ಅಂಕಣ ಬರಹ

ಗಜಲ್ ಲೋಕ

ಶ್ರೀನಿವಾಸರ ಗಜಲ್ ಗಾನ

ನಮಸ್ಕಾರ…

ಪ್ರತಿ ಗುರುವಾರದಂತೆ ಇಂದೂ ಸಹ ಗಜಲ್ ಆಗಸದ ಮತ್ತೊಬ್ಬ ತಾರೆ, ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿರುವೆ. ಅವರ ಗಜಲ್ ಗಳ ಮಾಧುರ್ಯ ತಮ್ಮ ಹೃದಯ ಗೆಲ್ಲುವವೆಂಬ ವಿಶ್ವಾಸದಲ್ಲಿ…

    “ಸಾಹಿತ್ಯದಿಂದಲೇ ಹುಟ್ಟುವ ಸಾಹಿತ್ಯ ಗಟ್ಟಿಯಾಗುವುದಿಲ್ಲ. ಬದುಕಿನಿಂದ, ಬದುಕಿನ ಕರುಣೆಯಿಂದ ಹುಟ್ಟುವ ಸಾಹಿತ್ಯ ಸ್ಪಂದನಶೀಲವಾಗಿರುತ್ತದೆ

                                 –ಜಯಂತ್ ಕಾಯ್ಕಿಣಿ

         ಭಾವನೆಗಳು ರೂಪ ಪಡೆಯುವುದೆ ಭಾಷೆಯೆಂಬ ರಂಗೋಲಿಯಿಂದ. ಆ ಭಾಷೆಯೆಂಬ ರಂಗೋಲಿಯಲ್ಲಿ ಹೃದಯವನ್ನು ಮುದಗೊಳಿಸುವ ರಂಗು ಎಂದರೆ ಕಾವ್ಯ. ಕಾವ್ಯದ ಸಂವೇದನೆಯು ನಿರಂತರವಾಗಿ ಸಹೃದಯ ಓದುಗರನ್ನು ಹರಿತಗೊಳಿಸುತ್ತ, ‘ನಾನು’ ಎಂಬ ಅಹಂಕಾರದಿಂದ ಮನುಷ್ಯನನ್ನು ಬಿಡುಗಡೆಗೊಳಿಸುತ್ತದೆ. ಯಾವುದನ್ನು ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಾಗುವುದಲ್ಲವೋ, ಅದನ್ನು ರೂಪಕ, ಪ್ರತಿಮೆಗಳ ಮೂಲಕ ಧ್ವನಿಸುವುದೇ ಕಾವ್ಯ. ಈ ಕಾವ್ಯ ಸಾರ್ಥಕವಾಗುವುದು ಅದು ಬಹಳಷ್ಟು ಜನರನ್ನು ತಲುಪಿ ಅದರಿಂದ ಬದಲಾವಣೆಯೊಂದು ಉಂಟಾದಾಗ ಮಾತ್ರ!! ಇದು ಸರಳವಾಗಿ ಸಾಧ್ಯವಾಗಬೇಕಾದರೆ ಸಂಗೀತದೊಂದಿಗೆ ಸಂಯೋಜನೆಗೊಂಡು, ಗಾಯನವಾಗಿ ಹೊರಹೊಮ್ಮಬೇಕು. ಈ ಕಾರಣಕ್ಕಾಗಿಯೇ ಜನಪದ ಗೀತೆಗಳು, ಭಾವಗೀತೆಗಳು ರಸಿಕರ ಮನವನ್ನು ಸೂರೆಗೊಂಡಿವೆ.‌ ಕವಿಯನ್ನು ಜನಗಳ ಮನಸ್ಸಿಗೆ ತಲುಪಿಸುವ ಕಾರ್ಯ ತಕ್ಕ ಮಟ್ಟಿಗೆ ಸಂಗೀತದ ಮೂಲಕ ಸಾಧ್ಯವಾಗುತ್ತಿದೆ.‌ ಈ ಹಿನ್ನೆಲೆಯಲ್ಲಿ ರಿದಂ ನೊಂದಿಗೆ ಹೃದಯದ ದೆಹೆಲೀಜ್ ದಾಟಿರುವ, ದಾಟುತ್ತಿರುವ ಗಜಲ್ ಸಿಂಗಾರಿ ಇಂದು ಜಾಗತಿಕ ಮಟ್ಟದ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಲ್ಲಿ ಕಾಂತೆಯಂತೆ ಕಂಗೊಳಿಸುತಿದ್ದಾಳೆ. ಕಲ್ಲಿನೊಂದಿಗೂ ಮಾತಾಡುವ, ಕಲ್ಲನ್ನೂ ಕರಗಿಸುವ ಕೌಮಾರಿ ಇವಳು. ಮೃದು, ಮೆದು ಮನಸ್ಸಿನ, ಹಕ್ಕಿಯಂತೆ ಆಗಸದಲ್ಲಿ ಹಾರಾಡುವ ಭಾವನಾ ಜೀವಿಗಳು ಗಜಲ್ ಗಂಗೋತ್ರಿಯ ಸೆಳೆತಕ್ಕೆ ಒಳಗಾಗಿದ್ದಾರೆ, ಒಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕನ್ನಡ ಗಜಲ್ ಪರಂಪರೆ ದಿನೇ ದಿನೇ ವಿಕಾಸದ ಹಾದಿಯಲ್ಲಿದೆ! ಈ ದಿಸೆಯಲ್ಲಿ ಗಜಲ್ ಲೋಕಕ್ಕೆ ಸೂಕ್ಷ್ಮ ಸಂವೇದನೆಯ ಗಜಲ್ ಗೋ ಶೂದ್ರ ಶ್ರೀನಿವಾಸ್ ಅವರ ಕೊಡುಗೆ ಅನನ್ಯವಾದುದು.

       ಲೇಖಕರು, ಅಂಕಣಕಾರರು, ವಿಮರ್ಶಕರು, ಪತ್ರಕರ್ತರು, ಸಾಂಸ್ಕೃತಿಕ ಲೋಕದ ರಾಯಭಾರಿ, ಸಮಾಜವಾದಿ ಚಿಂತಕರು, ಹೋರಾಟಗಾರರು ಹಾಗೂ ಗಜಲ್ ಕಾರರಾದ ಶ್ರೀ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದ ರೈತಾಪಿ ಕುಟುಂಬದಲ್ಲಿ. ತಂದೆ ಮರಿಯಪ್ಪ ರೆಡ್ಡಿ, ತಾಯಿ ನಂಜಮ್ಮ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುತ್ತಾನಲ್ಲೂರಿನಲ್ಲಿ ಪೂರೈಸಿದ್ದಾರೆ. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದ್ದಾರೆ. ಪ್ರಸ್ತುತ ಬೆಂಗಳೂರುಗಳಲ್ಲಿ ವಾಸಿಸುತಿದ್ದಾರೆ. 1973ರಲ್ಲಿ ‘ಶೂದ್ರ’ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ “ಶೂದ್ರ ಶ್ರೀನಿವಾಸ್” ಎಂದೆ ಚಿರಪರಿಚಿತರಾಗಿದ್ದಾರೆ. 1996ರಲ್ಲಿ ‘ಸಲ್ಲಾಪ’ ಎಂಬ ವಾರಪತ್ರಿಕೆ, 2002ರಲ್ಲಿ ‘ನೆಲದ ಮಾತು’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶ್ರೀಯುತರು 25ಕ್ಕೂ ಹೆಚ್ಚು ಮೌಲ್ಯಿಕ ಕೃತಿಗಳನ್ನು ಕನ್ನಡ ವಾಙ್ಮಯ ಲೋಕಕ್ಕೆ ಅರ್ಪಿಸಿದ್ದಾರೆ.‌ ಅವುಗಳಲ್ಲಿ ‌‌‌‌‌’ಸೂಜಿ ಮತ್ತು ದಾರ’, ‘ಇಂದು ನಾಳೆಗಳ ನಡುವೆ’, ‘ಯಾತ್ರೆ’, ‘ಕನಸಿಗೊಂದು ಕಣ್ಣು’, ‘ಹೀಗೆಯೇ ಒಂದಷ್ಟು’, ‘ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’, ‘ಲಂಕೇಶ ಮೋಹಕ ರೂಪಕಗಳ ನಡುವೆ’, ‘ಕಿರಂ ಲೋಕ’, ‘ಯು. ಆರ್. ಎಂಬ ನೀವು’ ಹಾಗೂ ‘ಜೀವಕೋಶದ ಕೂಪದಲಿ’, ‘ಅವಳು ನಡೆದಂತೆ….’,ಎಂಬ ಗಜಲ್ ಸಂಕಲನಗಳೂ ಸೇರಿಕೊಂಡಿವೆ.

         ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿಯಾದ ಇವರು 1975-76ರಲ್ಲಿ ‘ತುರ್ತು ಪರಿಸ್ಥಿತಿ’ಯಲ್ಲಿ ‘ತುರ್ತು ಪರಿಸ್ಥಿತಿ’ ವಿರೋಧಿಸಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ ಇವರಿಗೆ ನಾಡಿನ ಹಲವು ಪ್ರತಿಷ್ಠಿತ ಗೌರವ, ಸನ್ಮಾನಗಳು, ಸಮ್ಮೇಳನಗಳ ಅಧ್ಯಕ್ಷತೆ, ಪುರಸ್ಕಾರಗಳು ಸಂದಿವೆ. 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1995ರಲ್ಲಿ ರಾಷ್ಟ್ರೀಯ ಸಾಮರಸ್ಯ ಪ್ರಶಸ್ತಿ, 2012ರ ಪ್ರೊ. ಕಿ.ರಂ. ನಾಗರಾಜ ಸಾಂಸ್ಕೃತಿಕ ಪ್ರಶಸ್ತಿ, 2013ರ ‘ಮುರುಘಶ್ರೀ’ ಪ್ರಶಸ್ತಿ, 2013ರ ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ. 1996-97ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟನೆಯಾದ ’ಸಿಟಿಝನ್ ಫಾರ್ ಡೆಮಾಕ್ರಸಿ’ ಸಂಸ್ಥೆಯ ಉಪಾಧ್ಯಕ್ಷರಾಗಿ, 1997-98ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟನೆಯಾದ ’ಪಿ.ಯು. ಸಿ.ಯಲ್’ನ ಕಾರ್ಯದರ್ಶಿಯಾಗಿ, ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, 2004-05ರಲ್ಲಿ ಎರಡು ವರ್ಷ ಕರ್ನಾಟಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

         ‘ಗಜಲ್’ ಎಂದರೆ ನಾವು ಉಸಿರಾಡುವ ಶುದ್ಧ ಗಾಳಿಯಂತೆ. ಅದ್ಯಾವತ್ತೂ ಬೇಸರ ತರಿಸುವುದೆ ಇಲ್ಲ. ಓದಿದಂತೆಲ್ಲ ಮತ್ತೆ ಮತ್ತೆ ಓದಿಸಿಕೊಳ್ಳುವ, ಬರೆದಂತೆಲ್ಲ ಪುನಃ ಪುನಃ ಬರೆಯಿಸಿಕೊಳ್ಳುವ ಹಾಗೂ ಗುನುಗಿದಂತೆಲ್ಲ ಮೈ-ಮನಗಳಿಗೆ ಪುಳಕಗೊಳಿಸುವ ಅಕ್ಷಯ ಪಾತ್ರೆ, ಕಲ್ಪವೃಕ್ಷದಂತೆ!! ಬದುಕಿನ ವಿನ್ಯಾಸಗಳನ್ನು, ಪ್ರಕೃತಿಯ ಏರಿಳಿತವನ್ನು ತನ್ನ ಅಶಅರ್ ಮೂಲಕ ಪಂಡಿತ-ಪಾಮರರೆನ್ನದೆ ಎಲ್ಲರೊಂದಿಗೆ ವಾಗ್ವಿಲಾಸಗೈಯುತ್ತಲೆ ಬಂದಿದೆ. ಶೂದ್ರ ಶ್ರೀನಿವಾಸ್ ಅವರ ಗಜಲ್ ಗಳು ಪ್ರೀತಿ-ಪ್ರೇಮ-ಪ್ರಣಯ-ಮದಿರೆಯ ಜೊತೆಗೆ ನಮ್ಮ ಅಂತಃಕರಣವನ್ನು ತಾಕಿ ಮಧುರ ಭಾವಗಳನ್ನು ಉಂಟುಮಾಡುತ್ತವೆ. ಆತ್ಮವಿಮರ್ಶೆಯ, ಬೆರಗಿನ, ಬೆಡಗಿನ ಮತ್ತು ಬಂಡಾಯದ ಮನೋಧೋರಣೆಯೂ ಕಂಡು ಬರುತ್ತದೆ. ಸಂಕೀರ್ಣವಾದ ಸೌಂದರ್ಯದ ವರ್ಣನೆ, ಭಾವನೆಗಳ ವಿಶ್ಲೇಷಣೆ, ಮಾನವ ಸಂಬಂಧಗಳ ಸ್ವರೂಪ.. ಎಲ್ಲವೂ ನಮಗೆ ಎದುರುಗೊಳುತ್ತವೆ. ಇವರ ಗಜಲ್ ಗಳು ಮಾನವ ತನ್ನ ಬದುಕಿನ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು, ಸಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ಮಾಡುತ್ತವೆ!! ಒಂದು ರೀತಿಯಲ್ಲಿ ‘ಹೃದಯದ ಭಾಷೆಯಲ್ಲಿ’ ಅಭಿವ್ಯಕ್ತಿಯಾಗಿರುವ ಅರ್ಥಪೂರ್ಣ ಗಜಲ್ ಗಳಾಗಿವೆ.

ದಾಪುಗಾಲಿನವರು ಬಂದರು ತುಳಿದರು

ನಡೆದದ್ದೇ ದಾರಿ ಎಂದು ಗರ್ಜಿಸಿದರು ಸುರಿದರು

ಈ ಷೇರ್ ಬದುಕಿನ ಮತ್ತು ವ್ಯಕ್ತಿಯ ದುರಂತಗಳ ಮೂಲವನ್ನು ಕೆಣಕುತ್ತ ದುರಂತವೆನ್ನುವುದು ವಸ್ತುಸ್ಥಿತಿಯೊ ಅಥವಾ ದೃಷ್ಟಿಕೋನವೊ ಎಂಬ ಜಿಜ್ಞಾಸೆಗೆ ನಾಂದಿ ಹಾಡುತ್ತದೆ. ಕಹಿಯಾಗುವ ಮನುಷ್ಯನ ಸಂಬಂಧಗಳ ಅನೂಹ್ಯ ಸಾಧ್ಯತೆಗಳನ್ನು ಶೋಧಿಸುತ್ತದೆ. ಬದುಕು ಪಡೆಯುವ ಅನಿರೀಕ್ಷಿತ ತಿರುವುಗಳನ್ನು ನಿಭಾಯಿಸಲು ಮನುಷ್ಯರು ಪಡುವ ಪಾಡನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಷೇರ್ ಗಜಲ್ ಗೋ ಅವರ ಸಮತಾವಾದ ಚಿಂತನೆಯ ಸ್ವರೂಪವಾಗಿದೆ. ರಾಜ್ಯಶಾಸ್ತ್ರದ ಚಿಂತಕ ರೂಸೋ ಅವರ “Might is right” ಚಿಂತನೆಯನ್ನು ವಿಡಂಬಿಸಿದಂತಿದೆ. ಬಲಶಾಲಿಗಳು ನಿರ್ಗತಿಕರನ್ನು, ದುರ್ಬಲರನ್ನು ಶೋಷಿಸುವುದು ಸಾಮಾನ್ಯ ಸಂಗತಿಯಾದರೂ ಈ ಸಾಮಾನ್ಯ, ಸಹಜ ಗುಣಗಳನ್ನು ಮೀರಿದಾಗಲೆ ಮನುಷ್ಯ ವಿಶ್ವಮಾನವನಾಗಲು ಸಾಧ್ಯ ಎಂಬ ಸೂಫಿ ತತ್ವವನ್ನು ಇಲ್ಲಿ ಗಮನಿಸಬಹುದು.

ಹಾಡುತ್ತೇನೆ ಗೆಜ್ಜೆ ಕಟ್ಟಿ ಕುಣಿಯುತ್ತೇನೆ ಆದರೇನು ಮಾಡುವುದು

ವಿಷಾದ ಬುಗ್ಗೆ ಬುಗ್ಗೆಯಾಗಿ ಮುಗಿಲಿಗೆ ರವಾನಿಸುವುದು

ಸಂಬಂಧಗಳಲ್ಲಿ ತೀವ್ರತೆ ಇಲ್ಲದಿದ್ದರೆ ಅದು ಬಹಳ ದಿನ ಗಟ್ಟಿಯಾಗಿ ನಿಲ್ಲುವುದಿಲ್ಲ. ಜೊತೆಗೆ ಅರ್ಥಪೂರ್ಣವಾಗಿಯೂ ಇರಲಾರದು. ಒಳ ಹೊಕ್ಕಷ್ಟು ಹೃದಯ ತೆರೆದುಕೊಳ್ಳುತ್ತದೆ ಹಾಗೂ ಒಮ್ಮೊಮ್ಮೆ ಸಂಬಂಧವೆನ್ನುವುದು ಬಂಧನವೂ ಆಗಿ ಪರಿಣಮಿಸುತ್ತದೆ. ಇದು ಮನುಷ್ಯನ ಸಂಬಂಧದ ತೀವ್ರತೆಯಲ್ಲಿ ಕಂಡುಬರುವ ಸಾರ್ವತ್ರಿಕ ವೈರುಧ್ಯವಾಗಿದೆ. ಸಂಬಂಧಗಳಲ್ಲಿ ಮುಲಾಜುಗಳಿದ್ದರೆ ಅಸ್ಮಿತೆ ಮರೆಯಾಗುತ್ತದೆ. ನಿರ್ದಾಕ್ಷಣ್ಯತೆಯನ್ನು ರೂಢಿಸಿಕೊಂಡರೆ ನಮ್ಮವರಿಂದ ನಿಷ್ಠುರತೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ನಿಷ್ಟುರತೆ ತೊರೆದರೆ ಸಂಬಂಧಗಳಲ್ಲಿ ಆತ್ಮವಂಚನೆ, ಬೋಳೇತನ ಆಕ್ರಮಿಸಿಬಿಡುತ್ತವೆ. ಈ ಅಪಾಯದ ದ್ವಂದ್ವವನ್ನು ಈ ಮೇಲಿನ ಷೇರ್ ಪ್ರತಿಧ್ವನಿಸುತ್ತದೆ. ಮನುಷ್ಯನ ಸೂಕ್ಷ್ಮ ಸಂವೇದನೆಯೆ ಹಲವು ಬಾರಿ ತೊಡಕಾಗುವ ಪರಿ ಎಲ್ಲರ ಅನುಭವಕ್ಕೂ ಬಂದಿರುತ್ತದೆ! ಈ ಹಿನ್ನೆಲೆಯಲ್ಲಿ ಮನುಷ್ಯನೆ ಇಲ್ಲಿಯ ವಿಷಯವಸ್ತುವಾಗಿದ್ದಾನೆ.

       ಶೂದ್ರ ಶ್ರೀನಿವಾಸ್ ಅವರ ಗಜಲ್ ಗಳಲ್ಲಿ ತೀವ್ರತೆಯಿದೆ, ಅದರೊಳಗೆ ಒಂದು ಅತೀವವಾದ ಅಸ್ಮಿತೆಯ ಝಲಕ್ ಇದೆ. ಇವರ ಗಜಲ್ ಗಳು ವಿಷಾದ ಹಾಗೂ ಸಂತಸಗಳನ್ನು ಏಕಕಾಲದಲ್ಲಿಯೆ ಅಭಿವ್ಯಕ್ತಿಸುತ್ತ ಓದುಗರಿಗೆ ಇಷ್ಟವಾಗುತ್ತವೆ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು ರೂಪುಗೊಳ್ಳಲಿ, ಅವುಗಳು ಸಂಕಲನವಾಗಿ ಹೊರಬಂದು ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ನೀರಿನೊಂದಿಗೆ ದ್ವೇಷ ಇದ್ದರೆ ದಾಹವು ಏನು ಮಾಡಬೇಕು ಹೇಳು

ವರ್ತಮಾನ ಬೆತ್ತಲೆಯಾಗಿದ್ದರೆ ಇತಿಹಾಸ ಏನು ಮಾಡಬೇಕು ಹೇಳು

                       –ಡಾ. ಹನುಮಂತ ನಾಯಡು

        ಗಡಿಯಾರದ ಮುಳ್ಳುಗಳು ತಿರುಗುತಿವೆ, ದಣಿವರಿಯದೆ. ಹೊತ್ತಾಯಿತು ಪ್ರೆಂಡ್ಸ್…  ಮುಂದಿನ ವಾರ ಮತ್ತೆ ಮತ್ತೊಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ ಬರುತ್ತೇನೆ.‌ ಅಲ್ಲಿಯವರೆಗೆ… ಬಾಯ್ ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ..ಹ್ಹ…ಹ್ಹ

ಧನ್ಯವಾದಗಳು.


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top