ಕಾವ್ಯ ಸಂಗಾತಿ
ನೆನಪುಗಳ ಪರಿ
ಒಲವು
ಒಂದರ ಮೇಲೊಂದು
ಬಿಡದೆ ಕಾಡುವ ನೆನಪುಗಳು
ನಿತ್ರಾಣಗೊಳಿಸುತ್ತವೆ
ನಿದ್ದೆಗೆ ಒರಗಲು ಬಿಡುವುದಿಲ್ಲ
ನೆನಪುಗಳು ಮಾಸುವುದಿಲ್ಲ,
ಹಚ್ಚ ಹಸಿರಾಗಿರುತ್ತವೆ
ನೆನಪುಗಳು ಸಾಯುವುದಿಲ್ಲ,
ಚಿರಯುವಕನಂತಿರುತ್ತವೆ
ನೆನಪುಗಳು ನಿನ್ನೆ ಮೊನ್ನೆಯವಲ್ಲ
ತಲೆತಲಾಂತರಗಳವು
ನೆನಪುಗಳು ಬರಿ ನಗಿಸಲೆಂದಲ್ಲ
ಅಳುವಿಗೆ ರಾಯಭಾರಿಯಾಗಬಲ್ಲವು
ನೆನಪುಗಳು ಇದ್ದಕ್ಕಿದ್ದ ಹಾಗೆ
ಹೇಳದೆ, ಕೇಳದೆ,
ಕಾರ್ಯಕಾರಣವಿಲ್ಲದೆ,
ಬಂದು ಹೋಗುವ ಅತಿಥಿಗಳು
ಮಕ್ಕಳಿಂದ ಮುಪ್ಪಿನವರೆಗೆ
ಹುಟ್ಟಿನಿಂದ ಸಾವಿನವರೆಗೆ
ನೆನಪುಗಳು ತಲೆದಿಂಬಾಗುತ್ತವೆ,
ಹಾಸಿಗೆಯಾಗುತ್ತವೆ,ಹೊದಿಕೆಯಾಗುತ್ತವೆ.