ಪಥವ ಬದಲಿಸೋಣವಲ್ಲವೇ…….

ಲೇಖನ

ಪಥವ ಬದಲಿಸೋಣವಲ್ಲವೇ…….

ಅನುರಾಧಾ ಶಿವಪ್ರಕಾಶ್

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆನ್ನುವುದು ಲೋಕರೂಢಿಯ ಮಾತು ಹೌದು. ಆದರೆ ಕೆಲವೊಮ್ಮೆ ನಾವು ಉಪಯೋಗಿಸುವ ಮುಳ್ಳು ಯಾವ ರೀತಿಯಲ್ಲಿ ಮೃದುತ್ವ ಹೊಂದಿರಬೇಕೆನ್ನುವುದೂ ಮುಖ್ಯ. ಹಾಗೆಯೇ ಕೆಲವೊಮ್ಮೆ ಮುಳ್ಳನ್ನು ಮುಳ್ಳಿನಿಂದ ತೆಗೆಯದೇ ನವಿರು ಮಾತುಗಳಿಂದ ಮನ ಒಲಿಸಿ, ತಪ್ಪಿನ ಅರಿವಾಗಿಸಿ,‌ಒಳ್ಳೆಯತವನ್ನು ಆತನಲ್ಲಿ ರೂಪಿಸಿಕೊಳ್ಳಲು ಕಾರಣಕರ್ತರಾಗಬಹುದಲ್ಲವೇ…?
ಕೆಲವೊಮ್ಮೆ ಆತ್ಮೀಯ ಒಡನಾಟಗಳು, ನಲುಮೆ ತುಂಬಿದ ಮಾತುಗಳು ಬದುಕದಾರಿಯಲ್ಲಿ ಹೂವಂತೆ ಘಮ ಬೀರಬಲ್ಲುದು!

ಇಂತಹಾ ಘಟನೆಗಳನ್ನು ನಾವು ಮಕ್ಕಳ ವಿಚಾರದಲ್ಲಿ ಕಂಡುಕೊಳ್ಳಬಹುದು. ಉದಾಹರಣೆಗೆ ಪುಟ್ಟ ಮಕ್ಕಳು ತಮ್ಮ ಸ್ನೇಹಿತರಲ್ಲಿ ಯಾವುದಾದರೂ ಹೊಸ ವಸ್ತುವನ್ನು ಕಂಡಾಗ ಅವರ ಕೈಯಿಂದ ಕಿತ್ತು ಕೊಳ್ಳುವ ಅಭ್ಯಾಸ.‌ ಎದುರಿನವ ಕೈಲಾಗದವನಾದರೆ ಅಳುತ್ತಾ ಬರುವನು. ಇಲ್ಲಾ ಪ್ರತಿರೋಧಿಸುವವನಾದರೆ ಎರಡು ಏಟು ಕೊಟ್ಟು ವಿರೋಧಿಸುತ್ತಾನೆ.

ಇಂತಹಾ ಸಂದರ್ಭಗಳಲ್ಲೇ ನಾವು ಮಕ್ಕಳಲ್ಲಿ ನೀತಿ ಪಾಠಗಳನ್ನು ಅರುಹಬೇಕಾಗಿರುವುದು‌. ನೋಡು ಮಗು ಆತ ನಿನ್ನ ಸ್ನೇಹಿತನಲ್ಲವೇ ಒಮ್ಮೇ ಆತನ ಕೈಗೆ ಕೊಡು ಅದನ್ನು ಅನ್ನಬಹುದು. ಆ ಮಗುವಿನ ಕೈಯಿಂದಲೇ ಕೊಡುಬಹುದು. ಇನ್ನೊಂದು ರೀತಿಯಲ್ಲಿ ಮತ್ತೊಂದು ಮಗುವಿನಲ್ಲಿ ನಿನ್ನ ಬಳಿ ಇಲ್ಲದ ಹೊಸ ವಸ್ತುವೊಂದು ಆತನ ಬಳಿ ಇದೆಯಲ್ಲ ಏನು ಅದರ ವಿಶೇಷತೆಗಳೇನು ಎಂಬುದನ್ನು ಕೇಳಿ ತಿಳಿದುಕೊ. ಪ್ರೀತಿಯಿಂದ ಕೇಳಿ ತೆಗೆದುಕೋ..ಹೀಗೆ ಮನಪರಿವರ್ತನೆ ಮಾಡಬೇಕು‌
ಅದರ ಹೊರತು ಆತ ಹೊಡೆದನೇ ನೀನೂ ಹೊಡೆ ಎಂದೋ, ಇಲ್ಲಾ ಅವನ ವಸ್ತು ಯಾಕೆ ಮುಟ್ಟಿದೆ ಇನ್ನೊಮ್ಮೆ ಮುಟ್ಟಿ ನೋಡು ಅಂತಲೋ ಅವನು ಕೊಟ್ಟಿಲ್ಲವಾದರೆ ನೀನೂ ಕೊಡದಿರು ಎಂದು ಹೇಳಬಾರದು. ಒಮ್ಮೆಗೆ ಆ ಮಗು ಸಮಾಧಾನಗೊಂಡರೂ ಅದರ ಮುಗ್ಧ ಮನಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ‌. ಹಾಗೇ ಬೆಳೆದ ಮಗು ಒರಟುತನವನ್ನು ಮೈಗೂಡಿಸಿಕೊಳ್ಳಬಹುದು.

ಭಾವನೆಗಳ ವಿಚಾರದಲ್ಲೂ ಹಾಗೇ ನಂಬಿಕೆ ಎನ್ನುವುದು ಹೃದಯಗಳನ್ನು ಬಂಧಿಸುವ ಕೊಂಡಿ ಅದು. ಆತ್ಮೀಯತೆಯೆನ್ನುವುದು ಅನುಬಂಧಗಳ ಹೊದಿಕೆ. ಪಾರಸ್ಪರಿಕತೆಯೆನ್ನುವುದು ಕೊಟ್ಟು ಕೊಳ್ಳುವ ವಿಚಾರ‌. ಕೆಲವೊಮ್ಮೆ ನಮ್ಮ ನಂಬಿಕೆಗಳೇ ಬುಡಮೇಲಾಗುವಂತಹ ಸಂದರ್ಭ ಬರಬಹುದು. ಬಂದೇ ಬರುತ್ತದೆ ಕೂಡಾ. ಬದುಕೆಂದರೆ ಹಾಗೇ ಅಲ್ಲವೇ. ಆದರೆ ಪ್ರಾಮಾಣಿಕ ಬಂಧಗಳಲ್ಲಿ ನಂಬಿಕೆ ಬೇರುಗಳು ಗೆದ್ದಲು ಹಿಡಿದು ಬಾಂಧವ್ಯದ ಗೆಲ್ಲುಗಳು ಒಣಗಿ ಎಲೆಗಳಂತೆ ಕಣ್ಣೀರು ಉದುರಿ ಜಾರಿದರೂ ಅಲ್ಲೆಲ್ಲೋ ಒಂದು ಬದ್ಧತೆಯೆಂಬ ತಾಯಿ ಬೇರು ಕೆಲಸ ಮಾಡುತ್ತಲೇ ಇರುತ್ತದೆ.

ಆ ತಾಯಿ ಬೇರಿಗೆ ಸಾಂತ್ವನದ ಸಿಹಿನೀರು, ಪ್ರೀತಿ,   ತಾಳ್ಮೆ ,ಕ್ಷಮೆ , ನಿಸ್ವಾರ್ಥತೆಯ ಗೊಬ್ಬರ ಬಿದ್ದಾಗ ಮೆಲ್ಲ ಮೆಲ್ಲನೇ ಚಿಗುರಿ ನಳನಳಿಸಿ ನಗೆಯ ಹೂಗಳು ಅರಳಬಲ್ಲುದಲ್ಲವೇ…
ಅದಕ್ಕೆಂದೇ ಮುಳ್ಳನ್ನು‌ ಮುಳ್ಳಿನಿಂದಲೇ ತೆಗೆಯುವ ಬದಲು ಪಥವ ಬದಲಿಸಿ ಸಾಗಿದಾಗ ಹೂವಿನ ಹಾದಿ ಸಿಗಲೂಬಹುದು.  ಪ್ರತಿಯೊಬ್ಬರ ಚಿಂತನಾ ಲಹರಿ ಬೇರೆಬೇರೆಯಿರುವಾ ಯಾವ ಕೋನದಲ್ಲಿ ನೋಡಿದರೂ ಅಲ್ಲೊಂದು ಸೌಹಾರ್ದತೆಯ ಕೋಟೆ ನಿರ್ಮಾಣವಾಗಲೇ ಬೇಕು. ಬಳಸಿ ಎಸೆಯುವ ಮುನ್ನ ಒಮ್ಮೆ ಯೋಚಿಸಿ ನೋಡಬೇಕು ಮುಳ್ಳು ಕೂಡಾ ಪ್ರಯೋಜನಕಾರಿ.‌ ಏಕೆಂದರೆ ಚುಚ್ಚುವ ನೋವಿನ ಅರಿವಾದಾಗ ಮಾತ್ರ ಹೊಸ ಹಾದಿಯ ಅನ್ವೇಷಣೆಗೆ ತೊಡಗುತ್ತೇವೆ.  ಮುಳ್ಳಿನಿಂದ ನೋವು ಅರಿವಾದಾಗ ಮಾತ್ರ ಹೂವಿನ ಹಾದಿಯ ಮಹತ್ವ ಅರಿವಾಗುವುದು.
ಅದಕೆಂದೇ ಪಥವ ಬದಲಿಸಿ ನೋಡೋಣ ಎಂಬ ಭಾವವೊಂದು‌ ಎದೆಯಲಿ ಮಿಂಚಿ‌ ಮರೆಯಾಗುತ್ತದೆ‌.


ಅನುರಾಧಾ ಶಿವಪ್ರಕಾಶ್

Leave a Reply

Back To Top