ಬನ್ನಿ ಮನೆಗೆ ಹೋಗೋಣ. . . Lets Go Home

ಲೇಖನ

ಬನ್ನಿ ಮನೆಗೆ ಹೋಗೋಣ.

ಅಂಜಲಿ ರಾಮಣ್ಣ

ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ.

ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ, ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕಳಂತೆ ಮದುವೆಯೇ ಪರಮ ಗುರಿಯಾಗಿದೆ.

ಯಾವುದೋ ಸಮಯದಲ್ಲಿ ತಮ್ಮ ಮಕ್ಕಳನ್ನು ಸಂಸ್ಥೆಗಳಿಗೆ ದಾಖಲು ಮಾಡಿರುವ ಪೋಷಕರು ನಂತರ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವು ಆಶಯದಿಂದ ಸಂಸ್ಥೆಯನ್ನು ವಿನಂತಿಸಿಕೊಂಡರೂ ಹತ್ತಾರು ಕಾರಣಗಳನ್ನು ಮುಂದೆ ಒಡ್ಡಿ ಮಕ್ಕಳನ್ನು ಕುಟುಂಬದ ಜೊತೆಗೆ ಹೋಗದಂತೆ ಸಂಸ್ಥೆಯವರು ತಡೆಗಟ್ಟುತ್ತಿರುವುದು ವಾಸ್ತವ.

ಇಂತಹ ಸನ್ನಿವೇಶಕ್ಕೆ ಕರೋನ ಧಾಳಿ ತಿಳಿಗಾಳಿ ತೀಡಿದಂತಾಗಿದೆ. ಕರೋನ ಕೃಪೆಯಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಹಪಹಪಿಸುತ್ತಿದ್ದಾರೆ. ಸಂಸ್ಥೆಗಳೂ ತಮ್ಮ ಜವಾಬ್ದಾರಿಯಿಂದ ಹೊರಬರಲು ಮಕ್ಕಳನ್ನು ಮನೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ.

ಬಡ ಕುಟುಂಬಗಳು ತಮ್ಮತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ ಮಕ್ಕಳೊಂದಿಗೆ, ಪರಿಸ್ಥಿತಿ ಸರಿ ಹೋಗುತ್ತದೆ ಆಗ ಮತ್ತೆ ಸಂಸ್ಥೆಗೆ ಸೇರಿಸುವ ಎನ್ನುವ ಭಾವದೊಂದಿಗೆ. ಸಂಸ್ಥೆಗಳೂ ಇವರಲ್ಲದಿದ್ದರೆ ಇನ್ನೊಬ್ಬರು, ಈ ದೇಶದಲ್ಲಿ ಮರುಳಾಗುವ ಜನಕ್ಕೇನು ಕೊರತೆಯೇ ಎನ್ನುವ ಆಶಾಭಾವದೊಂದಿಗೆ ಮಕ್ಕಳನ್ನು ಮನೆ ಸೇರಿಸುತ್ತಿದ್ದಾರೆ. ಅಂತೂ ಕಾನೂನು, ಕಾರ್ಯಾಂಗ ಮಾಡಲು ಸೋತಿದ್ದನ್ನು ಕರೋನ ಒಂದಷ್ಠ್ರ ಮಟ್ಟಿಗೆ ಜಾರಿಗೆ ತಂದಿದೆ. ಮಕ್ಕಳು ಎಷ್ಟೋ ದಿನಗಳ ನಂತರ ಅವ್ವ, ಅಮ್ಮ, ಅಪ್ಪ ಎನ್ನುವ ನಗುವನ್ನು ಸ್ಪರ್ಶಿಸುತ್ತಿದ್ದಾರೆ.

ವಿಕೇಂದ್ರೀಕರಣಗೊಳ್ಳುತ್ತಿರುವ ಆರ್ಥಿಕತೆ ಮತ್ತೆ ಕೆಲವೇ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಮಕ್ಕಳು ಮನೆಯ ಮಣ್ಣಲ್ಲಿ ಕಿಲಗುಟ್ಟುತ್ತಿರುತ್ತಾರೆ. ಮನೆ ಎಂದರೆ ಅವರಿಗೆ ಬರಿಯ ಮಣ್ಣಲ್ಲ ಅವರ ಅಕ್ಕ ಅಣ್ಣ ತಂಗಿ ತಮ್ಮಂದಿರ ಪರಿಮಳ. ಅಜ್ಜಿಯ ತೂತು ಬಿದ್ದ ಸೆರಗು, ತಾತನ ಮೋಟು ಬೀಡಿ, ದೊಡ್ಡಪ್ಪನ ಜಗಳ, ಅತ್ತೆ ಬೀದಿ ಬದಿಯಲ್ಲಿ ಕರಿದು ಕೊಡುವ ಕಜ್ಜಾಯ, ಸಡಿಲಾದ ಚೊಣ್ಣವನ್ನು ಮೇಲೆಕ್ಕೆಳುದುಕೊಳ್ಳುತ್ತಾ ಮೂಲೆ ಅಂಗಡಿಗೆ ಹೋಗಿ ಬೆರಳಿಗೆ ಅಂಗಿಯಾಗುವ ಬೋಟಿ!

ಓಹ್, ಎಲ್ಲಾ ಮಕ್ಕಳನ್ನೂ ನಗರೀಕರಣಗೊಳಿಸಬೇಕು ಎನ್ನುವ ಅಮಾವಸ್ಯೆ ನಾಗರೀಕತೆಯನ್ನು ಅದ್ಯಾವಾಗ ಆವರಿಸಿಕೊಂಡಿತೋ! ಮಕ್ಕಳನ್ನು ಕುಟುಂಬದಿಂದ ಬೇರ್ಪಡಿಸಿ ಬೆಳೆಸುವುದು ಹೇಗಿದೆ ಎಂದರೆ, ಪ್ರಾಕೃತಿಕವಾಗಿ ಸ್ವಜಾತಿಯ ಗುಂಪಿನೊಂದಿಗೆ ಗುರುತಿಸಿಕೊಂಡು, ಇದ್ದು ಬೆಳೆದು ಬದುಕು ರೂಪಿಸಿಕೊಳ್ಳಬೇಕಿರುವ ಜೀವಿಯನ್ನು ಸರ್ಕಸ್‍ ಕಂಪನಿಯಲ್ಲಿ ಕೂಡಿಟ್ಟು, ತರಬೇತಿಕೊಟ್ಟು, ಅಸಹಜಕ್ಕೆ ಒಗ್ಗುವಂತೆ ಪಳಗಿಸಿ ಮತ್ತೆ ತನ್ನ ಪ್ರಾಕೃತಿಕ ಗುಂಪಿನೊಂದಿಗೆ ಒಂದು ಮಾಡುವಂತೆ.

School uniform png images | PNGEgg

ಮಕ್ಕಳ ಹಕ್ಕುಗಳ ಒಡಂಬಡಿಕೆ ಇಂದ, ಮಕ್ಕಳ ಹಕ್ಕುಗಳ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಯಿದೆ, ಯೋಜನೆಗಳ ಮೂಲ ಉದ್ದೇಶ ಮಕ್ಕಳು ಅವರ ಕುಟುಂಬದ ಜೊತೆಯಲ್ಲಿಯೇ ಬೆಳೆಯಬೇಕು ಎನ್ನುವುದೇ ಆಗಿದೆ. ಇದು ಕೇವಲ ಉಳ್ಳವರಿಗೆ ಮಾತ್ರ ಅನ್ವಯ ಆಗುವುದಿಲ್ಲ, ಅಲೆಮಾರಿ ವರ್ಗದ ಕುಟುಂಬವೂ ತಮ್ಮ ಮರಿಗಳನ್ನು ತಮ್ಮದೇ ಗೂಡೆಯಲ್ಲಿಟ್ಟು ಕಾಪಾಡಬೇಕು. ಎಲ್ಲೆಡೆಯಲ್ಲಿಯೂ ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಬುದ್ಧಿಮತ್ತೆಯ ಆರೋಗ್ಯ ಕಾಪಾಡಲು ಪರ್ಯಾಯ ಬೆಂಬಲ ಕೊಡುವುದು ಮಾತ್ರ ಸರ್ಕಾರದ ಜವಾಬ್ದಾರಿ ಬಾಕಿಯಂತೆ ಮಕ್ಕಳು ಅವರವರ ಕುಟುಂಬದ ಹೊಣೆ ಮತ್ತು ಸಾಮಾಜಿಕ ಕರ್ತವ್ಯ.

ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ಇವುಗಳ ಪ್ರಕಾರ ಮತ್ತು Universal Declaration of Human Rights, Convention For Elimination of all All Forms of Violence Against Women and Child Rights Convention ಇವುಗಳ ಆಶಯ “Institutionalization shall be a last resort”

ಕರೋನ ಸನ್ನಿವೇಶವು ಪಂಚಾಯ್ತಿ ಅಧಿಕಾರ ವ್ಯವಸ್ಥೆಯನ್ನು ಎಚ್ಚರಗೊಳಿಸಿದೆ. ಅಂಗನವಾಡಿಗಳ ಕಡೆಗೆ ಸರ್ಕಾರದ ಹೆಚ್ಚು ಗಮನ ಹರಿಯುವಂತೆ ಮಾಡಿದೆ. ಅಂತರ್ಜಾಲ ಮುಖೇನ ಶಿಕ್ಷಣ ಏರು ಮುಖ ಕಾಣುತ್ತಿದೆ. ನ್ಯಾಯಾಲಯಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ ಯೋಜನೆಗಳು ಸರಿಯಾಗಿ ಜಾರಿಗೆ ಮಾಡುವಂತೆ ಕಾರ್ಯಾಂಗಕ್ಕೆ ಆದೇಶ ನೀಡಿವೆ. ಈ ಎಲ್ಲಾ ಶ್ರಮಗಳಿಂದ ಮಕ್ಕಳು ಕುಟುಂಬದ ಜೊತೆ ಇರುವಂತೆ ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಮತ್ತು ಸಾಂಸ್ಥಿಕ ವ್ಯವಸ್ಥೆಯ ಬಲದಿಂದ ವ್ಯವಸಾಯ ಊರ್ಜಿತಗೊಂಡರೆ ಕಳೆದು ಹೋಗಿರುವ ಒಂದು ತಲೆಮಾರಿನ ಮನಸ್ಸು ರೈತನಾಗುತ್ತೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮನೆಗಳಲ್ಲಿಯೇ ಹೆಚ್ಚು, ಬಡತನ ಬಾಲ ಕಾರ್ಮಿಕತೆಗೆ ಮೂಲ ಎನ್ನುವ ಕರಾಳ ಸತ್ಯವನ್ನು ಭೂತಗನ್ನಡಿಯಲ್ಲಿ ದಪ್ಪಗಾಗಿಸುವ ಪ್ರತಿವಾದಿಗಳು ಮಕ್ಕಳನ್ನು ಸಂಸ್ಥೆಯಲ್ಲಿ ಇರಿಸುವುದು ಸುರಕ್ಷಿತ ಎನ್ನುತ್ತಾರೆ. ಆದರೆ ಲ್ಹಾಕ್ಗೆಡೌನ್ ಕಾರಣದಿಂದ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಹಂಚಿಹೋಗಿ ಮನೆ ಸೇರಿಸಿಕೊಂಡಿರುವ ಮಕ್ಕಳಿಗೆ, ಅವರ ಸಂಬಂಧಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ awareness ಕೊಡುವುದು ಮೊದಲಿಗಿಂತಲೂ ಸುಲಭ ಸಾಧ್ಯ. ಅದಕ್ಕಾಗಿ ಸಮಾಜ ಕಾರ್ಯಕರ್ತರನ್ನು, ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ತರಬೇತುಗೊಳಿಸಬೇಕಷ್ಟೇ.

ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಗೊಂಡಿರುವ ಮಕ್ಕಳೆಡೆಗಿನ ನಮ್ಮ ಕಾಳಜಿಯನ್ನು ಅವರಿರುವ ಜಾಗಗಳಿಗೆ ಕೊಂಡೊಯ್ಯ ಬೇಕಿದೆ. ಮಕ್ಕಳ ಪಾಲನೆ, ಪೋಷಣೆ, ಸುರಕ್ಷತೆ, ವಿದ್ಯಾಭ್ಯಾಸವನ್ನೂ ಅವರ ಜೊತೆಗೇ “ಬನ್ನಿ ಮನೆಗೆ ಹೋಗೋಣ” ಎಂದು ಜತನದಿಂದ ಕರೆದುಕೊಂಡು ಹೋಗಬೇಕಿದೆ. ಅವರೆಡೆಗೆ ಮಿಡಿಯುವ ನಮ್ಮ ಮನಸ್ಸುಗಳಿಗೆ ಅವರುಗಳನ್ನು ಅವರವರ ಕುಟುಂಬಕ್ಕೆ ಸೇರಿಸುವುದೇ ಧ್ಯಾನವಾಗಬೇಕಿದೆ. ಎಲ್ಲರ ಗಮ್ಯವೂ “Lets Go Home” ಎನ್ನುವುದೇ ಆಗಬೇಕಿದೆ.
——————————–

Leave a Reply

Back To Top