ಕಾವ್ಯ ಸಂಗಾತಿ
ಕವಲು ಹಾದಿ
ಜಯಲಕ್ಷ್ಮಿ ಎಂ.ಬಿ
ಕಾಡದಿರು ಎಲೆಮನವೆ ಮನಸೆಳೆವ ಮಾಯೆಯಿದು
ನಿಂತಿಹೆನು ಶಿಲೆಯಂತೆ ಕಡಲ ತೆರೆಗಳ ನಡುವೆ
ಮೂಡಿಹುದು ಮನದೊಳಗೆ ಹತ್ತಾರು ಗುರುತು
ಸುಳಿವ ತಂಗಾಳಿಗೆ ಅಲೆಗಳ ನರ್ತನವು
ಮೌನದೊಳು ಮಾತಾಗಿ ಬೇಯುತಿದೆ ನೋವಿನಲಿ
ಹರಕೆಯ ಬಲಿಯಂತೆ ತನುವೆಂಬ ಲತೆಯು
ಸರಸದಲಿ ಬೆರೆತಾಗ ಒಲವೆಲ್ಲ ಹಸುರು
ಕಾಣದಿಹ ಹೆಜ್ಜೆಯನು ಹುಡುಕುತಲಿ ಬೆಂದು
ಹದವರಿತು ಬಾ ಒಲವೆ ಕಾಯುವೆನು ನಾನು
ಚಂದಿರನ ಬೆಳಕನ್ನು ಕಣ್ತುಂಬ ತುಂಬಿಸುತ
ಮನದುಂಬಿ ನಲಿಯೋಣ ಹೊಳಪಿನಲಿ ಮಿಂದು
ಸತ್ತಿರುವ ಕನಸುಗಳ ನೆನಪಿಸುತ ಮತ್ತೊಮ್ಮೆ
ಎದೆಯೊಳಗೆ ಸ್ವಾಗತಿಸಿ ಮರುಜೀವ ತುಂಬೋಣ
ಮುಚ್ಚಿದರು ಕಣ್ಣು ಕಾಣುತಿಹುದು ಬಿಂಬ
ಪ್ರತಿಬಿಂಬವಾಗಿ ಒಳಗಣ್ಣ ಕಡಲೊಳಗೆ ಇಣುಕಿ
ನಾನು ನಿನ್ನೊಳೊ ನೀನು ನನ್ನೊಳೊ ಅರಿಯದಾಗಿದೆ ಮನವು
ಎಲ್ಲ ಬಂಧವ ತೊರೆದು ಸನಿಹ ಬರುವೆಯಾ ಇಂದು
ಬೆಳಕಾಗಿ ಬಾ ಬಳಿಗೆ ನನ್ನೊಲವೆ ಎಂದು ಕಾಯುತಿಹೆ ಕವಲೊಡೆದ ಹಾದಿಯಲಿ ನಾ
ಸರಿಪಡಿಸು ಕನಿಕರಿಸಿ ಒಲವಿಂದ ಬಂದು
————————————————
ಜಯಲಕ್ಷ್ಮಿ ಎಂ.ಬಿ