ಸಿದ್ದರಾಮ ಹೊನ್ಕಲ್ ಶಾಯರಿ ಲೋಕ

ಪುಸ್ತಕ ಸಂಗಾತಿ

ಸಿದ್ದರಾಮ ಹೊನ್ಕಲ್ ಶಾಯರಿ ಲೋಕ

ನಾಡಿನ ಖ್ಯಾತ ಲೇಖಕ ಹೊನ್ಕಲ್ ರ ಶಾಯಿರಿ ಲೋಕದಲ್ಲಿ ಒಂದು ಸುತ್ತು..ಹಾಗೂ ಅವುಗಳ ಗಮ್ಮತ್ತು.

ಹಿರಿಯರಾದ ಸಿದ್ದರಾಮ ಹೊನ್ಕಲ್ ಸರ್ ಕವಿ, ಕಥೆಗಾರ, ಗಜಲ್, ಹನಿಗವಿತೆ,ಹೈಕು, ಲಲಿತ ಪ್ರಬಂಧ, ಪ್ರವಾಸ ಕಥನಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡವರು.ಸದಾ ಯುವಕರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿ ಬರೆಯಿಸುವ ವಾತ್ಸಲ್ಯಮಯಿ ಗುಣದ ಸಿದ್ದರಾಮ ಹೊನ್ಕಲ್ ಸರ್ ಬಹುಮುಖಿ ವ್ಯಕ್ತಿತ್ವ ಉಳ್ಳವರು.

ಇಂತಹ ಮಹನೀಯರು ಈಗ ಹೊಸತಾದ ಶಾಯಿರಿ ಬರಹಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವುದು ನಮಗೆ ಸಂತಸವೆ ಸರಿ.ಈ ಮಹನೀಯರು ತಮ್ಮ ಶಾಯಿರಿಗಳಲ್ಲಿ ಪ್ರೀತಿ,ಪ್ರೇಮ, ಪ್ರಣಯ,ಪ್ರೇಮಿಗಳ ನೋವಿನ ತೊಳಲಾಟವನ್ನ ತಮ್ಮ ಶಾಯಿರಿಯ ಮೂಲಕ ಮನೋಜ್ಞವಾಗಿ ರಚಿಸಿದ್ದು ಅವು ಓದುಗನ ಮನಸ್ಸಿಗೆ ಮುದವನ್ನು ನೀಡುತ್ತವೆ.ಬಹುಕಾಲ ನೆನಪಿಟ್ಟು ಸಭೆ ಸಮಾರಂಭಗಳಲ್ಲಿ ಹೇಳುವಂತಿವೆ.

ಹೊನ್ಕಲ್ ರವರು ದೇಶಿಯ ಸೊಗಡಿನ ತಮ್ಮ ನೆಲದ ಭಾಷೆಯನ್ನು ಬಹಳ ಮಾರ್ಮಿಕವಾಗಿ,ಸುಂದರವಾಗಿ ದುಡಿಸಿಕೊಂಡಿದ್ದಾರೆ.ಕನಸು,ಕನವರಿಕೆ,ಮನಸ್ಸು, ಬದುಕು, ಮಳೆ,ಬೆಳದಿಂಗಳು, ನೈದಿಲೆ, ಕಣ್ಣಿರು,ಗೋರಿ ಹೀಗೆ ಅನೇಕ ಪ್ರತಿಮೆಗಳನ್ನು ಬಳಸಿಕೊಂಡಿರುವ ಕವಿ ಸದಾ ಆಶಾದಾಯಕ ವಿವೇಚನೆಯುಳ್ಳವರು.

ಭಾಷೆಯ ದುಡಿಸಿಕೊಳ್ಳುವಿಕೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ತಮ್ಮ ನೆಲದ ಭಾಷೆಯ ನಾಡಿ ಮಿಡಿತವನ್ನು ಅರಿತು ಬಹು ಕುಸುರಿಯಿಂದ ಶಾಯಿರಿಗಳನ್ನು ತಮ್ಮ ಜವಾರಿ ಭಾಷೆಯಲ್ಲಿಯೆ ಬರೆದಿರುವರು.ಸುಮಾರು ೫೧ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ನಾಡಿನ ತುಂಬಾ ಮನೆ ಮಾತಾಗಿರುವ ಹೃದಯವಂತಿಕೆಯ ಕವಿ ಈ ನಮ್ಮ ಹೊನ್ಕಲ್ ಸರ್. ಕಥೆ, ಲಲಿತ ಪ್ರಬಂಧ,ಪ್ರವಾಸ ಕಥನ, ನಂತರ ಗಜಲ್, ಹೈಕು ಬರೆದು ಈಗಾಗಲೇ ಅಪಾರ ಖ್ಯಾತಿ ಪಡೆದಿರುವ ಅವರು ಇದೀಗ ಶಾಯಿರಿ ಬರೆಯಲು ಆರಂಬಿಸಿ ಅದರಲ್ಲಿ ಬಹು ಯಶಸ್ವಿಯಾಗಿದ್ದಾರೆಂದೇ ಎದೆ ತಟ್ಟಿ ಹೇಳಬಹುದು.ತಾರುಣ್ಯದಿಂದಲೇ ಅವರು ಹಲವರ ಶಾಯಿರಿಗಳಿಂದ ಪ್ರಭಾವಿತರಾದದ್ದು ಹೇಳಿಕೊಂಡಿದ್ದಾರೆ. ಕಾಲೇಜು ಓದಿನ ದಿನಗಳಿಂದಲೂ ಅವರು ಶಾಯಿರಿ ಹೇಳಿ ತಮ್ಮ ಭಾಷಣಗಳಿಗೆ ಅಪಾರ ಚಪ್ಪಾಳೆ ಹಾಗೂ ಬಹುಮಾನಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಗಿಟ್ಟಿಸಿಕೊಂಡಿದ್ದರಂತೆ.ಅಂತಹ ಹಿನ್ನೆಲೆಯಿಂದ ಬಂದ ಅವರು ಇದೀಗ ತಮ್ಮದೇ ಈ  *ಹೊನ್ಕಲ್ ರ ಶಾಯಿರಿ ಲೋಕ* ಪ್ರಕಟಿಸುತ್ತಿರುವದು ಅಭಿನಂದನೀಯ ಸಂಗತಿ.

ನೆಲದ ಭಾಷೆಯ,ಓದುಗರ ನಾಡಿಮಿಡಿತ ಅರಿತುಕೊಂಡು ಬರೆಯುವ ಕಲೆ ಸೃಜನಶೀಲ ಲೇಖಕ ಸಿದ್ದರಾಮ ಹೊನ್ಕಲ್ ಸರ್ ಗೆ ಸಿದ್ದಿಸಿದೆ. ನಮ್ಮ ನಾಡಿನ ಶಾಯಿರಿ ಜನಕ ಪ್ರೊ:ಇಟಗಿ ಈರಣ್ಣನವರು ಧಾರವಾಡ ಭಾಷೆಯನ್ನ ಬಹಳ ಪ್ರಯೋಗ ಶೀಲ ಮನಸ್ಸಿನಿಂದ ದುಡಿಸಿಕೊಂಡು ಈ ನಾಡಿಗೆ ಬಹಳ ಒಳ್ಳೆಯ ಶಾಯಿರಿಗಳನ್ನು ಬರೆದು ಕನ್ನಡ ಶಾಯಿರಿ ಜನಕರೆಂದು ಹೆಸರಾಗಿದ್ದರು.

ಅವರ ತರುವಾಯ ಕೆಲವಾರು ಜನ ಶಾಯಿರಿಗಳನ್ನು ಬರೆದರೂ ಅವು ಜನಮಾನಸವನ್ನು ತಲುಪದೆ ಇದ್ದದ್ದು ಗಮನಿಸಲೆಬೇಕಾದ ಅಂಶವೇ ಸರಿ. ನಾವು ಬಳಸುವ ಪದ ಓದುಗನೆದೆಗೆ ಮುಟ್ಟಿ ಆತ ಅವು ಅರಿತುಕೊಂಡು ಅನುಭವಿಸಿ ಸಂತಸಗೊಂಡರೆ ನಾವು ಬರೆದದ್ದು ಸಾರ್ಥಕವಾದಿತು. ಭಾವನೆಯ ಜೊತೆಗೆ ವಸ್ತು ವಿಷಯ ಕೂಡಾ ಬಹಳ ಪ್ರಾಮುಖ್ಯ.ನಮ್ಮ ಶಾಯಿರಿ ಕೇಳುಗನ ಮನ ತಣಿಸಿ ವಾವ್ಹ್.. ವಾವ್ಹ್.. ಕ್ಯಾ ಬಾತ್ ಹೈ ಎಂದು ಮನಕೆ ಮುದ ನೀಡಿದಾಗಲೆ ನಮ್ಮ ಶಾಯಿರಿ ಓದುಗನ ಹೃದಯಕ್ಕೆ ಮುಟ್ಟಿದೆ ಎಂದು ಅರ್ಥವಾಗುತ್ತದೆ. ಶೃಂಗಾರಮಯವಾದ ಹಲವಾರು ಬರಹಗಾರರ ಶಾಯಿರಿಗಳು ಬಹು ವಿಸ್ತಾರತೆಯ ದೃಷ್ಟಿಯಿಂದ ಅವು ಸೋತದ್ದು ಉಂಟು.ಅರ್ಥಗಳು ಪಲ್ಲಟಗೊಂಡು ಸಪ್ಪೆ ಸಪ್ಪೆಯಾಗಿ ಅದು ಕಾವ್ಯದ ಹಾದಿಗೆ ಬಂದು ಜಾಡು ತಪ್ಪಿದ್ದು ಉಂಟು.

ಅದೇನೆ ಇರಲಿ ನಮ್ಮ ನೆಲದ ಬಹುತ್ವದ,ಹಲವು ದೃಷ್ಟಿಯಿಂದ ಮಹತ್ವದ ಬರಹದ ಹಿನ್ನೆಲೆಯ ಕವಿ ಸಿದ್ದರಾಮ ಹೊನ್ಕಲ್ ಸರ್ ಈ ಶಾಯಿರಿ ಬರೆಯುವ ಮೂಲಕ ನಾಡಿನ ಓದುಗರ ಹೃದಯಕ್ಕೆ ಖಂಡಿತಾ ಹತ್ತಿರವಾಗುವರೆಂಬ ನಂಬಿಕೆ ನನಗಿದೆ.ಅವರು ಏನೇ ಬರೆದರೂ ಮನಕ್ಕೆ ಮುಟ್ಟುವಂತೆ,ತಟ್ಟುವಂತೆ,ಕಾಡುವಂತೆ, ಓದುಗ ಖುಷಿ ಪಡುವಂತೆ ಬರೆಯಬಲ್ಲರು ಎಂಬುದಕ್ಕೆ ಅವರ ಈ ವರೆಗಿನ ಬರಹ ಹಾಗೂ ಕೃತಿಗಳೇ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿವೆ.ಅವರು ಈ ಶಾಯಿರಿಲೋಕದಲ್ಲೂ ಈಗಾಗಲೇ ಗೆದ್ದಿದ್ದಾರೆ.ಗೆದೆಯಬಲ್ಲರು.ಆ ಅಪಾರ ಭರವಸೆಯೊಂದಿಗೆ ನನ್ನ ಈ ಮಾತುಗಳನ್ನು ಮುಗಿಸುವೆ. ನಮಸ್ಕಾರ.


ಮರುಳಸಿದ್ದಪ್ಪ ದೊಡ್ಡಮನಿ

Leave a Reply

Back To Top