ಅಂಕಣ ಸಂಗಾತಿ
ಒಲವ ಧಾರೆ
ಬಯಲು ಸೀಮೆಯ ಬಡತನದ ಹಸಿವಿಗೆ ಕರಾವಳಿಯ ಮೀನಿನೂಟದ ಘಮಲಿನ ಪರಿಮಳವೂ..
ಎಲ್ಲಿಯ ಸಮುದ್ರದ ಉಪ್ಪು, ಎಲ್ಲಿಯ ಬೆಟ್ಟದ ನೆಲ್ಲಿಕಾಯಿ ಒಂದಕ್ಕೊಂದು ಸಂಗಮವಾದರೆ ಆಹಾ ಎಂಥಾ ರುಚಿ..! ಬದುಕೇ ಹಾಗೇ ಬಾಳಿನಗೂಡನ್ನು ಕಟ್ಟಿಕೊಳ್ಳಲು ಒಂದು ಊರಿನಿಂದ ಇನ್ನೊಂದು ಊರಿಗೆ ಅಲೆಮಾರಿಯಾಗಿ ತಿರುಗಾಡುತ್ತಾ… ಹೊಸ ಕನಸುಗಳನ್ನು ಕಾಣುತ್ತೇವೆ. ವಿಪರೀತ ವಿಷಮಪೂರಿತ ಜ್ವರ (ಟೈಪಾಯಿಡ್) ಬಂದಿದ್ದರಿಂದ ದ್ವೀತಿಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯ ಪತ್ರಿಕೆಗೆ ಗೈರುಹಾಜರಾಗಬೇಕಾಯಿತು. ಆಗ ನನಗೆ ಒಂದು ಇಡೀ ವರ್ಷ ಖಾಲಿ ಖಾಲಿಯಾಗಿ ಇರಬೇಕಾಗಿತ್ತು.
ನಾಲ್ಕು ಜನ ಮಕ್ಕಳನ್ನು ಕಟ್ಟಿಕೊಂಡು ಅವ್ವ ಕೂಲಿನಾಲಿ ಮಾಡಿ ನಮ್ಮನ್ನು ಸಲಹುತ್ತಿದ್ದಳು. ಅಪ್ಪ ರಂಗಭೂಮಿಯ ಅಲೆಮಾರಿ. ಅಂದಿನ ಕಾಲಘಟ್ಟದಲ್ಲಿ ಹೆಣ್ಣು ಪಾತ್ರಗಳಿಗೆ ಜೀವ ತುಂಬಿ, ಹಾರ್ಮೋನಿಯಂ ಮಾಸ್ತರರಾಗಿ ತಮ್ಮ ಬದುಕನ್ನು ರಂಗಭೂಮಿಗೆ ಕಳೆದವರು ಅಪ್ಪ. ಇಂತಹ ಪರಿಸ್ಥಿತಿಯಲ್ಲಿ ನಾನು ಅನಿವಾರ್ಯವಾಗಿ ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡು ದುಡಿಯಲೇಬೇಕಾಗಿತ್ತು. ಇಲ್ಲಿ ಮುಂಜಾನೆಯಿಂದ ರಾತ್ರಿಯವರೆಗೆ ದುಡಿದರೂ ಅತ್ಯಂತ ಕಡಿಮೆ ಕೂಲಿ ಹಾಗಾಗಿ ಹೊರ ರಾಜ್ಯಗಳಿಗೆ ಹೋಗಿ ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡು ನಮ್ಮೂರಿನ ಹುಡುಗರು ದುಡಿಯುತ್ತಿದ್ದರು. ವರ್ಷದಲ್ಲಿ ಒಂದು ಸಲವೂ ಇಲ್ಲವೇ ಎರಡು ಸಲ ಊರಿಗೆ ಬರುತ್ತಿದ್ದರು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ನಾಟೆ, ಮುಂಬೈ, ಕರಾವಳಿಯ ಮಂಗಳೂರು, ಮಲ್ಪೆ, ಕರಾವಳಿ ಪ್ರದೇಶದ ಮೀನುಗಾರಿಕೆಗೆ ಬಯಲು ಸೀಮೆಯ ನಾಡಿನಿಂದ ಬಡತನದ ಹಸಿವಿನ ಬೇಗೆಯನ್ನು ನೀಗಿಸಿಕೊಳ್ಳಲು ಕರಾವಳಿಗೆ ಹೆಜ್ಜೆ ಹಾಕುತ್ತಿದ್ದರು. ಇದು ವರ್ಷದುದ್ದಕ್ಕೂ ನಡೆಯುತ್ತಿದ್ದ ಸಾಮಾನ್ಯವಾದ ವಾಡಿಕೆ. ವರ್ಷದ ಮಟ್ಟಿಗೆ ಇಲ್ಲವೇ ಎರಡು ವರ್ಷದ ಮಟ್ಟಿಗೆ ಖಾಯಂ ಆಗಿ ಕೆಲಸ ಮಾಡುವ ನಮ್ಮೂರಿನ ಯುವಕರು ಕೆಲಸ ಮಾಡಿಕೊಂಡು ಸಂಪಾದಿಸಿಕೊಂಡು ಬಂದ ದುಡ್ಡಿನಲ್ಲಿ ತಮಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದರು. ಮಳೆಗಾಲಕ್ಕೆ ಸೋರುತ್ತಿದ್ದ ಮನೆಯನ್ನು ರಿಪೇರಿ ಮಾಡಿ, ಹೊಸ ಸೂರಿಗಾಗಿ ಶ್ರಮ ಪಡುವವರು. ಇನ್ನೊಬ್ಬರ ಕೈಯಲ್ಲಿರುವ ಹೊಲವನ್ನು ಬಿಡಿಸಿಕೊಳ್ಳಲು ದುಡಿಮೆಯ ದುಡ್ಡನ್ನು ಹೊಂದಿಸಿಕೊಳ್ಳುತ್ತಿದ್ದವರು. ಅಕ್ಕನ ಮದುವೆಗೆ, ತಂಗಿಯರ ವಿದ್ಯಾಭ್ಯಾಸಕ್ಕೆ ಮಾಡಿದ ಸಾಲವನ್ನು ತೀರಿಸಲು ವರ್ಷದುದ್ದಕ್ಕೂ ದುಡಿದು ತಂದೆಯ ಕೈಯಿಗೆ ಹಣವನ್ನು ನೀಡುತ್ತಿದ್ದರು. ಇದು ಬಯಲು ಸೀಮೆಯ ನಿರುದ್ಯೋಗಿ ಯುವಕರ ಕಥೆ. ಬದುಕಿನ ಒಲವಿಗಾಗಿ ಕರಾವಳಿಯ ಮೀನುಗಾರಿಕೆಯ ಕೆಲಸದಲ್ಲಿ ಲವಲವಿಕೆಯನ್ನು ಕಂಡುಕೊಂಡವರು. ಬದುಕಿನಲ್ಲಿ ಹಸಿದವರು ನನ್ನಂತಹ ಹಲವು ಗೆಳೆಯರಲ್ಲಿ ನಾನು ಒಬ್ಬನು ಎನ್ನುವುದಕ್ಕೆ ಯಾಕೋ ಮನಸ್ಸು ಪ್ರೀತಿಯಿಂದ ನೆನಪುಗಳ ಕಡೆಗೆ ಹೆಜ್ಜೆ ಹಾಕುತ್ತದೆ. ನಿಜವಾಗಿಯೂ ಬದುಕಿನ ಬಗ್ಗೆ ಇರುವ, ಪಾಲಕರ ಬಗ್ಗೆ ಇರುವ ಪ್ರೀತಿ, ಕಾಳಜಿ ಅವರನ್ನು ದುಡಿಯಲು ಪ್ರೇರೆಪಿಸುತ್ತಿತ್ತು. ಮನೆಯ ಕೆಟ್ಟ ಪರಿಸ್ಥಿತಿಗಳು ಬದುಕಿನ ನವಿರಾದ ಅಮೃತದಂತಹ ಅನುಭವಗಳನ್ನು ಕಟ್ಟಿಕೊಂಡಿದ್ದಾರೆಂದರೆ ತಪ್ಪಲ್ಲ. ನಾನೂ ಅದರಲ್ಲಿ ಒಲವಿನ ಅಮೃತದ ಹಿಡಿ ತುತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಹಾತೊರೆಯುತ್ತಿದೆ…
ಮೀನುಗಾರಿಕೆಗೆ ಬಯಲ ಸೀಮೆಯ ನಾಡಿನಿಂದ ನಮ್ಮನ್ನು ಕರೆದುಕೊಂಡು ಹೋಗಲು ಅಲ್ಲಿನ ಸಾಹುಕಾರರು ಹಳೆಯ ಕೆಲಸಗಾರರೊಂದಿಗೆ ಹಳ್ಳಿಹಳ್ಳಿಗೆ ಬರುತ್ತಿದ್ದರು. ವರ್ಷದ ದುಡಿಮೆಯ ಹಣವನ್ನು ಮುಂಗಡವಾಗಿ ಪಡೆಯುತ್ತಿದ್ದರು. ಮುಂಗಡವಾಗಿ ಕೊಟ್ಟ ಹಣಕ್ಕೆ ತೊಂದರೆಯಾಗದಂತೆ ವರ್ಷದವರೆಗೂ ದುಡಿಯಬೇಕಾಗಿತ್ತು. ಅದು ಹಳ್ಳಿಯ ಹಿರಿಯ ಕೆಲಸಗಾರರ ನಂಬಿಕೆಯ ಮೇಲೆ ಒಪ್ಪಂದಗಳು ನಡೆಯುತ್ತಿದ್ದವು. ಬಹುತೇಕ ಮಧ್ಯವಯಸ್ಸಿನ ಯುವಕರು ವಿವಿಧ ಕಂಪನಿಗಳ ಮಾಲೀಕರೊಂದಿಗೆ ಈ ರೀತಿಯ ಒಪ್ಪಂದವನ್ನು ಮಾಡಿಕೊಂಡು ಮೀನುಗಾರಿಕೆಗೆ ತೊಡಗುತ್ತಿದ್ದರು. ಮೀನುಗಾರಿಕೆಯ ಕೆಲಸದಾಳುಗಳನ್ನು “ಕಲ್ಲೇಶಿಗಳು”ಎಂದು ಕರೆಯುತ್ತಾರೆ.
ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯೋಗ. ದೊಡ್ಡ ದೊಡ್ಡ (ಲಾಂಚ್) ಹಡಗುಗಳನ್ನು ನಿರ್ಮಿಸಿಕೊಂಡು, ೨ ಟನ್‌ನಿನಷ್ಟು ಬಲೆಗಳನ್ನು ಸಿದ್ಧಗೊಳಿಸಿಕೊಂಡು ಮೀನುಗಾರಿಕೆಗೆ ತಯಾರಾಗುತ್ತಿದ್ದರು. ಸಾಮಾನ್ಯವಾಗಿ ಮೀನುಗಾರಿಕೆ ಪ್ರಾರಂಭವಾಗುವುದು ಆಷಾಢ ಕಳೆದು ಶ್ರಾವಣ ಪ್ರಾರಂಭವಾಗುವುದರೊಳಗೆ. ಜೋರಾಗಿ ಬೀಸುವ ಗಾಳಿಯು ಇಲ್ಲವಾಗಿ ಅಲೆಗಳ ಅಬ್ಬರದ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗೆ ನಾನು ಕೂಡ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಿಯುಸಿಯಲ್ಲಿ ಗೈರುಹಾಜರಾದ ಪ್ರಯುಕ್ತ 6 ತಿಂಗಳುಗಳ ಕಾಲ ನಿರುದ್ಯೋಗಿಯಾಗಿರದೆ ನಮ್ಮೂರಿನ ಪ್ರೀತಿಯ ಗೆಳೆಯ ಹಡಪದ ನಿಂಗಪ್ಪನೊಡನೆ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆ ‘ನಾಟೆ’ ಎಂಬ ಹಳ್ಳಿಗೆ ಮೀನುಗಾರಿಕೆಗೆ ಹೋಗಲು ತೀರ್ಮಾನಿಸಿದೆ. ಅತ್ಯಂತ ಸಡಗರ-ಸಂಭ್ರಮದಿಂದ ನಾನು ಕೂಡ ಸಮುದ್ರವನ್ನು ನೋಡುತ್ತೇನೆ ಎನ್ನುವ ಕಾತುರದ ಕಂಗಳಿಂದ ಬಸ್ಸಿನಲ್ಲಿ ಎರಡು ದಿನಗಳ ಕಾಲ ಪಯಣಿಸಿದೆ. ಕರಾವಳಿಯ ಅರಬ್ಬಿಸಮುದ್ರದ ರಾಶಿ ರಾಶಿ ನೀರನ್ನು ನೋಡಿದೊಡನೆ ಆಶ್ಚರ್ಯಚಕಿತನಾದೆ. ಎಲ್ಲಿ ನೋಡಿದರಲ್ಲಿ ನೀರು. ಆಕಾಶ ಭೂಮಿ ಒಂದಾಗುವಂತೆ, ಸಮುದ್ರದ ನೀರು ಆಕಾಶದ ಮೋಡಗಳು ಒಂದಾಗಿರುವಂತೆ ಭಾಸವಾಯಿತು. ಸಮುದ್ರದ ಮಧ್ಯದಲ್ಲಿರುವ ಬೃಹತ್ ಪ್ರಮಾಣದ ಲಾಂಚ್‌ಗಳು ಚಿಕ್ಕ ಚಿಕ್ಕದಾಗಿ ಕಾಣುತ್ತಿದ್ದವು. ಇದು ನನಗೆ ಹೊಸದಾಗಿರುವುದರಿಂದ ಅತ್ಯಂತ ಕುತೂಹಲವಾಯಿತು. ಸಮುದ್ರದ ದಡದಲ್ಲಿ ಮೀನುಗಳ ವ್ಯಾಪಾರವು ಜೋರಾಗಿ ನೆಡೆಯುತ್ತಿತ್ತು. ಪ್ಲಾಸ್ಟಿಕ್ ಬುಟ್ಟಿಗೆ ಮಂಜುಗಡ್ಡೆಯನ್ನು ತುಂಬಿ ಅದೇ ತಾನೆ ಬಂದಿರುವ ಮೀನುಗಳನ್ನು ಹಾಕಿ ಪ್ಯಾಕ್ ಮಾಡುವ ಕಾಯಕ ನಡೆಯುತ್ತಿತ್ತು. ಅಲ್ಲಿನ ಮಹಿಳೆಯರು ಬುಟ್ಟಿ (ಮಂಕ್ರಿ) ಗೆ ಮೀನುಗಳನ್ನು ತುಂಬಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಹಾಕಿ ವ್ಯಾಪಾರ ಮಾಡಲು ಹೋಗುತ್ತಿದ್ದರು. ಉದರ ತುಂಬಿಕೊಳ್ಳುವ ಕಾಯಕ, ಜೀವಿಗಳ ಉತ್ಸಾಹ, ಸಮುದ್ರದ ಸುತ್ತಲೂ ದೊಡ್ಡ ದೊಡ್ಡ ಹಡಗುಗಳ ನಿಲ್ದಾಣ, ಅದರ ಮಧ್ಯದಲ್ಲಿ ಚಿಕ್ಕ-ಚಿಕ್ಕ ದೋಣಿಗಳ ವಾಸ, ಚಿಕ್ಕ-ಚಿಕ್ಕ ದೋಣಿಯಲ್ಲಿ ಒಬ್ಬರು ಇಲ್ಲವೇ ಇಬ್ಬರೂ ಜೊತೆಯಾಗಿ ಸಮುದ್ರದ ಮಧ್ಯಭಾಗಕ್ಕೆ ಹೋಗದಿದ್ದರೂ ಚಿಕ್ಕ ಪ್ರಮಾಣದ ಮೀನಿನ ವ್ಯಾಪಾರದಲ್ಲಿ ತಲ್ಲೀನರಾಗುತ್ತಿದ್ದರು. ಇದು ಮೀನು ವ್ಯಾಪಾರಿಗಳ ನಿತ್ಯಕಾಯಕ, ಮೀನು ಮಾರುವವರ ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಮೀನನ್ನು ಕೊಳ್ಳುವ ಇಬ್ಬರ ನಡುವಿನ ಬದುಕಿನ ಪ್ರೀತಿ ಅಗಾಧವಾದದ್ದು. ತಮಗಿಷ್ಟವಾದ ಮೀನನ್ನು ಹುಡುಕುತಾ.. ಹುಡುಕುತ್ತಾ.. ಮೀನಿಗಾಗಿ ಹಣವನ್ನು ಕೊಡುವಾಗ ಚೌಕಾಸಿಯ ಮನಸ್ಸುಗಳು, ನಾಲ್ಕು ರೂಪಾಯಿ ಹೆಚ್ಚಿಗೆ ಬಂದೀತೆಂಬ ಮುಂಜಾನೆಯಿಂದ ಸಂಜೆಯವರೆಗೆ ಮೀನುಗಳನ್ನು ಹಿಡಿದು ತರುವ ಕಾಯಕಜೀವಿಗಳ ಮುಂದಾಲೋಚನೆ. ಹೀಗೆ ಅವರಿಬ್ಬರ ಮಧ್ಯದಲ್ಲಿ ‘ನಾನೇನೂ ಕಡಿಮೆ’ ಎನ್ನುವ ದಲ್ಲಾಳಿಗಳ ಕಾಟ ಜೋರಾಗಿರುತ್ತದೆ.
ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ, ವಾಣಿಜ್ಯೋದ್ಯಮಿಗಳ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ…ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಎರಡು ಕಡೆಯಿಂದಲೂ ಲಾಭ ಹೊಡೆಯುವವರು ಈ ದಲ್ಲಾಳಿಗಳು ಕರಾವಳಿಯ ಮೀನುಗಾರಿಕೆಯನ್ನೂಇವರು ಬಿಟ್ಟಿಲ್ಲ. ಹೀಗಾಗಿ ಕೊಂಡುಕೊಳ್ಳುವವರ ಮತ್ತು ಮಾರುವವರ ಮಧ್ಯದ ಕೊಂಡಿಯಾಗಿ ದಲ್ಲಾಳಿಗಳು ವ್ಯಾಪಾರವನ್ನು ಮುಗಿಸುತ್ತಾರೆ. ಇಬ್ಬರ ಮಧ್ಯದಲ್ಲಿ ಒಂದೊಂದು ತುತ್ತನ್ನು ಕಸಿದುಕೊಂಡು ಇಲ್ಲವೇ ಇಸಿದುಕೊಂಡು ತಿನ್ನುವ ಕಾಯಕ ಇಲ್ಲಿಯೂ ನಿತ್ಯವಾಗಿರುತ್ತದೆ. ಮೀನುಗಾರಿಕೆಯ ವಲಯ ವ್ಯಾಪಾರದ ಮಜಲನ್ನು ತರಕಾರಿಯ ವ್ಯಾಪಾರದಂತೆ ಇಲ್ಲಿಯೂ ಕಾಣಬಹುದಾಗಿದೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ‘ನಾಟೆ’ ಎಂಬ ಕರಾವಳಿ ಪ್ರದೇಶ ಮುಖ್ಯವಾಗಿ ಮೀನುಗಾರಿಕೆಗೆ ತುಂಬಾ ಪ್ರಸಿದ್ಧಿಯಾಗಿದೆ. ನನಗೆ ಮೊದಮೊದಲು ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ಅತಿಯಾದ ಉಷ್ಣಾಂಶ, ಸಮುದ್ರದ ನೀರಿನ ಉಷ್ಣಾಂಶ ಅದು ನನ್ನ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರಿತು. ಎಂಟು ದಿನಗಳು ಕಳೆದ ನಂತರ ನನ್ನ ಆರೋಗ್ಯ ಸುಧಾರಿಸಿತು.
ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಮೀನು ಹಿಡಿಯಲು ಹೊರಟೆನು. ದೊಡ್ಡ ದೊಡ್ಡ ಲಾಂಚುಗಳು. ಮೀನು ಸಿಗುವವರೆಗೂ ಒಂದು ವಾರದವರೆಗೂ ಮನೆಗೆ ಅಂದರೆ ಜೆಟ್ಟಿಗೆ ಹಿಂತಿರುಗುವುದಿಲ್ಲ. ಜೆಟ್ಟಿ ಎಂದರೆ ಸಮುದ್ರದಿಂದ ತಂದ ಮೀನುಗಳನ್ನು ಇಳಿಸುವ ಬೃಹತ್ ಪ್ರಮಾಣದ ಕಟ್ಟೆ. ಬಹುತೇಕ ಮೀನು ಹುಡುಕುವುದು ರಾತ್ರಿಯ ವೇಳೆಯಲ್ಲಿ. ಮೀನು ಹುಡುಕುವ ವ್ಯಕ್ತಿಯನ್ನು ಹಡಗಿನ ಒಂದು ದೊಡ್ಡದಾದ ಎತ್ತರದ ಸಿಡಿ ಆಸನದಲ್ಲಿ ಕುಳಿತಿರುತ್ತಾನೆ. ಆ ವ್ಯಕ್ತಿಯನ್ನು ‘ಪಾಗಿ’ ಎಂದು ಕರೆಯುತ್ತಾರೆ. ಮೀನು ಹುಡುಕುವಲ್ಲಿ ಆ ವ್ಯಕ್ತಿಗೆ ವಿಶೇಷವಾದ ಕೌಶಲ್ಯವಿರುತ್ತದೆ. ಆತನಿಗೆ ಎಲ್ಲರಿಗಿಂತ ಹೆಚ್ಚು ವೇತನ ನೀಡಲಾಗುತ್ತದೆ. ಬಹುತೇಕ ಮೀನಿನ ಸುಗ್ಗಿಯಲ್ಲಿ ದೊಡ್ಡ ದೊಡ್ಡ ರಾಶಿಯ ಮೀನುಗಳನ್ನು ಹಿಡಿಯಲಾಗುತ್ತದೆ. ಲಾಂಚ್ ನ ನೌಕರರಿಗೆ ಅಂದು ವಿಶೇಷ ಬತ್ತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಪಾಪ್ಲೆಟ್, ಗಾದೆ, ಬಾಂಗ್ಡಾ, ಪರಕಿ ಮೀನು, ಸೀಳು ಮೀನು, ಸಿಗಡಿಗಳು…ತರಹೇವಾರಿ ಮೀನುಗಳು ಬಲೆಗೆ ಬೀಳುತ್ತವೆ. ಚಿಕ್ಕ ಚಿಕ್ಕ ಮೀನಿನಿಂದ ಹಿಡಿದು ಹತ್ತತ್ತು ಕೇಜಿಯಂತಹ ತೂಕದ ಮೀನುಗಳು ಬಲೆಗೆ ಬಿದ್ದಿರುತ್ತವೆ. “ಪಾಪ್ಲೆಟ್” ನಂತಹ ಅತ್ಯಂತ ರುಚಿಕಟ್ಟಾದ, ಸ್ವಾದಿಷ್ಟಕರ ಮೀನು ಸಿಕ್ಕರೆ ಮಾಲಿಕನಿಗೆ ಖುಷಿಯೋ ಖುಷಿ. ಅತ್ಯಂತ ಹೆಚ್ಚು ಬೆಲೆ ಬಾಳುವ ಇಂತಹ ಮೀನುಗಳು ದೊಡ್ಡ ವ್ಯಾಪಾರದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಒಂದು ಸುದ್ದಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದವರು ಉಂಟು.
ಇಡಿ ರಾತ್ರಿ ಕಾಯುತ್ತಲೇ ಮೀನು ಸಿಗುತ್ತದೆಯೋ..ಇಲ್ಲವೋ ಎಂದು ಕಾಯುತ್ತಿರುತೇವೆ. ಒಂದು ವೇಳೆ ಮೀನು ಸಿಕ್ಕರೆ ಆಗ ನಾವು ನಿದ್ದೆಗಣ್ಣಿನಲ್ಲೇ ಎದ್ದು ಸಮುದ್ರದಲ್ಲಿ ಬೀಸಿದ ಬಲೆಯನ್ನು ಮೀನು ಸಿಕ್ಕ ಕೂಡಲೇ ಆ ಬಲೆಯನ್ನು ಎಳೆಯಬೇಕು. ಸುಮಾರು ೮ ರಿಂದ ೧೦ ಜನ ಬಲೆಯನ್ನು ಎರಡು ತಾಸುನಷ್ಟು ಬಲೆಯನ್ನು ಜಗ್ಗುತ್ತೇವೆ. ಕಣ್ಣಿನಲ್ಲಿ ನಿದ್ದೆ ಇರುತ್ತದೆಯೆಂದು ಬೀಸುವ ಗಾಳಿ, ಅಲೆಗಳ ಅಬ್ಬರ, ದೋಣಿ (ಲಾಂಚ್) ಅಲೆಗಳಿಗೆ ಅದರ ಕುಣಿತ, ಇಡೀ ನಿದ್ದೆಯಿಲ್ಲದೆ ಶ್ರಮ ಪಡುತ್ತೇವೆ. ಸಮುದ್ರದಿಂದ ದೋಣಿ ಜೆಟ್ಟಿಗೆ ಬಂದಾಗ ಲಾಂಚ್ (ಹಡಗು) ನಿಂದ ಮೀನುಗಳನ್ನು ಚಿಕ್ಕ ದೋಣಿ (ಪಗಾರ)ಗೆ ಹಾಕಿ ಅದನ್ನು ಮಂಜುಗಡೆ ತುಂಬಿದ ಬುಟ್ಟಿಗೆ ಮೀನುಗಳನ್ನು ಸಾಗಿಸುವ ಪ್ರಕ್ರಿಯೆ ನಡೆಯುತ್ತದೆ. ಮೀನು ಹಿಡಿಯಲು ಹೋಗುವ ನಾವುಗಳು ಜಾತಿ, ಮತ, ಧರ್ಮ ಎಲ್ಲವುಗಳಿಗಿಂತ ನಮಗೆ ಮುಖ್ಯ ಹಸಿವು, ಬಡತನ ನಮ್ಮನ್ನು ಯಾವಾಗಲೂ ಒಂದು ಮಾಡುತ್ತವೆ. ನಾನು ಹೊಸಬನಾಗಿದ್ದರಿಂದ ನನಗೆ ಕೆಲಸದ ಬಗ್ಗೆ ಬಹುಬೇಗನೆ ಆಸಕ್ತಿ ಬರಲಿಲ್ಲ. ಕೆಲವರು ನನ್ನನ್ನು ವ್ಯಂಗ್ಯವಾಗಿ ಮಾತನಾಡಿಸುತ್ತಿದ್ದರು. “ಅವನು ಇನ್ನೂ ಓದಬೇಕಾದ ಹುಡುಗ ಪಾಪ” ಎಂದು ಮರುಕಪಟ್ಟವರು ಇದ್ದಾರೆ. ನನಗೆ ಆ ಸಂದರ್ಭದಲ್ಲಿ ಅನೇಕರು ಸಹಾಯ ಮಾಡಿದ್ದಾರೆ. ಬದುಕೆಂದರೆ ಒಲವಲ್ಲವೇ ನನ್ನದಲ್ಲದ ಪ್ರದೇಶಕ್ಕೆ ಹೋಗಿ ನನ್ನದಲ್ಲದ ಉದ್ಯೋಗವನ್ನು ಮಾಡುತ್ತಾ, ಬದುಕನ್ನು ಕಟ್ಟಿಕೊಳ್ಳುವ ಹೊಸ ಸಾಹಸಕ್ಕೆ ಒಗ್ಗಿಕೊಳ್ಳುವುದು. ನನ್ನ ಬದುಕಿನಲ್ಲಿ ಅಂತೂ ಇಂತೂ ಆರು ತಿಂಗಳುಗಳ ಕಾಲ ಮಹಾರಾಷ್ಟ್ರದ ‘ನಾಟೆ’ ನನಗೆ ಹೊಸ ಅನುಭವಗಳನ್ನು ಕಟ್ಟಿಕೊಟ್ಟಿತು. ವಾರದ ಕೊನೆಯ ದಿನ ಅದು ಹಪ್ತೆಯ ದಿನ. ಒಂದು ವಾರದ ಖರ್ಚಿಗಾಗಿ ಮಾಲೀಕರು ಇಂತಿಷ್ಟು ಎಂದು ದುಡ್ಡು ಕೊಡುತ್ತಾರೆ ಅದನ್ನ “ಹಪ್ತಾ” ಎಂದು ಕರೆಯುತ್ತಾರೆ. ಕೆಲವರು ಸಿನಿಮಾ ನೋಡುತ್ತಾರೆ. ಇನ್ನೂ ಕೆಲವರು ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು. ಈ ಸಮಯವನ್ನು ಹೆಚ್ಚು ಬಟ್ಟೆ ತೊಳೆಯಲು ಮತ್ತು ಸ್ನಾನಮಾಡಲು ಸಿಹಿನೀರಿನ ಹಳ್ಳಕ್ಕೆ ಹೋಗುವ ನಾವುಗಳು ಅಲ್ಲಿ ಸಿಗುವ ಗೇರುಹಣ್ಣುಗಳನ್ನು, ಗೇರುಬೀಜಗಳನ್ನು ಸುಟ್ಟು ತಿನ್ನುವುದು ಖುಷಿಯ ಸಂಗತಿಯಾಗಿತ್ತು. ಬೆಟ್ಟಗಳಲ್ಲಿ ಅಡ್ಡಾಡಿ ಮುಂದಿನ ವಾರಕ್ಕೆ ಹೊಸತನವನ್ನು ಪಡೆದುಕೊಳ್ಳುತ್ತಿದ್ದೆವು.
ಮೊದ ಮೊದಲು ನನಗೆ ಮೀನಿನೂಟ ಮಾಡುವುದು ಎಂದರೆ ಅಲರ್ಜಿಯಾಗಿತ್ತು. ನಂತರ ಮೀನಿನ ವಾಸನೆ, ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ಮೀನು ತಿನ್ನುವುದನ್ನು ಸಾವಕಾಶವಾಗಿ ಕಲಿತುಕೊಂಡೆ. ಮೀನು ಹಿಡಿಯಲು ಹೋದಾಗ ಬೆಳಿಗ್ಗೆ ೮.೩೦ ಕ್ಕೆ ಅಕ್ಕಿಗಂಜಿ ಮತ್ತು ಉಪ್ಪಿನಕಾಯಿ ಅದರ ರುಚಿಯೇ ಬೇರೆ. ಇಲ್ಲವೇ ಈರುಳ್ಳಿ ಸಾರು ಅನ್ನದ ಗಂಜಿ. ಮಧ್ಯಾಹ್ನ ಘಮಘಮ ಎನ್ನುವ ಮೀನಿನ ಸಾರು ಅನ್ನ. ರಾತ್ರಿ ಬೇಳೆ ಸಾರು ಅನ್ನ ನಂಜಿಕೊಳ್ಳಲು ಪ್ರೈ ಮಾಡಿದ ಬಾಂಗಡಾಮೀನು..!! ಕೆಲವು ಸಲ ಬಾಂಗಡಾಮೀನು ಸಿಕ್ಕರೆ ಅವುಗಳನ್ನು ಚೆನ್ನಾಗಿ ಕುದಿಸಿ ಉಪ್ಪು ಅರಿಷಣ ಹಾಕಿಕೊಂಡು ಬಾಯಿಚಪ್ಪರಿಸಿ ತಿನ್ನುತ್ತಿದ್ದೆವು. ಮೀನು ಹಿಡಿಯಲು ಹೋದಾಗ ನಮ್ಮ ದಿನನಿತ್ಯದ ಕರ್ಮಗಳನ್ನು ಕೂಡ ಅತ್ಯಂತ ಜಾಗೃತವಾಗಿ ಮುಗಿಸಬೇಕಾಗಿತ್ತು. ಅಲೆಗಳಿಗೆ ದೋಣಿಯ ನಾಟ್ಯ, ಏರಿಳಿತ ಹೊಟ್ಟೆಯಲ್ಲಿ ಒಂದು ತರಹದ ಅನುಭವ ನಮಗಾಗುತ್ತಿತ್ತು. ಸಮುದ್ರದ ಮಧ್ಯದಲ್ಲಿ ಬೇರೆ ದೋಣಿಗಳು ಕಂಡರೆ ಅಲ್ಲಿಯ ಕೆಲಸಗಾರರು ನಮಗೆ, ನಾವು ಅವರಿಗೆ ಕೈಬೀಸುತ್ತಾ ಹೊಸ ಪ್ರಪಂಚವನ್ನ ನೋಡುತ್ತಿದ್ದೆವು. ಮೀನು ಸಿಗದೇ ಇದ್ದಾಗ ಬಹಳ ಸಮಯ ಸಮುದ್ರದಲ್ಲಿ ಲಾಂಗರ್ ಹಾಕಿಕೊಂಡು ವಿಶ್ರಮಿಸುತ್ತಿದ್ದೇವು. ಹೀಗೆ ಬಯಲು ನಾಡಿನ ನನ್ನಂತ ಹುಡುಗನಿಗೆ ಕರಾವಳಿಯ ಮೀನುಗಾರಿಕೆಯ ಹೊಸ ಅನುಭವಗಳು ಕಟ್ಟಿಕೊಟ್ಟವು. ಎಲ್ಲರಿಗಿಂತಲೂ ಮಾಲೀಕ ಶಬ್ಬೀರ್‌ಶೇಟ್ ನನ್ನನ್ನು ಅತ್ಯಂತ ಅಕ್ಕರೆಯಿಂದ ಕಾಣುತ್ತಿದ್ದನು. ಓದುವ ಹುಡುಗನೆಂದು ಅತಿ ಹೆಚ್ಚು ಪ್ರೀತಿಸುತ್ತಿದ್ದರು. ಶಾಲೆ ಕಲಿಯುವ ಹುಡುಗನೆಂದು ಕೆಲಸದಲ್ಲಿ ವಿನಾಯಿತಿಯನ್ನು ಕೂಡ ಕೊಡುತ್ತಿದ್ದರು.
ಆರು ತಿಂಗಳ ಕಾಲ ಅಲ್ಲಿಯ ಹವಾಮಾನಕ್ಕೆ ಹೊಂದಿಕೊಂಡು, ಹೊಸ ಅನುಭವವನ್ನು ಪಡೆದುಕೊಂಡು, ಕರಾವಳಿಯ ಮೀನುಗಾರಿಕೆಯ ಉದ್ಯೋಗದ ಹೊಸ ಹೊಸ ನೆನಪುಗಳು ಇವತ್ತಿಗೂ ಅಚ್ಚಳಿಯದೇ ಉಳಿದಿವೆ. ಪಗಾರ, ಲಾಂಚ್, ಪಾಗಿ, ಕಲ್ಲೇಶಿ, ಮೀನು, ಸಿಡಿ, ರಿಂಗ್, ಫ್ಯಾನು, ಜಟ್ಟಿ, ಮೀನಿನ ವ್ಯಾಪಾರಿಗಳ ಸಂತೆ, ಒಣ ಮೀನುಗಳ ಹರಡುವಿಕೆ, ಮೀನು ಮಾರುವ ಹುಡುಗಿಯರು,ಮಹಿಳೆಯರು, ಹಡಗು-ಹುಟ್ಟು, ಮೀನು ತೋರಿಸುವ ಸಿಡಿ, ಝಗಮಗಿಸುವ ದೊಡ್ಡದಾದ ಕಂಬದ ದೀಪ, ಸಮುದ್ರವನ್ನಾವರಿಸಿದ ಬೆಟ್ಟಗಳು, ಅರಣ್ಯಗಳು. ಬಯಲ ಆಲಯವನ್ನು ನೆನಪಿಸುವ ಸಮುದ್ರದ ತೀರ…ಒಂದೇ ಎರಡೇ… ಚಂದ್ರ ಬೀಸುವ ಗಾಳಿಗೆ ಮೀನಿನ ಸುವಾಸನೆಯ ಘಮಲು. ದೊಡ್ಡ ದೊಡ್ಡ ಮೀನುಗಳು ಸಿಕ್ಕಾಗ ಸಂಭ್ರಮಿಸುವ ಜೀವಗಳು. ವ್ಯಾಪಾರ ಲಾಭದಾಯಕವಾದಾಗ ಹಂಚಿ ಉಣ್ಣುವ ಒಲವಿನ ಮನಸುಗಳು. ಮೀನಿನೂಟದ ಪರಿಮಳದ ಮಸಾಲೆಯ ಸುವಾಸನೆ ಇನ್ನೂ ನನ್ನದೆಯೊಳಗೆ ಹಾಗೇ ಘಮಘಮಿಸುತಿದೆ..ಬದುಕಿನ ಒಲವೆಂದರೇ ಇದು ಅಲ್ಲವೇ..?
ರಮೇಶ ಸಿ ಬನ್ನಿಕೊಪ್ಪ
ಲೇಖಕರ ಪರಿಚಯ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.
ನಲಿದಾಡುವ ವಯಸ್ಸಿನಲ್ಲಿ ಬದುಕು ಕಟ್ಟಿಕೊಳ್ಳಲು ಜೀವನ ಜಂಜಾಟದಲ್ಲಿ ವಲಸೆ ಜೀವನ ಒಂದು ಅತ್ತತ್ಯ ಅನನ್ಯ ಅನುಭವ ಅದು ಎಷ್ಟರ ಮಟ್ಟಿಗೆ ಸುಖಗಳಿಗೆ. ದುಃಖ ಮತ್ತು ವಾಸ್ತವ ಸ್ಥಿತಿ ಸಂಗತಿ ಅವಲೋಕನದ ಮಂಥನ ತಮ್ಮ ಒಲವಧಾರೆ ಅಕ್ಷರ ಬರಹ ಅಕ್ಷರಶಃ ಸತ್ಯ ಅರ್ಥ ಪೂರ್ಣವಾಗಿದೆ ತಮ್ಮ ಅಂಕಣ ಬರಹಗಳು
ಬದುಕಿಗೆ ಸ್ಫೂರ್ತಿ ಯಾಗಲಿ ಧನ್ಯವಾದಗಳು ಸರ್
ಅಂದಿನ ಕಾಲದ ಬಡತನದ ಪಾತ್ರವು, ಅದೆಷ್ಟು ಕ್ರೂರವಾಗಿತ್ತು ಎನ್ನುವುದಕ್ಕೆ ಬದುಕಿನ ಅನುಭವವೇ ಸಾಕ್ಷಿಯಾಗಿದೆ.ಹಸಿವು ಆರ್ತನಾದವಾಗಿಬಿಡುವ ಮಾಯೆಯೂ ಆಗಿತ್ತು.ನಾಕಾರು ಜನರು ನೋಡಿ ನಗುವ ಕಾಲವೂ ಆಗಿತ್ತು.ಬಡತನದ ಮಗ್ಗಲು ಬದಲಾಯಿಸಲು ವಿಷಾದದಲ್ಲೂ ಪ್ರೀತಿ ಪ್ರೇಮದಿಂದ ಹೊಂದಿಕೊಂಡು,ಒಳಿತಿನ ಗಳಿಗೆಗಾಗಿ ಕಾಯಬೇಕಾಗಿತ್ತು.ಒಲವಿನ ಕನಸುಗಳು ಮನೋ ಕಾಯದ ಭೂಮಿಕೆಗೆ ಪರಿತಪಿಸಿದರೂ ಅದರಲ್ಲಿ ಸಿಹಿ ಕಂಡುಂಡದ್ದು ಬಹು ಸಂಖ್ಯಾತರು ನಾವುಗಳು.
ಯಾವ ವಿಶ್ವ ವಿದ್ಯಾಲಯಗಳು ಕಲಿಸದಂತಹ ಪಾಠವನು ಹಸಿವು ಕಲಿಸಿದೆ ಎಂಬ ಸಾಕ್ಷಿಯಂತೆ ಈ ಲೇಖನವು ಬಡತನದ ಗೆರೆಯ ಮೇರೆಯನು ಮೀರಿ ನಿಂತದ್ದು ಎಂದೆನಿಸಿಬಿಡುತ್ತದೆ.
ತುಂಬಾ ದಿನಗಳ ಬಳಿಕ ಓದಿದ ಒಂದು ಉತ್ತಮ ಲೇಖನ. ಅಭಿನಂದನೆಗಳು