ಅಂಕಣ ಬರಹ
“ಕಾವ್ಯದರ್ಪಣ”
” ಗೆದ್ದಾಗ ಅಹಂ ಪಟ್ಟವನು ಉಳಿಯಲಾರ
ಸೋತಾಗ ಕುಸಿದು ಹೋದವನು ಬೆಳೆಯಲಾರ
ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ
ಸೋಲಿನ ನೋವು ಮನಸಿಗೆ ತಾಕದಿರಲಿ“.
– ಅಬ್ದುಲ್ ಕಲಾಂ
ಕಾವ್ಯ ಪ್ರವೇಶಿಕೆಯ ಮುನ್ನ
ಈ ಜೀವನ ಎಂಬುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಕಲ್ಲು ಮುಳ್ಳುಗಳ ಹಾಸಿಗೆಯಿದು, ಕಷ್ಟ ಸುಖಗಳ ದುರ್ಗಮ ಹಾದಿಯಿದು. ಸಾಮಾಜಿಕ ನಿರ್ಬಂಧಗಳು, ನಿಯಮಗಳು, ನಡೆ, ನುಡಿಗಳು, ಆಚಾರ ವಿಚಾರಗಳ ಕೂಟವಿದು. ಇವುಗಳ ಪಾಲನೆಯಲ್ಲಿ ಪ್ರಹರಿಗಳ ಸರ್ಪಗಾವಲು ಇರುತ್ತದೆ. ನಮ್ಮ ನಡವಳಿಕೆಗಳ ಮೇಲೆ ಸಮಾಜದ ಹದ್ದಿನಕಣ್ಣು ಇರುತ್ತದೆ. ಅವೆಲ್ಲವನ್ನು ಪಾಲಿಸುವುದು ಕಠಿಣ ಪ್ರಕ್ರಿಯೆಯಾಗಿದೆ. “ಬದುಕಿನ ಬಂಧನಗಳು ಬೊಗಸೆಯಲ್ಲಿ ಹಿಡಿದ ದೀಪ್ತಿಯಂತೆ”. ಹಿಡಿತ ಬಿಗಿಯಾದರೆ ಕೈ ಸುಟ್ಟುಕೊಳ್ಳುತ್ತೇವೆ. ಸಡಿಲವಾದರೆ ಗಾಳಿಗೆ ಸಿಲುಕಿ ದೀಪ ನಂದಿ ಹೋಗುತ್ತದೆ. ನಮ್ಮ ಜೀವನ ಪಥವು ಹಾಗೆ. ಕಟ್ಟು ಕಟ್ಟಳೆಗಳು ಹೆಚ್ಚಾದರೆ ಮಾನಸಿಕ ಕಿರಿಕಿರಿಯಾಗುತ್ತದೆ. ಪರತಂತ್ರದ ಭಾವಗಳು ಕಾಡುತ್ತದೆ. ಬಂಧಿಸಿದವರ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತದೆ. ಅವೆಲ್ಲವುಗಳನ್ನು ಮೀರಿ ಚಲಿಸಿದರೆ ದಾರಿ ತಪ್ಪಿ ಪ್ರಮಾದಗಳು ಹೆಚ್ಚಾಗುತ್ತವೆ. ಸಮಾಜ ವಿರೋಧಿ ಚಟುವಟಿಕೆಗಳಿಗೆ ಆಹ್ವಾನ ನೀಡುತ್ತವೆ. ಒತ್ತಡ ಹೆಚ್ಚಾದಷ್ಟು ಸಜ್ಜನರು ತೋಷ ತೊಡುತ್ತಾರೆ. ರಕ್ಷಣಾ ಬಲೆಯಿಂದ ಕಳಚಿಕೊಂಡು ಹೊರ ನಡೆದಾಗ ಮನುಜನಿಗೆ ಕಣ್ಗಾವಲಿನ ಮಹಿಮೆಯು ಮನನವಾದರೂ ಅದನ್ನು ತನ್ನ ಸ್ವಾರ್ಥ ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿಗೊಳ್ಳುವ ಪ್ರಹರಿ ಅನನ್ಯ ತತ್ವವನ್ನು ಹೊತ್ತು ತಂದು ಸಮಾಜಕ್ಕೆ ಒಂದು ಶುಭ ಸಂದೇಶವನ್ನು ರವಾನಿಸುತ್ತದೆ.
” ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲಾ ತಪ್ಪುಗಳನ್ನು ನೀವೆ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.”
– ಆಚಾರ್ಯ ಚಾಣಕ್ಯ
ಕವಿ ಪರಿಚಯ
ಮಾರ್ಮಿಕ ಬರಹ ಹಾಗೂ ಅಮೋಘ ಪದಪುಂಜಗಳ ಮೂಲಕ ಕಾವ್ಯಾಸಕ್ತರ ಗಮನ ಸೆಳೆದು ವಿಶಿಷ್ಟ ಛಾಪು ಮೂಡಿಸಿದ ಕವಿ “ಪ್ರಸಾದ್ ಕುಲಕರ್ಣಿ”. “ಸೂರ್ಯಸಖ” ಕಾವ್ಯನಾಮದಿಂದ ಸಾಹಿತ್ಯ ಕೃಷಿಗೈಯುತ್ತಿರುವ ಶ್ರೀಯುತರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದವರು. ಇವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಈಗ ಬೆಳಗಾವಿಯ ಖಾಸಗಿ ಸಂಸ್ಥೆಯೊಂದರಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ, ಬಹುಮಾನ ನೀಡಿ ಗೌರವಿಸಿವೆ. ಇವರ ಬರಹಗಳು ಹಲವಾರು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ. “ಪ್ರಹರಿ” ಎಂಬ “ಕವನ ಸಂಕಲನ” ಹಾಗೂ “ಸೂರ್ಯನ್ ಪರಪಂಚ” ಎಂಬ “ಕಾದಂಬರಿ”ಯೂ ಮುದ್ರಣ ಹಂತದಲ್ಲಿದ್ದು ಸದ್ಯದಲ್ಲಿಯೆ ಕನ್ನಡ ಸಾರಸ್ವತ ಲೋಕವನ್ನು ಸೇರಿ ಓದುಗರನ್ನು ರಂಜಿಸಲು ಅಣಿಯಾಗಿವೆ.
” ಬದುಕು ಸುಂದರ ಎನ್ನುವುದು ಕಾಲ್ಪನಿಕ
ಅದನ್ನು ಸುಂದರಗೊಳಿಸುವುದು ನಮ್ಮ ಕಾಯಕ“
– ಅನುಭಾವಿಗಳ ನುಡಿ
ಕವಿತೆಯ ಆಶಯ
ಇಲ್ಲಿ ಕವಿಗಳು ತಮ್ಮ ಕವನದ ಮೂಲಕ ಭಾವ ಚಿತ್ತಾರಗಳನ್ನು ಪ್ರಹರಿಸಿ, ಓದುಗರನ್ನು ಅರ್ಥಪೂರ್ಣ ಯೋಚನೆಗೆ ಹಚ್ಚಿ, ವೈಚಾರಿಕ ಚರ್ಚೆಯಲ್ಲಿ ಸಿಲುಕಿಸಿ, ಪ್ರತಿಯೊಬ್ಬರ ಬದುಕಿನ ಪ್ರಹರಿಗಳನ್ನು ಕೆಣಕಿದ್ದಾರೆ. ಆ ಮೂಲಕ ಎಲ್ಲರನ್ನು ಆತ್ಮವಿಮರ್ಶೆಯ ದಾರಿಯಲ್ಲಿ ಕೊಂಡೊಯ್ದು ಧರಿಸಿರುವ ಮುಖವಾಡಗಳನ್ನು ಕಳಚುತ್ತಾ, ವೇಷವನ್ನು ಬೆತ್ತಲೆ, ಮಾಡಿ ವಾಸ್ತವಿಕ ಬದುಕಿನ ಅರಿವಿನ ಜಾಡಿನಲ್ಲಿ ಓದುಗರನ್ನು ಕೊಂಡೊಯ್ಯುತ್ತದೆ. ಅಮೋಘವಾದ ಭಾವಯಾನದಲ್ಲಿ ವಿಹರಿಸುವ ಈ ಕವಿತೆ ಬುದ್ಧಿಮತ್ತೆಯ ಮೂಲಕ ಲೋಕ ಜ್ಞಾನವನ್ನು ಗ್ರಹಿಸಿ, ವಿಶ್ಲೇಷಿಸಿ, ತಾರ್ಕಿಕವಾಗಿ ವಿಮರ್ಶಿಸಿ, ವಿಭಿನ್ನ ರಸಭಾವದಲ್ಲಿ ಸಮಾಜದ ಪ್ರಹರಿಗಳನ್ನು ತನ್ನ ಜೀವನಾನುಭವದ ಸಾರದೊಂದಿಗೆ ಸವಿ ಬುತ್ತಿ ಕಟ್ಟಿ, ಓದುಗರ ನೆತ್ತಿಗೆ ಬಿತ್ತಿ, ಮನಸ್ಸಿಗೆ ಮುದವನ್ನು ಒದಗಿಸಿ, ಬಾಳ ದಾರಿಗೆ ಮಾರ್ಗದರ್ಶಿ ದೀವಿಗೆಯಾಗಿ ಈ ಪ್ರಹರಿಯನ್ನು ರಚಿಸಿದ್ದಾರೆ.
ಕವಿತೆಯ ಶೀರ್ಷಿಕೆ –
ಪ್ರಹರಿ
“ಪ್ರಹರಿ” ಎಂದರೆ “ಕಾವಲುಗಾರ” ಎಂದರ್ಥ. “ಹುಟ್ಟು ಸಹಜ ಸಾವು ನಿಶ್ಚಿತ” ಇವೆರಡರ ನಡುವಿನ ಜೀವಿತಾವಧಿಯಲ್ಲಿ ಮನುಷ್ಯನ ಬದುಕಿನುದ್ದಕ್ಕೂ ಪ್ರಹರಿಗಳು ಬೆನ್ನತ್ತಿ ಹಿಂಬಾಲಿಸುತ್ತಾರೆ, ಕಾಳಜಿ ಮಾಡುತ್ತಾರೆ, ಎಚ್ಚರಿಕೆ ನೀಡುತ್ತಾರೆ, ಸರಿಯಾದ ದಾರಿಯಲ್ಲಿ ನಡೆಸಲು ಪ್ರಯತ್ನಿಸುತ್ತಾರೆ. ಬಾಲ್ಯದಲ್ಲಿ ತಂದೆ ತಾಯಿಗಳು ಪ್ರಹರಿ ಗಳಾದರೆ, ಶಾಲೆಗೆ ಸೇರಿದ ಮೇಲೆ ಶಿಕ್ಷಕರು ಪ್ರಹರಿ ಗಳಾಗುತ್ತಾರೆ, ಸಾಮಾಜಿಕ ಬದುಕಿಗೆ ಪ್ರವೇಶಿಸಿದಂತೆ ಸಮಾಜದ ವ್ಯಕ್ತಿಗಳು ಹೀಗೆ ಪ್ರಹರಿಗಳ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ. ಮನುಷ್ಯ ಬೆಳೆಯುತ್ತ ಹೋದಂತೆ ಪ್ರಹರಿಗಳು ಅವನ ಸುತ್ತಲೂ ರಕ್ಷಣಾ ಗೋಡೆಗಳನ್ನು ನಿರ್ಮಿಸುತ್ತಾರೆ. ಆದರೆ ಅವನು ಅವೆಲ್ಲವನ್ನೂ ನಿರ್ಲಕ್ಷಿಸಿ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಮುಖವಾಡ ಧರಿಸಿ ಎಲ್ಲರಿಗೂ ಮೋಸ ಮಾಡುತ್ತಾ ಒಳ್ಳೆಯತನದ ಸೋಗಿನಲ್ಲಿ ಸಾಗುತ್ತಾನೆ. ಆದರೆ ಎಲ್ಲರನ್ನೂ ವಂಚಿಸಿದ ಮನುಷ್ಯನಿಗೆ ತನ್ನ ಆತ್ಮಸಾಕ್ಷಿ ಎಂಬ ಪ್ರಹರಿಯನ್ನು ನಂಬಿಸಲು ಸಾಧ್ಯವಾಗುವುದಿಲ್ಲ ಎಂಬ ಭಾವವೇ ಈ ಪ್ರಹರಿ ಯಾಗಿದೆ.
” ಕೇವಲ ಕಠಿಣವಾದ ದಾರಿಗಳು ಮಾತ್ರ ಸುಂದರ ವಾದ ತಾಣಗಳಿಗೆ ಕರೆದೊಯ್ಯುತ್ತವೆ.”
– ಅನಾಮಿಕ
ಕವಿತೆ – ಪ್ರಹರಿ
೧
ನಾಲ್ಕು ಕಣ್ಣುಗಳ ಕಾವಲು
ಐದು ವರ್ಷ ಹತ್ತು ತಿಂಗಳು
ಮುಂದೆ ಹೋದಂತೆ ಹೆಚ್ಚಾದವು ಕಂಗಳು
ದೊಡ್ಡದಾದಷ್ಟು ನನ್ನ ಬಯಲು
ಇದ್ದೇ ಇದ್ದವು ಎತ್ತರದ ಗೋಡೆಗಳು…..
ಹುಟ್ಟಿನಿಂದ ಸಾವಿನವರೆಗೆ ಹಲವಾರು ಕಣ್ಣುಗಳ ಕಾವಲಿನಲ್ಲಿ ನಮ್ಮ ಬದುಕು ಸಾಗುತ್ತದೆ ಎಂದು ಸಾರುವ ಸಾಲುಗಳಿವು. ಶಿಶುವಿನ ಜನನವಾಗಿ ಧರೆಗೆ ಪ್ರವೇಶಿಸಿದೊಡನೆ ಪ್ರಾರಂಭವಾಗುವ ಕಣ್ಗಾವಲು ಐದು ವರ್ಷ ಹತ್ತು ತಿಂಗಳವರೆಗೆ ಎಂದರೆ ಮನೆಯಲ್ಲಿ ಇರುವವರೆಗೆ ತಂದೆ ತಾಯಿಯರ ನಾಲ್ಕು ಕಣ್ಣುಗಳ ಬಂಧನದೊಳಗೆ ರಕ್ಷಣೆ ಪಡೆಯುತ್ತಿರುತ್ತವೆ. ಶಾಲಾ ಪ್ರವೇಶದೊಂದಿಗೆ ಶಿಕ್ಷಕರು, ಮಕ್ಕಳು, ಸ್ನೇಹಿತರ ಸಂಕೋಲೆಯಲ್ಲಿ ಸಿಲುಕುತ್ತದೆ. ಹೊರಜಗತ್ತಿಗೆ ತನ್ನನ್ನು ತೆರೆದುಕೊಂಡಷ್ಟು ನಮ್ಮನ್ನು ಗಮನಿಸುವವರು ಸಂಖ್ಯೆ ಹೆಟ್ಟುತ್ತಾ ಹೋಗುತ್ತದೆ.
ನಂತರ ಸಮಾಜದ ತೆಕ್ಕೆಯೊಳಗೆ ಬೀಳುತ್ತೇವೆ. ಆಗ ನಮ್ಮ ಸುತ್ತಮುತ್ತ ಎತ್ತರದ ಗೋಡೆಗಳು ನಿರ್ಮಾಣವಾಗುತ್ತದೆ. ಇಲ್ಲಿ ಗೋಡೆಗಳು ಎಂದರೆ ಸಾಮಾಜಿಕ ಕಟ್ಟುಪಾಡುಗಳು, ನಿಯಮಗಳು, ಸಂಪ್ರದಾಯಗಳು, ಆಚಾರ ವಿಚಾರಗಳ,ಸಂಸ್ಕೃತಿ ನಡೆ ನುಡಿಗಳು ಎಂಬ ಅರ್ಥದಲ್ಲಿ ಕವಿ ಬಳಸಿದ್ದಾರೆ.ಇವು ವ್ಯಕ್ತಿಯ ಸುತ್ತಲೂ ಆವರಿಸಿಕೊಳ್ಳುತ್ತವೆ. ಅವುಗಳನ್ನು ಪಾಲಿಸುವಂತೆ ಮೇಲಿಂದ ಮೇಲೆ ಒತ್ತಡ ಬೀಳಲಾರಂಭಿಸುತ್ತದೆ. ಆಗ ಒಂದು ರೀತಿಯ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಎಲ್ಲ ಬಂಧನಗಳಿಂದ ಹೊರಬಂದು ಸ್ವತಂತ್ರ ಹಕ್ಕಿಯಾಗಿ ತನ್ನದೇ ಜಗತ್ತಿನಲ್ಲಿ ವಿಹರಿಸಲು ಮನಸ್ಸು ಹಾತೊರೆಯುತ್ತದೆ ಎಂಬುದನ್ನು ಈ ಸಾಲುಗಳು ಸಾದರಪಡಿಸುತ್ತದೆ.
೨
ಬಂಡಾಯವೆದ್ದೆ ಗೋಡೆ ಕೆಡವಿದೆ
ತೋಳಲಿತ್ತು ತಾಕತ್ತು
ಬಂದೆ ಆಕಾಶದಗಲದ ಬಯಲಿಗೆ
ಹಿಂಬಾಲಿಸಿದವು ಲಕ್ಷ ಲಕ್ಷ ನೋಟಗಳು
ಬೆರೆಸಿಕೊಂಡವು ದುಷ್ಟ ಶಿಷ್ಟ ಕೂಟಗಳು…..
ಈ ಗೋಡೆಗಳು ನಮ್ಮ ರಕ್ಷಣಾ ಕೋಟೆಗಳು ಎಂದರಿಯದೆ ಇವು ನಮಗೆ ತಡೆಯೊಡ್ಡುವ ಪಹರೆ ಎಂದು ಭಾವಿಸಿ ನಾವು ನಮ್ಮೆಲ್ಲ ಬುದ್ಧಿವಂತಿಕೆ, ಜಾಣ್ಮೆ, ಕಲಾತ್ಮಕತೆಯನ್ನು ಬಳಸಿ ಈ ಗೋಡೆಗಳನ್ನು ಧ್ವಂಸ ಮಾಡಿ, ಹುಚ್ಚು ಹತ್ತಿದ ಗೂಳಿಯಂತೆ, ಮದವೇರಿದ ಆನೆಯಂತೆ, ಪ್ರತಾಪ ತೋರುತ್ತಾ ಆಕಾಶವೆಂಬ ಬಯಲಿಗೆ ಅಂದರೆ ಸಾಮಾಜಿಕ ಪರಿಸರಕ್ಕೆ ಬರುತ್ತಾನೆ. ಆಗ ಅವನನ್ನು ಹಿಂಬಾಲಿಸುವವರ ಸಂಖ್ಯೆ ಅಧಿಕವಾಗಿರುತ್ತದೆ. ಜೊತೆಗೆ ದುಷ್ಟ ಶಿಷ್ಟ ಕೂಟಗಳು ಅಂದರೆ ಕೆಟ್ಟ ಮತ್ತು ಒಳ್ಳೆಯ ಗೆಳೆಯರು ಜೊತೆಯಾಗುತ್ತಾರೆ. ಇದಾವುದರ ಪರಿವೆಯೂ ಅವನಿಗೆ ಇರುವುದಿಲ್ಲ ಎಂಬುದು ತೋರಿಸುವುದು ಕವಿಯ ಮನೋಗತವಾಗಿದೆ.
೩
ಅಂಜಲಿಲ್ಲ ಕಾವಲಿಗೆ
ಬೆದರಲಿಲ್ಲ ಕಂಗಳಿಗೆ
ನ್ಯಾಯಾನ್ಯಾಯ ನನಗೆಂತೋ ಅಂತೆ
ಮಾನಾಪಮಾನ ಇರಲಿಲ್ಲ ಚಿಂತೆ
ಮದಕರಿಗೆ ನಡೆದದ್ದೆಲ್ಲ ದಾರಿಗಳು….
ಸುತ್ತಲೂ ಕಾವ್ಯ ಕಾವಲು ಕಾಯುತ್ತಿದ್ದವರಿಗೆ ಹೆದರಲಿಲ್ಲ. ಲಕ್ಷೋಪಲಕ್ಷ ಕಂಗಳು ನೆಟ್ಟರು ಬೆದರಲಿಲ್ಲ. ಕಾರಣ ಅವೆಲ್ಲವನ್ನು ಮೆಟ್ಟಿ ನಿಂತು ಸ್ವಾರ್ಥದ ಬಲೆಯೊಳಗೆ ಸಿಲುಕಿರುವ ಅವನಿಗೆ ನ್ಯಾಯ ಯಾವುದು? ಅನ್ಯಾಯ ಯಾವುದು? ಎಂಬುದರ ಪರಿವೆಯೇ ಇರಲಿಲ್ಲ. ಮಾನಾಪಮಾನಗಳ ಚಿಂತೆಯಿಲ್ಲದೆ ಯಾರನ್ನೂ ಲೆಕ್ಕಿಸದೆ, ತನ್ನದೇ ಆದ ಹೊಸ ದಾರಿ ಸೃಷ್ಟಿಸಿಕೊಂಡು ಸಮಾಜವನ್ನು ಬಹಿಷ್ಕರಿಸಿ ನಡೆಯುತ್ತಾನೆ. ಆನೆಯಂತೆ ಎಲ್ಲ ನಿರ್ಬಂಧಗಳನ್ನು ಕತ್ತರಿಸಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ನಡೆಯಲು ಪ್ರಾರಂಭಿಸುವನು ಎಂಬ ವಿಷಾದ ಭಾವ ಕವಿಯದು.
೪
ಪ್ರಶ್ನಿಸಿದವು ದೃಷ್ಟಿಗಳು
ಮತ್ತೆ ಮತ್ತೆ ನೆಟ್ಟವು ಭಿತ್ತಿಗಳು
ಚೀತ್ಕರಿಸಿದೆ ಅನುನಯಿಸಿದೆ ಊಹೂಂ ಬಿಗಿಯಾದವು ಬಂಧಗಳು
ಮುಖವಾಡ ತೊಟ್ಟೆ.ಕಣ್ಣಿಗೆ ಬೆರಳನ್ಹೆಟ್ಟೆ…..
ನಡೆಯುತ್ತಿರುವಾಗ ಪ್ರಶ್ನಿಸಿದವರು ಹಲವರು. ಅದು ತಪ್ಪು, ಇದು ತಪ್ಪು, ಹೀಗೆ ಮಾಡಬೇಡ ಹಾಗೆ ಮಾಡಬೇಡ, ನಾನು ಹೇಳಿದಂಗೆ ಮಾಡು, ನೀನು ಹೀಗೆ ನಡೆದುಕೋ ಎಂದು ಮತ್ತೆ ಮತ್ತೆ ಗೋಡೆ ಕಟ್ಟಲು ಪ್ರಯತ್ನಿಸಿದರು. ಸರಿ ದಾರಿಯಲ್ಲಿ ನಡೆಸಲು ಮುಂದಾದರು. ಆದರೆ ಅವನು ಅದಾವುದಕ್ಕೂ ಬಗ್ಗದೆ ಜಗ್ಗದೆ ಆರ್ಭಟಿಸಿದನು. ಅವನನ್ನು ಹಿಡಿತದಲ್ಲಿಡಲು, ನಿಯಂತ್ರಿಸಲು ಬಂಧಗಳು ಅಧಿಕವಾದವು. ಅದರಿಂದ ತಪ್ಪಿಸಿಕೊಳ್ಳಲು ಮುಖವಾಡ ತೊಟ್ಟನು, ನಾಟಕ ಮಾಡಿದನು, ತಾನು ಸರಿ ಇರುವೆ ಎಂದು ರುಜುವಾತು ಪಡಿಸಿದನು. ನೋಡುವ ಸಹಸ್ರ ಕಣ್ಣುಗಳಿಗೆ ಅವನ ಕಪಟ ವರ್ತನೆ ಕಾಣದಂತೆ ಅಭಿನಯದ ಬೆರಳನ್ನು ಅಡ್ಡಯಿಟ್ಟನು.
೫
ಕೇಸರಿ ಮಣ್ಣಿನಲ್ಲಿ ನನ್ನದೇ ಕುಸ್ತಿ
ಕೆಂಪು ಮಹಲಿನಲ್ಲೂ ನನ್ನದೇ ಮಸ್ತಿ
ಹಸಿರ ತೋಟವೇ ನನ್ನ ಪಾಲಿನ ಆಸ್ತಿ
ಸಡಿಲಾಯಿತು ಕಾವಲು
ಆದವು ಗೋಡೆಗಳು ಏಳಿಗೆಯ ಮೆಟ್ಟಿಲುಗಳು…..
ಇಲ್ಲಿ ಕೇಸರಿ, ಕೆಂಪು,ಹಸಿರು ಬಣ್ಣಗಳು ವೈವಿಧ್ಯಮಯವಾದ ಮತ ಧರ್ಮಗಳ ಪ್ರತೀಕವಾಗಿ ಕವಿ ಬಿಂಬಿಸಿದ್ದಾರೆ. ಕೇಸರಿ ಮಣ್ಣಿನಲ್ಲಿ ತನ್ನದೇ ಕುಸ್ತಿ ಅಂದರೆ ಹಿಂದುಗಳ ಜೊತೆ ಅವರಂತೆ ವರ್ತಿಸುತ್ತಾ ಅವರಿಂದ ಲಾಭ ಪಡೆಯುವುದು, ಮುಸ್ಲಿಮರ ಜೊತೆ ಮುಸ್ಲಿಮನಾಗಿ ನಡೆದುಕೊಳ್ಳುತ್ತಾ ಅವಕಾಶವಾದಿತನ ತೋರುವುದು. ಸಮಾಜವಾದಿ, ಬಂಡವಾಳಶಾಹಿಗಳ ಜೊತೆ ಅವರಿಗೆ ಬೆಂಬಲ ನೀಡುತ್ತಾ, ಅವರಿಗೆ ಜೈಕಾರ ಹಾಕುತ್ತಾ, ತನ್ನ ಬೇಳೆ ಬೇಯಿಸಿಕೊಳ್ಳಲು ತೊಡಗುತ್ತಾನೆ. ಅಂದರೆ ಶಕುನಿಯಂತೆ ಕುತಂತ್ರದ ಬಲೆಗಳನ್ನು ಬೀಸುತ್ತಾನೆ. ಆಗ ಅವನ ನೈಜ ಮುಖ ಯಾರ ಗಮನಕ್ಕೂ ಬಾರದೆ ಅವನು ಸಮರ್ಥ ವ್ಯಕ್ತಿಯಾಗಿದ್ದಾನೆ ಎಂದು ಸುತ್ತಲೂ ಇದ್ದ ಪಹರೆಗಳು ಸಡಿಲವಾಗಿ ಅವನನ್ನು ಸ್ವತಂತ್ರಗೊಳಿಸುತ್ತವೆ. ಆ ಸಮಯವನ್ನೇ ಕಾಯುತ್ತಿದ್ದ ಇವನು ಹಾಗೂ ಆ ಗೋಡೆಗಳನ್ನು ತನ್ನ ಏಳಿಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸ್ವಾರ್ಥ ಲಾಲಸೆಯ ಜೀವನ ಸಾಗಿಸಲು ಪ್ರಾರಂಭಿಸುತ್ತಾನೆ ಎಂಬುದು ಕವಿಯ ಇಂಗಿತ ವಾಗಿದೆ.
೬
ಕಾವಲು ಗೋಡೆಗಳಿಗೆ ತಲುಪಿಸಿದ್ದು ರಾಮ ನಾಮ
ನಿಜದಲ್ಲಿ ಪಡೆದಷ್ಟೂ ತೃಪ್ತಿಯಿರದ ಸ್ವಚ್ಛಂದ ಕಾಮ
ಹೌದು ನಾನು ಪಾಪಿ… ಗೋಡೆಗಳ ಕಡೆಗಣಿಸಿದ ಸ್ವಾರ್ಥಿ…
ಕೆಡವಲಾಗಲಿಲ್ಲ ನನಗೆ ಚಿತ್ತ ಭಿತ್ತಿ
ಮನ್ನಿಸಿ ಬಿಟ್ಟರೂ ನನ್ನ ಆ ಹರಿ
ಕ್ಷಮಿಸಲಾರ ಭಿತ್ತಿಯೊಳಗೆ ಕುಂತ ಈ
ಪ್ರಹರಿ
ಪಹರೆ ಕಾಯುತ್ತಿದ್ದವರಿಗೆ ರಾಮನಂತೆ ಒಳ್ಳೆಯ ವ್ಯಕ್ತಿ ತಾನೆಂದು ಸುಳ್ಳು ಸಂದೇಶ ತಲುಪಿಸಿ ಸಕಲ ಗುಣ ಸಂಪನ್ನನಾಗಿ ನಡೆದುಕೊಂಡು ರಾಮನಂತೆ ಕಾಣುತ್ತಾನೆ. ವಿಪರ್ಯಾಸ ಎಂದರೆ ಅದು ನಿಜವನ್ನು ಮರೆಮಾಚುವ ಉಪಾಯವೇ ಹೊರತು ಸತ್ಯಸಂಗತಿಯಾಗಿರುವುದಿಲ್ಲ. ವಾಸ್ತವದಲ್ಲಿ ಇವನು ಪರಮಪಾಪಿ ಆಗಿರುವನು ಎಂದು ಹೇಳಿದ್ದಾರೆ. ಇಲ್ಲಿ ಕವಿಗಳು ಸುರಕ್ಷಾ ಕವಚವನ್ನು ಕಡೆಗಣಿಸಿ ಅವಕಾಶವಾದಿಯಾಗಿ ಎಲ್ಲರನ್ನು ವಂಚಿಸಿದ ವ್ಯಕ್ತಿ ಎಂದಿದ್ದಾರೆ. ಆದರೂ ಎಲ್ಲಾ ತಪ್ಪುಗಳನ್ನು ಮನ್ನಿಸಿ ಬಿಟ್ಟನು ಭಕ್ತವತ್ಸಲ ಶ್ರೀಹರಿ ಎನ್ನುತ್ತಾ ಅವನನ್ನು ವಂಚಿಸಿದ ನನಗೆ ನನ್ನ ಮನಸ್ಸಿನ ಗೋಡೆಯೊಳಗೆ ಕುಳಿತ ನನ್ನ “ಆತ್ಮಸಾಕ್ಷಿ” ಎಂಬ ಪ್ರಹರಿಗೆ ಮೋಸ ಮಾಡಲಾಗಲಿಲ್ಲ. ಅವನು ಸದಾ ನನ್ನನ್ನು ಪ್ರಶ್ನೆ ಮಾಡುತ್ತಿರುವನು. ಅವನೆಂದಿಗೂ ನನ್ನನ್ನು ಕ್ಷಮಿಸಲಾರ ಎಂಬ ಹತಾಶೆಯನ್ನು ಕವಿ ವ್ಯಕ್ತಪಡಿಸಿದ್ದಾರೆ.
“ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು,ಅಷ್ಟೇ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ ಯಾವತ್ತಿಗೂ ನನ್ನ ಆತ್ಮಸಾಕ್ಷಿಯನ್ನು ಬಂಧಿಸಿಡಲಾಗದು.”
—ಮಹಾತ್ಮ ಗಾಂಧಿ
ಕವಿಯಲ್ಲಿ ನಾ ಕಂಡ ಕವಿ ಭಾವ
“ಕಿರಿದರೊಳ್ ಹಿರಿಯರ್ಥ” ತುಂಬಿಕೊಡುವುದು ಈ ಕವಿಯ ಚಾಕಚಕ್ಯತೆಯಾಗಿದೆ. ಇವರ ಭಾಷಾ ಪ್ರಯೋಗಕ್ಕೆ ಮಾರುಹೋಗದವರಿಲ್ಲ. ಸೃಜನಶೀಲ ಬರಹದ ಮೂಲಕ ಓದುಗರನ್ನು ವೈಚಾರಿಕತೆಗೆ ಹಚ್ಚುವುದು ಇವರ ಜಾಯಮಾನ. ಘಟನೆಯೊಂದನ್ನು ದೃಶ್ಯಕಾವ್ಯದಂತೆ ಬಿತ್ತರಿಸುವುದು ಇವರ ಕವನಗಳ ವಿಶೇಷತೆಯಾಗಿದೆ.
ಕಾವ್ಯ ಪ್ರಸ್ತುತತೆಯ ಶೈಲಿ ಓದುಗರ ಗಮನವನ್ನು ಸೆಳೆಯುವಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸುತ್ತದೆ. ಇವರು ಕವಿತೆಯಲ್ಲಿ ನೇರವಾಗಿ ಏನನ್ನು ಪ್ರಸ್ತುತಪಡಿಸುವುದಿಲ್ಲ. ಬದಲಾಗಿ ಅಪೂರ್ವ ರೂಪಕಗಳು ಮತ್ತು ಪ್ರತಿಮೆಗಳಿಂದ ತಾವಂದುಕೊಂಡ ಕಾವ್ಯವಸ್ತುವನ್ನು ಓದುಗರ ಮುಂದಿಡುತ್ತಾರೆ. ಅದನ್ನು ಓದುತ್ತಾ ಸಾಗಿದರೆ ತಾವೇ ಅದರೊಳಗಿನ ಪಾತ್ರವಾಗುವಂತೆ ಅನುಸಂಧಾನಗೈಯುತ್ತವೆ.ಈ ಕವಿತೆಯನ್ನು ಓದಿದ ನಂತರ ಪಾತ್ರಗಳೊಂದಿಗೆ ಮುಖಾಮುಖಿಯಾಗಿ ಓದುಗರಿಗೆ ಸಾರ್ಥಕ ಭಾವ ಕಾಡುತ್ತದೆ. ಇಲ್ಲಿ ಭಾವನೆಗಳ ಚೆಲ್ಲಾಟಕ್ಕಿಂತ ಪದಪುಂಜಗಳಲ್ಲಿ ಕವಿತೆಯನ್ನು ಬಂಧಿಸುವಲ್ಲಿ ಕವಿಯು ಚಾಣಾಕ್ಷತನ ಮೆರೆದಿದ್ದಾರೆ. ಇವರ ಕವಿತೆಯಲ್ಲಿ ಭಾವ ಭಾವತೀವ್ರತೆಯ ಸಾಲುಗಳು ಇದ್ದರೂ ಬುದ್ಧಿ ಉದ್ದೀಪನಗೊಳಿಸುವ ಮದ್ದೂ ಇರುವುದಂತೂ ಸುಳ್ಳಲ್ಲ. ಈ ಕವಿತೆಯಲ್ಲಿ ಕವಿಯು ಜೀವನ ಮೌಲ್ಯದ ವಿರಾಟ ದರ್ಶನ ಮಾಡಿಸಿದ್ದಾರೆ. ಬದುಕಿನ ಪ್ರತಿ ಹಂತದಲ್ಲೂ ಮನುಷ್ಯ ಅನುಕೂಲಸಿಂಧುವಾಗಿ ವರ್ತಿಸುತ್ತಾ, ಆಶಾಡಭೂತಿ ಗಳಾಗಿ ಅದನ್ನು ಬಚ್ಚಿಡಲು ಯಾವ ಮಟ್ಟಕ್ಕಾದರೂ ಇಳಿಯುವ ಎಂಬುದನ್ನು ಸಾರುವುದೆ ಕವಿತೆಯ ಹೆಗ್ಗುರಿಯಾಗಿದೆ.
ಜೀವನವನ್ನೇ ರಂಗಮಂದಿರ ಮಾಡಿಕೊಂಡು ವಿಧ ವಿಧದ ವೇಷ ಧರಿಸಿದ ಜನರ ವಿರುದ್ಧದ ಕವಿಯ ಸಾತ್ವಿಕ ಕ್ರೋಧವನ್ನು ಕಾಣಬಹುದು. ಇಲ್ಲಿ ನೈಜ ಒರತೆಯ ಸಮೃದ್ಧ ಚಿತ್ರಣವಿದೆ. ಪ್ರಾಮಾಣಿಕತೆಯೆ ಬಾಳಿನ ಗಟ್ಟಿ ಬೇರಾಗಬೇಕು. ಆದರೆ ಗೋಸುಂಬೆಯಾಗಿ ನಡೆದುಕೊಂಡು ಸಮಾಜಕ್ಕೆ ವೈವಿಧ್ಯಮಯವಾದ ಮಗ್ಗುಲುಗಳಲ್ಲಿ ಮಂಕೂ ಭೂದಿ ಎರಚಿದರೂ ನಮ್ಮೊಳಗಿನ ಆತ್ಮಸಾಕ್ಷಿಯನ್ನು ವಂಚಿಸಲು ಸಾಧ್ಯವಿಲ್ಲ ಎಂಬುದನ್ನು ಈ ಕವನದ ಮೂಲಕ ಸಾರುತ್ತಾ, ಆತ್ಮಸಾಕ್ಷಿಯೇ ನಿಜವಾದ ನ್ಯಾಯಾಲಯ ಅದನ್ನು ಮೆಚ್ಚಿಸುವಂತೆ ನಾವು ನಡೆದುಕೊಳ್ಳೋಣ ಎಂಬ ಸಂದೇಶ ನೀಡಿದ್ದಾರೆ.
ಅನುಸೂಯ ಯತೀಶ್
ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ