ಪ್ರಬಂಧ
ಆತ್ಮಕ್ಕಂಟಿದ ವಸ್ತ್ರಗಳು..
ಜ್ಯೋತಿ ಡಿ. ಬೊಮ್ಮಾ.
ನಮ್ಮಪೂರ್ವಜಕರಿಗೆ ಮಾನಮುಚ್ವಿಕೊಳ್ಳುವ ಕುರುಹಾದ ಬಟ್ಟೆಗಳು ಅಧುನಿಕ ಕಾಲದಲ್ಲಿ ಫ್ಯಾಷನ್ ನಿನ್ನ ಸಂಕೇತಗಳಾಗಿವೆ.ನಾನು ಮಾರ್ಕೆಟ್ ಗೆ ಹೋದಾಗಲೆಲ್ಲ ನನ್ನ ದೃಷ್ಟಿ ಮೊದಲು ಬಿಳುವದು ರಸ್ತೆಯ ಇಕ್ಕೆಲಗಳಲ್ಲೂ ಪ್ರತಿಷ್ಟಾಪಿಸಿರುವ ಬಟ್ಟೆ ಅಂಗಡಿಗಳತ್ತಲೇ. ಅಂಗಡಿಗಳಲ್ಲಿ ನಿಲ್ಲಿಸಿರುವ ಬೊಂಬೆಗಳು ನನ್ನ ಕೇಂದ್ರ ಬಿಂದುಗಳಾಗಿರುತ್ತವೆ.ವಿಧವಿಧ ಬಟ್ಟೆಗಳನ್ನು ತೊಟ್ಟು ಒಂದು ದಿವ್ಯಮೌನದಿಂದ ಸಂತೆಯಲ್ಲೂ ಸಂತನಂತೆ ಗಂಭಿರವಾಗಿ ನಿಂತಿರುತ್ತವೆ. ನಾನು ಎಷ್ಟೋ ಸಲ ಅಂಗಡಿಗಳಲ್ಲಿ ಬಟ್ಟೆಗಳಿಗಿಂತ ಹೊರಗೆ ನಿಲ್ಲಿಸಿದ ಬೊಂಬೆಗಳನ್ನೆ ವೀಕ್ಷಿಸುತ್ತಿರುತ್ತೆನೆ.ಏನನ್ನು ಹೇಳಬಯಸುತ್ತಿವೆ ಎಂಬಂತೆ .ತನಗುಡಿಸಿದ ಬಟ್ಟೆಗಳ ಇಷ್ಟಾನಿಷ್ಟವೇ..! ಮರುಕ್ಷಣವೆ ಮರುಗುತ್ತದೆ ಮನ.ಇಲ್ಲಿ ಮಾತುಬರುವ ನಮಗೆ ನಮ್ಮಿಷ್ಟದಂತೆ ಬದುಕಲಾಗದು.ಮನಮೆಚ್ಚುವದಕ್ಕಿಂತ ಜಗೆಚ್ಚುವ ಬಟ್ಟೆಗಳನ್ನೆ ಧರಿಸುವ ಅನಿವಾರ್ಯತೆ . ನಾವು ತೊಡುವ ಬಟ್ಟೆಯೂ ಲೋಕವೆ ನಿರ್ಧರಿಸುತ್ತದೆ..! .
ಇಲ್ಲಿ ಪೂರ್ಣ ಮೈಮುಚ್ಚಿಕೊಂಡರೂ ತಪ್ಪು.ಮೈತೆರೆದರೂ ತಪ್ಪೆ. ನಿನಗೂ ನಮಗೂ ವೈತ್ಯಾಸವೆನಿಲ್ಲ.ನೀನು ತೊಡುವ ಬಟ್ಟೆ ಅಂಗಡಿಯವನು ನಿರ್ಧರಿಸುತ್ತಾನೆ .ನಾವು ತೊಡುವ ಬಟ್ಟೆ ಲೋಕ ನಿರ್ಣಯಿಸುತ್ತದೆ. ಅಷ್ಟೆ ,
ಹೀಗೆ ಪ್ರತಿ ಸರಿ ಅಂಗಡಿಗೆ ಹೋದಾಗೊಮ್ಮೆ ಆ ಗೊಂಬೆಗಳೊಂದಿಗೆ ಸ್ವಗತಿಸಿಯೆ ಒಳ ಹೋಗುತ್ತೆನೆ.
ಬಟ್ಟೆಗಳೆಂದರೆ ಹಾಗೆ ತೀರದ ವ್ಯಾಮೋಹ.ಆಯ್ಕೆಗಳು ಹೆಚ್ಚಾದಂತೆ ಬಯಕೆಗಳು ಹೆಚ್ಚುತ್ತಲೆ ಹೋಗುತ್ತವೆ.ದಿನಕ್ಕೊಂದು ಹೊಸ ಫ್ಯಾಷನ್ನಿನ ಬಟ್ಟೆಗಳು , ಅದರ ಮೇಲಿನ ಸೇಲ್ ಗಳು . ಗ್ರಾಹಕರನ್ನು ಆಕರ್ಷಿಸಲು ಆಕರ್ಷಕ ಆಫರ್ ಗಳು ಹೀಗೆ ಖರಿದಿಸುವ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದರೆ ಮುಗಿಯಿತು ,ಬಿಡಿಸಿಕೊಳ್ಳಬಯಸಿದಷ್ಟು ಕಗ್ಗಂಟು.
ನಮ್ಮ ಬಾಲ್ಯ ಯೌವನವೆಲ್ಲ ಕಳೆದದ್ದು ಬಟ್ಟೆಯ ಮೇಲಿನ ಮಡಿವಂತಿಕೆಯೊಂದಿಗೆ.ನಮ್ಮಿಷ್ಟಕ್ಕಿಂತ ಹೆಚ್ಚಾಗಿ ಮನೆಯವರ ಇಷ್ಟದಮೇರೆಗೆ ತೊಟ್ಟಿದ್ದೆ ಹೆಚ್ಚು. ಲಂಗ ದಾವಣಿ , ಸೀರೆ , ಹೆಚ್ಚೆಂದರೆ ಚೂಡಿದಾರ್ ಅದರಮೆಲೊಂದು ದಪ್ಪನೆಯ ವೇಲ್.ತವರ ಮನೆಯಲ್ಲಿರುವ ವಸ್ತ್ರ ಸಂಹಿತೆ ಗಂಡನ ಮನೆಗೆ ಬಂದರೂ ತಪ್ಪುತ್ತಿರಲಿಲ್ಲ.ಮತ್ತೆ ತುಸು ಹೆಚ್ಚೆ ಎನ್ನುವಷ್ಟು ಆವರಿಸಿಕೊಳ್ಳುತಿತ್ತು.ತಲೆಯಮೇಲಿನ ಸೆರಗು ತುಸು ಜಾರಿದರೂ ಎನೋ ಅಪರಾಧ ಮಾಡಿದಂತೆ ಮನೆಯ ಗಂಡಸರ ದೃಷ್ಟಿ ಎದುರಿಸುವ ಸಂದರ್ಭ . ಅಜ್ಜಿ ಅತ್ತೆ ಅಮ್ಮಂದಿರೆಲ್ಲ ಈ ಕಟ್ಟುಪಾಡುಗಳಿಗೊಳಪಟ್ಟವರೆ. ಈಗಿನಂತೆ ಆವಾಗ ಯಾವಾಗೆಂದರಾವಾಗ ಬಟ್ಟೆ ಖರಿದಿಸುವ ಸಂಪ್ರದಾಯವಿರಲಿಲ್ಲ.ವರ್ಷಕೊಮ್ಮೆ ಅಥವಾ ಹಬ್ಬ ಹರದಿನಗಳಲ್ಲಿ ಮಾತ್ರ. ಅದಕ್ಕೆ ಆವಾಗ ಹಬ್ಬಗಳು ಉತ್ಸಾಹಭರಿತವಾಗಿದ್ದವು. ಮನೆಯ ಹೆಂಗಸರಿಗೆಲ್ಲ ಒಂದೇ ರೀತಿಯ ಸೀರೆಗಳು.ಗಂಡಸರಿಗೆ ಮತ್ತು ಮಕ್ಕಳಿಗೆ ಒಂದೇ ಬಟ್ಟೆ ಥಾನ್ ನಲ್ಲಿ ಹರಿದು
ಹೊಲಿಸಿದ ಉಡುಪುಗಳು ಯುನಿಫಾರ್ಮನಂತೆ ಕಾಣುತಿದ್ದವು. ಹರಿದ ಬಟ್ಟೆಗಳು ಮತ್ತೆ ಮತ್ತೆ ಹೊಲಿದು ಇನ್ನೂ ಹೊಲಿಯಲು ಸಾದ್ಯವೆ ಇಲ್ಲ ಎನ್ನುವಷ್ಟಾದಾಗ ಮಾತ್ರ ಅವುಗಳ ಅವಸಾನ.
ಕುವೆಂಪುಅವರ ಮದುಮಗಳಲ್ಲಿ ಬರುವ ಪಾತ್ರ ಸುಬ್ಬಣ್ಣ ಹೆಗ್ಗಡೆಯವರು ದಿನಾ ಸ್ನಾನ ಮಾಡುವದು ದಿನಾ ಬಟ್ಟೆ ಒಗೆಯುವದನ್ನು ವಿರೋಧಿಸುತಿದ್ದರು.ಬಟ್ಟೆ ಗಳು ದಿನಾಲೂ ಒಗೆದರೆ ಬೇಗ ಹರಿಯುತ್ತವೆ ಮತ್ತೆ ಕೊಳ್ಳಬೇಕಾಗುತ್ತದೆಂಬ ಆತಂಕದಿಂದ. ಅದನ್ನು ಓದುತ್ತ ಆಗಿನ ಕಾಲದ ಕಲ್ಪನೆಯಲ್ಲಿ ಕಳೆದುಹೋಗಿ ಆಗಿನ ಬಟ್ಟೆಗಳು ಈಗಿನ ಬಟ್ಟೆಗಳಿಗೆ ಹೋಲಿಸುತ್ತದೆ ಮನ. ಈಗಿನ ಬಟ್ಟೆಗಳು ಹರಿಯುವದೆ ಇಲ್ಲ, ಅಥವಾ ಹರಿಯುವವರೆಗೆ ಯಾರೂ ಉಪಯೋಗಿಸುವದಿಲ್ಲ.
ಈ. ಅಧುನಿಕ ಕಾಲದಲ್ಲಿ ಎಲ್ಲರೀತಿಯ ಬಟ್ಟೆಗಳನ್ನು ಧರಿಸಲು ಯಾರಿಗೂ ವಯಸ್ಸಿನ ಮಿತಿ ಇಲ್ಲ.(ಆಡಿಕೊಳ್ಳುವವರಿಗಂಜದೆ ಧರಿಸಿದರೆ ) ಈಗ ಚಿಕ್ಕವರು ದೊಡ್ಡವರೆಂಬ ಭೇದವಿರದೆ ಎಲ್ಲರೂ ಎಲ್ಲ ರೀತಿಯ ಬಟ್ಟೆಗಳು ಧರಿಸಬಹುದು ಇಷ್ಟು ದಿನ ಸಂಸ್ಕತಿಯ ಹೆಸರಲ್ಲಿ ಮೈತುಂಬಾ ಹೊದೆದ ಬಟ್ಟೆಗಳನ್ನು ಮಾತ್ರ ಉಟ್ಟ ನನಗೆ ಮಾಡ್ರನ್ ಬಟ್ಟೆಗಳನ್ನು ಉಡುವ ಹಂಬಲ ಹೆಚ್ಚಾಗತೊಡಗಿತು. ಮಗಳು ಉಡುವ ಅಧುನಿಕ ಬಟ್ಟೆಗಳು ನಾನು ಉಟ್ಟುಕೊಳ್ಳಲೇಬೆಕೆಂಬ ಪ್ರಬಲ ಹಂಬಲ ಒತ್ತಿಕ್ಕಲಾರದೆ ನಾವು ಕೆಲ ಗೆಳತಿಯರು ಶಾಪಿಂಗ್ ಮಾಡಲು ಉತ್ಸಾಹದಿಂದ ತೆರಳಿದೆವು.ಅಂಗಡಿಯಲ್ಲಿ ಸೀರೆಗಳತ್ತ ಕಣ್ಣೆತ್ತಿಯೂ ನೋಡದೆ ಸೀದಾ ವೆಸ್ಟರ್ನ್ ಸೈಲ್ ಬಟ್ಟೆಗಳತ್ತ ನುಗ್ಗಿದೆವು. ಅವೆಲ್ಲ ಮೊಣಕಾಲಿನ ವರೆಗೆ ಮೈಗಂಟಿಕೊಳ್ಳುವ ಬಟ್ಟೆಗಳು. ಒಮ್ಮೆಯೂ ತೊಟ್ಟುಕೊಳ್ಳದ ಕಾರಣ ನಮ್ಮ ಅಳತೆಯೂ ಗೊತ್ತಿರಲಿಲ್ಲ.ಅಲ್ಲಿದ್ದ ಸೇಲ್ಸಗರ್ಲ ಅಂದಾಜಿನ ಮೇಲೆ ನಮ್ಮ ನಮ್ಮ ಅಳತೆ ಬಟ್ಟೆ ಕೊಟ್ಟು ಟ್ರಯಲ್ ಮಾಡಲು ಹೇಳಿದಳು.ಎಲ್ಲರೂ ಒಂದೆರಡು ಡ್ರೆಸ್ ನೊಂದಿಗೆ ಟ್ರಯಲ್ ರೂಮ್ ಸೇರಿದೆವು. ಅಹಾ..ಹೋಸ ತರ ಬಟ್ಟೆ ಉಟ್ಟುಕೊಂಡು ಸುತ್ತಲೂ ಇರುವ ಕನ್ಡಡಿಗಳಲ್ಲಿ ನಮ್ಮನ್ನು ನಾವು ನೋಡಿಕೊಂಡು ಸಂಭ್ರಮಿಸಿದ್ದಾಯಿತು. ಆ ಉಡುಪುಗಳಲ್ಲಿ ನಾವೆಲ್ಲ ಬಹಳ ಚಿಕ್ಕವರಾಗಿ ಕಾಣುತಿದ್ದೆವೆಂದು ಸೇಲ್ಸಗರ್ಲ ಮೆಚ್ವುಗೆ ಸೂಚಿಸಿದ್ದರಿಂದ , ಇನ್ನೂ ಮೇಲೆ ಸೀರೆ ಉಟ್ಟುಕೊಳ್ಳುವದೇ ಬೇಡ ಕೇವಲ ಮಾಡರ್ನ್ ಬಟ್ಟೆಗಳನ್ನು ಮಾತ್ರ ಉಟ್ಟುಕೊಳ್ಳುವದೆಂದು ನಿರ್ದರಿಸಿದೆವು, ನನ್ನ ದೇಹ ನನ್ನ ಹಕ್ಕು , ನನ್ನ ಇಷ್ಟ , ಇತ್ಯಾದಿ ಮಾತುಗಳೆಲ್ಲ ಮುಗಿದು ಖರಿದಿಸಲು ನಿಶ್ಚಯಿಸಿದೆವು. ( ಈ ಮಾತುಗಳೆಲ್ಲ ನಾಲ್ಕುಜನ ನಾಲ್ಕು ಗೋಡೆಗಳ ಮಧ್ಯೆ ಆಡಿದ್ದು.ತೊಟ್ಟುಕೊಂಡಾದ ಮೇಲೆ ಹೊರಗಿನವರ ಪ್ರತಿಕ್ರಿಯೆ ,ನಮ್ಮ ಮನಸ್ಥಿತಿಯ ಪರಿಣಾಮದ ಅರಿವಿರದೆ ). ಎಲ್ಲರೂ ಟ್ರಾಯಲ್ ಮಾಡಿ ನಂತರ ಉಟ್ಟುಕೊಂಡ ಬಟ್ಟೆ ಕಳಚುವಾಗ ಪ್ರಯಾಸ ಪಡಬೇಕಾಯಿತು. ಮೈಗಂಟುವ ಬಟ್ಟೆ ಹಾಕಿಕೊಳ್ಳುವ ವ್ಯಾಮೋಹದಿಂದ ನಾವೆಲ್ಲ ನಮ್ಮ ಸೈಜಿಗಿಂತ ತುಸು ಕಡಿಮೆ ಸೈಜಿನ ಬಟ್ಟೆಗಳನ್ನೆ ಆಯ್ದುಕೊಂಡದ್ದು.ಹೇಗೊ ತಿಣುಕಾಗಿ ಹರಿಯದಂತೆ ಕಳಚಬೇಕಾದರೆ ಉಸ್ಸಪ್ಪಾ ಎನ್ನುವಂತಾಗಿತ್ತು.ಅಷ್ಟರಲ್ಲಿ ಗೆಳತಿಯೊಬ್ಬಳು ಜೋರಾದ ದ್ವನಿಯಲ್ಲಿ ನಮ್ಮನ್ನು ಕರೆಯತೊಡಗಿದಳು. ಗಾಬರಿಗೊಂಡು ಹೋದಾಗ ಉಡುಪು ಅವಳ ಎದೆಯ ಭಾಗಕ್ಕೆ ಸಿಕ್ಕಿಹಾಕಿಕೊಂಡಿತ್ತು . ತುಸು ಸ್ಥೂಲಕಾಯದ ಅವಳಿಗೆ ಆ ಉಡುಪು ಬಹಳ ಬಿಗಿಯಾಗಿತ್ತು. ಹಾಕಿಕೊಳ್ಳುವಾಗ ಹೇಗೊ ಹಾಕಿಕೊಂಡಾಗಿತ್ತು.ತೆಗೆಯುವಾಗ ದೇಹ ಬಿಟ್ಟು ಮೇಲೇಳಲೆ ಇಲ್ಲ. ಅವಳ ಎರಡೂ ಕೈ ಮೇಲೆತ್ತಿ ಆ ಕಡೆ ಒಬ್ಬರು ಈ ಕಡೆಗೊಬ್ಬರು ಉಡುಪನ್ನು ಮೇಲ್ಮುಖವಾಗಿ ಎಳೆದಷ್ಷು ಸ್ವಲ್ಪ ಮೇಲೆ ಬಂದು ಎದೆಯ ಭಾಗದಲ್ಲಿ ನಿಂತುಬಿಡತೊಡಗಿತು. ಸೇಲ್ಸಗರ್ಲ ಸಹಾಯ ಪಡೆದೆವು.ಅವಳು ಪ್ರಯತ್ನಿಸಿ ಸೋತಳು.ಇನ್ನೂ ಸ್ವಲ್ಪ ಹೆಚ್ವಿಗೆ ಬಲ ಪ್ರಯೋಗಿಸಿದರೆ ಹರಿದುಹೋಗುವ ಭಯ ಒಂದೆಡೆ. ಕೈಎತ್ತಿ ಎದುಸಿರುಬಿಡುತ್ತ ಶರಣಾಗತಿಯ ಸ್ಥಿತಿ ಯಲ್ಲಿ ನಿಂತಿರುವ ಗೆಳತಿ ಒಂದೆಡೆ. ಸಿಕ್ಕಿಕೊಂಡ ಉಡುಪಿನೊಳಗಿಂದ ಉಬ್ಬುಸ ಬಿಡತೊಡಗಿದಳು. ಎನಾದರಾಗಲೆಂದು ಆ ಕಡೆಯಿಂದ ಈ ಕಡೆಯಿಂದ ಒಬ್ಬೊಬ್ಬರು ಉಡುಪಿನ ಅಂಚನ್ನು ಹಿಡಿದು ಎತ್ತತೊಡಗಿದೆವು.ಚಟ್ ಚಟ್ ಎಂದು ಇಕ್ಕೆಲಗಳಲ್ಲೂ ಬಿಚ್ವಿಕೊಂಡ ಉಡುಪು ಸರಾಗವಾಗಿ ತಲೆಯಿಂದ ಹೊರಬಂತು.ನಿಟ್ಟುಸಿರು ಬಿಡುತ್ತ ಇಷ್ಟೋತ್ತು ಹಳಿದ ಸೀರೆಗೆ ಮತ್ತೆ ಹೊಗಳಿ ಅದನ್ನೆ ಖರಿದಿಸಲು ನಿರ್ಧರಿಸಿದೆವು. ಆದರೆ ಅಂಗಡಿಯವ ಹರಿದ ಡ್ರೇಸ್ ವಾಪಸ್ಸು ತೆಗೆದುಕೊಳ್ಳಲು ನಿರಾಕರಿಸಿದಾಗ ಹರಿದ ಉಡುಪು ಖರಿದಿಸುವ ಅನಿವಾರ್ಯ ತೆಗೆ ಮರುಗಿದೆವು. ಮಾಡರ್ನ್ ಉಡುಪಿನ ಮೋಹ ಹೀಗೆ ಪೇಚಾಟಕ್ಕಿಡು ಮಾಡಿತ್ತು.
ಆದರೂ ಮಾಡರ್ನ್ ಬಟ್ಟೆಗಳ ಬಗೆಗಿರುವ ನನ್ನ ವ್ಯಾಮೋಹ ಕಡಿಮೆಯಾಗಲೇ ಇಲ್ಲ. ಬಟ್ಟೆಗಳು ಸಂದರ್ಭ ಕ್ಕೆ ತಕ್ಕಂತೆ ಉಟ್ಟುಕೊಳ್ಳುವದು ಉತ್ತಮ.ಒಮ್ಮೆ ಸಮುದ್ರವಿರುವ ಪ್ರದೇಶದಲ್ಲಿ ಪ್ರವಾಸಕ್ಕೆ ಹೋದಾಗ ನಿರಿನಲ್ಲಿ ಆಡುವಾಗಲೆಲ್ಲ ನಾವು ಹಾಕಿದ ಬಟ್ಟೆಯಿಂದ ಕಿರಿಕಿರಿ ಅನುಭವಿಸಬೇಕಾಯಿತು. ಪೂರ್ಣವಾಗಿ ಕಾಲುಮುಚ್ವುವಂತೆ ತೊಟ್ಟುಕೊಂಡ ಉಡುಪು ನಿರಿನಲ್ಲಿ ಆಟವಾಡಿ ಹೊರಗೆ ಬಂದಾಗ ಒಳಗೆಲ್ಲ ಮರಳು ತುಂಬಿ ನಡೆದಾಡಲಾಗದೆ ಇರುಸುಮುರುಸಾಯಿತು. ನೀರಿನಲ್ಲಿ ಆಟವಾಡಲು ಬೀಚ್ ನ ಮೇಲೆ ಓಡಾಡಲು ಹಾಕಿಕೊಳ್ಳಲು ಹಗುರವಾದ ಉಡುಪೆ ಇರಬೇಕು. ದೇಹದ ಅಂಗಾಂಗಗಳು ಇತರರಿಗೆ ಕಾಣುತ್ತವೆಂದು ಪೂರ್ಣ ದೇಹಮುಚ್ಚುವಂತ ಬಟ್ಟೆ ತೊಟ್ಟು ನೀರಲ್ಲಿ ಆಡಲಾಗುತ್ತದೆಯೇ..
ಸಮುದ್ರದಲ್ಲಿ ಎಲ್ಲರೂ ಅಲೆಗಳೊಂದಿಗೆ ಆಡವಾಡುವಾಗ ಒಬ್ಬ ಮಹಿಳೆಯ ಸೀರೆ ಅಲೆಗಳ ಹೊಡೆತಕ್ಕೆ ಸಿಕ್ಕು ಕೊಚ್ಚಿಹೋಯಿತು.ಮೈಕಾಣುವದೆಂದು ಮಡಿವಂತಿಕೆಯಿಂದ ವರ್ತಿಸಿದರೆ ಹೀಗೂ ಫಜೀತಿ ಅನುಭವಿಸಬೇಕಾಗುತ್ತದೆ.
ಮಾಡರ್ನ್ ಬಟ್ಟೆಗಳ ಮೇಲೆ ಏಕಿಷ್ಷು ಮಡಿವಂತಿಕೆ.ಸ್ವಲ್ಪ ಕೈಕಾಲು ಎದೆ ಕಂಡರೆ ನಮ್ಮ ಸಂಸ್ಕತಿಯೆ ನಾಶವಾಗುತ್ತದೆಯೇ. ! ವಸ್ತ್ರ ಸಂಹಿತೆ ಒತ್ತಾಯವಾಗಿ ಹೇರುವದನ್ನು ಸಹಿಸಲಾಗದು. ಹೆಣ್ಣನ್ನು ಎಲ್ಲರೂ ನಿಯಂತ್ರಿಸಲು ಪ್ರಯತ್ನಿಸುತ್ತಾರೆ.ಮನೆಯವರಿಂದ ಹಿಡಿದು ಸಮಾಜದವರೆ ಎಲ್ಲರೂ . ಹೀಗೆ ಇರು ,ಇದೇ ಉಟ್ಟುಕೊ, ಇದೆ ಹಾಕಿಕೋ , ಇವೆಲ್ಲ ಕೇಳುತ್ತ ಹಾಗೆ ಪಾಲಿಸುತ್ತ ತಾನೂ ಮತ್ತೊಬ್ಬರಿಗೆ ಹಾಗೆ ಆದೇಶಿಸುತ್ತ ಬದುಕುತ್ತಾಳೆ ಹೆಣ್ಣು . ಗ್ಲ್ಯಾಮರಾಗಿರುವ ಬಟ್ಟೆ ತೊಟ್ಟುಕೊಂಡರೆ ಗಂಡಸಿನ ಭಾವನೆ ಕೆರಳುತ್ತವೆ ಎನ್ನುವಂತಹ ನಮ್ಮ ತಲೆಯೊಳಗಿನ ಆಲೋಚನೆ ಹೋಗಲಾಡಿಸದ ಹೊರತು ಹೆಣ್ಣುಮಕ್ಕಳ ವಸ್ತ ಸಂಹಿತೆ ಹೆಚ್ಚಾಗುತ್ತಲೆ ಹೋಗುತ್ತದೆ.
ನನ್ನ ಗೆಳತಿಯೊಬ್ಬಳು ಸದಾ ಬುರ್ಖಾ ಧರಿಸಿಯೆ ಕಾಲೇಜಿಗೆ ಬರುತಿದ್ದಳು ಅದು ಅವಳಿಗಿಷ್ಟವಿಲ್ಲದಿದ್ದರೂ ಹಾಕಿಕೊಳ್ಳಬೇಕಾಗುತಿತ್ತು.ಒಳಗೆ ಏಷ್ಟೆ ಚನ್ನಾದ ಡ್ರೇಸ್ ಅಥವ ಸೀರೆ ಇದ್ದರೂ ಅದನ್ನು ಮರೆಮಾಚಿ ಮೇಲೋಂದು ಹೊದಿಕೆ ಕಾಕಿಕೊಳ್ಳುವದು ಅವಳಿಗೂ ಅಸಮಾಧಾನ ಮೂಡಿಸುತಿತ್ತು.ಒಮ್ಮೆ ನನಗೂ ಬುರ್ಖಾ ಧರಿಸಬೆಕೆಂದು ಆಸೆಯಾಯಿತು. ಅವಳದನ್ನು ತೆಗೆದು ಹಾಕಿಕೊಂಡೆ.ಬರಿ ಎರಡು ಕಣ್ಣು ಮಾತ್ರ ತೆರೆದಿರುವ ನಿಲುವಂಗಿಯ ರೀತಿಯ ದಿರಿಸು ಒಳಗೆ ಅತಿ ಸೆಕೆಯ ಅನುಭವ ನೀಡುತಿತ್ತು.
ಅದನ್ನು ಧರಿಸಿ ಒಂದು ಇಡೀದಿನವೆಲ್ಲ ಓಡಾಡಿದರೂ ನಾಲ್ಕು ದಿಕ್ಕಿನಿಂದ ಯಾರ ಚುಚ್ಚುವ ದೃಷ್ಟಿ ಅರಿವಾಗಲಿಲ್ಲ. ಹೊರಗಿದ್ದ ಅಷ್ಟು ಹೊತ್ತು ಒಂದು ಸುರಕ್ಷತೆಯ ಭಾವ ಮೂಡಿಸಿತ್ತು ಆ ನಿಲುವಂಗಿ. ಈಗ ನಾವು ಹೆಣ್ಣುಮಕ್ಕಳು ಹೊರಗೆ ಬಿಸಿಲಲ್ಲಿ ಹೋಗುವಾಗ ಸೂರ್ಯನ ಕಿರಣಗಳಿಗೆ ಮೈ ಕಪ್ಪಾಗುವದೆಂದು ಮುಖ ಪೂರ್ತಿ ಮುಚ್ಚಿಕೊಂಡು ಓಡಾಡುವದು ಮತ್ತು ಅವರು ಬುರ್ಖಾ ಧರಿಸಿ ಓಡಾಡುವದು ಇದರಲ್ಲಿ ಹೆಚ್ವಿನ ವೈತ್ಯಾಸವೇನಿದೆ..!
ಆದರೂ ನಾವು ಉಟ್ಟುಕೊಳ್ಳುವ ವಸ್ತ್ರಗಳು ನಮ್ಮ ಆಯ್ಕೆ ಯಾಗಿರಬೇಕೆ ವಿಃನ ಮತ್ತೊಬ್ಬರ ಒತ್ತಾಯದ ಹೇರಿಕೆಯಾಗಿರಬಾರದು.