ಪುಸ್ತಕ ಸಂಗಾತಿ
ಸಂತನೊಳಗೊಂದು ಇಣುಕು ನೋಟ
ಮಳೆಕಾಡಿನ ಸಸ್ಯ ಸಮೃದ್ದತೆಯ ಮಡಿಲಲ್ಲಿ ಜನಿಸಿದ ವಾಣಿ ಭಂಡಾರಿ ಅವರ ಗಜಲ್ ಯಾನದೊಳಗೆ ನನ್ನದೊಂದು ಇಣುಕುನೋಟ
“ಸಾವಿಗೂ ಅರ್ಥವಿರುವಾಗ ಬದುಕಿಗೇಕೆ ನಿಜವಾದ ಅರ್ಥ ನೀಡುತ್ತಿಲ್ಲ“
ಗಜಲ್ನ ಈ ಸಾಲು ಮಿಥ್ಯಾ ಜಗತ್ತಿನ ಸತ್ಯವನ್ನು ಬಿಚ್ಚಿಡುತ್ತದೆ. ಸಾವು ನಿಶ್ಚಿತ ಬದುಕು ಅನಿಶ್ಚಿತ ಎಂದು ಸಾರುವ ವಚನಗಳು ಸಾವಿನ ನಂತರ ಏನು ಎಂದು ಹೇಳುವುದಿಲ್ಲ.ಗೊಂದಲ ಸೃಷ್ಟಿಸುವ ಮಾತುಗಳಿಂದ ಬದುಕು ಸಹ ಅರ್ಥಹೀನ ಎನ್ನುವ ತಾತ್ಪರ್ಯ ನೀಡುತ್ತದೆ. ಬದುಕಿನ ಬಗ್ಗೆ ಆಳವಾಗಿ ಯೋಚಿಸುವ ಮನಸ್ಸಿಗೆ ಸತ್ಯ ಮಿಥ್ಯದ ಬಗ್ಗೆ ತಾಕಲಾಟವನ್ನು ಸೃಷ್ಟಿಸಿದೆ.
“ಬಣ್ಣದ ಮಾತಿಗೆ ಪುರಸ್ಕಾರ ಸಿಗುವಾಗ ಸತ್ಯ ಏಕೆ ಮಾತಾಡುತ್ತಿಲ್ಲ“
ಸತ್ಯ ಅಸತ್ಯದ ನಿರಂತರ ಹೋರಾಟದಲ್ಲಿ ಅಂತ್ಯ ಸತ್ಯಕ್ಕೇ ಗೆಲುವು. ಮೌನವಾಗಿ ಜಯ ಸಾಧಿಸುವ ಸತ್ಯ ನಮ್ಮ ಅರಿವಿಗೆ ಬಾರದು.ಆದ್ದರಿಂದಲೇ ನಾವು ತೊಳಲಾಡುತ್ತೇವೆ.
ಗಜಲ್ನ ಮೇಲಿನ ಎರಡೂ ಸಾಲಗಳು ಲೌಕಿಕ ಅಲೌಕಿಕದ ನಡುವಿನ ಅಂತರ ತೆರೆದಿಡುತ್ತದೆ.
“ಕತ್ತಲೆಯೊಳಗೆ ಪ್ರೇಮ ಕಾಮ ಉಧ್ಬವದ ಕೊಂಡಿಯಲ್ಲಿ ನವ ಉದಯ“
“ಬಂಧುತ್ವ ಕಾಂಚಾಣದಲ್ಲಿ ಮುಳುಗಿದೆ ಆದರೆ ಮಾತು ಮೌನವಾಗುತ್ತಿಲ್ಲ“
ಕಾಮನೆಗಳ ಕತ್ತಲೆಯ ಗರ್ಭದಿಂದ ಬೆಳಕಿನ ಕಿರಣದಂತೆ ನವೋದಯ. ಕಾಮನೆಗಳು ಅಂಧಕಾರದ ಕೂಪವೆಂದರೂ ಅದರಲ್ಲಿಯೂ ನವ ಜ್ಯೋತಿ ಬೆಳಗಿ ನಮಗೆ ಆಶಾಕಿರಣ ಬೀರುತ್ತವೆ. ಮನವನ್ನು ಮಥಿಸುವ ಈ ಸಾಲುಗಳಲ್ಲಿ ಕವಯತ್ರಿ ವಿಷದ ನಂತರವೇ ಅಮೃತ ದೊರಕುವುದು ನಮ್ಮ ಬಯಕೆಗಳನ್ನು ಮಥಿಸಿದಾಗ ವಿಷವೆಲ್ಲಾ ಉಕ್ಕಿ ಹರಿದು ನಿರ್ಮಲವಾದ ಪ್ರೇಮ ಚಿಮ್ಮುವುದು ಅನ್ನುವ ಭಾವ ವನ್ನು ಹೊಮ್ಮಿಸಿದ್ದಾರೆ. ಅಧ್ಬುತ ಈ ಭಾವ.
ಬಂಧು ಬಳಗದವರು ಕಾಂಚಾಣದ ಬೆನ್ನು ಬಿದ್ದಿರುವಾಗ ಮೌನದ ಸೋಲಾಗಿದೆ.
“ಮೌನಬಂಗಾರ ಮಾತು ಬೆಳ್ಳಿ ಎನ್ನುವ ಹೇಳಿಕೆ ಸುಳ್ಳಾಗಿದೆ.
ಜೀವನದಿಯ ಆಳದಲ್ಲಿ ಹೆಕ್ಕಿ ತೆಗೆದಂತ ನುಡಿಗಳು.
“ಗುಡ್ಡಕ್ಕೆ ಹೊದಿಸಿದ ಸೀರೆ ಜಾರಿಬೀಳುತ್ತಿದೆ ಮತ್ತದೇ ಬಯಲ ಬೆತ್ತಲು,
ಬೆತ್ತಲಾಗಿ ಕತ್ತಲಲ್ಲೇ ಮಾಯೆ ಮಲಗಿರುವಾಗ ಮನಸ್ಸು ಗಟ್ಟಿಯಾಗುತ್ತಿಲ್ಲ“
“ಮಾಯೆಯ ಜಾಲದಲ್ಲಿ ಸಿಲುಕಿದ ಮನ ಅಜ್ಞಾನದ ಬಲೆಯಲ್ಲಿ ಒದ್ದಾಡುವ ಭಾವ
ಬಲೆಯಿಂದ ಹೊರಬರಲಾರದೆ ತೊಳಲಿದೆ ಜೀವ ಜೊಂಡಿನೊಳಗೆ ಸಿಕ್ಕಿಕೊಂಡು ಹೊರಬರಲಾರದೆ ಚಡಪಡಿಸುತ್ತಾ ಸಾವೇ ಗತಿ ಎನ್ನುವ ಭಾವದಲ್ಲಿ ಸೋತಿದೆ ಜೀವ. ಅಂತ್ಯವಿಲ್ಲದ ಹೋರಾಟವಾಗಿದೆ ಬದುಕು, ಭಾವಗಳಿಗೆ ರೂಪ ಕೊಡುವ ಯತ್ನದಲ್ಲಿ ಬಾಳಿನ ಗುರಿ ತಪ್ಪಿದೆ.ಆದರೂ ನಾ ಸೋಲಲಾರೆ ಎನ್ನುವ ಕವಯತ್ರಿ ಈಜಿ ದಡ ಸೇರುತ್ತೇನೆ ಎನ್ನುವ ದೃಢತೆಯನ್ನು ಸಾರುವ ಗಜಲ್ ಅವರ ಮನೋಭಾವಕ್ಕೆ ಸಾಕ್ಷಿಯಾಗಿದೆ.ಪ್ರೇಮದ ಉತ್ಕಟತೆಯನ್ನು ಬಿಂಬಿಸುವ ಗಜಲ್ಗಳ ಹಾದಿಯಿಂದ ಹೊರಳಿ, ಸಾವು ಬದುಕು, ಭ್ರಮೆಯ ಭಾವಗಳ ತಾಕಲಾಟವನ್ನು ನಮಗೆ ತೆರೆದಿಟ್ಟು ವಿಭಿನ್ನವಾದ ಗಜಲ್ ಗೆ ಹೊಸ ಹಾದಿ ತೋರಿದೆ.
ಕವಯಿತ್ರಿಯ ಪ್ರತಿಭೆಗೆ ಸಾಕ್ಷಿ ಈ ಗಜಲ್ .ಇವರ ಪ್ರತಿಭೆ ಇನ್ನು ಪ್ರಕಾಶಿಸಲಿ ಎಂದು ಹಾರೈಸುವೆ.
ಆಸಕ್ತರು ಪುಸ್ತಕಗಳಿಗೆ ಸಂಪರ್ಕಿಸಿ:-
ಭಂಡಾರಿ ಪ್ರಕಾಶನ
ಬೆಲೆ/-೧೦೦
9845426931
ವರಲಕ್ಷ್ಮಿ ವೇಣುಗೋಪಾಲ್