ಅಂಕಣ ಸಂಗಾತಿ
ಒಲವ ಧಾರೆ
ನೆರಳು ನೀಡುವ ಕಟ್ಟಡ ಕಾರ್ಮಿಕರ ಬದುಕು
ಬಿಸಿಲಿನಲ್ಲಿ ಬಾಡದಿರಲಿ…!!
ನೋಡಲು ದೊಡ್ಡದಾದ ಅರಮನೆ..!! ಅರಮನೆಯ ತುಂಬಾ ವಿವಿಧ ಬಗೆಯ ವಿನ್ಯಾಸದ ಸೆಲ್ಫಗಳು..!! ಮನೆಯನ್ನು ಅರಮನೆಯ ನೆರಳಂತೆ ನಿರ್ಮಿಸಿದವರು ಮಾತ್ರ ಬಿಸಿಲಿನಲ್ಲಿ…!!
ಕೈಯಲ್ಲಿ ತೇಪೆ,ಸುತ್ತಿಗೆ,ಗುಂಡುಗಳನ್ನು ಹಿಡಿದುಕೊಂಡು, ಬರುವ ದಿನಗೂಲಿ ಕಾರ್ಮಿಕರ ಸಲುವಾಗಿ ಕಾಯುವ ಮೇಸ್ತ್ರಿ…!! ಅಂದರೆ ಕಟ್ಟಡವನ್ನು ಕಟ್ಟುವ ವಿನ್ಯಾಸಗಾರ. ಈತ ಬದುಕಿನುದ್ದಕ್ಕೂ ಇನ್ನೊಬ್ಬರ ಮನೆಯನ್ನೋ.. ಕಚೇರಿಯನ್ನೋ ಕಟ್ಟುತ್ತಲೇ ಅವರಿಗೆ ಬಿಸಿಲು ಬಾರದಂತೆ ನೆರಳು ಹಾಸಿದವರು..!! ಇಂತಹ ಮೇಸ್ತ್ರಿಗಳಿಗೆ ಸಹಾಯಕರಾಗಿ ಕೆಲಸಮಾಡುವ ಕೂಲಿಯಾಳುಗಳು ಅರ್ಥಾತ್ ಕಟ್ಟಡ ಕಾರ್ಮಿಕರು ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ್ದಾಗ ನಾನು ಕೂಡ ಅರೆಕಾಲಿಕ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದ ನೆನಪುಗಳು ಅಚ್ಚಳಿಯದೇ ಉಳಿದಿವೆ..!! ಕಿತ್ತು ತಿನ್ನುವ ಬಡತನ. ಹೊಲದ ಕೃಷಿ ಕೆಲಸದಲ್ಲಿ ಅಷ್ಟೊಂದು ಕೈಯಿಗೆ ಬಾರದಷ್ಟು ಕೂಲಿ. ದಿನಾಲು ಬಿಟ್ಟುಬಿಡದೆ ಸಿಗುವ ಕೆಲಸವೆಂದರೆ.. ಕಟ್ಟಡ ಕಟ್ಟುವ ಕೆಲಸ. ಹಳ್ಳಿಗಳ ಅಕ್ಕಪಕ್ಕದಲ್ಲಿರುವ ನಗರಗಳಿಗೆ ಕಟ್ಟಡವನ್ನು ಕಟ್ಟುವ ಸಲುವಾಗಿ ಕೂಲಿಕಾರ್ಮಿಕರಾಗಿ ಕೆಲಸವನ್ನು ಹುಡುಕಿಕೊಂಡು ಹೋಗುವ ದೊಡ್ಡ ಗುಂಪೇ ಇರುತ್ತದೆ. ಇಂತಹ ಗುಂಪುಗಳು ಮನೆಯಲ್ಲಿರುವ ತಮ್ಮ ಮಕ್ಕಳ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳದೆ ಮುಂಜಾನೆ 8 ಗಂಟೆಯಿಂದಲೇ ಕೆಲಸಕ್ಕೆ ಹೋಗಿ ರಾತ್ರಿ 8:00 ಗಂಟೆಗೆ ವಾಪಸ್ ಬಂದಾಗಲೇ ಕುಟುಂಬದ ಬಗ್ಗೆ ಕಾಳಜಿ..!!
ಕಟ್ಟಡ ಕಾರ್ಮಿಕರಿಗೆ ಇದೇ ಕೆಲಸವೇ ಯಾಕೇ ಅಗತ್ಯ..?? ಇದರ ಅವಶ್ಯಕತೆಯಾದರೂ ಏನು ಎಂಬುದನ್ನು ಆವಲೋಕಿಸಿದಾಗ ಈ ಕೆಲಸವು ದಿನಾಲು ಬಿಟ್ಟು ಬಿಡದೆ ಸಿಗುವ ಕಾಯಂ ಕೆಲಸ…!! ಎಂದೂ ತುತ್ತನ್ನಕ್ಕೆ ಕೊರತೆಯೇ ಇರಲಿಲ್ಲ..!!
ಇನ್ನು ಕೂಲಿಕಾರ್ಮಿಕರು ಗಂಡು ಮಕ್ಕಳಾದರೆ ಕೈಯಲ್ಲಿ ಒಂದು ಟವೆಲ್ಲು, ಇನ್ನೊಂದು ಕೈಯಲ್ಲಿ ಬುತ್ತಿ ಚೀಲ ಹಿಡಿದುಕೊಂಡು ಬರುತ್ತಾರೆ. ಅಲ್ಲದೆ ಹೆಣ್ಣು ಮಕ್ಕಳಾದರೆ ತಲೆ ಮೇಲೆ ಬುತ್ತಿಯ ಗಂಟು ಹೊತ್ತುಕೊಂಡು ಸಿಗುವ ಸಣ್ಣ ಪುಟ್ಟ ವಾಹನಕ್ಕೆ ಬರುತ್ತಾರೆ. ಪ್ರಯಾಣದ ಖರ್ಚನ್ನು ಕೊಡುವಾಗಲೂ ಅವರು ಗೋಗರೆಯುತ್ತಾರೆ, “ನಾವು ದುಡಿಯುವವರು ಇಷ್ಟೇ ಇದೆ” ಎಂದು ಪರಿಪರಿಯಾಗಿ ವಾಹನದ ಮಾಲೀಕರಿಗೆ ಕೇಳಿಕೊಳ್ಳುತ್ತಾರೆ. ಇದು ನಿತ್ಯ ನಡೆಯುವ ಕಾಯಕ ಮತ್ತು ದಿನಚರಿ.
ಬೆಳ್ಳಗೆ 9:00 ಗಂಟೆಗೆ ಕೆಲಸದ ಮೇಸ್ತ್ರಿ ಆಳುಗಳನ್ನು ಕೆಲಸದ ಮೇಲೆ ಕರೆದುಕೊಂಡು ಹೋಗುತ್ತಾರೆ. 10 ಗಂಟೆಯಿಂದ 2 ಗಂಟೆಯವರೆಗೂ ಬಿಟ್ಟುಬಿಡದ ಕೆಲಸ ಮಾಡುತ್ತಲೇ ಇರುತ್ತಾರೆ. ಇಟ್ಟಂಗಿ ಹೊರುವುದು ಇಲ್ಲವೇ ಕಲ್ಲು ಹೊರುವುದು. ಉಸುಕು ಮತ್ತು ಸಿಮೆಂಟನ್ನು ಕಲಿಸಿ ಗೋಡೆ ಕಟ್ಟುವ ಮೇಸ್ತ್ರಿಗಳಿಗೆ ನಿಗದಿತವಾಗಿ ಮಾಲನ್ನು ಬುಟ್ಟಿ ಬುಟ್ಟಿಯಾಗಿ ಹೊತ್ತುಕೊಡುವುದು. ಸಿಮೆಂಟಿನ ಚೀಲವನ್ನು ಹೊರುವಾಗ 50 ಕೆಜಿ ಬರ್ತೀಯ ಚೀಲವದು. ಹೆಣ ಭಾರವಾಗಿರುತ್ತದೆ. ಕೂಲಿ ಕಾರ್ಮಿಕರು ಸಿಮೆಂಟ್ ಚೀಲ ಹೊತ್ತಾಗ ಭೂಮಿಗೆ ತನ್ನಿಂದತಾನೆ ಹಣೆಯ ಮೂಲಕ ತಟ್ ತಟ್ ಎಂದು ಬೆವರ ಹನಿಗಳು ಉದುರುತ್ತವೆ..!! ಬೇಸಿಗೆಯ ಕಾಲವಾದ್ದರಿಂದ ತಲೆ ಮೇಲೆ ಉರಿಯುವ ಸೂರ್ಯನ ಕಿರಣಗಳು. ಚರ್ಮವನ್ನು ಸುಟ್ಟು ಕರಕಲಾಗುವಷ್ಟು ಬಿಸಿಲು ಮೈ ಚಾಚಿಕೊಂಡಿರುತ್ತದೆ. ಸುಡುವ ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಕೈಯನ್ನು ಎತ್ತರಿಸಿ ಗೋಡೆ ಕಟ್ಟುವ ಮೇಸ್ತ್ರಿಗೆ ನೀಡುವಾಗ ಕೈತುಂಬಾ ಗೊಬ್ಬೆಗಳು..!! ಇನ್ನೂ ಮಳೆಗಾಲವಾದರೂ ಸದಾ ಜಿಟಿಜಿಟಿ ಉದುರುವ ಸೋನೆ ಮಳೆಗೆ ಮೈ ಒದ್ದೆಯಾದರೂ.. “ಮೇಸ್ತ್ರಿ ಅಥವಾ ಮಾಲೀಕರು ಎಲ್ಲಿ ನಮ್ಮನ್ನು ಕೆಲಸ ಬಿಡಿಸಿ ಬಿಡುತ್ತಾರೋ”ಎನ್ನುವ ಸಂಕಟದಲ್ಲಿಯೇ ಸದಾ ನಡುಗುತ್ತಲೇ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ. ಮಳೆಯಿರಲಿ, ಬಿಸಿಲಿರಲಿ, ಚಳಿಯಿರಲಿ ತುತ್ತು ಅನ್ನಕ್ಕಾಗಿ ಹೊಟ್ಟೆ ತುಂಬಿಸಲು ದುಡಿಯುವ ಅವರ ಸಂಭ್ರಮ ಹೇಳತೀರದು. ಮಾಲೀಕರು ಕೊಡುವ ಕೂಲಿ ಕಡಿಮೆಯಾದರೂ ಚಿಂತೆಯಿಲ್ಲ ನಿಗದಿತವಾಗಿ ದಿನಾಲೂ ಕೆಲಸ ಸಿಕ್ಕರೆ ಸಾಕು ಎನ್ನುವ ಅಭಿಪ್ರಾಯ ಎಲ್ಲಾ ಕಟ್ಟಡ ಕೂಲಿ ಕಾರ್ಮಿಕರಲ್ಲಿ ಇರುತ್ತದೆ. ಮೇಸ್ತ್ರಿ ಕೊಡುವ ವಾರಕ್ಕೊಂದು ಸಲ ಕೂಲಿಗಾಗಿ ಜಾತಕ ಪಕ್ಷಿಯಂತೆ ಕಾದು, ವಾರದ ಸಂತೆಯನ್ನು ಮಾಡಿಕೊಂಡು, ಕುಟುಂಬ ನಿರ್ವಹಣೆಯನ್ನು ಮಾಡುವ ಎಷ್ಟೋ ಕುಟುಂಬಗಳು ಇವತ್ತಿಗೂ ನಮ್ಮ ನಿಮ್ಮ ನಡುವೆ ಇರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತವೆ…!! ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಗ್ಗೆ ಇರುವ ಪ್ರೀತಿ, ವಾತ್ಸಲ್ಯ, ವಿಶ್ವಾಸ, ಒಲವು ಅಲ್ಲದೆ ಮತ್ತೇನೂ ಅಲ್ಲ..!! ಒಬ್ಬರಿಗೊಬ್ಬರು ಪ್ರೀತಿಯಿಂದಲೇ ದುಡಿದು ತಿನ್ನುವ, ದುಡಿದು ಹಂಚಿ ಉಣ್ಣುವ,
“ದುಡಿಮೆಯ ದೇವರೇ ನಮ್ಮ ಬದುಕು” ಎನ್ನುವ ಬಡವರ ನಿಷ್ಠೆಯ ಬದುಕು ಶ್ಲಾಘನೀಯ.
ಕಟ್ಟಡ ಕಾರ್ಮಿಕರಲ್ಲಿ ನಾವು ವಿವಿಧ ಹಂತದ ಕಾರ್ಮಿಕರನ್ನು ಕಾಣಬಹುದು.
ಕಟ್ಟಡವನ್ನು ಕಟ್ಟುವ ‘ಗೌಂಡಿ’ ಕಟ್ಟಡ ಕಾರ್ಮಿಕರು, ಕಬ್ಬಿಣದಿಂದ ಕೆಲಸಮಾಡುವ ‘ಬಾರ್ ಬೈಂಡಿಂಗ್’ ಕಾರ್ಮಿಕರು, ಇವರಿಬ್ಬರಿಗೂ ಸಹಾಯಮಾಡುವ ಕಟ್ಟಡ ‘ದಿನಗೂಲಿ ಕಾರ್ಮಿಕರು’, ಇವರೆಲ್ಲರ ಮೇಲೆ ಕೆಲಸವನ್ನು ಗುತ್ತಿಗೆ ಹಿಡಿದುಕೊಳ್ಳುವ ಗುತ್ತಿಗೆದಾರ. ಮೇಸ್ತ್ರಿಯು ಗುತ್ತಿಗೆದಾರನಿಗೆ ಕಟ್ಟಡದ ವಿನ್ಯಾಸ, ಕಟ್ಟಡದ ರಚನೆ,ಆಕಾರ, ಅಳತೆ ಇವೆಲ್ಲವನ್ನು ಕಾಲಕಾಲಕ್ಕೆ ಮಾರ್ಗದರ್ಶಿಸುವ ಇಂಜಿನಿಯರ್( ಅಭಿಯಂತರ) ರಿಗೆ ಸಹಾಯಕರು.. ಇವರೆಲ್ಲರೂ ಕಟ್ಟಡ ಕಾರ್ಮಿಕರ ವರ್ಗಕ್ಕೆ ಒಳಪಡುತ್ತಾರೆ. ಕಟ್ಟಡ ಕೂಲಿ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರು. ಅವರಿಗೆ ನಿರ್ದಿಷ್ಟವಾದ ಖಾಯಂ ಕೆಲಸವಂತೂ ಸಿಗುವುದೇ ಇಲ್ಲ. ಮನೆ ಕಟ್ಟುವ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಂಡು ಫೀಟ್ ಅಂದರೆ ಅಡಿಗೆ ಇಂತಿಷ್ಟು ಹಣವೆಂದು ಒಪ್ಪಂದ ಮಾಡಿಕೊಂಡಿರುತ್ತಾರೆ. ಅಲ್ಲದೆ ಕೆಲವು ಕಟ್ಟಡಗಳನ್ನು ಇಂಜಿನಿಯರ್ ಅಥವಾ ಅಭಿಯಂತರರು ಗುತ್ತಿಗೆ ಆಧಾರದ ಮೇಲೆ ಹಿಡಿದುಕೊಂಡು ತನ್ನ ಕೆಳಗಿನ ಹಂತದ ಮೇಸ್ತ್ರಿಗಳಿಗೆ ಕೆಲಸವನ್ನು ನೀಡಿರುತ್ತಾರೆ. ಮೇಸ್ತ್ರಿಗಳು ಇಂತಿಷ್ಟು ಸಮಯದಲ್ಲಿ ಇಷ್ಟು ಕಟ್ಟಡವನ್ನು ಮುಗಿಸಲು ಇಂಜಿನಿಯರ್ ಅವರಿಂದ ಕಾಲಮಿತಿಯೊಳಗೆ ಕೆಲಸವನ್ನು ಹಿಡಿದುಕೊಂಡಿರುತ್ತಾರೆ. ಇದಕ್ಕಾಗಿ ತಮ್ಮ ಕೈಕೆಳಗೆ ಕೆಲಸ ಮಾಡುವ ಮೇಸ್ತ್ರಿಯ ಆಳುಗಳನ್ನು, ಮೇಸ್ತ್ರಿಗೆ ಸಹಾಯಮಾಡುವ ಕೂಲಿ ಕಾರ್ಮಿಕರನ್ನು, ನಿಗದಿತವಾಗಿ ಅವರಿಗೆ ಕೆಲಸವನ್ನು ನೀಡುವುದರ ಮೂಲಕ ಕೆಲಸವನ್ನು ಪೂರ್ಣಗೊಳಿಸುವಿಕೆಯ ಹೊಣೆಗಾರಿಕೆಯನ್ನು ಹೊತ್ತು ಕೊಂಡಿರುತ್ತಾರೆ. ಒಂದು ವೇಳೆ ಮೆಸ್ತ್ರಿಯೋ ಇಲ್ಲವೋ ಕೂಲಿ ಕಾರ್ಮಿಕರೋ ನಿಗದಿತವಾಗಿ ಕೆಲಸಕ್ಕೆ ಬಾರದಿದ್ದರೆ ಆ ಮನೆಯ ಮಾಲೀಕರಿಂದ ಬೈಸಿಕೊಳ್ಳುವ ಪರಿಪಾಠ ತಪ್ಪುವುದಿಲ್ಲ. ನಿಗದಿತವಾಗಿ ಕೆಲಸ ಮುಗಿಯದಿದ್ದರೆ ಅಭಿಯಂತರರು ಅಥವಾ ಅರ್ಥ ಮನೆಯ ಮಾಲೀಕರಿಂದ ಸದಾ ಬೈಸಿಕೊಳ್ಳುವ ಕಷ್ಟ ಮೇಸ್ತ್ರಿಗೆ ಗೊತ್ತು..!!
ಇನ್ನು ಕೂಲಿ ಕಾರ್ಮಿಕರ ಸಂಕಟಗಳು ಹಲವಾರು ಒಂದು ದಿನವೂ ಕೆಲಸಕ್ಕೆ ತಪ್ಪದೇ ಬಂದರೆ ಮೈ- ಕೈ ನೋವು, ಜ್ವರ, ಆಯಾಸ, ಆಗಾಗ ಕೈಕೊಡುವ ಈ ರೀತಿಯ ಆರೋಗ್ಯವು ಕೆಲಸಕ್ಕೆ ಗೈರು ಹಾಜರಾಗುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಬಿಡುತ್ತವೆ. ಅಲ್ಲದೆ ವಾರಕ್ಕೊಂದು ಸಲ ನಾವು ವಿಶ್ರಾಂತಿ ತೆಗೆದುಕೊಳ್ಳೋಣವೆಂದು ಮನಸ್ಸು ಇದ್ದರೂ, ಕುಟುಂಬದ ಒತ್ತಡದಿಂದಾಗಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿರುತ್ತದೆ. ವಾರದ ಕೂಲಿಯನ್ನು ಪಡೆದುಕೊಂಡು ಸಂತೆಯನ್ನು ಮಾಡಿ, ಕುಟುಂಬಕ್ಕೆ ಬೇಕಾದ ಬೇಕು ಬೇಡಿಕೆಗಳನ್ನು ಪೂರೈಸುವ ಅಂದಿನ ದಿನ ಕೂಲಿ ಕಾರ್ಮಿಕರಿಗೆ ಅದೇ ವಿಶ್ರಾಂತಿಯ ದಿನ ಎಂದರೆ ತಪ್ಪಲ್ಲ. ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರಿಗೆ “ಕನಿಷ್ಟ ಕೂಲಿ ಭದ್ರತೆ” ಇಲ್ಲದಿರುವುದು ಕೂಡ ನೋವಿನ ಸಂಗತಿ.
ಈ ಹಿಂದೆ ಸರ್ಕಾರ ಮಟ್ಟದಲ್ಲಿ ಅಸಂಘಟಿತ ಕಾರ್ಮಿಕರ ಬಗ್ಗೆಯಾಗಲಿ, ಅವರ ಯೋಗಕ್ಷೇಮಕ್ಕಾಗಿಯಾಗಲಿ ಯಾವುದೇ ರೀತಿಯ ಯೋಜನೆಗಳು ಇರಲಿಲ್ಲ. ಇತ್ತೀಚಿನ ಪ್ರಜಾಸತ್ತಾತ್ಮಕ ಸರ್ಕಾರಗಳು ಅಸಂಘಟಿತ ಕಾರ್ಮಿಕ ವಲಯಕ್ಕೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಕಟ್ಟಡ ಕಾರ್ಮಿಕರ ಸಂಘಗಳನ್ನು ನಿರ್ಮಾಣ ಮಾಡಿ ಸಂಘಗಳ ಮೂಲಕವೇ ಸರ್ಕಾರದಿಂದಲೇ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕಟ್ಟಡ ಕೂಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡುವುದು. ಅಂತಹ ಗುರುತಿನ ಚೀಟಿಯನ್ನು ಹೊಂದಿರುವ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಧನವನ್ನು ಸಾಲದ ರೂಪದಲ್ಲಿ ನೀಡುವುದು. ವಿದ್ಯಾರ್ಥಿ ವೇತನದ ಪ್ರೋತ್ಸಾಹಧನವನ್ನು ನೀಡುವುದು. ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ನೀಡುವುದು. ಬದುಕಿನ ಸಂಧ್ಯಾಕಾಲದಲ್ಲಿ ಪಿಂಚಣಿ ಅಥವಾ ನಿವೃತ್ತಿ ವೇತನವನ್ನು ನೀಡುವ ಯೋಜನೆಗಳನ್ನು ಹಾಕಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಅದು ಮಧ್ಯವರ್ತಿಗಳ ಹಾವಳಿಯಿಂದಾಗಿ ನಿಜವಾದ ಫಲಾನುಭವಿಗಳಿಗೆ ಯೋಜನೆಗಳು ಮುಟ್ಟದಿರುವುದು ಅತ್ಯಂತ ವಿಷಾದನೀಯವಾಗಿದೆ. ನಿಜವಾದ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ಕಾರ್ಮಿಕ ಇಲಾಖೆಯು ಇನ್ನೂ ಚುರುಕುಗೊಳಿಸಬೇಕಾಗಿದೆ. ಆಗಲಾದರೂ ಸಮಾಜದಲ್ಲಿ ಪ್ರತಿಯೊಬ್ಬರಿಗೂ ನೆರಳನ್ನು ನೀಡುವ ಕಟ್ಟಡ ಕಾರ್ಮಿಕರ ಬದುಕು ಹಸನವಾದಿತು. ಪ್ರತಿಯೊಬ್ಬರ ಬದುಕಿಗೆ ನೆರಳಾಗುವ ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರ ಬದುಕು ಬಿಸಿಲಿಗೆ ಬಾಡದಿರಲಿ. ಅವರು ಕೂಡ ಎಲ್ಲರಂತೆ ಸುಖ ಶಾಂತಿಯಿಂದ ಇರಲಿ ಎಂದು ಹಾರೈಸೋಣ
—————————————-
.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.