ಬಾಳೊಂದು ಚದುರಂಗ

ಕಾವ್ಯ ಸಂಗಾತಿ

ಬಾಳೊಂದು ಚದುರಂಗ

ಶಶಿಧರ ಹೆಗಡೆ

ಬಾಳೊಂದು ಚದುರಂಗ , ಚಲಿಸಲೇಬೇಕು ಕಪ್ಪು – ಬಿಳಿಯ ಪಥದಲ್ಲಿ …
ಇಲ್ಲಿಹುದು ಎಲ್ಲರ ಸಂಗ , ಆದರೂ ಮುನ್ನುಗ್ಗಬೇಕು ಒಂಟಿ ರಥದಲ್ಲಿ …

ಸುತ್ತಣದವರೆಲ್ಲಾ ನಮ್ಮವರೇ ? ಹೊಂಚು ಹಾಕಿ ಸಂಚು ನಡೆಸಿ , ಅವಕಾಶಕ್ಕಾಗಿ ಕಾದವರೇ …
ಅರೆಕ್ಷಣ ಮೈಮರೆತರೆ , ಸೋಲಿನೂಟವ ಉಣಬಡಿಸಲು ಎಲ್ಲರೂ ಸದಾಸಿದ್ಧರೇ …

ಅಶ್ವ – ಗಜ ಕಾಲಾಳುಗಳ ಪ್ರೇರೇಪಿಸಿ , ಕಾಳಗಕ್ಕಿಳಿಯುವ ಕ್ಷಣವೀಗ …
ಬುದ್ಧಿಯ ಮಂತ್ರಿಯ ಬಳಸಿ , ಮನಸ್ಸಿನ ರಾಜನ ರಕ್ಷಿಸುವ ಅನಿವಾರ್ಯವೀಗ …

ರಣರಂಗದಲ್ಲಿ , ಸೈನ್ಯ – ಕಾಲಾಳುಗಳ ಮರುಜನ್ಮಕೆ ಓಂಕಾರವ ಬರೆಯಬೇಕಾಗಿದೆ , ಯೋಚನೆಯ ಖಡ್ಗದಲ್ಲಿ …
ಕ್ಷಣಾರ್ಧದಲ್ಲಿ ಎದುರಾಳಿಯ ಬಲಾಬಲವನ್ನು ಅರ್ಥೈಸಿಕೊಳ್ಳಬೇಕಾಗಿದೆ , ನಿಮಿತ್ತದ ಚಲನವಲನದಲ್ಲಿ …

ಒಮ್ಮೆ ಹೆಜ್ಜೆ ಹಿಂದಿಟ್ಟು , ಮತ್ತೊಮ್ಮೆ ದಿಕ್ಕು ಬದಲಿಸಿ , ಮಗದೊಮ್ಮೆ ಸೋತಂತೆ ನಟಿಸಿ , ಸದ್ದಿಲ್ಲದೆ ವಿರೋಧಿ ಕೋಟೆಯ ಪ್ರವೇಶಿಸುವ ಮಧ್ಯಂತರದ ಕಾಲವಿದೀಗ …
ಒಂದಷ್ಟು ಕಳೆದು , ಮತ್ತಷ್ಟು ಗಳಿಸಿ , ಎಲ್ಲವ ಅಳೆದುತೂಗುವ ಲೆಕ್ಕಾಚಾರದ ಕಾಲವಿದೀಗ …

ದಶದಿಕ್ಕುಗಳಲಿ ರಕ್ಷಣೆಯ ಸಮದೂಗಿಸಿ , ಗೆಲುವಿಗೆ ಕಾಲಾಳುಗಳ ಬಲಿಕೊಡಲೇಬೇಕು …
ವಿರೋಧಿಯನ್ನು ಅಕ್ಷರಶಃ ಗಮನಿಸಿ , ದಾಳಿಗೊಂದು ಪ್ರತಿದಾಳಿ , ವ್ಯೂಹಕೊಂದು ಬೇಧನವ ಸೃಷ್ಟಿಸಲೇಬೇಕು..

ಸೋಲುವ ಹಂತದಲ್ಲಿದ್ದರೂ , ವಿಶ್ವಾಸಗುಂದದೆ ವಿರೋಧಿಯ ತಪ್ಪಿನ ಹಿನ್ನಡೆಯನ್ನು ಸ್ವಗೆಲುವಿಗೆ ಮುನ್ನುಡಿಯಾಗಿಸಬೇಕು …
ವಿರೋಧಿರಾಜನ ಬಂಧಿಸಿ , ಪೇದೆಯಾದಿಸಹಿತ ದಿಗ್ವಿಜಯದ ಪತಾಕೆಯ ಹಾರಿಸಬೇಕು …

ಒಂದೊಮ್ಮೆ ಸೋತರೆ , ಮುಂದಿನ ರಣಾಂಗಣದ ಘಳಿಗೆಗೆ ಶೈಕ್ಷಣಿಕ ಪಾಠ …
ಗೆದ್ದರಂತೂ ಇತಿಹಾಸ , ಒಟ್ಟಿನಲ್ಲಿ ಅನುಭವಗಳದೇ ಸಾಲು – ಸಾಲು ಪುಟ …

ಏನಾದರೇನು ? ಆಟಮುಗಿದ ಮೇಲೆ ಶ್ವೇತಹಯ , ಕಂದುಸಿಂಧೂರ , ಕರಿಬಿಳಿಯ ರಾಜರಾಣಿಯರೆಲ್ಲರೂ ಒಂದೇ , ಮುಚ್ಚಿಟ್ಟ ಡಬ್ಬದಲ್ಲಿ …
ಯಾರಾದರೇನು ? ಪಟತೆಗೆದ ಮೇಲೆ ಎಲ್ಲರೂ ದಿಕ್ಕುದೆಸೆಯಿರದ ಅನಾಥರೆಂಬ ಒಳಾರ್ಥ ಅಡಗಿದೆ , ಜೀವನಚಕ್ರದ ಈ ಚಂದುರಂಗದಲ್ಲಿ …


2 thoughts on “ಬಾಳೊಂದು ಚದುರಂಗ

Leave a Reply

Back To Top