ಕಾವ್ಯ ಸಂಗಾತಿ
ಹೋರಾಟವೇ ಬದುಕು
ಅರುಣಾ ರಾವ್
ನುಣುಪಾದ ಸೀರೆಗಳನು ಮೈ ಮೇಲೆ ಹೊದ್ದು
ನಿಂತ ಅವಳಿಗೂ ಷೋಕೇಸಿನ ಬೊಂಬೆಗೂ
ಇಲ್ಲವಾಗಿದೆಯೇ ತುಸು ವ್ಯತ್ಯಾಸ
ಪೀತಾಂಬರಗಳ ಮೇಲೆ ಕೈಯಾಡಿಸುತ್ತಿದ್ದರೂ
ಮನಸೇಕೋ ಮುಳ್ಳುಗಳ ಹಂದರ
ಭಾನುವಾರ ಜಗತ್ತಿಗೆಲ್ಲಾ ವಿರಾಮ
ಇವಳೇನೋ ವಸ್ತ್ರದಂಗಡಿಯಲ್ಲ್ಲಿಗಿರಾಕಿಗಳಿಗೆ
ಬಿಚ್ಚಿ ತೋರುತ್ತಿದ್ದಾಳೆ ಸೀರೆಗಳ ಮಡಿಕೆ
ಮೈ ಮೇಲರಿವ ಕಣ್ಣುಗಳಿಗಿಲ್ಲ ಮಡಿವಂತಿಕೆ
ಹೊದ್ದು ತೋರೆಂಬ ಮಾತಿಗೆದುರಾಡದೆ
ಎದ್ದು ನಿಂತಳು ಚೆಲ್ಲುತ ಆಕರ್ಷಕ ನಗೆ
ರೇಷ್ಮೆ ಹೊದ್ದು ನಿಂತವಳು ಜೀವಂತ ಗೊಂಬೆ
ಹಚ್ಚಿದ್ದ ಲಿಪ್ಸ್ಟಿಕ್ ಮರೆಮಾಚಿತ್ತವಳ ಹಸಿವ ಬೇನೆ
ನೂರಾರು ಸೀರೆಗಳ ತೆಗೆಸಿ ಕಾಲ ಸವೆಸಿ
ಮೆಚ್ಚುಗೆಯಾಗಲಿಲ್ಲವೆಂದು ತುಟಿ ಕೊಂಕಿಸಿ
ಜಂಭದ ಚೀಲವ ಹೆಗಲಿಗೇರಿಸಿ ಹೊರಟಾಗ
ಹೊರಟಿತೊಂದು ನಿಟ್ಟುಸಿರು ಅದೃಷ್ಟ ಶಪಿಸಿ
ಬಿಚ್ಚಿದ್ದ ಮಡಿಕೆಗಳ ಮಡೆಸಿ ಪೇರಿಸಿಡುವಾಗ
ಸವರುವಳು ತನಗಿಷ್ಟವಾದೊಂದು ಸೀರೆ
ತಕ್ಷಣವೆ ಹರಿವುದವಳ ಕಣ್ನೋಟ
ತಾನುಟ್ಟು ನಿಂತಿದ್ದ ಸಮವಸ್ತ್ರದ ಮೇಲೆ
ಮೂದಲಿಕೆ ಹೊಗಳಿಕೆ ಹಿಯ್ಯಾಳಿಕೆ
ಹಸಿದ ಕಣ್ಣೋಟಗಳು ಕೈ ತಾಕಲಾಟಗಳು
ತಳಮಳಿಸಿ ನೊಂದರೂ ಸೈರಿಸುತ ಅನುಕ್ಷಣ
ಹೋರಾಡಿ ತುಂಬಿಸ ಬೇಕು ನಂಬಿದ್ದ ಉದರಗಳು
ಅರುಣಾ ರಾವ್
ಎಷ್ಟೋ ಜನರ ಪಾಡು ಹಾಡಿನಲ್ಲಿ ಮೂಡಿಸಿದ್ದೀರಿ. ಸೂಪರ್.