ಪುತ್ರಿಕಾಮೇಷ್ಠಿ

ಪುಸ್ತಕ ಸಂಗಾತಿ

ಪುತ್ರಿಕಾಮೇಷ್ಠಿ

ಪುಸ್ತಕ ಪರಿಚಯ:

ಕಾದಂಬರಿ :           ಪುತ್ರಿಕಾಮೇಷ್ಠಿ

ಲೇಖಕರು :             ವಿವೇಕಾನಂದ ಕಾಮತ್

ಬೆಂಗಳೂರು:        ಸಾಹಿತ್ಯ ಸುಗ್ಗಿ ಪ್ರಕಾಶನ

ಪ್ರಸ್ತುತ ನಾಡಿನ ಹೆಸರಾಂತ ಕಾದಬಂರಿಕಾರರಲ್ಲಿ ವಿವೇಕಾನಂದ ಕಾಮತ್ ಅವರು ಒಬ್ಬರು. ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ವರ್ಷದಲ್ಲಿ ಏಕಕಾಲಕ್ಕೆ ಮೂರು ನಾಲ್ಕು ಕಾದಂಬರಿಗಳು ಧಾರವಾಹಿಯಾಗಿ ಪ್ರಕಟವಾಗುವುದರ ಮೂಲಕ ಅಪಾರ ಓದುಗರನ್ನು ತಲುಪಿದ್ದಾರೆ.

ತನ್ನ ಶಿರ್ಷಿಕೆಯಲ್ಲಿಯೇ ಓದುಗರನ್ನು ಸೆಳೆಯುವ,  ಸ್ತ್ರೀ ಸಂವೇದನೆ ಮತ್ತು ಸಬಲೀಕರಣದ ವಿಭಿನ್ನ ಕಥಾ ವಸ್ತುವುಳ್ಳ ಕಿರುಕಾದಂಬರಿ ಪುತ್ರಿ ಕಾಮೇಷ್ಠಿ. ತನ್ನ ಜೀವನವನ್ನೆ ಯಜ್ಞಕುಂಡವನ್ನಾಗಿಸಿ ಅಸಹಾಯಕತೆ, ಅಮಾನಗಳನ್ನೆಲ್ಲ ಯಜ್ಞಕ್ಕೆ ಹವೀಸ್‌ನಂತೆ ಅರ್ಪಿಸಿ, ಆತ್ಮಬಲದಿ ಅಗ್ನಿಯಾಗಿ ಉರಿದು ಆ ಬೆಳಕಲ್ಲಿ ಯಾರ ಆಸರೆಯು ಇಲ್ಲದೇ ಮೂರು ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಿ ಅವರ ಸಾಧನೆಯನ್ನೆ ಯಜ್ಞಫಲವಾಗಿ ಪಡೆದ ದಿಟ್ಟ ಹೆಣ್ಣುಮಗಳ ಸಾಹಸಗಾಥೆಯೇಈ ಕಾದಬಂರಿಯ ಕಥಾ ವಸ್ತು. ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂದು ಗೋಳಿಡುವ ಪಾಲಕರಿಗೆ ವಸುಧಳ ಪಾತ್ರ ಪ್ರಗತಿಪರ ಚಿಂತನೆಗೆ ಪ್ರೇರೆಪಿಸುತ್ತದೆ. ದೈಹಿಕ ನೂನ್ಯತೆಯುಳ್ಳ ಹೆಣ್ಣುಮಗಳನ್ನು ನಿರಾಕರಿಸಿದ ತಂದೆ ಅದೇ ಮಗಳಿಂದ ನನಗೆ ಹೆಮ್ಮೆ ಎಂದು ಬಿಗುವಂತೆ ಮಾಡುತ್ತಾಳೆ. ಗಂಡು ಸಂತಾನದ ನೀರಿಕ್ಷೆಯಲ್ಲಿರುವ ಗಂಡ, ಹೆಣ್ಣುಮಗು ಹುಟ್ಟಿತೆಂದು ಹೆಂಡತಿಯನ್ನು ಮಗುವನ್ನು ತಾತ್ಸಾರದಿಂದ ಕಾಣುತ್ತಾನೆ. ಎರಡನೆ ಮಗುವು ಮತ್ತು ೩ನೇ ಮಗುವು ಹೆಣ್ಣಾಗಿ ಹುಟ್ಟುವುದರ ಜೊತೆಗೆ ಅಂಗವೈಕಲ್ಯದೊಂದಿಗೆ ಹುಟ್ಟಿತೆಂದು ಹೇಳದೇ ಕೇಳದೇ ಹೆಂಡತಿಯನ್ನು ನಡುನೀರಲ್ಲಿ ಬಿಟ್ಟುಹೋಗುತ್ತಾನೆ. ತವರಿನಾಸರೆಯು ಇಲ್ಲದೆ ಗಂಡನಮನೆಯವರ ಆಸರೆಯು ಇಲ್ಲದೆ ನಿಂತವಳಿಗೆ ಸ್ನೇಹಿತೆಯ ಸಹಾಯದಿಂದ ವಸತಿಶಾಲೆಯಲ್ಲಿ ಕೆಲಸ ಸಿಗುತ್ತದೆ. ಅದೇ ಸಂದರ್ಭದಲ್ಲಿ ಬಿಟ್ಟು ಹೋದ ಗಂಡ ಅಂಗವೈಕಲ್ಯದ ಮಗುವನ್ನು ಬಿಟ್ಟು ಬರುವುದಾದರೆ ತನ್ನ ಜೊತೆ ಬಾಳಲು ಅವಕಾಶ ಕೊಡುವುದಾಗಿ ತಿಳಿಸಿದರು, ಮಕ್ಕಳಿಗಾಗಿ ಗಂಡನನ್ನೆ ತೊರೆದು ಕೆಲಸಕ್ಕೆ ಸೇರಿ ಶಾಲೆಯಲ್ಲಿ ಮಕ್ಕಳ್ಳಿಗೆ ಉಚಿತ ಶಿಕ್ಷಣ ದೊರೆಯುವುದರ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ದಾನಿಗಳ ಸಹಾಯವು ದೊರೆಯುತ್ತದೆ. ಅದೇ ಹೆಣ್ಣು ಮಕ್ಕಳು ಡಾಕ್ಟರ್,ಇಂಜಿನೀಯರ ಮತ್ತು ಅಂತಾರಾಷ್ಟ್ರೀಯ  ಮಟ್ಟದ ಈಜುಗಾರ್ತಿಯಾಗಿ ಸಾಧನೆಯನ್ನು ಮಾಡುತ್ತಾಳೆ. ಆಗ ಮೆಚ್ಚಿ ಬಂದ  ಅಪ್ಪನಿಗೆ ಪಾಠ ಕಲಿಸಿ ತಿರಸ್ಕರಿಸುವ ಹೆಣ್ಣು ಮಕ್ಕಳು ನಿಜವಾದ ನಾಯಕಿಯರಾಗಿ ನಿಲ್ಲುತ್ತಾರೆ. ಇಂಥ ಹೆಣ್ಣು ಮಕ್ಕಳನ್ನು ಪಡೆಯಲು ಪುತ್ರಿ ಕಾಮೇಷ್ಠಿ ಯಾಗವನ್ನು ಮಾಡಬೇಕು ಎನ್ನುವ ಸಂದೇಶವನ್ನು ಕಾದಂಬರಿ ಸಾರುತ್ತದೆ. ಗಂಡು ಮಗನೇ ವಂಶ ಬೆಳೆಸುವವ,ವಾರಸುದಾರ ಎನ್ನುವ ಸಾಮಾಜಿಕ ಧೋರಣೆಯನ್ನು ಬದಲಿಸುಲ್ಲಿ ಕಾದಬಂರಿಯ ನಾಯಕಿಯಾದ ವಸುಧಳ ಪಾತ್ರ ಸಶಕ್ತವಾಗುತ್ತದೆ.

ಬಿಟ್ಟು ಹೋದ ಅಪ್ಪ ತನ್ನ ಹೆಣ್ಣು ಮಕ್ಕಳನ್ನು ಭೇಟಿಯಾಗುವುದುರ ಮೂಲಕ ಕಾದಂಬರಿಯ ಪ್ರಮುಖ ತಿರುವು ಪಡೆದುಕೊಳ್ಳುತ್ತಿದೆ. ಅಪ್ಪನ

ಸಂಪರ್ಕಕ್ಕೆ ಬಂದ ಮಕ್ಕಳು ಅಪ್ಪನನ್ನು ಒಪ್ಪಿಕೊಂಡಾಗ ಸಹಜವಾಗಿ ವಸುಧಾ ಮಾನಸಿಕ ಸಂಘರ್ಷಕ್ಕೆ ಒಳಗಾಗುತ್ತಾಳೆ.ಆ ಸಂದರ್ಭವನ್ನು ಕಾದಂಬರಿಕಾರು ಬಹಳ ಮನೋಜ್ಞವಾಗಿ  ಚಿತ್ರಿಸಿದ್ದಾರೆ.ತಾಯಿಯ ಕಷ್ಟ, ತ್ಯಾಗ, ಪರಿಶ್ರಮದಿಂದ ಸಮಾಜದಲ್ಲಿ ಗುರುತಿಸುವ ಸ್ಥಾನ ಗೌರವಗಳನ್ನು ಪಡೆದ ಹೆಣ್ಣು ಮಕ್ಕಳು ತಂದೆಗೆ

ಗಂಡುಮಕ್ಕಳಿಂಗಿಂತ ಹೆಣ್ಣು ಮಕ್ಕಳೇ

ಶ್ರೇಷ್ಟ ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. ವಸುಧಳ ಹಿರಿಯ ಮಗಳು ಆಸ್ಪತ್ರೆಯಲ್ಲಿ ಯಾರೋ ಬಿಟ್ಟು ಹೋದ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಅದರ ಭವಿಷ್ಯ ರೂಪಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಥೆ ಸುಖಾಂತ್ಯವಾಗುತ್ತದೆ. ಲಿಂಗ ತಾರತಮ್ಯದ ಸಾಮಾಜಿಕ ಸಮಸ್ಯೆಯನ್ನು ಕಥಾವಸ್ತು ಮಹಿಳಾ ಸಬಲೀಕರಣದ ಆಶಯವನ್ನು ಹೊತ್ತು ಓದುಗರ ವಿಚಾರವನ್ನು ಬದಲಿಸುವಂತೆ ಪ್ರೇರಕವಾಗಿದೆ.


 ಡಾ. ನಿರ್ಮಲ ಬಟ್ಟಲ

One thought on “ಪುತ್ರಿಕಾಮೇಷ್ಠಿ

  1. ಕೃತಿಯ ತುಮಲಗಳನ್ನು ಚನ್ನಾಗಿ ಅವಲೋಕಿಸಿದ್ದೀರೀ.

Leave a Reply

Back To Top