ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಮೌನಕ್ಕೆ ಮಾತು ಬಂದಾಗ
ಕಳೆದ ಪ್ರೀತಿಯನು
ಮಧು ಬಟ್ಟಲಲ್ಲಿ
ಹುಡುಕದಿರು ಸಖಾ
ಮಬ್ಬುಗತ್ತಲೆಯ
ಪರದೆ ಸರಿಸಿ ನೋಡು
ಅಂಗಳದಿ ಗುಲಾಬಿ
ನಗುತಿದೆ
ಕವಿತೆಯನೆ ಹಾಸಿ
ಕವಿತೆಯನೆ ಹೊದಿಸಿ
ಮುಂಗುರುಳ ನೇವರಿಸಿ
ಮುತ್ತಿಟ್ಟು ಲಾಲಿ ಹಾಡಿಬಿಡು
ಹಾಯಾಗಿ ಮಲಗುತ್ತೇನೆ
ನಿನ್ನೆದೆಯ ಗೂಡಲ್ಲಿ
ನಾನು ನನ್ನ
ಮೌನದ
ಹುಡುಕಾಟದಲ್ಲಿರುವಾಗ
ನಿನ್ನ ಮುಗುಳ್ನಗೆ ಸಿಕ್ಕಿತು
ನಾನು ನನ್ನ ಬದುಕಿನ
ತಡಕಾಟದಲ್ಲಿರುವಾಗ
ನಿನ್ನೆದೆಯ ಪ್ರೀತಿ ದಕ್ಕಿತು
ನಿನ್ನ ಒಂದು ಮೌನ
ಸಾವಿರ ಮಾತುಗಳ ಹೇಳಿದೆ
ನಿನ್ನ ಒಂದು ನಿಟ್ಟುಸಿರು
ನೂರು ನೋವುಗಳ
ಬಿಚ್ಚಿಟ್ಟಿದೆ