ಪುಸ್ತಕ ಸಂಗಾತಿ
ಈಗಇದ್ದಂತೆಮುಂದೆಇರುವುದಿಲ್ಲ, ಎಂಬಕಾಲದೊಡನೆಸ್ಪರ್ಧಿಸಿ…..
ಕಾವ್ಯದ ಶರೀರ ಮತ್ತು ಅದರ ಆತ್ಮವನ್ನು ಬೇರ್ಪಡಿಸಿ ನೋಡುವ ದೃಷ್ಠಿಕೋನವು,ಸಂಸ್ಕೃತ, ಹಳೆಗನ್ನಡ,ನಡುಗನ್ನಡದ ಕಾಲದಲ್ಲಿತ್ತು.ಕಾವ್ಯವನ್ನು ‘ಆತ್ಮ’ ಎಂಬಂತೆ ಒಂದು ಕಡೆ ಪ್ರಜ್ಞಾ ಶಕ್ತಿಯ ಮೂಲಕ ಬಗೆ ಬಗೆಯ ಪಾಂಡಿತ್ಯವನ್ನು ಅಳತೆಗೊಳಪಡಿಸುವ ಆ ಕಾಲವೇ ಬೇರೆಯಾಗಿತ್ತು.
ಅಂತಹ ಕಾಲದ ಕಾವ್ಯಗಳಲ್ಲಿ ಅಲಂಕಾರಗಳೇ ಮುಖ್ಯ ಗುಣಗಳಾಗಿದ್ದವು.ಕಾಲ ಬದಲಾದಂತೆಲ್ಲಾ ಹಿಂದಿನಂತೆ ಈ ದಿನಗಳಲ್ಲಿ ಛಂದಸ್ಸು,ಷಟ್ಪದಿಗಳ ಜಂಜಾಟವೇ ಇಲ್ಲ. ಹೊಸಗನ್ನಡ ಕಾವ್ಯಸಾಗರದ ತಳದಲ್ಲೀಗ ಒಳತಿರುಳು ಚಮತ್ಕಾರ,ರೂಪಕಗಳು,ಲಾಲಿತ್ಯವಿದ್ದರೆ ಉತ್ತಮ ಕಾವ್ಯ ಎಂದೇಳುತ್ತೇವೆ.
ಅಧ್ಯಯನಶೀಲರಿಗೆ ಕಾವ್ಯ ಲಭಿಸಿದ್ದು ಒಂದು ಅದ್ಭುತ ವರ.ಉತ್ತಮ ಸಾಹಿತಿಗಳು ಲೇಖಿಸಿದ ಬರಹವನು ಓದಿದ ಕೆಲವು ಗರ್ದಿತನದ ಜನರು ವ್ಯವಸ್ಥೆಯಿಂದ ಸುಧಾರಣೆ ಪಡೆದು ಮನುಷ್ಯನಾದದ್ದು ಸೃಜನತೆಯ ಸಾಹಿತ್ಯದಿಂದಾದೆಂಬ ನಿದರ್ಶನಗಳಿವೆ.
ಜ್ಞಾನದ ಲೋಕವನ್ನು ಸೃಷ್ಟಿಸಿದ್ದೂ ಕಾವ್ಯದಿಂದಲೆ.,
ಜನ ಜೀವನ ಸಂಸ್ಕೃತಿಯ ಮಾನದಂಡವನು ಬದಲಾಯಿಸಿದ್ದು ಕಾವ್ಯದಿಂದಲೆ.,ಮನುಷ್ಯ ಮನುಷ್ಯರ ನಡುವೆ ಋಷಿ ನುಡಿಯಂತೆ,ಕನ್ನಡಿಯಂತೆ ಸತ್ಯವನು ಅಭಿವ್ಯಕ್ತಿಸಿ,ಪರಿಣಾಮಕಾರಿಯಾದ ಜೀವನವನ್ನು ಪರಿವರ್ತಿಸಿದ್ದು,ಬದುಕಿನ ಸಾಂಗತ್ಯವನ್ನು ಸಹ್ಯವಾಗುವಂತೆ ಮಾಡಿದ್ದು ಕಾವ್ಯದಿಂದಲೇ ಸಾಧ್ಯವಾಗಿದೆ.
“ಮಾತಾಡಿದರೆ ಹೋಯಿತು.,ಮುತ್ತು ಒಡೆದರೆ ಹೋಯಿತು” ಎಂಬ ಗಾದೆಯಂತೆ ಕಾಲ ಕಾಲದ ಗುಣಾವಗುಣಗಳು ಮಾರ್ಪಡಲು ಸಮಕಾಲೀನ ಸಾಹಿತ್ಯಕ ಓದು ಬರಹಗಳು ಅರಿಯಲು ಕಾರಣವಾಗಿವೆ.
ನಾವು ಚಿಕ್ಕವರಿದ್ದ ಕಾಲದಲ್ಲಿ ನಮಗೆ ಪಂಜೆ ಮಂಗೇಶರಾಯರು,ತಳುಕಿನ ಎಸ್.ವೆಂಕಣ್ಣಯ್ಯ.,ಕೃಷ್ಣಶಾಸ್ತ್ರಿಗಳು.,ತಿ.ನಂ.ಶ್ರೀಕಂಠಯ್ಯನವರು.,ಬಿ.ಎಂ.ಶ್ರೀಕಂಠಯ್ಯನವರು.,ಎಸ್.ವಿ.ರಂಗಣ್ಣನವರು.,ಡಿ.ವಿ.ಜಿ.ಕುವೆಂಪು.,ದ.ರಾ.ಬೇಂದ್ರೆ.,ಮಾಸ್ತಿ ವೆಂಕಟೇಶ ಅಯ್ಯಾಂಗಾರ್.,ಶಿವರಾಮ ಕಾರಂತ.,ವಿನಾಯಕ ಗೋಕಾಕ.,ಅನಂತ ಮೂರ್ತಿ.,ಗಿರೀಶ ಕಾರ್ನರ್ಡ್.,ಚಂ. ಕುಂಬಾರರು.,ಕೆ.ಎಸ್.ನರಸಿಂಹಸ್ವಾಮಿಯವರು,ಕಣವಿ.,ಆನಂದ ಕಂದ.,ಜಿ.ಪಿ.ರಾಜಾ ರತ್ನಂ., ಅಡಿಗರು.,ಕರ್ಕಿಯವರು.,ಈಶ್ವರ ಸಣಕಲ್ ಕಾವ್ಯಾನಂದರು.,….ಇನ್ನೂ ಹೆಸರಾಂತ ಹಲವಾರು ಹಿರಿಯ ಸಾಹಿತಿಗಳ ಕಾವ್ಯವು ಅಂದು ನಮಗೆ ಅರಿವಾಗುತ್ತಿರಲಿಲ್ಲ.ಪರೀಕ್ಷೆ ಹತ್ತಿರವಿರುವ ದಿನಗಳಲ್ಲಿ ಭರವಸೆಯಿಂದ ಕಂಠಪಾಠ ಮಾಡಿ ತಯಾರಿಯಲ್ಲಿರುತಿದ್ದ ದಿನಮಾನಗಳೇ ಶ್ರೇಷ್ಠವೆನಿಸಿತ್ತು.ವಿದ್ಯಾರ್ಥಿ ಜೀವನದಲ್ಲಿ ನಮ್ಮ ನಮ್ಮ ತುಟಿಗಳಿಂದ ಪಟಪಟನೆ ಹೊರ ಬರುವ ಕಾವ್ಯದ ಸಾಲುಗಳು ಅವತ್ತಿಗೆ ಸಂತಸ ಮತ್ತು ಆರೋಗ್ಯದ ಓದುವಾಗಿರುತ್ತಿತ್ತು.
ನಮ್ಮ ಹಿರಿಯರು ಏನನ್ನು ಓದಲು ನೀಡಿದ್ದಾರೆ ಎಂಬ ಅರ್ಥವೇ ನಮಗಿರಲಿಲ್ಲ.ಕವಿತೆ ಭರವಸೆಯಿದೆಯೆ? ಸಂದೇಶವಿದೆಯೆ? ಹೇಗೆ ಬರೆದಿದ್ದಾರೆ ಎಂಬ ಯಾವ ಗೊಡವೆ ನಮಗಿರಲಿಲ್ಲ, ಗಮನವಿರಲಿಲ್ಲ.ಹಾಡಲು ಹಿತವಾಗಿದೆಯೆ? ಕಂಠಪಾಠ ಮಾಡಲು ಸರಳವಿದೆಯೆ?
ಪರೀಕ್ಷೆ ಬರೆಯುವಾಗ ಇವರ ಪದ್ಯದ ಪ್ರಶ್ನೆಗಳಿಗೆ ಸರಳ ಉತ್ತರ ಬರೆಯಲು ಬಂದರೆ ಸಾಕು ಎಂದು ಆಲೋಚಿಸುತಿದ್ದೆವು.ಅವತ್ತಿನ ನಮ್ಮ ಗ್ರಹಿಕೆ ಅಷ್ಟೇ ಇತ್ತು.ಕಲಿತದ್ದು ಕೂಡ ಅಷ್ಟಕ್ಕಷ್ಟೇ ಇತ್ತು.
ನಮ್ಮ ಹಿರಿಯ ಕವಿಗಳು ಸರಳತೆಯಲ್ಲಿ,ಸೃಜನಶೀಲತೆಯಲ್ಲಿ ಬಾಳಿದವರು. ಬರಹದ ಅಭಿಮಾನ ಒಂದರಿಂದ ಅವರು ದೊಡ್ಡವರೆನಿಸಿಕೊಳ್ಳಲಿಲ್ಲ.ಅವರ ಸರಳತೆಯೇ ನಮಗೆ ಮಾದರಿಯಾಗಿದೆ.ಅವರ ಸಾಹಿತ್ಯವನ್ನು ಅರ್ಥಮಾಡಿಕೊಂಡಷ್ಟು ನಾವು ಕಲಿತಿದ್ದೇವೆ.ಹಿರಿಯರ ಸಾಹಿತ್ಯ ಮಾಂತ್ರಿಕ ಶಕ್ತಿ.,ವಿಶ್ವಮಾನವ ದನಿ ಅವರ ವಿಚಾರಗಳಾಗಿದ್ದವು.ಜಗತ್ತು ವಿನಾಶದ ಅಂಚನ್ನು ತಲುಪುತ್ತದೆ ಎಂಬ ಭಯ ಕಾಡುತ್ತಿರುವ ಸಂದರ್ಭದಲ್ಲೇ ಅವರ ಕಾವ್ಯವು ಭರವಸೆ ನೀಡಿ,ತಲೆ ಎತ್ತಲು ಕಾರಣವಾದವು ಎಂದರೆ ಸುಳ್ಳಾಗದು.
ಪ್ರತಿಯೊಬ್ಬ ಬರಹಗಾರರ ಬದುಕಿನ ಒಳ-ಹೊರಗು ಕಾಣಿಸುವ ವ್ಯಥೆ,ನಿರಾಶೆ,ವಿಷಾದಗಳು, ಇದ್ದೇ ಇರುತ್ತವೆ.ಅದರಂತೆ ಕವಯಿತ್ರಿ ಲಕ್ಷ್ಮಿದೇವಿ ಪತ್ತಾರ ಶಿಕ್ಷಕಿಯರೂ ಹೊರತಾಗಿಲ್ಲ.ಈಗಾಗಲೇ ಮೂರು ಕೃತಿಗಳನ್ನು ನೀಡಿ,ಸಾಹಿತ್ಯ ಪಯಣದಲ್ಲಿ ಸಿಹಿ-ಕಹಿ ಅನುಭವಗಳ ದಾರಿಯನ್ನು ಕಂಡುಕೊಂಡಿದ್ದಾರೆ.ಇವರ ಈಚಿನ ಬರವಣಿಗೆಯಲ್ಲಿ ಕಾವ್ಯವು ಗುಣಾತ್ಮಕವಾದ ಕೃತಿ ಈಗ ಇದ್ದಂತೆ ಮುಂದೆ ಇರುವುದಿಲ್ಲ ಎಂಬ ಶಿರ್ಷಿಕೆಯ ಕೃತಿಯು ಅತಿ ವಾಸ್ತವ ಹೇಳಿಕೆಯಾಗಿದೆ. ಹೇಳಿಕೆಗಳು ಹೇಳಿಕೆಗಳಂತಲ್ಲ.ಈ ಕೃತಿಯ ಸಾಲುಗಳು,ರೆಕ್ಕೆಗೆ ಗಾಯವಾದ ಹಕ್ಕಿಗೆ ಮುಲಾಮಾಗಿ ಸವರಿದೆ.ತಮ್ಮ ಬಿಡುವಿನ ಸಮಯದಲ್ಲಿ ಕಾವ್ಯ ಕಟ್ಟುತ್ತಾರೆ.ಗಾಢವಾದ ಕಲ್ಪಕ ಶಕ್ತಿಯೊಳಗೆ ತಮಗೆ ತಾವೇ ಲೀನವಾಗಿ ಹೊಸ- ಹೊಸ ಕಾವ್ಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ.ವಿಷಯ ವಸ್ತುಗಳ ಗ್ರಹಿಸಿ,ಇದ್ದಂತೆ ಇದ್ದ ಹಾಗೆ ಬರೆದು ಬೆರಗು ಮೂಡಿಸುವಂತೆ ವಾಟ್ಸಾಫ್ ನಲ್ಲಿ,ದಿನಪತ್ರಿಕೆಗಳಲ್ಲಿ ಓದಲು ನೀಡಿದ್ದಾರೆ.ಜೀವನ ಪ್ರೀತಿಗಿಂತ ಕಾವ್ಯಪ್ರೀತಿಯನ್ನು ಬಲವಾಗಿ ನಂಬಿದ್ದಾರೆ.ಇವರ ಕಾವ್ಯದಲ್ಲಿ ಸಹಜವಾಗಿ ಸ್ತ್ರೀ ಪರ ನೋಟಗಳು, ಸಂದರ್ಭಕ್ಕೆ ತಕ್ಕಂತೆ ಸಂಗತಿಗಳು,ಸಮಾನತೆಯ ಸಾಕಾರಕ್ಕಾಗಿ ಭಾವದೊಂದಿಗೆ ಚಿಂತನ ಶೀಲತೆಯನ್ನು,ಅನುಭವಗಳನ್ನು ಕವಯಿತ್ರಿ ಲಕ್ಷ್ಮಿದೇವಿ ಪತ್ತಾರರವರು ತಮ್ಮ ಕಾವ್ಯದಲ್ಲಿ ಗರ್ಭೀಕರಿಸಿದ್ದಾರೆ.
ಸಿರಿವಂತರ ಐಸಿರಿ
ಬಡವರ ಬೇಗುದಿ
ಎಲ್ಲವೂ ಕಪ್ಪೇ….
ಈ ಕತ್ತಲಿಗೆ
ಈ ಕವಿತೆಯನ್ನು ಓದುವದಾದರೆ,ಈ ಜಗತ್ತಿನಲ್ಲಿ ಬಡವರೆ ಇರಲಿ,ಸಿರಿವಂತರರೇ ಇರಲಿ.,ಬಿಡುವಿಲ್ಲದ ಬೆಳಕು-ಕತ್ತಲೆಯಾಟದಲ್ಲಿ ಪ್ರಕೃತಿಯ ಸತ್ಯವೆ ಬೇರೆಯಾಗಿಬಿಡುತ್ತದೆ.ಮನುಷ್ಯನಾಗಿರಲಿ,ಪ್ರಾಣಿಗಳಾಗಿರಲಿ,ಪರಿಣಾಮ ಒಂದೇ ಆಗಿರುವುದಂತೂ ಸತ್ಯ.ಕಾಲದ ಹಂಗು ಯಾರಿಗೂ ಕಾಯಲಾರದು.ವ್ಯವಸ್ಥೆಯಲ್ಲಿ ಬಡವನು ಬದುಕುತ್ತಾನೆ. ಧನಿಕನೂ ಬದುಕುತ್ತಾನೆ.ಪರಿಹಾರ ಹುಡುಕಲು ದೇವರ ಮೊರೆ ಹೋದರೂ ಅಷ್ಟೆ.ಜಗತ್ತು ಹೊತ್ತಿ ಉರಿದರೂ ಅಷ್ಟೆ.,ಪ್ರಕೃತಿಯ ನಿಯಮ ಮಾತ್ರ ಬದಲಾಗುವುದಿಲ್ಲ.ವಿಶ್ವಾತ್ಮಕವಾದ ಚಿಂತನೆಯೊಂದನ್ನು ಕವಿತೆ ಕಟ್ಟಿಕೊಡುತ್ತದೆ.ತಾಯಿ ಮಮಕಾರದ ಬುದ್ಧಿವಾದಗಳ ಮಾತುಗಳು ನೆನಪಿಸುವಂತೆ ತಿಳಿಸುತ್ತದೆ.ಬದುಕೆಂದರೆ ಹಾಗೇ ಇರುತ್ತದೆ.ನಾವು ಅಂದುಕೊಂಡಂತಾಗುವುದಿಲ್ಲ. ಬೆಳಕು-ಕತ್ತಲ ಪರದೆಯ ಹಿಂದೆ ನಿಜ ಜೀವನದ ಬದುಕೂ ಸಾಗಿ ಹೋಗುತ್ತದೆ.ಇಲ್ಲಿ ಕತ್ತಲು ಎಂದರೆ ಕೆಟ್ಟದ್ದಲ್ಲ.,ಕತ್ತಲೆಯ ಹಿಂದೆಯೆ ಬೆಳಕಿದೆ.ಬರೀ ಬೆಳಕೆಂದರೆ ಗೆಲುವಲ್ಲ.,ಬರೀ ಬೆಳಕಿನಡಿ ಇದ್ದರೆ ಸೋಲಿನ ಕಹಿ ಅನುಭವ ದಕ್ಕುವದಿಲ್ಲ.ಜೀವನದಲ್ಲಿ ಕತ್ತಲು-ಬೆಳಕು ಪ್ರತಿಯೊಬ್ಬರಿಗೂ ಹೊಸತನ ತರುವ ಸಾಲುಗಳು ಗಮನ ಸೆಳೆದಿವೆ.
ಹಸಿವು ಅವಮಾನ
ನಿರಾಶೆಗಳಾದರೆ….
ಆಗಲಿ ಬಿಡು ಏನಾಯ್ತು
ಕೆಡುಕನು ಲೆಕ್ಕಿಸದೆ
ಹುಡುಕಿದರೆ,
ಸಿಕ್ಕೀತು………….
ಕಡಲ ಮೀನು…ಮುತ್ತು
ಬದುಕಿಗಾಗಿ ಹೋರಾಟ ಎಂಬ ಕವಿತೆಯಲ್ಲಿ ಕನಸುಗಳು ಆಶಾಕಿರಣದಂತೆ ಬದುಕಿನ ಸಾಮರ್ಥ್ಯವು ಒಂದೆಡೆಗೆ ಹೊಣೆಗಾರಿಕೆಯಾಗಿದೆ ಎಂಬಂತೆ ಕವಿತೆಯ ಸಾಲುಗಳಲ್ಲಿ ಭರವಸೆಯ ನೆನವರಿಕೆ ಕಾವ್ಯಾತ್ಮಕವಾಗಿದೆ.ಬಾಳ ಭವಣೆಯ ಬದುಕಿನಲ್ಲಿ ಸುಮಧುರ ಕ್ಷಣಗಳ ಆಗಮನದ ಕಾಯುವಿಕೆಯೊಂದು ಸಹನೆಯಾಗಿದೆ.ಬೆಟ್ಟದಷ್ಟು ಆಸೆಯಿಟ್ಟುಕೊಂಡು ದುಡಿದವರಿಗೆ ಪ್ರತಿಫಲವಿಲ್ಲ.ಯಾಕೆ ಹೀಗಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ.ಉತ್ತರಕ್ಕಾಗಿ,ಪ್ರತಿಫಲಕ್ಕಾಗಿ ಕನಸು ಕಾಣುವಿಕೆಯಲ್ಲೂ ಸುಖವಿದೆ ಎಂದೇಳುವ ಮೂಲಕ ತಮ್ಮ ಸಾಹಿತ್ಯ ಕೃಷಿಯ ನಿಲುವಿಗೆ ತಾವೇ ಕಂಡುಂಡ ಅನುಭವಗಳನ್ನು ಬರಹದಲ್ಲಿ ಸೃಷ್ಟಿಸಿದ್ದಾರೆ.
ಹಸಿರೆಲೆಗಳಿಂದ
ಕಂಗೊಳಿಸುವ ಗಿಡ
ಎಲೆಗಳುದುರಿ
ಬೋಳು ಗಿಡದಲಿ
ಎಳೆ ಚಿಗುರು ಮೂಡಿ
ಹಸಿರು,ಹೂ
ಹಣ್ಣುಗಳಿಂದ
ಕಳೆಕಟ್ಟುವುದು
ಯಾವುದೂ….
ಮೊದಲಿದ್ದಂತೆ
ಇರುವುದಿಲ್ಲ
ಈ ಕವಿತೆಯಲ್ಲಿ ದಿನಮಾನಗಳ ಯಾಂತ್ರಿಕತೆ ಅದೆಷ್ಟು ಬದಲಾಗುತ್ತದೆನ್ನುವ ಉದಾಹರಣೆ ಇದೆ.ಮನುಷ್ಯ ಜೀವನ ಎಂಬುದು ನಶ್ವರ.ಮನುಷ್ಯರಷ್ಟೇ ಅಲ್ಲ,ಪ್ರಾಣಿ ಪಶು ಪಕ್ಷಿ, ಗಿಡ ಮರ ಬಳ್ಳಿ, ಗುಡ್ಡ ಗವಾರ ಪರಿಸರ ಇವುಗಳಾವವೂ ಶಾಶ್ವತವಲ್ಲ.ಅಳಿವಿನಂಚು, ಸಾವಿನ ಸಂಚು ಯಾವಾಗ ಬರುವುದೋ ತಿಳಿಯಲಾರದು.ಅನುಭವಿಸುವ ಸಮಯ ಮಾತ್ರ ಯಾಂತ್ರಿಕವಾದದ್ದಂತೂ ಸತ್ಯ.ಪ್ರಕೃತಿಯ ಆಗಮನ ಮತ್ತು ನಿರ್ಗಮನದ ಪ್ರತಿ ಗಳಿಗೆಯ ಕಾಲಮಾನದಲ್ಲಿ ಅನುಭವ ಕಾಣುತ್ತೇವೆ. ಈಗ ಇದ್ದಂತೆ ಮುಂದೆ ಇರುವುದಿಲ್ಲ ಎಂಬ ಕವನ ಸಂಕಲನದ ಶಿರ್ಷಿಕೆ ಹೇಳುವಂತೆ,ಕಾಯಿ ಮಾಗಿದ ಮೇಲೆ ಹಣ್ಣಾಗಿ,ಬೋಳಾಗಿ,ಬಯಲಾಗಿ, ಪರಿಸರವು ಮತ್ತೆ ಬಾಲ್ಯ,ಮುಗ್ಧತೆ,ಪ್ರಾಯ ಸಾಗಿದಂತೆ ವಸಂತ ಋತುವಿನಲ್ಲಿ ಪ್ರೌಢತೆ ರೂಪಿಸಿಕೊಂಡು ಬದುಕಿಗೆ ಮಾದರಿಯಾಗುತ್ತದೆ.ಬದಲಾವಣೆಯಲ್ಲಿ ಸಾರಯುಕ್ತವಾಗುವ ಚಿಂತನೆ ಈ ಕವಿತೆಯಲ್ಲಿದೆ.ಯಾವುದೂ ಸ್ಥಿರವಲ್ಲ.,ಬದಲಾವಣೆಯೆಂಬುದು ಜಗದ ಜೀವನದ ನಿಯಮ.ಈ ನಿಟ್ಟಿನಲ್ಲಿ ಕವಯಿತ್ರಿ ಲಕ್ಷ್ಮಿದೇವಿ ಪತ್ತಾರ ಇವರ ಆತ್ಮವಿಶ್ವಾಸ ಮೂಡಿಸುವ ಈ ಕೃತಿಯಲ್ಲಿನ ಕವಿತೆಗಳು ಜೀವನದ ಶೂನ್ಯದ ಬಗ್ಗೆ ತಿಳಿ ಹೇಳುವಂತೆ ರಚಿತಗೊಂಡಿವೆ.
ಶಿಕ್ಷಣವು ನೊಂದ
ಬೆಂದ ಮನ–
ಮನದ ಗಾಯಕ್ಕೆ
ಮುಲಾಮಾಗುವುದೆಂದು ತಿಳಿದಿದ್ದೆ
ಆದರೆ…ಹಾಗಾಗಲಿಲ್ಲ
ಶಿಕ್ಷಣದಿಂದ ಜಾತಿ–
ಧರ್ಮಗಳ ಗೋಡೆ
ಮುರಿದು ಬೀಳುವುದೆಂದು ತಿಳಿದಿದ್ದೆ
ಆದರೆ…ಹಾಗಾಗಲಿಲ್ಲ
ಶಿಕ್ಷಣ ಪಡೆದವರ ವಿರುದ್ಧ ವಿಷಾದಿಂದ ಧ್ವನಿಸುತ್ತಾರೆ.ಜಾತಿ,ಮತ,ಪಂಥ ಧರ್ಮಗಳು,ಮನುಕುಲದ ಮನೋಧರ್ಮಗಳನ್ನು ಹದಗೆಡಿಸಿದೆ.ಶಿಕ್ಷಣ ಪಡೆದ
ವಿದ್ಯಾವಂತರೆದುರೆ ಅವರರವರ ವ್ಯವಸ್ಥೆಯಲ್ಲಿ ಜಾತಿಯು,ನಲುಗುತ್ತದೆ.ಮಾಯದ ಗಾಯಕ್ಕೆ ಮತ್ತಷ್ಟು ಕೆರೆದು ವೇದನೆಗಳ ಕಲೆ ಮೂಡಿಸುವಂತೆ,ಮತ್ತೆ…ಮತ್ತೆ..ಕಾಡುತ್ತವೆ ಜಾತಿಗಳು.
ನಾನಂದುಕೊಂಡ ಶಿಕ್ಷಣ ಸಿಗುವುದು ಯಾವಾಗ? ಎಂಬ ಪ್ರಶ್ನೆಯಲ್ಲಿ ಉಳಿದುಬಿಡುತ್ತಾರೆ ಲೇಖಕಿಯರು.
ಗಂಗಾವತಿಯ ಮಹಿಳಾ ಕಾವ್ಯಕ್ಷೇತ್ರದಲ್ಲಿ ಸೃಜನತೆಯಿಂದ ಬರೆಯುವವರ ಸಾಲಿನಲ್ಲಿ ಲಕ್ಷ್ಮಿದೇವಿ ಪತ್ತಾರರು ಒಬ್ಬರಾಗಿದ್ದಾರೆ.ಸಮಾಜದ ಕನ್ನಡಿಯೊಳಗೆ ಕಂಡು ಮರೆಯಾಗುವ ಚಿತ್ರಗಳು,ಸಂಗತಿಗಳು ಮತ್ತು ಬೆಳಕು ಕತ್ತಲೆಗೆ ತೊನ್ನು ಹಿಡಿದ ಪ್ರತಿಬಿಂಬವನ್ನು ಇವರ ಕಾವ್ಯದಲ್ಲಿ ಕಾಣಬಹುದು.ಅಧ್ಯಯನದ ಅನುಭವವಾದಂತೆ ಸರಿ ತಪ್ಪುಗಳ ಲೆಕ್ಕಪತ್ರಗಳನ್ನು,ಲೋಕದ ಆಗು-ಹೋಗುಗಳನ್ನು ತಮ್ಮ ಕಾವ್ಯದಲ್ಲಿ ಕಾಣಿಸುತ್ತಾ ಸಾಗಿದ್ದಾರೆ.
ಕತ್ತಲೆಯಲ್ಲಿ
ಭೂಗತನಾಗುವ
ಬದಲು–
ಬೆಳಕಿಗೆ ಬಿದ್ದು
ಬೆಳಗಬೇಕು
ಕತ್ತಲಲ್ಲಿದ್ದವರಿಗೆ
ದೀಪದುಡುಗರೆ
ನಾವು ನೀಡಬೇಕು
ಉಳಿವಿಗಾಗಿ ಹೋರಾಟ ಕವಿತೆಯು,ಹಿತವಾದ ಉಪದೇಶದಂತೆ ಸಾಂತ್ವಾನ ನೀಡಿದೆ.ತಿಳಿಯಾದ ಮನಸ್ಸುಳ್ಳವರ ಮನಸ್ಸಿನಲ್ಲಿ ಅದೆಷ್ಟು ಕಾರ್ಮೋಡಗಳಾವರಿಸಿದರೂ ಬದಲಾಗುವುದಿಲ್ಲ.,ಅಡ್ಡಿ ಆತಂಕಗಳು ಭೀಕರವಾಗಿ ಘಟಿಸಿದರೂ ಬೆಳಕಿನತ್ತ ಬರುತ್ತಾರೆ.ಆದರೆ ದುರ್ಜನರ ಕೂಪದೋಪಾದಿಯಲ್ಲಿ ಕತ್ತಲೆಯೇ ತುಂಬಿರುತ್ತದೆ.ಇಂತಹ ಕಾರ್ಗತ್ತಲಲ್ಲಿ ಓಡಾಡಿಕೊಂಡಿದ್ದವರು ಯಾವ ಕ್ಷಣದಲ್ಲಾದರೂ ಭೂಗತ ಸಾಮ್ರಾಜ್ಯದ ರಕ್ಕಸರಾಗುವರು.ಬಹಿರಂಗವಾಗಿ ಆಂತರಿಕ ಕಲಹ ತಂದೊಡ್ಡುವ ಸಾಧ್ಯತೆಗಳೆ ಹೆಚ್ಚು.ಇಂತವರಿಗೆ ಸೂಕ್ತವಾದ ಮಾರ್ಗದರ್ಶನ ಮಾಡುವವರ ಅಗತ್ಯವಿದೆ.ಗುಡುಗು ಸಿಡಿಲಿನ ಶಬ್ದ ಎಲ್ಲಿಯವರೆಗಿರುತ್ತದೆ?ತುಸು ಹೊತ್ತಿನಲ್ಲಿ ನಿಸರ್ಗವೂ ಸ್ತಬ್ಧವಾಗುತ್ತದೆ.ಹೀಗಾಗಿ ದೇಶದ ಸ್ವತಂತ್ರ ಸ್ವೇಚ್ಛೆಗಾಗಿ ಬೆಳಕಿಗೆ ಬಿದ್ದು ಬೆಳಗು ಎನ್ನುವ ಕರೆ ನೀಡಿದ್ದಾರೆ.
ದೊಡ್ಡವರೆ ಹೀಗೆ…..
ಒಳಗೆ ಇದ್ದರೂ
ಎಷ್ಟೊಂದು ಚಿಂತೆ–
ಬೇಗೆ–
ಹೊರಗೆ ತೋರುವರು
ಸದಾ ಮುಗುಳು ನಗೆ
ಕೆಲವು ಹಿರಿಯರ ಗುಣ ಗೂಡಾರ್ಥವಾಗಿರುವದುಂಟು.ಅವರ ನಗುವಿನ ಒಳಗಿನಾಳ ಸೂಕ್ಷ್ಮತೆಗರಿವಾಗುವುದಿಲ್ಲ. ನಕ್ಕ ಹಾಗೆ ನಟಿಸುವ ದೊಡ್ಡವರ ಪ್ರಯತ್ನವಷ್ಟೆ.ಅವರ ಅಂತರಂಗದ ವ್ಯಂಗ್ಯ,ಮಾತಿನ ಅಪಾಯ,ಮರುಕತನದಂತೆ ಸಾಗುವ ಸಂವಾದ,ಅವರ ಹೃದಯದ ಅಂದಕಾರವನ್ನು ಎತ್ತಿ ತೋರಿಸುತ್ತದೆ ಎಂದು ನಿರಾಶೆಯ ಭಾವದಿಂದ ಲೇಖಕಿಯರು ಹಿರಿಯರ ನಿಗೂಢ ಗುಣಾವಗುಣವನು ತೆರೆದು ತೋರಿಸಿದ್ದಾರೆ.
ಯಾವುದು..ಯಾವುದು
ಕಾಣದ ಕಣ್ಣೊಂದು
ಕಣ್ಣಲ್ಲಿ ಕಣ್ಣಿಟ್ಟು
ಕಾಯುತಿರುವುದು
ನನ್ನನ್ನು
ಸುಸಂಗತ ಹಾದಿಗಾಗಿ ಶ್ರಮಿಸುವ ಜೀವವೊಂದು,ಗಹನವಾದ ಪ್ರೀತಿ ಹೊತ್ತು,ಜವಬ್ದಾರಿಯಿಂದ ಕಾವಲಾಗಿದೆ.ಬಾಳ ಬಟ್ಟೆಯಲ್ಲಿ ಭದ್ರತೆಯನ್ನೊದಗಿಸಿದ ಆ ಕಾಣದ ಕಣ್ಣು ಯಾವುದಿರಬಹುದು? ಸುಂದರ ಭಾವ ಆಗಿರಬಹುದೆ? ವಾಸ್ತವವನ್ನು ಎಚ್ಚರಿಸುವ ಮನೆಯ ವಾತಾವರಣವಾಗಿರಬಹುದೆ? ಸ್ತ್ರೀಯರಿಗೆ ಮನೆ, ಮಕ್ಕಳು, ಸಂಸಾರವೆಂಬ ತವಕವು ವಿವಿಧ ಸ್ತರಗಳಿಂದ ಕಾಡುವ ಭಾವವೇ……ಆ ಕಾಣದ ಕಣ್ಣಾಗಿರಬಹುದೆ? ಎಂಬ ಪ್ರಶ್ನೆಗಳು ಓದುಗರಿಗೆ ಸ್ಪುಟಿಸಿವೆ.
ಇಷ್ಟು ದಿನ ಹೌದಾಗಿದ್ದು
ಇಂದು ಇಲ್ಲವಾಗಿದೆ
ಇಲ್ಲವೆನ್ನುವುದು…
ಎದ್ದು ಕಾಣುತಿದೆ
ಕಾಲಚಕ್ರದಲ್ಲಿ ಎಲ್ಲಾ–
ಅಯೋಮಯ
ನಿಜವಾದ ಸುಳ್ಳು
ಈ ಬಾಳು
ಮಂಜು ಮುಸುಕಿದ ಮೊಗ್ಗಿನಂತೆ,ಅವರಿವರ ಮಾತುಗಳು ಗಾಳಿಗೆ ಪಲಾಯನವಾದ ಒಂದು ರೀತಿಯ ನೋವು.ಮತ್ತೊಂದು ರೀತಿಯಲ್ಲಿ ಬೆಂಕಿಯಲ್ಲಿ ಕಮರಿದ ಚಿಟ್ಟೆಯಂತೆ ಸತ್ಯವು ತತ್ತರಗುಟ್ಟಿದೆ. “ಸುಳ್ಳು” ಎಂಬ ಹಿರಿಮೆ ಬೀಗುತ್ತಾ ಸಾಗುವ ಭ್ರಮೆಯ ಜೊತೆ ವಾಸ್ತವವು ಅಸ್ಥಿರತೆಯಾದಾಗ ಅಯೋಮಯವಾದ ಕಾಲ ಚಕ್ರವನು ಸರಳವಾಗಿ ವಿವರಿಸಲಾಗಿದೆ.ಓದುವಾಗ ಸರಳವೆನಿಸಿದರೂ ಆತಂಕದ ಛಾಯೆಗಳು ಹಂಗಿಸುವ ನಾಲಿಗೆಯಂತಿದೆ ಕವಿತೆ.ನಿಜವಾದ ಸುಳ್ಳಿನ ಸೆಳವಿಗೆ ಸಿಕ್ಕ ಸತ್ಯವು,ಹುಲ್ಲಿನ ಎಳೆಯಂತೆ ಎಲ್ಲೆಂದರಲ್ಲಿ ದಡಬಡಿಸಿಕೊಂಡು ಹರಿದು ಸಾಗುತಿದೆಂಬಂತೆ ವಿಸ್ತಾರವಾಗಿದೆ ಕವಿತೆ.
ಈಗ್ಗೆಸುಮಾರು ದಿನಗಳ ಹಿಂದಿನ ಮಾತು. ಕವಿಗೋಷ್ಠಿಯೊಂದರಲ್ಲಿ ಡಾ.ಜಾಜಿ ದೇವೇಂದ್ರಪ್ಪನವರ ಮಾತು ಇನ್ನೂ ನೆನಪಿದೆ.
“ಲೇಖಕರು ಅದೆಷ್ಟೇ ದೊಡ್ಡವರಿರಲಿ.,ಅವರ ಎಲ್ಲಾ ಕಾವ್ಯ ಕೃತಿಗಳು ಶ್ರೇಷ್ಠವೆಂದು ಹೇಳಲಾಗದು.ಒಂದೆರಡು ಕವಿತೆಗಳು ಉತ್ತಮವಾಗಿದ್ದರೆ ಇಡೀ ಪುಸ್ತಕದ ಕೊರತೆ ನೀಗಿಸುತ್ತದೆ.ಅವರ ಬರಹಗಳು ತೀರಾ ಸಾಮಾನ್ಯವಿರಲಿ.,ಒಳ್ಳೆಯದೇ ಇರಲಿ.,ಅವರ ಬರಹದ ಶೈಲಿ,ಆಸಕ್ತಿ,ಶ್ರದ್ಧೆ,ರೂಪಕಗಳು ಅವರವರ ಅಧ್ಯಯನದ ಮುಖಾಂತರ ಮೇಲ್ಮಟ್ಟಗಳಾಗುತ್ತವೆ.ಓದು,ಬರಹ,ಕೃಷಿ ಸತತವಾಗಿರಬೇಕು” ಎಂದು ಡಾ.ಜಾಜಿ ದೇವೇಂದ್ರಪ್ಪನವರು ಹೇಳಿದ್ದರು.
ಈ ನಿಟ್ಟಿನಲ್ಲಿ ಕವಯಿತ್ರಿ ಲಕ್ಷ್ಮಿದೇವಿ ಪತ್ತಾರ ಅವರ ಓದುವಿಗೆ ದಕ್ಕಿದಷ್ಟು,ಮೂರನೆಯ ಕೃತಿಯ ಪ್ರಯತ್ನವೇ ಇವತ್ತು ಇದ್ದದು ನಾಳೆ ಇರುವುದಿಲ್ಲ ಎಂಬ ಕವನ ಸಂಕಲನವು ಆಕಾರ ಪಡೆಯುವಲ್ಲಿ ತಕ್ಕಷ್ಟು ಯಶಸ್ವಿಯಾಗಿದೆ ಎನ್ನಬಹುದು. ಈ ಕೃತಿಯೊಳಗೆ ಕೆಲವು ಕವಿತೆಗಳು ಪ್ರಾಥಮಿಕ ಚಿಂತನೆಗಳಲ್ಲಿದ್ದರೆ, ಕೆಲವು ಕವಿತೆಗಳು ಇತಿಮಿತಿಗಳ ವಾಸ್ತವ ಸ್ಥಿತಿಯನ್ನು ಬಿಂಬಿಸಿವೆ. ಈ ಕವಿತೆ ಮುಖ್ಯ ಎನ್ನದೆ,ಇನ್ನೊಂದು ಕವಿತೆ ಅಮುಖ್ಯವೆನ್ನದೆ ಸರಳತೆಯಲ್ಲಿ ಅಭಿವ್ಯಕ್ತಿಸಿ ಓದುಗರಿಗೆ ದಕ್ಕುವಂತ ಅಂಶಗಳನ್ನು ಮತ್ತು ರಸಭಾವಗಳ ವಿಚಾರವನ್ನು ಲೇಖಿಸಿದ್ದಾರೆ.ಕಾವ್ಯಕ್ಕೆ ರಸವೇ ಜೀವಿತ ಎನ್ನುವ ವಿಚಾರವು ಲೇಖಕಿಯವರಿಗೆ ಗೊತ್ತಿರುವ ಕಾರಣ ತನ್ಮಯತೆಯಿಂದ ಅನುಭವಿಸಿ,ಕಾವ್ಯದ ನಂಟು ಬೆಳೆಸಿದ್ದಾರೆ.ಈ ಕೃತಿಗೆ ಕಳಸವಿಟ್ಟಂತೆ ಖ್ಯಾತ ವಿಮರ್ಶಕರಾದ ಚಂದ್ರಶೇಖರ ನಂಗಲಿ ಬೆಂಗಳೂರು ಇವರು ಚೆಂದದ ಮುನ್ನುಡಿಯಿದೆ.ಹಾಗೆನೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಶಿಖರಪ್ರಾಯದಂತೆ ಮುದವಾದ ಬೆನ್ನುಡಿಯಿದೆ. ಕವಯಿತ್ರಿ ಲಕ್ಷ್ಮಿದೇವಿ ಪತ್ತಾರ ಅವರು ತಮ್ಮ ಓದು ಬರಹ ಮೇಧಾವಿತನವನ್ನು ಎಲ್ಲೂ ತೋರಲು ಹೋಗಿಲ್ಲ.ಮುಂಬರುವ ದಿನಗಳಲ್ಲಿ ಕಾವ್ಯದ ಆಳಕ್ಕಿಳಿದು ಮತ್ತಷ್ಟು ಉತ್ತಮ ಕೃತಿ ನೀಡಲೆಂದು ಬಯಸುವೆನು.
ಡಾ.ಶರಣಪ್ಪ ತಳ್ಳಿ ಕುಪ್ಪಿಗುಡ್ಡ