ಅಂಕಣ ಸಂಗಾತಿ

ಒಲವ ಧಾರೆ

ಸುಂದರ ಸಮಾಜಕ್ಕೆ ಬದುಕ

ತೇಯ್ದ ಜೀವಿಗಳ ಬದಕು ಹಸನಾಗಲಿ

ನಸುಕಿನಲ್ಲಿ ಮ್ಯಾನ್ಹೋಲಿನಲ್ಲಿ ಸ್ವಚ್ಛ ಮಾಡುತ್ತಿದ್ದಾಗ ಹೆಣವೊಂದು ತೇಲಿ ಬಂತು ನಂತರ ಅದನ್ನು ಪರಿಶೀಲಿಸಲಾಗಿ ಅದು  ಇನ್ನೊಂದು ವಾರ್ಡಿನ ಪೌರ ಕಾರ್ಮಿಕನ ಶವವಾಗಿತ್ತು…!!

ಮುಂಜಾನೆ ಇನ್ನೂ ಸೂರ್ಯೋದಯಕ್ಕಿಂತ ಮೊದಲೇ ನಗರದ, ಪಟ್ಟಣಗಳ ರಸ್ತೆಗಳು ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತಿವೆ ಎಂದರೇ ಇದರ ಹಿಂದೆ ಪೌರಕಾರ್ಮಿಕರ ಬೆವರಿನ ಹನಿಗಳು ಮಾತನಾಡುತ್ತವೆ…!!

ಹೀಗೆ ಮುಂಜಾನೆಯಿಂದ ಸಂಜೆಯವರೆಗೆ ಇಂತಿಷ್ಟು ಬೀದಿಗಳನ್ನು, ರಸ್ತೆಗಳನ್ನು, ಓಣಿಗಳನ್ನು, ಶುಚಿ ಮಾಡುವ ಪೌರಕಾರ್ಮಿಕರ ಬವಣೆಯ ನೋವುಗಳು ಹೇಳತೀರದು. ಯಾವುದೇ ನಿಗದಿತವಾದ ಉದ್ಯೋಗ ಸಿಗದಿದ್ದಾಗ, ದುಡಿಯಲು ಹೊಲಗದ್ದೆಗಳು ಇಲ್ಲದಿದ್ದಾಗ, ಗ್ರಾಮಪಂಚಾಯತಿಯಲ್ಲಿಯೋ, ಪಟ್ಟಣ ಪಂಚಾಯತಿಯಲ್ಲೋ, ನಗರ,ಮಹಾನಗರ ಪಾಲಿಕೆಯಲ್ಲಿಯೋ ಪೌರಕಾರ್ಮಿಕರಾಗಿ  ಸೇವೆ ಸಲ್ಲಿಸಲು ನೂರಾರು ಜನರ ಗೋಗೆರೆದು, ಅರ್ಜಿಯನ್ನು ಹಾಕಿ, ಒಂದು ಸಣ್ಣ “ಪೌರ ಕಾರ್ಮಿಕ” ಹುದ್ದೆ ಸಿಗುವ ಸಲುವಾಗಿ ಹೋರಾಟ ಮಾಡಿದ ಕಥೆ ಯಾವತ್ತೂ ಮರೆಯಲಾಗದಂತದ್ದು

.

ಓದುವ ಮಕ್ಕಳ ಸಲುವಾಗಿ, ಕುಡುಕ ಗಂಡನನ್ನು ಸಲುಹುವದಕ್ಕಾಗಿ, ಇಡೀ ಕುಟುಂಬದ ನಿರ್ವಹಣೆಗಾಗಿ ಅಂತೂ ಇಂತೂ ಒಂದು ಬದುಕಿನ ಹೊಸ ತಿರುವಿಗೆ ಹೆಜ್ಜೆ ಹಾಕುವ ಸಲುವಾಗಿ ಪೌರಕಾರ್ಮಿಕ ಎನ್ನುವ ಕೆಲಸಕ್ಕೆ ಹೋಗುವ ಮೊದಲ ಸಲದ ಸಂಭ್ರಮ…!!

ಆದರೆ ಬದುಕಿನ ಬಂಡಿಯ ಎಳೆಯುವ ಧಾವಂತದಲ್ಲಿ ಸಮಾಜದ ಜನರೆಲ್ಲರೂ ಬಿಸಾಕಿದ ಕಸವನ್ನು ಎತ್ತಿಹಾಕುವುದು. ಹರಿಯುವ ಹೊಲಸು ನೀರಿನ ಗಲೀಜು ಕೆಟ್ಟ ವಾಸನೆಯನ್ನು ಕುಡಿಯುತ್ತಲೇ ಸ್ವಚ್ಛಗೊಳಿಸುವುದು. ಮೇಲಾಧಿಕಾರಿಗಳು ಹೇಳುವ ಹಾದಿ ಬೀದಿಯ ಕಸಗಳನ್ನು ಗೂಡಿಸುತ್ತಲೇ  ಪೌರ ಕಾರ್ಮಿಕರ  ದಿನಚರಿ ಪ್ರಾರಂಭವಾಗುತ್ತದೆ. ಮುಂಜಾನೆಯ ಹೊತ್ತಿಗೆ ಇನ್ನೂ ಮನೆಯಲ್ಲಿ ಮಕ್ಕಳು ಮಲಗಿರುತ್ತಾರೆ. ಅವರನ್ನು ಹಾಗೇಯೇ ಬಿಟ್ಟು ಹಸಿದ ಹೊಟ್ಟೆಯಿಂದಲೇ ಮುಖಕ್ಕೆ ನೀರೆರಚಿಕೊಂಡು ಉದ್ದನೆಯ ಕಸಬರಿಗೆ, ಉದ್ದನೆಯ ಸಲಿಕೆ ಹಿಡಿದುಕೊಂಡು ಅವರು ಕಾಯಕಕ್ಕೆ ಸಿದ್ಧವಾಗುತ್ತಾರೆ. ಮನೆಯ ಎಲ್ಲಾ ಕೆಲಸಗಳು ಹಾಗೆಯೇ ಬಿಟ್ಟು. ಮನೆಯಲಿದ್ದ ಮಕ್ಕಳಿಗೆ ಕೆಲಸ ಮಾಡಲು ಹೇಳಿ ಸಾಧ್ಯವಾದರೆ ಮುಂಜಾನೆಯ ಮನೆಯ ಎಲ್ಲಾ ಕೆಲಸಗಳನ್ನು ರಾತ್ರಿಯೇ ಮಾಡಿಕೊಂಡು, ಮುಂಜಾನೆಯೇ ಸಮಾಜದ ಹಾದಿಬೀದಿಗಳಲ್ಲಿ ಅವರು ಸ್ವಚ್ಛ ಮಾಡುವ ಕಾಯಕ್ಕೆ ಹಾತೊರೆಯುತ್ತಾರೆ. ತಡವಾದರೆ “ಮೇಸ್ತ್ರಿ” ಎಂಬ ಮಹಾಶಯನ ಬೈಗುಳಗಳ ಸುಪ್ರಭಾತಗಳನ್ನು ಅವರು ಕೇಳಲೇಬೇಕು. ಅಲ್ಲಲ್ಲಿ ತಿಂದು ಎಸೆದ, ಕುಡಿದುಬಿಟ್ಟ ಬಾಟಲಿ,ಪ್ಲಾಸ್ಟಿಕ್, ಕಸ ಕಡ್ಡಿ ಬೀಸಿ ಎಸೆದುಹೋದ ಹೊಲಸು ವಸ್ತುಗಳು… ನಾಗರಿಕ ಸಮಾಜ ಎಂದುಕೊಂಡವರೇ  ಅನಾಗರಿಕವಾಗಿ ಮಾಡಿದ ಎಲ್ಲಾ ಹೊಲಸನ್ನು ಅವರು ಸ್ವಚ್ಛಗೊಳಿಸಬೇಕು.

 ಹೀಗೆ ಸ್ವಚ್ಛಗೊಳಿಸುವಾಗ ಅವರ ವೈಯಕ್ತಿಕ ಆರೋಗ್ಯದ ಕಡೆ ಗಮನವೇ ಇರುವುದಿಲ್ಲ. ಗಟಾರದ ನೀರು ನಿಂತು ಮಲಿನವಾಗಿ, ಸೊಳ್ಳೆಗಳು ತುಂಬಿದಾಗ ಓಣಿಯ ಸುತ್ತಮುತ್ತಲಿನ ಜನರೆಲ್ಲರೂ ಪೌರಕಾರ್ಮಿಕರೆದುರು ನಿಂತು ಮಾಲೀಕರಂತೆ ಕೈಯ್ಯಾರೆ ಗಟಾರ,ಚರಂಡಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ.  ಅವರು ಕೆಲಸ ಮಾಡುವ  ಸಂದರ್ಭದಲ್ಲಿ ಮೂಗು ಮುಚ್ಚಿ ಮೂಗು ಮುರಿಯುತ್ತಾರೆ. ಹೊಲಸು ಮಾಡುವವರೇ ಮೂಗು ಮುಚ್ಚಿಕೊಳ್ಳುವವರು..!!  ಸ್ವಚ್ಛಗೊಳಿಸುವರು ಮಾತ್ರ ಗಟಾರದ ಗಬ್ಬು ವಾಸನೆಯನ್ನು ಅನಿವಾರ್ಯವಾಗಿ  ಅವರು ಅನುಭವಿಸಲೇಬೇಕು..!!  ಯಾಕೆಂದರೆ ಅವರಿಗೂ ಬದುಕಿದೆ ಅಲ್ಲವೇ ಬದುಕಿಗಾಗಿ ಬಂದುದನ್ನು ಸ್ವೀಕರಿಸಲೇಬೇಕು..!! ಇವತ್ತಿನ ದಿನಮಾನಗಳಲ್ಲಿ ಪೌರಕಾರ್ಮಿಕರು ಎಂದರೆ ಕೊನೆಯ ಹಂತದ ಸೇವಕರು. ಅವರ ನೇಮಕಾತಿಯು ಕೂಡ ಸರ್ಕಾರದಿಂದ ಆಗುವುದಿಲ್ಲ.  ಸ್ಥಳೀಯ ಸರಕಾರಗಳು ಕೇವಲ ದಿನಗೂಲಿಯವರಂತೆ ಇಲ್ಲವೇ ಅರೆಕಾಲಿಕ ನೌಕರರಂತೆ ಅವರನ್ನು ನೇಮಕಾತಿ ಮಾಡಿಕೊಂಡು ಶೋಷಣೆ ಮಾಡುತ್ತಾರೆ.  ಇನ್ನೂ ಅವರ ವೇತನದ ಬಗ್ಗೆ ಮಾತನಾಡುವಂತಿಲ್ಲ ಮತ್ತು  ಕೇಳುವಂತಿಲ್ಲ. ಯಾಕಂದರೆ ಅವರ ವೇತನ (ಸಂಬಳ,ಪಗಾರ) ಎರಡು ತಿಂಗಳಿಗೋ ಇಲ್ಲವೇ ಮೂರು ತಿಂಗಳಿಗೊಮ್ಮೆ ಕೆಲವು ಸಲ ಆರು ತಿಂಗಳಿಗೂ ಆದಂತಹ ಸಂದರ್ಭಗಳೂ ಇವೆ. ನಾವು ಅಲ್ಲಲ್ಲಿ ಸುದ್ದಿ ಪತ್ರಿಕೆಗಳಲ್ಲಿ ಓದುತ್ತೇವೆ, ಕೇಳುತ್ತೇವೆ. ಹಾಗಾದರೆ ನಿತ್ಯ ಅವರ ಬದುಕನ್ನು, ಅವರ ಕುಟುಂಬದ ನಿರ್ವಹಣೆಯನ್ನು ಮಾಡುವುದಾದರೂ ಹೇಗೆ…? ಎಂಬ ಸಾಮಾನ್ಯ ಪ್ರಜ್ಞೆಯೂ ಕೂಡ ಇರಲಾರದಷ್ಟು ಜನಪ್ರತಿನಿಧಿಗಳ ಸರ್ಕಾರಗಳು ನಡೆದುಕೊಳ್ಳುವುದು ಅಸಹ್ಯಕರವೆನಿಸುತ್ತದೆ.

ಸಾರ್ವಜನಿಕ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಕಸವನ್ನು ಗೂಡಿಸುವುದು, ಸಾರ್ವಜನಿಕ ಕಚೇರಿಗಳ ಮುಂದೆ ಇರುವ ಸ್ಥಳಗಳನ್ನು ಶುಚಿಗೊಳಿಸುವುದು,

ಕಟ್ಟಿಕೊಂಡ ಗಟಾರಗಳನ್ನು ಸ್ವಚ್ಛಮಾಡುವುದು, ಗೂಡಿಸಿದ ಕಸವನ್ನು ಬರುವ ವಾಹನಗಳಿಗೆ ಹೊತ್ತು ಹಾಕುವುದು, ವಾಹನಗಳಲ್ಲಿ ಇರುವ ಕಸವನ್ನು ಇನ್ನೊಂದು ಕಡೆ ವಿಲೇವಾರಿ ಮಾಡುವುದು. ವಿಲೇವಾರಿ ಮಾಡಿದ ಕಸವನ್ನು ತೆಳ್ಳಗೆ ಮಾಡಿ ಮುಚ್ಚಿ ಹಾಕುವುದು. ಇಂತಹ ಕೆಲಸ ಮಾಡುವ  ಪೌರಕಾರ್ಮಿಕರ ಜೊತೆಗೆ ಇನ್ನೂ ಕೆಲವು ಪೌರಕಾರ್ಮಿಕರು ಅವರ ಸೇವಾ ಹಿರಿತನವನ್ನು ಗುರುತಿಸಿ, “ಮೇಸ್ತ್ರಿ”ಯಾಗಿಯೊ ಇಲ್ಲವೇ ವಾಹನದ ಚಾಲಕರಾಗಿಯೋ ಇಲ್ಲವೇ ಆಫೀಸಿನ ಜವಾನನಾಗಿಯೋ ‘ಮುಂಬಡ್ತಿ’ಯೇ ದೊಡ್ಡದೆಂಬ ಕಾಣಿಕೆಯನ್ನು ಕೊಟ್ಟು ಬೀಗುತ್ತಾರೆ ಜನ ಪ್ರತಿನಿಧಿಗಳು..!! ಇಷ್ಟಲ್ಲದೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ, ಕೆಲವು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ, ಗ್ರಾಮಾಂತರ ಪ್ರದೇಶದಲ್ಲಿ, ನಗರಗಳಲ್ಲಿ ಶಾಲೆಗಳನ್ನು, ಮಂದಿರ ಮಸೀದಿಗಳನ್ನು ಸ್ವಚ್ಛಗೊಳಿಸಲು ಅವರೇ ಬೇಕಾಗುತ್ತದೆ. ಅವರ  ಮೇಲೆ ವಿಶ್ವಾಸವಿಲ್ಲದೆ ಸ್ವಚ್ಛಗೊಳಿಸಿದರೂ ಈ ಬಗ್ಗೆ ಸಾಕ್ಷಿ ಕೇಳುವಂತೆ ನೋಟ್ ಪುಸ್ತಕದಲ್ಲಿ ಸಾರ್ವಜನಿಕರಿಂದ ಸ್ವಚ್ಛಗೊಳಿಸಿದ್ದಾರೆಂಬ  ಷರಾ ಬರೆಸಿಕೊಂಡು ಸಹಿ ಮಾಡಿಸಿಕೊಂಡು, ಕಚೇರಿಯ ಮೇಸ್ತ್ರಿಗಳಿಗೆ,  ಮೇಲಾಧಿಕಾರಿಗಳಿಗೆ ತೋರಿಸಬೇಕಾಗಿರುವುದು ದುರಂತವೆನ್ನಬಹುದು. ಎಷ್ಟೇ ಪ್ರಮಾಣಿಕವಾಗಿದ್ದರೂ ಅವರ ಮೇಲಿನ ಅಪನಂಬಿಕೆ, ಅವಮಾನ ಸಾಮಾನ್ಯವಾಗಿರುತ್ತದೆ. ಅಲ್ಲದೇ ಕೆಲಸ ಮಾಡುವಾಗ ಬಂದ ಹಲವಾರು ಕಾಯಿಲೆಗಳನ್ನು ಸಹಿಸಿಕೊಂಡು. ಸ್ಥಳಿಯ ವೈದ್ಯರಸಲಹೆಯ ಮೇರೆಗೆ ಚಿಕತ್ಸೆ ಪಡೆಯುತ್ತಲೇ  ಅದೆಲ್ಲವನ್ನು ನುಂಗಿಕೊಂಡೆ ಅವರು ಬದುಕಬೇಕಾಗುತ್ತದೆ.

ಈ ಮೊದಲು ಅವರಿಗೆ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದರು. ಮುಂಜಾನೆ ಕೆಲಸಕ್ಕೆ ಬಂದರೆ ಮಧ್ಯಾಹ್ನ ಊಟಕ್ಕೆ ಅವರ ಮನೆಗೇ ಹೋಗಬೇಕಾಗಿತ್ತು. ನಂತರ ಸಂಜೆ ಕೆಲಸಕ್ಕೆ ನಿಂತರೆ ಕೆಲವು ಸಲ ರಾತ್ರಿ ಎಂಟರವರೆಗೂ ಕೂಡ ಅವರನ್ನು ಕೆಲಸಮಾಡಿಸಿಕೊಳ್ಳುತ್ತಿದ್ದರು.  ನಮ್ಮ ಪೌರಕಾರ್ಮಿಕ ಕೆಲಸಗಾರರಿಗೆ ಯಾವುದೇ ರೀತಿಯ ಸರ್ಕಾರಿ ರಜೆಗಳೇ ಇಲ್ಲ. ಇನ್ನಿತರ ರಜೆಗಳಿಲ್ಲ. ಕೆಲಸಕ್ಕೆ ಹಾಜರಾಗದಿದ್ದರೆ ಅವರಿಗೆ ಕೂಲಿಯೂ ಇಲ್ಲ. ಮಕ್ಕಳ ಓದಿಗಾಗಿ ಹಗಲಿರುಳು ದುಡಿದು, ಮಕ್ಕಳನ್ನು ಒಂದು ಹಾದಿಗೆ ಸೇರಿಸಬೇಕೆಂಬ ಅಚಲವಾದ ನಂಬಿಕೆಯೊಂದೆ ಅವರ ಗುರಿ.  ಅವರನ್ನು ಎಂತಹ ಕೊಳಕು ಜಾಗಕ್ಕೂ ಕರೆದುಕೊಂಡು ಹೋಗಿ ಕೆಲಸ ಹಚ್ಚಿದರೂ ಆ ಕೆಲಸ  ಮಾಡಿಕೊಡಲೇ ಬೇಕು.  ಪೌರಕಾರ್ಮಿಕರು ಕೆಲಸದ ನಂತರ ಹೊರ ಬಂದ ಮೇಲೆ ಸ್ನಾನ ಮಾಡಿ ಶುಚಿಯಾಗಿದ್ದರೂ ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಇದೇ ಹೊಲಸು ಮಾಡುವ ಹೊಲಸು ಜನರು..!!  ಅವರನ್ನು ಕಂಡರೆ ಮೂಗು ಮುಚ್ಚಿಕೊಂಡು ದೂರಸರಿವ ಜನರು ಇವತ್ತಿಗೂ ನಾವು ನೋಡುತ್ತೇವೆ. ಅದು ಅವರ ಕಾಯಕ ನಿಷ್ಠೆ.  ಪೌರಕಾರ್ಮಿಕರೆಂದರೆ ಮೂಗು ಮುರಿಯುವ ಜನರು  ಮಾಡುವ ಗಲೀಜನ್ನು ಅವರು  ತಾಯಿಯಂತೆ ಬಳಿಯುತ್ತಾರೆಂದರೇ ಅವರ ಸಹನೆಗೆ ನಮ್ಮದೊಂದು ಸಲಾಮ್ ಹೇಳಲೇಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ವರ್ತಿಸುತ್ತಾರೆ ಜನರು. ಅವರ ವರ್ತನೆಗೆ ಕೆಲವು ಸಲ ಅವರಿಗೆ ಬೇಸರವೆನಿಸಿದರೂ ಎಲ್ಲವನ್ನು ನುಂಗಿಕೊಂಡು, ಬದುಕುವುದಕ್ಕಾಗಿ ಅನಿವಾರ್ಯವಾಗಿ ನಗರವನ್ನು ಸುಂದರ ಮಾಡುತ್ತಿದ್ದಾರೆ..!!

ಹಿಂದಿನಿಂದಲೂ ಬಂದ  ಸರ್ಕಾರಗಳಾಗಲಿ, ಈಗಿನ ಸರ್ಕಾರಗಳಾಗಲಿ ಬರೀ  ಯೋಜನೆಗಳನ್ನು ಹಾಕಿಕೊಂಡು,  “ಸ್ವಚ್ಛ ಭಾರತ” ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಯೋಜನೆ ಹಾಕಿದರೂ  ಪೌರಕಾರ್ಮಿರ  ಬದುಕು ಬದಲಾಗಲಿಲ್ಲ.  ಕೇವಲ ಪೊರಕೆ ಹಿಡಿದರೆ ಸ್ವಚ್ಛವಾಗುವದಿಲ್ಲ.. ಎನ್ನುವ ಸತ್ಯ ಎಲ್ಲರೂ ಅರಿತುಕೊಳ್ಳಬೇಕಿದೆ. ಇನ್ನೂ “ನಿರ್ಮಲ ಭಾರತ” ಹೆಸರಿನಲ್ಲಿ ಅವರೂ ಸಾಕಷ್ಟು ಯೋಜನೆಗಳನ್ನು ರೂಪಿಸಿದರೂ ಅದರ ಪ್ರಯೋಜನ ಪಡೆದವರೇ ಬೇರೆ.  ನಿಜವಾದ ಪೌರ ಕಾರ್ಮಿಕರಿಗೆ ಸಿಕ್ಕಿರುವುದು ಕೇವಲ ನೆಪ ಮಾತ್ರ. ಬಸವಣ್ಣನವರ “ಕಾಯಕವೇ ಕೈಲಾಸ” ಎನ್ನುವ ತತ್ವದಡಿಯಲ್ಲಿ ಬದುಕನ್ನು ಕಂಡುಕೊಂಡವರು ಪೌರಕಾರ್ಮಿಕರು. ಹಲವಾರು ಜನಪರ ಹೋರಾಟಗಳ ಫಲವಾಗಿಯೋ ಏನೋ,  ಪೌರ ಕಾರ್ಮಿಕರ ಮೌನ ಪ್ರತಿಭಟನೆಯ  ಹತಾಶೆ ಗಾಗಿಯೋ..ಏನೋ ನಾಗರಿಕ ಸಮಾಜವು  ಪೌರ ಕಾರ್ಮಿಕರಿಗಾಗಿ ಇತ್ತೀಚಿಗೆ ಕೆಲವು ಸೌಲಭ್ಯಗಳನ್ನು ನೀಡಲು ಮುಂದಾಗಿದ್ದರೂ ಅದರ ಪ್ರಯೋಜನಗಳನ್ನು ಬೇರೆಯವರ ಪಡೆಯುತ್ತಿದ್ದಾರೆ. ಆದಾಗ್ಯೂ “ಆನೆಯ  ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ” ಎಂಬಂತೆ ಸ್ವಚ್ಛಗೊಳಿಸುವಾಗ ಹ್ಯಾಂಡ್ ಗ್ಲೌಸ್ ಮತ್ತು ಸಮವಸ್ತ್ರ ಕೆಲವು ಆಧುನಿಕ ಉಪಕರಣಗಳು ಇತ್ತೀಚಿಗೆ ನೀಡುತ್ತಿದ್ದಾರೆ. ಹಾಗೆಯೇ ಬೆಳಗಿನ ಅವಧಿಯಲ್ಲಿ ಉಪಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅವರನ್ನು ನಾಗರಿಕರನ್ನಾಗಿ ಪರಿಗಣಿಸುತ್ತಿರುವುದು ಸಮಾಧಾನದ ಸಂಗತಿ.

ಇನ್ನೂ ಪೌರ ಕಾರ್ಮಿಕರ ಮಕ್ಕಳಿಗೆ ನೀಡುವ ಮೀಸಲಾತಿಯ ಬಗ್ಗೆ ಕೊಂಕು ನುಡಿಯುವವರು ಸಾಕಷ್ಟು ಜನ ಇದ್ದಾರೆ. ಅವರಿಗೇಕೆ ಮೀಸಲಾತಿ ಎನ್ನುವವರಿಗೆ ಪೌರ ಕಾರ್ಮಿಕರ ಒಂದು ವಿನಂತಿ ಏನಂದರೇ ಒಬ್ಬರಾದರೂ ಈ ಸ್ವಚ್ಛತಾ ಕೆಲಸಕ್ಕೆ ಸೇರಿ ನೋಡೋಣ…? ಉಹುಂ ಅದಾಗದ ಕೆಲಸ. ಪೌರ ಕಾರ್ಮಿಕರ ಒಳಿತಿಗಾಗಿ  ಇನ್ನೂ ಸಾಕಷ್ಟು ಕಾನೂನುಗಳು ಜಾರಿಗೆ ಬರಬೇಕಿದೆ. ಅವರಿಗೆ “ಸರ್ಕಾರಿ ನೌಕರ”ರೆಂದು ಪರಿಗಣಿಸಿ, ಮುಸ್ಸಂಜೆಯ ಬದುಕಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ನಾಗರೀಕ ಸಮಾಜ ವುಳ್ಳ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ.

ಚರಂಡಿ, ಒಳಚರಂಡಿ, ಕಸ, ಹೊಲಸು ನೀರು, ಉದ್ದನೆಯ ಕಸಬರಗಿ, ಸಲಿಕೆ, ಮ್ಯಾನ್ ಹೊಲ್, ಕಸದ ಸಂಗ್ರಹಣೆ, ವಿಲೇವಾರಿ, ಕಸದ ಬುಟ್ಟಿ, ಕಸದ ಗಾಡಿ, ಕೈಗವಸ,ಮುಸುಕು ವಸ್ತ್ರ, ಸೊಳ್ಳೆಗಳು, ಕಾಲರ, ಅನಾರೋಗ್ಯ ಪೀಡಿತ, ಸಂಘಟನೆ, ಹೋರಾಟ…ಮುಂತಾದ ಪದಗಳಲ್ಲಿ ಹುದುಗಿ ಹೋಗಿರುವ ಪೌರ ಕಾರ್ಮಿಕರ ಬದುಕು ಹಸನಾಗಬೇಕಿದೆ. ಇಂತಹ ಹಸನಾದ ಬದುಕಿನ ಸೌಲಭ್ಯಗಳನ್ನು ಪಡೆಯಬೇಕಾದರೆ ಪೌರ ಕಾರ್ಮಿಕ ಸಂಘಟನೆಗಳು ಸ್ವಾರ್ಥವನ್ನು ಮರೆತು ಒಂದಾಗಿ ಹೋರಾಟ ಮಾಡಬೇಕಿದೆ.

ಪೌರ ಕಾರ್ಮಿಕರಿದ್ದರೆ ನಮ್ಮ ಊರುಗಳು ಸ್ವಚ್ಛ ಸುಂದರ. ಆ ಸುಂದರ ಭಾರತ ನಿರ್ಮಿಸುವ ಯೋಜನೆಯಲ್ಲಿ  ಪೌರ ಕಾರ್ಮಿಕರಿಗೆ ಆದ್ಯತೆ ಸಿಗಲಿ.  ಅವರ  ಕುಟುಂಬದ  ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ   ನಮ್ಮ ಸಮಾಜಿಕ ವ್ಯವಸ್ಥೆಯಲ್ಲಿ ಅವರಿಗೂ ಎಲ್ಲರಂತೆ ಒಲವು, ಪ್ರೀತಿ, ವಾತ್ಸಲ್ಯ ದೊರಕಲಿ. ಈ ಸುಂದರ ಸಮಾಜಕ್ಕೆ ಬದುಕ ತೇಯ್ದ ಜೀವಗಳು ನಗು ನಗುತ್ತಾ ಎಲ್ಲರಂತೆ ಅವರ ಬದುಕು ಹಸನಾಗಲೆಂದು ನಾವು ಹಾರೈಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ :   ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ,  ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

 (ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

One thought on “

  1. ಪೌರಕಾರ್ಮಿಕರ ಬಗ್ಗೆನ ಕಾಳಜಿ ಉಳ್ಳಲೇಖನ ಚೆನ್ನಾಗಿ ಬರೆದಿದ್ದೀರಿ ರಮೇಶ್ ಅವರೇ

Leave a Reply

Back To Top