಿದೆ. ಕಣ್ಣೀರು ಅತೀವ ನೋವಿನ ಸಂಕೇತ ಮಾತ್ರವಲ್ಲ, ಅದು ಅತೀವ ಆನಂದದ ಸಂಕೇತವೂ ಹೌದು. ಜೀವನದಲ್ಲಿ ನೋವು, ರಕ್ತ ಮತ್ತು ಕಣ್ಣೀರು ಇಲ್ಲದೆ ಗೆಲುವು ಅಪೂರ್ಣವಾಗಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಲೋಕವನ್ನು ಗಮನಿಸಿದಾಗ ಕಣ್ಣೀರು ಅದರ ಹೊಳಪನ್ನು ಹೆಚ್ಚಿಸಿದೆ. ನೋವನ್ನೂ ಪ್ರೀತಿಸುವಂತೆ ಮಾಡುವ ಅದ್ಭುತ ಕಲೆಯನ್ನು ಗಜಲ್ ಕರಗತ ಮಾಡಿಕೊಂಡಿದೆ. “The God who gave me eyes, has failed to wipe my tears” ಎಂಬ ಲುಫಿನಾ ಲೂರ್ದುರಾಜ್ ರವರ ಮಾತು ಬದುಕಿನ ವಾಸ್ತವತೆಯನ್ನು ತೆರೆದಿಡುತ್ತದೆ. ಈ ವಾಸ್ತವವನ್ನೆ ಗಜಲ್ ಉಸಿರಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಬದುಕನ್ನು ಎದುರು ನೋಡುವ ಅವಶ್ಯಕತೆ ಇದೆ. ನಮ್ಮಲ್ಲಿರುವ ಹಣದ ಸಂಪತ್ತನ್ನು ಲೆಕ್ಕ ಹಾಕುವ ಬದಲು ನಮ್ಮ ಕಣ್ಣೀರು ಒರೆಸಲು ಎಷ್ಟು ಜನರು ಬರುತ್ತಾರೆ ಎಂದು ಲೆಕ್ಕ ಹಾಕುವುದನ್ನು ಗಜಲ್ ಕಲಿಸಿ ಕೊಡುತ್ತದೆ.

ಈ ನೆಲೆಯಲ್ಲಿ ಅವಲೋಕನ ಮಾಡಿದರೆ ಗಜಲ್ ಗೋ ಶ್ರೀ ಸಿದ್ಧರಾಮ ಹೊನ್ಕಲ್ ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದ ಬೇಗೆ ಓದುಗರನ್ನು ಹೆಚ್ಚು ಕಾಡುತ್ತದೆ. ಇವುಗಳೊಂದಿಗೆ ಅವರ ದಟ್ಟವಾದ ಅನುಭವ, ಲೋಕದೃಷ್ಟಿ, ಸಾಮಾಜಿಕ ಸಂವೇದನೆ,ಪ್ರೀತಿಯ ಹಿತೋಪದೇಶ, ವ್ಯವಸ್ಥೆಯ ವಿಡಂಬನೆ, ಮನುಷ್ಯನ ಎಡಬಿಡಂಗಿತನ, ಸಂಬಂಧಗಳ ಕಣ್ಣಾಮುಚ್ಚಾಲೆ… ಎಲ್ಲವೂ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಈ ಕೆಳಗಿನ ಷೇರ್ ಪ್ರೀತಿಯ ಅಗಾಧತೆಯನ್ನು ಸಾರುತ್ತ, ಆ ಪ್ರೀತಿಯಲ್ಲಿ ಮುಳುಗಿದವರ ಹಾಡು-ಪಾಡು ಹೇಗಿರುತ್ತದೆ ಎಂಬುದನ್ನು ತುಂಬಾ ಸರಳವಾಗಿ ಹಾಗೂ ಸ್ಪಷ್ಟವಾಗಿ ಸಾರುತ್ತಿದೆ.

ನೀರಲ್ಲಿ ಮುಳುಗಿದವರ ಕೈ ಹಿಡಿದು ಮೇಲೆ ತರಬಹುದಾಗಿದೆ ಚಿನ್ನಾ

ಪ್ರೀತಿ ಪ್ರೇಮದಲಿ ಮುಳುಗಿದವರ ಕೈ ಹಿಡಿದು ಮೇಲೆ ತರಲಾಗದಾಗಿದೆ ಚಿನ್ನಾ”

ಪ್ರೀತಿ ಎನ್ನುವುದು ಬತ್ತದ ತೊರೆ. ಯಾವಾಗಲೂ ಹೃದಯದಲ್ಲಿ ಜಿನುಗುತ್ತಲೆ ಇರುತ್ತದೆ. ಈ ಪ್ರೀತಿಯ ಕುರಿತು ಅನಾದಿಕಾಲದಿಂದಲೂ ಬರೆಯುತ್ತಲೆ ಬಂದಿದ್ದಾರೆ, ಯೋಚಿಸುತ್ತಲೇ ಬಂದಿದ್ದಾರೆ, ಪ್ರೀತಿಯ ಸೆಳವಿನಲ್ಲಿ ಸಿಕ್ಕಿ ಒದ್ದಾಡುತ್ತಲೆ ಬಂದಿದ್ದಾರೆ… ಆದಾಗ್ಯೂ ಅದರ ಬಗೆಗಿನ ಸೆಳೆತ, ಮೋಹ, ಕ್ರೇಜ್ ಯಾವುದೂ ಕಡಿಮೆಯಾಗಿಲ್ಲ. ಅಂತೆಯೇ ಪ್ರತಿ ಪ್ರೇಮಿ ತನ್ನದೇ ಆದ ಪ್ರೇಮಲೋಕವೊಂದನ್ನು ಸೃಷ್ಟಿಸಿ ಅದರಲ್ಲಿಯೆ ಜೀವಿಸುತ್ತಿರುತ್ತಾನೆ. ಅದರಿಂದ ಅವರನ್ನು ಹೊರ ತರಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸಾರ್ವತ್ರಿಕ ಸತ್ಯವಾಗಿದೆ. ಇದನ್ನೇ ಗಜಲ್ ಗೋ ಅವರು ತಮ್ಮ ಷೇರ್ ಮುಖಾಂತರ ಅರುಹಿದ್ದಾರೆ.

    ಪ್ರೀತಿ ಎರಡು ಅಲಗಿನ ಕತ್ತಿ.ಯಾವಾಗಲೂ ಕಮಿಟ್ಮೆಂಟ್ ಬಯಸುತ್ತಿರುತ್ತದೆ. ಸಾಮಾನ್ಯವಾಗಿ ‘ಮಾತು ಬೆಳ್ಳಿ, ಮೌನ ಬಂಗಾರ’ ಎನ್ನಲಾಗುತ್ತದೆ. ಆದರೆ ಪ್ರೇಮಿಯ ಮೌನ ಸೂತಕವೆ ಸರಿ. ಈ ಮೌನವನ್ನು  ಸುಖನವರ್ ಸಿದ್ಧರಾಮ ಹೊನ್ಕಲ್ ಅವರ ಷೇರ್ ಒಂದರ ಮೂಲಕ ಆಲಂಗಿಸೋಣ.

ನನ್ನ ಕೊಲ್ಲಲು ನಿನಗೆ ಬೇರೆ ಹತಾರುಗಳೇನು ಬೇಡ ಸಾಕಿ

ಆ ನಿನ್ನ ದಿವ್ಯ ಮೌನವಷ್ಟೇ ಸಾಕು ಬೇರೇನು ಬೇಡ ಸಾಕಿ

ಒಬ್ಬ ವ್ಯಕ್ತಿಯನ್ನು ಕೊಲ್ಲಲು ಹಲವಾರು ರೀತಿಯ ಹತಿಯಾರುಗಳನ್ನು ಬಳಸಲಾಗುತ್ತದೆ. ಆದರೆ ಪ್ರೇಮಿಗಳನ್ನು ಕೊಲ್ಲಲು… ಪ್ರೀತಿಸಿದವರ ಮೌನವೇ ಸಾಕು ಅಲ್ಲವೇ..!! ಈ ಮೇಲಿನ ಷೇರ್ ಪ್ರೀತಿಯಲ್ಲಿ ಮಾತು, ತರ್ಲೆ, ತುಂಟಾಟ, ಕನವರಿಕೆಯ ಜೀವಂತಿಕೆಯನ್ನು ಸಾರುತ್ತದೆ. ಅನುರಾಗದ ಆಲಾಪನೆ ಪ್ರೀತಿಗೆ ಸಂಜೀವಿನಿಯಾಗಿದ್ದು, ಅದು ಯಾವತ್ತೂ ಮೌನವನ್ನು ಸಹಿಸುವುದಿಲ್ಲ ಎಂಬುದು ನಿರ್ವಿವಾದ ಸಂಗತಿ ಎಂಬುದನ್ನು ಪ್ರತಿಧ್ವನಿಸುತ್ತದೆ.

    ಹೃದಯ ಬಯಸುವ ಶಾಂತಿ, ನೆಮ್ಮದಿಯನ್ನು ಗಜಲ್ ಈ ಪ್ರಪಂಚಕ್ಕೆ ಉಣಬಡಿಸುತಿದೆ. ಇಂಥಹ ಗಜಲ್ ಗಳನ್ನು ಓದುತಿದ್ದರೆ, ಬರೆಯುತಿದ್ದರೆ ಮನಸು ಲವಲವಿಕೆಯಿಂದ ಕೂಡಿರುತ್ತದೆ. ಗಜಲ್ ಗೋ ಶ್ರೀ ಸಿದ್ಧರಾಮ ಹೊನ್ಕಲ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ, ಗಜಲ್ ಜನ್ನತ್ತು ಸಮೃದ್ಧಗೊಳ್ಳಲಿ ಎಂದು ಶುಭ ಕೋರುತ್ತೇನೆ.

ಬಣ್ಣಗಳು ಮಾತನಾಡಲಿ ಆ ಮಾತುಗಳಿಂದ ಸುವಾಸನೆ ಬರಲಿ

ನೋವು ಹೂವಿನಂತೆ ಅರಳುವುದು ಜೊತೆಯಲ್ಲಿ ನೀನಿರಲು”

ಜಿಯಾ ಜಾಲಂಧರಿ

       ಗಜಲ್ ಕಾರವಾನ್ ನಲ್ಲಿ ಮನಸು ಬಿಚ್ಚಿ ಸುತ್ತಾಡುತ್ತಿದ್ದರೆ ಗಜಲ್ ಪ್ರೇಮಿಗಳಿಗೆ, ಅದರಲ್ಲೂ ನನ್ನಂತ ಪಾಗಲ್ ಗಳಿಗೆ ಆಯಾಸವಾಗುವುದೆ ಇಲ್ಲ. ಅಶಅರ್ ನ ಜೋಕಾಲಿ ಜಗತ್ತಿಗೆ ತಂಬೆರಲನ್ನು ನೀಡುತ್ತಿದೆ. ಅದರ ಸೊಂಪಿನಲ್ಲಿ ಮೈಮರೆತವರಿಗ ವಕ್ತ್ ಎಚ್ಚರಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿಯಾರದ ಮುಳ್ಳುಗಳ ಮುಂದೆ ಮಂಡಿಯೂರುತ್ತ ಇಲ್ಲಿಂದ ನಿರ್ಗಮಿಸುವೆ. ಮುಂದಿನ ಗುರುವಾರ ಮತ್ತೊಬ್ಬ ಗಜಲ್ ಗೋ ಒಬ್ಬರ ಗಜಲ್ ಗೊಂಚಲಿನೊಂದಿಗೆ ಮತ್ತೆ ಬರುತ್ತೇನೆ.ಅಲ್ಲಿಯವರೆಗೆ ಅಲ್ವಿದಾ ದೋಸ್ತೋ..


ರತ್ನರಾಯಮಲ್ಲ




ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top