ಪುಸ್ತಕ ಸಂಗಾತಿ
ನುಡಿಚಿತ್ರ ( ಅಂಕಣ ಬರಹಗಳು)
ಪುಸ್ತಕ :- ನುಡಿಚಿತ್ರ ( ಅಂಕಣ ಬರಹಗಳು)
ಲೇಖಕರು:- ಡಾ.ಎಚ್.ಎಸ್.ಸತ್ಯನಾರಾಯಣ
ಪ್ರಕಾಶಕರು :- ಕಾಚಕ್ಕಿ ಪ್ರಕಾಶನ, ಕುಣಿಗಲ್ ೫೭೨೧೩೦, ತುಮಕೂರು ಜಿಲ್ಲೆ.
ಸಾಹಿತಿಗಳ ಜನ್ಮದಿನದ ನೆಪವಾಗಿಸಿಕೊಂಡು, ಸಾಹಿತಿಗಳ ಸಾಹಿತ್ಯ ಸೇವೆಗೆ ಅಥವಾ ಮಹಾನ್ /ವಿಶೇಷ ಕೃತಿಗೆ ಪ್ರಶಸ್ತಿ- ಪುರಸ್ಕಾರ ಸಂದ ಸಂದರ್ಭವನ್ನೇ ನೆಪವಾಗಿಸಿಕೊಂಡು ಸಾಹಿತಿಯ ಸಾಹಿತ್ಯದನುಭವ ಲೋಕಕ್ಕೆ ನಮ್ಮನ್ನು ಕರೆದೊಯ್ಯೊತ್ತಾರೆ ಡಾ.ಎಚ್.ಎಸ್. ಸತ್ಯನಾರಾಯಣರವರು.ಸ್ವತ: ಸಾಹಿತಿಯೂ, ಸಾಹಿತ್ಯದ ಬೊಧಕರೂ, ವಿಮರ್ಶಕರೂ ಆಗಿದ್ದರೂ ಪ್ರತಿ ಕವಿ- ಲೇಖಕರ ಬಗೆಗೆ ಬರೆಯುವಾಗ ಮಗು ಮನಸ್ಸಿನ ಮುಗ್ಧತೆಯೊಂದಿಗೆ ಬರೆಯುವುದು ಇವರ ವಿಶೇಷತೆ. ಸಾಹಿತಿಗಳೊಂದಿಗೆ ಒಡನಾಟ, ಮಾತುಕತೆ, ರಸಮಯ ಸಂದರ್ಭಗಳನ್ನು ನೆನಪಿಸಿಕೊಳ್ಳುವಾಗ ಮಗುವೊಂದು ತಾನು ನೋಡಿದ ಜಾತ್ರೆ /ಹಬ್ಬದ/ ಮದುವೆಯ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಸಂಭ್ರಮಪಡುವಂತೆ ಸಂಭ್ರಮಿಸಿ ಕೊಂಡು ಬರೆಯುತ್ತಾರೆ ಜೊತೆಗೆ ಓದುಗರಿಗೂ ಆ ಸಂಭ್ರಮವನ್ನು ಲೇಪಿಸುತ್ತಾರೆ.
ಸಾಹಿತಿಗಳ ಪರಿಚಯ ಮಾಡಿಸುತ್ತಾ, ಕನ್ನಡ ನಾಡು-ನುಡಿಗೆ ಅವರ ಸೇವೆಯ ಪ್ರಮಾಣ ಎಂತಹದು ಎಂಬುದನ್ನು ತಿಳಿಸಿಕೊಡುತ್ತಾರೆ. ಪುಸ್ತಕಗಳ ಪರಿಚಯ ಮಾಡಿಸುತ್ತಾ, ಅದರೊಳಗಿನ ಸೊಬಗನ್ನು ವರ್ಣಿಸುತ್ತಿದ್ದರೆ ಒಂದು ಕ್ಷಣ ಆ ಪುಸ್ತಕ ಓದಬೇಕೆಂಬ ಹಂಬಲ ಓದುಗರಲ್ಲಿ ಮೂಡುತ್ತದೆ. ಮಾನವ ಬದುಕಿನಲ್ಲಿ ಸಾಹಿತ್ಯದ ಪಾತ್ರ ಏನು ? ಎಂಬ ಪ್ರಶ್ನೆಗೆ ಕೃತಿಯಲ್ಲಿ ಅಲ್ಲಲ್ಲಿ ಉತ್ತರವನ್ನೂ ತಿಳಿಸಿಕೊಡುತ್ತಾರೆ.
ಸಾಹಿತಿಗಳೊಂದಿಗಿನ ಮಾತುಕತೆಯಲ್ಲಿ ವಿದ್ಯಾರ್ಥಿಗಳಂತೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಲೇಖಕರು ಕೆಲವೊಮ್ಮೆ ವಿದ್ಯಾರ್ಥಿ ಸಹಜವೆಂಬ ಪ್ರಶ್ನೆಗಳನ್ನು ಕೇಳಿ ಮರುಕ್ಷಣವೇ ಈ ಪ್ರಶ್ನೆ ಕೇಳಬಾರದಾಗಿತ್ತೇನೋ ಎಂದೆಣಿಸುವ ವೇಳೆಗೆ ಎದುರಿಗಿದ್ದ ಸಾಹಿತಿಯು ನೀ ನೀಡಿದ ಉತ್ತರ ಕೇಳಿ ನಿರಾಳವಾಗುತ್ತಾರೆ ಜೊತೆಗೆ ಪುನೀತರಾಗುತ್ತಾರೆ ಕೆಲವೊಮ್ಮೆ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕದಿದ್ದಾಗ ಅದೇ ಉತ್ಸಾಹದಿಂದ ಮುಂದಿನ ಪ್ರಶ್ನೆ ಕೇಳಲುದ್ಯುಕ್ತರಾಗುತ್ತಾರೆ. ಈ ಪ್ರಶ್ನೋತ್ತರದ ಜುಗಲ್ಬಂದಿಯಿಂದ ಕೃತಕೃತ್ಯರಾಗುವುದು ಸಾಹಿತ್ಯದ ಸಹೃದಯ ಓದುಗರು. ಸಾಹಿತಿಯ ಹಲವು ಬರಹಗಳಲ್ಲಿ ಕಾಣದ ಹೊಸಲೋಕವೊಂದು ಈ ರೂಪದಲ್ಲಿ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.
ಲೇಖಕರು ತಮ್ಮ ಬಾಲ್ಯ ಕಾಲದಲ್ಲಿ ಸಾಹಿತಿಗಳ ಬಗೆಗೆ ಕಟ್ಟಿಕೊಂಡ ಕಲ್ಪನೆಗಳು , ವಿದ್ಯಾಭ್ಯಾಸದ ಸಂದರ್ಭದಲ್ಲಿ ಅದೇ ಸಾಹಿತಿಗಳ ಕೃತಿಗಳ ಮರುಓದಿನ ಸಂದರ್ಭ ಮತ್ತು ಮೈಸೂರಿನ ಗುರುಗಳ ಮುಖೇನ ಕಂಡ ಸಾಹಿತಿಗಳ ಬದುಕು ಬರಹ, ಆ ಬಳಿಕ ಸ್ವತಂತ್ರವಾಗಿ ಅದೇ ಸಾಹಿತಿಗಳ ಬದುಕು ಬರಹ ಕಂಡಾಗ ಕಾಣಬರುವ ಅನುಭವಗಳನ್ನು ತುಂಬಾ ನವಿರಾಗಿ ದಾಖಲಿಸುತ್ತಾರೆ.
“ ನುಡಿಚಿತ್ರ” ಕೃತಿಯನ್ನು ಪೂರ್ಣವಾಗಿ ಓದಿದ ಬಳಿಕ ಲೇಖಕರು ಜಯಂತ ಕಾಯ್ಕಿಣಿಯವರ ಕುರಿತು ಹೇಳುವ ಮಾತುಗಳನ್ನೇ ಇವರಿಗೂ ಆರೋಪಿಸಬಹುದು. ಆ ಮಾತು “ ಕಾವ್ಯಮಯವಾದ ಲಯ ಇವರ ಗದ್ಯದ ಮುಖ್ಯ ಗುಣ “.
ಇಲ್ಲಿನ ಪ್ರತಿಯೊಬ್ಬ ಸಾಹಿತಿಯ ಕುರಿತಾಗಿ, ಅವರ ಬದುಕು ಬರಹದ ಕುರಿತಾಗಿ ಒಂದು ಸ್ಪಷ್ಟ ಚಿತ್ರಣ ಕಲ್ಪಿಸಿಕೊಡುವ ಮೂಲಕ ಒಬ್ಬ ವಿಮರ್ಶಕರಾಗಿ ಸಕಾರಾತ್ಮಕ ವಾತಾವರಣ ಮೂಡಿಸುತ್ತಾರೆ. ಪ್ರತಿ ಲೇಖಕರ ಬಗ್ಗೆ ತಮ್ಮದೇ ಆದ ಅನಿಸಿಕೆಯನ್ನು ನಿಖರವಾಗಿ ಮತ್ತು ವಿಭಿನ್ನವಾಗಿ ಮಂಡಿಸುತ್ತಾರೆ. ಅಂತಹ ಸಾಲುಗಳು ——–
“ಕಿವಿಗೊಟ್ಟು ಆಲಿಸಿದರೆ ಗರಿಕೆ ಹುಲ್ಲಿನ ಉಸಿರಾಟಕ್ಕೂ ಅರ್ಥ ಹೇಳಿ ಬಿಡಬಲ್ಲ ಕಥೆಗಾರ ಜಯಂತ ಕಾಯ್ಕಿಣಿ “ ( ಜಯಂತ ಕಾಯ್ಕಿಣಿ ಬಗ್ಗೆ )
“ಅವರು ಮಾತು ಮಾತು ಮಾತಿನವರು, ಎಷ್ಟು ಬೇಕಾದರೂ ಮಾತಾಡುತ್ತಿದ್ದರು. ಆದರೆ ಬೇಕು ಎನಿಸುವ ಮಾತುಗಳು, ಬೇಡದ ಮಾತುಗಳನ್ನು ಆಡುವವರ ಮಧ್ಯೆ ಇವರ ಮಾತುಗಳನ್ನು ಕೇಳುತ್ತಾ ಇರಬೇಕೆನಿಸುತ್ತಿತ್ತು. ಇಷ್ಟು ದಿನ ಯಾಕೆ ಇವರನ್ನು ಭೇಟಿ ಮಾಡಲಿಲ್ಲವಲ್ಲ ಎಂಬ ಪ್ರಶ್ನೆ ಮತ್ತು ಕೊರಗು ಎರಡೂ ಅವರನ್ನು ನೋಡಿ ಬಂದಾಗಿನಿಂದಲೂ ಮನದಲ್ಲಿ ಹಾಗೇ ಉಳಿದು ಬಿಟ್ಟಿದೆ .” ( ಎಂ.ಕೆ.ಇಂದಿರಾರವರ ಕುರಿತು )
ಪುರಾಣದಿಂದ, ಇತಿಹಾಸದಿಂದ ಬೇಕಾದಷ್ಟು ವಸ್ತುಗಳನ್ನು ಆಯ್ದು ಕವಿತೆ ಬರೆಯುವುದು ನಿಜವಾದರೂ, ಅವು ಸದ್ಯದ ತುರ್ತನ್ನು ಒಂದು ಸಲ ಮೂಲ ಮಾದರಿಯಲ್ಲಿ ತೋಡಿಕೊಳ್ಳುವ ಬಗೆ ಅಭ್ಯಾಸ ಯೋಗ್ಯವಾಗಿದೆ.” ( ಸು.ರಂ.ಎಕ್ಕುಂಡಿಯವರ ಕುರಿತು)
“ಯಾವಾಗಲಾದರೂ ಅವರ ಕೋಣೆಗೆ ಹೋದರೆ ಅಲ್ಲಿನ ಗಾಂಭೀರ್ಯಕ್ಕೆ ನಡುಕ ಹುಟ್ಟುತಿತ್ತು. ಅವರೇನೂ ಹೆದುರಿಸುತ್ತಿರಲಿಲ್ಲವಾದರೂ ಅವರ ವರ್ಚಸ್ಸು ಹಾಗೆ ಇರುತ್ತಿತ್ತು . ನೇರವಾಗಿ ವಿಷಯ ಪ್ರಸ್ತಾಪಿಸಿ, ಬಂದವರನ್ನು ಸೌಜನ್ಯದಿಂದ ಮಾತನಾಡಿಸಿ, ಸಾಗಹಾಕಿದವರೆ ಓದಿನಲ್ಲಿ ಮುಳುಗಿ ಹೋಗುತ್ತಿದ್ದರು. ನನಗೆ ಯಾವಾಗಲೂ ಇವರು ಆವರಣ ಕಟ್ಟಿಕೊಂಡು ಹಠ ಯೋಗಿಯಂತೆ ಒಂಟಿಯಾಗಿ ಇರುತ್ತಾರಲ್ಲ ಎನಿಸುತ್ತಿತ್ತು.” ( ಹಾ.ಮಾ.ನಾ.ಕುರಿತು)
“ ನಮ್ಮ ಸಮಕಾಲೀನ ಬರಹಗಾರರ ನಡುವೆ ಮೂಡ್ನಾಕೂಡು ಚಿನ್ನಸ್ವಾಮಿ ಭಿನ್ನವಾಗಿ ನಿಲ್ಲುವುದು ಅವರ ಸಾಹಿತ್ಯ ನಿರ್ಮಿತಿಯ ಆಂತರ್ಯದಲ್ಲಿರುವ ಮಾನವೀಯ ಮೌಲ್ಯಗಳ ಸೆಲೆಯಿಂದ. ಅವರು ಪ್ರಕಟಿಸಿರುವ ಮನುಷ್ಯ ಪರ ನಿಲುವುಗಳು ಅನನ್ಯವಾದ ಜೀವ ಕೇಂದ್ರಿತ ನಿರ್ಮಿತಿಯ ಆಶಯವನ್ನು ಒಳಗೊಂಡಿರುವ ಅವರ ಕಾವ್ಯ ನೊಂದವರ ನೋವಿಗೆ ಕಣ್ಣಾಗಿದೆ.” ( ಮೂಡ್ನಾಕೂಡು ಚಿನ್ನಸ್ವಾಮಿ ಕುರಿತು)
ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವು ಬರಹಗಾರರ ಬರಹ/ಕಥೆಗಳನ್ನು ಪಠ್ಯಪುಸ್ತಕಕ್ಕೆ ಆಯ್ಕೆ ಮಾಡುವ ಸಲುವಾಗಿ, ಕೆಲವು ಲೇಖಕರ ಅಭಿನಂದನಾ ಗ್ರಂಥ ಸಂಪಾದಕರಾಗಿ ಹಲವು ಹಿರಿಯ ಸಾಹಿತಿಗಳ ಸಾಮಿಪ್ಯ ಒಡನಾಟ ಗಳಿಸಿದವರು ಈ ಕೃತಿಯ ಲೇಖಕರು . ಸಾಮೀಪ್ಯ- ಒಡನಾಟ ಗಳಿಸಿದವರು. ಇಂತಹ ಸಂದರ್ಭಗಳಲ್ಲಿ ಸಾಹಿತಿಗಳ ಮಾತುಕತೆಯ ಚಿತ್ರಣಗಳನ್ನು ಕಟ್ಟಿಕೊಡುವ ಸೊಗಸೇ ಬಲು ಅಂದ.
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಎಂಬ ಕುವೆಂಪುರವರ ನುಡಿಮುತ್ತಿನಂತೆ ತಮ್ಮ ಅರಿವಿನ ವ್ಯಾಪ್ತಿಯೊಳಗೆ , ಓದಿನ ವಿಸ್ತಾರದಲ್ಲಿ ಕಂಡು ಬರುವ ಹಿರಿಯ ಸಾಹಿತಿಗಳನ್ನು ಯಾವ ಕಕ್ಕುಲಾತಿಯಿಂದ, ಗೌರವದಿಂದ, ಅಭಿಮಾನದಿಂದ ಪರಿಚಯ ಮಾಡಿಕೊಡುತ್ತಾರೋ ಅದೇ ಪ್ರಮಾಣದ ಪ್ರೀತಿ, ಗೌರವ, ಅಭಿಮಾನ ತಮ್ಮ ಸಮಕಾಲೀನ ಬರಹಗಾರರ ಬಗೆಗೂ ಮುಕ್ತಕಂಠದಿಂದ ವ್ಯಕ್ತಪಡಿಸುತ್ತಾರೆ ಲೇಖಕರು.
ಕನ್ನಡ ಪರಂಪರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ತಮ್ಮದೇ ಆದ ವಿಶೇಷ ಓದುಗ ವಲಯವನ್ನು ಸೃಷ್ಟಿಸಿಕೊಂಡ ಕೆಲವು ಸಾಹಿತಿಗಳ ಕುರಿತು ಅಪಾರ ಪ್ರೀತ್ಯಾದರಗಳಿಂದ ವಿಚಾರ ಮಂಡಿಸುವ ಲೇಖಕರು ಅಷ್ಟೇ ಪ್ರಾಮಾಣಿಕವಾಗಿ ಆ ಸಾಹಿತಿಗಳು/ ಬರಹಗಾರರು ತಮ್ಮ ಫೋಕಸ್ ಸ್ವಲ್ಪ ಬದಲಿಸಿಕೊಂಡಿದ್ದರೂ ಕನ್ನಡ ಸಾಹಿತ್ಯಕ್ಕೆ ಆಗಬಹುದಾಗಿದ್ದ ಅಪಾರ ಲಾಭದ ಕಡೆಯೂ ಓದುಗರ ಗಮನವನ್ನು ಸೆಳೆಯುತ್ತಾರೆ. ಕೆಲವು ಸಾಹಿತಿಗಳ ನಡುವೆ ಇದ್ದ ವೈಮನಸುಗಳ ವಿಚಾರಗಳನ್ನು ಸೂಕ್ಷ್ಮವಾಗಿ ದಾಖಲಿಸಿ ಲೇಖನದ ಉದ್ದೇಶಕ್ಕೆ ಭಂಗ ಬಾರದಂತೆ ಮುಂದುವರೆಯುತ್ತಾರೆ.
ಪ್ರಬುದ್ಧ ಕರ್ನಾಟಕ, ಸಂಚಯ, ಲಂಕೇಶ್ ಪತ್ರಿಕೆಗಳು ನಮ್ಮ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಲೇ ಬೇಕಾದಸಾಸಾಹಿತ್ಯಿಕ ಪತ್ರಿಕೆಗಳು. ಈ ಪತ್ರಿಕೆಗಳ ಆರಂಭ, ಬೆಳವಣಿಗೆಯನ್ನು ನಾಡಿಗೆ ಪರಿಚಯಿಸುತ್ತಾ ಸಾಹಿತ್ಯ ಪತ್ರಿಕೆಗಳ ಸಮಕಾಲೀನತೆಯ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ಈ ಸಾಲಿನಲ್ಲಿ ಟಿ.ಎಸ್. ಗೊರವರ ಹೊರತರುತ್ತಿರುವ “ಅಕ್ಷರ ಸಂಗಾತ” ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಹಿರಿಮೆಯನ್ನು ನಾವು ಇಂದು ಗಮನಿಸಲೇಬೇಕು.
ಕೊನೆಯ ಎರಡು ಲೇಖನಗಳು ನಮ್ಮ ಲೇಖಕರ ಅಮ್ಮ, ಅಜ್ಜಿಯ ಕುರಿತಾಗಿದೆ. ಈ ಲೇಖನಗಳು ಲೇಖಕರ ಆತ್ಮ ಕಥಾನಕವು ಮುಂದೊಂದು ದಿನ ಬಂದರೆ ಅದು ಎಷ್ಟು ರಸಮಯವಾಗಿರಬಹುದು ಎಂಬುದರ ದ್ಯೋತಕ. ಅಮ್ಮ ಅಜ್ಜಿಯ ಜೀವನದ ಪ್ರೀತಿಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಬಾಲ್ಯದಲ್ಲಿ ಮುಳುಗಿ ಹೋಗುವ ಲೇಖಕರು ಮಲೆನಾಡಿನ ಕೊಪ್ಪ , ಚಿಕ್ಕಮಗಳೂರಿನ ನಗರ ಭಾಗದ ಪ್ರಾದೇಶಿಕತೆಯ ವಿವರಗಳನ್ನು ಅದಮ್ಯ ಉತ್ಸಾಹ ಪ್ರೀತಿಗಳಿಂದ ಮಂಡಿಸುತ್ತಾರೆ. ಅಜ್ಜಿಯ ಸ್ವಾವಲಂಬಿ ಬದುಕು, ಅಮ್ಮನ ಪ್ರಾಮಾಣಿಕ ನಡೆ ನುಡಿ ಲೇಖಕರನ್ನು ಇಲ್ಲಿಯವರೆಗೆ ಕರೆ ತಂದಿರುವುದರ ಕುರುಹು ಈ ಲೇಖನಗಳಲ್ಲಿ ಕಾಣಬರುತ್ತದೆ.
ಈ ಇಡೀ ಕೃತಿಯನ್ನು ಓದಿದ ಬಳಿಕ ನಾವು ಓದುಗರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ ಅನುಭವವಾಗುತ್ತದೆ. ಏಕೆಂದರೆ ಇಲ್ಲಿನ ಬರಹಗಾರರು ಕರ್ನಾಟಕದ ವಿವಿಧ ಭಾಗಗಳಿಂದ ಮೂಡಿ ಬಂದು ಕನ್ನಡಮ್ಮನ ಸೇವೆ ಮಾಡಿದವರಾಗಿದ್ದಾರೆ. ಕರ್ನಾಟಕದಾಚೆಗೂ ಮುಂಬೈ ವಾತಾವರಣವನ್ನು ಚಿತ್ತಾಲರ, ಜಯಂತರ ಮೂಲಕ ನಮ್ಮ ಅನುಭವಕ್ಕೆ ಸೇರಿಸುವುದರಲ್ಲಿ ಸಫಲರಾಗುತ್ತಾರೆ. ಪುರುಷ ಸಾಹಿತಿಗಳ ಬದುಕು ಬರಹದ ಕುರಿತು ಯಾವ ಗೌರವ ಅಭಿಮಾನ ಮತ್ತು ಪ್ರೀತ್ಯಾದರಗಳಿಂದ ನುಡಿಚಿತ್ರ ಕಟ್ಟುತ್ತಾರೋ ಅದೇ ಪ್ರಮಾಣದಲ್ಲಿ ಒಂದು ಕೈ ಹೆಚ್ಚೇ ಎಂಬಂತೆ ಅವರ ಕುರಿತೂ ನುಡಿಚಿತ್ರ ಕಟ್ಟುತ್ತಾ ಎಲ್ಲೂ ಕಾಣಬರದ ಹಲವು ವಿಚಾರಗಳನ್ನು ಈ ಕೃತಿಯು ದಾಖಲಿಸುವುದನ್ನು ನಾವು ಗಮನಿಸಬೇಕು.
ಕೃತಿಯ ಓದು ಸಂಪೂರ್ಣಗೊಂಡ ಬಳಿಕ ಯಾವ ಯಾವ ಸಾಹಿತಿಗಳ ಯಾವ ಯಾವ ಕೃತಿಗಳನ್ನು ನಾವು ಓದಿಲ್ಲ. ಯಾವುದನ್ನು ಓದಬೇಕು ಎಂಬ ಜಿಜ್ಞಾಸೆ ಓದುಗರಲ್ಲಿ ಮೂಡುವ ಜೊತೆಗೆ ಇಷ್ಟುದ್ದದ ಪುಸ್ತಕಗಳ ಪಟ್ಟಿ ಸಿದ್ಧಗೊಳ್ಳುವುದಂತೂ ಖಚಿತ. ಇಂತಹ ಇನ್ನಷ್ಟು ಪ್ರೇರಣದಾಯಕ ಕೃತಿಗಳು ಡಾ.ಎಚ್.ಎಸ್.ಸತ್ಯನಾರಾಯಣರವರಿಂದ ಮೂಡಿ ಬರಲಿ ಎಂಬ ಸದಾಶಯದೊಂದಿಗೆ ಈ ಬರಹಕ್ಕೊಂದು ವಿರಾಮ.
ಪಾ.ಶ್ರೀನಿವಾಸ.
ನಾನು ಬಾ.ಸತ್ಯನಾರಾಯಣ ಸರ್ ಅವರ ನುಡಿಚಿತ್ರ ಹಾಗೂ ಕಣ್ಣೋಟ ಕೃತಿಗಳೆಂದರಡನ್ನು ಓದಿರುವೆ ಕಣ್ಣೋಟ ಪುಸ್ತಕ ವಿಮರ್ಶೆ ಬರೆದಿರುವೆ . ನೀವು ನುಡಿಚಿತ್ರ ಕೃತಿಯನ್ನು ತುಂಬಾ ಸೊಗಸಾಗಿ ವಿಶ್ಲೇಷಣಾತ್ಮಕವಾಗಿ ಬರೆದಿರುವಿರಿ.
ಇಲ್ಲಿಗೂ ಅಭಿನಂದನೆಗಳು.
ತುಂಬಾ ಸೊಗಸಾಗಿ ವಿಶ್ಲೇಷಣಾತ್ಮಕವಾಗಿ ಬರೆದಿರುವಿರಿ.
ಇರ್ವರಿಗೂ ಅಭಿನಂದನೆಗಳು.
Reply