ಗಜಲ್

ಗಜಲ್

ಅರುಣಾ ನರೇಂದ್ರ

ಮರಳಿ ಬಾರದ ಊರಿಗೆ ಅವ್ವ ಕೈಬೀಸಿ ಹೊರಟೆ
ಹೊರಳಿ ನೋಡದೆ ಇನಿತು ನೀ ದೌಡಾಯಿಸಿ ಹೊರಟೆ

ನಿನ್ನ ಕಣ್ಣ ಬೆಳಕಿರದೆ ಮನೆಯಲ್ಲಾ ಕತ್ತಲಾವರಿಸಿದೆ
ನಿನಗಾಗಿ ಅಳುವ ಕಂದಮ್ಮಗಳ ಮುಖ ಮರೆಸಿ ಹೊರಟೆ

ಪಕ್ಕೆಯಲ್ಲಿಟ್ಟುಕೊಂಡು ಸೆರಗ ಮುಚ್ಚಿ ಪೊರೆದವಳು
ಗಟ್ಟಿಯಾಗಿ ಹಿಡಿದ ಕೈ ಏಕಾಏಕಿ ಕೊಸರಿಸಿ ಹೊರಟೆ

ಪ್ರೀತಿಯ ಜೇನುಗೂಡಿಗೆ ವಿಧಿ ಕಲ್ಲೆಸೆದು ನಕ್ಕಿದೆ
ಬಾಳಿನರ್ಥವ ತಿಳಿದು ಬದುಕಿ ತೋರಿಸಿ ಹೊರಟೆ

ನಿತ್ಯವೂ ಇಲ್ಲಿ ಹಬ್ಬದ ಸಡಗರ ನೀ ಓಡಾಡುತ್ತಿದ್ದಾಗ
ತೊಲೆ ಕಂಬ ಹೊಸ್ತಿಲಿಗೂ ಸೂತಕ ತಂದಿರಿಸಿ ಹೊರಟೆ

ದೇವರನೂ ಪ್ರಶ್ನಿಸುವ ಛಾತಿಯವಳು ನೀನು
ಕರೆ ಬಂತೆಂದು ಕೈ ಮುಗಿದು ಅವಸರಿಸಿ ಹೊರಟೆ

ನೀನಿಟ್ಟ ನತ್ತು ಬುಗುಡಿಯ ಮುತ್ತು ಸೂರಾಡಿವೆ ಇಲ್ಲಿ
ಉಡಿಕಟ್ಟಿಕೊಂಡಿದ್ದ ಪ್ರೀತಿ ಎಲ್ಲರಿಗೂ ಉಣಿಸಿ ಹೊರಟೆ

ಊರಿಗೆ ಊರೇ ನೆರೆದಿತ್ತು ನಿನ್ನ ಮುಖ ನೋಡಲು
ಮುತ್ತೈದೆಯಾಗಿ ಮಲ್ಲಿಗೆ ಹೂವ ಮುಡಿಗೇರಿಸಿ ಹೊರಟೆ

ಬಚ್ಚಲಕ ನೀರಿಟ್ಟು ಮಾಸಿದ ಮುಡಿಗೆ ನೀರೆರೆಯುವರು ಯಾರೇ
ನೀನಿಲ್ಲದೆ ಅರುಣಾಗೆ ಇನ್ಯಾತರ ತವರು ಎರವಾಗಿಸಿ ಹೊರಟೆ


12 thoughts on “ಗಜಲ್

    1. ಆರದ ದೀಪ ಆರಿದಾಗ ಮನೆ-ಮನದಲ್ಲಿ ಆವರಿಸುವ ಕರಾಳ ಕತ್ತಲೆಯ ಭಾವವನ್ನು ಅತ್ಯಂತ ಶಕ್ತಿಶಾಲಿಯಾಗಿ ಹಿಡಿದಿಟ್ಟುಕೊಂಡ ಗಝಲ್.ಅವ್ವನ ನೆನಪಾಗಿ ಕಣ್ಣು ತೇವಗೊಂಡವು.to

      1. ಗಜಲ್ ಓದಿ ಪ್ರತಿಕ್ರಿಯಿಸಿದ ತಮ್ಮ ಸಹೃದಯತೆ ಗೆ ಧನ್ಯವಾದಗಳು ಸರ್

  1. ಹಸಿದು ಬಂದವರಿಗೆ ಅನ್ನ ನೀಡಿದ ತಾಯಿ ದಿ:ಶ್ರೀಮತಿ ಹುಲಿಗೆಮ್ಮ ತಿಪ್ಪವ್ವನವರ ಸ್ಮರಣಾರ್ಥ ನುಡಿನಮನಕ್ಕೆ ತನ್ನ ಸ್ವಂತ ಅನುಭವದ ನುಡಿಗಳನ್ನ ಗಜಲ್ ರೂಪದಲ್ಲಿ ಹಂಚಿಕೊಂಡ ಅರುಣಾ ನರೇಂದ್ರ ಅಕ್ಕನಿಗೆ ಧನ್ಯವಾದಗಳು.

  2. ಎಂಥ ಭಾವನಾತ್ಮಕ ಗಜಲ್ ಇದು …ಹೆತ್ತವಳ ಕೊನೆಯುಸಿರ ಕಂಡು ಮಿಡಿದ ಕಂಬನಿ ಇದು….✍️

  3. ತಾಯಿಯ ಮರಳಿ ಬಾರದ ಅಗಲಿಕೆ ಯ. ನೋವನ್ನು ಮನೋಜ್ಞ ವಾಗೀ. ಚಿತ್ರಿಸಿದ್ದೀರಿ. ಗಜಲ್ ಓದುತ್ತಿದ್ದರೆ ನನ್ನ ತಾಯಿ ಯ ನೆನಪು ಮರುಕಳಿಸಿತು .ಅಭಿನಂದನೆಗಳು

  4. ಚೆನ್ನಾಗಿದೆ ಭಾವಪೂರ್ಣ.. ಅರುಣಾ..!! ಕಣ್ಣು ಹನಿಗೂಡಿದವು..

Leave a Reply

Back To Top