ಕಾವ್ಯ ಸಂಗಾತಿ
ನನ್ನೊಳಗೊಂದು ಬಯಲು
ಡಾ. ನಿರ್ಮಲಾ ಬಟ್ಟಲ,
ಅದೆಷ್ಟೋ ವರುಷಗಳಾದವು
ನನ್ನೊಳಗೊಂದು ಬಯಲು
ಸೃಷ್ಟಿಯಾಗಿ
ಆ ಅನಂತ ಬಯಲೊಳು
ಕಳೆದುಕೊಂಡು
ಹುಡುಕುತಿರುವೆ ನನ್ನ ನಾನು…
ಸೃಷ್ಟಿಸಿಬಿಡು ನಿನಗಿಷ್ಟ ಬಂದ
ಭಾವವನ್ನ
ಸೃಜಿಸಿಬಿಡು ನಿನ್ನಿಚ್ಚೆಯ
ಭೌತವನ್ನ
ನಿನಗೆಂದೆ ಖಾಲಿ ಇರಿಸಿದ್ದೆ
ಖಾಲಿ ಇದ್ದಾಗಲೇ ಏನನ್ನಾದರೂ
ತುಂಬಿಸಬಹುದು…..
ತುಂಬು ನನ್ನ ಹೃದಯದ ಖಾಲಿತನವನ್ನು
ನಿನ್ನ ಭಾವ ಅನುಭಾವದಿಂದ
ಕಣ್ಣೊಳಗೊಂದು ಮಿಂಚು
ಹರಿಯಲಿ ನಿನ್ನ ಪ್ರೇಮಾನುರಾಗದಿಂದ
ಮೀಸಲಾಗಿಟ್ಟ ಹೃದಯದ ಖಾಲಿತನವನ್ನು ಏನಿಂದಲಾದರೂ ತುಂಬಿಕೊಡಲು ಕೋರುವ ಎದೆಯಾಳದ ಮೊರೆತ!