ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

ಪುಸ್ತಕ ಸಂಗಾತಿ

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು 

  ಕನ್ನಡದ ಮಹತ್ವದ ಯುವ ಲೇಖಕಿ , ಎಂಟು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ  ಚೆನ್ನೈನಲ್ಲಿ ವಾಸವಿರುವ  ಶ್ರೀಮತಿ. ಶಾಂತಿ ಅಪ್ಪಣ್ಣ ಇವರ ಎರಡನೆ ಕಥಾಸಂಕಲನ  ” ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ” ಎಂಬ ಕುತೂಹಲಭರಿತ ಶೀರ್ಷಿಕೆಯನ್ನು ಹೊಂದಿ ನಮ್ಮೆದುರು ಬಂದಿದೆ.ಮೊದಲ ಸಂಕಲನ ” ಮನಸ್ಸು ಅಭಿಸಾರಿಕೆ” ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೊಂದಿಗೆ ಇನ್ನು ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿರುವ ಅತ್ಯುತ್ತಮ ಕೃತಿ . ಅದಕ್ಕಿಂತಲೂ ಉತ್ತಮವಾದ ಕಥೆಗಳನ್ನು ಹೊಂದಿರುವ ” ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ” ಕೃತಿ ಪ್ರಶಸ್ತವಾದ ಮನ್ನಣೆಗಳು ಬರುವಂತಹ ಅರ್ಹತೆಯನ್ನು ಹೊಂದಿದೆ. 

        ಇವರ ಕಥೆಗಳ ಶೈಲಿ ಮತ್ತು ವಸ್ತು ವೈವಿಧ್ಯ ನಮ್ಮನ್ನು ದಂಗುಬಡಿಸುತ್ತದೆ. ಯಾಕೆಂದರೆ ಪ್ರತಿ ಕಥೆಗಳ ಒಳಹೊಕ್ಕು ಓದಿದಾಗ ಲೇಖಕ ಅಥವ ಲೇಖಕಿಯ ಜೀವನಕ್ಕೆ ಕಥೆಗಳನ್ನು ತಳುಕು ಹಾಕಿ ನೋಡುವುದು ಹೆಚ್ಚಿನ್ನೆಲ್ಲಾ ಓದುಗರ ಸಾಮಾನ್ಯ ಅಭ್ಯಾಸ. ಆದರೆ ಇಲ್ಲಿ ಹಾಗೆ ನೋಡೋಣವೆಂದರೆ ಇವರ  ಕಥೆಗಳಲ್ಲಿ ಅದರ ಸುಳಿವು ಒಂದಿಂಚು ಸಿಗುವುದಿಲ್ಲ . ಇದೊಂದು ವಿಚಾರ ಕಥೆಗಳನ್ನು ಓದುವಾಗ ನಮಗೆ ವಿಶೇಷವಾದ ರೋಮಾಂಚನವನ್ನುಂಟು ಮಾಡುತ್ತದೆ. ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು ಪ್ರತಿ ಕತೆಗಳಲ್ಲಿ ಅದರ ಸ್ಪರ್ಶದ ಲವಲೇಶವು ಇಲ್ಲ . ಚೆನ್ನೈ ನಲ್ಲಿದ್ದರು , ಹೆಚ್ಚಾಗಿ ಕರ್ನಾಟಕದ ಜೀವನ ಶೈಲಿಯನ್ನು ಗಣನೆಗೆ ತೆಗೆದುಕೊಂಡು ಕಥೆಗಳನ್ನು ಹೆಣೆಯುವುದರಿಂದ ,ಇನ್ನೂ ಇತರ ಕಾರಣಗಳಿಂದ ಇವರ ಕಥೆಗಳು ತುಂಬಾ ಭಿನ್ನವಾಗಿ ನಿಲ್ಲುತ್ತದೆ.  ” ಅವರು ಒಳಗೊಳಗೆ ದಹಿಸುತ್ತಾ ….ಅದನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಂಬಿಸಿ ಆಳ ಹೃದಯದಲ್ಲಿ ಹೂತು ಅದರ ಮೇಲೆ ಕಲ್ಲಿಟ್ಟು .. ಮರೆಯುವ ಯತ್ನದಲ್ಲಿ ತೊಡಗಿದ “. ಹೀಗೆ ಕಥೆಯಲ್ಲಿ ಪ್ರಜ್ಞಾಪೂರ್ವಕವಾಗಿ ಬರುವ ಸಾಲುಗಳು ನಮ್ಮ ಪ್ರಜ್ಞೆಯನ್ನು ಎಚ್ಚರಿಸುತ್ತವೆ.  

             ” ಆಗಸದ ನಿರ್ಜನ ಬೀದಿಯಲ್ಲಿ ಮೆರವಣಿಗೆ ಹೊರಟಂತೆ ಹಾಯಾಗಿ ಹೊರಟಿರುವ  ಅವುಗಳಲ್ಲಿ ಯಾವುದಾದರೊಂದು ಮೋಡದ ತುಣುಕನ್ನು ಹಿಡಿದು ಎತ್ತಲಾದರು ತೇಲಿ ಹೋಗಬೇಕೆಂದು ಒಕ್ಕುವಿಗೆ ಅನಿಸಿತು” . ‘ನಿರಾಕರಣೆ ‘ ಕಥೆಯಲ್ಲಿ ಬರುವ ಈ ಸಾಲಿನಂತಹ ಇನ್ನು ಹಲವಾರು ಮಂತ್ರಮುಗ್ಧಗೊಳಿಸುವ ಸಾಲುಗಳನ್ನು ಓದಿದಾಗ  ಇಲ್ಲಿನ ಬರಹಗಳು ಒಂದು ಸಾಹಿತ್ಯಿಕವಾದ ಚಲನೆಯನ್ನು ಹೊಂದಿದೆ ಎಂದು ನಮಗನಿಸುತ್ತದೆ‌ .  ಅಂದರೆ ಸಂಪೂರ್ಣ ಸಾಹಿತ್ಯ ವಲಯವೆ ಬೆಳೆಯುವಂತಹ ಸ್ಪೂರ್ತಿ ಇಲ್ಲಿಂದಲೆ ಸಿಗುತ್ತದೆ .ಅಲ್ಲದೆ ಪ್ರತಿ ಸಂಬಂಧಗಳ ಆಳ, ಅಗಲ ಸೋಲು, ಗೆಲುವು, ನಲಿವು , ದುಃಖ, ದುಮ್ಮಾನ , ಪ್ರೀತಿ , ದ್ವೇಷ ಎಲ್ಲವನ್ನೂ ಕರಾರುವಕ್ಕಾಗಿ ನೈಜ್ಯವಾಗಿ ಪರಾಂಬರಿಸಿ ನೋಡಿದ್ದಾರೆ.    

ಕಥೆಯ ನಿರೂಪಣೆಯಲ್ಲಿ ನಾವು ಹೇಳಬೇಕಾಗಿರುವುದನ್ನು, ಒಂದು ಪಾತ್ರವಾಗಿ ಕಥೆಯೊಳಗಿದ್ದು ಹೇಳಿದರೆ ಅಂತಹ ಕಥೆ ಗೆಲ್ಲುವುದು ಅಪರೂಪ. ಬದಲಿಗೆ ಕಥೆಯ ಹೊರಗಡೆ ನಿಂತು ನಾವು ಯಾವುದೆ ಪಾತ್ರಧಾರಿ ಆಗಿರದೆ ನಿರೂಪಿಸಿದರೆ ಅಂತಹ ಕತೆ ವಿಶಿಷ್ಟವಾಗಿರುವುದಂತು ನಿಶ್ಚಿತ. ಶಾಂತಿಯವರ ಕಥೆಗಳು ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇಲ್ಲಿರುವ  ಮುಟ್ಟುವಷ್ಟು ಹತ್ತಿರ  ಮುಟ್ಟಲಾರದಷ್ಟು ದೂರ , ಕಾರಣ , ನಿರೀಕ್ಷೆ, ಜಯರಾಮ ಹುಚ್ಚನಾದ ಕತೆ, ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು , ಹೃದಯವೆಂಬ ಮಧುಪಾತ್ರೆ, ಇತ್ಯಾದಿ ಕಥೆಗಳು ತಮ್ಮ ಜೀವನದಲ್ಲಿ ಸ್ವಲ್ಪವು ಘಟಿಸದ ಸಂಗತಿಗಳು , ಭಾವನೆಗಳು, ವಿಚಾರಗಳು, ಇಲ್ಲಿ ಕಥೆಯಾಗಿವೆ ಎಂದೆನಿಸಿ ಮನಸೂರೆಗೊಳ್ಳುತ್ತವೆ.  ಬದುಕಿನ ತಿರುವುಗಳಲ್ಲಿ ಬಂದ ಯಾವುದೋ ಒಂದು ಸಣ್ಣ ಎಳೆ ಸಾಕಾಗಿರಬಹುದೇನೋ ಈ ಕತೆ ಬರೆಯಲು ಎಂದು ನಾವು ಭಾವಿಸಬಹುದೇ ಹೊರತು ಮತ್ತೇನು ಹೇಳಲು ಸಾಧ್ಯವಿಲ್ಲ. ಆ ಕ್ಣಣಕ್ಕೆ ಹೊಳೆದ ಒಂದು ಸಾಲನ್ನು ‌ಕಲಾತ್ಮಕತೆಯಿಂದ ನೇಯ್ದರೆ ಆಗುವಂತಹ ಕುಸುರಿ ಕಲೆ ಇಲ್ಲಿ ಆಗಿದೆ.                 

” ಅಂದು ಕಾರ್ತಿಕ ಮಾಸದ ಮೊದಲನೆಯ ಸೋಮವಾರವಾಗಿದೆ. ನನಗೆ ಕಾರ್ತೀಕದ ಸಂಜೆಗಳೆಂದರೆ ಮೊದಲಿನಿಂದಲೂ ‌ಇಷ್ಟ‌ . ಅಮ್ಮ‌ಇರುವ ತನಕವು ನಾನು ಅಮ್ಮ ಕೂಡಿ ಮನೆ ತುಂಬಾ ಹಣತೆಯಿಟ್ಟು ಖುಷಿಪಡುತ್ತಿದ್ದೆವು.‌ಅಮ್ಮನಿಲ್ಲದ ಮೇಲೆ ಇದೇ ಮೊದಲ ಸಲ ನಾನೊಬ್ಬಳೆ ಇದರಲ್ಲಿ ತೊಡಗಿಸಿಕೊಂಡಿದ್ದೆ.  ‘ ಹೃದಯವೆಂಬ ಮಧುಪಾತ್ರೆ ಕಥೆಯಲ್ಲಿ ಬರುವ ಅಮ್ಮನ ವಿಚಾರ ಇಲ್ಲಿ ಸಂಪೂರ್ಣ ಕಲ್ಪನೆ ಆಗಿದೆ. ಹೀಗೆ ಕಥೆಗಳ ಹೊರಗೆ ನಿಂತು ಬರೆಯಲು ತೊಡಗುವುದೆಂದರೆ ಅದೊಂದು ಧ್ಯಾನ. ಧ್ಯಾನದ ಒಳಗಿನ ಪ್ರಖರತೆಯನ್ನು ಓದುಗರಾದ ನಾವು ಕಾಣುತ್ತೇವೆ. ಶಾಂತಿಯವರು ಗಂಡು ಪಾತ್ರವನ್ನು ಸೃಷ್ಠಿ ಸಿ ಬರೆಯುವ ಪರಿ ನಿಜಕ್ಕು ಅಭೂತಪೂರ್ವ ವಿಚಾರ. ಇಂತಹ ಮಹಿಳಾ ಬರಹಗಾರರು ತೀರಾ ಅಪರೂಪ.  ” ನಾನು ಆ ಪ್ರಶ್ನೆಗೆ ಉತ್ತರಿಸಲಿಲ್ಲ . ಬದಲಿಗೆ ರಾಜೀ ನೀನು ಅಲ್ಲಿಂದ ಈ ಕಣಿವೆಯನ್ನು ನೆಚ್ಚಿ ಕೆಳಗೆ ಹಾರಿದರೆ ನಿನಗಾಗಿ ನಾನು ಎಷ್ಟರ ಮಟ್ಟಿಗೆ ತೋಳು ತೆರೆಯುತ್ತೇನೋ ನನಗೆ ಗೊತ್ತಿಲ್ಲ . ನೀನು ಹೆಣ್ಣು . ಕೆಳಗಿಳಿದು ಬರಲೇ ? ಎಂಬುದೊಂದು ಪ್ರಶ್ನೆ ಮಾತ್ರವೆ ನಿನಗೆ ”  ….. ಇಂತಹ ಗಂಡು ಪಾತ್ರದ ಆಳವಾದ , ವಿಚಾರವಂತ ನಿದರ್ಶನಗಳನ್ನು ಶಾಂತಿಯವರ ಕಥೆಗಳಲ್ಲಿ ಗುರುತಿಸಹುದು.  ಲೇಖಕಿಯು ಸಮಾಜದಲ್ಲಿ‌ ಕಂಡುಂಡು ಗುರುತಿಸಿದ ಅತೃಪ್ತಿಗಳೆ ಅವರ  ಕಥೆಗಳಾಗಿ ತೃಪ್ತಿ ಹೊಂದಿದೆ. ತಮ್ಮದಲ್ಲದ ಅನುಭವವನ್ನು ಹೇಳುವುದರಲ್ಲಿ ತುಂಬಾ ನಿಸ್ಸೀಮರಾದ ಇವರ ಬರವಣಿಗೆಯ ದಾಹವೆ ಇದಾಗಿದೆ.  

ಶಾಂತಿ ಅಪ್ಪಣ್ಣ ಇವರ ಕತೆಗಳ ಸಿದ್ಧಾಂತವೆ ಕರುಣೆ , ಪ್ರೀತಿ, ಅನುಕಂಪ, ಹೂನಗೆ , ಮಾನವೀಯತೆ ಇದರ ಮೇಲೆ ಅಭಿವ್ಯಕ್ತಿಯಾಗಿದೆ. ಎಲ್ಲಾ ಕಥೆಗಳು ಇದನ್ನು ಪುಷ್ಠೀಕರಿಸುತ್ತವೆ. ಯಾವುದೋ ಒಂದು ಹೊತ್ತಿನಲ್ಲಿ ಮಿಂಚಿನಂತೆ ಹೊಳೆದ ಎಳೆಯನ್ನು ಕತೆಯಾಗಿಸುವ ಕುಶಲತೆ ಸಿದ್ಧಿಸಿದು ಆ ಕಥೆಯ ಸಾರ್ಥಕತೆ. ಯಾಕೆಂದರೆ ಇವರಿಗೆ ಮತ್ತು ಇವರು ಬರೆಯುವ ಕಥೆಗಳಿಗೆ ಎತ್ತಣಿಂದೆತ್ತಲೋ ಸಂಬಂಧ . ಇವರೆ ಹೇಳುವಂತೆ ” ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ ಯಾವುದೋ ಒಂದು ಅನಾಮಿಕ ಎಳೆಯನ್ನು  ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಯುವದೆ ಒಂದು ಸುಖ” ಎನ್ನುತ್ತಾರೆ. ಅಂತ ಸುಖದ ಕತೆಗಳನ್ನು ಓದಲು ಕರುಣಿಸಿದ ಶಾಂತಿಯವರ ಬತ್ತಳಿಕೆಯಲ್ಲಿ ಸದಾ ಕಥೆಗಳು ಸ್ಪರಿಸುತ್ತಿರಲಿ ಎಂಬುದಾಗಿ ಆಶಿಸೋಣ.  ಸಂಗಾತ ಪ್ರಕಾಶನದಿಂದ ಹೊರಬಂದಿರುವ  ಈ ಕೃತಿ ಸಾಹಿತ್ಯ ಲೋಕದ ಮಹತ್ವದ ಕೃತಿಯಾಗಿದೆ.


                                                 ಸಂಗೀತ ರವಿರಾಜ್

One thought on “ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

Leave a Reply

Back To Top