ನನ್ನಿಷ್ಟದ ಕಾದಂಬರಿ

ಶಿವರಾಮ್ ಕಾರಂತರವರ

ಸರಸಮ್ಮನ ಸಮಾಧಿ

.

  ಇದೊಂದು ಸಮಾಜದ ಮೂಢನಂಬಿಕೆಯನ್ನು ಕೆಣಕಿದ ಕಥೆಯನ್ನಾದರಿಸಿದೆ.ಪುರುಷಪ್ರಧಾನ ಸಮಾಜದಲ್ಲಿ ಗಂಡಸಿಗೆ ಹೆಣ್ಣಿನ ಆಸೆ ಆಕಾಂಕ್ಷೆಗಳು ಬೇಕಾಗಿರಲಿಲ್ಲ ಅವಳ ಕಾಳಜಿಯ ಅವಶ್ಯಕತೆಯೂ ಇರಲಿಲ್ಲ .ಅವನಿಗೆ ಬೇಕಾಗಿದ್ದು ಅವಳ ದೇಹ ಹಾಗೂ ಮನಸಷ್ಟೆ. ಆದರೆ ಹೆಣ್ಣಿನ ಬೇಕುಬೇಡಗಳಿಗಿಲ್ಲ ಇವರ ಯಾವುದೆ ಬೆಂಬಲದ ಸೊಪ್ಪು..ಈ ಒಂದು ಮನೋಭಾವದ ಪ್ರತಿರೋಧವಾಗಿ ಕಾರಂತರ ಈ ಕೃತಿ ಬೆಳಕು ಚೆಲ್ಲುತಿದೆ..

   ಪ್ರಸ್ತುತದ ಸಮಾಜ ಆಧುನಿಕತೆಯ ಆಡಂಬರದ ಒಡ್ಡೋಲಗದಲಿ ಸಾಗುತಿದ್ದರು ಮೌಡ್ಯತೆಯೆಂಬ ತಿಳಿಗಾಳಿ ಇನ್ನು ಹಸಿರಾಗಿ ಅಲ್ಲಲ್ಲಿ ಸುಳಿದಾಡುತಿರುವುದು ಕೃತಿಯಲಿ ಎದ್ದು ಕಾಣುತಿದೆ..ಅದೆಷ್ಟೋ ಹೆಣ್ಮನಗಳು ಅನ್ಯಾಯವೆಂಬ ಬಿಸಿಬಾಣಲೆಯ ಎಣ್ಣೆಯಲಿ ಬಿದ್ದು ತೊಳಲಾಡುತಿಹರು.ಅವರ ಮನದ ವ್ಯಥೆ ಸಂಕಟ ನೋವುಗಳಿಗೆ ಸ್ಪಂದನೆಯಿಲ್ಲದ ಪರಿಸ್ಥಿತಿ ಹಾಗು ಹೆಂಡತಿಯ ಮೇಲಿನ ಉದಾಸಿನ ಭಾವ ಹೊಂದಿರುವ ಗಂಡ.ನಿಜಕ್ಕೂ ಇವೆಲ್ಲಾ ಖೇದವೆನಿಸುದಂತು ಈ ಕೃತಿಯಿಂದ ತಿಳಿದುಬಂದಿದೆ..

   ಸತಿಪದ್ದತಿ ,ಮದುವೆ ,ಸಾಂಸಾರಿಕ ಜೀವನದ ಜಂಜಾಟಗಳನು ಒಳಗೊಂಡ ಈ ಕೃತಿ ಸಮಾಜದ  ಲಿ ಹೆಣ್ಣಿನ ಮೇಲಿನ ಗಂಡನ ದೌರ್ಜನ್ಯ,

ಸ್ವಾತಂತ್ರ್ಯವಿಲ್ಲದ ಅವಳ ಹೀನಸ್ಥಿತಿ ಅವಳು ಎಷ್ಟೆ ಧೈರ್ಯವಂತೆಯಾದರೂ ಅಬಲೆಯಾಗಿಯೆ ಬದುಕುವ ಜೀವನ ಪಯಣ, ಹೆಣ್ಣಿಗೆ ಹೆಣ್ಣೆ ಶತ್ರು , ಹೆಣ್ಣಿನ ಮೇಲಿನ ಶೋಷಣೆಗಳು ಹೀಗೆ ಸಮಾಜದ ಹತ್ತು ಹಲವು ಮೂಢತೆಯನು ಬೇರೆ ಬೇರೆಯಾಗಿ ಚಿತ್ರಿಸಿರುವ ಕಾರಂತರ ಮನೋದರ್ಶನ ಅದ್ಭುತ ಅನನ್ಯ ಅಪೂರ್ವವಾಗಿ ಜನರ ಮನಸ್ಸನ್ನ ಹೊಕ್ಕಿ ಈ ಕಾದಂಬರಿಯನ್ನು ಹಾಗು ಅಲ್ಲಿನ ಮೂಢನಂಬಿಕೆಗಳ ಬಗ್ಗೆ ಬಿಂಬಿತವಾಗಿರುವ ಮಾಹಿತಿಯನ್ನು ಮತ್ತೆ ಮತ್ತೆ ಓದಿಸುತ ಆ ಕಠೋರತೆಯ ವಿರುದ್ಧ ನಿಲ್ಲುವ ಮನಸಾಕ್ಷಿಯನ್ನು ಪ್ರೆರೇಪಿಸುತಿದೆ ಈ ಕೃತಿ.

  ಹಾ ಇಲ್ಲಿ ಸರಸಮ್ಮ ಸಮಾಧಿ ಈ ಕಾದಂಬರಿ ಹೆಸರು ಯಾಕೆ.? ಏನೂ ಎಂದು ನೋಡಿದಾಗ

ಈ ಸರಸಮ್ಮ ಆಗಿನ ಕಾಲದ ಪತಿವ್ರತೆ ಹೆಣ್ಣುಮಗಳು. ಸ್ವತಂತ್ರಪೂರ್ವದಲ್ಲಿದ್ದ ಸತಿಸಹಗಮನ ಪದ್ದತಿಯ  ಆಚರಣೆಯಲಿ ಸರಸಮ್ಮನ ಗಂಡ ತೀರಿಕೊಂಡಾಗ ಅವಳಿಗೆ ಇಷ್ಟವಿಲ್ಲದಿದ್ದರು ಕೂಡ ಅವಳು ಚಿತೆಯೊಡನೆ ಸಹಗಮನವೆಂಬ ಮೂಢನಂಬಿಕೆಯ ಕುರುಡು ಪದ್ಧತಿಗೆ ಬಲಿಯಾದಳು.ಅಂದಿನಿಂದ ಅವಳ ಮೇಲೆ ಭಕ್ತಿಗೌರವಾದರಗಳು ಹೆಚ್ಚಾಗಿ ಒಂದು ಗುಡಿಯನ್ನ ಕಟ್ಟಿಸಿದರು ಹಾಗು ಭಕ್ತಿಯಿಂದ ಅವಳನ್ನು ಪೂಜಿಸುತ್ತ ತಮ್ಮ ನೋವುಗಳಿಗೆ ಪರಿಹಾರ ಬೇಡಲು ದಾಂಪತ್ಯ ಜೀವನದಲ್ಲಿ ತೊಂದರೆಯಾದ ಹೆಣ್ಣುಮಕ್ಕಳು ಗುರುವಾರದ ಮಧ್ಯರಾತ್ರಿಯಲ್ಲಿ ಯಾರ ಕಣ್ಣಿಗೂ ಕಾಣಿಸಿಕೊಳ್ಳದಾಗೆ ಬಂದು ಪೂಜಿ ಮಾಡುವರು ಅಲ್ಲಿಗೆ ಅವರ ಇಷ್ಟಾರ್ಥಗಳೆಲ್ಲವೂ ಈಡೇರುತವೆಯೆಂಬ ಒಂದು ನಂಬಿಕೆಯಷ್ಟೆ.ˌ

ಈ ಕಥೆ ಸರಸಮ್ಮನ ಗುಡಿಗೆ ಬರುವವರ ಸುತ್ತಣದ ಚಿತ್ರಣವಾಗಿ ಬಿಂಬಿತವಾಗಿದೆ…

  ಜಾನಕಿಯ ಮಾತಿಗೆ ಉದಾಸಿನ ತೋರಿಸುವ ಗಂಡ, ಗಂಡನನ್ನು ಬಿಟ್ಟು ತವರು ಮನೆ ಸೇರಿರುವ ಭಾಗೀರಥಿಯನ್ನು ಕರೆದೊಯ್ಯಲು ಬಂದ ಹಿರಣ್ಯˌ

ಕೇವಲ ಅಧಿಕಾರ ಹಣ ಹೆಣ್ಣಿನದೇಹ ಬಯಸುವ ಸೊನಾಲಿಯ ಗಂಡ ಹಾಗೆಯೆ ಸೊಸೆಯ ವಿದ್ಯೆ ಅವಳ ಜೀವನ ಶೈಲಿಯನ್ನೆ ಪ್ರಶ್ನಿಸುತ ದೂರುವ ಅತ್ತೆ ˌ ಮಗಳ ಮದುವೆಯ ಬಗೆ ಅಗಾಧವಾಗಿ ಚಿಂತಿಸುತಿರುವ ಅಮ್ಮ.ನಾಗವೇಣಿ ಹಾಗೆಯೆ ಸಮಾಜದ ಅಂಕುಡೊಂಕು ಓರೆಕೋರೆಗಳು ಹೆಣ್ಣಿನ ಮೇಲೆ ನಡೆಯುತಿರುವ ನಿರಂತರ ಶೋಷಣೆಗಳನ್ನು ಪ್ರಶ್ನಿಸುತ ಸರಸಮ್ಮನ ಸಮಾಧಿಯನ್ನೆ ತನ್ನ ಅಧ್ಯಯನ ಕೇಂದ್ರವಾಗಿ ಮಾಡಿಕೊಂಡು ವೈಜ್ಞಾನಿಕವಾಗಿ ಚಿಂತನೆಗಳ ಮೂಲಕ ನಿತ್ಯ ಪ್ರತಿಯೊಂದು ಸಮಸ್ಯೆಗಳಿಗೂ ಏಕೆ.? ಹೇಗೆ ಯಾವಾಗ.? ಎಲ್ಲಿ.?ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಹೋರಾಟಕ್ಕಿಳಿದಿರುವ ವಿದ್ಯಾವಂತ ಬುದ್ಧಿವಂತ ಚಂದ್ರನ ಕಥೆ ಒಂದೆಡೆಯಾದರೆ ಆಕಡೆ ಗಂಡಸರ ಪರಿಸ್ಥಿಯನ್ನೆ ಬಡವಾಳಮಾಡಿಕೊಂಡು ವ್ಯಾಪಾರಕ್ಕೆ ನಿಂತು ಅವರನ್ನು ದಾರಿತಪ್ಪಿಸುತಿರುವ ಬೆಳ್ಳಕ್ಕ ಹಾಗು ಅವಳ ಸಾಕು ಮಗಳು ಗುಲಾಬಿ ಒಂದು ರೀತಿ  ಚಕ್ರವ್ಯೂಹದಂತೆ ಎಣೆದಿರುವ ಈ ಕಥೆ ಅತ್ಯಂತ ಕುತೂಹಲವನ್ನುಂಟು ಮಾಡುತಿದೆ. ಹಾಗೆಯೆ ನಿಧಾನವಾಗಿ ಯೋಚಿಸಿದರೆ  ಸಮಾಜದ ಕಟ್ಟು ಪಾಡುಪಾಡುಗಳಿಂದ ಅರ್ಥರಹಿತ ಕಟ್ಟಳೆಗಳಿಂದ ಬಂಧಿತಳಾಗಿ ಜೀವಂತ ಶವವಾದ ಸರಸಮ್ಮನ

ಸಮಾಧಿ ನಿಜಕ್ಕೂ ಶಕ್ತಿಕೇಂದ್ರವಾಗಿತ್ತೋ ಅಥವ ಭೂತಪ್ರೇತಗಳ ಗೂಡಾಗಿತ್ತೋ ಅದೊಂದು ಯಕ್ಷಪ್ರಶ್ನೆಯಾಗಿದೆ..

ಇಲ್ಲಿ ಬಂದಿರುವ ಎಲ್ಲಾ ಹೆಣ್ಣು ಪಾತ್ರಧಾರಿಗಳೂ ನಿಜಕ್ಕೂ ಶೋಷಣೆಗೆ ಒಳಗಾಗಿದ್ದು ಜೀವಂತ ಶವವಾಗಿ ಬದುಕುತಿರುವ ಪ್ರೇತಾತ್ಮಗಳು.

ಮೇಲ್ನೋಟಕಷ್ಟೆ ಸಂಸಾರ ಮಕ್ಕಳೆಂದು ಜೀವಿಸುತ್ತ ತಮ್ಮ ತನವನ್ನು ತಮ್ಮ ನೋವು ಸಂಕಟಗಳನ್ನು ಮುಚ್ಚಿಕೊಂಡು ಮುಖವಾಡದ ಬದುಕನ್ನ ಸಾಗಿಸುತಿರುವ ಮಹಿಳಾಮಣಿಗಳು. ಸಮಾಜದಲ್ಲಿ ಹಾಸು ಹೊದ್ದಿರುವ ಈ ಅನಿಷ್ಟ ಪದ್ಧತಿಯ ದಾಸ್ಯದಿಂದ , ಮೂಢನಂಬಿಕೆಗಳಿಂದ ಹೊರಬಂದು ಸಂತಸದಾಯಕ ಜೀವನ ಸಾಗಿಸಲಿ ಎಂಬುದೆ ಕೃತಿಯ ಆಶಯವಾಗಿದ್ದು ಈ ಕೃತಿಯು ಅದ್ಭುತವಾಗಿ ಮೂಡಿಬಂದಿದೆ.

ಅಂದು ಪುರುಷಪ್ರಧಾನ ಸಮಾಜವಾಗಿದ್ದರಿಂದ ಹೆಣ್ಣಿನ ಭಾವನೆಗಳಿಗೆ ಬೆಲೆ ಇರಲಿಲ್ಲ ಅವಳಿಗೆ ಯಾವುದೆ ರೀತಿಯ ಸ್ವಾತಂತ್ರ್ಯವಿರಲಿಲ್ಲ.

ಹೆಣ್ಣೆಂದರೆ ರಾತ್ರಿಯ ಸುಖಕ್ಕೆ ಅಡಿಗೆ ಮಾಡುವ ಚಾಕರಿಗೆ ಮಕ್ಕಳು ಹೆರುವುದಕ್ಕಾಗಿಯೆ ಸೀಮಿತವಾಗಿದ್ದದಂತ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳು ಹೆಣ್ಣಿನ ಮೇಲೆ ಕಠಿಣ ನೀತಿ ನಿಯಮಗಳು ಕಟ್ಟಪಾಡುಗಳನ್ನು ಬಲವಂತಾಗಿ ಹೇರುತ್ತ ಅವಳನ್ನು ದಾಸ್ಯವೆಂಬ ಕೂಪದೊಳಗೆ ಬಂಧಿಸಿದವು.ಅದರಿಂದ ಯಾವುದೆ ಹೆಣ್ಣು ಕೂಡ ಅವುಗಳ ಅಸ್ಥಿತ್ವವನ್ನಾಗಲಿ ತಮ್ಮೊಳಗೆ ಉದ್ಭವಿಸುವ ಪ್ರಶ್ನೆಗಳಿಗಾಗಲಿ ಧೈರ್ಯವಾಗಿ ಮುಂದೆ ನಿಂತು ಉತ್ತರವನ್ನು ಕೇಳುವ ಸಾಹಸ ಮಾಡದೆ ಮೂಲೆಗುಂಪಾಗಿದ್ದರು.ಅಷ್ಟೊಂದು ಹೀನಸ್ಥಿತಿಯ ಬಾಳು ಪ್ರತಿಹೆಣ್ಣಿನದಾಗಿತ್ತು. ಹೆಣ್ಣು ಸಂಸಾರದ  ಏಳಿಗೆಯ ಬಗ್ಗೆ ಪ್ರಶ್ನಿಸುವ ಹಕ್ಕು ಇರದೆ ಗಂಡಸಿನ ದರ್ಪದೊಳಗೆ ವಿಲವಿಲ ಒದ್ದಾಡುವ ಮರಿ ಮೀನಾಗಿದ್ದಳು.ಇಲ್ಲಿ ಪುರುಷ ಪರರಿಗೆ “ಉಪಕಾರಿ ಹೆಂಡತಿಗೆ ಮಹಾಮಾರಿ” ಯಾಗಿದ್ದ ಊರಿನವರ ಯೋಗಕ್ಷೇಮ ಊರಿನ ಸುಖಕಾಗಿ ಹೋರಾಡುವ ಪರಿ ,ಪರರಿಗೆ ನೋವಾದಾಗ ಚಿಂತಿಸುವ ನೋಟ ಅಬ್ಬಬ್ಬಾ.! ಹೇಳತೀರದು.ಆದರೆ ಮನೆಯೊಡತಿಯ ಆಸೆಆಕಾಂಕ್ಷೆಗಳ ಕೇಳೋಕೆ ಪುರುಸೊತ್ತಿಲ್ಲ ಮಕ್ಕಳ ಬೆಳವಣಿಗೆ ಓದಿನ ಬಗೆ ಕೇಳುವ ವ್ಯಾವಧಾನವು ಇಲ್ಲ ˌಕಾಳಜಿಯೂ ಇಲ್ಲ.ಒಟ್ಟಿನಲ್ಲಿ ಸಮಯ ಸಮಕ್ಕೆ ಸರಿಯಾಗಿ ಕೂಳು ರಾತ್ರಿ ಸುಖಕಾಗಿ ಮನೆ ಇದು ಪುರುಷ ದೌರ್ಜನ್ಯದ ಮಹಾಪರ್ವ.ಹೆಣ್ಣು ಮಾತ್ರ ಬಾಯ್ಬಿಡದೆ ಗಾಣದೆತ್ತಿನಂತೆ ದುಡಿಯುವ ಮೂಕಪ್ರಾಣಿ.ಅಂತದರಲ್ಲೂ ಬೈಗುಳಗಳ ಸಹಸ್ರನಾಮಾರ್ಚನೆ ಮಾತ್ರ ತಪ್ಪಿದ್ದಲ್ಲ.ಹಾಗಾಗಿ ಇಲ್ಲಿ ಹೆಣ್ಣಿನ ಬಾಳು ಹೇಳತೀರದ ಗೋಳಾಗಿತ್ತು.ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಣ್ಣು ಗಂಡುಗಳ ಸಂಸಾರವು ಅದೆಲ್ಲಿಗೆ ಹೋಗಿ ಮುಟ್ಟುತದೆ ಎಂಬುದನ್ನು ಕಾರಂತರು ಮಾರ್ಮಿಕವಾಗಿ ಈ ಕೃತಿಯಲ್ಲಿ ಪ್ರಸ್ತುತಪಡಿಸಿರುವುದು ನಿಜಕ್ಕೂ ಸೋಜಿಗವೇ.!

ಕಾರಂತರು ತಮ್ಮ ಕಾದಂಬರಿಯಲ್ಲಿ ದಾಂಪತ್ಯ ಜೀವನದ ವಿರಸಗಳು ನೆಮ್ಮದಿಯಿಲ್ಲದೆ ಬಾಳುತಿರುವ ಹೆಣ್ಮನಗಳ ಬಗೆ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯಮಾಡಿದ್ದಾರೆ. ಇಲ್ಲಿ ನಿರಂತರವಾಗಿ ಗಂಡನಿಂದ ಶೋಷಣೆಗಳಾದ ತಿಮ್ಮಪ್ಪಯ್ಯನ ಹೆಂಡತಿ ಜಾನಕಿ ಹಾಗು ಅವಳ  ಹಾಗೆಯೆ ಸೊನಾಲಿನ ಅತ್ತೆ ಮತ್ತು ಗಂಡನಿಂದ ಇನ್ನೂ ಮುಂತಾದ ಹೆಣ್ಮನಗಳು ಶೋಷಣೆಗೊಳಗಾಗಿರುವುದನ್ನು ಕವಿಯು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸಿರುವರು.

ಇವರೆಲ್ಲರೂ ಕೂಡ  ತಮ್ಮ ಸಮಸ್ಯೆಯ ನಿವಾರಣೆಗಾಗಿ ಸರಸಮ್ಮನ ಸಮಾಧಿಗೆ ಮೊರೆ ಹೋದವರೆ..ಈ ಕೃತಿಯಲ್ಲಿ ಸಾಂಸಾರಿಕವಾಗಿ ಭುಗಿಲೆದ್ದಿರುವ ಹಲವು ಕುಟುಂಬಗಳ ದಾಂಪತ್ಯಗಳ ವಿರಸ ಕಲಹಗಳ ಅನಾವರಣಗಳ ಚಿತ್ರಣ ಆ ಮುಖೇನ ಹೆಣ್ಮನಗಳು ಆ ದಾಸ್ಯದಿಂದ ಮುಕ್ತಿಯಾಗಲು ಈ ಕೃತಿ ನಿಜಕ್ಕೂ ದಾರಿದೀಪವಾಗಿದೆ..

ಇಲ್ಲಿ ಕಂಡು ಬರುವ ಮುಖ್ಯ ಅಂಶವೆಂದರೆ ಹೆಣ್ಣಿನ ಮೇಲಿನ ಶೋಷಣೆ ನಿಜಕ್ಕೂ ಅಸಹ್ಯಕರ.ಹಾಗೆ ಗಂಡಸಿನ ಅಹಂ ಪ್ರವೃತ್ತಿ ಮನೋಭಾವ.ಅವಳು ನನ್ನ ಹೆಂಡತಿಯೆಂಬ ಅಹಂ ನಾನು ಹೇಳಿದ್ದನ್ನೆ ಮಾಡಬೇಕು ಹಾಗು ಕೇಳಬೇಕು ನಿನ್ನ ಮನಸು ನಿನ್ನ ದೇಹವೆರಡೂ ನನ್ನ ಸ್ವಂತವೆನ್ನುವ ಧೋರಣೆ ಅದೆಷ್ಟು ಕಠೋರ ಕ್ರೂರವಾಗಿ ಹೆಣ್ಣಿನ ಅಸ್ಥಿತ್ವವನ್ನೆ ಪ್ರಶ್ನಿಸುವಂತಿತ್ತು

ಇದೆಲ್ಲವನ್ನು ಸಹಿಸಿ ಸಾಂಸಾರಕಾಗಿ ಜೀವ ಮುಡಿಪಾಗಿಟ್ಟು ಅವಮಾನಗಳೊಂದಿಗೆ ಬದುಕುವ ಅವಳ ಧಾರುಣ ಬದುಕನ್ನು ನಿಜಕ್ಕೂ ದುಸ್ತರವಾಗಿ ಬಿಂಬಿಸಿದಾರೆ..

      ಈ ಕೃತಿಯಲ್ಲಿ ಬರುವ  ವಿಚಾರವಂತ ವಿದ್ಯಾವಂತ ಬಹಳ ಚತುರ ಸಮಯ ಸಂದರ್ಭಕ್ಕೆ ಹೊಂದಿಕೊಂಡು ಸಮಸ್ಯೆಗಳ ಹುಡುಕಿ ಏನು.? ಏಕೆ .?ಹೇಗೆ .?ಎಲ್ಲಿ .?ಯಾರು .?ಯಾವುದೆಂಬ ಪ್ರಶ್ನೆಗಳ ಸರಮಾಲೆ ಸೃಷ್ಟಿಸಿ ವಾಸ್ತವ ಹಾಗು ಭ್ರಮೆಗಳ ವ್ಯತ್ಯಾಸವರಿತು ವರ್ತಿಸುವ ಹರೆಯದ ಹುಡುಗ ಚಂದ್ರಯ್ಯಯದು

ನಿಜ ಈ ಚಂದ್ರಯ್ಯನ ಪಾತ್ರಧಾರಿ ಈ ಒಂದು ಕಾದಂಬರಿಯಲ್ಲಿ ಸೂಕ್ತವಾಗಿ ಸಮರ್ಪಕವಾಗಿ ನಿರ್ವಹಿಸಿದಾರೆ..ಗೊಡ್ಡು ಸಂಪ್ರದಾಯಗಳನ್ನು ಮತ್ತಷ್ಟು ಜೀವಂತಗೊಳಿಸುತಿರುವ ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಇವನು ಕೂಡ ದಿಕ್ಕಾರದ ಕಹಳೆ ಊದುತಿದ್ದˌ.ಇವನ ಸಮಯ ಪ್ರಜ್ಞೆ ಕರ್ತವ್ಯ ಪಾಲನೆ ಸಹಾಯ ಮನೋಭಾವ ಸಮಸ್ಯೆ ಪರಿಹಾರಕಾಗಿ ಹಂಬಲಿಸುವ ಮನ ಅದಕಾಗಿ ಹಗಲಿರುಳು ಮನೆಬಿಟ್ಟು ಅಲೆಯುತ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಂತು ತುಂಬ ಶ್ಲಾಘನೀಯವಾಗಿದೆ.

ಇಂತಹ ಪಾತ್ರವನ್ನು ಕಾರಂತರು ತಮ್ಮ ಕೃತಿಯಲ್ಲಿ ಸೃಷ್ಟಿಸಿರುವುದು ಅದ್ಭುತವಾಗಿದೆ..

ಕಾರಣ ಪ್ರತಿಯೊಂದು ಸಂಸಾರದಲ್ಲಿ ದಂಪತಿಗಳ ವಿರಹವನ್ನು ತನ್ನ ಸ್ವಾರ್ಥಕೆ ಬಳಸಿಕೊಂಡು ಅದನ್ನ ಅವನ ಪತ್ರಿಕೆಯಲ್ಲಿ ಬರೆಯುವ ಹಾಗು ವಿಷಯದ ಆಳ ಅದರಿಂದಿನ ಮರ್ಮದ ಬಗೆ ಬಿಡಿ ಬಿಡಿಯಾಗಿ ಪ್ರಚುರಪಡಿಸುವ ಅವನ ಚಾಕ್ಯತೆ ಅಮೋಘ..ಹಾಗೆಯೆ ಇವನಿಗೆ ಭೂತ ಬೆಳ್ಳಕ್ಕನ ಮೇಲೆ ಮನಸಾಗಿದ್ದು.ಅವಳ ಪರಿಚಯದಿಂದ ಅವಳ ಮೇಲಾದ ದೌರ್ಜನ್ಯ.ಅವಳು ಹೇಗೆಲ್ಲ ಶೋಷಣೆಗೊಳಪಟ್ಟಳು ಎಂಬೆಲ್ಲ ಮಾಹಿತಿಯನ್ನು ಕಲೆಹಾಕಿ ಸಮೂಹ ವಾಹಿನಿಗಳ ಮೂಲಕ ಹೊರ ಚೆಲ್ಲುವ ಅವನ ಪ್ರಯತ್ನ ಚನ್ನಾಗಿತ್ತು.

ಚಂದ್ರಯ್ಯನ ಮೊಂಡು ಧೈರ್ಯ ಹಾಗು ಅವನ ಅನ್ವೇಷಣೆ ಇದಿಯಲ್ಲ ಎಂತವರನ್ನು ಬೆಚ್ಚಿ ಬೀಳಿಸುವಂತದ್ದಾಗಿದೆ. ಮತ್ತೂ ಮುಂದುವರೆದು

ಭೂತಗಳ ಲೋಕಕೆ ಪಾದರ್ಪಣೆ ಮಾಡಿ ಅವುಗಳ ನೈಜತೆ ಹಾಗು ಭೂತ ಪ್ರೇತಗಳ ಬಗೆ ಅಧ್ಯಯನ ಮಾಹಿತಿ ಅದ್ಭುತ ಅಮೋಘ. ಇಲ್ಲಿ ಅವನ ಜಾಣತನ ಹಾಗು ವಾಸ್ತವಿಕತೆಯ ಅರಿವು ಅತ್ಯಂತ ಸೂಕ್ಷ್ಮತೆಯನು ಮೆರೆದ ರೀತಿ ಸೊಗಸಾಗಿತ್ತು.ಹಾಗೆಯೆ ಕಾರಂತರ ಬುದ್ಧಿವಂತಿಕೆ ವೈಚಾರಿಕತೆ ಈ ಕಥೆಯ ಯಾವ ಭಾಗದಲ್ಲೂ ಕೂಡ ದಾರಿತಪ್ಪಿಲ್ಲ.ಭ್ರಮೆ ವಾಸ್ತವದ ಪರಿಕಲ್ಪನೆ ಹಾಗು ವ್ಯತ್ಯಾಸದ

ಸತ್ಯಾಸತ್ಯತೆಗಳ ಮೆರವಣಿಗೆ ವಾವ್.!ಎನ್ನುವಂತಿದೆ.ಚಂದ್ರಯ್ಯನಿಗೆ ವಾಸ್ತವದ ಅರಿವು ಇದ್ದಿದ್ದರಿಂದಲೆ ಭಾಗಿರಥಿ ಹಾಗು ಹಿರಣಯ್ಯರ ದಾಂಪತ್ಯ ಜೀವನ ಹೊಂದಾಗುವಂತೆ ಮಾಡಿ ತಾನು ಮುಂದೆ ಸಾಗಿದ .ಅದೆ ರೀತಿ ಭೂತಗಳ ಲೋಕವನ್ನು ಹೊಕ್ಕಾಗಲೂ ಬೆಳ್ಳಕ್ಕನ ದರ್ಶನ ಮಾಡಿದಾಗಲೂ ವಾಸ್ತವತೆಯ ನೆರಳಲ್ಲೆ ಮುನ್ನುಗ್ಗಿ ಜಾಣತನವನ್ನು ಮೆರೆದನು.ಭ್ರಮೆ ವಾಸ್ತವದ ಬಗೆ ಅತಿಯಾದ ಅರಿವು ಈ ಕೃತಿಯಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣು ಯಾವುದಕ್ಕೂ ಬಾಯಿ ಬಿಡುವಂತಿರಲಿಲ್ಲ ಇಲ್ಲಿ ಅವಳ ವ್ಯಕ್ತಿತ್ವಕೆ ಕಿಂಚಿತ್ತೂ ಬೆಲೆ ಇರಲಿಲ್ಲ.

ಅವಳೊಂದು ದುಡಿಯುವ ಯಂತ್ರ ಭೋಗದ ವಸ್ತುವಾಗಿದ್ದಳು.ಅವಳು ಗಂಡನ ತಪ್ಪುಗಳನ್ನು ಕೇಳುವಂತಿರಲಿಲ್ಲ ಸಮಾಜದ ಓರೆಕೋರೆಗಳನ್ನು ಪ್ರಶ್ನಿಸುವಂತಿರಲಿಲ್ಲ ಅಂತಹ ತಾರತಮ್ಯದ ಹೇಳಿಕೆಗಳ ಬಗ್ಗೆ ಸೊಲ್ಲೆತ್ತಿದ್ದರೆ ಅವಳ ಪತಿವ್ರತೆಯ ಪಟ್ಟಕ್ಕೆ ಕುತ್ತು ಬರುತಿತ್ತು ಗಂಡನಿಂದ ಸಮಾಜದಿಂದ ನಿಂದನೆಗೆ ಒಳಗಾಗುತಿದ್ದಳು. ಹಾಗು ಅವಳು ಅವರ ಅವಮಾನಗಳು ಹಿಂಸೆಗಳು ತಡೆದುಕೊಂಡು ಹೋದರಷ್ಟೆ ಅವಳಿಗೆ ಗರತಿಯೆಂಬ ಪಟ್ಟ ಉಳಿಯುತಿತ್ತು.ಇದಕ್ಕಾಗಿ ಅವಳ ಮನಸು ಭಾವನೆಗಳು ವಯೋಸಹಜ ಆಸೆಗಳನ್ನು ತನ್ನೊಳಗೆ ಮುಚ್ಚಿಟ್ಟುಕೊಂಡು ಜೀವಂತ ಶವವಾಗಿ ಬದುಕಬೇಕಿತ್ತು ಈ ಒಂದು ದಾರಿಯಲ್ಲೆ ನಾಗವೇಣಿ ಸೋನಾಲಿ ಜಾನಕಿ ಭಾಗೀರಥಿ ಶೋಷಣೆಗಳಿಗೆ ಒಳಗಾಗಿ ನೊಂದು ಬೆಂದು ಪ್ರೇತಗಳಂತೆ ಬದುಕುತಿದ್ದರು.

ಕೇಳುವ ಜಂಜಾಟವೆ ಬೇಡವೆಂದು ತನ್ನ ಪಾಡಿಗೆ ಮೌನವಾಗಿ ಬದುಕಿದ್ದ ಹೆಣ್ಣುಗಳ ಆಂತರ್ಯದ ಹೊಯ್ದಾಟಗಳು ತುಮುಲ ಸಂಕಟ ನೋವುಗಳನ್ನ ವರ್ಣಿಸಲಾಗುವುದಿಲ್ಲ.

ಈ ಒಂದು ಕಾದಂಬರಿಗೆ ಸರಸಮ್ಮನ ಹೆಸರಿಟ್ಟು ಅವಳ ಗುಡಿಗೆ ಬರುವವರ ಸುತ್ತಣದ ಚಿತ್ರಣವನ್ನೆ ಕಥೆಯಾಗಿ ಬಿಂಬಿಸಿ ಮೂಢನಂಬಿಕೆಯೆಂಬ ಭೂತವನ್ನು ಬಿಡಿಸಲು ಈ ಕಥಾ ಹಂದರ ನಿಜಕ್ಕೂ ಅತ್ಯುತ್ತಮವಾಗಿದೆ.

ನಲವತ್ತರ ದಶಕದಲ್ಲಿದ್ದ ಈ ಅನಿಷ್ಟ ಪದ್ಧತಿಯೊಂದನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಿಸುವುದರ ಮೂಲಕ ಸಮಾಜದ ಮೌಢ್ಯತೆಯ ಚಿತ್ರವೊಂದನ್ನು ಜನರ ಮುಂದೆ ತಂದು ಈ ಪದ್ಧತಿಯನ್ನು ನಿರ್ಮೂಲನಗೊಳಿಸುವ ಮಾರ್ಗ ನಿರ್ಭೀತಿಯಿಂದ ನಿರ್ಭಡೆಯಿಂದ ಸಂಚರಿಸಲು ಸಲಹೆಗಳನ್ನು ಹಾಗು ನಿರ್ಭಾವ ಸದ್ಭಾವಗಳ ಮೂಲಕ ಗಂಡು ಹೆಣ್ಣು ಸಮಾನತೆಯ ಹೇಗಿರಬೇಕು ಈ ಅನಿಷ್ಟವನ್ನು ತೊಲಗಿಸುವ ಹೆಣ್ಮನಗಳಲ್ಲಿ ಧೈರ್ಯವೆಂಬ ಸಂದೇಶ ಬಿತ್ತಿದೆ..ಹಾಗು ಸಮಾಜದ ಮೂಢತೆಯ ಬಗೆ ಬೆಳಕು ಚೆಲ್ಲಿದ ಈ ಕಾದಂಬರಿ ನಿಜಕ್ಕೂ ಅರ್ಥಪೂರ್ಣ ಹಾಗು ಸ್ವಾರಸ್ಯಕರವಾಗಿದೆ..


ಅಭಿಜ್ಞಾ ಪಿ ಎಮ್ ಗೌಡ

Leave a Reply

Back To Top