ಅಂಕಣ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಕಣ್ಣಾಮುಚ್ಚೇ ಕಾಡೇಗೂಡೇ
ಕಣ್ಣಾಮುಚ್ಚೇ ಕಾಡೇಗೂಡೇ*
ರಂಗ ಕಲಾವಿದೆ ವಿಜಯಶ್ರೀ ಅವರ ಆತ್ಮಕಥೆ ಪ್ರಕಾಶಕರು : ಮನೋಹರ ಗ್ರಂಥ ಮಾಲೆ
ಮೊದಲ ಮುದ್ರಣ ೨೦೧೬
ತೃತೀಯ ಮುದ್ರಣ ೨೦೧೮
ಪದ್ಮಶ್ರೀ ಡಾ ಬಿ ಜಯಶ್ರೀ ಅವರ ಬಗ್ಗೆ ತಿಳಿಯದವರಿಲ್ಲ ನಾಟಕ ನೋಡುವವರಿಗೆ ರಂಗಕರ್ಮಿಯಾಗಿ ಅದರ ಗಂಧ ಗಾಳಿ ಇರದವರಿಗೆ “ಕಾರ್ ಕಾರ್ ಕಾರ್ ಎಲ್ನೋಡಿ ಕಾರ್” ಹಾಡಿನ ಗಾಯಕಿಯಾಗಿ ಚಿರಪರಿಚಿತರು. ಇವರ ಆತ್ಮಕತೆ ಕಣ್ಣಾ ಮುಚ್ಚೇ ಕಾಡೇಗೂಡೇ. ಅವರ ಬಾಳಿನ ಮಜಲುಗಳನ್ನು ತಿಳಿಯುವ ಬೆಳೆದ ಪರಿಯನ್ನು ಅರಿಯುವ ಸದವಕಾಶ . ಹಾಗಾಗಿಯೇ ಓದಲೇಬೇಕೆಂಬ ಹಪಾಹಪಿಯಲ್ಲಿ ಓದಿ ಮುಗಿಸಿದ ಪುಸ್ತಕ. ಆ ನಂತರವೂ ಮನದಲ್ಲೇ ಕಾಡಿದ ಪುಸ್ತಕವೂ ಹೌದು. ನಿಜ ಓದಿ ಮುಗಿಸಿದ ನಂತರ ಹೇಳಲು ಸಾಧ್ಯವಾಗದ ಒಂದು ತರಹದ ಭಾವ. ಈ ಕೆಳಗಿನ ಕಗ್ಗದ ಸಾಲುಗಳನ್ನು ನೆನಪಿಗೆ ತಂದಿತು .
ಉಣುವುದುಡುವುದು ಪಡುವುದಾಡುವುದು ಮಾಡುವುದು
ಗುಣಗಳೆಲ್ಲವೂ ಪೂರ್ವ ಸಂಚಿತಾಂಶಗಳು
ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ ಗೊಣಗಾಟವಳಿಸುವುದೆ_? ಮಂಕುತಿಮ್ಮ
ಎಂಬಂತೆ ಬಂದಿದ್ದೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಲಭ್ಯವಿಲ್ಲದ ಕ್ಕೆ ಯಾರನ್ನೂ ದೂಷಿಸದೇ ಸಿಕ್ಕಿದ್ದಕ್ಕೆ ಎಲ್ಲರನ್ನೂ ಸ್ಮರಿಸಿಕೊಳ್ಳುವ ನಿರ್ಮಮತ್ವದಲ್ಲಿ ತಮ್ಮ ಜೀವನಗಾಥೆ ಬಿಚ್ಚಿಟ್ಟಿದ್ದಾರೆ ಜಯಶ್ರೀ ಅವರು . ತಮ್ಮಿಂದ ಹೊರಬಂದು ಆಚೆ ನಿಂತು ತಮ್ಮನ್ನೇ ಅರ್ಥೈಸಿ ಕೊಳ್ಳುತ್ತಾ ಹೇಳಿಕೊಳ್ಳುವಂತೆ ಭಾಸವಾಗುತ್ತದೆ ಹಾಗೂ ಅದು ಮುಖ್ಯವೆನಿಸುವುದು ಆಪ್ತವೆನ್ನಿಸುವುದು ಅದೇ ಕಾರಣಕ್ಕಾಗಿ . “ನಾನೇನೂ ಸಾಧಿಸಿಲ್ಲ ನನ್ನ ಆತ್ಮಕಥೆ ಬರೆಯಲು ಎಂದು ಸಂಕೋಚಿಸುತ್ತಲೇ ಒಪ್ಪಿದ ಇವರ ಆತ್ಮಕಥೆಯನ್ನು ಸೊಗಸಾಗಿ ನಿರೂಪಿಸಿರುವ ಶ್ರೀಮತಿ ಪ್ರೀತಿ ನಾಗರಾಜ್ ಅವರು “ವ್ಯಕ್ತಿಯನ್ನು ವರ್ಣಿಸಬಹುದು ಆದರೆ ದನಿಯನ್ನು ಅಭಿನಯವನ್ನು ಚಿತ್ರಿಸುವುದು ಹೇಗೆ” ಎನ್ನುತ್ತಲೇ ಜಯಶ್ರೀ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ತಾಯಿ ಮಾಲತಮ್ಮ ಹಾಗೂ ಸಂಗಾತಿ ಆನಂದ್ ಅವರಿಗೆ ಸಮರ್ಪಿಸುತ್ತಾ ಈ ಕೃತಿಗೆ “ಕಣ್ಣಾಮುಚ್ಚೇ ಕಾಡೇಗೂಡೇ” ಎಂಬ ಹೆಸರಿಡಲು ಕಾರಣ ಹೀಗೆ ಹೇಳುತ್ತಾರೆ . ಚಿಕ್ಕವರಿದ್ದಾಗ ಆಡಿದ್ದ ಈ ಆಟ ನೆನಪಿಸಿಕೊಂಡು ಮುಚ್ಚಿದ ಕಣ್ಣ ಹಿಂದೆ ಏನೆಲ್ಲಾ ನಡೆಯುತ್ತದೆ . ಕಣ್ಣು ಮುಚ್ಚಿದ್ದರೂ ಶಬ್ದಗಳನ್ನು ಹಿಂಬಾಲಿಸುವ ಮಾನಸಿಕ ಸ್ಥಿತಿ ಅದು ಅನುಪಮ ಅನೂಹ್ಯ ಧ್ಯಾನ ಸ್ಥಿತಿ . ಜೀವನವೂ ಹಾಗೇ. ಅಂತೆಯೇ ಏನೆಲ್ಲ ಇದ್ದರೂ ಕಡೆಗೆ ಕಾಡಲ್ಲೇ ತಾನೇ ನಮ್ಮ ಗೂಡು ಎನ್ನುತ್ತಾರೆ . ಪುಟ್ಟಪುಟ್ಟ ೩೨ ಅಧ್ಯಾಯಗಳಲ್ಲಿ ಚಿತ್ರಣವಾಗುತ್ತಾ ಹೋಗುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ ಎದುರಿಗೆ ನಡೆದಂತೆ ವರ್ಣಿತವಾಗಿದೆ .
ಬಾಲಕಿಯಾಗಿದ್ದಾಗ ತಾತ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯ ವೈಭವ ಅಲ್ಲಿನ ಜೀವನವನ್ನು ಎಳೆ ಎಳೆಯಾಗಿ ತೆರೆದಿಡುತ್ತಾರೆ . ಅಲ್ಲಿನ ರಿಹರ್ಸಲ್ ಮಕ್ಕಳಾದ ತಾವು ಪೋಷಾಕು ಇರಿಸುವ ದೊಡ್ಡ ಪೆಟ್ಟಿಗೆಗಳಲ್ಲಿ ಅವಿತು ಹಾಗೇ ಅಲ್ಲಿಯೇ ಮಲಗುತ್ತಿದ್ದುದು ಬಣ್ಣ ಬಳಿದು ಪಾತ್ರ ಮಾಡುತ್ತಿದ್ದುದು ಇತ್ಯಾದಿ. ಜಯಶ್ರೀ ಅವರ ಜೀವನದಲ್ಲಿ ಅವರ ತಾತ ವೀರಣ್ಣನವರು ಬೀರಿದ ಪ್ರಭಾವ ತುಂಬ ಆಳವಾದದ್ದು. ಅಂದಿನ ಕಂಪನಿ ಮನೆಗಳ ಪೂಜೆ, ಪ್ರಸಾದ ಅಲ್ಲಿನ ಊಟದ ವ್ಯವಸ್ಥೆ ಅಲ್ಲಿದ್ದ ಆತ್ಮೀಯತೆಯ ಭಾವ ಇದೆಲ್ಲಾ ಹೊಸತೊಂದು ಲೋಕದ ಪರಿಚಯ ಮಾಡಿಸುತ್ತದೆ . ತಾಯಿಯನ್ನು ತಂದೆ ಬಿಟ್ಟು ಹೋಗಿ ಮತ್ತೆ ಮಲ ತಂದೆಯ ಜೊತೆ ಇರಬೇಕಾದದ್ದು ತಂದೆ ತಾಯಿ ತಂಗಿಯರ ಆ ಸಂಸಾರದಲ್ಲಿ ತಾನು ಪರಕೀಯಳೆನಿಸಿದ್ದು ಹೇಳುವಾಗ ನಮಗೂ ಕರುಳು ಚುರ್ ಎನಿಸುತ್ತದೆ . ಮಲತಂದೆಯ ದೌರ್ಜನ್ಯದ ಬಗೆಗೂ ಬರೆದುಕೊಂಡು ಅಲ್ಲಿಯೂ ಒಂದು ತರಹ ನಿರ್ಭಾವುಕತೆಯಿಂದ ದೋಷಾರೋಪಣೆ ಅಥವಾ ಮೆಲೊಡ್ರಾಮಾ ಇಲ್ಲದೆ ಯಾರೊಡನೆಯೂ ಹೇಳಲಾಗದ ತಮ್ಮ ಅಂದಿನ ಅಸಹಾಯಕತೆಯ ಬಗ್ಗೆ ಬರೆಯುವುದು ನಿಜಕ್ಕೂ ಅಚ್ಚರಿ ತರುತ್ತದೆ. ಬೇರೆಯವರಂತೆ ಫಾರ್ಮಲ್ ವಿದ್ಯಾಭ್ಯಾಸ ಇಲ್ಲದ್ದಕ್ಕೆ ವಿಷಾದವಿದ್ದರೂ ರಂಗಭೂಮಿಯ ಮತ್ತು ಕಂಪನಿಯ ನಂಟಿನ ಬಗ್ಗೆ ಹೆಮ್ಮೆ ಪಡುತ್ತಾರೆ .
ಮುಂದೆ ಪ್ರತ್ಯೇಕವಾಗಿ ಏಳನೇ ತರಗತಿ ಓದಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ ಪಿಯುಸಿ ನಪಾಸಾದ ನಂತರ ದೆಹಲಿಗೆ ಹೋಗುತ್ತಾರೆ .ಅಲ್ಲಿ ಜ್ಯೋತಿ,ನಾಸಿರುದ್ದೀನ್ ಷಾ, ಓಂ ಪುರಿ ಅವರೆಲ್ಲರ ಜೊತೆಯಲ್ಲಿ ಅಭ್ಯಾಸ ಅಧ್ಯಯನ. ನಂತರ ಬಂದು ಮದುವೆ, ನಾಟಕ. ರಂಗಭೂಮಿ ಅವರಿಗೆ ಬರೀ ವೃತ್ತಿಯೂ ಅಲ್ಲ ಪ್ರವೃತ್ತಿಯೂ ಅಲ್ಲ ಜೀವನವೇ ಅದು .
ಬೇರೆ NSD ವಿದ್ಯಾರ್ಥಿಗಳಿಗೆ ಅಲ್ಲಿ ಥಿಯರಿ ಕಲಿತು ನಂತರ ಆ್ಯಕ್ಟಿಂಗ್ ಪ್ರ್ಯಾಕ್ಟೀಸ್. ಆದರೆ ಇವರದು ಉಲ್ಟಾ ಕೇಸು . ಅಲ್ಲಿದ್ದ ದಿನಗಳಲ್ಲಿ ಅಲ್ಲಿನ ಫ್ಯಾಕಲ್ಟಿ ಮತ್ತು ಸಹಪಾಠಿಗಳ ಸಹಕಾರ, ಅವರ ತಾತ ತೀರಿಕೊಂಡ ಸಮಯದಲ್ಲಿ ಅವರೆಲ್ಲ ತುಂಬಿಸಿದ ಮನೋಬಲದ ಬಗ್ಗೆ ಮನದುಂಬಿ ಮೆಚ್ಚಿದ್ದಾರೆ. NSD ಯ ಪದವಿ ತಮಗೆ ಆತ್ಮಸ್ಥೈರ್ಯ ಮತ್ತು ಪ್ರಯೋಗಶೀಲತೆ ತುಂಬಿತ್ತು ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ.
ಜಯಶ್ರೀ ಅವರಿಗೆ ಅವರ ತಾತ ಗುಬ್ಬಿ ವೀರಣ್ಣನವರೇ ಮಾದರಿ . ಅವರೇ ಹೇಳಿಕೊಂಡಂತೆ “ತಾತ ನನ್ನ ಗುರುತು ನನ್ನ ಭಾಷೆ”. ಅವರ ಅನುಬಂಧದ ಗಟ್ಟಿತನ ಹೇಗಿತ್ತೆಂದರೆ ಜಯಶ್ರೀ ಅವರ ಸಹಪಾಠಿ/ಗೆಳೆಯ ಮುಂದೆ ಮದುವೆಯಾಗಬೇಕಾದವರು ಅವರಲ್ಲಿ ಅಭದ್ರತೆಯ ಭಾವನೆ ತಂದು ತಾತನನ್ನು ಗೌರವಿಸದ ವ್ಯಕ್ತಿ ನಮ್ಮ ಕುಟುಂಬಕ್ಕೆ ಬೇಡ ಎಂದು ನಿರ್ಧರಿಸಿ ಬರೀ ಗೆಳೆಯರಾಗಿ ಮುಂದುವರಿದೆವು ಎಂದು ಹೇಳಿಕೊಂಡಿದ್ದಾರೆ .
ನಂತರ ರಾಜಣ್ಣ ಎಂಬ ವಿಕ್ಷಿಪ್ತ ಸ್ವಭಾವದ ವ್ಯಕ್ತಿಯೊಂದಿಗೆ ಮದುವೆಯಾಗಿ ಹೊಂದಿಕೊಳ್ಳಲಾಗದೆ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದ ಬಗ್ಗೆ ಹೇಳುವಾಗಲೂ ಅತಿ ಭಾವುಕತೆಗೆ ಎಡೆಗೊಡದೆ ಚಿತ್ರಿಸಿರುವ ರೀತಿಗೆ ಶಹಭಾಸ್ ಅನ್ನಲೇ ಬೇಕಾಗುತ್ತದೆ.
ನಂತರ ಜೀವನೋಪಾಯಕ್ಕಾಗಿ ಸ್ಪಂದನ ನಾಟಕ ತಂಡ ಸೇರಿ ಡಬ್ಬಿಂಗ್ ಕಲಾವಿದೆಯಾಗಿಯೂ ಭವಿಷ್ಯ ರೂಪಿಸಿಕೊಳ್ಳುತ್ತಾರೆ .”ಸಂಕೇತ್” ನಲ್ಲಿನ ಶಂಕರ್ ನಾಗ್ ಅರುಂಧತಿ ಅವರ ಒಡನಾಟ, ನಾಗಮಂಡಲ ನಾಟಕದಲ್ಲಿ ಪ್ರಥಮ ಬಾರಿ ಕುರುಡವ್ವನ ಪಾತ್ರ ಮಾಡಿ ನಂತರ ನಾಗಾಭರಣ ನಿರ್ದೇಶನದ ಚಿತ್ರದಲ್ಲೂ ಅದೇ ಪಾತ್ರವನ್ನು ನಿರ್ವಹಿಸಿ ನಾಡಿನಾದ್ಯಂತ ಕುರುಡನ್ಬ ಎಂದೇ ಹೆಸರಾಗುತ್ತಾರೆ.
ತಾವು ನಿರ್ದೇಶಿಸಿದ ನಾಟಕಗಳಲ್ಲೆಲ್ಲ ಹೊಸತನ ತುಂಬಿ ಜಾನಪದ ಪ್ರಕಾರಗಳಿಗೆ ಒತ್ತು ಕೊಟ್ಟಿರುವುದು ಇವರ ವಿಶೇಷ. ಕರಿಮಾಯಿ (ಕರಗ) ಲಕ್ಷಾಪತಿ ರಾಜನ ಪ್ರಸಂಗ (ಕಿಂದರ ಜೋಗಯ್ಯನ ಆಟ) ಬಾಳೂರ ಗುಡಿಕಾರ (ವೀರಗಾಸೆ) ಇತ್ಯಾದಿ. ಮಂಥರೆ ನಾಟಕದಲ್ಲಿನ ಇವರ ಅಭಿನಯ ಪ್ರಸಿದ್ಧಿ ತಂದುಕೊಟ್ಟಿತ್ತು . ಬಗೆ ಬಗೆಯ ನಾಟಕ ನಿರ್ದೇಶನಗಳಲ್ಲಿ ಅವರು ಪಟ್ಟ ಶ್ರಮ, ಗೆದ್ದಾಗ ಹೊಂದಿದ್ದ ಆತ್ಮತೃಪ್ತಿ ಇವುಗಳ ಬಗ್ಗೆ ತಿಳಿಯಲು ಪುಸ್ತಕ ಓದಲೇಬೇಕಾಗುತ್ತದೆ .
ಜಯಶ್ರೀ ಅವರ ತಾಯಿಯ ಬಗ್ಗೆ ಹೇಳುತ್ತಾ ಮೂವತ್ತೈದನೆಯ ವಯಸ್ಸಿನಲ್ಲಿ ನಾಟಕದ ಅಭಿನಯ ಸಮಯದಲ್ಲಿ ವಿದ್ಯುತ್ ಅಪಘಾತಕ್ಕೆ ಸಿಕ್ಕಿ ಕಾಲು ಕಳೆದುಕೊಂಡು ಗಾಲಿ ಕುರ್ಚಿಯ ಮೇಲೆ ಇರಬೇಕಾದರೂ ಮೊದಲ ವಿಫಲ ದುರಂತದ ಮದುವೆ, ಎರಡನೆಯ ಪತಿಯ ಮರಣ ಇದೆಲ್ಲದರ ನಡುವೆಯೂ ಅವರ ಕುಂದದ ಜೀವನೋತ್ಸಾಹ ತಮಗೆ ಅನುಕರಣೀಯ ಎನ್ನುತ್ತಾರೆ . ಜೀವನದ ಪ್ರತಿ ಘಟ್ಟದಲ್ಲೂ ಒತ್ತಾಸೆಯಾಗಿ ನಿಂತ ತಾಯಿ ಸಂತಸದ ಕ್ಷಣಗಳಲ್ಲಿ ಜೊತೆ ಇರಬೇಕಿತ್ತು ಎಂದು ಅಲವತ್ತುಗೊಳ್ಳುತ್ತಾರೆ . ಅವರ ತಾಯಿಗಂತೂ ಜಯಶ್ರೀ ಜೊತೆಯಲ್ಲಿದ್ದರೆ ಮಾತ್ರ ಧೈರ್ಯ !ಅವರ ಮೇಲೆ ಅಷ್ಟು ನಂಬಿಕೆ ಭರವಸೆ . ಇಡೀ ಪುಸ್ತಕದಲ್ಲಿ ಅವರು ಕಣ್ಣಂಚಿನಲ್ಲಿ ನೀರು ತರುವುದೆಂದರೆ ಮಗಳು ಸುಷ್ಮಾ ಮತ್ತು ತಮ್ಮ ಅನುಬಂಧದ ಬಗ್ಗೆ ಹೇಳುವಾಗ ಮಾತ್ರ .
ಕಂಪನಿ ನಾಟಕದ ಸಮಯದಲ್ಲಿ The show must go on ಎಂಬ ತತ್ವ ತಮ್ಮ ಅಜ್ಜಿಯ ಮರಣ ಹಾಗೂ ತಾಯಿಯ ಅಪಘಾತ ಸಮಯದಲ್ಲಿ ಕಣ್ಣಾರೆ ಕಂಡ ಇವರಿಗೆ ತಮ್ಮ ಸಾವು ರಂಗಭೂಮಿಯ ಮೇಲೇ ಆದರೆ ಚೆನ್ನು ಅನ್ನಿಸುವುದಂತೆ. ಬರೀ ಮಾತಿನಲ್ಲೇ ಅಲ್ಲದೇ ಕೃತಿಯಲ್ಲೂ ಅದು ನಡೆದೇ ಹೋಗುವುದರಲ್ಲಿತ್ತು. ದೆಹಲಿಯ ಪೂರ್ವಿ ನಾಟಕೋತ್ಸವದಲ್ಲಿ ಮಂಥರೆ ನಾಟಕ ಪ್ರದರ್ಶನ . ಅದಕ್ಕೆ ಮುಂಚೆ ಹೈದರಾಬಾದಿನಲ್ಲಿ ಒಂದು ಜಾನಪದ ಕಾರ್ಯಕ್ರಮ . ಅಲ್ಲಿಯೇ ಎದೆನೋವು ಬಂದು ಆಸ್ಪತ್ರೆಗೆ ಸೇರಿಸಿ ಆಂಜಿಯೋ ಪ್ಲಾಸ್ಟಿ ಮಾಡಬೇಕೆಂದರೂ ಕೇಳದೆ ಸ್ವಇಚ್ಛೆಯ ಮೇಲೆ ಪತ್ರ ಬರೆದುಕೊಟ್ಟು ಡಿಸ್ಚಾರ್ಜ್ ಆಗಿ ದೆಹಲಿ ತಲುಪುತ್ತಾರೆ. ಅಲ್ಲಿನ ಡಾಕ್ಟರುಗಳ ಸಲಹೆಯನ್ನೂ ಮನ್ನಿಸದೆ ನಾಟಕ ಪ್ರದರ್ಶನವನ್ನೂ ಕೊಟ್ಟುಬಿಡುತ್ತಾರೆ .ಇದೊಂದು ಪ್ರಸಂಗ ಸಾಕಲ್ಲವೇ ಅವರ ಮತ್ತು ರಂಗಭೂಮಿಯ ಅವಿನಾಭಾವ ಸಂಬಂಧಕ್ಕೆ
ಸಾಕ್ಷಿಯಾಗಲು?
೩೧ ನಾಟಕಗಳ ನಿರ್ದೇಶನ, ೮ ಕಂಪೆನಿಯ ನಾಟಕಗಳಲ್ಲಿ ಅಭಿನಯ, ೨೨ ಹವ್ಯಾಸಿ ನಾಟಕಗಳಲ್ಲಿನ ಅಭಿನಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಲಕ್ಕಿ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ, MP ಆಗಿ ನಾಮನಿರ್ದೇಶನ ಇವೆಲ್ಲಾ ಈವರೆಗಿನ ಅವರ ಸಾಧನೆಯ ಮೈಲುಗಲ್ಲುಗಳು.
ಅವರದೇ ಕೆಲವು ನುಡಿ ಮುತ್ತುಗಳು ಈ ಕೆಳಗೆ ಕಂಡಂತೆ “ಜೀವನಾನುಭವ ಮತ್ತು ರಂಗಭೂಮಿ ಬೇರೆ ಬೇರೆ ಆಗಿರಲು ಸಾಧ್ಯವೇ ಇಲ್ಲ.”
” ನಾಟಕ ಅಭಿನಯಿಸುವುದೂ ಅಲ್ಲ ನಿರ್ದೇಶಿಸುವುದೂ ಅಲ್ಲ ಬದಲಾಗಿ ಕಟ್ಟುವುದು. ಜೀವಪರವಾದ ಪದ ಅದು .ಗರ್ಭ ಕಟ್ಟಿದರೆ ಮಗು ಜನಿಸುತ್ತದೆ ಹಾಗೆ ನಾಟಕ ಕಟ್ಟಿದರೆ ದೃಶ್ಯ ಕಾವ್ಯವಾಗುತ್ತದೆ .”
ನಾನು ರಂಗಕರ್ಮಿ ಎಂದು ಕರೆದುಕೊಳ್ಳಲು ಬಯಸುತ್ತೇನೆ .ನಾನು ಬರೀ ನಟಿ ನಿರ್ದೇಶಕಿ ಅಥವಾ ಗಾಯಕಿ ಅಲ್ಲವೇ ಅಲ್ಲ.“
“” ನೀತಿ” ಪಾಠ ಕೇಳಿ ಮನ ತುಂಬಿದೆ ಈಗ ಈ “ನೀತಿ”ಗಳೆಲ್ಲ ಬದುಕಿನ “ರೀತಿ” ಮಾಡಲು ಕಾಲ ಪಕ್ವವಾಗಿದೆ”.
ಅತ್ಯಂತ ಸಂವೇದನಾಶೀಲ ವ್ಯಕ್ತಿಯಾಗಿ ,ಪ್ರಬುದ್ಧ ಚಿಂತಕಿಯಾಗಿ ,ಅವರೇ ಹೇಳುವಂತೆ ಸಮರ್ಥ ರಂಗಕರ್ಮಿಯಾಗಿ ಗುರುತಿಸಿಕೊಂಡಿರುವ ಈ ಅಪ್ಪಟ ದೇಸೀ ಪ್ರತಿಭೆ ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ. ಇನ್ನು ಮುಂದಿನ ಅವರ ಜೀವನಾನುಭವಗಳು ಪುಸ್ತಕವಾಗಿ ಆಸಕ್ತರ ಕೈಸೇರಲಿ. ಬಿ ಜಯಶ್ರೀ ಅಮ್ಮ ಅವರಿಗೆ ಈ ಅಂಕಣದ ಮೂಲಕ ಶುಭ ಕಾಮನೆಗಳು .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು