ದಾರಾವಾಹಿ

ಆವರ್ತನ

ಅದ್ಯಾಯ52

I love abstract art. Good... - Arts, Artists, Artwork | Facebook

ಶಂಕರನೂ, ಸುರೇಂದ್ರಯ್ಯನೂ ಆವತ್ತೇ ಗುರೂಜಿಯವರ ಮನೆಗೆ ಹೊರಟು ಬಂದುದರಿಂದ ಗುರೂಜಿಯವರು ಅವರೊಡನೆ ಗಂಭೀರವಾಗಿ ಮಾತುಕತೆಗಿಳಿದರು.

‘ನೋಡಿ ಸುರೇಂದ್ರಯ್ಯ, ನಮ್ಮ ಇವತ್ತಿನವರೆಗಿನ ಅನುಭವದಲ್ಲಿ ನಮ್ಮ ಯಾವ ಶುಭಕಾರ್ಯದಲ್ಲೂ ಇಂಥದ್ದೊಂದು ಅಪಶಕುನ ನಡೆದದ್ದಿಲ್ಲ. ನಿಮ್ಮ ಆ ಜಾಗದಲ್ಲಿ ಏನೋ ಊನವಿದೆ ಅಂತ ನಮಗಾವತ್ತೇ ಗೊತ್ತಾಗಿತ್ತು. ಅದನ್ನು ಆ ಹೊತ್ತು ನಿಮ್ಮೆಲ್ಲರ ಗಮನಕ್ಕೂ ತಂದಿದ್ದೆವು. ಅಲ್ಲದೇ ಆ ಘಟನೆ ನಡೆದ ಮರುದಿನವೇ ಅಂಜನವಿಟ್ಟೂ ನೋಡಿದೆವು. ಅದರಿಂದ ಒಂದು ವಿಷಯ ಸ್ಪಷ್ಟವಾಯಿತು. ಏನೆಂದರೆ ಅಲ್ಲೊಂದು ದೊಡ್ಡ ದೋಷದ ಛಾಯೆ ಸಂಚರಿಸುತ್ತಿದೆ! ಆದರೆ ಅದು ನಿಮಗೆ ಸಂಬಂಧಿಸಿದ್ದು. ಆದ್ದರಿಂದ ನೀವೀಗ ನಮ್ಮ ಈ ಪವಿತ್ರವಾದ ಧಾರ್ಮಿಕ ಸ್ಥಳದಲ್ಲಿ ಕುಳಿತಿದ್ದೀರಿ. ಇಲ್ಲಿ ಸತ್ಯವನ್ನೇ ಹೇಳಬೇಕು ನೀವು. ಸುಳ್ಳು ಹೇಳಿದರೆ ಎಲ್ಲರಿಗೂ ಆಪತ್ತು ಕಟ್ಟಿಟ್ಟದ್ದು!’ ಎಂದು ಗುರೂಜಿಯವರು ಖಡಕ್ಕಾಗಿ ಹೇಳಿದರು. ಅದರಿಂದ ಸುರೇಂದ್ರಯ್ಯ ಕಕ್ಕಾಬಿಕ್ಕಿಯಾದರು.

‘ಅರೇ, ನೀವೇನು ಹೇಳುತ್ತಿದ್ದೀರಿ ಗುರೂಜಿ…, ನಮಗೆ ಸಂಬಂಧಿಸಿದ ದೋಷವೇ…? ಅದೇನೆಂದು ಅರ್ಥವಾಗಲಿಲ್ಲ. ಸ್ವಲ್ಪ ಬಿಡಿಸಿ ಹೇಳಿದರೆ ಒಳ್ಳೆಯದಿತ್ತು…!’

‘ಹೌದು ಸುರೇಂದ್ರಯ್ಯ, ಮೊನ್ನೆ ನಡೆದ ಅಪಘಾತಕ್ಕೆ ನೀವೇ ಕಾರಣ!’ ಎಂದು ಗುರೂಜಿಯವರು ಮತ್ತೆ ಒತ್ತಿ ಹೇಳಿದರು. ಆಗ ಸುರೇಂದ್ಯಯ್ಯ ಇನ್ನಷ್ಟು ಬಿಳಿಚಿಕೊಂಡರು.

‘ಇಲ್ನೋಡಿ ಸುರೇಂದ್ರಯ್ಯ, ಗಾಬರಿಯಾಗದೆ ಮಾತಾಡಿ. ನೀವು ಯಾವತ್ತಾದರೂ ನಿಮ್ಮ ಮನೆತನದ ಪಿಲಿಚೌಂಡಿ (ಹುಲಿ ಚಾಮುಂಡಿ)ಗೆ ಏನಾದರೂ ಸೇವೆ ಕೊಡುತ್ತೇವೆಂದು ಸಂಕಲ್ಪಿಸಿಕೊಂಡಿದ್ದುಂಟಾ? ಸರಿಯಾಗಿ ಜ್ಞಾಪಿಸಿಕೊಂಡು ಹೇಳಿ ನೋಡುವಾ!’ ಎಂದರು ಗುರೂಜಿ.

   ಈಗ ಸುರೇಂದ್ರಯ್ಯ ಸಂಭಾಳಿಸಿಕೊಂಡು ಯೋಚಿಸಿದರು. ಬಳಿಕ ತಟ್ಟನೆ, ‘ಹೌದು ಗುರೂಜಿ ಹೇಳಿಕೊಂಡಿದ್ದೆವು. ಆದರೆ ನಾವಲ್ಲ, ನಮ್ಮ ತಂದೆಯವರಿದ್ದ ಕಾಲದಲ್ಲಿ ಅವರು ಒಂದು ಹರಕೆ ಕಟ್ಟಿಕೊಂಡದ್ದು ನೆನಪಿದೆ. ಆದರೇನು ಮಾಡುವುದು? ಆ ಕಾಲದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹರಕೆ ಮರೆತು ಹೋಯಿತು. ಆದರೆ ಆ ಬಂಡೆ ಮಾರಾಟವಾದರೆ ಅಪ್ಪನ ಹರಕೆ ತೀರಿಸಿ ಅವರಿಗೂ ಅಜ್ಜನಿಗೂ ಎರಡು ಗುಂಡಗಳನ್ನು ಕಟ್ಟಿಸಬೇಕೆಂದು ನಾವು ಅಂದುಕೊಂಡಿದ್ದೆವು!’ ಎಂದು ಸಮಜಾಯಿಸಿ ನೀಡಿದರು. ಆಗ ಗುರೂಜಿಯವರ ಮುಖದಲ್ಲಿ ಗೆಲುವು ಕಾಣಿಸಿತು.

‘ಅದೇ ಮತ್ತೆ…! ಅಂಜನದಲ್ಲಿ ಆ ಸಂಗತಿ ನಮಗೆ ಸುಣ್ಣದ ಬೊಟ್ಟಿಟ್ಟಷ್ಟು ಸ್ಪಷ್ಟವಾಗಿ ಕಂಡು ಬಂತು!’ ಎಂದು  ನಗುತ್ತ ಹೇಳಿದ ಗುರೂಜಿಯವರು ಶಂಕರನತ್ತ ಹೆಮ್ಮೆಯಿಂದ ದಿಟ್ಟಿಸಿ ಅರ್ಥಗರ್ಭಿತವಾಗಿ ನಕ್ಕರು. ಅಷ್ಟು ಕೇಳಿದ  ಶಂಕರನಿಗೂ ಸಮಾಧಾನವಾಯಿತು. ಅದರ ಸೂಚನೆಯಾಗಿ ಅವನು ತನ್ನ ತಲೆಯನ್ನೊಮ್ಮೆ ಜೋರಾಗಿ ಕೊಡವಿಕೊಂಡು ಇನ್ನಷ್ಟು ನೆಟ್ಟಗೆ ಕುಳಿತ.

‘ಅಲ್ಲ ಸುರೇಂದ್ರಯ್ಯ, ನೀವು ಆ ಪಿಲಿಚೌಂಡಿಯನ್ನು ಅದೇ ಬಂಡೆಯ ಜಾಗದಿಂದಲೇ ನಿಮ್ಮ ಮನೆಗೆ ಕರೆದುಕೊಂಡು ಹೋದದ್ದಲ್ಲವಾ…?’ ಎಂದು ಗುರೂಜಿಯವರು ಮತ್ತೆ ಕೇಳಿದರು. 

‘ಹೌದು ಗುರೂಜಿ. ಅದರ ಕಥೆಯನ್ನು ಆವತ್ತು ಶಂಕರಣ್ಣನಿಗೂ ಹೇಳಿದ್ದೆವು…!’ ಎಂದರು ಸುರೇಂದ್ರಯ್ಯ ಅಮಾಯಕರಂತೆ.

‘ಆದರೆ ಸುರೇಂದ್ರಯ್ಯ, ಆವತ್ತು ಆ ಶಕ್ತಿ ನಿಮ್ಮ ಹಿರಿಯರ ಭಕ್ತಿಗೆ ಒಲಿದು ನಿಮ್ಮ ಮನೆಗೆ ಬಂದಿದ್ದೇನೋ ನಿಜ. ಆದರೆ ಕಾಲಕ್ರಮೇಣ ನಿಮ್ಮ ಕುಟುಂಬದಲ್ಲಿ ಹುಟ್ಟಿದ ಮನಸ್ತಾಪ ಮತ್ತು ಒಡಕಿನಿಂದಾಗಿ ಅವರೆಲ್ಲ ಆ ದೈವವನ್ನು ಮರೆತುಬಿಟ್ಟರು. ಹಾಗಾಗಿ ಕೊನೆಕೊನೆಗೆ ಆ ದೇವತೆಗೆ ನೀರು ನೆರಳಿಲ್ಲದಂತಾಯಿತು. ಆದ್ದರಿಂದ ಅದು ಒಮ್ಮೆ ನಿಮ್ಮ ಕುಟುಂಬದ ಮೇಲೆಯೇ ರೋಸಿ ಮರಳಿ ತನ್ನ ಮೂಲಸ್ಥಾನವನ್ನು ಸೇರಿಕೊಂಡಿರುವುದು ನಿಮಗೆ ಗೊತ್ತುಂಟಾ? ಆನಂತರ ನಿಮ್ಮ ಹಿರಿಯರಾಗಲಿ, ನೀವಾಗಲಿ ಆ ಬಗ್ಗೆ ದರ್ಶನ ನಡೆಸಿ ಅವಳ ಕುಂದು ಕೊರತೆಗಳನ್ನು ಕೇಳಲೇ ಇಲ್ಲವಲ್ಲ!’ ಎಂದು ಗುರೂಜಿಯವರು ಒರಟಾಗಿ ಹೇಳಿದರು. ಅಷ್ಟು ಕೇಳಿದ ಸುರೇಂದಯ್ಯ ಮತ್ತೆ ಅಶಾಂತರಾದರು. ಓಹೋ ಹೀಗಾ ವಿಷಯ…? ಅದಕ್ಕೇ ಇರಬೇಕು ಕೆಲವು ಕಾಲದಿಂದ ನಾವು ಮುಟ್ಟಿದ್ದೆಲ್ಲವೂ ಶನಿ ಹಿಡಿದಂತೆ ಹಾಳಾಗುತ್ತಿರುವುದು! ಎಂದು ಯೋಚಿಸಿದವರು, ಖಂಡಿತಾ ಹೌದು. ಯಾಕೆಂದರೆ ಇಂಥ ಮಹಾಜ್ಞಾನಿಯ ಮಾತುಗಳೆಂದೂ ಸುಳ್ಳಾಗಲಿಕ್ಕಿಲ್ಲ! ಎಂದುಕೊಂಡರು.

‘ಇದ್ದರೂ ಇರಬಹುದು ಗುರೂಜೀ. ನಮ್ಮ ಕುಟುಂಬದ ಹತ್ತು ಹಲವು ತಾಪತ್ರಯಗಳ ಮಧ್ಯೆ ನಾವ್ಯಾರೂ ಇದನ್ನು ಗಮನಿಸಲು ಹೋಗಲೇ ಇಲ್ಲ ನೋಡಿ!’ ಎಂದು ವಿಷಾದ ವ್ಯಕ್ತಪಡಿಸಿದರು.

ಆಗ ಗುರೂಜಿಯವರಿಗೆ ರೇಗಿಬಿಟ್ಟಿತು. ‘ಅರೆರೇ…! ಇರಬಹುದು ಎಂದರೇನು ಸುರೇಂದ್ರಯ್ಯ…? ನಾವೇನು ಸುಳ್ಳು ಹೇಳುತ್ತಿದ್ದೇವೆಂದಾ ನಿಮ್ಮ ಮಾತಿನರ್ಥ…?’ ಎಂದು ಕಹಿಯಾಗಿ ಪ್ರಶ್ನಿಸಿದರು.

ಸುರೇಂದ್ರಯ್ಯ ಬೆಚ್ಚಿಬಿದ್ದವರು, ‘ಅಯ್ಯಯ್ಯೋ ನಾವೆಲ್ಲಿ ಹಾಗೆ ಹೇಳಿದೆವು ಗುರೂಜೀ…? ಖಂಡಿತಾ ನಮ್ಮಿಂದಲೇ ತಪ್ಪಾಗಿರುವುದು ಹೌದು. ಅದನ್ನು ಒಪ್ಪಿಕೊಳ್ಳುತ್ತೇವೆ!’ ಎಂದರು ತಟ್ಟನೆ.

‘ಹಾಗೆ ಹೇಳಿ ಮತ್ತೇ…! ನಾವು ಹೇಳುತ್ತಿರುವುದು ಅಕ್ಷರಶಃ ಸತ್ಯ ಸುರೇಂದ್ರಯ್ಯ. ನಮ್ಮ ತುಳುವರ ನಂಬಿಕೆಯಲ್ಲಿ ಹುಲಿ ಅಂದರೆ ಯಾವುದರ ಸಂಕೇತ ಹೇಳಿ…?’

‘ಹುಲಿಯೆಂದರೇ…? ಮತ್ತ್ಯಾವುದು ಚೌಂಡಿಯಲ್ಲವಾ ಗುರೂಜೀ…!’

‘ಓಹೋ ಹೌದಾ. ನಿಮಗೂ ಗೊತ್ತುಂಟಾ…?’

‘ಗೊತ್ತಿಲ್ಲದೆ ಏನು, ನಮ್ಮ ಹಿರಿಯರೂ ಹಾಗೆಯೇ ನಂಬಿಕೊಂಡು ಬಂದವರಲ್ಲವಾ. ನಮ್ಮ ಮಹಿಷಮರ್ದಿನಿಯ ವಾಹನವೂ ಹುಲಿಯೇ ಅಲ್ಲವಾ…?’

‘ಓಹೋ ಹೌದಾ…ಸರಿ. ಹಾಗಾದರೆ ಮೊನ್ನೆ ನಮ್ಮ ನಾಂದಿಪೂಜೆಯನ್ನು ಕೆಡಿಸಿ ಸಿಕ್ಕಸಿಕ್ಕದವರ ಮೇಲೆಲ್ಲ ಕೋಪ ತೋರಿಸಿದವರು ಯಾರಿರಬಹುದು? ಆ ಮೂಕ ಪ್ರಾಣಿಗಳು ಅಂಥದ್ದೊಂದು ಆಕ್ರಮಣವನ್ನು ನಿಮ್ಮೂರಲ್ಲಿ ಈ ಹಿಂದೆ ಬೇರೆ ಯಾರ ಮೇಲಾದರೂ ನಡೆಸಿದ್ದು ನಿಮಗೆ ಗೊತ್ತುಂಟೋ…?’

   ಅಷ್ಟು ಕೇಳಿದ ಸುರೇಂದ್ರಯ್ಯನಿಗೆ ಗುರೂಜಿಯವರ ಮಾತಿನರ್ಥ ಮೆಲ್ಲನೆ ಹೊಳೆಯತೊಡಗಿತು. ಆದ್ದರಿಂದ ಅವರು ತಟ್ಟನೆ ಯೋಚನೆಗೆ ಬಿದ್ದರು. ಹೌದಲ್ಲವಾ…! ನಮಗೆ ತಿಳಿದಮಟ್ಟಿಗೆ ಆ ಕಾಡುಗುಡ್ಡೆಯಲ್ಲಿರುವ ಕೆಲವು ಚಿಟ್ಟೆಹುಲಿಗಳು ಊರಿನ ಒಂದೆರಡು ಕಡೆ ನಾಯಿ, ಕೋಳಿ ಮತ್ತು ಅಪರೂಪಕ್ಕೊಮ್ಮೆ ಸಣ್ಣಪುಟ್ಟ ದನ ಕರುಗಳನ್ನೆಲ್ಲಾದರೂ ಹಿಡಿದು ಗೋಣು ಮುರಿದು ಕೊಂಡು ಹೋಗಿದ್ದುಂಟು ಬಿಟ್ಟರೆ ಅವೆಂದೂ ಜನರ ಮೇಲೆ ದಾಳಿ ಮಾಡಿದಂಥ ಘಟನೆಗಳು ನಡೆದದ್ದಿಲ್ಲ! ಎಂದುಕೊಂಡವರು, ‘ಇಲ್ಲ, ಇಲ್ಲ ಗುರೂಜಿ. ಅವು ಬಹಳ ಹಿಂದಿನಿಂದಲೂ ನಮ್ಮ ಆಸುಪಾಸು ಬದುಕುತ್ತಿವೆಯಾದರೂ ಜನರಿಗೆ ಯಾವುದೇ ಹಾನಿ ಮಾಡಿದ ಸಂಗತಿಗಳಿಲ್ಲ!’ ಎಂದ ಸುರೇಂದ್ರಯ್ಯನಿಗೆ ತಕ್ಷಣ ಇನ್ನೊಂದು ವಿಷಯವೂ ಮನಸ್ಸಿಗೆ ಬಂದು, ‘ಅಂದರೇ…? ಓಹೋ…,ಈಗ ಅರ್ಥವಾಯಿತು ಗುರೂಜೀ. ಆ ಚೌಂಡಿಯೇ ನಮ್ಮ ಮೇಲೆ ಕೋಪಿಸಿಕೊಂಡಿದ್ದಾಳೆಂದು ತಾನೇ ತಮ್ಮ ಮಾತಿನರ್ಥ…?’

‘ಹೌದು ಸುರೇಂದ್ರಯ್ಯ. ಈಗ ನೀವು ಸರಿಯಾಗಿ ಊಹಿಸಿದ್ದೀರಿ. ಅದಕ್ಕಾಗಿಯೇ ಅವಳೂ ನಮ್ಮವನೊಬ್ಬನ ಪ್ರಾಣಾಹುತಿ ಪಡೆದಿರುವುದು!’ ಎಂದು ಗುರೂಜಿಯವರು ತಮ್ಮ ಕಣ್ಣಗುಡ್ಡೆಗಳನ್ನು ಭ್ರೂಮಧ್ಯೆ ಸರಿಸಿಕೊಂಡು ಇಹದ ಇರುವನ್ನೇ ಮರೆತಂತೆ ಅಂದರು. ‘ಅಯ್ಯಯ್ಯೋ ಗುರೂಜಿ, ನಮ್ಮಿಂದ ಬಹಳ ದೊಡ್ಡ ಪ್ರಮಾದವಾಗಿ ಬಿಟ್ಟಿದೆಯಲ್ಲ. ಅವಳನ್ನು ಸಮಾಧಾನಿಸಲು ನಾವೇನು ಮಾಡಬೇಕೆಂಬುದನ್ನೂ ನೀವೇ ತಿಳಿಸಬೇಕು!’ ಎಂದು ಸುರೇಂದ್ರಯ್ಯ ತೀವ್ರ ವಿಚಲಿತರಾಗಿ ಅಂದರು.   

   ಸುರೇಂದ್ರಯ್ಯನ ಶರಣಾಗತಿಯನ್ನು ಗಮನಿಸಿದ ಗುರೂಜಿಯವರ ಕಣ್ಣಗುಡ್ಡೆಗಳು ಮರಳಿ ಯಥಾಸ್ಥಿತಿಗೆ ಬಂದವು. ‘ಸಮಯ ಇನ್ನೂ ಮಿಂಚಿಲ್ಲ ಸುರೇಂದ್ರಯ್ಯ. ಬರುವ ತಿಂಗಳು ಪುಷ್ಯ ಹುಣ್ಣಿಮೆ. ಆ ದೇವಿಯನ್ನು ಒಲಿಸಿಕೊಳ್ಳಲು ಬಹಳ ಒಳ್ಳೆಯದಿನ. ಆವತ್ತು ಅವಳ ದರ್ಶನಸೇವೆಯನ್ನು ಇಟ್ಟುಕೊಂಡು, ನಿಮ್ಮ ಹಿರಿಯರು ಅವಳ ಸಂತೃಪ್ತಿಗಾಗಿ ಹೇಳಿಕೊಂಡಿದ್ದಂಥ ಹರಕೆಯನ್ನು ತೀರಿಸುವುದಾಗಿ ಅವಳೊಡನೆ ಬೇಡಿಕೊಳ್ಳಿ. ಅಲ್ಲಿಯತನಕ ಅವಳು ಆ ಬಂಡೆಯನ್ನು ಯಾರೀಗೂ ಬಿಟ್ಟುಕೊಡುವುದಿಲ್ಲ! ಒಂದುವೇಳೆ ಆ ಮೇಲೆಯೂ ಅವಳು ಒಪ್ಪದಿದ್ದರೆ ಮತ್ತೆ ಅವಳನ್ನು ಹೇಗೆ ಮಣಿಸಬೇಕೆಂದು ನಮಗೂ ಗೊತ್ತಿದೆ ಹಾಗೂ ನಮ್ಮ ಶಕ್ತಿ ಏನೆಂದು ಅವಳಿಗೂ ಚೆನ್ನಾಗಿ ತಿಳಿದಿದೆ ಸುರೇಂದ್ರಯ್ಯ! ಹಾಗಾಗಿ ನೀವು ಧೈರ್ಯದಿಂದ ನಾವು ಹೇಳಿದ ಕೆಲಸವನ್ನು ಮಾಡಿ ಮುಗಿಸಿ!’ ಎಂದು ಗುರೂಜಿಯವರು ವ್ಯಂಗ್ಯವಾಗಿ ನಗುತ್ತ ಆಜ್ಞಾಪಿಸಿದರು.

ತಾವು ದೇವರನ್ನೂ ಮಣಿಸಬಲ್ಲಂಥ ವಿಶೇಷ ಶಕ್ತಿಯುಳ್ಳವರು ಎಂಬ ಅಹಂಕಾರವು ಗುರೂಜಿಯ ಮಾತುಗಳಲ್ಲಿ ತುಂಬಿ ತುಳುಕಿದ್ದನ್ನು ಕಂಡ ಸುರೇಂದ್ರಯ್ಯನಿಗೂ ಆ ಶಕ್ತಿಯ ಮೇಲೆ ಅವರಂಥದ್ದೇ ಹಗುರಭಾವನೆಯೊಂದು ಮೂಡಿಬಿಟ್ಟಿತು. ಆದ್ದರಿಂದ, ‘ಆಯ್ತು ಗುರೂಜಿ, ತಾವು ಹೇಳಿದಂತೆಯೇ ನಡೆದುಕೊಳ್ಳುತ್ತೇವೆ. ಒಟ್ಟಾರೆ ನಮ್ಮ ಬದುಕಿಗೆ ಚಿನ್ನದ ಗಣಿಯಂತಿರುವ ಆ ಬಂಡೆಯನ್ನು ಮಾತ್ರ ನಾವು ಯಾರೀಗೂ ಮತ್ತು ಯಾವ ಶಕ್ತಿಗೂ ಬಿಟ್ಟುಕೊಡುವುದಿಲ್ಲ!’ ಎಂದು ಕಠೋರ ನಿರ್ಧಾರದಿಂದ ಹೇಳಿದವರು ಗುರೂಜಿ ಮತ್ತು ಶಂಕರನಿಂದ ಬೀಳ್ಗೊಂಡು ಮನೆಗೆ ಹಿಂದಿರುಗಿದರು.

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top