ದೇಶಭಕ್ತ ಹೋರಾಟಗಾರ ಶ್ರೀ ಮಂಗೇಶ ಕೃಷ್ಣ ಪಾಟೀಲ

ಅಮೃತಮಹೋತ್ಸವದ ಪ್ರಯುಕ್ತ ವಿಶೇಷ ಲೇಖನ

ಅಪ್ರತಿಮ ದೇಶಭಕ್ತ ಹೋರಾಟಗಾರ ಶ್ರೀ ಮಂಗೇಶ ಕೃಷ್ಣ ಪಾಟೀಲರವರ ಸಂದರ್ಶನ

ಕಿರುಪರಿಚಯ:ಶ್ರೀ ಮಂಗೇಶ ಕೃಷ್ಣ ಪಾಟೀಲರವರು 20-09-1927ರಲ್ಲಿ ‌ಮಂಗಳವಾಡದಲ್ಲಿ ಜನಿಸಿದರು. ತಂದೆ ಕೃಷ್ಣ.ತಾಯಿ ಗಂಗಾ ಇಬ್ಬರು ಸಹೋದರರು ಇಬ್ಬರು ಸಹೋದರಿಯರು. ಒಂದರಿಂದ ನಾಲ್ಕನೇ ತರಗತಿಯವರೆಗೆ ಮಂಗಳವಾಡದಲ್ಲಿ ಕಲಿತು ದೇಶಾಭಿಮಾನಿಯಾಗಿ  ಶಾಲೆ ತೊರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಜೈಲು ವಾಸ ಅನುಭವಿಸಿದ ಧೀಮಂತ ನಾಯಕರಾಗಿದ್ದಾರೆ.ಇವರ ತಂದೆಯವರು ಕೂಡ ಮಂಗಳವಾಡ ಗ್ರಾಮದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ನಿವೇಶನಕ್ಕಾಗಿ ತಮ್ಮ ಎರಡು ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.ಇಂತಹ ಅಪ್ರತಿಮ  ಸಮಾಜ ಸುಧಾರಕ ಕೃಷ್ಣ ಪಾಟೀಲರವರ ಮಗ ಸ್ವಾತಂತ್ರ್ಯ ಹೋರಾಟಗಾರ ಮಂಗೇಶ ಪಾಟೀಲರವರು ನಮ್ಮ ಮಂಗಳವಾಡ ಗ್ರಾಮದ ಹೆಮ್ಮೆಯ ವೀರಪುತ್ರರಾಗಿದ್ದಾರೆ. ಉತ್ತರಕನ್ನಡಜಿಲ್ಲೆಯಲ್ಲಿ ಉತ್ತುಂಗದ ಕೀರ್ತಿಯನ್ನು ಬೆಳಗಿಸಿ ಹಳಿಯಾಳ ಹಿರಿಮೆಗೆ ಭಾಜನರಾಗಿ ಮಂಗಳವಾಡ ಗ್ರಾಮಕ್ಕೆ ಆದರೊಶದ ಮಂಗಳ ಮೂರ್ತಿಯಾಗಿರುತ್ತಾರೆ ಎಂದು ತಿಳಿಸಲು ಹೃನ್ಮನಗಳಲ್ಲಿ  ಅಭಿಮಾನದ ನವಿಲು ಗರಿಗೆದರಿ  ವೀರ ಪರಂಪರೆಯ ಯಶೋಗಾಥೆಯ ಮುನ್ನುಡಿಯ ಇತಿಹಾಸ ಸೃಷ್ಟಿಸಿದೆ.

 ಧೀಮಂತ ನಾಯಕರಾಗಿ ದೇಶಸೇವೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ.

 ‌‌‌‌‌‌‌

“ದೇಶ ನಮಗೆ ಏನು ಮಾಡಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ”ಎಂಬ ಮಾತು ನಮ್ಮ ದೇಶಭಕ್ತಿಯನ್ನು ನರನರಗಳಲ್ಲಿ ಮೀಟಿ ದೇಶಕ್ಕಾಗಿ ಹೋರಾಡಿದ ಮಹಾನದೇಶಭಕ್ತರ ಚಿತ್ರ ಮನದಲ್ಲಿ ಮೂಡಿ ಮೈ ಮನಗಳು ಹೆಮ್ಮೆಯನ್ನು ಉಂಟುಮಾಡುತ್ತವೆ.  ಗೌರವದಿಂದ ಅವರ ತ್ಯಾಗವನ್ನು ನೆನೆಪಿಸುವ ಅವರ ಆದರ್ಶದ ನಡೆಯನ್ನು ಅನುಸರಿಸುವ ಅಮೃತ ಕ್ಷಣಗಳ ಕುರಿತು ಚಿಂತನೆಗೆ ನಮ್ಮನ್ನು ಓರೆಹಚ್ಚುತ್ತವೆ.

75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಈ ಸುಸಂದರ್ಭದಲ್ಲಿ ಇಂತಹ ಮಹಾಪುರುಷರಿಗೆ ಗೌರವ ಸಲ್ಲಿಸುವದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯವಾಗಿದೆ.

ಈ ಅಮೃತಮಹೋತ್ಸವದ ಸುದಿನ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಮಂಗೇಶ ಕೃಷ್ಣ ಪಾಟೀಲ ಅವರೊಂದಿಗಿನ ಸಂದರ್ಶನ:

ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಮಂಗೇಶ ಕೃಷ್ಣ ಪಾಟೀಲರಿಗೆ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಶುಭಾಶಯಗಳು

1)ಪ್ರಶ್ನೆ:ಮಂಗೇಶ ಪಾಟೀಲರವರೇ ತಾವು ಎಷ್ಟನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಟಗಾರರಾಗಿ ಧುಮುಕಿದ್ದೀರಿ?

ಮಂಗೇಶ ಪಾಟೀಲ:ನನಗೆ ಸರಿ ಸುಮಾರು ಹನ್ನೆರಡು ವರ್ಷ ವಯಸ್ಸಿರಬಹುದು.

2)ಪ್ರಶ್ನೆ:ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕೆಂಬ ಆಶಯ ತಮಗೆ  ಹೇಗೆ ಬಂದಿತು?

ಮಂಗೇಶ ಪಾಟೀಲ:ನಾನಾಗ ನನ್ನೂರಾದ ಮಂಗಳವಾಡದಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ  ಸಮಯವದು.ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ನನ್ನೂರಿನ ಹಿರಿಯರಾದ ಕೆಲ ಸ್ವಾತಂತ್ರ್ಯಹೋರಾಟಗಾರರು ನಮ್ಮೂರಿನ ದೇವಾಲಯಗಳ ಮುಂದೆ ಪ್ರತಿದಿನ ರಾತ್ರಿ ಪಂಜಿನ ಬೆಳಕಿನಲಿ ಹೋರಾಟ ಮಾಡುವ ಕುರಿತು ಚರ್ಚಿಸುತ್ತಿದ್ದರು. ನಾನು ಪ್ರತಿದಿನವೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆ. ಇದರಿಂದ ನನ್ನಲ್ಲಿ ಸ್ವಾತಂತ್ರ್ಯದ ಕೆಚ್ಚು ಹೆಚ್ಚಾಗಿ ಶಾಲೆಯನ್ನು ತೊರೆದು ಚಳುವಳಿಗಾರರ ತಂಡವನ್ನು ಸೇರಬೇಕಾಯಿತು.

3)ಪ್ರಶ್ನೆ:ಇದಕ್ಕೆ ನಿಮ್ಮ ಕುಟುಂಬದವರ ಒಪ್ಪಿಗೆ ಇತ್ತೇ?

ಮಂಗೇಶ ಪಾಟೀಲ:ಹೌದು, ಯಾಕೆಂದರೆ ನನ್ನ ತಂದೆ ಕೂಡ ದೇಶಭಕ್ತರಾಗಿದ್ದರು.ನನಗೆ ಒಬ್ಬ ಅಣ್ಣ ಒಬ್ಬ ತಮ್ಮ ಹಾಗೂ ಇಬ್ಬರು ಅಕ್ಕಂದಿರು.ನನ್ನ ಬಿಟ್ಟು ಉಳಿದವರಿಬ್ಬರು ಕುಲಕಸುಬಾದ ಕೃಷೀಯನ್ನು ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದರು.

4)ಪ್ರಶ್ನೆ:ಚಿಕ್ಕ ವಯಸ್ಸಿನವರಾಗಿದ್ದ ತಮನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಹೇಗೆ ಚಳುವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಿದರು?

ಮಂಗೇಶ ಪಾಟೀಲ:ಹೋರಾಟಕ್ಕೆ ವಯಸ್ಸು ಮುಖ್ಯವಲ್ಲ,ದೇಶಭಕ್ತಿ ಮುಖ್ಯ.ನಾನು ಹಿರಿಯರ ಎಲ್ಲಾ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಆಸಕ್ತಿಯನ್ನು ನೋಡಿ ಕಿತ್ತೂರಿನ ಸಿಪಾಯಿ ಚಿನ್ಮಯ ಸ್ವಾಮಿ ತಮ್ಮ ಗುಂಪಿನಲ್ಲಿ ಸೇರಿಸಿಕೊಂಡರು.

5)ಪ್ರಶ್ನೆ:ಯಾವ ರೀತಿಯಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತಿದ್ದಿರಿ?

ಮಂಗೇಶ ಪಾಟೀಲ:ನಮ್ಮ ಗ್ರಾಮಕ್ಕೆ ಆಗಮಿಸುತ್ತಿದ್ದ ಬ್ರಿಟಿಷ ಅಧಿಕಾರಗಳನ್ನು ತಡೆದು ಅವರ ಕೈಯಲ್ಲಿರುತ್ತಿದ್ದ ದಾಖಲೆಳನ್ನು ಸುಟ್ಟುಹಾಕುತ್ತಿದ್ದೆವು.ಇದಕ್ಕೂ ಮುಂಚೆ ಅಕ್ಕ ಪಕ್ಕದ ಹಳ್ಳಿಯ ಹೋರಾಟಗಾರರೊಂದಿಗೆ ಕುಳಿತು ಯೋಚನೆ ಮಾಡಿ ಯೋಜನೆ ರೂಪಿಸುತ್ತಿದ್ದೆವು.

6)ಪ್ರಶ್ನೆ:ತಮಗೆ ಈಗ ಅಂತಹ ಯಾವುದಾದರೂ ಘಟನೆ ನೆನಪಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ಮಂಗೇಶಪಾಟೀಲ:ಅಂದ ಹಾಗೆ ಒಂದು ದಿನ ನಾವೆಲ್ಲ ಅಕ್ಕಪಕ್ಕದ ಹಳ್ಳಿಯ ಹೋರಾಟಗಾರರು ಸೇರಿ ನಮಗೆ ದೊರೆತ ಸುಳಿವಿನ ಮೇರೆಗೆ ಕೆಸರೊಳ್ಳಿಯ ನಾಕಾದ ಹತ್ತಿರ ಬಂದು ನಾಕಾಗೆ ನುಗ್ಗಿ ಅಲ್ಲಿದ್ದ ಎಲ್ಲ ದಾಖಲೆಗಳನ್ನು ಸುಟ್ಟು ಹಾಕಿದ್ದೆವು.ಅಷ್ಟೇ ಏಕೆ?ನಮ್ಮ ಗ್ರಾಮಕ್ಕೆ ಸೈಕಲ್ ಮೇಲೆ ದಾಖಲೆ ಹಿಡಿದು ಬರುತ್ತಿದ್ದ ಬ್ರಿಟಿಷ ಅಧಿಕಾರಿಗಳ ಸೈಕಲ್ಲನ್ನು ಕಸಿದುಕೊಂಡು ಹಳ್ಳಕ್ಕೆ ಎಸೆದು ಅಸಹಕಾರ ವ್ಯಕ್ತಪಡಿಸುತ್ತಿದ್ದೆವು.ಇದರಿಂದ ಆ ಅಧಿಕಾರಿಗಳು ಹಿಮ್ಮೆಟ್ಟುತಿದ್ದರು.ಇದರಿಂದ ನಾನು ಜೈಲುವಾಸವನ್ನು ಅನುಭವಿಸಬೇಕಾಯಿತು.

 7)ಪ್ರಶ್ನೆ: ಯಾವಾಗ ಹಾಗೂ ಎಲ್ಲಿ ಜೈಲುವಾಸವನ್ನು ಅನುಭವಿಸಿದಿರಿ?

ಮಂಗೇಶ ಪಾಟೀಲ:1943ರಲ್ಲಿ ಕಾರವಾರದ  ಎರಡು ವರ್ಷಗಳ ಕಾಲ ಅಂದರೆ 1945ರ ವರೆಗೂ ಜೈಲುವಾಸ ಅನುಭವಿಸಬೇಕಾಯಿತು.

8)ಪ್ರಶ್ನೆ: ಸ್ವಾತಂತ್ರ್ಯ ದೊರೆತ ಅಮೂಲ್ಯ ಘಳಿಗೆ ನಂತರ ತಮಗೆ ಸಂತೋಷ ನೀಡಿದ ನಿಮ್ಮ ಜೀವನದ ಕ್ಷಣಗಳ ಬಗ್ಗೆ ಹೇಳುವಿರಾ?

ಮಂಗೇಶ ಪಾಟೀಲ: ನಮ್ಮ ದೇಶ ಸ್ವಾತಂತ್ರ್ಯವಾದದ್ದು  ಮೊದಲ ಸಂತೋಷ,ನಂತರ ಪ್ರಥಮ ಪ್ರಧಾನಿಯಾದ ಪಂಡಿತ ಜವಾಹರಲಾಲ ನೆಹರುರವರ  ಪ್ರಮಾಣ ವಚನದ ಸಂದರ್ಭದಲ್ಲಿ ದೆಹಲಿಗೆ ತೆರಳಿ

 ಅವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣಗಳು ಕೂಡ ಸಂತೋಷದ ಕ್ಷಣಗಳಾಗಿವೆ.

9)ಪ್ರಶ್ನೆ:ಈ 75ನೇ ಸ್ವಾತಂತ್ರ್ಯ ಅಮಖತ ಮಹೋತ್ಸವದ ಪ್ರಯುಕ್ತ ಜನತೆಗೆ ತಮ್ಮ ಸಂದೇಶವೇನು?

ಮಂಗೇಶ ಪಾಟೀಲ:”ವ್ಯಕ್ತಿಗಿಂತ ದೇಶ ದೊಡ್ಡದು ಎಂಬಂತೆ ನಮ್ಮಲ್ಲಿ ಜಾತಿ,ಧರ್ಮ,ಭಾಷೆ,ವೇಷದ ತಾರತಮ್ಯ ಮರೆತು ಮಾನವೀಯತೆಯಿಂದ ನನ್ನ ದೇಶ ದೊಡ್ಡದು ಎಂದು ದೇಶಕ್ಕಾಗಿ ದುಡಿದು ಪಡೆದ ಸ್ವಾತಂತ್ರ್ಯವನ್ನು ದೇಶದ ಪ್ರಗತಿಗಾಗಿ ಲೋಕದ ಒಳಿತಿಗಾಗಿ ಬಳಸೋಣ.

10)ಪ್ರಶ್ನೆ:ಸ್ವಾತಂತ್ರ್ಯನಂತರ ದೇಶದಅಭಿವೃದ್ಧಿಗೆ  ನಿಮ್ಮ ಸಲಹೆ ಏನು?

ಮಂಗೇಶ ಪಾಟೀಲ:ದೇಶದ ಬೆನ್ನೆಲುಬಾದ ಹಳ್ಳಿಗಳಲ್ಲಿ ಶೈಕ್ಷಣಿಕ ಸೌಲಭ್ಯಗಳು,ಕೃಷಿಗೆ ಉತ್ತೇಜನ, ನಶಿಸುತ್ತಿರುವ ಗುಡಿಕೈಗಾರಿಕೆಗಳ ಅಭಿವೃದ್ಧಿ.

 ಭಾರತಿ ಕೇದಾರಿ ನಲವಡೆ

Leave a Reply

Back To Top