ಅಂಕಣ ಸಂಗಾತಿ

ಒಲವ ಧಾರೆ

ಬೆಳಕು ಹಂಚುವವರ ಬದುಕು

ಕತ್ತಲಾಗದಿರಲಿ‌..

ಅಯ್ಯೋ ..!! ಅವನು ನಿನ್ನೆ ಅಕಸ್ಮಿಕವಾಗಿ ವಿದ್ಯುತ್ ಅಪಘಾತವಾಗಿ ಸತ್ತುಹೋದನು. ಅವನಿಗೆ ಎರಡು ಮಕ್ಕಳು. ಪಾಪ ಇನ್ನು ಚಿಕ್ಕ ಮಕ್ಕಳು..!! ಬದುಕು ತುಂಬಾ ದೊಡ್ಡದಿತ್ತು ಹೀಗಾಗಬಾರದು.

 ಇವನು ಸವರಾತ್ರಿಯಲ್ಲಿ ಹೋಗಿ ಲೈನ್ ಬದಲಾಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಬಟನ್ ಮುಟ್ಟುವ ಬದಲು ವಿದ್ಯುತ್ ಪ್ರವಾಹಿಸುವ ಕೇಬಲ್ ಮುಟ್ಟಿ ಕರಕಲಾಗಿ ಹೋಗಿಬಿಟ್ಟ..ಛೆ..! ಹೀಗಾಗಬಾರದಿತ್ತು..!!

ಇಂತಹ ಹಲವಾರು ಕೆಟ್ಟ ಪ್ರಸಂಗಗಳನ್ನು ನಾವು ಆಗಾಗ ಅಲ್ಲಲ್ಲಿ ಕೇಳಿರುತ್ತೇವೆ.  ಸುದ್ದಿ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಓದಿರುತ್ತೇವೆ. ನಿಜ ಬದುಕಿನ ಯಾವುದೋ ತಿರುವಿನಲ್ಲಿ ಓದಿದ್ದನ್ನು ಅರಗಿಸಿಕೊಂಡು, ಸಿಕ್ಕಿದ್ದನ್ನು ತೃಪ್ತಿಪಟ್ಟು, ವೃತ್ತಿಯನ್ನು ಮಾಡುವ ಹಲವು ಉದ್ಯೋಗಿಗಳಲ್ಲಿ ವಿದ್ಯುತ್ ಇಲಾಖೆಯ ಲೈನ್ ಮನ್ ಗಳೆಂದು ಹಿಂದೆ ಕರೆಯುತ್ತಿದ್ದ  ಕಾಯಕ ಜೀವಿಗಳು ಇಂದು ಹೆಸರಿಗೆ ಮಾತ್ರ ಎಂದು “ಪವರ್ ಮ್ಯಾನ್” ಆಗಿದ್ದಾರೆ. ಆದರೆ ನಿಜವಾಗಿಯೂ ಅವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದ ಶ್ರಮಜೀವಿಗಳು..

 ಜಗತ್ತಿಗೆ ಬೆಳಕು ಹಂಚುವವರ ಬದುಕು ಕೆಲವು ಸಲ ಅಚಾತುರ್ಯವಾಗಿ, ಆಕಸ್ಮಿಕವಾಗಿ ಹೀಗೆಯೇ ಕತ್ತಲಿಗೆ ಜಾರಿಬಿಡುತ್ತದೆ. ಬದುಕೆಂದರೆ ಆಕಸ್ಮಿಕವಲ್ಲ..! ಕಷ್ಟಪಟ್ಟು ಎಸ್ ಎಸ್ ಎಲ್ ಸಿ  ಮುಗಿದ ತಕ್ಷಣವೇ ಅಪ್ಪನ ಆಜ್ಞೆಯಂತೆ ಐಟಿಐ ಮುಗಿಸಿ, ಕೆಲವರು ಬೇರೆ ಬೇರೆ ಕಾರ್ಖಾನೆಗಳಲ್ಲಿ ವೃತ್ತಿಯನ್ನು ಆರಿಸಿಕೊಂಡು, ಇನ್ನೂ ಹಲವಾರು ಗೆಳೆಯರು  ವಿದ್ಯುತ್ ಇಲಾಖೆಯಲ್ಲಿಯೂ ಕೆಲಸ ಮಾಡುವ ಹಲವು ಗೆಳೆಯರು ಉಂಟು. ವಿದ್ಯುತ್ ಅಂದರೆ ಎಷ್ಟೊಂದು ಉಪಯೋಗಕಾರಿ..!! ಅದನ್ನು ಬಳಸುವ ಸೂಕ್ಷ್ಮತೆಯು ಅಷ್ಟೇ ಮುಖ್ಯ. ನಮ್ಮ ಮೇಲೆ ಎಚ್ಚರವಿಲ್ಲದೆ ಹೋದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಅಪಾಯದ ಸಮಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು, ಅದರ ಜೊತೆಗೆ ವೃತ್ತಿಯನ್ನು ಮಾಡುತ್ತಾರೆ. ಜನರ ಬದುಕಿಗೆ ಬೆಳಕು ನೀಡುವ ಇವರ ಕಾಯಕ ನಿಷ್ಠೆ ಮೆಚ್ಚುವಂತಹದ್ದು. ಬದುಕಿನ ಅನಿವಾರ್ಯತೆಗಳು ಏನೇ ಇರಲಿ ಆದರೆ ನಮ್ಮ ಅವರ ಮಧ್ಯದಲ್ಲಿ ಎಷ್ಟೊಂದು ವಾತ್ಸಲ್ಯ..! ಎಷ್ಟೊಂದು ಅಕ್ಕರೆ..!! ಒಂದು ಕ್ಷಣ ಆಲೋಚಿಸಿದರೆ ಹಾಗೇ ಅನಿಸಿಬಿಡುತ್ತದೆ.

ಬೇಸಿಗೆಕಾಲವಿರಲಿ, ಚಳಿಗಾಲವಿರಲಿ, ಮಳೆಗಾಲವಿರಲಿ ಯಾವುದೇ ಕಾಲದಲ್ಲಿಯೂ ಕೂಡ ವಿದ್ಯುತ್ತಿಗೆ ಸದಾ ತಮ್ಮ ಒಡನಾಟವನ್ನು ಇಟ್ಟುಕೊಂಡಿರುತ್ತಾರೆ. ವಿದ್ಯುತ್ ಕೆಲಸಗಾರರು ಅಥವಾ ವಿದ್ಯುತ್ ಕಾರ್ಮಿಕರ ಬದುಕು ಅಸಹನೀಯವಾಗುತ್ತದೆ. ನನ್ನ ಅನುಭವದ ಮೂಸೆಯಿಂದ ಸಾಕಷ್ಟು ಗೆಳೆಯರನ್ನು ನಾನು ನೋಡಿದ್ದೇನೆ. ವಿದ್ಯುತ್ ಪ್ರಸರಣ ಕೇಂದ್ರಗಳಲ್ಲಿ ಕೆಲಸ ಮಾಡುವವರು ಮೈಯೆಲ್ಲ ಕಣ್ಣಾಗಿ ಹಗಲು-ರಾತ್ರಿಯೆನ್ನದೇ ನಿದ್ದೆಗೆಟ್ಟು ಕೆಲಸ ಮಾಡುತ್ತಾರೆ. ಇನ್ನು ಮನೆಯಿಂದ ಮನೆಗೆ ವಿದ್ಯುತ್ ಬಿಲ್ಲುಗಳನ್ನು ಕೊಡುವವರೂಂಟು ಒಂದು ದಿನಕ್ಕೆ ಸುಮಾರು ಮುನ್ನೂರು ಮನೆಯವರೆಗೆ ಅವರು ಬಿಲ್ಲುಗಳನ್ನು ಯಾವುದೇ ಬಿಡುವಿಲ್ಲದೆ ಕೊಡುತ್ತಾರೆ.   ಸುರಿಯುವ ಮಳೆಯಿರಲಿ, ಕೊರೆಯುವ ಚಳಿಯಿರಲಿ ಮೈ ಸುಡುವ ಬಿಸಿಲಿರಲಿ, ಬಿಸಿಯಲ್ಲಿ ಬೆವರಿನ ಹನಿಗಳಂತೆ, ಮಳೆಗಾಲದಲ್ಲಿ ಮಳೆ ಹನಿಗಳೊಂದಿಗೆ, ಚಳಿಗಾಲದಲ್ಲಿ ಹಲ್ಲು ಕಟುಕುತ್ತಲೇ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾರೆ. ವಿದ್ಯುತ್ ಇಲಾಖೆ ಇವರಿಗೆ ಇಂತಿಷ್ಟೇ ಬಿಲ್ ಗಳನ್ನು ಕೊಡಬೇಕೆಂದು ಷರತ್ತು ಇರುತ್ತದೆ.   ಮನೆಯ ಯಾವುದೋ, ಸಮಸ್ಯೆಯಿಂದಲೋ, ಬದುಕಿನ ಯಾವುದೋ ಜಂಜಾಟದಿಂದಲೋ ಒಂದೆರೆಡು ತಿಂಗಳು ವಿದ್ಯುತ್ ಬಿಲ್ ಕಟ್ಟದೆ ಹೋದ ಗ್ರಾಹಕರನ್ನು ವಿದ್ಯುತ್ ಇಲಾಖೆಯವರು ಇವರ ಮೂಲಕವೇ  ಎಚ್ಚರಿಕೆಯನ್ನು ನೀಡಿಸುತ್ತಾರೆ. ಎಷ್ಟೊ ಪವರ್ ಮ್ಯಾನ್ ಗಳು ಸ್ಥಳೀಯವರೊಡನೆ ವಿರೋಧವನ್ನು ಕಟ್ಟಿಕೊಳ್ಳುತ್ತಾರೆ. ಕೆಲವು ಸಲ ಜಗಳಕ್ಕೂ ಅಣಿಯಾಗುತ್ತಾರೆ. ಆದರೂ ಅವೆಲ್ಲವನ್ನು ನಿಭಾಯಿಸುತ್ತಲೇ ವಿದ್ಯುತ್ ಗ್ರಾಹಕರನ್ನು ಅತ್ಯಂತ ಪ್ರೀತಿಯಿಂದಲೇ,

 “ಈ ತಿಂಗಳು ಇಷ್ಟನ್ನು ಕಟ್ಟಿ ಬಿಡಿ, ಮುಂದಿನ ತಿಂಗಳು ಇನ್ನಷ್ಟು ಬಿಲ್ ಕಟ್ಟಲು ಅವಕಾಶ ಸಿಗುತ್ತದೆ” ಎನ್ನುವ ತಾಳ್ಮೆಯ ಸಲಹಾತ್ಮಕ ಉತ್ತರವನ್ನು ನೀಡುತ್ತಾರೆ. ಇಂತಹ ಕಾಯಕ ಜೀವಿಗಳ ಮನಸ್ಸು ವಿಶಾಲವಾಗಿರುತ್ತದೆ. ವಿದ್ಯುತ್ತಿನ ಸಂಪರ್ಕದ ಸಣ್ಣಪುಟ್ಟ ಕೆಲಸಗಳಿಗೆ ನಾಗರಿಕರೊಂದಿಗೆ ಕಚೇರಿಯ ಮಧ್ಯಸ್ಥಗಾರರಾಗಿ ಕೆಲಸವನ್ನು ಮಾಡಿಸಿ ಕೊಡುವವರುಂಟು. ಆಗ ಇವರ ಮೇಲೆ ವಿಶ್ವಾಸ ಬೆಳೆದು ವಿದ್ಯುತ್ ಶುಲ್ಕವನ್ನು ಕಾಲಕಾಲಕ್ಕೆ ಕಟ್ಟಿಬಿಡುತ್ತಾರೆ ಗ್ರಾಹಕರು. ಇಲಾಖೆಯ ಯಾವುದೇ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ ಕೆಳಗಿನ ಹಂತದ ನೌಕರರು.  ವಿದ್ಯುತ್ ಇಲಾಖೆಗೆ ಆದಾಯವೇ ಗ್ರಾಹಕರು ಕಟ್ಟುವ ಬಿಲ್ಲುಗಳು. ಇಂತಹ ಬಿಲ್ಲನ್ನು ವಸೂಲಿ ಮಾಡುವ ಜಾಣ್ಮೆ ಇವರಿಗೆ ಇರಲೇಬೇಕಾಗುತ್ತದೆ.

ಯಾವುದೇ ಸಭೆ-ಸಮಾರಂಭವಿರಲಿ, ಮದುವೆಯಿರಲಿ, ಅಥವಾ ವಿಶೇಷವಾದ ಯಾವುದೇ ಕಾರ್ಯಕ್ರಮವಿರಲಿ ಅಥವಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯುತ್ ಬೇಕೆ ಬೇಕು. ನಮಗೆ ವಿದ್ಯುತ್ ಇಲ್ಲದೇ ಜೀವನವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಬೀಸುವ, ಕುಟ್ಟುವ, ಇಡಿ ದಿನದಿಂದ ಹಿಡಿದು ಸಣ್ಣ ಸಣ್ಣ ಮನೆಗೆಲಸಕ್ಕೂ, ಕಾರ್ಖಾನೆಯಂತಹ ಬೃಹತ್‌ ಉದ್ಯಮಗಳಿಗೂ ವಿದ್ಯುತ್ ಬೇಕೇ ಬೇಕು. ವಿದ್ಯುತ್ ಇಲ್ಲದೆ ಹೋದರೆ ಬದುಕು ಅಪೂರ್ಣ ಎನ್ನುವಷ್ಟರಮಟ್ಟಿಗೆ ನಾವು ಅದರ ಜೊತೆಗೆ ಬೆಸೆದುಕೊಂಡಿರುತ್ತವೆ. ಯಾವುದೋ ಒಂದು ಮೂಲೆಯಲ್ಲಿ ವಿದ್ಯುತ್ತಿನ ಕಿಡಿಗಳು ಹರಿದರೆ ನಮಗೆ ತಟ್ಟನೆ ನೆನಪಾಗುವುದು ವಯರ್ ಮ್ಯಾನ್ ಗಳು ..!!  ಅವರ ಮೇಲೆ ನಮಗೆ ಇರುವ ಅಪಾರವಾದ ನಂಬಿಕೆ ಎಂತಹದು ಅಂದರೆ ಏನೇ  ವಿದ್ಯುತ್ ತೊಂದರೆಗಳಿದ್ದರೂ ನಿವಾರಿಸಬಲ್ಲರು ಎನ್ನುವ ಆತ್ಮವಿಶ್ವಾಸ. ಅವರು ಅಷ್ಟೇ ನಮಗಾದ ಯಾವುದೇ ವಿದ್ಯುತ್ತಿನ ತೊಂದರೆಗಳನ್ನು ಕ್ಷಣಾರ್ಧದಲ್ಲಿ ಅವರು ಸರಿಪಡಿಸಬಲ್ಲ ಅಂತಹ ವೃತ್ತಿ ನಿಪುಣರಿದ್ದಾರೆ. ಕೆಲವು ಸಲ ಆಕಸ್ಮಿಕ ವಿದ್ಯುತ್ ಅಪಘಾತಗಳಿಗೆ ಬಲಿಯಾಗುವುದುಂಟು  ದೇಹದ ಯಾವುದೋ ಭಾಗವು ಸುಟ್ಟು ಕರಕಲಾದ ಉದಾಹರಣೆಗಳಿವೆ. ವಿದ್ಯುತ್ ಅಪಘಾತದಿಂದ ಪ್ರಾಣಾಂತಿಕವಾದ ಅಪಾಯವನ್ನು ತಂದುಕೊಂಡವರುಂಟು.  ಇಂತಹ ಅಪಾಯದ ಕೆಲಸಗಳನ್ನು ಅನಿವಾರ್ಯವಾಗಿ ಅವರು ಮಾಡಲೇಬೇಕಾಗುತ್ತದೆ. ಕುಟುಂಬ ನಿರ್ವಹಿಸಲು, ಕುಟುಂಬದ ಆಗುಹೋಗುಗಳನ್ನು ನಿಭಾಯಿಸಲು, ಯಾವುದೇ ಸರ್ಕಾರಿ ಕೆಲಸ ಸಿಗದಿದ್ದಾಗ ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಸಿಕ್ಕಾಗ ಅದನ್ನು ಅನಿವಾರ್ಯವಾಗಿ ಬದುಕಿಗೆ ಒಪ್ಪಿಕೊಂಡುಬಿಡುತ್ತಾರೆ.  ಇನ್ನು ಕೆಲವರು ಕೆಲಸ ಸಿಗದೇ ಹೋದರೂ ನೌಕರರಿಗೆ ಸಹಾಯಕರಾಗಿ ಇಲ್ಲವೇ ಖಾಸಗಿ ರಿಪೇರಿ ಮಾಡುವ ವ್ಯಕ್ತಿಗಳಾಗಿ  ತಮ್ಮ ವೃತ್ತಿಯನ್ನು ಮಾಡುತ್ತಾರೆ. ಇಂತಹ ವೃತ್ತಿಯನ್ನು ಮಾಡುವವರು ಬದುಕಿನ ಉಪ ಜೀವನವನ್ನು ಹ್ಯಾಗೋ ನಿಭಾಯಿಸುತ್ತಾರೆ. ವಿದ್ಯುತ್ ಗುತ್ತಿಗೆದಾರರ (ಕಾಂಟ್ರಾಕ್ಟರ್) ಅವರ ಕೈಕೆಳಗೆ ಕೆಲಸವನ್ನು ನಿಭಾಯಿಸುವ ಎಷ್ಟೋ ವ್ಯಕ್ತಿಗಳನ್ನು ನಾವು ಇಂದು ಕಾಣಬಹುದಾಗಿದೆ. ಇನ್ನೂ  ವಿದ್ಯುತ್ ಕೆಲಸಕ್ಕಾಗಿ ಕೆಲವು ಮಧ್ಯವರ್ತಿಗಳ ದೊಡ್ಡ ಹಾವಳಿಯೇ ಇದೆ. ಆದರೆ ವಿದ್ಯುತ್ ಕೆಲಸಗಾರರ ಹೆಸರಿನಲ್ಲಿ ಕೆಲವರು ಮಧ್ಯಸ್ಥಿಕೆವಹಿಸಿ ಸಾಕಷ್ಟು ದುಡ್ಡನ್ನು ಕೇಳುವವರುಂಟು. ಇಂತಹವರು ವಿದ್ಯುತ್ ಇಲಾಖೆಗೆ ಮತ್ತು ಇಲಾಖೆಯ ನೌಕರರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಮಾಡುತ್ತಾರೆ. ಇದು ಇಲಾಖೆಯ “ಮಧ್ಯಸ್ಥಗಾರರ ಕಾರಸ್ಥಾನ” ಎಂದೇ ಸಂಶಯದಿಂದ ಹೇಳುತ್ತಾರೆ.

 ಇನ್ನು ವಿದ್ಯುತ್ ಪ್ರಸರಣ ಉಸ್ತುವಾರಿಯನ್ನು ವಹಿಸಿರುವ ಅಭಿಯಂತರರ ಜವಾಬ್ದಾರಿಯೂ ಬಹಳ ಪ್ರಮುಖವಾದದ್ದು. ಎಷ್ಟು ವಿದ್ಯುತ್ ಉತ್ಪಾದನೆಯಾಗಿದೆ..? ಎಷ್ಟು ಬಳಸಬೇಕಾಗಿದೆ..? ಎಷ್ಟು ವಿದ್ಯುತ್ತನ್ನು ಉಳಿಸಬೇಕು..? ಯಾವ  ವಲಯಕ್ಕೆ  ಎಷ್ಟು ವಿದ್ಯುತ್ತಿನ ಅಗತ್ಯವಿದೆ..? ವಿದ್ಯುತ್ತನ್ನು ಯಾವುದಕ್ಕೆ ಹೆಚ್ಚು ಬಳಸಲು ಒತ್ತು ಕೊಡಬೇಕು..?  ಇನ್ನು ಮುಂತಾದ ಅಗತ್ಯಗಳನ್ನು ಇವರು ಯೋಜನೆಯನ್ನು  ಹಾಕಿಕೊಳ್ಳುತ್ತಾರೆ.  ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆ ತುಂಬಾ ಕಡಿಮೆ. ಬೇಸಿಗೆ ಸಮಯದಲ್ಲಿ ಸಾಮಾನ್ಯವಾಗಿ ಲೋಡ್ ಶೆಡ್ಡಿಂಗ್ ಎನ್ನುವ ಹೆಸರಿನಲ್ಲಿ ಸರದಿ ಪ್ರಕಾರದಲ್ಲಿ ಇಂತಿಷ್ಟು ತಾಸು ವಿದ್ಯುತ್ತನ್ನು ಪೂರೈಸುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರಾದ  ನಾವುಗಳು ನಮ್ಮ ತಾಳ್ಮೆಯನ್ನು ಕಳೆದುಕೊಂಡು, ನಮ್ಮ ನಾಲಿಗೆಯನ್ನು ಅಭಿಯಂತರರ ಮೇಲೆ ಹರಿಯಬಿಡುತ್ತೇವೆ. ಆದರೆ ವಿದ್ಯುತ್ತಿನ ಅಭಾವ ಇರುವುದರ ಬಗ್ಗೆ ನಮಗೆ ಎಳ್ಳಷ್ಟೂ ಮಾಹಿತಿ ಇರುವುದಿಲ್ಲ. ಇರುವ ವಿದ್ಯುತ್ತಿನಲ್ಲಿ ಪೂರೈಸುವ ಹೊಣೆಗಾರಿಕೆ ಅತ್ಯಂತ ಮಹತ್ವದ್ದು. ಒಂದು ಕುಟುಂಬದಲ್ಲಿ ಒಬ್ಬ ತಂದೆಗೆ ಇರುವ ಜವಾಬ್ದಾರಿಯಂತೆ ಯಾವುದಕ್ಕೆ ಎಷ್ಟು ಪ್ರಾಧಾನ್ಯತೆ ಕೊಡಬೇಕು ಎನ್ನುವುದನ್ನು ವಿದ್ಯುತ್ ಇಲಾಖೆಯ ತಾಂತ್ರಿಕ ವರ್ಗದವರೇ ನಿರ್ಣಯಿಸುತ್ತಾರೆ. ಅನಿವಾರ್ಯವಾಗಿ ಅಂತಹ ಅಡೆತಡೆಗಳಿಗೆ ನಾವು ಒಗ್ಗಿಕೊಳ್ಳಲೇ ಬೇಕಾಗುತ್ತದೆ. ಇನ್ನೂ ವಿದ್ಯುತ್ ಪ್ರಸರಣದ ಸಂದರ್ಭದಲ್ಲಿ ವ್ಯತ್ಯಯ ಉಂಟಾದರೆ ಅದನ್ನು ಸರಿಪಡಿಸುವ ವರೆಗೂ ಇರುವ ಸಮಯವನ್ನು ತಾಳ್ಮೆಯಿಂದ ಕಾಯುವ ಮನಸ್ಸು ನಮ್ಮದು ಇರುವುದಿಲ್ಲ.

ವಿದ್ಯುತ್ತನ್ನು ಪ್ರಸರಣ ಮಾಡುವ ಸಂದರ್ಭದಲ್ಲಿ ವಿಶೇಷವಾಗಿ, ಮಳೆಗಾಲದ ಸಂದರ್ಭದಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬಗಳು ಅಲ್ಲಲ್ಲಿ ಬೀಳುತ್ತವೆ. ತಂತಿಗಳು ಹರಿದು ಹೋಗುತ್ತವೆ. ಬಹುತೇಕ ಮಲೆನಾಡಿನ ಪ್ರದೇಶದಲ್ಲಿ ಲೈನ್ ಫಾಲ್ಟ್ ಆಗಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಹಗಲಿರಲಿ ಸಾಯಂಕಾಲವಿರಲಿ, ಒಮ್ಮೊಮ್ಮೆ ರಾತ್ರಿಯೂ ಕೆಲಸದಲ್ಲಿ ಹಾಜರಿದ್ದು ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು. ಇಲ್ಲವಾದರೆ ಜನಜೀವನ ಅಸ್ತವ್ಯಸ್ತತೆಯಾಗುವ ಸಂಭವವನ್ನು ನಾವು ಕಾಣುತ್ತೇವೆ. ಇಂತಹ ಸಮಯದಲ್ಲಿಯೂ ಕೂಡ ಸಾರ್ವಜನಿಕರು ಅವರಿಗೆ ಸಹಕಾರ ನೀಡದೆ ಹೋದರೆ ಹೇಗೆ..? ಎಲ್ಲಿಂದಲೋ ಯಾರ್ಯಾರ ಮರ್ಜಿಯಿಂದಲೋ, ರಾಜಕಾರಣಿಗಳಿಂದಲೋ  ಫೋನ್ ಮಾಡಿಸಿ ಒತ್ತಡವನ್ನು ಹಾಕುತ್ತಾರೆ. “ಅವರೂ ನಮ್ಮಂತೆ” ಎನ್ನುವ ಒಂದು ಸೌಜನ್ಯವನ್ನು ಕೂಡ ತೋರಿಸುವುದಿಲ್ಲ. ಕತ್ತಲಿನಲ್ಲಿ ಇರುವವರಿಗೆ ಬೆಳಕು ನೀಡುವ ಇವರ ಬದುಕಿನ ಧಾವಂತದಲ್ಲಿ ಅನಾಹುತಗಳಾಗುವ ಸಂಭವವೇ ಹೆಚ್ಚು. ತುಂಬಿ ಹರಿವ ನೀರು, ಬೀಸುವ ಬಿರುಗಾಳಿ, ಬಿರುಗಾಳಿಗೆ ಬಿದ್ದುಹೋಗುವ ಮರದ ಟೊಂಗೆಗಳು, ಮರದ ಟೊಂಗೆಗಳನ್ನು ತೆಗೆದುಹಾಕಿ, ವಿದ್ಯುತ್ ಕೇಬಲ್ ಅನ್ನು ಸರಿಪಡಿಸಿ, ಮತ್ತೆ ಎಲ್ಲರ ಮನೆಯಲ್ಲಿ ಬೆಳಕು ಹಂಚಬೇಕು. ಹೊಸದಾದ ವಿದ್ಯುತ್ ಕಂಬಗಳನ್ನು ಹಾಕುವಾಗಿನ  ಇವರ ಶ್ರಮ ವರ್ಣನಾತೀತ. ವಿದ್ಯುತ್ ಕಂಬವನ್ನು ಲಂಬವಾಗಿ ನಿಲ್ಲಿಸಲು ಹರಸಾಹಸವನ್ನು ಪಡುತ್ತಾರೆ. ಇತ್ತೀಚಿಗೆ ಕೆಲವು ಸರಳ ಸನ್ನೆಗಳು ಕೂಡ ಅವರ ಶ್ರಮವನ್ನು ಕಡಿಮೆ ಮಾಡುತ್ತಿದ್ದರೂ  ಇವರ ಬೆವರು ಹರಿಸುವುದಂತೂ ತಪ್ಪುವುದಿಲ್ಲ. ಏನೇ ಇರಲಿ ಪೊಲೀಸ್ ಇಲಾಖೆಯಂತೇ ಇವರು ಕೂಡ ಅತ್ಯಂತ ಅವಶ್ಯಕವಾದ ಇಲಾಖೆಯೆಂದೇ ಹೇಳಬಹುದು. ಬೇಸಿಗೆಯಲ್ಲಿ ಬಿಲ್ಲು ಕೊಡುವಾಗ ತಲೆ ಮೇಲೆ ಸೂರ್ಯನ ಬಿಸಿಲು ಪ್ರಖರವಾಗಿ ಬೀಳುವಾಗ ಮುಖದ ತುಂಬಾ ಬೆವರಿನ ಸ್ನಾನವೇ ಮಾಡುತ್ತಾರೆ. ಕಾಲಿನಲ್ಲಿ ಸಣ್ಣ ಸಣ್ಣ ಗೊಬ್ಬೆಗಳಾಗುವುದು  ಹೀಗೆಯೇ ಎಲ್ಲಾ ನೋವುಗಳನ್ನು ಸಹಿಸಿಕೊಂಡಿದ್ದು,  ಇಲಾಖೆಯಲ್ಲಿ ತಮ್ಮದೇ ಆದ ಸೇವೆಯನ್ನು ಮಾಡುವ ಇವರ ನಿಷ್ಠೆಯನ್ನು ನಾವೆಲ್ಲರೂ ಶ್ಲಾಘಿಸಲೇಬೇಕು.

ವಿದ್ಯುತ್ ಇಲಾಖೆಯಲ್ಲಿ ಸದಾ ಕಾಲ ಬೆವರು ಸುರಿಸುವ ಸಾಹಿತಿ ಮಿತ್ರ ಶರಣಪ್ಪ ತಳ್ಳಿಯವರ, ನಮ್ಮೂರಿನ ಲೈನ್ ಮನ್ ಕುಪ್ಪಣ್ಣನವರ ಹಾಗೂ  ಏಕಪ್ಪನವರ ಶ್ರಮ, ಮರ್ಲಾನಹಳ್ಳಿಯ ಹುಲಗಪ್ಪ ತಾವರಗೇರಿ, ಖಾಸಗಿಯಾಗಿ ಸೇವೆ ಸಲ್ಲಿಸುವ ಹುಸೇನಪ್ಪ, ಶಿವಕುಮಾರ ತಾವರಗೇರಿ, ನಮ್ಮ ಅಳಿಮಯ್ಯ ಸುನೀಲ್ ಕುಮಾರ್ ಪಾಟೀಲ್, ನನ್ನ ವಿದ್ಯಾರ್ಥಿ ಈಗ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ದೇವರಾಜ್ ಕಿನ್ನಾಳ ಇನ್ನೂ ಸಾವಿರಾರು ಶ್ರಮಜೀವಿಗಳ ಒಲವನೆಂದು ನಾವು ಮರೆಯಲಾಗುವುದಿಲ್ಲ.    ಅವರ ಸೇವೆಯ ಸಾರ್ಥಕತೆಯು ನಮಗೆ ಬೆಳಕಾಗಿ ಮೂಡಿಬಂದಿದೆ.

ಕರೆಂಟ್ ಬಿಲ್ಲು, ಕೇಬಲ್, ಲೈಟ್ ಕಂಬ, ಸ್ವಿಚ್, ಟೆಸ್ಟ್ ರ್,  ಬಟನ್ ,ರೋಪ್, ಸಲಕೆ, ಗುದ್ದಲಿ, ಮೀಟರ್ ರಿಡರ್ ಮಷೀನ್,   ಭಾಗ್ಯಜ್ಯೋತಿ,  ಓವರ್ ಡ್ಯೂಟಿ, ಟ್ರಿಪ್ ಲೈನ್, ಲೈನ್ ಜಂಪ್, ಮೋಟರ್, ಸ್ಟಾರ್ಟರ್,   ಮುಂತಾದ ಪದಗಳು ಇವರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಜಗತ್ತಿನ ಎಲ್ಲ ಜನರಿಗೂ ಬೆಳಕನ್ನು ಹಂಚುವ ಇವರು ಸರ್ಕಾರ ಅವರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ಆದ್ಯ ಕರ್ತವ್ಯ. ಬೆಳಕು ನೀಡುವ ಅವರ ಬದುಕಿನಲ್ಲಿ ಕತ್ತಲು ಆವರಿಸಬಾರದು. ದೀಪದ ಕೆಳಗೆ ಕತ್ತಲು ಇರುವಂತೆ ಅವರ ಬದುಕಿನಲ್ಲಿಯೂ ಕತ್ತಲು ಅಂದರೆ ಕಷ್ಟಗಳು ಸಹಜ. ಅವು ನಿವಾರಣೆಯಾಗಬೇಕು. ಎಲ್ಲಾ ಜಗದ ಜನರಿಗೆ ಬೆಳಕು ಹಂಚುವವರ ಬದುಕು ಕತ್ತಲಾಗದಿರಲಿ ಎಂದು ಹಾರೈಸುತ್ತಲೇ

 ನಾವು ಬೆಳಕು ಪಡೆಯುವವರು   ಬೆಳಕು ಹಂಚುವವರ ಋಣದಲ್ಲಿದ್ದೇವೆ   ಎಂದಷ್ಟೇ ಹೇಳಬಹುದು..ಅವರಿಗೆ ಒಳಿತಾಗಲಿ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ :   ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ,  ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

 (ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

One thought on “

  1. ಗಾಳಿಗಾಲ,ಮಳೆಗಾಲ,ಬೇಸಿಗೆ ಕಾಲದಲ್ಲಿ ಹೆಚ್ಚೆಚ್ಚು ಲೈನ್ ಫಾಲ್ಟ್ ಆಗುವದುಂಟು.ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಮಗೆ ಬೇಗನೆ ಕರೆಂಟು ನೀಡಬೇಕೆಂಬ ಕುತುಹಲ ಇದ್ದೇ ಇರುತ್ತದೆ.ಆದರೆ ಲೈನ್ ಕೆಳಗೆ ನೋಡುತ್ತಾ,ಎಲ್ಲಿಯಾದರೂ ಜಂಪ್ ಕಟ್ಟಾಗಿದೆಯೋ,ಡಿಸ್ಕ್ ಒಡೆದಿದೆಯೋ,ವೈರ್ ಥಳಕು ಬಿದ್ದಿಯೋ,ಅಥವಾ ಅರ್ಥ ಫಾಲ್ಟ್ ಆಗಿದೆಯೋ ಕಂಬ ವಾಲಿದೆಯೋ…ಮರಗಳ ಎರೆ ಬಿದ್ದಿದೆಯೋ…ಕಾಗೆಗಳು ತಂತಿ ವಗೈರಾ ತಂದು ತಂತಿಗೆ ಹಾಕಿದೆಯೋ……ಹೀಗೆ ಇನ್ನೂ ಹಲವಾರು ರೀತಿಯ ತಂತಿ ಮಾರ್ಗದ ಕುಂದು ಕೊರತೆಗಳಿರುತ್ತವೆ. ಕ್ಷೇತ್ರ ವೀಕ್ಷಣೆ ಮಾಡದೆ ಲೈನ್ ಸ್ಟ್ಯಾಂಡ್ ಮಾಡಲಾಗುವುದೇ ಇಲ್ಲ.ಫಾಲ್ಟ್ ಕಂಡರಿತು ಕೆಲಸ ಮಾಡುವ ತನಕ ಲೈನು ಚಾರ್ಜು ಮಾಡಿದರೆ,ಅಲ್ಲಿ ವೈರುಗಳು ಹರಿದು ಬೀಳುವದುಂಟು.
    ಇದರ ಮದ್ಯ,ಗರ್ದಿಗಮ್ಮತ್ತಿನವರ ಧಿಮಾಕು,ಅರೆಬರೆ ರಾಜಕೀಯ ಮಾಡವವರು., ಜಂಭದ ಮಾತಾಡಿ ವಾದವಿವಾದ ಮಾಡುವವರು.,ಐಹಿಕ ಐಷಾರಾಮಿಗಳ ಕಾಟಕ್ಕೆ.,ಅವರ ಕಿರಿ ಕಿರಿಯ ಬೈಗುಳಕ್ಕೆ ತಲೆಕೆಡಿಸಿಕೊಂಡು ನಮ್ಮ ವಿದ್ಯುತ್ ಕರ್ಮಿಗಳು ಇಲ್ಲಿಗೆ.,ಇಂದಿಗೆ ಅದೆಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ.

    ನಾವುಗಳು ಆದಷ್ಟು ಬೇಗ ಕರೆಂಟು ಕೊಡಬೇಕು ಎಂಬ ನಮ್ಮ ಹಾಳಾದ ಮನಸ್ಸು ಅದೆಷ್ಟೋ ಸಲ ಗೊಂದಲಕ್ಕೀಡಾಗುತ್ತದೆ.ಅತ್ಯವಸರದಲ್ಲಿ ಲೈನು ಸರಿಪಡಿಸುವ ಗುರಿ ಇಟ್ಟುಕೊಂಡೇ ಕಣ್ಣಿಗೆ ಕಾಣದ ವೈರಿಯ ಜೊತೆಗೆ ಸಮರ ಸಾರುತ್ತೇವೆ.ಬೆಳಿಗ್ಗೆ ಮನೆ ಬಿಟ್ಟರೆ,ಸಂಜೆಯ ಹೊತ್ತಿಗೆ ಜೀವಂತ ಮನೆಗೆ ಬರುತ್ತೇವೆ ಎಂಬ ಖಾತ್ರಿಯೂ ಇರಲ್ಲ.
    ದೇಶದ ಸೈನಿಕರನ್ನು ಎಲ್ಲರೂ ಕೊಂಡಾಡುತ್ತಾರೆ.ಆದರೆ ವಿದ್ಯುತ್ ಕರ್ಮಿಗಳನು ಯಾರೂ ಕೊಂಡಾಡುವುದೇ ಇಲ್ಲ.ಎದುರಿಗೆ ಶತ್ರುಗಳಿದ್ದಾರೆ ಎಂದಾದರೆ ವೀರಾವೇಶದಿಂದ ಹೋರಾಡಬಹುದು.ಯಾವುದೋ ಕಾಡು ಪ್ರಾಣಿ ಎರಗುತ್ತದೆ ಎಂದರೆ,ಕೈಲಾದಷ್ಟು ಕಾದಾಡಬಹುದು.ಆದರೆ ಹರಿದು ಸಂಚಲನ ಮೂಡಿಸಿ,ಸಂಚಕಾರವಾಗುವ ಕರೆಂಟು ವೈರಿಯಲ್ಲ.
    ಯಾವ ಸಮಯದಲ್ಲಿ ವಿದ್ಯುತ್ ಅವಗಢ ಸಂಭವಿಸಬಹುದೋ..‌.ಅದು ಸಹ ಅರಿವಿಗೆ ಬಾರದು.
    ವಿದ್ಯುತ್ಕರ್ಮಿ (ಲೈನ್ ಮ್ಯಾನ) ಗಳ ಬಾಳು ಹೇಳತೀರದು.ಕರೆಂಟು ಹಿಡಿದರೆ,ಬಿಡಿಸಿಕೊಳ್ಳಲು ನಮ್ಮಿಂದ ನಮಗೆ ಸಾಧ್ಯವಿಲ್ಲ.ಒಂದೇ ಒಂದು ಬಾರಿ ಕರೆಂಟು ಹಿಡಿದರೆ ಜೀವ ಹೋಗುವತನಕ ಬಿಡಲಾರದು. ಹನ್ನೊಂದು ಸಾವಿರ ವೋಲ್ಟೇಜ್ (ಎಚ್.ಟಿ.ಲೈನು) ಹಿಡಿದರೆ ಸಾಯಲು ಕೇವಲ ಒಂದೇ ನಿಮಿಷ.
    (250 ವೋಲ್ಟೇಜ್ ಸೆಕೆಂಡರಿ ಲೈನು ಕರೆಂಟ್ ಹಿಡಿದರೆ ಸಾಯಲು ಹತ್ತು ನಿಮಿಷ )
    ರಕ್ತ ಹೀರಿ,ಹಿಂಗಿಸಿ,ಸತ್ತ ಮೇಲೆ………..
    ಕರೆಂಟಿನ ಆರ್ಭಟವೆಲ್ಲಾ.‌……ಮೌನವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯಲ್ಲೇ ಸೇವೆ ಸಲ್ಲಿಸಿ,ಅನುಭವ ಇರುವಂತೆ,
    ರಮೇಶ ಬನ್ನಿಕೊಪ್ಪ ಶಿಕ್ಷಕರು ತುಂಬಾ ಆಳವಾಗಿ ಬರೆದು ಓದಲು ನೀಡಿದ್ದಾರೆ.
    ಲೇಖನ ಓದಿದ ಓದುಗರು ವಿದ್ಯುತ್ಕರ್ಮಿಗಳ ಕುರಿತು ಸಹನೆಯಿರಲಿ.ಕಂದಾಯ ವಸುಲಾತಿಗೆ ಬಂದಾಗಲೂ ಸಹಕಾರವಿರಲಿ.
    ಕರೆಂಟ್ ಹೋದರೆ,ಎಲ್ಲೋ ತೊಂದರೆಯಾಗಿದೆ.,ರಿಪೇರಿ ಇದೆ ಎಂದೇ ಭಾವಿಸತಕ್ಕದ್ದು.
    ಯಾರೂ ಅವಸರ ಮಾಡಿದಿರಿ.ಅದು ನಿಮ್ಮ ಒಂದು ಅವಸರದಿಂದ ಇನ್ನೊಬ್ಬರ ಕೊರಳಿಗೆ ಗರಗಸವಾಗದಿರಲಿ.
    ರಮೇಶ ಬನ್ನಿಕೊಪ್ಪ ಶಿಕ್ಷಕರು ನಮ್ಮ ಹೆಸರು ಉಲ್ಲೇಖಿಸಿದ್ದಲ್ಲದೆ,ಪರಿಚಿತರ
    ಕೆಲವರ ಹೆಸರನ್ನೂ ಇಲ್ಲಿ ಪ್ರಸ್ಥಾಪಿಸಿದ್ದಾರೆ.ಅಸಂಖ್ಯಾತ ನೌಕರರು ಕತ್ತಲೆಯಾಯಿತೆಂದರೆ ಮನೆಯೊಳಗೆ ಕುಳಿತುಕೊಳ್ಳುವಂತಿಲ್ಲ.
    ಇಲ್ಲಿನ ಅನೇಕ ಸಮಸ್ಯೆಗಳನ್ನು.,ಗಾಢಾಂದಕಾರವನು.,ತಮ್ಮ ಲೇಖನದ ಮುಖೇನ ಹಲವಾರು ವಿಷಯ ವಸ್ತುಗಳನು ತಿಳಿಸಿದ ರಮೇಶ ಬನ್ನಿಕೊಪ್ಪ ಇವರಿಗೆ ಅಭಿನಂದನೆಗಳು ಸಲ್ಲಬೇಕು.

Leave a Reply

Back To Top