ಅಂಕಣ ಸಂಗಾತಿ

ಸಿನಿ ಸಂಗಾತಿ

ದ ಮಿನಿಯೇಚರಿಸ್ಟ್ ಆಫ್ ಜುನಾಗಢ್

ದ ಮಿನಿಯೇಚರಿಸ್ಟ್ ಆಫ್ ಜುನಾಗಢ್

‘ಚಹಾ ಕಪ್ಪಿನಲ್ಲಿರುವ ಚಹಾದ ಕೊನೆಯ ಗುಟುಕನ್ನು ಹಾಗೆ ಬಿಡು ಅದು ನಮ್ಮನ್ನು ಮತ್ತೆ ಜುನಾಗಢಕ್ಕೆ ವಾಪಸ್ಸು ಕರೆತರುತ್ತದೆ’- ಇದು ವಯೋವೃದ್ಧ ತಂದೆ ತನ್ನ ಮಗಳಿಗೆ ಹೇಳುವ ಮಾತು.

         ಅದು 1947 ನೇಯ ಇಸವಿ. ಭಾರತ ಪಾಕಿಸ್ತಾನ ವಿಭಜನೆಯ ಕಾಲ. ಗುಜರಾತ್  ಗಡಿ ಭಾಗದ ಪ್ರಾಂತ್ಯ ಜುನಾಘಡದಲ್ಲಿ ವಾಸಿಸುವ ಒಂದು ಮುಸ್ಲಿಂ ಕುಟುಂಬ ತಾವು ಹುಟ್ಟಿ  ಬೆಳೆದು ಬಾಳಿ ಬದುಕಿದ ಮನೆ, ಊರು ಎಲ್ಲವನ್ನು ತೊರೆದು ಅಂದು ರಾತ್ರಿಯೇ ಪಾಕಿಸ್ತಾನದ ಕರಾಚಿಗೆ ತೆರಳ ಬೇಕಾಗಿದೆ…! ಅಂದು ನಡೆಯುವ ಘಟನೆಗಳ ಹೂರಣ 27 ನಿಮಿಷಗಳ ಈ ಕಿರುಚಿತ್ರ” ದ ಮಿನಿಯೇಚರಿಸ್ಟ್ ಆಫ್ ಜುನಾಗಢ್”.

            ಜುನಾಗಢದಲ್ಲಿ ವಾಸಿಸುವ ಮುಸ್ಲಿಂ ಕುಟುಂಬದ ಮುಖ್ಯಸ್ಥ ಹುಸೇನ್ (ನಾಸಿರುದ್ದೀನ್ ಷಾ). ಒಬ್ಬ ಮಿನಿಯೇಚರ್ ಕಲಾವಿದ. ಅವನ ಹೆಂಡತಿ ಸಕೀನಾ (ಪದ್ಮಾವತಿ ರಾವ್ )ಹಾಗೂ ಮಗಳು( ರಸಿಕಾ ದುಗಾಲ್ ) ಮೊಘಲರ ಆಳ್ವಿಕೆಯ ಕುರಿತಾದ ಮಿನಿಯೇಚರ್ ಕಲಾವಿದನಾದ ಈ ವೃದ್ಧ ಅಪ್ರತಿಮ ಚಿತ್ರ ಕಲಾವಿದ. ಉತ್ತಮ ಪೇಂಟಿಂಗ್ ಗಳನ್ನು ಮಾಡುತ್ತಾ ಸೂಕ್ಷ್ಮ ಕಲೆಯಿಂದ ತನ್ನ ಕಣ್ಣುಗಳನ್ನೇ ಕಳೆದುಕೊಂಡವ.

          ದೇಶ ವಿಭಜನೆಯಾಗಿ ಈ ಮುಸ್ಲಿಂ ಕುಟುಂಬ ಅಂದು ರಾತ್ರಿ ಭಾರತ ಬಿಟ್ಟು ಪಾಕಿಸ್ತಾನದ ಕರಾಚಿಗೆ ತೆರಳುತ್ತಿದೆ.

          ಅವರ ಈ ಮನೆಯನ್ನು ಒಬ್ಬ ಹಿಂದೂ (ಕಿಶೋರಿಲಾಲ್) ಕೊಂಡುಕೊಂಡಿದ್ದಾನೆ. ಕೇವಲ ಮನೆ ಅಲ್ಲದೆ ಮನೆಯಲ್ಲಿರುವ ಪುರಾತನ ಕಾಲದ ವಸ್ತುಗಳೆಲ್ಲವನ್ನು ಅವರು ಬಿಟ್ಟು ಹೋಗಬೇಕಿದೆ. ತಮ್ಮ ಪೂರ್ವಜರು ಬಳಸಿದ ಬೆಲೆಬಾಳುವ ಮಹಾಗನಿ ಟೇಬಲ್, ರೋಜ್ ವುಡ್ ನ ಕುರ್ಚಿಗಳು ಹುಸೇನ್ ಸಾಬರು ಸಂಗೀತವನ್ನ ಆಲಿಸುತ್ತಿದ್ದ ಜರ್ಮನಿಯ ಗ್ರಾಮಫೋನ್ ಕೂಡ ಬಿಟ್ಟು ಹೊರಡಲು ಅವರು ತಯಾರಾಗಿದ್ದಾರೆ.

          ಕಿಶೋರಿಲಾಲನ ಆಸೆ ಬುರುಕ ಕಣ್ಣುಗಳು ಆ ಮನೆಯ ಮತ್ತಷ್ಟು ವಸ್ತುಗಳ ಕಡೆಗೆ ಹರಿದಾಡುತ್ತದೆ. ಆ ಅಪ್ರತಿಮ ಕಲಾವಿದನ ಕಲಾಕೃತಿಗಳ ಬಗ್ಗೆ ತಿಳಿಯಲ್ಪಡುತ್ತಾನೆ. ಅವುಗಳನ್ನು ಕೊಡಲು ತಾಯಿ ಮಗಳ ಮೇಲೆ ಒತ್ತಡ ಹೇರುತ್ತಾನೆ.

              ಭಾರತ ವಿಭಜನೆಯ ಆ ಸಂಧಿಕಾಲದಲ್ಲಿ ಗಲಭೆಗಳು ಹೆಚ್ಚಾಗಿರುತ್ತವೆ, ದಿನವೂ ಅವರುಗಳ ಮೇಲೆ ಬೆದರಿಕೆಗಳು ಬರುತ್ತಿರುತ್ತವೆ, ಬೆದರಿಕೆಗಳನ್ನು ಒಡ್ಡುವ ಬಂಡುಕೋರರಿಂದ ತಪ್ಪಿಸಿಕೊಳ್ಳಲು ತಾಯಿ ಮಗಳು ಕಲಾವಿದನಿಗೆ ಗೊತ್ತಿಲ್ಲದ ಹಾಗೆ ಅವನ ಕಲಾಕೃತಿಗಳನ್ನೆಲ್ಲ ಮಾರಿಬಿಟ್ಟಿರುತ್ತಾರೆ.

         ಕಲಾವಿದ ಹುಸೇನ್ ಮರದ ಪೆಟ್ಟಿಗೆ ಒಂದನ್ನು ಜೋಪಾನವಾಗಿ ಕಾಪಾಡಿಕೊಂಡಿರುತ್ತಾನೆ. ಅದರಲ್ಲಿ ತನ್ನ ಚಿತ್ರಕಲೆಯ ವಸ್ತುಗಳನ್ನು ತುಂಬಿಕೊಂಡಿರುತ್ತಾನೆ.

             ಚಿತ್ರದ ಕೊನೆಯಲ್ಲಿ ಕಲಾವಿದ- ತಾನು ಯಾರಿಗೂ ತೋರಿಸದೆ ತನ್ನಲ್ಲಿ ನೆನಪಿಗಾಗಿ ಉಳಿಸಿಕೊಂಡಿದ್ದ ಒಂದೇ ಒಂದು ಕಲಾಕೃತಿಯನ್ನು ಕಿಶೋರ್ ಲಾಲನಿಗೆ ಕೊಟ್ಟು ಮನೆ ಬಿಡುವ ಸನ್ನಿವೇಶ ಬರುತ್ತದೆ.

         ಕಲಾವಿದನಿಗೆ ತಾನು ರಚಿಸಿದ ರಾಧಾಕೃಷ್ಣ ಕಲಾಕೃತಿ ತಾನು ದೈವಕ್ಕೆ ಎಸೆಗಿದ ಪಾಪದಂತೆ ಕಾಣುತ್ತದೆ. ತನ್ನ ಪಾಪದ ಪ್ರಾಯಶ್ಚಿತಕಾಗಿ ಆ ಕಲಾಕೃತಿಯನ್ನೇ ಬಿಟ್ಟು ಹೋಗುವ ಮನಸ್ಸು ಮಾಡುತ್ತಾನೆ. ಆ ಕಲಾಕೃತಿಯನ್ನು ಪಡೆದ ಕಿಶೋರಿಲಾಲನ ಮನಸ್ಸು  ಮೃದುವಾಗುತ್ತದೆ .ಅವನಲ್ಲಿ ಬದಲಾವಣೆಯನ್ನು ತರುತ್ತದೆ.

          ಅವರೆಲ್ಲ ತಮ್ಮ ಬೇರುಗಳಿಂದ ಕಳಚಿಕೊಂಡು ಹೋಗುವ ಸನ್ನಿವೇಶದ ಚಿತ್ರಣ ಈ ಕಿರು ಚಿತ್ರದಲ್ಲಿ ಬಹಳ ಮಾರ್ಮಿಕವಾಗಿ ಮೂಡಿಬಂದಿದೆ. ಪುರಾತನವಾದ ಆ ಮನೆ, ಬೆಲೆಬಾಳುವ ವಸ್ತುಗಳು, ಚಿತ್ರದಲ್ಲಿ ಪ್ರತಿಮೆಯಂತೆ ಬಳಸಿರುವ ಕನ್ನಡಿಗಳು ನಮ್ಮನ್ನು ಅಂದಿನ ಕಾಲಘಟ್ಟಕ್ಕೆ ಕರೆದೊಯುತ್ತವೆ. ಕೇವಲ ಮೂರು ನಾಲ್ಕು ಪಾತ್ರಗಳು, ಅವರ ಮಾತುಗಳು ನಮಗೆ ಅಂದಿನ ಸ್ಥಿತಿಗತಿಗಳ ಚಿತ್ರಣವನ್ನು ಕಣ್ಮುಂದೆ ತರಿಸುತ್ತದೆ. ಬಾಳಿ ಬದುಕಿದ ಊರುಕೇರಿಯನ್ನು ಬಿಟ್ಟು ಹೋಗುವ ನೋವಿನ ಎಳೆ ನಮ್ಮನ್ನು ಗಾಸಿಗೊಳಿಸುವಂತೆ ಮಾಡುತ್ತವೆ.

ದೇಶ ವಿಭಜನೆಯಾದ ಅಂದಿನ ಸಮಾಜದ ಮನಸ್ಥಿತಿಯನ್ನು ಈ ಮೂರು ಪಾತ್ರಗಳು ಬಿಚ್ಚಿ ಇಡುತ್ತವೆ.

          ತಮ್ಮ ನಿಸ್ತೇಜ ಕಣ್ಣುಗಳನ್ನಾಡಿಸುತ್ತಾ, ಪ್ರತಿಯೊಂದು ವಸ್ತುಗಳನ್ನು ತಮ್ಮ ನಡುಗುವ ಕೈಗಳಲ್ಲಿ ಸ್ಪರ್ಶಿಸುತ್ತಾ, ಗಡಸು ದನಿಯಲ್ಲಿ ಮಾತನಾಡುವ ವೃದ್ಧ ಕುರುಡನ ಪಾತ್ರದಲ್ಲಿ ನಾಸಿರುದ್ದೀನ್ ಷಾ  ತಮ್ಮ ಅಮೋಘ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರ ದೈತ್ಯ ಪ್ರತಿಭೆಯು ಇಲ್ಲಿ ಮತ್ತೊಮ್ಮೆ ಅನಾವರಣಗೊಂಡಿದೆ.

       ಚಿತ್ರದಲ್ಲಿ ಬರುವ ಬೆಕ್ಕು ಅದು ಪಾತ್ರೆಯಲ್ಲಿ ಉಳಿದ ಹಾಲನ್ನು ಕುಡಿಯುವ ಚಿತ್ರ, ಕಪ್ ನಲ್ಲಿ ಉಳಿದ ಚಹಾ ಇವೆಲ್ಲವೂ ಈ ಕಿರು ಚಿತ್ರದ ಗಾಢತೆಯನ್ನು ನಮಗೆ ದಾಟಿಸುತ್ತವೆ, ಅರೆ ಗತ್ತಲಿನಲ್ಲಿ ಭಾವ ತೀವ್ರತೆಯನ್ನು ಉದ್ದೀಪಿಸುವ ಸಂಗೀತ ಚಿತ್ರವನ್ನು ಮತ್ತೊಂದು ಹೆಜ್ಜೆ ಮೇಲಕ್ಕೆ ಕೊಂಡೊಯ್ಯುತ್ತದೆ.

         ಕೇವಲ 29 ನಿಮಿಷಗಳ ಈ ಕಿರು ಚಿತ್ರ ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವ ಅವರ್ಣನೀಯ.

ಈ ಚಿತ್ರವನ್ನು ಕೊನೆಯ ದೃಶ್ಯ, ಮಧ್ಯದ ದೃಶ್ಯ, ಛಾಯಾಗ್ರಹಣ ಎಂದೆಲ್ಲ ಭಾಗಿಸಲಾಗದು. ಇಡೀ ಚಿತ್ರವೇ ಭಾವ ತೀವ್ರತೆಯ ರಸದೌತಣ.

        ಮನುಷ್ಯತ್ವದ ಬಿಂಬಗಳನ್ನು ಕಟ್ಟಿಕೊಡುವ ಕಾಳಜಿಯಲ್ಲಿ ನಮ್ಮ ಕ್ರೌರ್ಯದ ಮುಖಗಳು ನಮಗೆ ಕಾಣಿಸಿ ನಾಚಿಕೆ ಹುಟ್ಟಿಸುವ ಕನ್ನಡಿಗುಣದಲ್ಲೀ ಈ ಚಿತ್ರ ನಮ್ಮನ್ನು ಕಾಡುತ್ತದೆ.

         ಸ್ವಾತಂತ್ರ್ಯ ಪೂರ್ವದ ಅಂದಿನ ಆ ದಿನಗಳು ,ದೇಶ ವಿಭಜನೆ ತಂದ ನೋವು…. ಬುಡಕಿತ್ತು ಪಲ್ಲಟಗೊಂಡ ಮನೆಗಳು, ಮನಸ್ಸುಗಳು .ಆ ಮನಸ್ಸುಗಳಿಗೆ ಉಂಟಾದ ಆಘಾತ ಇವು ಚಿತ್ರದಲ್ಲಿ

ಪ್ರತಿಮೆಗಳಂತೆ ಬಿಂಬಿತವಾಗಿದೆ, ಇಂದಿನ ಕಾಲಘಟ್ಟದಲ್ಲಿ ನಿಂತು ನೋಡುವಂತೆ  ಮಾಡುತ್ತದೆ.

            ಮನಸ್ಸುಗಳ ನಡುವೆ ಜಾತಿ ಧರ್ಮಗಳೆಂಬ ಗೋಡೆಗಳು ಎದ್ದಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಒಂದು ನೋವಿನ ಪಾಠದಂತೆ ಈ ಚಿತ್ರ ಕಾಣುತ್ತದೆ.

          ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಕಿರುಚಿತ್ರ ತನ್ನ ಭಾವ ತೀವ್ರತೆಯಿಂದ ಗಾಢ ಪರಿಣಾಮ ಬೀರುತ್ತದೆ. ಕೇಶವ್ ಓಝಾ ನಿರ್ದೇಶನದ ಈ ಕಲಾತ್ಮಕ ಕಿರುಚಿತ್ರ “ದ ಮಿನಿಯೇಚರಿಸ್ಟ್ರ್ ಆಫ್ ಜುನಾಗಢ್” ( ಹಿಂದಿ) ಯೂಟ್ಯೂಬ್ ನಲ್ಲಿ ಲಭ್ಯವಿದೆ. ಸ್ವಾತಂತ್ರ್ಯೋತ್ಸವದ ಈ ಶುಭ ಸಮಯದಲ್ಲಿ ಈ ಸುಂದರ ಚಿತ್ರವನ್ನು ಎಲ್ಲರೂ ನೋಡಬೇಕಾಗಿದೆ.


                        – ಕುಸುಮಾ ಮಂಜುನಾಥ್  

     

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

One thought on “

  1. ಬಹಳ ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದೀರಿ ಕುಸುಮಾಜೀ…ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡುವುದಕ್ಕೆ ಸಿಗುತ್ತದೆ ಅಂದ್ಕೊಳ್ತೀನಿ….
    “ಡಾ. ಗೀತಾ ಪಾಟೀಲ…”

Leave a Reply

Back To Top