ಅಂಕಣ ಸಂಗಾತಿ

ಸಕಾಲ

ಓದುವ ಮನಸ್ಸು ತಾನಾಗಿಯೇ ಬರಬೇಕು..

ಓದುವ ಹವ್ಯಾಸ ಬೆಳೆಸಿಕೊಂಡವರು ಒಂದಲ್ಲ ಒಂದು ಪುಸ್ತಕವನ್ನು ಸಮಯ ಸಿಕ್ಕಾಗ ಓದಿಯೆ ಇರುತ್ತಾರೆ. ಅದು ಅವರವರ ಆಸಕ್ತಿಗೆ ಅನುಗುಣವಾಗಿ, ರಾಶಿ ರಾಶಿ ಪುಸ್ತಕಗಳನ್ನು ನೋಡಸಿಗುವುದು ಗ್ರಂಥಾಲಯದಲ್ಲಿ ಅಥವಾ ಆಸಕ್ತರ ಮನೆಗಳಲ್ಲಿ. ಪುಸ್ತಕದಷ್ಟು ಒಳ್ಳೆಯ ಸ್ನೇಹಿತ ಸಿಗುವುದು ದುರ್ಲಭ. ಹಿಂದೆ ಅಂದ್ರೆ ಸರಿಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಬರೆದ ಹಾಗೂ ದೂಳು ಮೆತ್ತಿಕೊಂಡ ಪುಸ್ತಕಗಳನ್ನು ಈ ಶತಮಾನದ ಮಕ್ಕಳು ಅಥವಾ ಯುವಜನತೆ ಏಕೆ ಓದಬೇಕು? ಅದರ ಅವಶ್ಯಕತೆ ಎಷ್ಟಿದೆ? ಅದು ಅಲ್ಲದೆ ಅಷ್ಟು ಹಳೆಯ ಪುಸ್ತಕಗಳು ಇಂದಿನ ಮಕ್ಕಳಿಗೆ ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬುದರ ಬಗ್ಗೆ ಚಿಂತಿಸುವುದು ಪ್ರಸ್ತುತ.ಶಾಲೆ ಕಾಲೇಜುಗಳಲ್ಲಿ ಗ್ರಂಥಾಲಯವಿದೆ ಅದರ ಉಪಯೋಗ ಮಾಡುವ ಮಕ್ಕಳು ಕೇವಲ ಅಧ್ಯಯನಕ್ಕೆ ಮಾತ್ರ ಆಯ್ಕೆ ಮಾಡಿಕೊಂಡು ಓದುವತ್ತ ಮನಸ್ಸು ಮಾಡುವರು. ಕಾರಣ ಪರೀಕ್ಷೆಗಳಿಗೆ ಅದು ಸೀಮಿತ.ಇನ್ನು ಅನ್ವೇಷಣೆ ಮಾಡುವವರು ಆ ಒಂದು ವಿಷಯಕ್ಕೆ ಮಾತ್ರ ಪ್ರಬುದ್ಧ ರಾಗಿ ಮುಂದುವರೆಯುವುದು  ಗುರಿಯಾಗಿರುತ್ತದೆ. ನೋಡಿ ಎಷ್ಟೊಂದು ವೈವಿಧ್ಯತೆ ಮನಸ್ಥಿತಿವುಳ್ಳವರ ನಡುವೆ ಡಿಜಿಟಲ್‌ ಗ್ರಂಥಾಲಯ ಎಲ್ಲರ ಮೊಬೈಲ್ ನಲ್ಲಿ ಸಿಗುವುದರಿಂದ  ಓದುವವರಿಗೆ     ಇನ್ನು ಸುಲಭವೆಂದರೆ ತಪ್ಪಾಗದು.

ಒಮ್ಮೊಮ್ಮೆ ಯಾಕೆ ಓದಬೇಕು ಎಂದು ಪ್ರಶ್ನೆ ಮಾಡುವವರಿಗೆ ಉತ್ತರಿಸುವ ಮೊದಲು,ಪ್ರಶ್ನೆಯನ್ನೇ ಸರಿಪಡಿಸುವುದು ಸೂಕ್ತ.ಮಕ್ಕಳು ಯಾವುದನ್ನು ಓದಬೇಕು ಎಂಬ ಪ್ರಶ್ನೆ ಬಂದಾಗ ‘ಇದರ ಓದು ಕಡ್ಡಾಯ’ಎಂಬ ಹೇರಿಕೆ ಇಲ್ಲ. ಮಕ್ಕಳು ಖುಷಿಯಿಂದ ಓದಬಹುದಾದ ಹಲವು ಪುಸ್ತಕಗಳನ್ನು ಆಯ್ಕೆ ಮಾಡುವಲ್ಲಿ ಸಹಕರಿಸಬಹುದಷ್ಟೇ. ಆದರೆ, ‘ಮಕ್ಕಳು ಇದನ್ನು ಓದಲೇಬೇಕು’ ಎಂಬ ಯಾವ ಪುಸ್ತಕವನ್ನೂ  ಬಲವಂತವಾಗಿ ಹೇರುವುದು ಸೂಕ್ತವಲ್ಲ. ಪ್ರತಿ ಓದುಗನೂ ಇನ್ನೊಬ್ಬನಿಗಿಂತ ಭಿನ್ನ. ಪ್ರತಿ ಓದುಗನಿಗೂ ತನ್ನದೇ ಆದ ಅನುಭವಲೋಕ, ಗ್ರಹಿಕೆ,ರುಚಿಯಿದೆ ಹಾಗಾಗಿಯೇ ಎಲ್ಲರಿಗೂ ಒಂದೇ ಪುಸ್ತಕ ಇಷ್ಟವಾಗುವುದಿಲ್ಲ.

ಪಾಲಕರಾಗಿ, ಶಿಕ್ಷಕರಾಗಿ ನಾವು ಮಾಡಬೇಕಿರುವುದು ನಮಗೆ ಇಷ್ಟವಾಗುವ ಪುಸ್ತಕಗಳು ಮಾತ್ರವೇ ಅಲ್ಲದೆ ಮಕ್ಕಳ ಸುತ್ತ ಎಲ್ಲ ಬಗೆಯ ಪುಸ್ತಕಗಳನ್ನು ಮಕ್ಕಳ ಕಣ್ಣಿಗೆ ಗೋಚರಿಸುವಂತೆ ಇರಿಸುವುದರಿಂದ.ಅವರ ನಯನಗಳಿಗೆ ಆಕರ್ಷಣೆಗೆ ಒಳಗಾಗುವ ಪುಸ್ತಕಗಳ ನ್ನು ಅವರು ಉತ್ಸಾಹದಿಂದ ಪಡೆದುಕೊಳ್ಳುವರು. ಗ್ರಂಥಾಲಯದಿಂದ,ಪುಸ್ತಕದ ಅಂಗಡಿಗಳಿಂದ ತಮಗೆ ಬೇಕಿರುವ ಪುಸ್ತಕ ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಆಗ ಅವರಿಗೆ ತಮಗೆ ಬೇಕಿರುವುದು ಏನು, ಬೇಡದಿರುವುದು ಏನು ಎಂಬುದನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ. ‘ಮಕ್ಕಳಿಗೆ ಖುಷಿ ಆಗುತ್ತದೆ’ ಎಂದು ಹಿರಿಯರು ಭಾವಿಸಿದ ಪುಸ್ತಕಗಳನ್ನು ಮಕ್ಕಳು ಓದುವಂತೆ ಮಾಡಲು ಹಲವು ದಾರಿಗಳಿವೆ.

‘ನಮ್ಮ ಮಕ್ಕಳು ನಮ್ಮ ಹಳೆಯದಾದ ಕೃತಿಗಳನ್ನು ಓದುವುದು ಒಳ್ಳೆಯದೆಂದು ನಾವೇಕೆ ಭಾವಿಸಿದ್ದೇವೆ?

ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಕೃತಿಗಳು ವಿಶ್ವದಲ್ಲಿ ಅತ್ಯಂತ ವೈವಿಧ್ಯಮಯವಾದ ದೇಶದಲ್ಲಿ ಜನಿಸಿದವು.

 ಮನುಷ್ಯ ಸಂಕುಲವನ್ನು ಕಾಲದ ಆರಂಭದಿಂದಲೂ ಕಾಡಿದಂಥವು. ವಿಶ್ವ ಎಲ್ಲಿಂದ ಬಂತು, ನಾನು ನಿಜಕ್ಕೂ ಯಾರು, ನನ್ನ ಜೀವನದ ಉದ್ದೇಶವೇನು, ಸಂತೋಷದಿಂದ ತೃಪ್ತಿಯಿಂದ ಬದುಕಲು ಬೇಕಿರುವುದು ಏನು? ಇವೆಲ್ಲ ಅಲ್ಲಿರುವ ಪ್ರಶ್ನೆಗಳು.

ಈ ಮೇಲಿನ ಪ್ರಶ್ನೆಗಳ ಬಗ್ಗೆ ಇದಮಿತ್ಥಂ ಎನ್ನುವ ಸಿದ್ಧಾಂತವನ್ನು ನೀಡುವುದಿಲ್ಲ. ‘ಇದೇ ಸತ್ಯ’ ಎಂದು ಹೇಳುವುದಿಲ್ಲ. ಅದರ ಬದಲು ಅವು, ‘ಸತ್ಯ ಹೀಗಿರಬಹುದು’ ಎಂದು ಹಲವು ಸಾಧ್ಯತೆಗಳನ್ನು ತೆರೆದಿಡುತ್ತವೆ. ನಂತರ, ತಾವು ನೀಡಿದ ಸಾಧ್ಯತೆಗಳನ್ನೇ ಅನುಮಾನದಿಂದ ನೋಡುತ್ತವೆ ಕೂಡ. ಎಲ್ಲವನ್ನೂ ತಿಳಿದಿರುವ ದೇವರ ಅಸ್ತಿತ್ವದ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕುತ್ತವೆ. ಉದಾಹರಣೆಗೆ, ಋಗ್ವೇದದ ನಾಸದೀಯ ಸೂಕ್ತ ಹೀಗೆ ಹೇಳುತ್ತದೆ:ಈ ಸೃಷ್ಟಿ ಎಲ್ಲಿಂದ ಬಂತು ಎಂಬುದು ಯಾರಿಗೆ ಗೊತ್ತು?

ಇದೆಲ್ಲ ಆಗಿದ್ದು ಹೀಗೆ ಎಂದು ಯಾರು ಹೇಳಬಲ್ಲರು?

ದೇವರು ಕೂಡ ಬಂದಿದ್ದು ತಡವಾಗಿ. ಇವನ್ನೆಲ್ಲ ಸೃಷ್ಟಿಸಿದವನಿಗೆ ಮಾತ್ರ ಅದು ಗೊತ್ತು. ಅವನಿಗೆ ಇದು ನಿಜವಾಗಿಯೂ ಗೊತ್ತಾ?

ಇದು ಮಕ್ಕಳೆಲ್ಲ ಕಲಿತುಕೊಳ್ಳಬೇಕಾದ ಬಹುದೊಡ್ಡ ಪಾಠ – ಯಾರೋ ಹೇಳಿದರು ಎಂದಮಾತ್ರಕ್ಕೆ ಅದನ್ನು ಕುರುಡಾಗಿ ನಂಬಬಾರದು. ಪ್ರತಿಯೊಂದನ್ನೂ ‍ಪ್ರಶ್ನಿಸಬೇಕು, ಕುತೂಹಲ ಉಳಿಸಿಕೊಳ್ಳಬೇಕು. ಮನಸ್ಸನ್ನು ತೆರೆದು ಇಟ್ಟುಕೊಳ್ಳಬೇಕು. ಶಿಕ್ಷಕರು, ಗುರುಗಳು, ಪಾಲಕರು ಮತ್ತು ಸ್ನೇಹಿತರು ನೀಡುವ ಎಲ್ಲವನ್ನೂ ಮಾರ್ಗಸೂಚಿಯನ್ನಾಗಿ ಬಳಸಿಕೊಳ್ಳಬೇಕು.ಪಯಣ ಸಾಗಿದಂತೆ ನಿಮ್ಮದೇ ದಾರಿಯನ್ನು ನೀವು ಕಂಡುಕೊಳ್ಳಬೇಕು

ಪ್ರಾಚೀನ ಕಾಲದ ಕೃತಿಗಳು ‘ನಾವು ಪವಿತ್ರ’ ಎಂದು ಹೇಳಿಕೊಂಡಿಲ್ಲ. ಆದರೆ ಅವು ಪವಿತ್ರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವುಗಳಲ್ಲಿ ಸುಂದರ, ಖುಷಿಯ ಬದುಕನ್ನು ಸಾಗಿಸಲಿಕ್ಕೆ ಬೇಕಿರುವ ಸೂತ್ರಗಳು ಅಡಕವಾಗಿವೆ. ಉಪನಿಷತ್ತುಗಳು ಮತ್ತು ಗೀತೆಯಲ್ಲಿ ಇರುವ ಅಂತಹ ಪ್ರಮುಖ ಪಾಠಗಳು: ವ್ಯಕ್ತಿಯೊಬ್ಬನಿಗೆ ಬದುಕಲು ಅವಕಾಶ ಮಾಡಿಕೊಟ್ಟಿರುವ ಹಾಗೂ ವಿಶ್ವದ ಸೌಂದರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಿರುವ ಶಕ್ತಿಯೇ, ಇತರೆಲ್ಲರನ್ನೂ ಪೊರೆಯುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಮೇಲ್ಮಟ್ಟದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಪಕ್ಷಿಗಳು, ಸಸ್ಯ ಸಂಕುಲ, ಮನುಷ್ಯ, ಗಂಡು–ಹೆಣ್ಣು, ನದಿ, ಪರ್ವತ ಎಲ್ಲವೂ ಸಮಾನ. ಸಮಾನತೆಯ ಈ ಪಾಠವನ್ನು ಎಳೆಯ ವಯಸ್ಸಿನಲ್ಲಿ ಕಲಿತುಕೊಳ್ಳಬೇಕಿರುವುದು ಬಹುಮುಖ್ಯ. ಭಿನ್ನತೆಗಳನ್ನು ಗುರುತಿಸಿ, ಅವುಗಳ ಆಧಾರದಲ್ಲಿ ಮನುಷ್ಯರನ್ನು ವಿಭಜಿಸುವ ಬದಲು ಅವರೆಲ್ಲರಲ್ಲಿ ಇರುವ ಸಮಾನತೆಯನ್ನು ಗುರುತಿಸುವುದು ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ ಬಹುಮುಖ್ಯವೆಂದರೆ ತಪ್ಪಾಗದು.

ಸೂರ್ಯ ಪ್ರತಿದಿನ ಉದಯಿಸುತ್ತಾನೆ, ನದಿ ಯಾವತ್ತಿಗೂ ಹರಿಯುತ್ತಿರುತ್ತದೆ, ಗಾಳಿ ಬೀಸುತ್ತದೆ ಏಕೆಂದರೆ, ಇವೆಲ್ಲ ಅವುಗಳ ಜವಾಬ್ದಾರಿಗಳು. ಹೀಗಿರುವಾಗ ನಮ್ಮ ಪಾಲಿನ ಕೆಲಸವನ್ನು ನಮಗೆ ಸಾಧ್ಯವಾದಷ್ಟು ಚೆನ್ನಾಗಿ ಮಾಡಿದಷ್ಟು ಮತ್ತು  ಆ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ. ನಮ್ಮ ಕ್ರಿಯೆಗೆ ಸಿಗುವ ಪ್ರತಿಫಲದ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳಿಬೇಕು.ವಾಸ್ತವದಲ್ಲಿ, ನಮಗೆ ನಿಯಂತ್ರಣ ಇರುವುದು ನಮ್ಮ ಪ್ರಯತ್ನದ ಮೇಲೆ ಮಾತ್ರ. ಹಾಗಾಗಿ, ನಮ್ಮ ಪ್ರಯತ್ನದ ಮೇಲೆ ಪೂರ್ತಿ ಗಮನ ಕೊಟ್ಟಷ್ಟು ಖಚಿತತೆ ಇಲ್ಲದ ಗಮ್ಯದ ಮೇಲೆ ಗಮನ ನೀಡುವುದಕ್ಕಿಂತ ಪ್ರಯಾಣದ ಸುಖ ಅನುಭವಿಸಿದಾಗ ನಮಗೆ ಖುಷಿ ಸಿಗುತ್ತದೆ. ನಾವು ಅಮುಖ್ಯರಲ್ಲ. ನಾವು ಹೆಚ್ಚು ಮುಖ್ಯರು, ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿ ನಾವು. ನಂಬಿದರೆ ನಂಬಿ, ಬಿಟ್ಟರೆ ಬಿಡಿ; ನಾವು ದೇವರಿಗೆ ಸಮಾನ. ತತ್ ತ್ವಮ್ ಅಸಿ. ಅಹಂ ಬ್ರಹ್ಮಾಸ್ಮಿ.

ಜಗತ್ತನ್ನು ಪ್ರೀತಿಸುವ ಬಗ್ಗೆ, ಇಲ್ಲಿರುವ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಬಗ್ಗೆ ಮಾತನಾಡುತ್ತೇವೆ. ವಿಭಜನಕಾರಿ ಶಕ್ತಿಗಳು ಹೆಚ್ಚಿರುವ ಈ ಹೊತ್ತಿನಲ್ಲಿ ನಮ್ಮ ಮಕ್ಕಳು ಉದಾರ ಮನಸ್ಸಿನವರಾಗಿರಲಿ, ನ್ಯಾಯವಂತರಾಗಿರಲಿ, ಭಿನ್ನತೆಗಳನ್ನು ಒಪ್ಪಿಕೊಳ್ಳಲಿ ಎಂದು ಬಯಸುತ್ತೇವೆ. ಆದರೆ ಇವನ್ನೆಲ್ಲ ಹೇಳುವುದು ಬಹಳ ಸುಲಭ. ‘ಎಲ್ಲರನ್ನೂ ಪ್ರೀತಿಸುವ’ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದಾದರೆ ನಾವು ಪುಟ್ಟ ಪುಟ್ಟ ಹೆಜ್ಜೆಗಳೊಂದಿಗೆ ಕೆಲಸ ಆರಂಭಿಸಬೇಕಾಗುತ್ತದೆ. ಇದರಲ್ಲಿ ಮೊದಲ ಹೆಜ್ಜೆಯೆಂದರೆ, ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು, ನಮ್ಮನ್ನು ನಾವು ಇರುವಂತೆ ಒಪ್ಪಿಕೊಳ್ಳುವುದು, ನಮ್ಮನ್ನು ನಾವು ಗೌರವಿಸುವುದು, ನಮ್ಮ ಆತ್ಮಸಾಕ್ಷಿಗೆ ಪ್ರಾಮಾಣಿಕರಾಗಿರುವುದು. ನಮ್ಮನ್ನು ಪ್ರೀತಿಸಿಕೊಳ್ಳುವುದಕ್ಕೆ ಇರುವ ಮೊದಲ ಹೆಜ್ಜೆ ನಮ್ಮನ್ನು ನಾವು ಅರಿಯುವುದು ಬಹುಮುಖ್ಯ.

ಸಂಸ್ಕೃತಿ, ಪರಂಪರೆ ಹಾಗೂ ದೇಶದ ವಿಚಾರದಲ್ಲಿ ಕೂಡ ಇವೇ ವಿಚಾರಗಳು ಮುಖ್ಯವಾಗುತ್ತವೆ. ನಿಮ್ಮ ವ್ಯಕ್ತಿತ್ವವನ್ನು ನೀವು ಗೌರವಿಸದಿದ್ದರೆ, ಇನ್ನೊಬ್ಬರ ವ್ಯಕ್ತಿತ್ವವನ್ನು ಗೌರವಿಸಲು ನಿಮ್ಮಿಂದ ಆಗದು. ನಮ್ಮ ಪುರಾತನ ಕೃತಿಗಳನ್ನು ಮಕ್ಕಳು ಏಕೆ ಓದಬೇಕು ಎಂಬುದಕ್ಕೆ ಇದೂ ಒಂದು ಪ್ರಮುಖ ಕಾರಣ ಎಂದು ನಾನು ನಂಬಿದ್ದೇನೆ. ಅವು ನಮ್ಮ ಬಗೆಗಿನ ಜ್ಞಾನವನ್ನು ಹುದುಗಿಸಿಕೊಂಡಿವೆ.ಉಪನಿಷತ್ತುಗಳು ಹೇಳುವ ಒಂದು ಮಹಾವಾಕ್ಯ ” ಜ್ಞಾನವೇ ದೇವರು”ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಬಹುದೊಡ್ಡ ಮೌಲ್ಯ ಇದು. ಜ್ಞಾನ ಮಾತ್ರವೇ ದೇವರು. ಹಾಗಾಗಿ ನಾವು ರಾಜಕೀಯ, ವಿಜ್ಞಾನ, ಸಂಸ್ಕೃತಿ, ಧರ್ಮ, ಹೊಸ ಆಲೋಚನೆಗಳು, ಅಭಿಪ್ರಾಯಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುತ್ತಿರಬೇಕು. ನಾವು ಇನ್ನು ಹೊಸ ಜ್ಞಾನ ಸ್ವೀಕರಿಸಲು ಸಾಧ್ಯವಾಗದ ಸ್ಥಿತಿ ತಲುಪಿದ್ದರೆ ಅದನ್ನು ಇನ್ನೊಬ್ಬರಿಗೆ ಹಂಚಿ. ಆಗ ಇನ್ನಷ್ಟು ಜ್ಞಾನವನ್ನು ಸ್ವೀಕರಿಸಲು ನೀವು ಸಿದ್ಧರಾಗುತ್ತೀರಿ.

ಹೀಗಾಗಿ ಓದು ಯಾಕಾಗಿಎಂಬ ಉದ್ದೇಶದ ಹಿಂದೆ ಮೌಲ್ಯದ ಅರಿವು ಜೊತೆಗೆ ಮಗುವಿನ ಮನಸ್ಸಲ್ಲೇಳುವ ನೂರಾರು ಪ್ರಶ್ನೆಗೆ ಉತ್ತರ ಹುಡುಕುವ ಹಾಗೂ ಅನ್ವೇಷಣೆಯ ಹಾದಿ ಹೊಸ ಸೃಷ್ಟಿಗೆ ನಾಂದಿ ಹಾಡಿದಂತಾಗುತ್ತದೆ.ಅದಕ್ಕಾಗಿ ಓದುವ ಹವ್ಯಾಸವನ್ನು ಬಲವಂತದಿಂದಾಗದೆ ಇಷ್ಟಪಟ್ಟು ಓದುವತ್ತ ಮನಸ್ಸು ವಾಲಿಸುವುದರಿಂದ ಸಕಾರಾತ್ಮಕ ಪರಿಣಾಮ ಬೀರುತ್ತದೆ.ಜ್ಞಾನ ವೃದ್ದಿಯಾಗುತ್ತದೆ


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

9 thoughts on “

  1. ತಿರುಗುವವರೆಗೆ ಪುಸ್ತಕದ ಗೋಡವೆ ಏಕೆ? ಎನ್ನುವವರಿಗೆ. ಅಕ್ಷರಗಳ ಮೂಲಕ ಸರಿಯಾದ ನೀತಿ ಪಾಠ ಮಾಡಿದ್ದೀರಿ ಸಿಸ್ಟರ್.. ಸೊಗಸಾಗಿದೆ ಬರಹ..

  2. ಆರಿಸಿಕೊಂಡ ವಿಷಯ ..ಬರವಣಿಗೆ…ಎರಡೂ ತುಂಬಾ ಚೆನ್ನಾಗಿದೆ….

  3. ಅಕ್ಷರಶಃ ಸತ್ಯ.ಅತ್ಯಂತ ಸುಂದರ
    ಮೌಲ್ಯಯುತ ಲೇಖನ.ಎಂತಹ ಸುಂದರ ನೈಜತೆಯ ಅನಾವರಣ. ನಿಜವಾಗಿಯೂ ತಮ್ಮ ಬರವಣಿಗೆಯ ಶೈಲಿ ಗೆ ನಮೋ ನಮಃ

Leave a Reply

Back To Top