ಕಾವ್ಯ ಜುಗಲ್ ಬಂದಿ

ಖಾಲಿತನದ ಗಳಿಗೆಯ ಕವಿತೆಗಳು

ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ

ಖಾಲಿತನದ ಗಳಿಗೆಯ ಕವಿತೆಗಳು

ಗಳಿಗೆ-5

ನಿನ್ನ ಬೊಗಸೆಯ ಒಲವ
ಖಾಲಿಯಾಗಿಹ ನಿನ್ನೆದೆಗೇ
ಸುರಿದುಕೋ ಮಾಧವ..
ಉರಿವ ಬೆಂಕಿಯ
ಹಣತೆಯಾಗಿಸುವ ಕಲೆ
ಬಲ್ಲೆನೆನ್ನುವವಗೆ
ಸಾಂತ್ವನದ ತೀಡು-ತಿದ್ದುಗಳಗತ್ಯವಿರುವುದಿಲ್ಲ.

ಜೊತೆತನದ ಮಾತನುಲಿಯುತಿಹೆ..
ರಾತ್ರಿಗಿಲ್ಲದ ಸೂರ್ಯ;
ಹಗಲಿಗೊದಗದ ಚಂದ್ರ..
ಕಣ್ಣ ರೆಪ್ಪೆ ಮಿಟುಕಿನ
ಅತಿ ಸೂಕ್ಷ್ಮ ಚಣದಲೇ
ಮೂಡಣ-ಪಡುವಣಗಳಲಿ
ಕಣ್ಣು-ಮುಚ್ಚಾಲೆಯಾಡುವುದ
ನಿತ್ಯ ನೋಡುತ್ತ
ಶಾಶ್ವತರಂತೆ ಮೆರೆವ
ಅಶಾಶ್ವತರ ಜೊತೆತನದ
ನಿರುಕ ನೀಗಿ
ನಿಟ್ಟುಸಿರಿಟ್ಟಾಗಿದೆ ನಾನು..

ಉರಿವ ಚಿತೆಗಳ ನಡುವೆ
ತಪ್ತ ಭಾವದಿ ನಲುಗಿ
ನೋವ ನಿಗಿ-ನಿಗಿ ಕೆಂಡದಲಿ
ಸುಟ್ಟು
ಪ್ರೇಮ-ಮೋಹಗಳ ಜಂಜಡವ ಬಿಟ್ಟು
ಗಟ್ಟಿಗೊಂಡು ಹಗುರಾಗಿಹ ನನ್ನೀ ಎದೆಗೆ
ನಿನ್ನೀ ನಿವೇದನೆ
ಬಾಲಿಶವಲ್ಲದೇ ಮತ್ತೆಂತೂ ತೋರುತ್ತಿಲ್ಲ..

ವೀಣಾ ಪಿ.

ಖಾಲಿಯಾದ ಬೊಗಸೆ
ಮರುಭೂಮಿಯಾದ ಎದೆ
ಹೊತ್ತು ತಿರುಗುವವನಿಗಿಲ್ಲ
ಒಲವಿನ ಚಿಂತೆ

ಗಾಳಿ ಹುಯಿಲೊಳಗಿನ
ಬಯಲೊಳಗೆ
ಹಚ್ಚಿಟ್ಟ ಹಣತೆ
ಆರಿ ಹೋಗಿ ಮೂರ್ಕಾಲವಾಯಿತು

ಹೃದಯದೆ ಹಚ್ಚಿಟ್ಟ ಹಣತೆ
ಆರಿ ಸಿಡಿದ ಕಿಡಿಗೆ
ಊರುಕೇರಿಗಳೇ ಭಸ್ಮ
ಬೆಳಕಾಗಬೇಕಿದ್ದ ಬದುಕು
ಬಳಲಿದೆ
ಬೆಂಬಿಡದ ಗತ ನೆನಪುಗಳ
ಕೊಡೆಯಗಲಿಸಿದ
ಕತ್ತಲೊಳು

ಎಲ್ಲವೂ
ಬಾಲಿಶವೇ ಬಿಡು
ನಿನ್ನ
ನಿರಾಕರಣೆಯ ನಿರ್ಲಿಪ್ತ ನಿಲುವಿನಲಿ.

ಯಾವತ್ತಾದರೂ
ನನ್ನವರೆನಿಸಿಕೊಂಡವರೆಲ್ಲರ
ಚಿತೆಗುಳುರಿದು ಉಳಿವ
ಬೂದಿಯಿಂದ
ಎದ್ದು ಬರುವೆ
ಮತ್ತದೇ ನೀಲಾಕಾಶದ ಮೇಲೊದಿಕೆಯಲಿ
ನನ್ನದೆಂದುಕೊಂಡ
ನೆಲದಲಿ
ಅಣಬೆಯಾಗಿ
ಸುರಿವ ಮೊದಲ ಮಳೆಗೆ

ಮಾಧವ

( ಮುಂದುವರೆಯುವುದು)


ವೀಣಾ ಪಿ.

ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.

Leave a Reply

Back To Top