ಎ.ಎ ಸನದಿಯವರ ಹೈಕು ಸಂಕಲನ -ಮಗು – ನಗು

ಪುಸ್ತಕ ಸಂಗಾತಿ

ಎ.ಎ ಸನದಿಯವರ ಹೈಕು ಸಂಕಲನ -ಮಗು – ನಗು

ಎ.ಎ ಸನದಿಯವರ ಹೈಕು ಸಂಕಲನ -ಮಗು – ನಗು

 ಸಾಹಿತ್ಯ ದೇಶಾತೀತ ಮತ್ತು ಕಾಲಾತೀತವಾದುದು. ಯಾವ ದೇಶದಲ್ಲಿ ಹುಟ್ಟಿದ ಸಾಹಿತ್ಯ ಇನ್ಯಾವುದೋ ದೇಶಕ್ಕೆ ಹೋಗಿ ಓದುಗರ ಮನಸೆಳೆಯುವ ವೈಚಿತ್ರ್ಯ ಇಂದಂತೂ ತುಂಬ ಸಾಮಾನ್ಯವಾಗಿದೆ.ಗಜಲ್, ರುಬಾಯಿ,ಅಬಾಬಿ ಮೊದಲಾದ ಕಾವ್ಯಪ್ರಕಾರಗಳು ಇಂದು‌ ಕನ್ನಡದಲ್ಲಿ ಪಡೆದಿರುವ ಜನಪ್ರಿಯತೆ ನಮ್ಮ ಕಣ್ಣ ಮುಂದೆಯೇ ಇದೆ. ಇದೇ ಸಾಲಿಗೆ ಸೇರುವ ಇನ್ನೊಂದು ಕಾವ್ಯ ಪ್ರಕಾರ ಹೈಕು.ಜಪಾನಿ ಮೂಲದ ಈ ಕಿರು ರಾಜಕುಮಾರಿ ಇಂದು ಕನ್ನಡದ ಓದುಗರ ಮತ್ತು ಕವಿಗಳ ಮನದಲ್ಲಿ ಭದ್ರವಾದ  ಜಾಗ ಪಡೆದಿದೆ . ಅರ್ಧ ಶತಮಾನದ ಹಿಂದೆಯೆ ಅನೇಕ ಹಿರಿಯರು ಹೈಕು ಬರೆಯುತ್ತಿದ್ದಾರೆ. ಇಂದಂತೂ ಹೊಸ ಬರಹಗಾರರು ಇದರಲ್ಲಿ ಮಾಡುತ್ತಿರುವ ಪ್ರಯೋಗಗಳು ಮನ ಮೆಚ್ಚುಗೆ ಯಾಗುವಂತಿವೆ.

ಸಾಹಿತ್ಯದ ಯಾವುದೇ ಪ್ರಕಾರ ಬಂದರೂ ಕಾವ್ಯದ ಜನಪ್ರಿಯತೆ‌ ಕಡಿಮೆಯಾಗಲಾರದು.ಅದು ಓದುಗರ ಮನಮೆಚ್ಚಿದ ಸಾಹಿತ್ಯ ಪ್ರಕಾರ .ಸಾವಿರ ವರ್ಷ ಗಳಿಂದಲೂ ಹಳಗನ್ನಡ ನಡುಗನ್ನಡ ಕಾಲದಲ್ಲಿ ಏಕಮುಖವಾಗಿ ಮೆರೆದಿದ್ದ ಈ ಪ್ರಕಾರ ಹೊಸಗನ್ನಡ ದಲ್ಲಿಯೂ ಭಾವಗೀತ ಪ್ರಗಾಥ, ಸುನೀತ ಹೀಗೇ ಅನೇಕ ಪ್ರಕಾರಗಳಾಗಿ ಕುಡಿಯೊಡೆದಿದೆ‌.ಕನ್ನಡ ಮೂಲದ ಮಾತ್ರವಲ್ಲ,ಬೇರೆಬೇರೆ ಭಾಷೆಯ ಕಾವ್ಯಪ್ರಕಾರಗಳೂ ಕನ್ನಡ ಕವಿಗಳ ಕೈಯಲ್ಲಿ ಬರೆಯಲ್ಪಡುತ್ತಿವೆ .

ಜಪಾನಿನಲ್ಲಿ ೫/೭/೫ಉಚ್ಚಾರಾಂಶಗಳ ಕವಿತೆ.                     ” ಹೈಕು ಗಳಿಗೆ ಅಕ್ಷರಗಣಗಳ ಛಂದೋಬಂಧವಿದೆ. ಪ್ರತಿ ಹೈಕೂ ಮೂರು ಚರಣ ಹೊಂದಿದ್ದು ಮೊದಲ ಮತ್ತು ಚರಣದಲ್ಲಿ ಐದು ಅಕ್ಷರಗಳು,ಎರಡನೆಯ ಚರಣ ದಲ್ಲಿ ಏಳ ಅಕ್ಷರಗಳು ಇರಬೇಕಾದುದು ನಿಯಮ..ಹೀಗೆಂದು ಅನಗತ್ಯ ಪದಗಳಿಂದ ಅಕ್ಷರ ಬೇರ್ಪಡಿಸಿ ಟ್ಟು  ಅಕ್ಷರಗಳ ಸಂಖ್ಯೆಯನ್ನು ಎಣಿಸಿಟ್ಟರಾಗದು.ಹೈಕು ಗಳ ರಚನಾ ಕ್ರಿಯೆ ಅತ್ಯಂತ ಕೌಶಲಪೂರ್ಣವಾದುದು ಕೆಲವೇ ಪದಗಳಲ್ಲಿ ವಿಸ್ತೃತವಾದ ಉನ್ನತ ಭಾವ ಕಟ್ಟಿಕೊಡುವ ಕ್ರಿಯೆ”  .( ಡಾ.ನಿಂಗು ಸೊಲಗಿ ನಲ್ನುಡಿ ಪು viii)  ಜಪಾನಿಯರಂತೆ ಇದೂ‌ ಕುಳ್ಳು ಎಂದು ಹಿರಿಯರು ಹಾಸ್ಯಮಯವಾಗಿ ಇದನ್ನು ಬಣ್ಣಿಸಿದ್ದುಂಟು.ಆದರೆ ನೋಡಲು ಕುಳ್ಳಾದರೂ ಅಲ್ಪದಲ್ಲಿ ಕಲ್ಪವನ್ನು ಹಿಡಿದಂತೆ,ಕನ್ನಡಿಯಲ್ಲಿ ಕಂಡ ಚಂದ್ರನಂತೆ ಒಂದೊಂದು ಹೈಕುವಿನ ಅರ್ಥ ಬಿಡಿಸಲು ಪುಟಗಟ್ಟಲೇ ಬರೆಯಬೇಕಾಗುತ್ತದೆ.ಜಪಾನಿ‌ ಕವಿ ಬಾಶೋವಿನ್ ಹೈಕು ಬರೆಯೋದು ಎಷ್ಟು ಕಷ್ಟ ಎಂದು ವಿವರಿಸಲು”  ಐದು ಹೈಕು ಬರೆದರೆ ಅವನು ಕವಿ, ಹತ್ತು ಹೈಕು ಬರೆದರೆ ಮಹಾಕವಿ” ಎಂದಿದ್ದುದನ್ನು ಕನ್ನಡ ವಿಮರ್ಶೆ ಉಲ್ಲೇಖಿಸಿದೆ.

ಚಂದ್ರಕಾಂತ ಕುಸನೂರ,ಡಾ.ಕೆ.ಬಿ.ಬ್ಯಾಳಿ,,ಜಂಬಣ್ಣ ಅಮರಚಿಂತ ಮತ್ತು ಅವರ ನಂತರ‌ ಡಾ. ಸರಜೂ ಕಾಟ್ಕರ್ ,ಅರುಣಾ ನರೇಂದ್ರ, ಡಾ ಶಾರದಾ ಮುಳ್ಳೂರ ,ಎಸ್ .ಎ .ರವೀಂದ್ರನಾಥ ಈಚೆಗೆ ನಮ್ಮ ಕಾಲಕ್ಕೆ ಬಂದರೆ ರಮ್ಜಾನ್ ಹೆಬಸೂರ ,ಸಿದ್ದಲಿಂಗಪ್ಪ ಬೀಳಗಿ,ಈಶ್ವರ ಮಮದಾಪೂರ ,ಮಕರಂದ ..ಹೀಗೆ ಹೈಕು ಕವಿಗಳ ಪಟ್ಟಿ ಬೆಳೆಯುತ್ತದೆ.

ಬೆಳಗಾವಿಯ ಸನದಿಯವರ ಮನೆತನ ಸಾಹಿತ್ಯದ ಮನೆತನ .ಹಿರಿಯ‌ ಕವಿ ಪಂಪ  ಪ್ರಶಶ್ತಿ ವಿಜೇತ ಬಿ.ಎ.ಸನದಿ ಅವರಲ್ಲದೆ ಸಹೋದರರಾದ ಎಂ.ಎ ಸನದಿ,ಅಕ್ಬರ ಸನದಿ ಯವರು‌ ಕನ್ನಡದ ಕವಿಗಳು.ಮತ್ತು ಸನದಿ ಮನೆತನದ ಕುಡಿ ನದೀಮ  ಸನದಿಯವರು ಕನ್ನಡದ ಯುವಕವಿಯಾಗಿ ಹೊರ ಹೊಮ್ಮಿದ್ದಾರೆ.ಅವರ ಸಹೋದರರೇ ಎ.ಎ.ಸನದಿಯವರು.ಅವರು‌ಮಕ್ಕಳ ಸಾಹಿತ್ಯದಲ್ಲಿ ಅಪಾರ ಕಾರ್ಯ ಮಾಡಿದವರು.

ಬೆಳಗಾವಿಯ ಪ್ರೌಢ ಶಾಲೆಯೊಂದರಲ್ಲಿ ಸಹ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ  ೩೭ ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಅವರು ಶಿಕ್ಷಣ ಕ್ಚೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದವರು. ಅದಕ್ಕೂ ವಿಶಿಷ್ಟವಾದುದು ಅವರ ಸಾಹಿತ್ಯ ಸೇವೆ .ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ನಾಟಕ,ಅಭಿನಯ ಗೀತೆ,ಕಥೆ,ನಾಟಕ ಹೀಗೆ ಹಲವು ಬಗೆಯ ಸಾಹಿತ್ಯ ರಚಿಸಿದ ಅವರದು ಬೆಳಗಾವಿ ಜಿಲ್ಲೆಯ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಅವರು ೨೦೧೮ ರಲ್ಲಿ ಮಕ್ಕಳಿಗಾಗಿಯೆ “ಮಗು – ನಗು” ಎಂಬ ಸಂಕಲನ ತಂದಿದ್ದರು .ನಾನು ಬಲ್ಲಂತೆ ಮಕ್ಕಳಿಗಾಗಿಯೆ ಹೈಕು ಬರೆದವರು ವಿರಳ.ಇದು ಹಾಗೆ ಕನ್ನಡದಲ್ಲಿ ಬಂದ ಅಪರೂಪದ ಹೈಕು ಸಂಕಲನವೆನ್ನಬೇಕು. ಮಕ್ಕಳ ಸಾಹಿತ್ಯ ರಚನೆಯೆ ಕಷ್ಟ. ಅದೂ ಹೈಕು ನಿಯಮವನ್ನೂ ಉಳಿಸಿಕೊಂಡು,ಮಕ್ಕಳ ಕವಿತೆಯನ್ನುಬರೆಯುವದು ಸರಳವಾದ ಕಾರ್ಯವಲ್ಲ.ಅದರಲ್ಲಿ ಶ್ರೀ ಎ.ಎ ಸನದಿಯವರು ಯಶಸ್ವಿಯಾಗಿದ್ದಾರೆ.

ಪ್ರತಿ‌ಪುಟಕ್ಕೆ ಒಂದು ,ಎರಡರಂತೆ ೬೪ ಪುಟಗಳ ಈ ಸಂಕಲನಲ್ಲಿ ೧೧೦ ಹೈಕುಗಳು ಅಡಕುಗೊಂಡಿವೆ.ಪ್ರತಿ ಪುಟದಲ್ಲಿ ಹೈಕುಗಳ ಒಳಾರ್ಥವನ್ನು ನೋಡಿದೊಡ ನೆಯೇ ಚಿತ್ರವತ್ತಾಗಿ ವಿವರಿಸುವಂತಹ ಸುಂದರ ಚಿತ್ರಗಳಿವೆ.ಮಕ್ಕಳ ಸುಂದರ ಚಿತ್ರಗಳು, ಪೃಕೃತಿ, ದೇಶಪ್ರೇಮ, ಮಗುವಿನ ಕಲಿಕೆ, ಆಧುನಿಕ ಬದುಕು,‌ ಮಕ್ಕಳನ್ನು ಓದಿನಿಂದ ದೂರ ಮಾಡುವ ಇಂದಿನ ಸಾಮಾಜಿಕ ವಿದ್ಯಮಾನಗಳು,ರಾಷ್ಟ್ರೀಯ ಪುರುಷರು ..ಹೀಗೆ ಮಕ್ಕಳಿಗೆ ಅಗತ್ಯವಾಗಿ ಬಾಲ್ಯದಲ್ಲಿ ಹೇಳಿಕೊಡಲೇ ಬೇಕಾದ ಅನೇಕ ವಿಷಯಗಳು ಇಲ್ಲಿ ಹೈಕುಗಳ ರೂಪ ತಳೆದಿವೆ.ಹೈಕು ಎಂದರೆಏನು ಎಂದು ಅನೇಕ ಕವಿಗಳು ಅದರ ಮೀಮಾಂಸೆಯನ್ನು ಮಾಡಲು ಯತ್ನಿಸಿದ್ದಾರೆ.ಇಲ್ಲಿ ಸನದಿಯವರು ಅದನ್ನು ಮಕ್ಕಳ ಕವಿತೆಯ ರೀತಿಯಲ್ಲಿಯೇ ನೀಡಿರೋ ಉತ್ತರ ಹೀಗೆ ಇದೆ.

ಹೈಕು ಹಾಗೆಯೇ

ಪುಟ್ಟ ನೀಡಿದ ದಿಟ್ಟ

ಉತ್ತರದ್ಹಾಗೆ

ಮಗುವಿನ ದಿಟ್ಟ ಮಾತಿನಂತೆ ಸ್ಪಷ್ಟವೂ,ಅವನಂತೆಯೆ ಚೂಟಿಯಾಗಿಯೂ ಹೈಕು ಇರಬೆಕು ಎನ್ನುವ ವ್ಯಾಖ್ಯಾನ ಮುದ ನೀಡುತ್ತದೆ.

ಮಕ್ಕಳ ಲೋಕ ಸ್ವರ್ಗವನ್ನು ನಾಚಿಸುವಂಥದು. ಅವುಗಳ ಆಟವನ್ನು ಕಂಡು ಹಕ್ಕಿ ಮುಗ್ಧವಾಗುತ್ತದೆ.

 ಎನ್ನುವ ಕವಿ

ಕೂಸಿನ ಆಟ

ಕಂಡು ಬಣ್ಣದ ಹಕ್ಕಿ

ನಾಚಿಕೊಂಡಿತು

ಎಂದು ಉದ್ಘಾರ ಎತ್ತುತ್ತಾರೆ. ಬಾನಿನ ಕಾಮನಬಿಲ್ಲು ಸುಂದರ  ಎಂದು ಹೇಳುತ್ತಾರೆ. ಆದರೆ ಆ ಕಾಮನಬಿಲ್ಲಿ ನ ಸೌಂದರ್ಯ ಕೂಡ ಮಗುವಿನ  ನಗುವಿನಿಂದ ಕದ್ದದ್ದೇ ಎಂಬ‌ ಕಲ್ಪನೆಯ ತಾಜಾತನ ಹೊಸತಾಗಿದೆ.

ಕಂದನ ಮುಗ್ಧ

ಸಿರಿಯ ಕದ್ದು ಆದ

ಕಾಮನಬಿಲ್ಲು

ಮಗು ಮೊಗವ

ಕಂಡ ಮಳೆ ಇಳೆಗೆ

ಇಳಿದು ಬಂತು

ಕೂಸಿನ ಮೊಗ

ಚಿತ್ತಾರ ಬಿಡಿಸಿದ

ನವಿಲುಗರಿ

ಎನ್ನುವ ಹೈಕುಗಳು ಪ್ರೀತಿ  ವಿಸ್ಮಯಗೊಳಿಸುತ್ತದೆ.

 ಶಿಕ್ಷಕರಾಗಿ ನಾಲ್ಕು ದಶಕ ದುಡಿದ ಕವಿಗೆ ಅನೇಕ ಕಲಿಕಾ ಸಂಗತಿಗಳನ್ನು ಹೈಕು ಆಗಿಸುವದು ತುಂಬ ಸರಳ ವಾಗಿದೆ.

ಅಕ್ಷರವೆಂದೂ

ಆರದ ದೀಪ ಬನ್ನಿ

ಶಾಲೆಯೆಡೆಗೆ

ಅವರಿಗೆ ಮಕ್ಕಳಿಂದ  ತುಂಬಿದ ಶಾಲೆ ” ಸುಂದರ ಹೂವಿನ ತೋಟ” ದಂತೆ ಕಂಡಿದೆ ಮಕ್ಕಳ ಕಲಕಲ ಸಪ್ಪಳ ರಾಗ ನಿನಾದದದಂತೆ ಕಾಣಿಸುತ್ತದೆ.

ಕವಿಗಳ ಕನ್ನಡಾಭಿಮಾನ‌ ಕೂಡ ಕವಿತೆಯ ರೂಪ ತಾಳಿದೆ. ಮಗುವಿಗೆ ಇಂಗ್ಲೀಷ್ ವ್ಯಾಮೋಹ ಬೇಡ ಎನ್ನುವ ಕವಿ

ಕನ್ನಡ ಕಲಿ

ಅದರಲ್ಲಿದೆ ಜೇನು

ಇಂಗ್ಲಿಷಲ್ಲೇನು?

ಎಂದು ತುಂಬ ಸರಳವಾಗಿ ಬರೆದರೂ ಸುಂದರ‌ ಕವಿತೆಯೆ ಆಗಿಸುತ್ತಾರೆ.

ತಾಯಿ‌ ಮಕ್ಕಳ ಆಟವು ಇಲ್ಲಿ ಸುಂದರ ಹೈಕುಗಳಾಗಿವೆ.

ಮಕ್ಕಳಾಟವು ತಾಯಿಗದು ಸ್ವರ್ಗವುಬೇಕು ಇನ್ನೇನು?

ಕಂದನ ನೋಟ

ತಾಯಿ ನುಡಿದಳಿದು

ದೇವರ ಆಟ

ಹೀಗೆ ತಾಯಿಯ ಕಣ್ಣಿಗೆ ಮಕ್ಕಳು ಲೋಕದ ವಿಸ್ಮಯ ವಾಗಿ ಕಂಡಿದೆ..ಆದರೆ ಕಪ್ಪೆಯ‌ ಕೂಗು ಹೈಕು ಆಗುವ ರೀತಿ ನೋಡಿ

ಕಪ್ಪೆ ವಾಟರ್

ವಾಟರೆಂದು ಇಂಗ್ಲಿಷ್

ಮಾತನಾಡಿತು

ಎನ್ನುವಾಗ ಕೃತ್ರಿಮ ಎನಿಸದಿರದು. ಅದರಲ್ಲಿಯೂ “ಮಕ್ಕಳೆಂದರೆ/ ರೀತಿ ನೀತಿ ಪುಸ್ತಕ/ಓದಿಕೊಳ್ಳಿರಿ ಎಂಬಂತಹ ಚುಟುಕುಗಳು ಅಕ್ಷರದ ನಿಯಮಕ್ಕೆ ೫/೭/೫ ಕೊರೆದು ಇಟ್ಟಂತೆ ಇದ್ದು ಕವಿತೆಯಾಗುವದು ಕಷ್ಟ.

ದೇಶಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯ ಬಾಲ್ಯದ ಲ್ಲಿಯೇ ಸಾಕಷ್ಟು ಇರುತ್ತದೆ.ಹಾಗಾಗಿಯೆ ಬಹಳಷ್ಟು ಮಕ್ಕಳ ಕವಿತೆಗಳು ದೇಶ ಭಕ್ತಿಯ ಸಾಹಿತ್ಯ ಅಪಾರವಾಗಿಯೇ ಸೃಷ್ಟಿಯಾಹಿರುವದು ಸಹಜ.ಹಾಗೇಯೆ ಹೈಕುಗಳಲ್ಲಿ ದೇಶಭಕ್ತಿ ಸೂಸುವ ಕವಿತೆಗಳು ಇವೆ.ನಮ್ಮ ಧ್ವಜದ ಪರಿಕಲ್ಪನೆಯನ್ನು ಬಣ್ಣಗಳ ಮೂಲಕ ಮಾಡುವದೆ ಮಕ್ಕಳಿಗೆ ಅವರ ಮನೋಲೋಕಕ್ಕೆ ಸೂಕದತವಾದದ್ದು ಎಂದರಿತ ಕವಿ

ಕೇಸರಿ ಬಿಳಿ

ಹಸಿರು ಧ್ವಜವಿದಿ

ನಮ್ಮ ಹೆಮ್ಮೆಯು

ಎಂದು ದೇಶದ ಅಭಿಮಾನ ತುಂಬಿದ ಹೈಕು ಬರೆಯು ತ್ತಾರೆ.

ಇಂದಿನ ಬಹು ದೊಡ್ಡ ಅಗತ್ಯ ಸಾಮರಸ್ಯ ಮೂಡಿಸು ವದು..ಜಾತಿ ಜಾತಿಗಳ ನಡುವೆ ಅಂತರ ತಂದು ಮಕ್ಕಳಿರುವಾಗಲೇ ಅವುಗಳ ಮನಸ್ಸನ್ನು ಕೆಡಿಸುವ ವಿಕೃತ ಮನಸ್ಸುಗಳೇ ಇಲ್ಲಿ ತುಂಬಿವೆ .ಅದಕ್ಕೆ ಕವಿ ಎಚ್ಚರಿಸುತ್ತಾರೆ

ರಾಮ ರಹಿಮ

ಇಬ್ಬರೂ ಒಂದೆ ಹಾಗೇ

ನಾವೆಲ್ಲ ಒಂದೆ

ಹೀಗೆ ದೈವದೊಳಗೂ ಅಂತರವಿಲ್ಲ, ನಮ್ಮ ಒಳಗೂ ಇರಬಾರದು ಎನ್ನುವ ಸಂದೇಶ ಅಲ್ಲಿದೆ.ದೇಶಕ್ಕಾಗಿ ದುಡಿದ ನಾಯಕರಾದ ಗಾಂಧಿ,ನೆಹರು ಮೊದಲಾದ ವರನ್ನು ಕವಿ ಹೈಕುಗಳೊಳಗೆ ಚಿತ್ರಿಸುತ್ತಾರೆ.ಕನ್ನಡ ಅಭಿಮಾನವೂ ಇಲ್ಲಿ ಕವಿತೆಗಳಾಗಿದೆ. ಮಗು ಮತ್ತು ಅವನ‌ಕಲಿಕೆಯ ಅನೇಕ ಒಳ ನೋಟಗಳನ್ನು ಅನುಭವಿ ಅಧ್ಯಾಪಕರಾದ ಅವರು ನೀಡುತ್ತಾರೆ. ಆಧುನಿಕ ಯುಗದಲ್ಲಿ ಮಕ್ಕಳು ಮೋಬೈಲ್  ಯಂತ್ರದ ದಾಸರಾಗುತ್ತಿರುವದು ಸಹನೆಯಾಗದೆ ” ಮೊಬೈಲ್ ಬಿಡು/ಪುಸ್ತಕವ ಹಿಡಿ/ ಜಾಣನಾಗುವೆ” ಎಂಬಂತಹ  ಚುರುಕಾದ ಹೈಕುಗಳು‌ ಮನಸು ತಟ್ಟುತ್ತವೆ.

ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಮಗುವಿನ  ಮೊದಲ ಆದ್ಯತೆ ಎಂಬುದನ್ನು ಯೋಗದ ಬಗೆಗಿನ ಹೈಕು ವಿವರಿಸಿದೆ.ಆದರೆ ಕೆಲವೊಮ್ಮೆ ಒಂದರ ಕೆಳಗೆ ಒಂದು ಪದ ಎಣಿಸಿ ಇಟ್ಟರೆ ಹೈಕು ಆಗದು ಎಂಬುದನ್ನು ನೆನಪಿಸುವ ಹಾಗೆ

ತಂದೆ ಬಂದರು

ಪುಸ್ತಕವ ತಂದರು

ಕಲಿ ಎಂದರು

ಇಂತಹ ಹೈಕುಗಳನ್ನು‌ ಹೈಕು ಎನ್ನಲು‌ ಮನಸ್ಸಾಗದು. ಕವಿತೆಯೆ ಬೇರೆ ಹೇಳಿಕೆಯೇ ಬೇರೆ ಎನ್ನುವದು ಸನದಿಯ ವರಂತಹ ಹಿರಿಯರಿಗೆ ಗೊತ್ತಿರುವಂಥದೆ. ಇಂತಹ ಒಂದೆರಡು ಅಸಾರ್ಥಕ ರಚನೆಗಳು ಸಂಕಲನವೆಂದ ಮೇಲೆ ಇರುವವೇ.

ಒಟ್ಟಾರೆ ಸನದಿಯವರ ಈ ಹೈಕು ಸಂಕಲನ ಮಕ್ಕಳ ಲೋಕವನ್ನು, ಅವರಿಗೆ ನೀಡಬೇಕಾದ ಸಂದೇಶವನ್ಬು‌ ಮನೋಜ್ಞವಾಗಿ‌ ನೀಡಿದೆ.ಬದುಕಿನುದ್ದ  ಮಕ್ಕಳ ಸಾಹಿತ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಹಿರಿಯ ಕವಿ ಶ್ರೀ ಎ.ಎ.ಸನದಿಯವರು ಇಂತಹ ಅನೇಕ ಪ್ರಯೋಗಗಳನ್ನು ಮಾಡುತ್ತ ಮಕ್ಕಳ ಸಾಹಿತ್ಯ‌ ಕ್ಷೇತ್ರವನ್ನು ಇನ್ನಷ್ಟು ಸಿರಿವಂತ ಗೊಳಿಸಲಿ ಎಂಬ ಶುಭ ಹಾರೈಕೆ ನನ್ನದು.


ಡಾ ಯ.ಮಾ.ಯಾಕೊಳ್ಳಿ

Leave a Reply

Back To Top